varthabharthi


ವಾರ್ತಾಭಾರತಿ 18ನೇ ವಾರ್ಷಿಕ ವಿಶೇಷಾಂಕ

ಕುವೆಂಪು ಅವರ ಬರಹಗಳನ್ನು ಈಗ ಏಕೆ ಓದಬೇಕು?

ವಾರ್ತಾ ಭಾರತಿ : 3 Jan, 2021
ಕೆ.ವಿ. ನಾರಾಯಣ

ಕುವೆಂಪು ಮತ್ತು ಅವರ ಬರಹಗಳನ್ನು ಬೇರ್ಪಡಿಸದೆ ನೋಡುತ್ತಿರುವುದರಿಂದ ಈಗ ನಾವು ಕುವೆಂಪು ಅವರ ಬರಹಗಳನ್ನು ಹೇಗೆ ಓದುತ್ತಿದ್ದೇವೆ ಎಂಬುದು ಗೊತ್ತಾಗುತ್ತದೆ. ಅಂದರೆ ಬರಹಗಾರರ ಮೂಲಕ ಅವರ ಬರಹಗಳನ್ನು ಗ್ರಹಿಸುವ, ವಿವರಿಸುವ, ಮೌಲ್ಯಮಾಪನ ಮಾಡುವ ಬಗೆ ಈಗ ಬಲವಾಗಿ ನೆಲೆ ನಿಂತಿದೆ. ಆದರೆ ಬರಹಗಾರರು ಏಕಘನಾಕೃತಿಯವರಲ್ಲ. ಅವರಲ್ಲಿ ಹಲವು ಚಹರೆಗಳು ಒತ್ತಟ್ಟಿಗೇ ಇರುತ್ತವೆ. ಕುವೆಂಪು ಅವರನ್ನೇ ನೋಡಿ. ನಾವು ಅವರನ್ನು (ಅವರ ಬರಹವನ್ನಲ್ಲ) ಹೇಗೆ ಗ್ರಹಿಸುತ್ತೇವೆ? ಅವರು ನವೋದಯ ಕಾಲದ ಬರಹಗಾರರು, ಆಧುನಿಕ ವಿದ್ಯಾಭ್ಯಾಸ ಪಡೆದವರು, ಪಾಶ್ಚಾತ್ಯ ಸಾಹಿತ್ಯಕೃತಿಗಳಿಂದ ಪ್ರಭಾವಿತರಾದವರು, ಜಮೀನುದಾರರ ವಂಶದವರು, ಬ್ರಾಹ್ಮಣೇತರರು (ಅದರಲ್ಲೂ ಒಕ್ಕಲಿಗರು), ಗಂಡಸು, ವೃತ್ತಿಯಿಂದಾಗಿ ಮೇಲ್ವರ್ಗಕ್ಕೆ ಸೇರಿದವರು, ಹತ್ತೊಂಭತ್ತು ಇಪ್ಪತ್ತನೆಯ ಶತಮಾನದ ಇಂಡಿಯಾದಲ್ಲಿದ್ದ ಧಾರ್ಮಿಕ ಸುಧಾರಣಾವಾದಿ ಚಿಂತನೆಗಳಿಂದ ಪ್ರಭಾವಿತರಾದವರು, ನಾಡಿನ ಅತಿಮಾನ್ಯ ಪ್ರಶಸ್ತಿಗಳನ್ನು ಪಡೆದವರು ಹೀಗೆ ಮತ್ತೂ ಹಲವು. ಇವೆಲ್ಲವೂ ಕುವೆಂಪು ಎಂಬ ವ್ಯಕ್ತಿಯ ಚಹರೆಗಳು. ಇವುಗಳಲ್ಲಿ ಕೆಲವನ್ನು ಅವರು ಸಾಧಿಸಿ ಪಡೆದುಕೊಂಡಿದ್ದರೆ ಮತ್ತೆ ಕೆಲವು ಅವರಿಗೆ ದತ್ತವಾಗಿ ಬಂದಿರುವಂತಹವು. ಕೆಲವು ಅವರ ಆಯ್ಕೆಗಳಾಗಿದ್ದರೆ ಮತ್ತೆ ಕೆಲವು ಚಹರೆಗಳಿಗೆ ಅವರು ಹೊಣೆಗಾರರಲ್ಲ.

ಪಿರಿಯಾಪಟ್ಟಣ ತಾಲೂಕು ಕಂಪಲಾಪುರದ ನಾರಾಯಣ ಅವರು, ಬೆಂಗಳೂರಿನ ನ್ಯಾಷನಲ್ ಕಾಲೇಜು, ಮೈಸೂರಿನ ಯುವರಾಜಾಸ್ ಕಾಲೇಜಿನಲ್ಲಿ ಓದಿ, ಹೈಸ್ಕೂಲ್ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಬೆಂಗಳೂರು ವಿಶ್ವವಿದ್ಯಾನಿಲಯದ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಎಂ.ಎ. ಮಾಡಿ, ಜಿಎಸ್‌ಎಸ್ ನೇತೃತ್ವದಲ್ಲಿದ್ದ ಕನ್ನಡ ಅಧ್ಯಯನ ಕೇಂದ್ರಕ್ಕೆ ಸೇರ್ಪಡೆಯಾಗಿ, ಅವರ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಪದವಿ ಪಡೆದರು. ಬೋಧಿಸಿದ್ದು ಸಾಹಿತ್ಯ, ಸಾಹಿತ್ಯ ಮೀಮಾಂಸೆ ಮತ್ತು ಭಾಷಾಶಾಸ್ತ್ರವನ್ನು. ವಿಜ್ಞಾನದ ತಾತ್ವಿಕತೆಯನ್ನಿರಿಸಿಕೊಂಡೇ ಕೆ.ವಿ.ಎನ್., ಬೆಳೆದಿದ್ದು ವಿಮರ್ಶಕರಾಗಿ, ಭಾಷಾಶಾಸ್ತ್ರಜ್ಞರಾಗಿ, ಕನ್ನಡ ಸಂಸ್ಕೃತಿ ಚಿಂತಕರಾಗಿ. ತಿಳಿವಳಿಕೆ ಮತ್ತು ನಡವಳಿಕೆ ಎರಡರಲ್ಲೂ ಸರಳವಾಗಿರುವ ಕೆ.ವಿ.ಎನ್., 1993ರಲ್ಲಿ ಕನ್ನಡಿಗರ ಕನಸಿನ ಸಂಸ್ಥೆಯಾಗಿದ್ದ ಹಂಪಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ರಿಜಿಸ್ಟ್ರಾರ್ ಆಗಿ, ಹಲವು ಜನ ಕುಲಪತಿಗಳ ಅವಧಿಯಲ್ಲಿ ಆಡಳಿತ ಮತ್ತು ಅಧ್ಯಯನಗಳ ಮೂಲಕ ಕನ್ನಡ ವಿಶ್ವವಿದ್ಯಾನಿಲಯವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಭಾಷೆ, ಸಾಹಿತ್ಯ, ಶಿಕ್ಷಣ ಮತ್ತು ವಿಜ್ಞಾನ ಮೊದಲಾಗಿ ಕನ್ನಡ ಸಮಾಜಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿಸಿಕೊಂಡ ಕೆ.ವಿ.ಎನ್., ಈ ಕಾಲದ ಕನ್ನಡದ ಮಹತ್ವದ ಚಿಂತಕರು.

ಈವಾಕ್ಯ ಒಂದು ಪ್ರಶ್ನೆಯಾಗಿದ್ದು, ಕನ್ನಡ ಮಾತಿನ ವರಸೆಯಲ್ಲಿ ಎರಡು ರೀತಿಗಳಲ್ಲಿ ಬಳಕೆಯಾಗುತ್ತದೆ. ಮೊದಲನೆಯ ರೀತಿಯಲ್ಲಿ ‘ಏಕೆ ಓದಬೇಕು? ಓದಬೇಕಿಲ್ಲ’ ಎನ್ನುವ ತಿರುಳನ್ನು ಪಡೆಯುತ್ತದೆ. ಹಾಗಲ್ಲದೆ ಇದೊಂದು ನಿರ್ಧಾರವನ್ನು ಮಂಡಿಸುವ ವಾಕ್ಯವಾಗಿಯೂ ಬಳಕೆಯಾಗಬಲ್ಲದು. ಏಕೆ ಓದಬೇಕು ಎಂದರೆ ಈ ಕಾರಣಗಳಿಗಾಗಿ ಎಂದು ವಿವರಣೆ ನೀಡಲು ಸಾಧ್ಯ ತಾನೆ. ಇವೆರಡು ತಿರುಳುಗಳಲ್ಲಿ ಯಾವುದನ್ನು ಆಯ್ದುಕೊಳ್ಳಬೇಕು ಎಂಬ ಸಂದೇಹ ನನಗೆ ಇದ್ದೇ ಇದೆ. ಈ ಟಿಪ್ಪಣಿ ಬರೆಯಲು ಹೇಳಿದ ಬಸವರಾಜು ಅವರನ್ನು ನನ್ನ ಸಂದೇಹವನ್ನು ಪರಿಹರಿಸಲು ಕೇಳಲಿಲ್ಲ. ಎರಡೂ ನೆಲೆಗಳಿಂದ ಚರ್ಚೆಯನ್ನು ಬೆಳೆಸಲು ಸಾಧ್ಯವಿದೆ. ಆದ್ದರಿಂದ ವಾಕ್ಯವನ್ನು ತೆರೆದ ನೆಲೆಯಲ್ಲೇ ಉಳಿಸಿಕೊಂಡಿದ್ದೇನೆ.

  ಈ ಪ್ರಶ್ನೆ ಎದುರಾಗುವುದೇಕೆ? ಆದರೆ ಇತರ ಸಾಹಿತ್ಯ ಸಂಸ್ಕೃತಿಗಳಲ್ಲಿ ಈ ಬಗೆಯ ಪ್ರಶ್ನೆಗಳನ್ನು ಹೊತ್ತು ಚರ್ಚಿಸುವುದನ್ನು ನಾನು ನೋಡಿಲ್ಲ. ಆದರೆ ಮತ್ತೆ ಮತ್ತೆ ನಾವು ಕನ್ನಡ ನುಡಿಸಂಸ್ಕೃತಿಯಲ್ಲಿ ಈ ಪ್ರಶ್ನೆಯ ಹೊರೆಯನ್ನು ಹೊತ್ತು ಸಾಗುತ್ತಿದ್ದೇವೆಂದು ತೋರುತ್ತದೆ. ನಮ್ಮ ನುಡಿಯ ಬರಹಗಾರರನ್ನು ಏಕೆ ಓದಬೇಕೆಂಬ ಪ್ರಶ್ನೆಯನ್ನು ಹಾಕಿಕೊಳ್ಳುತ್ತಿರುವ ಈ ಹೊತ್ತಿನಲ್ಲೇ, ನಮ್ಮ ಓದುಗರು ಆಫ್ರಿಕ, ಯುರೋಪು, ಲ್ಯಾಟಿನ್ ಅಮೆರಿಕದ ಬರಹಗಾರರನ್ನು ಓದಬೇಕೆಂಬ ಇರಾದೆಯಿಂದ ಅಲ್ಲಿನ ಬರಹಗಳನ್ನು ಕನ್ನಡದಲ್ಲಿ ಒದಗಿಸುವ ನಿರಂತರ ಪ್ರಯತ್ನಗಳು ನಡೆಯುತ್ತಲೇ ಇವೆ. ಆ ಬರಹಗಾರರ ಬರಹಗಳನ್ನು ಕನ್ನಡದಲ್ಲಿ ನಾವು ಏಕೆ ಓದಬೇಕು ಎಂಬ ಪ್ರಶ್ನೆ ನಮ್ಮನ್ನು ಹೆಚ್ಚು ಕಾಡಿದಂತೆ ಕಾಣದು. ಆ ಬರಹಗಳನ್ನು ಕನ್ನಡದಲ್ಲಿ ಒದಗಿಸುತ್ತಿರುವವರಲ್ಲಿ ಅದಕ್ಕೆ ಕಾರಣಗಳಿರುತ್ತವೆ ದಿಟ. ಆದರೆ ಓದುಗರ ಕಡೆಯಿಂದ ಪ್ರಶ್ನೆಯನ್ನು ಕೇಳಿಕೊಳ್ಳುವುದಿಲ್ಲ. ಹೀಗೆ ‘ಎಲ್ಲವನ್ನೂ’ ಓದುವುದು ಒಂದು ಹೊಣೆಗಾರಿಕೆ ಎನ್ನುವಂತೆ ನಿರ್ವಹಿಸುತ್ತಿದ್ದೇವೆ. ಈ ಎರಡೂ ಸಂದರ್ಭಗಳನ್ನು ಮುಖಾಮುಖಿಯಾಗಿ ಇರಿಸಿ ನೋಡಬೇಕೆಂದು ನಮಗೆ ಅನ್ನಿಸಿದಂತೆ ತೋರದು. ಹೀಗಲ್ಲದೆ ಯಾವುದೇ ಬರಹವನ್ನು ಓದಲು ಸಮರ್ಥನೆಗಳನ್ನು ಹುಡುಕುತ್ತೇವೆ ಎಂದುಕೊಳ್ಳಿ. ಈ ಸಮರ್ಥನೆಗಳು ಆಯಾ ಲೇಖಕರ ಬರಹಗಳಿಗೆ ಸೀಮಿತವಾಗಿ ರೂಪುಗೊಂಡಿರುವುದೇ ಹೆಚ್ಚು. ಅಂದರೆ ಬೇರೆ ಬೇರೆ ಕಾರಣಗಳಿಗಾಗಿ ಬೇರೆ ಬೇರೆ ಬರಹಗಾರರ ಬರಹಗಳನ್ನು ಓದಬೇಕು ಎಂಬ ಇರಾದೆ ಇದ್ದಂತಿದೆ. ಒಂದು ಹೋಲಿಕೆಯೊಡನೆ ನನ್ನ ಮಾತನ್ನು ವಿವರಿಸುತ್ತೇನೆ. ದೇಹದ ಬೇರೆ ಬೇರೆ ತೊಂದರೆಗಳಿಗೆ ವೈದ್ಯರು ಬೇರೆ ಬೇರೆ ಮದ್ದನ್ನು ಕೊಡುತ್ತಾರೆ. ಹಾಗೆಯೇ ಒಂದೇ ತೊಂದರೆಗೆ ಬೇರೆ ಬೇರೆ ವೈದ್ಯರು ಬೇರೆ ಬೇರೆ ಮದ್ದನ್ನು ಕೊಡುವುದನ್ನೂ ಕಂಡಿದ್ದೇವೆ. ನಮ್ಮ ವಿಮರ್ಶಾಲೋಕ ಹುಟ್ಟು ಹಾಕಿರುವ ಗೊಂದಲಗಳಿಗೆ ಇದ್ದಕ್ಕಿಂತ ಬೇರೆ ಹೋಲಿಕೆ ಸಾಧ್ಯವಿಲ್ಲ. ಸದ್ಯ ಈ ನಿಟ್ಟಿನ ಚರ್ಚೆಯನ್ನು ಬದಿಗಿಡೋಣ. ಇನ್ನೊಂದು ದಿಕ್ಕಿನಿಂದ ನಮ್ಮ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬಹುದೇ ಎಂಬುದನ್ನು ನೋಡೋಣ.

 ಮೊದಲಿಗೆ ಈಗ ಅವರ ಬರಹಗಳನ್ನು ಓದುತ್ತಿರುವವರು ಯಾರು ಎಂಬುದನ್ನು ಗುರುತಿಸೋಣ. ಶಾಲಾ-ಕಾಲೇಜುಗಳಲ್ಲಿ ಪಾಠಗಳನ್ನಾಗಿ ಓದುವವರು, ಸಾಹಿತ್ಯದ ವಿದ್ಯಾರ್ಥಿಗಳು (ಇದರಲ್ಲಿ ಅಧ್ಯಾಪಕರು, ವಿಮರ್ಶಕರು, ಸಂಶೋಧಕರು ಎಲ್ಲ ಸೇರುತ್ತಾರೆ) ಅಲ್ಲದೆ ತಮ್ಮ ಆಸಕ್ತಿಯ ಭಾಗವಾಗಿ ಸಾಹಿತ್ಯ ಕೃತಿಗಳನ್ನು ಓದುವ ಹವ್ಯಾಸವುಳ್ಳವರು. ಮುಖ್ಯವಾಗಿ ಈ ಮೂರು ಬಗೆಯ ಓದುಗರಿರುತ್ತಾರೆ. ಇವರಲ್ಲಿ ಮೊದಲ ಮತ್ತು ಕೊನೆಯ ಗುಂಪಿನ ಓದುಗರಿಗೆ ತಾವು ಓದುತ್ತಿರುವ ಬರಹವನ್ನು ಕುವೆಂಪು ಅವರು ಬರೆದದ್ದು ಎನ್ನುವುದು ಒಂದು ಮಾಹಿತಿಯಾಗಿ ಮಾತ್ರ ಗಮನಕ್ಕೆ ಬರುತ್ತದೆ. ಆದರೆ ನಡುವಣ ಗುಂಪಿನವರು ಕುವೆಂಪು ಎಂಬ ವ್ಯಕ್ತಿಯ ಮೇಲೆ ಹೇಳಿದ ಚಹರೆಗಳಲ್ಲಿ ಯಾವುದಾದರೊಂದನ್ನು ಅವಲಂಬಿಸಿಯೇ ತಮ್ಮ ಓದನ್ನು ಮೊದಲು ಮಾಡುತ್ತಾರೆ.

ಕೃತಿ, ಕೃತಿಕಾರ ಮತ್ತು ಓದುಗ ಜಗತ್ತು

ಕನ್ನಡ ಓದುಗ ಜಗತ್ತಿಗೆ ಒಂದು ಶಾಪವಿದೆ. ಈ ಜಗತ್ತು ಕೃತಿ ಮತ್ತು ಕೃತಿಕಾರರ ನಂಟನ್ನು ಕಡಿದು ಹಾಕಲು ಹೆದರುತ್ತದೆ. ಅದೊಂದು ಅಪವಿತ್ರ ಕೆಲಸವೆಂದು ತಿಳಿಯುತ್ತದೆ. ಇದರಲ್ಲಿ ಎರಡು ಬಗೆಗಳಿವೆ. ಒಂದು ಬಗೆಯಲ್ಲಿ ಬರಹಗಾರರನ್ನು ಅವರ ಬರಹಗಳ ಮೂಲಕ ಗುರುತಿಸಿದ ಮೇಲೆ ಬರಹಗಾರರು ಕೇವಲ ಸಂಕೇತವಾಗಿ ಬಿಡುತ್ತಾರೆ. ಅವರು ಬಡಾವಣೆಗಳ, ಬೀದಿಗಳ, ಸಂಸ್ಥೆಗಳ, ಪ್ರಶಸ್ತಿಗಳ ಹೆಸರಿನಲ್ಲಿ ನೆಲೆ ನಿಂತು ಬಿಡುತ್ತಾರೆ. ಪ್ರತಿಮೆಗಳಾಗುತ್ತಾರೆ. ಈ ಬಗೆಯಲ್ಲಿ ಬರಹಗಳು ಹಿಂದೆ ಸರಿಯುತ್ತವೆ; ಎಷ್ಟೋ ವೇಳೆ ಅವರ ಬರಹಗಳು ಕಣ್ಮರೆಯೂ ಆಗಬಹುದು. ಇನ್ನೊಂದು ಬಗೆಯಲ್ಲಿ ಬರಹಗಳು ಮುಂಚೂಣಿಗೆ ಬರುತ್ತವೆ. ಆದರೆ ಆ ಬರಹಗಳ ಓದನ್ನು ಆರಂಭಿಸುವುದೇ ಬರಹಗಾರರ ಮೂಲಕ. ಬರಹಗಾರರನ್ನು ಹೊರತು ಪಡಿಸಿ ಅವರ ಬರಹಗಳನ್ನು ಓದುವುದೇ ಅಸಾಧ್ಯ ಎನ್ನುವಮಟ್ಟಿಗೆ ಈ ಬಂಧ ನೆಲೆಗೊಳ್ಳುತ್ತದೆ. ಸುಮ್ಮನೆ ಈ ಉದಾಹರಣೆಯನ್ನು ನೋಡಿ. ಒಂದೆರಡು ದಶಕಗಳ ಹಿಂದೆ ಒಂದು ವಿಶ್ವವಿದ್ಯಾನಿಲಯದ ಪದವಿ ತರಗತಿಯ ವಿದ್ಯಾರ್ಥಿಗಳು ಓದಲೆಂದು ನಿಗದಿ ಮಾಡಿದ್ದ ಪುಸ್ತಕದಲ್ಲಿ, ಪಾಠಗಳ ಕೊನೆಯಲ್ಲಿ ಸಾಮಾನ್ಯವಾಗಿ ಇರುವ ಕವಿಕಾವ್ಯ ವಿಚಾರ ಎನ್ನುವ ಭಾಗವನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಯಿತು. ಆಗ ಪಾಠ ಮಾಡುತ್ತಿದ್ದ ಅಧ್ಯಾಪಕರು ದಿಕ್ಕು ತಪ್ಪಿದವರಂತಾಗಿ ಬಿಟ್ಟರು. ಒತ್ತಾಯ ಮಾಡಿ ಆ ಭಾಗ ಮತ್ತೆ ಸೇರ್ಪಡೆಯಾಗುವಂತೆ ನೋಡಿಕೊಂಡರು. ಇದೇಕೆ ಹೀಗೆ ಎಂದು ನಾನು ಯೋಚಿಸುತ್ತಿದ್ದೆ. ಅಧ್ಯಾಪಕರಿಗೆ ಪಾಠವನ್ನು ಮಾಡುವಾಗ, ಆಯಾ ಪಾಠವನ್ನು, ಅದು ಕವಿತೆ, ಕತೆ ಏನೇ ಆಗಿರಲಿ, ಬರೆದವರನ್ನು ಭಿತ್ತಿಯಾಗಿಸಿಕೊಂಡು ವಿವರಿಸುವುದು ಹೆಚ್ಚಿನ ನೆರವನ್ನು ಒದಗಿಸುತ್ತದೆ ಮತ್ತು ಅದರಿಂದ ಹೇಳಬೇಕಾದ್ದನ್ನು ಹೇಳಲು ಒಂದು ನಿಗದಿಯಾದ ದಾರಿ ದೊರೆಯುತ್ತದೆ ಎನ್ನುವ ನಂಬಿಕೆ ಇತ್ತು. ಇದು ಈಗಲೂ ಬಲವಾಗಿ ವ್ಯಾಪಕವಾಗಿ ಬೇರೂರಿರುವ ನಂಬಿಕೆ. ಬರಹಗಾರರ ಮೂಲಕವೇ ಅವರ ಬರಹಗಳನ್ನು ಓದುವುದಕ್ಕೆ, ವಿವರಿಸುವುದಕ್ಕೆ ತೊಡಗುವುದು ಈಗ ನೆಲೆಗೊಂಡಿರುವ ಬಲವಾದ ಪ್ರವೃತ್ತಿ. ಇದೇ ಸರಿಯಾದ ದಾರಿ ಎಂಬ ನಂಬಿಕೆ. ಈ ನಂಬಿಕೆಯ ಹಿನ್ನೆಲೆಯಲ್ಲಿ ಕುವೆಂಪು ಅವರನ್ನು ಈಗ ಏಕೆ ಓದಬೇಕು ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ತೊಡಗಬೇಕಿದೆ. ಕುವೆಂಪು ಮತ್ತು ಅವರ ಬರಹಗಳನ್ನು ಬೇರ್ಪಡಿಸದೆ ನೋಡುತ್ತಿರುವುದರಿಂದ ಈಗ ನಾವು ಕುವೆಂಪು ಅವರ ಬರಹಗಳನ್ನು ಹೇಗೆ ಓದುತ್ತಿದ್ದೇವೆ ಎಂಬುದು ಗೊತ್ತಾಗುತ್ತದೆ. ಅಂದರೆ ಬರಹಗಾರರ ಮೂಲಕ ಅವರ ಬರಹಗಳನ್ನು ಗ್ರಹಿಸುವ, ವಿವರಿಸುವ, ಮೌಲ್ಯಮಾಪನ ಮಾಡುವ ಬಗೆ ಈಗ ಬಲವಾಗಿ ನೆಲೆ ನಿಂತಿದೆ. ಆದರೆ ಬರಹಗಾರರು ಏಕಘನಾಕೃತಿಯವರಲ್ಲ. ಅವರಲ್ಲಿ ಹಲವು ಚಹರೆಗಳು ಒತ್ತಟ್ಟಿಗೇ ಇರುತ್ತವೆ. ಕುವೆಂಪು ಅವರನ್ನೇ ನೋಡಿ. ನಾವು ಅವರನ್ನು (ಅವರ ಬರಹವನ್ನಲ್ಲ) ಹೇಗೆ ಗ್ರಹಿಸುತ್ತೇವೆ? ಅವರು ನವೋದಯ ಕಾಲದ ಬರಹಗಾರರು, ಆಧುನಿಕ ವಿದ್ಯಾಭ್ಯಾಸ ಪಡೆದವರು, ಪಾಶ್ಚಾತ್ಯ ಸಾಹಿತ್ಯಕೃತಿಗಳಿಂದ ಪ್ರಭಾವಿತರಾದವರು, ಜಮೀನುದಾರರ ವಂಶದವರು, ಬ್ರಾಹ್ಮಣೇತರರು(ಅದರಲ್ಲೂ ಒಕ್ಕಲಿಗರು), ಗಂಡಸು, ವೃತ್ತಿಯಿಂದಾಗಿ ಮೇಲ್ವರ್ಗಕ್ಕೆ ಸೇರಿದವರು, ಹತ್ತೊಂಭತ್ತು ಇಪ್ಪತ್ತನೆಯ ಶತಮಾನದ ಇಂಡಿಯಾದಲ್ಲಿದ್ದ ಧಾರ್ಮಿಕ ಸುಧಾರಣಾವಾದಿ ಚಿಂತನೆಗಳಿಂದ ಪ್ರಭಾವಿತರಾದವರು, ನಾಡಿನ ಅತಿಮಾನ್ಯ ಪ್ರಶಸ್ತಿಗಳನ್ನು ಪಡೆದವರು ಹೀಗೆ ಮತ್ತೂ ಹಲವು. ಇವೆಲ್ಲವೂ ಕುವೆಂಪು ಎಂಬ ವ್ಯಕ್ತಿಯ ಚಹರೆಗಳು. ಇವುಗಳಲ್ಲಿ ಕೆಲವನ್ನು ಅವರು ಸಾಧಿಸಿ ಪಡೆದುಕೊಂಡಿದ್ದರೆ ಮತ್ತೆ ಕೆಲವು ಅವರಿಗೆ ದತ್ತವಾಗಿ ಬಂದಿರುವಂತಹವು. ಕೆಲವು ಅವರ ಆಯ್ಕೆಗಳಾಗಿದ್ದರೆ ಮತ್ತೆ ಕೆಲವು ಚಹರೆಗಳಿಗೆ ಅವರು ಹೊಣೆಗಾರರಲ್ಲ.

ಈಗ ಕುವೆಂಪು ಬರಹಗಳನ್ನು ಓದುವ ಬಗೆ ಹೇಗಿದೆ? ಮೊದಲಿಗೆ ಈಗ ಅವರ ಬರಹಗಳನ್ನು ಓದುತ್ತಿರುವವರು ಯಾರು ಎಂಬುದನ್ನು ಗುರುತಿಸೋಣ. ಶಾಲಾ-ಕಾಲೇಜುಗಳಲ್ಲಿ ಪಾಠಗಳನ್ನಾಗಿ ಓದುವವರು, ಸಾಹಿತ್ಯದ ವಿದ್ಯಾರ್ಥಿಗಳು (ಇದರಲ್ಲಿ ಅಧ್ಯಾಪಕರು, ವಿಮರ್ಶಕರು, ಸಂಶೋಧಕರು ಎಲ್ಲ ಸೇರುತ್ತಾರೆ) ಅಲ್ಲದೆ ತಮ್ಮ ಆಸಕ್ತಿಯ ಭಾಗವಾಗಿ ಸಾಹಿತ್ಯ ಕೃತಿಗಳನ್ನು ಓದುವ ಹವ್ಯಾಸವುಳ್ಳವರು. ಮುಖ್ಯವಾಗಿ ಈ ಮೂರು ಬಗೆಯ ಓದುಗರಿರುತ್ತಾರೆ. ಇವರಲ್ಲಿ ಮೊದಲ ಮತ್ತು ಕೊನೆಯ ಗುಂಪಿನ ಓದುಗರಿಗೆ ತಾವು ಓದುತ್ತಿರುವ ಬರಹವನ್ನು ಕುವೆಂಪು ಅವರು ಬರೆದದ್ದು ಎನ್ನುವುದು ಒಂದು ಮಾಹಿತಿಯಾಗಿ ಮಾತ್ರ ಗಮನಕ್ಕೆ ಬರುತ್ತದೆ. ಆದರೆ ನಡುವಣ ಗುಂಪಿನವರು ಕುವೆಂಪು ಎಂಬ ವ್ಯಕ್ತಿಯ ಮೇಲೆ ಹೇಳಿದ ಚಹರೆಗಳಲ್ಲಿ ಯಾವುದಾದರೊಂದನ್ನು ಅವಲಂಬಿಸಿಯೇ ತಮ್ಮ ಓದನ್ನು ಮೊದಲು ಮಾಡುತ್ತಾರೆ. ತಾವು ಓದುತ್ತಿರುವ ಕೃತಿಯನ್ನು ವಿವರಿಸಲು ತೊಡಗಿದಾಗ ಅವರು ಕುವೆಂಪು ಅವರ ವ್ಯಕ್ತಿತ್ವದ ಯಾವ ಚಹರೆಯನ್ನು ಬಳಸಿ ಓದುತ್ತಿದ್ದಾರೆ ಎಂಬುದು ನಿಚ್ಚಳವಾಗುತ್ತದೆ. ಆಯ್ಕೆಗಳಿಂದಲೇ ಅವರು ಕುವೆಂಪು ಅವರ ಬರಹಗಳ ಪ್ರಸ್ತುತತೆ ಮತ್ತು ಅಪ್ರಸ್ತುತತೆಗಳನ್ನು ಗುರುತಿಸಲು ತೊಡಗುತ್ತಾರೆ. ಈ ಬಗೆಯ ಆಯ್ಕೆ ಮತ್ತು ನಿರಾಕರಣೆಗಳು ಕಳೆದ ಅರವತ್ತು ಎಪ್ಪತ್ತು ವರ್ಷಗಳಿಂದ ನಡೆಯುತ್ತಲೇ ಬಂದಿವೆ. ಕೆಲವು ನಿದರ್ಶನಗಳನ್ನು ನೋಡೋಣ. ಕೆಲವರಿಗೆ, ಕನ್ನಡ ಸಾಹಿತ್ಯ-ಸಂಸ್ಕೃತಿಯಲ್ಲಿ ನಿರಂತರವಾಗಿ ಮುಂದುವರಿಯುತ್ತ ಬಂದಿರುವ ವೈದಿಕ ಚಿಂತನೆಗಳನ್ನು ಪ್ರತಿರೋಧಿಸುವ ಶೂದ್ರ ಚಿಂತನೆಯ ಪರಂಪರೆಯ ಮುಂದುವರಿಕೆಯಾಗಿ ಕುವೆಂಪು ಅವರ ಬರಹಗಳು ಕಾಣುತ್ತವೆ. ಮತ್ತೆ ಕೆಲವರಿಗೆ ಕುವೆಂಪು ಅವರು ತಮ್ಮ ಹುಟ್ಟಿನಿಂದ ಬಂದ ಶೂದ್ರ ಕಟ್ಟುಪಾಡುಗಳನ್ನು ಮೀರಿ ವೈದಿಕ ನೆಲೆಗಟ್ಟುಗಳನ್ನು ಸಾಧಿಸಿ ತೋರಿಸಬಲ್ಲ ಹಠಕ್ಕೆ ಮಾದರಿಯನ್ನು ಅವರ ಬರಹಗಳಲ್ಲಿ ಕಾಣುತ್ತಾರೆ. ಕೆಲವರಿಗೆ ಕುವೆಂಪು ಅವರ ಬರಹಗಳಲ್ಲಿನ ಸಂಸ್ಕೃತ ಭಾಷೆಯ ಬಳಕೆ ತಲೆಮಾರುಗಳಿಂದ ಶಿಕ್ಷಣವಂಚಿತವಾಗಿದ್ದ ಮನೆತನಕ್ಕೆ ಸೇರಿದ್ದರೂ ಆ ಸಾಂಸ್ಕೃತಿಕ ಹಿನ್ನಡೆಯನ್ನು ದಾಟಲು ನಡೆಸಿದ ಸಾಧನೆಯಾಗಿ ತೋರುತ್ತದೆ. ಮತ್ತೆ ಕೆಲವರು ಕುವೆಂಪು ಬರಹಗಳ ಭಾಷೆಯು ಸಂಸ್ಕೃತಭೂಯಿಷ್ಟತೆಯಿಂದಾಗಿ ಲಂಬಾಣಿ ಹೆಂಗಸರು ತೊಡುವ, ಕನ್ನಡಿ ಚೂರುಗಳನ್ನು ಹೊಲೆದುಕೊಂಡು ಅಲಂಕರಿಸಿದ ಉಡುಪಿನಂತೆ ಕಾಣುತ್ತದೆ. ಕುವೆಂಪು ಪ್ರತಿಪಾದಿಸುತ್ತಿದ್ದ ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿಗಳು ಜಗತ್ತಿಗೆ ನೀಡಿದ ಹೊಸ ದಾರಿಯಂತೆ, ಅವರ ದರ್ಶನದಂತೆ ಕೆಲವರು ನಿರೂಪಿಸುತ್ತಾರೆ. ಇನ್ನೂ ಕೆಲವರು ಕುವೆಂಪು ಅವರ ಈ ಬಗೆಯ ತಾತ್ವಿಕತೆಯು ಮನುಷ್ಯರನ್ನು ಕರ್ಮ ಸಿದ್ಧಾಂತಕ್ಕೆ ಕಟ್ಟು ಬೀಳುವಂತೆ ಮಾಡಿ, ನಿಷ್ಕ್ರಿಯರನ್ನಾಗಿಸುತ್ತದೆ ಎನ್ನುತ್ತಾರೆ. ಶ್ರೀರಾಮಾಯಣ ದರ್ಶನಂನಲ್ಲಿ ಚಿಚ್ಚಕ್ತಿ, ಮೃಚ್ಚಕ್ತಿ, ಚಿನ್ಮಯ, ಮೃಣ್ಮಯ ಎಂಬ ಪದಗಳು ಎದುರಾದುವೆಂದು ಆ ಪುಸ್ತಕವನ್ನೇ ದೂರಿದವರಿದ್ದಾರೆ. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಗಡ್ದದಯ್ಯನ ಪ್ರಸಂಗವನ್ನು ನಿರೂಪಿಸದೇ ಬಿಟ್ಟಿದ್ದರೆ ಆಗ ಕುವೆಂಪು ಅವರನ್ನು ಮಾಫಿ ಮಾಡಲು ಕೆಲವರು ಸಿದ್ಧವೆಂದು ಹೇಳುವವರಿದ್ದಾರೆ. ಅನ್ನಮಯ ವಲಯದಿಂದ ಆನಂದಮಯ ವಲಯದವರೆಗಿನ ಪಯಣದಲ್ಲಿರುವ ಮಾನವ ಜೀವಿಗಳ ಹಲವು ಸಾಧ್ಯತೆಗಳನ್ನು ಕುವೆಂಪು ಬರಹಗಳು ಮಂಡಿಸುತ್ತವೆ; ಹಾಗಾಗಿ ‘ಪಾಪಿಗುಮುದ್ಧಾರವಿಹುದು’ ಎಂಬ ಈ ನಿಲುವನ್ನು ಮೆಚ್ಚುವವರು ಇರುವಂತೆ, ಕುವೆಂಪು ಅವರು ದಲಿತ ಜಗತ್ತನ್ನು ಹೊರಗಿನಿಂದ ಕಾಣುವರೇ ಹೊರತು ಒಳಗಿನವರಾಗಿ ಅಲ್ಲ ಎಂಬ ಟಿಪ್ಪಣಿಯನ್ನು ನೀಡುವವರೂ ಇದ್ದಾರೆ. ಹೀಗೆ ಇಂತಹ ಹತ್ತಾರು ಉದಾಹರಣೆಗಳನ್ನು ಮುಂದಿಡಲು ಸಾಧ್ಯವಿದೆ. ಈ ಬಗೆಯ ದ್ವಂದ್ವ ನಿಲುವುಗಳು ಬಿಕ್ಕಟ್ಟನ್ನು ಹುಟ್ಟುಹಾಕಿ ವಿವಾದಗಳಿಗೆ ಕಾರಣವಾದ ಪ್ರಸಂಗಗಳಿಗೂ ಉದಾಹರಣೆಗಳಿವೆ. ಈ ಎಲ್ಲ ನಿಲುವುಗಳೂ ಮುಖ್ಯವಾಗಿ ಕುವೆಂಪು ಅವರ ವ್ಯಕ್ತಿತ್ವದ ಹಲವು ಚಹರೆಗಳಲ್ಲಿ ಯಾವುದಾದರೊಂದನ್ನು ಆಧರಿಸಿ ನಡೆಸಿದ ಓದಿನ ಫಲಿತಗಳಾಗಿರುತ್ತವೆ.

 

ಕೃತಿಕಾರರ ಮೂಲಕ ಕೃತಿಯನ್ನು ಪ್ರವೇಶಿಸುವ ಬಗೆಯಲ್ಲಿ ಏನು ಕೊರತೆ ಇದೆ ಎಂಬ ಪ್ರಶ್ನೆಯನ್ನು ಮುಂದಿಡಬಹುದು. ಇದರಲ್ಲಿ ಕೊರತೆಯ ಪ್ರಶ್ನೆ ಬರುವುದಿಲ್ಲ. ಮೊದಲಲ್ಲಿ ನಾವು ಗುರುತಿಸಿಕೊಂಡ ಓದುಗರ ಬಗೆಯಲ್ಲಿ ಎರಡನೆಯ ಗುಂಪಿನವರು (ಸಾಹಿತ್ಯದ ಅಧ್ಯಯನಕಾರರು, ಸಂಶೋಧಕರು, ವಿಮರ್ಶಕರು) ಈ ಹಾದಿಯನ್ನು ಹಿಡಿಯುವ ಮೂಲಕವೇ ತಮಗೆ ಅಗತ್ಯವಾದ ಅಧ್ಯಯನ ಸಾಮಗ್ರಿಗಳನ್ನು ಸೃಷ್ಟಿಸಿಕೊಳ್ಳುತ್ತಿರುತ್ತಾರೆ. ಈ ಸಾಮಗ್ರಿಗಳೇ ಅವರ ಆಹಾರ. ಹಾಗಾಗಿ ಈ ಹಾದಿಯನ್ನು ಬಿಟ್ಟುಕೊಡಲು ಅವರು ಸಿದ್ಧರಿಲ್ಲ. ಇನ್ನುಳಿದ ಎರಡು ಬಗೆಯ ಓದುಗರಿಗೆ ಕೃತಿ ಮುಂಚೂಣಿಯಲ್ಲಿರುತ್ತದೆ. ಕೃತಿಕಾರನ ಹೆಸರು ಒಂದು ನೆಪ ಮಾತ್ರ. ಕುವೆಂಪು ಅವರನ್ನು ಏಕೆ ಓದಬೇಕು ಎಂಬ ಪ್ರಶ್ನೆಯನ್ನು ಮುಂದಿಡುತ್ತಿರುವವರು ಎರಡನೆಯ ಬಗೆಯ ಓದುಗರು ಅಥವಾ ಈ ಪ್ರಶ್ನೆ ಆ ವಲಯದ ಓದುಗರನ್ನು ಉದ್ದೇಶಿಸಿದೆ.

 ಕೃತಿಕಾರರ ವ್ಯಕ್ತಿತ್ವದ ಚಹರೆಗಳನ್ನು ಆಧರಿಸಿ ನಡೆಯುವ ಓದುಗಳು ಸಹಜವಾಗಿಯೇ ಕೃತಿಕಾರರಿಗೂ ಕೃತಿಗೂ ಇರುವ ಸಂಬಂಧದ ಸ್ವರೂಪದ ಬಗೆಗೆ ಇರುವ ಸಾಹಿತ್ಯ ತತ್ವ ಇಲ್ಲವೇ ಚಿಂತನೆಗಳನ್ನು ನಂಬುತ್ತವೆ ಮತ್ತು ಒಪ್ಪುತ್ತವೆ. ಈ ದಾರಿಯಲ್ಲಿ ಹಲವು ಸಮಸ್ಯೆಗಳಿವೆ. ಒಂದೆರಡನ್ನು ಈಗ ನೋಡೋಣ. ಮೊದಲನೆಯ ಸಮಸ್ಯೆ ಹೀಗಿದೆ. ಈ ದಾರಿ ಹಿಡಿದಾಗ ನಮ್ಮ ಓದನ್ನು ಕೃತಿಕಾರರ ವ್ಯಕ್ತಿತ್ವದ ಚಹರೆಗಳು ನಿಯಂತ್ರಿಸಲು ತೊಡಗುತ್ತವೆ; ಕೃತಿಗೆ ಇರುವ ಸ್ವತಂತ್ರ ಅಸ್ತಿತ್ವವನ್ನು ಕಡೆಗಾಣಿಸುವಂತಾಗುತ್ತದೆ. ಕಾಲ ಸರಿದಂತೆ ಕೃತಿಗಳು ಕೃತಿಕಾರರಿಂದ ಬಿಡುಗಡೆ ಪಡೆದು ಓದುಗರನ್ನು ತಲುಪಲು ಹವಣಿಸುತ್ತಿರುತ್ತವೆ. ಈ ಸಾಧ್ಯತೆಯನ್ನು ಈ ಬಗೆಯ ಓದು ಮುಚ್ಚಿ ಹಾಕುತ್ತದೆ. ಎರಡನೆಯ ಸಮಸ್ಯೆಯೆಂದರೆ ನಮಗೆ ಅನ್ಯವಲಯಗಳಿಂದ, ಇತರ ಜ್ಞಾನ ಶಿಸ್ತುಗಳಿಂದ ದೊರೆಯುವ ತಿಳಿವಳಿಕೆಯನ್ನು ತಾಳೆ ನೋಡಲು ಕುವೆಂಪು ಅವರ ಕೃತಿಗಳನ್ನು ಬಳಸುತ್ತಿರುತ್ತೇವೆ. ನಮ್ಮ ತಿಳಿವಳಿಕೆಗೆ ಸಾಟಿಯಾದರೆ ಕೃತಿಗಳನ್ನು ಒಪ್ಪುತ್ತೇವೆ ಹಾಗೆ ಸಾಟಿಯಾಗದೆ ಕೊರತೆಗಳು ಕಂಡರೆ ಆಗ ಕೃತಿಗಳು ಊನಕೊಂಡಿವೆ ಎಂದು ಭಾವಿಸುತ್ತೇವೆ. ಕುವೆಂಪು ಅವರು ಆಧುನಿಕತೆಯ ಪ್ರತಿಪಾದಕರು, ಸನಾತನವಾದಿಗಳು, ಕರ್ಮಸಿದ್ಧಾಂತವಾದಿಗಳು, ಅಧ್ಯಾತ್ಮಮಾರ್ಗದ ಬೆಂಬಲಿಗರು, ಭೂಮಿ ಒಡೆತನದ ಬದುಕಿನ ಮೌಲ್ಯಗಳ ಸಮರ್ಥಕರು ಹೀಗೆ ಹತ್ತು ಹಲವು ನಿರ್ಣಯಗಳನ್ನು ಮಾಡುವವರು ತಾವು ಬಳಸುತ್ತಿರುವ ಪರಿಭಾಷೆಯ ಬಗೆಗೆ ಈಗಾಗಲೇ ತಮಗೆ ಲಭಿಸಿರುವ ತಿಳಿವಳಿಕೆ ಮತ್ತು ನಂಬಿಕೆಗಳನ್ನು ಹೊತ್ತುಕೊಂಡೇ ಕುವೆಂಪು ಅವರನ್ನು ಓದುತ್ತಿರುತ್ತಾರೆ. ತಮ್ಮ ತಿಳಿವಳಿಕೆ ಮತ್ತು ನಂಬಿಕೆಗಳ ಗೆರೆಗಳನ್ನು ಕುವೆಂಪು ಕೃತಿಗಳು ತಲುಪುತ್ತಮೋ ಇಲ್ಲವೋ ಎಂಬುದನ್ನು ಹುಡುಕುತ್ತಿರುತ್ತಾರೆ. ತಮ್ಮ ತಿಳಿವಳಿಕೆಯನ್ನು ಬದಲಿಸುವ ಇಲ್ಲವೇ ತಮ್ಮ ನಂಬಿಕೆಯನ್ನು ಹುಸಿ ಮಾಡುವ ಸಾಧ್ಯತೆಗಳನ್ನು ಕೃತಿಗಳು ಹುದುಗಿಸಿಕೊಂಡಿರಬಹುದು ಎಂದು ಒಪ್ಪಲು ಸಿದ್ಧರಾಗುವುದಿಲ್ಲ. ಕುವೆಂಪು ಅವರ ಬರಹಗಳನ್ನು ಈ ಕಾಲದಲ್ಲಿ ಓದಲು ಸಮರ್ಥ ಕಾರಣಗಳಿವೆ ಎಂದು ವಾದಿಸುವವರಲ್ಲೂ ಈ ಮಿತಿಗಳು ಕಂಡುಬರುತ್ತವೆ. ಏಕೆಂದರೆ ಅವರೂ ಕೂಡ ತಮ್ಮ ತಿಳಿವಳಿಕೆಯ ನೆಲೆಯನ್ನು ಕುವೆಂಪು ಅವರ ಕೃತಿಗಳು ಪಡೆದುಕೊಂಡಿವೆ ಎಂಬುದನ್ನು ಆಧರಿಸಿಯೇ ತಮ್ಮ ವಾದವನ್ನು ಮಂಡಿಸುತ್ತಿರುತ್ತಾರೆ. ಕುವೆಂಪು ಅವರ ಕೃತಿಗಳ ಮೂಲಕವೇ ತಿಳಿವಳಿಕೆಯನ್ನು ಪಡೆದುಕೊಳ್ಳುವ, ವಿಸ್ತರಿಸಿಕೊಳ್ಳುವ, ಬದಲಿಸಿಕೊಳ್ಳುವ ಅವಕಾಶಗಳಿವೆ ಎನ್ನುವ ನೆಲೆಯಿಂದ ವಿಚಾರಗಳನ್ನು ಮಂಡಿಸುವವರು ತೀರಾ ಕಡಿಮೆ ಎಂದೇ ಹೇಳಬೇಕು.

 ಹೇಗೆ, ಎಷ್ಟು, ಯಾರು?

 ನಮ್ಮ ಚರ್ಚೆಯನ್ನು ಬೇರೊಂದು ದಿಕ್ಕಿಗೆ ಒಯ್ಯೋಣ. ಕುವೆಂಪು ಅವರ ಬರಹಗಳನ್ನು ಏಕೆ ಓದಬೇಕು ಎಂಬ ಪ್ರಶ್ನೆಯ ಜೊತೆಗೆ ಅವರ ಬರಹಗಳನ್ನು ಹೇಗೆ ಓದಬೇಕು, ಎಷ್ಟು ಓದಬೇಕು, ಯಾರು ಓದಬೇಕು ಎಂಬ ಪ್ರಶ್ನೆಗಳೂ ಕೊಂಡಿಯಾಗಿ ಸೇರಿಕೊಳ್ಳುತ್ತವೆ. ಮೊದಲಿಗೆ ಯಾರು ಓದಬೇಕು ಎಂಬ ಪ್ರಶ್ನೆಯನ್ನು ಬದಿಗಿರಿಸೋಣ. ಏಕೆಂದರೆ ಅದನ್ನು ನಿರ್ದೇಶಿಸುವುದು ಯಾರ ಅಳವಿಗೂ ನಿಲುಕದ ಮಾತು. ಆದರೆ ಈಗ ಯಾರು ಓದುತ್ತಿದ್ದಾರೆ ಎಂಬುದನ್ನು ಈಗಾಗಲೇ ನೋಡಿದ್ದೇವೆ. ಈ ಗುಂಪುಗಳ ಜೊತೆಗೆ ಸಾಹಿತ್ಯಕ ಆಸಕ್ತಿಯಾಚೆಗೆ, ತಮ್ಮ ಜ್ಞಾನಶಿಸ್ತುಗಳು ಮಂಡಿಸುವ ಚಿಂತನೆಗೆ ಪೂರಕವಾದ ವಿಚಾರಗಳು ಕುವೆಂಪು ಅವರ ಬರಹಗಳಲ್ಲಿ ಕಂಡು ಬರಬಹುದೇ ಎಂಬುದನ್ನು ಪರಿಶೀಲಿಸಲು ಅವರ ಕೃತಿಗಳನ್ನು ಓದುವವರಿದ್ದಾರೆ. ಇತಿಹಾಸ, ಸಮಾಜ ಶಾಸ್ತ್ರ, ಮನೋವಿಜ್ಞಾನ ಮುಂತಾದ ತಿಳಿವಳಿಕೆಯ ವಲಯದ ಚಿಂತಕರು ಕುವೆಂಪು ಅವರ ಬರಹಗಳನ್ನು ಈ ನೆಲೆಯಲ್ಲಿ ಓದುತ್ತಿರುವ ಕೆಲವು ನಿದರ್ಶನಗಳಿವೆ.

 ಇನ್ನು ಎಷ್ಟು ಓದಬೇಕು ಎಂಬುದನ್ನು ನಿರ್ಧರಿಸುವುದು ಆಗದ ಮಾತು. ಆಯ್ದ ಬರಹಗಳು, ಶ್ರೇಷ್ಠ ಬರಹಗಳು, ಸಂಗ್ರಹಗಳು, ಸಂಚಯಗಳು ಹೀಗೆ ಹೇಗೆ ಪ್ರಯತ್ನಿಸಿದರೂ ಇಲ್ಲವೇ ಒಂದು ಚೂರೂ ಬಿಡದೆ ಅವರ ಎಲ್ಲ ಬರವಣಿಗೆಯನ್ನೂ ಒತ್ತಟ್ಟಿಗೆ ಒದಗಿಸಿದರೂ ಸಮಗ್ರವಾಗಿ ಎಲ್ಲ ಬರಹಗಳು ದೊರಕಿದರೂ ಎಲ್ಲವನ್ನೂ ಯಾರೂ ಓದುವುದಿಲ್ಲ. ಓದುಗರು ತಮ್ಮ ಓದಿನ ಆಯ್ಕೆಗಳನ್ನು ಮಾಡಿಕೊಳ್ಳುತ್ತಿರುತ್ತಾರೆ. ಕಳೆದ ಹಲವು ದಶಕಗಳಲ್ಲಿ ಈ ಆಯ್ಕೆಗಳು ನಡೆದಿರುವ ವಿಧಾನ ಮತ್ತು ಆ ಆಯ್ಕೆಗಳಲ್ಲಿ ನಡೆದಿರುವ ಪಲ್ಲಟಗಳು ಗೋಚರವಾಗುವಂತಿವೆ. ಕೆಲವು ದಶಕಗಳ ಹಿಂದೆ ಮಲೆಗಳಲ್ಲಿ ಮದುಮಗಳು ಕೃತಿಯನ್ನು ಅದರ ಗಾತ್ರಕ್ಕೆ ಹೆದರಿ ಅದನ್ನು ಓದಲು ಹಿಂಜರಿದಿದ್ದ ಓದುಗರು ಈಗ ಆ ಕಾದಂಬರಿಯನ್ನು ಓದುತ್ತಿದ್ದಾರೆ. ಕುವೆಂಪು ಬರೆದದ್ದು ಎಂಬ ಕಾರಣದಿಂದ ಓದುವುದಕ್ಕಿಂತ ತಮ್ಮ ಓದಿನ ಆಯ್ಕೆಯ ಚೌಕಟ್ಟಿನೊಳಗೆ ಆ ಕೃತಿಗಳು ಬರುತ್ತವೆ ಎಂಬ ಕಾರಣಕ್ಕಾಗಿ ಓದುತ್ತಿದ್ದಾರೆ; ಮುಂದೆಯೂ ಓದುತ್ತಾರೆ. ಹೀಗೆ ಓದುವಾಗ ಈವರೆಗೆ ವಿಮರ್ಶಕರು, ಅಧ್ಯಯನಕಾರರು ಎತ್ತಿರುವ ಪ್ರಶ್ನೆಗಳು, ತಳೆದಿರುವ ನಿಲುವುಗಳು ಹಿಂದೆ ಸರಿಯುತ್ತವೆ. ಓದುಗರಿಗೆ ತಾವು ಓದುತ್ತಿರುವ, ಕೇಳುತ್ತಿರುವ, ಇಲ್ಲವೇ ನೋಡುತ್ತಿರುವ ಕೃತಿಯಷ್ಟೇ ಮುಖ್ಯವಾಗುತ್ತದೆ.

 ಹೊಸ ತಂತ್ರಜ್ಞಾನದ ಪ್ರಭಾವ ಕೂಡ ಇದರಲ್ಲಿ ತನ್ನ ಪಾತ್ರವನ್ನು ನಿರ್ವಹಿಸುತ್ತದೆ. ಮುದ್ರಿತ ಪುಸ್ತಕಗಳಲ್ಲದೆ ಇ-ಪುಸ್ತಕಗಳು, ಕೇಳು ಪುಸ್ತಕಗಳು ಮತ್ತು ಬಹುಮಾಧ್ಯಮ ಪುಸ್ತಕಗಳು ತನ್ನಿಂದ ತಾನೇ ಕೃತಿಕಾರರನ್ನು ಹಿನ್ನೆಲೆಗೆ ಸರಿಸಿ ಕೃತಿಗಳನ್ನು ಮುಂಚೂಣಿಗೆ ತರುತ್ತವೆ. ಹೀಗೆ ಓದುವವರು ಕೃತಿಕಾರರ ಚಹರೆಗಳನ್ನು ಅವಲಂಬಿಸಿ ಕೃತಿಗಳನ್ನು ಓದುವ ಬದಲು ನೇರವಾಗಿ ಕೃತಿಗಳೊಡನೆ ಅನುಸಂಧಾನಕ್ಕೆ ತೊಡಗುತ್ತಾರೆ. ತಮ್ಮ ಓದಿನ ವ್ಯಾಪ್ತಿಯ ಚೌಕಟ್ಟಿನಲ್ಲಿ ಕೃತಿಗಳನ್ನು ತಮ್ಮದಾಗಿಸಿಕೊಳ್ಳುತ್ತಿರುತ್ತಾರೆ. ಹೆಚ್ಚೆಂದರೆ ಓದುಗರು ತಮ್ಮ ತಮ್ಮ ಅನುಸಂಧಾನದ ಅನುಭವಗಳನ್ನು ವಿನಿಮಯ ಮಾಡಿಕೊಳ್ಳುತ್ತಿರಬಹುದು. ನಮ್ಮ ತೋಂಡಿಯ ರಚನೆಗಳ ಸಾಮುದಾಯಿಕ ಅನುಸಂಧಾನ ನಡೆಯುವುದು ಹೀಗೇ ತಾನೇ. ಬರುವ ದಿನಗಳಲ್ಲಿ ಕುವೆಂಪು ಅವರ ಬರಹಗಳು ಕುವೆಂಪು ಅವರ ವ್ಯಕ್ತಿತ್ವದ ಚಹರೆಗಳ ಹೊರೆಯಿಲ್ಲದೆಯೂ ಓದುಗರನ್ನು ತಲುಪುವಲ್ಲಿ ಈ ತಂತ್ರಜ್ಞಾನದ ಕೊಡುಗೆ ಅಪಾರವಾಗಿರುತ್ತದೆ.

ಕೃತಿಕಾರರ ಮೂಲಕ ಕೃತಿಯನ್ನು ಪ್ರವೇಶಿಸುವ ಬಗೆಯಲ್ಲಿ ಏನು ಕೊರತೆ ಇದೆ ಎಂಬ ಪ್ರಶ್ನೆಯನ್ನು ಮುಂದಿಡಬಹುದು. ಇದರಲ್ಲಿ ಕೊರತೆಯ ಪ್ರಶ್ನೆ ಬರುವುದಿಲ್ಲ. ಮೊದಲಲ್ಲಿ ನಾವು ಗುರುತಿಸಿಕೊಂಡ ಓದುಗರ ಬಗೆಯಲ್ಲಿ ಎರಡನೆಯ ಗುಂಪಿನವರು (ಸಾಹಿತ್ಯದ ಅಧ್ಯಯನಕಾರರು, ಸಂಶೋಧಕರು, ವಿಮರ್ಶಕರು) ಈ ಹಾದಿಯನ್ನು ಹಿಡಿಯುವ ಮೂಲಕವೇ ತಮಗೆ ಅಗತ್ಯವಾದ ಅಧ್ಯಯನ ಸಾಮಗ್ರಿಗಳನ್ನು ಸೃಷ್ಟಿಸಿಕೊಳ್ಳುತ್ತಿರುತ್ತಾರೆ. ಈ ಸಾಮಗ್ರಿಗಳೇ ಅವರ ಆಹಾರ. ಹಾಗಾಗಿ ಈ ಹಾದಿಯನ್ನು ಬಿಟ್ಟುಕೊಡಲು ಅವರು ಸಿದ್ಧರಿಲ್ಲ. ಇನ್ನುಳಿದ ಎರಡು ಬಗೆಯ ಓದುಗರಿಗೆ ಕೃತಿ ಮುಂಚೂಣಿಯಲ್ಲಿರುತ್ತದೆ. ಕೃತಿಕಾರನ ಹೆಸರು ಒಂದು ನೆಪ ಮಾತ್ರ. ಕುವೆಂಪು ಅವರನ್ನು ಏಕೆ ಓದಬೇಕು ಎಂಬ ಪ್ರಶ್ನೆಯನ್ನು ಮುಂದಿಡುತ್ತಿರುವವರು ಎರಡನೆಯ ಬಗೆಯ ಓದುಗರು ಅಥವಾ ಈ ಪ್ರಶ್ನೆ ಆ ವಲಯದ ಓದುಗರನ್ನು ಉದ್ದೇಶಿಸಿದೆ.

ಹೇಗೆ ಓದಬೇಕು ಎಂಬ ಪ್ರಶ್ನೆಯೊಂದು ಉಳಿಯಿತು. ಕುವೆಂಪು ಅವರ ಬರಹಗಳನ್ನು ಓದುವವರು ಆ ಬರಹಗಳನ್ನು ಮಾತ್ರ ಓದುತ್ತಿರುವುದಿಲ್ಲ. ಅವರ ಹಲವು ಬಗೆಯ ಓದುಗಳ ಜೊತೆಯಲ್ಲಿ ಈ ಬರಹಗಳನ್ನು ಓದುತ್ತಿರುತ್ತಾರೆ. ಹಾಗಾಗಿ ಅವರ ಗ್ರಹಿಕೆಯ ಸ್ವರೂಪ ಸಂಕೀರ್ಣವಾಗಿರುತ್ತದೆ. ಹೀಗೆ ಇರುವುದರಲ್ಲಿ ಕೊರತೆಯೇನೂ ಇಲ್ಲ. ಆದರೆ ಈಗಾಗಲೇ ಕುವೆಂಪು ಅವರ ಕೃತಿಗಳನ್ನು ಓದಿದ ಅಧ್ಯಯನಕಾರರು ಮಂಡಿಸಿದ ವಿಚಾರಗಳ ನೆರವನ್ನು ಪಡೆದು ಓದಲು ತೊಡಗಿದರೆ ಮಾತ್ರ ಸಮಸ್ಯೆಗಳು ಎದುರಾಗುತ್ತವೆ. ಏನು ಸಮಸ್ಯೆ. ಇದನ್ನು ಅರಿಯಲು ಬುಡಕಟ್ಟು ಜನರ ಹಾಡುಗಳಲ್ಲಿ ಬರುವ ಒಂದು ಚಿತ್ರ ಇಲ್ಲಿ ನೆರವಿಗೆ ಬರುತ್ತದೆ. ಅಗೋ ತುಂಬು ಚಂದಿರನನ್ನು ನೋಡು ಎಂದು ತೋರಿಸುವಾಗ ನೋಡುವವರು ಚಂದಿರನನ್ನು ನೋಡುವ ಬದಲು ಚಂದಿರನನ್ನು ತೋರಿಸುತ್ತಿರುವ ತೋರು ಬೆರಳನ್ನು ನೋಡುತ್ತ ಅದೇ ಚಂದಿರನೆಂದು ನಂಬುವ ಚಿತ್ರವದು. ಈ ಉದಾಹರಣೆಯಿಂದ ನಾನು ಸೂಚಿಸುತ್ತಿರುವ ಸಮಸ್ಯೆಯ ಸ್ವರೂಪ ತಿಳಿಯುತ್ತದೆ ಎಂದುಕೊಳ್ಳುತ್ತೇನೆ. ಹಾಗಿದ್ದರೆ ಓದುಗರಿಗೆ ಅವರ ಓದಿನಲ್ಲಿ ಏನನ್ನು ಕಂಡುಕೊಳ್ಳಬೇಕೆಂದು ದಾರಿ ತೋರುವ ಬರಹಗಳ ಅಗತ್ಯವಿಲ್ಲವೇ ಎಂದು ಕೇಳಬಹುದು. ದಿಟ, ಅಪರಿಚಿತ ಪ್ರದೇಶದಲ್ಲಿ ಚಾರಣ ಮಾಡುವವರಿಗೆ ಆ ಪ್ರದೇಶದ ನಕ್ಷೆಗಳು ನೆರವಾಗುತ್ತವೆ. ಆದರೆ ಅಲ್ಲಿನ ದಾರಿಯಲ್ಲಿ ನಡೆದು ಸಾಗಬೇಕಾದ ಹೊಣೆ ಮಾತ್ರ ಚಾರಣಿಗರದ್ದೇ ಆಗಿರಬೇಕಲ್ಲವೇ? ಎಲ್ಲಿಯವರೆಗೆ ಓದುಗರ ಗ್ರಹಿಕೆಗಳನ್ನು ನಿಯಂತ್ರಿಸುವ ಕೆಲಸವನ್ನು ಮಾಡುವುದಿಲ್ಲವೋ ಅಲ್ಲಿಯವರೆಗೆ ಈ ಬಗೆಯ ಬರಹಗಳು ಓದುಗರಿಗೆ ನೆರವಾಗಬಲ್ಲವು. ಆದರೆ ಅಂತಹ ಬರಹಗಳು ಕನ್ನಡದಲ್ಲಿ ಬಲು ಕಡಿಮೆ ಪ್ರಮಾಣದಲ್ಲಿವೆ.

ಈ ಮೇಲಿನ ಮಾತುಗಳನ್ನು ಹೇಳುವಾಗ ಕುವೆಂಪು ಅವರ ವೈಚಾರಿಕ ಬರಹಗಳನ್ನು ಹೊರಗಿರಿಸಿಕೊಂಡಿದ್ದೇನೆ. ಆ ಬಗೆಯ ಬರಹಗಳು ನಿರಂತರ ಚರ್ಚೆಗೆ, ವಿಷಯ ವಿಸ್ತರಣೆಗೆ ಒಳಗಾಗುತ್ತಲೇ ಹೋಗಬೇಕಿದೆ. ಸಾರಾಸಗಟಾಗಿ ಯಾವುದೂ ಮನ್ನಣೆಯನ್ನು ಪಡೆಯುವುದಿಲ್ಲ. ಉದಾಹರಣೆಗೆ ಅವರು ಪ್ರತಿಪಾದಿಸಿದ ವೈಚಾರಿಕ ಪ್ರಜ್ಞೆ ಮತ್ತು ವಿಜ್ಞಾನ ಬುದ್ಧಿ ಎಂಬ ಪರಿಕಲ್ಪನೆಗಳನ್ನು ನಮಗೆ ಪರಿಚಿತವಾಗಿರುವ ಮತ್ತು ನಮ್ಮ ಬದುಕಿನೊಡನೆ ಬೆರೆತು ಹೋಗಿರುವ ಚಿಂತನಾ ಪರಂಪರೆಯ ಜೊತೆಯಲ್ಲಿರಿಸಿ ನೋಡಬೇಕಾಗುತ್ತದೆ. ಹಾಗಾಗಿ ಅವರ ವೈಚಾರಿಕ ಬರಹಗಳು ಪಡೆದುಕೊಳ್ಳುವ ಓದಿನ ಸ್ವರೂಪವೇ ಬೇರೆ ಬಗೆಯದ್ದಾಗಿರುತ್ತದೆ ಮತ್ತು ಹಾಗೆಯೇ ಇರಬೇಕು ಕೂಡ. ಒಟ್ಟಾರೆ ಹೇಳುವುದಾದರೆ ಕುವೆಂಪು ಅವರ ಬರಹಗಳು ಅವರಿಂದ ಬಿಡುಗಡೆ ಪಡೆದು ಸ್ವತಂತ್ರಗೊಳ್ಳಬೇಕು. ಅವರ ಮೂಲಕ ಅವರ ಬರಹಗಳನ್ನು ಓದುಬೇಕೆಂಬ ಒತ್ತಾಯದಿಂದ ಹೊರಬರಬೇಕು. ಕುವೆಂಪು ಅವರ ಹೆಸರು ಕೇವಲ ನೆಪವಾಗಬೇಕು. ಆಗ ಮಾತ್ರ ಮುಂದಿನ ದಶಕಗಳಲ್ಲಿ ಓದುಗರು ಅವರ ಬರಹಗಳನ್ನು ಅನುಸಂಧಾನ ಮಾಡುವ ಬಗೆಗಳು ವಿಸ್ತಾರಗೊಳ್ಳುತ್ತವೆ. ವಚನ, ಕೀರ್ತನೆ, ತತ್ವಪದಗಳು ಸಾಮುದಾಯಿಕವಾಗಿ ಉಳಿದುಕೊಂಡು ಬಂದಿರುವುದು ಹೀಗೇ ಅಲ್ಲವೇ. ಅವೆಲ್ಲವನ್ನು ಯಾರು ಬರೆದವರು, ಏಕೆ ಬರೆದರು ಎಂಬುದು ವಿದ್ವಾಂಸರ ಕಾಳಜಿ. ಜನರಿಗೆ ಆ ರಚನೆಗಳಷ್ಟೇ ಸಾಕು. ತಮ್ಮ ಬದುಕಿನೊಡನೆ ಅವುಗಳನ್ನು ಉಳಿಸಿಕೊಂಡಿದ್ದಾರೆ. ಉಳಿಸಿಕೊಳ್ಳುತ್ತಾರೆ. ಕುವೆಂಪು ಅವರ ಬರಹಗಳು ಈ ನೆಲೆಯನ್ನು ಪಡೆದಾಗ ಮಾತ್ರ ಬರುವ ತಲೆಮಾರಿಗೆ ದಾಟಬಲ್ಲವು.

ಆಯ್ದ ಬರಹಗಳು, ಶ್ರೇಷ್ಠ ಬರಹಗಳು, ಸಂಗ್ರಹಗಳು, ಸಂಚಯಗಳು ಹೀಗೆ ಹೇಗೆ ಪ್ರಯತ್ನಿಸಿದರೂ ಇಲ್ಲವೇ ಒಂದು ಚೂರೂ ಬಿಡದೆ ಅವರ ಎಲ್ಲ ಬರವಣಿಗೆಯನ್ನೂ ಒತ್ತಟ್ಟಿಗೆ ಒದಗಿಸಿದರೂ ಸಮಗ್ರವಾಗಿ ಎಲ್ಲ ಬರಹಗಳು ದೊರಕಿದರೂ ಎಲ್ಲವನ್ನೂ ಯಾರೂ ಓದುವುದಿಲ್ಲ. ಓದುಗರು ತಮ್ಮ ಓದಿನ ಆಯ್ಕೆಗಳನ್ನು ಮಾಡಿಕೊಳ್ಳುತ್ತಿರುತ್ತಾರೆ. ಕಳೆದ ಹಲವು ದಶಕಗಳಲ್ಲಿ ಈ ಆಯ್ಕೆಗಳು ನಡೆದಿರುವ ವಿಧಾನ ಮತ್ತು ಆ ಆಯ್ಕೆಗಳಲ್ಲಿ ನಡೆದಿರುವ ಪಲ್ಲಟಗಳು ಗೋಚರವಾಗುವಂತಿವೆ. ಕೆಲವು ದಶಕಗಳ ಹಿಂದೆ ಮಲೆಗಳಲ್ಲಿ ಮದುಮಗಳು ಕೃತಿಯನ್ನು ಅದರ ಗಾತ್ರಕ್ಕೆ ಹೆದರಿ ಅದನ್ನು ಓದಲು ಹಿಂಜರಿದಿದ್ದ ಓದುಗರು ಈಗ ಆ ಕಾದಂಬರಿಯನ್ನು ಓದುತ್ತಿದ್ದಾರೆ. ಕುವೆಂಪು ಬರೆದದ್ದು ಎಂಬ ಕಾರಣದಿಂದ ಓದುವುದಕ್ಕಿಂತ ತಮ್ಮ ಓದಿನ ಆಯ್ಕೆಯ ಚೌಕಟ್ಟಿನೊಳಗೆ ಆ ಕೃತಿಗಳು ಬರುತ್ತವೆ ಎಂಬ ಕಾರಣಕ್ಕಾಗಿ ಓದುತ್ತಿದ್ದಾರೆ; ಮುಂದೆಯೂ ಓದುತ್ತಾರೆ. ಹೀಗೆ ಓದುವಾಗ ಈವರೆಗೆ ವಿಮರ್ಶಕರು, ಅಧ್ಯಯನಕಾರರು ಎತ್ತಿರುವ ಪ್ರಶ್ನೆಗಳು, ತಳೆದಿರುವ ನಿಲುವುಗಳು ಹಿಂದೆ ಸರಿಯುತ್ತವೆ. ಓದುಗರಿಗೆ ತಾವು ಓದುತ್ತಿರುವ, ಕೇಳುತ್ತಿರುವ, ಇಲ್ಲವೇ ನೋಡುತ್ತಿರುವ ಕೃತಿಯಷ್ಟೇ ಮುಖ್ಯವಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)