ಓ ಮೆಣಸೇ...
ಕುರುಬರ ಹೋರಾಟಕ್ಕೂ ಆರೆಸ್ಸೆಸ್‌ಗೂ ಸಂಬಂಧ ಇಲ್ಲ- ಎಚ್.ಎಂ.ರೇವಣ್ಣ, ಮಾಜಿ ಸಚಿವ
ಕುರಿಗೂ ತೋಳಕ್ಕೂ ಎತ್ತಣೆತ್ತಣ ಸಂಬಂಧವಯ್ಯ?
ಕೆಲವರು ದಿಲ್ಲಿಯಲ್ಲಿ ಕುಳಿತು ನನಗೆ ಪ್ರಜಾಪ್ರಭುತ್ವದ ಪಾಠ ಹೇಳುತ್ತಿದ್ದಾರೆ-ನರೇಂದ್ರ ಮೋದಿ, ಪ್ರಧಾನಿ
ನೀವು ಬಾಲ್ಯದಲ್ಲಿ ಶಾಲೆಯಲ್ಲಿ ಕುಳಿತು ಮೇಷ್ಟ್ರಿಂದ ಪ್ರಜಾಪ್ರಭುತ್ವದ ಪಾಠ ಕೇಳಿದ್ದಿದ್ದರೆ ಈಗ ದಿಲ್ಲಿಯಲ್ಲಿ ಪಾಠ ಕೇಳುವ ಅಗತ್ಯ ಬೀಳುತ್ತಿರಲಿಲ್ಲ.
ನಾನು ಇರುವಷ್ಟು ದಿನ ಮಾತ್ರವಲ್ಲ, ನಾನು ಹೋದ ಮೇಲೆಯೂ ಜೆಡಿಎಸ್ ಉಳಿಯಲಿದೆ-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ಬಿಜೆಪಿಯ ಮೇಲೆ ಅಷ್ಟೊಂದು ಭರವಸೆಯೇ?
ಶಿಸ್ತು ಬದ್ಧ ಪಕ್ಷ ಬಿಜೆಪಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳರಂತಹ ಶಾಸಕರ ನಡವಳಿಕೆಗಳು ಪಕ್ಷಕ್ಕೆ ಗೌರವ ತರುವಂತಹದ್ದಲ್ಲ- ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
ಯಡಿಯೂರಪ್ಪರನ್ನು ಇಳಿಸುವ ಆರೆಸ್ಸೆಸ್‌ನ ಮರಳಿ ಯತ್ನದ ಭಾಗ ಯತ್ನಾಳ್.
ಆರೆಸ್ಸೆಸ್ ಎಂದರೆ ಮೈಲಿಗೆ ಯಾಕೆ? -ಎಚ್.ವಿಶ್ವನಾಥ್,ವಿ.ಪ.ಸದಸ್ಯ
ಆರೆಸ್ಸೆಸ್‌ಗೆ ಸದ್ಯಕ್ಕೆ ನೀವೆಂದರೆ ಮೈಲಿಗೆ.
ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ ನೆಲೆಯೂರಿದ್ದು, ಯಾರ ಸಹಾಯವೂ ಅಗತ್ಯವಿಲ್ಲ -ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ
ಶಾಸಕರನ್ನು ಕೊಂಡುಕೊಂಡದ್ದು ಸ್ವಂತ ಹಣದಿಂದ ಎಂದು ಹೇಳುತ್ತಿದ್ದೀರಾ?
ನಾನು ಗೋ ಕೊರೋನ ಎಂದಿದ್ದಕ್ಕೆ ಕೊರೋನ ಹೋಗಿದೆ. ರೂಪಾಂತರಿತ ಕೊರೋನಕ್ಕೆ ನಾನೀಗ ನೋ ಕೊರೋನ ಎಂದು ಹೇಳುತ್ತಿದ್ದೇನೆ- ರಾಮದಾಸ್ ಅಠಾವಳೆ, ಕೇಂದ್ರ ಸಚಿವ
ನಿಮ್ಮಂತಹ ಆರೆಸ್ಸೆಸ್ ರೂಪಾಂತರಿತ ದಲಿತ ನಾಯಕರಿಗಿಂತ ಈ ಕೊರೋನವೇ ವಾಸಿ.
ದಿಲ್ಲಿಯಲ್ಲಿ ರೈತರ ಪ್ರತಿಭಟನೆ ಇನ್ನೂ ಮುಂದುವರಿದಿರುವುದು ಕೇಂದ್ರ ಸರಕಾರದ ವೈಫಲ್ಯಕ್ಕೆ ಸಾಕ್ಷಿ -ಅಖಿಲೇಶ್ ಯಾದವ್, ಎಸ್ಪಿ ಅಧ್ಯಕ್ಷ
ವೈಫಲ್ಯವೇ ನಮ್ಮ ಸಾಧನೆ ಎಂದು ಮೋದಿ ಹೇಳುತ್ತಿದ್ದಾರೆ.
ಇಂದು ಇಡೀ ಜಗತ್ತು ಭಾರತವನ್ನು ಗುರುವಿನ ಸ್ಥಾನದಲ್ಲಿ ನೋಡುತ್ತಿದೆ -ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ
ಕಳ್ಳರ ಗುರು ಇದನ್ನು ಆಳುತ್ತಿದ್ದಾರೆ ಎನ್ನುವ ಕಾರಣಕ್ಕಿರಬಹುದೇ?
ಮುಖ್ಯಮಂತ್ರಿ ಯಾರಾಗಬೇಕೆಂಬ ಕಿತ್ತಾಟ ಬಿಟ್ಟು ಎಲ್ಲರೂ ಒಟ್ಟಾಗಿ ಕಾಂಗ್ರೆಸನ್ನು ಅಧಿಕಾರಕ್ಕೆ ತರಬೇಕು - ಕೆ.ಎಚ್.ಮುನಿಯಪ್ಪ, ಕಾಂಗ್ರೆಸ್ ಮುಖಂಡ
ಅಧಿಕಾರಕ್ಕೆ ತಂದ ಬಳಿಕ ಕಿತ್ತಾಟ ಮಾಡಿ ಎಂದು ಹೇಳುತ್ತಿದ್ದಾರೆ.
ದೇವೇಗೌಡರನ್ನು ಪ್ರಧಾನಿ ಮಾಡಿದ್ದು, ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್ ಶಾಲು-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಕಾಂಗ್ರೆಸನ್ನು ಅಧಿಕಾರದಿಂದ ಕೆಳಗೆ ಇಳಿಸಿದ್ದು ಯಾರ ಶಾಲು?
ನಂಬಿಕೆ ಎನ್ನುವುದು ಎಲ್ಲವನ್ನೂ ಮೀರಿದ್ದು, ಜಗತ್ತು ನಡೆಯುತ್ತಿರುವುದೇ ನಂಬಿಕೆಗಳ ಆಧಾರದಲ್ಲಿ -ಸಿ.ಟಿ.ರವಿ, ಮಾಜಿ ಸಚಿವ
ಮೋದಿಯ ಮೇಲೆ ನಂಬಿಕೆ ಇಟ್ಟು ಮೋಸ ಹೋದವರಿಗೆ ಸಮಾಧಾನ ಹೇಳುತ್ತಿದ್ದಾರೆ.
ಬಿಜೆಪಿ ಬಯಸಿದರೆ ಯಾವುದೇ ಕ್ಷಣದಲ್ಲಿ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಲು ಸಿದ್ಧ - ನಿತೀಶ್ ಕುಮಾರ್, ಬಿಹಾರ ಮುಖ್ಯಮಂತ್ರಿ
ಬಿಜೆಪಿಗಾಗಿ ಜೆಡಿಯು ಪಕ್ಷವನ್ನೇ ಬಿಟ್ಟುಕೊಟ್ಟ ಕರ್ಣ ತಾವು.
ಒಂದು ವೇಳೆ ಮುಸ್ಲಿಮರು ಗೋಮಾಂಸ ತಿನ್ನದಿರುತ್ತಿದ್ದರೆ ಬಿಜೆಪಿಯವರಿಗೆ ಗೋವು ಪೂಜನೀಯವೂ ಪವಿತ್ರವೂ ಆಗುತ್ತಿರಲಿಲ್ಲ - ದಿನೇಶ್ ಗುಂಡೂರಾವ್, ಕಾಂಗ್ರೆಸ್ ನಾಯಕ
ಗೋಮಾಂಸ ತಿನ್ನುವುದಕ್ಕೆ ಒತ್ತಾಯಿಸಿ ಹಲ್ಲೆ ನಡೆಸುತ್ತಿದ್ದರೇನೋ?
ಮುಂದಿನ ಎರಡೂವರೆ ವರ್ಷ ನಾನೇ ಮುಖ್ಯಮಂತ್ರಿ- ಯಡಿಯೂರಪ್ಪ, ಸಿಎಂ
ಆ ಬಳಿಕ ನೀವು ಪಕ್ಷಾಂತರ ಮಾಡುವ ಉದ್ದೇಶವಿದೆಯೇ?
ಜಗತ್ತಿನ ಅತೀ ದೊಡ್ಡ ಕೊರೋನ ಲಸಿಕೆ ವಿತರಣೆಗೆ ನಾವು ಸಿದ್ಧರಾಗುತ್ತಿದ್ದೇವೆ - ನರೇಂದ್ರ ಮೋದಿ, ಪ್ರಧಾನಿ
ಕೊರೋನ ವಿತರಿಸುವಲ್ಲಿ ಯಶಸ್ವಿಯಾದಷ್ಟು ಸುಲಭ ಇದಲ್ಲ.
ಮನೆಯಲ್ಲಿ ನೋಡಿಕೊಳ್ಳುವಷ್ಟೇ ಜೋಪಾನವಾಗಿ ಶಾಲೆಗಳಲ್ಲಿ ನಮ್ಮೆಲ್ಲ ಶಿಕ್ಷಕರು ಮಕ್ಕಳನ್ನು ನೋಡಿಕೊಳ್ಳಲಿದ್ದಾರೆ- ಸುರೇಶ್ ಕುಮಾರ್, ಸಚಿವ
ಹಾಗಾದಲ್ಲಿ ಮಕ್ಕಳು ಕೊರೋನಗೆ ಥ್ಯಾಂಕ್ಸ್ ಹೇಳಲಿದ್ದಾರೆ. ಶಿಕ್ಷಕರ ಮನಸ್ಥಿತಿಯನ್ನು ಬದಲಿಸಿದ್ದಕ್ಕೆ.
ಮದುವೆಗಾಗಿ ಧರ್ಮ ಬದಲು ಮಾಡಿಕೊಳ್ಳುವುದನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ - ರಾಜನಾಥ್ ಸಿಂಗ್, ಕೇಂದ್ರ ಸಚಿವ
ರಾಜಕೀಯಕ್ಕೆ ಧರ್ಮ ಬಳಸುವುದನ್ನು ಎಲ್ಲರೂ ಒಪ್ಪುತ್ತಾರೆಯೇ?
ದೇವರು ಎಚ್ಚರಿಕೆ ಕೊಟ್ಟಿದ್ದಾನೆ ರಾಜಕೀಯ ಪ್ರವೇಶಿಸಲಾರೆ - ರಜನಿಕಾಂತ್, ನಟ
ದೇವರು ಕೊನೆಗೂ ಬುದ್ಧಿ ಕೊಟ್ಟ.
ಹೊಸ ತಲೆಮಾರಿನವರು ಆರೆಸ್ಸೆಸ್ ಬೆಳೆದು ಬಂದ ದಾರಿಯನ್ನು ತಿಳಿದುಕೊಳ್ಳಬೇಕು - ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
ಹೌದು. ಆಗಲಾದರೂ ಅವರು ಅದರಿಂದ ದೂರ ಉಳಿಯಬಹುದು.
ವಯಸ್ಸಾದ ಹಸುಗಳನ್ನು ಹಾಗೂ ಗಂಡು ಕರುಗಳನ್ನು ಹತ್ತಿರದ ಗೋಶಾಲೆಗೆ ನೀಡಬಹುದು -ಪ್ರಭು ಚೌಹಾಣ್, ಸಚಿವ
ಗೋಶಾಲೆಗಳಿಂದಲೇ ಕಸಾಯಿಖಾನೆಗೆ ಕಳುಹಿಸುವ ವ್ಯವಸ್ಥೆ ಇರಬೇಕು.
ಯುಪಿಎಯ ಮುಖ್ಯಸ್ಥನಾಗಲು ನನಗೆ ಯಾವುದೇ ಆಸಕ್ತಿ ಇಲ್ಲ- ಶರದ್ ಪವಾರ್, ಎನ್‌ಸಿಪಿ ಮುಖ್ಯಸ್ಥ
ಅಧಿಕಾರ ಇಲ್ಲದಿರುವ ಯುಪಿಎಯ ಮೇಲೆ ಆಸಕ್ತಿ ಹುಟ್ಟುವುದಾದರೂ ಹೇಗೆ?
ಬಿಜೆಪಿಯ ಜನವಿರೋಧಿ ನೀತಿಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯ - ಡಾ.ಜಿ.ಪರಮೇಶ್ವರ್, ಮಾಜಿ ಉಪಮುಖ್ಯಮಂತ್ರಿ
ಬಿಜೆಪಿಯ ಜನವಿರೋಧಿ ನೀತಿ ಮೊದಲು ನಿಮ್ಮ ಪಕ್ಷದ ಕಾರ್ಯಕರ್ತರಿಗೆ ಮನವರಿಕೆಯಾಗಬೇಕಲ್ಲ?