ಒಡೆಯುತ್ತಿರುವ ‘ಅಹಿಂದ’ ಮನೆ
ಮೂಲತಃ ದಕ್ಷಿಣ ಕನ್ನಡದವರಾದ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು ನಾಡಿನ ಪ್ರಗತಿಪರ ಚಳವಳಿಯಲ್ಲಿ ಗುರುತಿಸಿಕೊಂಡವರು. ಮುಂಗಾರು ಪತ್ರಿಕೆಯ ಮೂಲಕ ಪತ್ರಕರ್ತ, ಲೇಖಕರಾಗಿ ಬೆಳೆದಅಮೀನ್ ಮಟ್ಟು ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಒಂದಾಗಿರುವ ಪ್ರಜಾವಾಣಿಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರರಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ. ಭಾರತದ ರಾಜಕೀಯ ಬೆಳವಣಿಗೆಗಳ ಕುರಿತಂತೆ ಅನೇಕ ಲೇಖನಗಳನ್ನು ಬರೆದಿದ್ದಾರೆ ಮತ್ತು ಬರೆಯುತ್ತಲೂ ಇದ್ದಾರೆ. ಕೇವಲ ಬರಹಕ್ಕಷ್ಟೇ ಸೀಮಿತವಾಗಿ ಉಳಿಯದ ಅವರು ಪ್ರಗತಿಪರ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಸಾಮಾಜಿಕ ನ್ಯಾಯ-1 ಮುಗಿದು ಸಾಮಾಜಿಕ ನ್ಯಾಯ-2 ಪ್ರಾರಂಭವಾಗಿದೆ ಎಂದು ಅನಿಸುತ್ತಿರುವಾಗಲೇ ಬಿಹಾರದಲ್ಲಿ ಸಾಮಾಜಿಕ ನ್ಯಾಯ-2 ಕೂಡಾ ಮುಗಿದು ಮುಂದೇನು ಎಂಬ ಪ್ರಶ್ನೆಯನ್ನು ನಮ್ಮ ಮುಂದಿಟ್ಟಿದೆ. ಮಂಡಲ್ ವರದಿ ಅನುಷ್ಠಾನದ ನಂತರದ ಮೊದಲ ಹದಿನೈದು ವರ್ಷಗಳ ಅವಧಿಯನ್ನು ಸಾಮಾಜಿಕ ನ್ಯಾಯ-1 ಎನ್ನುವುದಾದರೆ ಇತ್ತೀಚಿನ ಹದಿನೈದು ವರ್ಷಗಳ ಅವಧಿಯನ್ನು ಸಾಮಾಜಿಕ ನ್ಯಾಯ-2 ಎಂದು ಹೇಳಬಹುದು. ಕುತೂಹಲಕಾರಿಯಾದ ಈ ಸಾಮಾಜಿಕ ನ್ಯಾಯದ ರೂಪಾಂತರಗಳ ಜಾಡು ಹಿಡಿದು ಸಾಗಿದರೆ ಭವಿಷ್ಯದ ಅಪಾಯಗಳು ಕಳವಳ ಹುಟ್ಟಿಸುತ್ತವೆ.
ಸಾಮಾಜಿಕ ನ್ಯಾಯ-2 ಬೇರೆ ರಾಜ್ಯಗಳಲ್ಲಿ ಪ್ರಯೋಗದ ರೂಪದಲ್ಲಿ ನಡೆಯುತ್ತಿರುವಾಗಲೇ ಬಿಹಾರದಲ್ಲಿ ಈ ಪ್ರಯೋಗ ನಡೆದು ಫಲಿತಾಂಶವೇ ಬಂದು ಬಿಟ್ಟಿದೆ. ಕಳೆದೆರಡು ಲೋಕಸಭಾ ಚುನಾವಣೆಗಳಲ್ಲಿ ಈ ಪ್ರಯೋಗದ ಪ್ರಭಾವವಿದ್ದರೂ ಅಸ್ಪಷ್ಟವಾಗಿತ್ತು. ಈಗ ಎಲ್ಲವೂ ಸ್ಪಷ್ಟ. ಕಣ್ಣಿದ್ದವರು ಈಗಲೂ ಕಾಣದೆ ಹೋದರೆ ಪಾದದಡಿಯ ನೆಲ ಕುಸಿದು ಹೋಗುವುದನ್ನು ಯಾರೂ ತಡೆಯಲಾರರು. ಈ ಸಾಮಾಜಿಕ ಮತ್ತು ರಾಜಕೀಯ ಬೆಳವಣಿಗೆಗಳನ್ನು ಬಿಹಾರ ಮತ್ತು ಕರ್ನಾಟಕದ ಮೂಲಕ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಬಹುದು.
ಮಂಡಲ ವರದಿಯನ್ನು 1990ರಲ್ಲಿ ಆಗಿನ ಪ್ರಧಾನಿ ವಿ.ಪಿ.ಸಿಂಗ್ ಜಾರಿಗೊಳಿಸಿದಾಗ ಸಿಡಿದೆದ್ದ ಸಾಮಾಜಿಕ ನ್ಯಾಯದ ವಿರೋಧಿಗಳು ಮೊದಲು ಮೈಗೆ ಬೆಂಕಿ ಹಂಚಿಕೊಂಡರು, ನಂತರ ಮಂಡಲದ ಎದುರು ಕಮಂಡಲವನ್ನು ತಂದಿಟ್ಟರು. ನಮ್ಮ ಸಾಮಾಜಿಕ ನ್ಯಾಯದ ಪ್ರತಿಪಾದಕರೆಲ್ಲರೂ ತಮ್ಮ ಹೋರಾಟವನ್ನು ಕಮಂಡಲದ ವಿರುದ್ಧ ಅರ್ಥಾತ್ ಕೋಮುವಾದದ ವಿರುದ್ಧವೇ ಕೇಂದ್ರೀಕರಿಸಿಕೊಂಡು ಬಡಿದಾಡುತ್ತಿರುವಾಗ ವಿರೋಧಿಗಳು ಸದ್ದಿಲ್ಲದೆ ಈ ಸಾಮಾಜಿಕ ನ್ಯಾಯದ ಪ್ರತಿಪಾದಕರ ಮನೆಯೊಳಗೆ ನುಗ್ಗಿ ಮನೆ ಒಡೆದುಹಾಕುತ್ತಿದ್ದಾರೆ.
‘ಸಾಮಾಜಿಕ ನ್ಯಾಯ-1’ರ ಮೂಲಕ ಲಾಲುಪ್ರಸಾದ್ ಮತ್ತು ‘ಸಾಮಾಜಿಕನ್ಯಾಯ-2’ರ ಮೂಲಕ ನಿತೀಶ್ ಕುಮಾರ್ ತಲಾ ಹದಿನೈದು ವರ್ಷ ಆಳಿದ್ದಾರೆ. ಬಿಹಾರ ರಾಜ್ಯವನ್ನು ಹಿಂದುಳಿದ ಜಾತಿಗಳ ಏಕಮೇವ ನಾಯಕನಾಗಿ ಲಾಲುಪ್ರಸಾದ್ ಆಳಿದ್ದು, ಯಾದವ್- ಮುಸ್ಲಿಮರನ್ನೊಳಗೊಂಡ ‘ಎಂ-ವೈ’ ಎಂಬ ಯಶಸ್ವಿ ಸೂತ್ರದ ಮೂಲಕ. ಇದರ ಜೊತೆ ದಲಿತನಾಯಕ ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಸೇರಿಸಿಕೊಂಡು ತಮ್ಮ ಕೂಟಕ್ಕೆ ‘ಅಹಿಂದ’ದ ರೂಪ ಕೊಟ್ಟಿದ್ದರು.
ಸಾಮಾಜಿಕ ನ್ಯಾಯ-2 ಬೇರೆ ರಾಜ್ಯಗಳಲ್ಲಿ ಪ್ರಯೋಗದ ರೂಪದಲ್ಲಿ ನಡೆಯುತ್ತಿರುವಾಗಲೇ ಬಿಹಾರದಲ್ಲಿ ಈ ಪ್ರಯೋಗ ನಡೆದು ಫಲಿತಾಂಶವೇ ಬಂದು ಬಿಟ್ಟಿದೆ. ಕಳೆದೆರಡು ಲೋಕಸಭಾ ಚುನಾವಣೆಗಳಲ್ಲಿ ಈ ಪ್ರಯೋಗದ ಪ್ರಭಾವವಿದ್ದರೂ ಅಸ್ಪಷ್ಟವಾಗಿತ್ತು. ಈಗ ಎಲ್ಲವೂ ಸ್ಪಷ್ಟ. ಕಣ್ಣಿದ್ದವರು ಈಗಲೂ ಕಾಣದೆ ಹೋದರೆ ಪಾದದಡಿಯ ನೆಲ ಕುಸಿದು ಹೋಗುವುದನ್ನು ಯಾರೂ ತಡೆಯಲಾರರು. ಈ ಸಾಮಾಜಿಕ ಮತ್ತು ರಾಜಕೀಯ ಬೆಳವಣಿಗೆಗಳನ್ನು ಬಿಹಾರ ಮತ್ತು ಕರ್ನಾಟಕದ ಮೂಲಕ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಬಹುದು.
ಲಾಲು ಬಿಹಾರದ ರಾಜಕೀಯ ರಂಗಮಂಚ ಪ್ರವೇಶ ಮಾಡುವ ವರೆಗೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಯಾರೇ ಇರಲಿ, ಅಧಿಕಾರ ಮಾತ್ರ ‘ಭೂ-ರ-ಬಾ-ಲ್’ (ಭೂಮಿಹಾರ್-ರಜಪೂತ್, ಬ್ರಾಹ್ಮಣ-ಲಾಲ್) ಕೈಯಲ್ಲಿಯೇ ಇತ್ತು. ಲಾಲು ಪ್ರಾರಂಭದ ದಿನಗಳ ರಾಜಕೀಯದ ಘೋಷಣೆಯೇ ‘ಭೂರಾ-ಬಾಲ್ ಸಾಪ್ ಕರೋ’ ಎಂದಾಗಿತ್ತು. ಲಾಲು ಅಧಿಕಾರದ ಎರಡನೇ ಅವಧಿಯಲ್ಲಿಯೇ ನಿತೀಶ್ ಕುಮಾರ್ ಬೇರೆಯಾದರು. 1996ರಲ್ಲಿ ಬಿಜೆಪಿ ಜೊತೆ ಸೇರಿಕೊಂಡ ನಿತೀಶ್ ಕುಮಾರ್ ‘ಸಾಮಾಜಿಕ ನ್ಯಾಯ-2’ ಆಪರೇಷನ್‌ಗೆ ತಯಾರಿ ಪ್ರಾರಂಭಿಸಿದ್ದರು.
ಏಕಾಏಕಿ ಲಾಲು ಅವರನ್ನು ಮುಟ್ಟಲು ಹಿಂಜರಿದ ನಿತೀಶ್, ಮೊದಲು ಕೈಹಾಕಿದ್ದು ಪಾಸ್ವಾನ್ ಮತಬುಟ್ಟಿಗೆ. ಬಿಹಾರದ ಒಟ್ಟು ಜನಸಂಖ್ಯೆಯಲ್ಲಿ ಶೇ.16ರಷ್ಟಿರುವ ಪರಿಶಿಷ್ಟ ಜಾತಿ ಗುಂಪಲ್ಲಿ ಪಾಸ್ವಾನ್/ದುಸಾದ್, ರವಿದಾಸ್ (ಚಮ್ಮಾರ್), ಫಾಸಿ (ಶೇಂದಿ ತೆಗೆಯುವವರು) ಮತ್ತು ದೋಬಿ (ಮಡಿವಾಳರು) ಜಾತಿಗಳ ಶೇ.75ರಷ್ಟಿದ್ದರೆ ಶೇ.25ರಷ್ಟು ಬೇರೆ ದಲಿತ ಜಾತಿಗಳಿವೆ. 2005ರಲ್ಲಿ ಮುಖ್ಯಮಂತ್ರಿಯಾದ ನಿತೀಶ್ ಮೊದಲು ಮಾಡಿದ ಕೆಲಸ ಹಿಂದುಳಿದ ದಲಿತರನ್ನು ಗುರುತಿಸಲು ‘ಮಹಾದಲಿತ’ ಆಯೋಗ ನೇಮಿಸಿ, ಅದರ ಶಿಫಾರಸಿನ ಮೇಲೆ ‘ಮಹಾದಲಿತ್’ ಎಂಬ ಗುಂಪು ರಚಿಸಿ ಅವರ ಅಭಿವೃದ್ಧಿಗಾಗಿ ಮಹಾದಲಿತ್ ವಿಕಾಸ್ ಮಿಷನ್ ರಚಿಸಿದ್ದು. ಮೊದಲು ರವಿದಾಸ್, ಫಾಸಿ ಮತ್ತು ದೋಬಿಯವರನ್ನು ‘ಮಹಾದಲಿತ್’ ಗುಂಪಿಗೆ ಸೇರಿಸಿದ ನಿತೀಶ್, ಎರಡು ವರ್ಷಗಳ ಹಿಂದೆ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 6ರರಷ್ಟಿರುವ ದುಸಾದ್ ಜಾತಿ ಕೂಡಾ ಮಹಾದಲಿತ್ ಎಂದು ಘೋಷಿಸಿಬಿಟ್ಟರು. ಈಗ ಬಿಹಾರದಲ್ಲಿರುವ ದಲಿತರೆಲ್ಲರೂ ‘ಮಹಾದಲಿತರು’. ಅಲ್ಲಿಗೆ ದಲಿತ ಸಮುದಾಯಕ್ಕೆ ಸೇರಿದ ಸಾಮಾಜಿಕ ನ್ಯಾಯ-2 ಸಮಾಪ್ತಿಯಾಗಿದೆ.
ನಿತೀಶ್ ಕುಮಾರ್ ತನ್ನ ರಾಜಕೀಯ ನೆಲೆ ಭದ್ರಗೊಳಿಸಲು ಹೆಣೆದ ಇನ್ನೊಂದು ಜಾತಿ ಸೂತ್ರ- ಅತಿಹಿಂದುಳಿದ ಜಾತಿ (EBC )ಯದ್ದು. ಬಿಹಾರದ ಒಟ್ಟು ಜನಸಂಖ್ಯೆಯಲ್ಲಿ ಶೇ.52ರಷ್ಟಿರುವ 135 ಹಿಂದುಳಿದ ಜಾತಿಗಳಲ್ಲಿ ಯಾದವ್ (ಶೇ. 14), ಕುರ್ಮಿ (ಶೇ. 4), ಕುಶಾಹ/ ಕೊಯಿರಿ (ಶೇ. 8) ಜಾತಿಗಳೇ ಒಟ್ಟಾಗಿ ಶೇ.26ರಷ್ಟಿದ್ದಾರೆ. ಉಳಿದೆಲ್ಲ ಜಾತಿಗಳಾದ ಲೋಹರ್ ತೇಲಿ, ಮಲ್ಹಾ, ನಿಷಾದ್, ನಾಇ ಸೇರಿ ಶೇ. 26ರಷ್ಟಿದ್ದಾರೆ. ಯಾದವ್, ಕುರ್ಮಿ,ಕೊಯಿರಿ/ಕುಶಾಹಗಳನ್ನು ಹೊರತುಪಡಿಸಿ ಉಳಿದೆಲ್ಲ ಹಿಂದುಳಿದ ಜಾತಿಗಳನ್ನು ಸೇರಿಸಿ 2007ರಲ್ಲಿ ಅತಿ ಹಿಂದುಳಿದ ಜಾತಿಗಳ ಹೊಸ ಪಟ್ಟಿ ತಯಾರಿಸಿದರು.
ಶಿಕ್ಷಣ ಮತ್ತು ಉದ್ಯೋಗದಲ್ಲಿ ಪ್ರತ್ಯೇಕ ಮೀಸಲಾತಿ ಒದಗಿಸದೆ ಇರುವುದರಿಂದ ಇಬಿಸಿ ಮತ್ತು ದಲಿತ ಜಾತಿಗಳಿಗೆ ಈ ವರ್ಗೀಕರಣದಿಂದ ವಿಶೇಷ ಲಾಭವಾಗದೆ ಇದ್ದರೂ ದೊಡ್ಡ ಜಾತಿಗಳ ಗುಂಪಿನಲ್ಲಿ ಕಳೆದುಹೋಗಿದ್ದ ಸಣ್ಣ ಜಾತಿಗಳಿಗೆ ಪ್ರತ್ಯೇಕ ಗುರುತು ಸಿಕ್ಕಿತ್ತು. ಇದರ ಜೊತೆಗೆ ಈ ಜಾತಿಗಳ ನಾಯಕರಲ್ಲಿ ರಾಜಕೀಯ ಮಹತ್ವಾಕಾಂಕ್ಷೆ ಕೂಡಾ ಹುಟ್ಟಿಕೊಂಡಿದೆ. ಈ ಚುನಾವಣೆಯಲ್ಲಿ ನಿತೀಶ್ ಅವರಿಗೆ ಮಗ್ಗುಲ ಮುಳ್ಳಾಗಿ ಪರಿಣಮಿಸಿದ್ದೇ ಈ ಅತಿ ಹಿಂದುಳಿದ ಜಾತಿಗಳ ನಾಯಕರ ರಾಜಕೀಯ ಮಹತ್ವಾಕಾಂಕ್ಷೆ.
ಒಂದೆಡೆ ಹಿಂದುಳಿದ ಕೊಯಿರಿ ಜಾತಿಗೆ ಸೇರಿರುವ ಮಾಜಿ ಮುಖ್ಯಮಂತ್ರಿ ಜಿತೇನ್ ಮಾಂಜಿ, ‘ಹಿಂದುಸ್ಥಾನಿ ಅವಾಮಿ ಮೋರ್ಚಾ’ ಎಂಬ ರಾಜಕೀಯ ಪಕ್ಷ ಕಟ್ಟಿ ಚುನಾವಣಾ ಕಣಕ್ಕಿಳಿದರು. ಇನ್ನೊಂದೆಡೆ ಅತಿ ಹಿಂದುಳಿದ ಜಾತಿ ಗುಂಪಿನಲ್ಲಿದ್ದ ನಿಷಾದ್ ಸಮುದಾಯದ ನಾಯಕ ಮುಖೇಶ್ ಸಾಹ್ನಿ, ‘ವಿಕಾಸ್ ಶೀಲ ಇನ್ ಸಾನ್ ಪಕ್ಷ’ ಕಟ್ಟಿ ಸ್ಪರ್ಧಿಸಿದ್ದರು. ಇವರಿಬ್ಬರ ಜೊತೆ ಚಿರಾಗ್ ಪಾಸ್ವಾನ್ ತಮ್ಮದೇ ಮೈತ್ರಿಕೂಟದಲ್ಲಿರುವ ಜೆಡಿ(ಯು) ವಿರುದ್ಧ ಸ್ಪರ್ಧಿಸಿದ್ದರು. ಈ ನಡುವೆ ಎಐಎಂಐಎಂ ಝಂಡಾ ಹಿಡಿದು ಅಸದುದ್ದೀನ್ ಉವೈಸಿ ಪ್ರವೇಶವಾಗಿದೆ. ಲಾಲು ಮತ್ತು ಕಾಂಗ್ರೆಸ್ ಪಕ್ಷದ ನಾಯಕರ ಮುಸ್ಲಿಮ್ ಓಲೈಕೆಗೆ ಅತಿರಂಜಿತ ಪ್ರಚಾರ ನೀಡಿ ಪ್ರಚೋದಿಸಿ ಪರೋಕ್ಷವಾಗಿ ಎಐಎಂಐಎಂ ಪಕ್ಷವನ್ನು ಬೆಂಬಲಿಸಿದ ಬಿಜೆಪಿ, ಸೆಕ್ಯುಲರ್ ಪಕ್ಷಗಳ ಮತಬುಟ್ಟಿಗೆ ಬೀಳುತ್ತಿದ್ದ ಮುಸ್ಲಿಮರ ಮತಗಳಿಗೆ ಕತ್ತರಿ ಹಾಕಿತು. ಅಲ್ಲಿಗೆ ಸಾಮಾಜಿಕ ನ್ಯಾಯ-1 ಮತ್ತು 2 ಸಮಾಧಿಯಾಗಿದೆ.
EBC ಈ ಎಲ್ಲ ಬೆಳವಣಿಗೆಗಳಲ್ಲಿ ಬಿಹಾರದಲ್ಲಿ ಬೇರು ಬಿಡುತ್ತಿರುವುದು ಭಾರತೀಯ ಜನತಾ ಪಕ್ಷ. ಲಾಲು ಅವರನ್ನು ನಿತೀಶ್ ಮೂಲಕ ಒಡೆದು ಹಾಕಿದ ಬಿಜೆಪಿ, ಈಗ ನಿತೀಶ್ ಅವರನ್ನು ಮತ್ತು ದಲಿತ ನಾಯಕರ ಮೂಲಕ ಮಣಿಸಿದೆ, ಜೊತೆಗೆ ಬಹಳ ಜಾಣ್ಮೆಯಿಂದ ಮುಸ್ಲಿಮರನ್ನು ಪ್ರತ್ಯೇಕ ಮಾಡಿದೆ. ಬಿಹಾರದ ಈ ರಾಜಕೀಯ ಮತ್ತು ಸಾಮಾಜಿಕ ಬೆಳವಣಿಗೆಯಲ್ಲಿ ಭವಿಷ್ಯದ ಕರ್ನಾಟಕ ಕಾಣತೊಡಗಿದೆ.
ಏಕಾಏಕಿ ಲಾಲು ಅವರನ್ನು ಮುಟ್ಟಲು ಹಿಂಜರಿದ ನಿತೀಶ್, ಮೊದಲು ಕೈಹಾಕಿದ್ದು ಪಾಸ್ವಾನ್ ಮತಬುಟ್ಟಿಗೆ. ಬಿಹಾರದ ಒಟ್ಟು ಜನಸಂಖ್ಯೆಯಲ್ಲಿ ಶೇ.16ರಷ್ಟಿರುವ ಪರಿಶಿಷ್ಟ ಜಾತಿ ಗುಂಪಲ್ಲಿ ಪಾಸ್ವಾನ್/ದುಸಾದ್, ರವಿದಾಸ್ (ಚಮ್ಮಾರ್), ಫಾಸಿ (ಶೇಂದಿ ತೆಗೆಯುವವರು) ಮತ್ತು ದೋಬಿ (ಮಡಿವಾಳರು) ಜಾತಿಗಳ ಶೇ.75ರಷ್ಟಿದ್ದರೆ ಶೇ.25ರಷ್ಟು ಬೇರೆ ದಲಿತ ಜಾತಿಗಳಿವೆ. 2005ರಲ್ಲಿ ಮುಖ್ಯಮಂತ್ರಿಯಾದ ನಿತೀಶ್ ಮೊದಲು ಮಾಡಿದ ಕೆಲಸ ಹಿಂದುಳಿದ ದಲಿತರನ್ನು ಗುರುತಿಸಲು ‘ಮಹಾದಲಿತ’ ಆಯೋಗ ನೇಮಿಸಿ, ಅದರ ಶಿಫಾರಸಿನ ಮೇಲೆ ‘ಮಹಾದಲಿತ್’ ಎಂಬ ಗುಂಪು ರಚಿಸಿ ಅವರ ಅಭಿವೃದ್ಧಿಗಾಗಿ ಮಹಾದಲಿತ್ ವಿಕಾಸ್ ಮಿಷನ್ ರಚಿಸಿದ್ದು. ಮೊದಲು ರವಿದಾಸ್, ಫಾಸಿ ಮತ್ತು ದೋಬಿಯವರನ್ನು ‘ಮಹಾದಲಿತ್’ ಗುಂಪಿಗೆ ಸೇರಿಸಿದ ನಿತೀಶ್, ಎರಡು ವರ್ಷಗಳ ಹಿಂದೆ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 6ರರಷ್ಟಿರುವ ದುಸಾದ್ ಜಾತಿ ಕೂಡಾ ಮಹಾದಲಿತ್ ಎಂದು ಘೋಷಿಸಿಬಿಟ್ಟರು. ಈಗ ಬಿಹಾರದಲ್ಲಿರುವ ದಲಿತರೆಲ್ಲರೂ ‘ಮಹಾದಲಿತರು’. ಅಲ್ಲಿಗೆ ದಲಿತ ಸಮುದಾಯಕ್ಕೆ ಸೇರಿದ ಸಾಮಾಜಿಕ ನ್ಯಾಯ-2 ಸಮಾಪ್ತಿಯಾಗಿದೆ.
ಸಾಮಾಜಿಕ ನ್ಯಾಯ-2 ಕರ್ನಾಟಕದಲ್ಲಿ ಪ್ರಾರಂಭವಾಗಿರುವುದು ಸುಮಾರು ಹದಿನೈದು ವರ್ಷಗಳ ಹಿಂದೆ. ನಾನು ದಿಲ್ಲಿಯಲ್ಲಿದ್ದಾಗ ಒಮ್ಮೆ ಲೋಕಸಭಾ ಸದಸ್ಯ ಬಸವನಗೌಡ ಪಾಟೀಲ್ ಯತ್ನಾಳ್ ಬಂಗಲೆಗೆ ಹೋಗಿದ್ದೆ. ಅಲ್ಲಿನ ಒಂದು ಕೋಣೆಯನ್ನು ಆಗಿನ ಪ್ರಧಾನಿ ವಾಜಪೇಯಿ ಅವರ ಸಲಹೆಗಾರರೊಬ್ಬರು ತನ್ನ ಸಣ್ಣ ಕಚೇರಿ ಮಾಡಿಕೊಂಡಿದ್ದರು. ಆ ಕಚೇರಿಯಲ್ಲಿ ಕರ್ನಾಟಕದ ಜಾತಿಗಳ ಮುಖ್ಯವಾಗಿ ಪರಿಶಿಷ್ಟ ಜಾತಿಯ ಒಳಪಂಗಡಗಳ ಬಗ್ಗೆ ಅಧ್ಯಯನ ನಡೆಯುತ್ತಿತ್ತು (ಹೊಲೆಯರು, ಮಾದಿಗರು, ಬೋವಿ, ಲಂಬಾಣಿಗಳ ಸಂಖ್ಯೆ, ರಾಜಕೀಯ ಪ್ರಾತಿನಿಧ್ಯ, ಕ್ಷೇತ್ರವಾರು ಸಾಂಧ್ರತೆ ಇತ್ಯಾದಿ). ಆ ಅಧ್ಯಯನದ ಫಲ 2008ರ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಕಂಡಿತ್ತು.
2008ರ ವಿಧಾನಸಭಾ ಚುನಾವಣೆಯಲ್ಲಿ ಅತ್ಯಧಿಕ ಮೀಸಲು ಕ್ಷೇತ್ರಗಳನ್ನು ಗೆದ್ದಿದ್ದು ಭಾರತೀಯ ಜನತಾ ಪಕ್ಷ, ಕಾಂಗ್ರೆಸ್ ಅಲ್ಲ. ಆಗಲೇ ಮಾದಿಗ ಸಮುದಾಯದ ಗೋವಿಂದ ಕಾರಜೋಳ ಬಿಜೆಪಿಯಲ್ಲಿದ್ದರು, ನಂತರದ ದಿನಗಳಲ್ಲಿ ರಮೇಶ್ ಜಿಗಜಿಣಗಿ ಕೂಡಾ ಸೇರ್ಪಡೆಗೊಂಡರು ಮತ್ತು ಕೆ.ಬಿ.ಶಾಣಪ್ಪ ವಿಧಾನಪರಿಷತ್ ಸದಸ್ಯರಾದರು. ಕಾಂಗ್ರೆಸ್ ಪಕ್ಷದೊಳಗಿನ ಹೊಲೆಯರ ಪ್ರಾಬಲ್ಯದಿಂದ ನಿರ್ಲಕ್ಷಕ್ಕೀಡಾಗಿದ್ದೇವೆ ಎಂಬ ಭಾವನೆಯಲ್ಲಿದ್ದ ಮಾದಿಗರ ಅಸಮಾಧಾನವನ್ನು ಬಿಜೆಪಿ ಯಶಸ್ವಿಯಾಗಿ ರಾಜಕೀಯವಾಗಿ ಬಳಸಿಕೊಳ್ಳುತ್ತಾ ಬಂದಿದೆ. ಮಾದಿಗರೊಳಗಿನ ಅಸಮಾಧಾನಕ್ಕೆ ಕಿಚ್ಚು ಹಚ್ಚಿದ್ದು ಎ.ಜೆ. ಸದಾಶಿವ ಆಯೋಗದ ವರದಿ. ಮಾದಿಗರ ಒಳಮೀಸಲಾತಿಯ ಬೇಡಿಕೆಯನ್ನು ಕಾಂಗ್ರೆಸ್ ಪಕ್ಷ ಅರ್ಥಮಾಡಿಕೊಳ್ಳಲಿಲ್ಲ, ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರು ಕೂಡಾ ಒಳಗಿನ ಒತ್ತಡಕ್ಕೆ ಮಣಿದು ಸುಮ್ಮನಾದರು.
2008ರ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆ ಗುಂಪಿನೊಳಗಿನ ಸ್ಪಶ್ಯರಲ್ಲದ ಬೋವಿ ಮತ್ತು ಲಮಾಣಿ ಅಭ್ಯರ್ಥಿಗಳಿಗೆ ಟಿಕೆಟ್ ಗೆಲ್ಲಿಸಿತ್ತು. ಇದು ಒಂದೆಡೆ ಬಿಜೆಪಿಗೆ ರಾಜಕೀಯ ಲಾಭ ತಂದು ಕೊಟ್ಟರೆ, ಇನ್ನೊಂದೆಡೆ ಪರಿಶಿಷ್ಟ ಜಾತಿಯೊಳಗೆ ಸ್ಪಶ್ಯ-ಅಸ್ಪಶ್ಯ ವಿವಾದವನ್ನು ಹುಟ್ಟು ಹಾಕಿತು. ಇದು ಇತ್ತೀಚಿನ ದಿನಗಳಲ್ಲಿ ತಾರಕಕ್ಕೇರಿದೆ. ಈ ನಡುವೆ ಹಲವು ವರ್ಷಗಳ ಹೋರಾಟದಿಂದ ಪರಿಶಿಷ್ಟ ಪಂಗಡಕ್ಕೆ ಸೇರಿಕೊಂಡ ವಾಲ್ಮೀಕಿ ಸಮುದಾಯ ಮೀಸಲಾತಿ ಪ್ರಮಾಣವನ್ನು ಶೇ.3ರಿಂದ 7.5ಕ್ಕೆ ಹೆಚಿ್ಚಸಬೇಕೆಂಬ ಹೋರಾಟ ನಡೆಸುತ್ತಿದೆ.
ಇನ್ನು ಬುಟ್ಟಿಯೊಳಗಿನ ಏಡಿಗಳಂತಿರುವ ಹಿಂದುಳಿದ ಜಾತಿಗಳ ಗುಂಪನ್ನು ಒಡೆಯುವುದು ಬಹಳ ಸುಲಭ. ಈ ಹಿಂದುಳಿದ ಜಾತಿಗಳೆಲ್ಲವೂ ಮೀಸಲಾತಿಗಾಗಿ ಒಂದು ಗುಂಪಿನಲ್ಲಿದ್ದರೂ ಇವರ ನಡುವೆ ಎಲ್ಲರನ್ನೂ ಒಂದಾಗಿ ಬೆಸೆಯುವ ಸಾಮಾಜಿಕ ಮತ್ತು ವೃತ್ತಿ ಸಂಬಂಧಗಳಿಲ್ಲ, ಆರ್ಥಿಕ ತಾರತಮ್ಯಗಳಿವೆ. ಮಂಡಲ ಆಯೋಗದ ಸದಸ್ಯರಾಗಿದ್ದ ಕರ್ನಾಟಕದ ಎಲ್.ಆರ್.ನಾಯಕ್ ಅವರು ಈ ಅಂಶವನ್ನು ಗುರುತಿಸಿ ಹಿಂದುಳಿದ-ಅತಿಹಿಂದುಳಿದ ಎಂಬ ಎರಡು ಗುಂಪುಗಳನ್ನಾಗಿ ಮಾಡಿ ಒಳ ಮೀಸಲಾತಿಯನ್ನು ನಿಗದಿಪಡಿಸದೆ ಇದ್ದರೆ ಸಾಮಾಜಿಕ ನ್ಯಾಯದ ಉದ್ದೇಶವನ್ನು ಸಾಧಿಸಲಾಗದು ಎಂದು ಎಚ್ಚರಿಸಿದ್ದರು. ಮಂಡಲ ಆಯೋಗದ ವರದಿಯಲ್ಲಿ ಏಕೈಕ ಭಿನ್ನಮತ ಇದೇ ಎಲ್.ಆರ್.ನಾಯಕ್ ಅವರದ್ದು. ಭೂ ಹಿಡುವಳಿ ಹೊಂದಿರುವ ಮತ್ತು ಭೂರಹಿತ ಹಿಂದುಳಿದ ಜಾತಿಗಳನ್ನು ಪ್ರತ್ಯೇಕ ಗುಂಪುಗಳಾಗಿ ಮಾಡಬೇಕೆಂಬುದು ಅವರ ಅಭಿಪ್ರಾಯವಾಗಿತ್ತು. ಕರ್ಪೂರಿ ಠಾಕೂರ್ ಅವರು ಬಿಹಾರದ ಮುಖ್ಯಮಂತ್ರಿಯಾಗಿದ್ದಾಗ ಮೊದಲ ಬಾರಿ ಈ ವಿಂಗಡಣೆಯನ್ನು ಮಾಡಿದ್ದರು. ಇದರ ಚುಂಗು ಹಿಡಿದು ನಿತೀಶ್ ಕುಮಾರ್ ಬಿಹಾರದಲ್ಲಿ ಸಾಮಾಜಿಕ ನ್ಯಾಯ-2 ಪ್ರಯೋಗ ಪ್ರಾರಂಭಿಸಿದ್ದು.
ಬಿಹಾರದ ಯಾದವರಂತೆ ಇಲ್ಲಿನ ಕುರುಬರು ಹಿಂದುಳಿದ ಜಾತಿಗಳ ಗುಂಪಲ್ಲಿ ಸಂಖ್ಯೆಯಲ್ಲಿ ಹೆಚ್ಚಿರುವ ಮತ್ತು ಇತರ ಹಿಂದುಳಿದ ಜಾತಿಗಳಿಗೆ ಹೋಲಿಸಿದರೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಲಾಢ್ಯವಾಗಿರುವ ಜಾತಿ. ಒಂದುಕಾಲದ ಬಿಹಾರದ ಲಾಲುಪ್ರಸಾದ್ ಯಾದವ್ ಅವರಂತೆ ಇಲ್ಲಿ ಸಿದ್ದರಾಮಯ್ಯಅವರು ಹಿಂದುಳಿದ ಜಾತಿಗಳ ಏಕೈಕ ನಾಯಕ. ಆದರೆ ಬಿಹಾರದ ಪ್ರಯೋಗವನ್ನು ಕರ್ನಾಟಕದಲ್ಲಿ ನಡೆಸಿ ಸಿದ್ದರಾಮಯ್ಯ ಅವರನ್ನು ಮಣಿಸಲು ಬಿಜೆಪಿ ಚಿಂತಕರ ಚಾವಡಿಗೆ ಇಲ್ಲಿಯ ವರೆಗೆ ಸಾಧ್ಯವಾಗದಿರುವುದಕ್ಕೆ ಎರಡು ಅಡ್ಡಿಗಳು ಎದುರಾಗಿತ್ತು.
ಮೊದಲನೆಯದಾಗಿ ಕರ್ನಾಟಕದಲ್ಲಿ ‘ನಿತೀಶ್ ಕುಮಾರ್’ ಅವರಂತಹ ಹಿಂದುಳಿದ ಜಾತಿಗಳ ನಾಯಕರೊಬ್ಬರನ್ನು ತಯಾರು ಮಾಡಲು ಬಿಜೆಪಿಗೆ ಸಾಧ್ಯವಾಗಿಲ್ಲ. ಈ ಕಾರ್ಯತಂತ್ರದ ಭಾಗವಾಗಿಯೇ ಬಿಜೆಪಿ ಎಸ್.ಬಂಗಾರಪ್ಪಅವರನ್ನು ಸೆಳೆದುಕೊಂಡದ್ದು. ಆ ಪ್ರಯತ್ನಕ್ಕೆ ನಿರೀಕ್ಷಿತ ಯಶಸ್ಸು ಸಿಕ್ಕಿರಲಿಲ್ಲ, ನಿತೀಶ್ ಅವರಂತೆ ಕುಟಿಲ ರಾಜಕಾರಣದಲ್ಲಿ ನಂಬಿಕೆ ಇಲ್ಲದ, ನೇರನಡೆ-ನುಡಿಯ, ದುರಹಂಕಾರಿ ಎಂದೆನಿಸುವಷ್ಟು ಸ್ವಾಭಿಮಾನಿಯಾಗಿರುವ ಬಂಗಾರಪ್ಪಅವರನ್ನು ತಮ್ಮ ಅಜೆಂಡಾಕ್ಕೆ ತಕ್ಕಂತೆ ಪಳಗಿಸಲು ಬಿಜೆಪಿಗೆ ಸಾಧ್ಯವಾಗಲಿಲ್ಲ. ಕೊನೆಗೆ ಬಂಗಾರಪ್ಪಅವರೇ ಹೊರಗೆ ಬಂದು ಬಿಟ್ಟರು. ಆದರೆ ಬಂಗಾರಪ್ಪಅವರ ಪಕ್ಷಾಂತರದಿಂದಾಗಿ ಕಾಂಗ್ರೆಸ್ ಪಕ್ಷದ ಹಿಂದುಳಿದ ಜಾತಿಗಳ ಮತಬ್ಯಾಂಕ್‌ನಿಂದ ಮುಖ್ಯವಾಗಿ ಈಡಿಗ/ಬಿಲ್ಲವ ಮತಗಳು ಸೋರಿಹೋಗಿರುವುದು ನಿಜ. ಅಷ್ಟು ಬಿಜೆಪಿಗೆ ಲಾಭವಾಯಿತು.
ಎರಡನೆಯದಾಗಿ, ಬಿಹಾರದಲ್ಲಿ ಲಾಲುಪ್ರಸಾದ್ ಅವರನ್ನು ಮಣಿಸಿದಂತೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿಗೆ ಸಾಧ್ಯವಾಗಿಲ್ಲ. ಕಾಂಗ್ರೆಸ್ ಮತ್ತು ಕಮ್ಯುನಿಸ್ಟರನ್ನು ಹೊರತುಪಡಿಸಿದರೆ ಬಿಜೆಪಿ ಜೊತೆ ಎಂದೂ ರಾಜಿ ಮಾಡಿಕೊಳ್ಳದೆ ಪ್ರತ್ಯಕ್ಷ ಇಲ್ಲವೇ ಪರೋಕ್ಷ ಮೈತ್ರಿ ಮಾಡಿಕೊಳ್ಳದ ಏಕೈಕ ನಾಯಕ ಲಾಲುಪ್ರಸಾದ್. ಬಿಜೆಪಿಯ ರಾಜಕೀಯ ಷಡ್ಯಂತ್ರ ಮತ್ತು ಪ್ರತೀಕಾರಕ್ಕೆ ಬಲಿಯಾಗಿ ಜೈಲಿನಲ್ಲಿದ್ದರೂ ಅವರು ತಮ್ಮ ಜಾತ್ಯತೀತ ನಿಲುವಿನಲ್ಲಿ ರಾಜಿ ಮಾಡಿಕೊಂಡಿಲ್ಲ. ಆದರೆ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಲಾಲು ಅವರ ಅಸೂಕ್ಷ್ಮತೆಯ ದೌರ್ಬಲ್ಯವನ್ನು ಬಳಸಿಕೊಂಡ ಬಿಜೆಪಿ ಅವರನ್ನು ಬಲೆಯಲ್ಲಿ ಕೆಡವಿ ಜೈಲಿಗೆ ತಳ್ಳಿದೆ. ಇದು ಬಿಜೆಪಿಯ ಸಾಮ, ದಾನ, ಭೇದ, ದಂಡದ ಸಾಮಾನ್ಯ ತಂತ್ರ.
ಸಿದ್ದರಾಮಯ್ಯ ಅವರು ಹಣಕಾಸು ವಿಷಯದಲ್ಲಿ ತಜ್ಞರು ಮಾತ್ರ ಅಲ್ಲ ಹಣಕಾಸಿನ ಬಗ್ಗೆ ಸೂಕ್ಷ್ಮತೆ ಉಳ್ಳವರು. ಈ ಕಾರಣದಿಂದಾಗಿ ನಾಲ್ಕು ದಶಕಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಸಚಿವರಾಗಿ, ಉಪಮುಖ್ಯಮಂತ್ರಿಯಾಗಿ ಕೊನೆಗೆ ಮುಖ್ಯಮಂತ್ರಿ ಸ್ಥಾನಕ್ಕೇರಿದರೂ ಅವರ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪವನ್ನು ಮಾಡಲು ವಿರೋಧಪಕ್ಷಗಳಿಗೆ ಇಲ್ಲಿಯವರೆಗೆ ಸಾಧ್ಯವಾಗಲಿಲ್ಲ. ಈ ಎರಡು ಕಾರಣಗಳಿಂದಾಗಿ ಬಿಹಾರ ಪ್ರಯೋಗದ ಯಶಸ್ಸನ್ನು ಕರ್ನಾಟಕದಲ್ಲಿ ಪೂರ್ಣಪ್ರಮಾಣದಲ್ಲಿ ಕಾಣಲು ಬಿಜೆಪಿ ಚಿಂತಕರ ಚಾವಡಿಗೆ ಇಲ್ಲಿಯವರೆಗೆ ಸಾಧ್ಯವಾಗಿಲ್ಲ.
ನೇರವಾಗಿ ಕೆಡವಲಾಗದೆ ಇದ್ದಾಗ ಕೊಂಬೆ-ರೆಂಬೆಗಳನ್ನು ಕಡಿಯಬೇಕೆಂಬ ತಂತ್ರವನ್ನು ಬಿಜೆಪಿ ಈಗ ಮಾಡುತ್ತಿದೆ. ಈ ತಂತ್ರದ ಭಾಗವಾಗಿಯೇ ಹುಟ್ಟಿಕೊಂಡಿರುವುದು ಕುರುಬ ಸಮಾಜ ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಹೋರಾಟ. ಇದು ನೈಸರ್ಗಿಕವಾಗಿ ಹುಟ್ಟಿಕೊಂಡ ಹೋರಾಟವಲ್ಲ, ಆರೆಸ್ಸೆಸ್ ಚಿಂತಕರ ದೀರ್ಘಕಾಲದ ಚಿಂತನ-ಮಂಥನಗಳ ಮೂಸೆಯಲ್ಲಿ ಮೂಡಿಬಂದಿರುವುದು. ಇದಕ್ಕೆ ತಮ್ಮದೇ ಪಕ್ಷದ ಕೆ.ಎಸ್.ಈಶ್ವರಪ್ಪಅವರು ಮತ್ತು ಕುರುಬ ಸಮುದಾಯದ ಸ್ವಾಮೀಜಿಗಳನ್ನು ಆರೆಸ್ಸೆಸ್ ಬಳಸಿಕೊಂಡಿದೆ.
ಕುತಂತ್ರ ಬಹಳ ಸರಳವಾದುದು. ಕುರುಬರನ್ನು ಎಸ್ಟಿಗೆ ಸೇರಿಸಿಬಿಟ್ಟರೆ ಇಲ್ಲವೇ ಅಂತಹದ್ದೊಂದು ಹೋರಾಟ ನಡೆದರೆ ಸಿದ್ದರಾಮಯ್ಯ ಅವರು ಆ ಬೇಡಿಕೆಯನ್ನು ನೇರವಾಗಿ ಬೆಂಬಲಿಸಲೂ ಆಗದೆ, ತಿರಸ್ಕರಿಸಲೂ ಆಗದೆ ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಬೇಡಿಕೆಯನ್ನು ಒಪ್ಪಿಕೊಂಡರೆ ಹಿಂದುಳಿದ ಜಾತಿಗಳ ನಾಯಕನ ಕಿರೀಟವನ್ನು ಕಳೆದುಕೊಳ್ಳುತ್ತಾರೆ, ತಿರಸ್ಕರಿಸಿದರೆ ತಮ್ಮ ಜಾತಿಯವರಿಂದಲೇ ದೂರವಾಗಿಬಿಡುತ್ತಾರೆ ಎನ್ನುವ ಲೆಕ್ಕಾಚಾರ ಬಿಜೆಪಿ-ಆರೆಸ್ಸೆಸ್ ನಾಯಕರಲ್ಲಿದೆ. ಈ ಹೋರಾಟದ ಮುಂದಿನ ನಡೆಯನ್ನು ಕಾದು ನೋಡಬೇಕು.
‘ಅಹಿಂದ’ದಲ್ಲಿ ಇನ್ನು ಉಳಿದಿರುವುದು ಅಲ್ಪಸಂಖ್ಯಾತರು, ಅದರಲ್ಲಿ ಮುಖ್ಯವಾಗಿ ಮುಸ್ಲಿಮರು. ಬಿಹಾರದಲ್ಲಿ ಉವೈಸಿ ಅವರ ಎಐಎಂಐಎಂ ನಿರ್ವಹಿಸಿದ ಪಾತ್ರವನ್ನು ನಿರ್ವಹಿಸಲು ಇಲ್ಲಿ ಎಸ್‌ಡಿಪಿಐ ಸಜ್ಜಾಗಿ ನಿಂತಿದೆ. ಇದರಿಂದಾಗಿಯೇ ‘ಎಸ್‌ಡಿಪಿಐ ಎಂದರೆ ಬಿಜೆಪಿಗೆ ಪ್ರೀತಿ, ಕಾಂಗ್ರೆಸ್‌ಗೆ ಭಯ’. ಕಾಂಗ್ರೆಸ್ ಪಕ್ಷ ಮುಸ್ಲಿಮರ ಸರ್ವಾಂಗೀಣ ಬೆಳವಣಿಗೆಗೆ ಆದ್ಯತೆ ನೀಡದೆ ಅವರಲ್ಲಿರುವ ಅಸುರಕ್ಷತೆಯನ್ನೇ ದಾಳವಾಗಿ ಮಾಡಿಕೊಂಡು ಇಡೀ ಸಮುದಾಯವನ್ನು ಮತಬ್ಯಾಂಕ್ ಆಗಿ ಬಳಸಿಕೊಂಡು ಬಂದಿರುವುದಕ್ಕೆ ಸಾಚಾರ್ ವರದಿಗಿಂತ ಬೇರೆ ಪುರಾವೆಗಳು ಬೇಕಾಗಿಲ್ಲ. ಆದರೆ ಇದಕ್ಕೆ ಪರಿಹಾರ ಮತ್ತು ಪರ್ಯಾಯ ಮತೀಯವಾದಿ ಅಜೆಂಡಾದ ಎಸ್‌ಡಿಪಿಐ ಆಗಬಹುದೇ? ಗ್ರಾಮಪಂಚಾಯತ್ ಚುನಾವಣೆಗಳಲ್ಲಿ ಎಸ್‌ಡಿಪಿಐ ದೊಡ್ಡ ಪ್ರಮಾಣದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಜ್ಜಾಗುತ್ತಿದೆ. ಪರಿಣಾಮವನ್ನು ಊಹಿಸುವುದು ಕಷ್ಟವೇನಲ್ಲ. ಅಲ್ಲಿಗೆ ಅಹಿಂದದ ವಿಘಟನೆ ಪೂರ್ಣಗೊಳ್ಳುತ್ತದೆ. ಇದರ ಫಲಾನುಭವಿಗಳು ಯಾರು ಎಂದು ಊಹಿಸುವುದು ಕಷ್ಟವೇನಲ್ಲ.
ಅಹಿಂದವನ್ನು ಒಡೆದುಹಾಕುವ ಪ್ರಯತ್