ಅಧಿಕ ರಕ್ತದೊತ್ತಡ ಅಪಾಯಕಾರಿ,ಅದು ನಿಮ್ಮ ಮಿದುಳನ್ನೂ ಬಿಡುವುದಿಲ್ಲ
ಅಧಿಕ ರಕ್ತದೊತ್ತಡವು ನಾವು ನೀವು ತಿಳಿದುಕೊಂಡಿರುವುದಕ್ಕಿಂತ ಹೆಚ್ಚು ಅಪಾಯಕಾರಿಯಾಗಿದೆ. ರಕ್ತದೊತ್ತಡವನ್ನು ನಿಯಂತ್ರಿಸದಿದ್ದರೆ ಅದು ಹೃದಯದ ಮೇಲೆ ಬೀರುವ ಅಡ್ಡ ಪರಿಣಾಮಗಳ ಬಗ್ಗೆ ಹೆಚ್ಚುಕಡಿಮೆ ಎಲ್ಲರಿಗೂ ಗೊತ್ತು. ಆರಂಭದಲ್ಲಿ ಯಾವುದೇ ಲಕ್ಷಣಗಳನ್ನು ಪ್ರಕಟಿಸದೆ ಹೃದಯ ರಕ್ತನಾಳಗಳ ರೋಗಕ್ಕೆ ಗುರಿಯಾಗುವ ಸಾಧ್ಯತೆಯನ್ನು ಗಣನೀಯವಾಗಿ ಹೆಚ್ಚಿಸುವ ಅಧಿಕ ರಕ್ತದೊತ್ತಡವು ‘ಸದ್ದಿಲ್ಲದ ಕೊಲೆಗಾರ’ ಎಂದೇ ಹೆಸರಾಗಿದೆ. ಅದನ್ನು ನಿಯಂತ್ರಿಸದಿದ್ದರೆ ಅದು ಹೃದ್ರೋಗವಲ್ಲದೆ ಇತರ ಹಲವಾರು ರೋಗಗಳಿಗೆ ಗುರಿಯಾಗುವ ಅಪಾಯವನ್ನೂ ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡವು ಮಿದುಳಿನ ಮೇಲೆ ಉಂಟು ಮಾಡುವ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ.
*ಮಿದುಳಿನ ಮೇಲೆ ಅನಿಯಂತ್ರಿತ ಅಧಿಕ ರಕ್ತದೊತ್ತಡದ ಪರಿಣಾಮ
ಅಧಿಕ ರಕ್ತದೊತ್ತಡವು ಮಿದುಳಿಗೆ ನರಶಾಸ್ತ್ರೀಯ ಹಾನಿಯನ್ನುಂಟು ಮಾಡಬಹುದು. ಕಿರು ಆಘಾತ,ಡಿಮೆನ್ಶಿಯಾ,ಗ್ರಹಣ ಶಕ್ತಿ ಕುಂಠಿತ ಇತ್ಯಾದಿಗಳು ಅಧಿಕ ರಕ್ತದೊತ್ತಡದಿಂದ ಮಿದುಳಿನ ಮೇಲೆ ಉಂಟಾಗುವ ಗಂಭೀರ ಪರಿಣಾಮಗಳಾಗಿವೆ.
ಟ್ರಾನ್ಸಿಯಂಟ್ ಇಶೆಮಿಕ್ ಅಟ್ಯಾಕ್ (ಟಿಐಎ)ನ್ನು ಮಿನಿಸ್ಟ್ರೋಕ್ ಅಥವಾ ಕಿರು ಆಘಾತ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯಲ್ಲಿ ಮಿದುಳಿಗೆ ರಕ್ತಪೂರೈಕೆಯಲ್ಲಿ ಸಂಕ್ಷಿಪ್ತ ವ್ಯತ್ಯಯವುಂಟಾಗಿರುತ್ತದೆ. ಅಧಿಕ ರಕ್ತದೊತ್ತಡದಿಂದ ಅಪಧಮನಿಗಳು ಗಡುಸಾಗಿರುವುದು ಅಥವಾ ರಕ್ತ ಹೆಪ್ಪುಗಟ್ಟುವಂತೆ ಮಾಡಿರುವುದು ಇದಕ್ಕೆ ಕಾರಣವಾಗಿರುತ್ತದೆ. ಇದು ಪಾರ್ಶ್ವವಾಯುವಿನ ಎಚ್ಚರಿಕೆಯ ಸಂಕೇತವೂ ಹೌದು.
ಅನಿಯಂತ್ರಿತ ಅಧಿಕ ರಕ್ತದೊತ್ತಡವು ಹಲವಾರು ವಿಧಗಳಲ್ಲಿ ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರಬಹುದು.
ಸ್ಟ್ರೋಕ್ ಅಥವಾ ಪಾರ್ಶ್ವವಾಯು ಗಂಭೀರ ಆರೋಗ್ಯ ಸ್ಥಿತಿಯಾಗಿದ್ದು,ಅಧಿಕ ರಕ್ತದೊತ್ತಡದಿಂದಾಗಿ ಸಂಕುಚಿತ,ಒಡೆದ ಅಥವಾ ಸೋರಿಕೆಯಾಗುತ್ತಿರುವ ಮಿದುಳಿನ ರಕ್ತನಾಳಗಳು ಇದಕ್ಕೆ ಕಾರಣವಾಗುತ್ತವೆ. ಈ ರಕ್ತನಾಳಗಳು ಮಿದುಳಿನ ಜೀವಕೋಶಗಳಿಗೆ ಸಾಕಷ್ಟು ಆಮ್ಲಜನಕ ಮತ್ತು ಪೌಷ್ಟಿಕಾಂಶಗಳನ್ನು ಪೂರೈಸಲು ವಿಫಲಗೊಳ್ಳುತ್ತವೆ ಮತ್ತು ಕೆಲವು ಸಮಯದ ಬಳಿಕ ಈ ಜೀವಕೋಶಗಳು ಸಾಯತೊಡಗುತ್ತವೆ. ಇದು ಪಾರ್ಶ್ವವಾಯುವಿಗೆ ನಾಂದಿ ಹಾಡುತ್ತದೆ. ಹೆಮರೇಜಿಕ್ ಸ್ಟ್ರೋಕ್,ಇಶೆಮಿಕ್ ಸ್ಟ್ರೋಕ್,ಎಂಬಾಲಿಕ್ ಸ್ಟ್ರೋಕ್ ಮತ್ತು ಥ್ರೊಂಬಾಟಿಕ್ ಸ್ಟ್ರೋಕ್ ಸೇರಿದಂತೆ ಪಾರ್ಶ್ವವಾಯುವಿನಲ್ಲಿಯೂ ಹಲವಾರು ವಿಧಗಳಿವೆ.
ಮಿದುಳಿನ ಜೀವಕೋಶಗಳಿಗೆ ಸರಿಯಾಗಿ ರಕ್ತ ಪೂರೈಕೆಯಾಗದಿದ್ದಾಗ ಅದು ‘ವಸ್ಕುಲರ್ ಡಿಮೆನ್ಶಿಯಾ ’ಎಂದು ಕರೆಯಲಾಗುವ ನಿರ್ದಿಷ್ಟ ವಿಧದ ಡಿಮೆನ್ಶಿಯಾ ಅಥವಾ ಬುದ್ಧಿಮಾಂದ್ಯತೆಗೆ ಕಾರಣವಾಗುತ್ತದೆ.
ಸಾಮಾನ್ಯವಾಗಿ ನಮಗೆ ವಯಸ್ಸಾಗುತ್ತ ಹೋದಂತೆ ಗ್ರಹಣ ಶಕ್ತಿಯೂ ಕುಂಠಿತಗೊಳ್ಳುತ್ತದೆ. ಇದು ವಿಷಯಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಮತ್ತು ನೆನಪಿಟ್ಟುಕೊಳ್ಳುವುದರಲ್ಲಿ ಬದಲಾವಣೆಗಳನ್ನುಂಟು ಮಾಡುತ್ತದೆ. ಗ್ರಹಣ ಶಕ್ತಿಯು ವ್ಯತ್ಯಯಗೊಳ್ಳುವುದಕ್ಕೆ ಅಪಾಯದ ಅಂಶಗಳಲ್ಲಿ ಅಧಿಕ ರಕ್ತದೊತ್ತಡವು ಒಂದಾಗಿದೆ.
*ಆರೋಗ್ಯಕರ ರಕ್ತದೊತ್ತಡವನ್ನು ಕಾಯ್ದುಕೊಳ್ಳುವುದು ಹೇಗೆ?*
ನಮ್ಮ ಆಹಾರಕ್ರಮ ಮತ್ತು ಜೀವನಶೈಲಿಯು ರಕ್ತದೊತ್ತಡದ ಮೇಲೆ ಮಹತ್ವದ ಪ್ರಭಾವವನ್ನು ಬೀರುತ್ತವೆ. ನಾರು ಮತ್ತು ಗರಿಷ್ಠ ಮಟ್ಟದಲ್ಲಿ ಪೊಟ್ಯಾಷಿಯಂ ಒಳಗೊಂಡಿರುವ ಆಹಾರವನ್ನು ಸೇವಿಸುವಂತೆ ಸಾಮಾನ್ಯವಾಗಿ ತಜ್ಞರು ಶಿಫಾರಸು ಮಾಡುತ್ತಾರೆ. ಯಾವುದೇ ಬದಲಾವಣೆಗಳಿಲ್ಲದ ಜಡ ಜೀವನಶೈಲಿಯು ಕೂಡ ಅಧಿಕ ರಕ್ತದೊತ್ತಡಕ್ಕೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ. ನಾವು ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಬೇಕು. ಅಧಿಕ ಶರೀರ ತೂಕವನ್ನು ಹೊಂದಿದ್ದರೆ ಅದನ್ನು ಇಳಿಸಿಕೊಳ್ಳುವುದು ರಕ್ತದೊತ್ತಡವನ್ನು ಕ್ರಮಬದ್ಧಗೊಳಿಸಲು ನೆರವಾಗಬಹುದು. ನಿಯಮಿತ ವ್ಯಾಯಾಮವು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ನೆರವಾಗುತ್ತದೆ.
ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ರೋಗಿಯು ಅದರ ಮತ್ತು ಅದರೊಂದಿಗೆ ಗುರುತಿಸಿಕೊಂಡಿರುವ ಇತರ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡಲು ತನ್ನ ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಅತ್ಯಗತ್ಯವಾಗಿದೆ.