varthabharthi


ಝಲಕ್

ಸ್ವರ್ಗ

ವಾರ್ತಾ ಭಾರತಿ : 4 Jan, 2021
-ಮಗು

ದೇವರ ಸ್ವರ್ಗವನ್ನು ತನ್ನದಾಗಿಸಲು ಮನುಷ್ಯ ಹೋಮ, ಯಾಗ ಮಾಡಿದ. ಧರ್ಮ ಯುದ್ಧಗಳನ್ನು ಗೆದ್ದ. ತೀರ್ಥ ಯಾತ್ರೆ ಗೈದ. ಅಂತಿಮವಾಗಿ ಸತ್ತು ದೇವರ ಮುಂದೆ ನಿಂತ. ಆತನನ್ನು ನೋಡಿದ್ದೇ ದೇವರು ಕೇಳಿದ ‘‘ಹೇಗಿತ್ತು ನನ್ನ ಸ್ವರ್ಗ?’’

   ಮನುಷ್ಯ ಅರ್ಥವಾಗದೆ ದೇವರ ಮುಖವನ್ನೇ ಮಿಕ ಮಿಕ ನೋಡತೊಡಗಿದ. ದೇವರು ಹೇಳಿದ ‘‘ನಾನು ನಿನಗಾಗಿ ಸ್ವರ್ಗವೊಂದನ್ನು ಸೃಷ್ಟಿಸಿ ನಿನ್ನನ್ನು ಬದುಕಲು ಬಿಟ್ಟಿದ್ದೆ. ನಿನ್ನಂತಹ ಹುಲು ಮಾನವನಿಗಾಗಿ ಭೂಮಿಯನ್ನು ಬೆಳಗುವುದಕ್ಕೆ ಬೃಹತ್ ಸೂರ್ಯನನ್ನು ಸೃಷ್ಟಿಸಿದೆ. ಮಿಶ್ರಮಿಸಲು ರಾತ್ರಿಯ ವ್ಯವಸ್ಥೆಯನ್ನೂ ಮಾಡಿದೆ. ರಾತ್ರಿಯ ಕತ್ತಲ ಏಕಾಂತವನ್ನು ಕಳೆಯಲು ಚಂದ್ರನಲ್ಲಿ ಬೆಳದಿಂಗಳನ್ನು ಇಟ್ಟೆ. ಜೊತೆಗೆ ಪ್ರೀತಿಯ ಒಸರನ್ನು ನಿನ್ನೆದೆಯೊಳಗೆ ಬಿತ್ತಿ ತಬ್ಬಿಕೊಳ್ಳಲು ಸಂಗಾತಿಯನ್ನು ಕೊಟ್ಟೆ. ನಿನಗೆ ಕಡಿಮೆಯಾಗಬಾರದು ಎಂದು ಭೂಮಿಯ ಉದ್ದಗಲಕ್ಕೂ ಸಾವಿರಾರು ನದಿಗಳನ್ನು ಹರಿಯ ಬಿಟ್ಟೆ. ಲಕ್ಷಾಂತರ ಗಿಡ ಮರಗಳು ನಿನಗಾಗಿ ಹಣ್ಣುಗಳನ್ನು ಬಿಡುವುದಕ್ಕೆ ಏರ್ಪಾಡು ಮಾಡಿದೆ. ಬಗೆ ಬಗೆಯ ಹಣ್ಣುಗಳನ್ನು ಅವುಗಳ ಮೂಲಕ ಸೃಷ್ಟಿಸಿ, ಅತ್ಯುತ್ತಮವಾದ ಪ್ಯಾಕ್‌ಗಳ ಮೂಲಕ ನಿನಗಾಗಿ ಕಳುಹಿಸಿ ಕೊಟ್ಟೆ. ರುಚಿ, ಪರಿಮಳವನ್ನೂ ಅವುಗಳಿಗೆ ನೀಡಿದೆ. ಒಂದೇ ರುಚಿಯಿಂದಾಗಿ ನೀನು ಸುಸ್ತಾಗಬಾರದು ಎಂದು ಲಕ್ಷಾಂತರ ಬಗೆಯ ಆಹಾರ ಬೆಳೆಗಳನ್ನು ಅಲ್ಲಿ ಬೆಳೆಸಿದೆ. ಲಕ್ಷಾಂತರ ಬಗೆಯ ಪ್ರಾಣಿಗಳು, ಪಕ್ಷಿಗಳು, ಬಣ್ಣ ಬಣ್ಣದ ಚಿಟ್ಟೆಗಳು, ಬಣ್ಣ ಬಣ್ಣದ ಹೂವು ಗಿಡಗಳನ್ನು ಹರಡಿದೆ. ರಾತ್ರಿಯ ಆಕಾಶವನ್ನೂ ಕೂಡ ನಿನಗಾಗಿ ಸುಂದರವಾಗಿಸಿದೆ. ಹಾಲು, ಜೇನು ಬಗೆ ಬಗೆಯ ಸ್ವಾದಗಳನ್ನು ನಿನಗೆ ಒದಗಿಸಿದೆ. ಅಗಾಧ ಕಡಲುಗಳಲ್ಲಿಯೂ ಬಗೆ ಬಗೆಯ ಆಹಾರ ಬಚ್ಚಿಟ್ಟೆ. ಬೆಟ್ಟ, ಪರ್ವತ, ಕಣಿವೆ, ಮರುಭೂಮಿ, ಹಚ್ಚಹಸಿರು ಬಯಲು, ಮಳೆ, ಚಳಿ, ಬೇಸಿಗೆ....ಹೀಗೆ ಬೇಕು ಬೇಕೆನ್ನುವಷ್ಟು ವೈವಿಧ್ಯಗಳನ್ನು ಸೃಷ್ಟಿಸಿದೆ. ಜೊತೆಗೆ ನೀನು ಆನಂದಿಸಲು ಸಂಗೀತ, ನೃತ್ಯ, ಸಾಹಿತ್ಯ...ಎಲ್ಲವನ್ನೂ ಒದಗಿಸಿದೆ. ಅಂತಹ ಸ್ವರ್ಗವನ್ನು ನರಕವಾಗಿ ಪರಿವರ್ತಿಸಿ ಈಗ ನನ್ನ ಮುಂದೆ ಬಂದು ಪೆಕರನಂತೆ ‘ಸ್ವರ್ಗ ಎಲ್ಲಿದೆ?’ ಎಂದು ಕೇಳುತ್ತಿದ್ದೀಯಲ್ಲ ....ನನ್ನ ಸೃಷ್ಟಿಗಳಲ್ಲೇ ಅತಿ ದೊಡ್ಡ ಮೂರ್ಖ ನೀನು....’’

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಝಲಕ್ ಸುದ್ದಿಗಳು