varthabharthi


ಕಾಲಂ 9

ರೈತ ವಿರೋಧಿ ಕಾಯ್ದೆಗಳು: ಪ್ರಧಾನಿ ಮೋದಿ v/s ಮುಖ್ಯಮಂತ್ರಿ ಮೋದಿ

ವಾರ್ತಾ ಭಾರತಿ : 6 Jan, 2021

ಆಗ ಕಾಂಗ್ರೆಸ್ ಸರಕಾರದ ಮುಂದೆ ಎಂಎಸ್‌ಪಿಯನ್ನು ಶಾಸನಾತ್ಮಕವಾಗಿ ಕಡ್ಡಾಯಗೊಳಿಸಿ ಎಂದು ಆಗ್ರಹಿಸಿದ ನರೇಂದ್ರ ಮೋದಿಯವರು ಈಗ ತಮ್ಮ ಬಳಿ ಅಧಿಕಾರವಿದ್ದರೂ ಅದನ್ನು ಜಾರಿಗೊಳಿಸದಿರುವುದು ಏಕೆ? ಎಂಎಸ್‌ಪಿ ಇರುತ್ತದೆ ಎಂದು ಬರೆದುಕೊಡುತ್ತೇವೆ ಎಂದು ಹೇಳುವ ಬಿಜೆಪಿ ಸರಕಾರ ಅವರ ಪ್ರಧಾನಿ ಮೋದಿ ಮುಖ್ಯಮಂತ್ರಿಯಾಗಿದ್ದಾಗ ನೀಡಿದ ವರದಿಯಲ್ಲಿ ಹೇಳಿರುವಂತೆ ‘‘ಯಾವುದೇ ವ್ಯಾಪಾರಿ-ರೈತರ ನಡುವಿನ ವ್ಯವಹಾರವು ಎಂಎಸ್‌ಪಿಗಿಂತ ಕಡಿಮೆ ಇಲ್ಲದಿರುವುದನ್ನು ಖಾತರಿಗೊಳಿಸಲು’’ ಯಾವುದೇ ಶಾಸನ ಬದ್ಧ ಕ್ರಮಗಳನ್ನು ತೆಗೆದುಕೊಳ್ಳಲು ಏಕೆ ತಯಾರಿಲ್ಲ? ರೈತರ ಆಗ್ರಹವನ್ನು ಬಿಡಿ... ಮುಖ್ಯಮಂತ್ರಿ ನರೇಂದ್ರ ಮೋದಿಯವರ ಮಾತನ್ನು ಪ್ರಧಾನಿ ನರೇಂದ್ರ ಮೋದಿ ಏಕೆ ಕೇಳುತ್ತಿಲ್ಲ?

ಮೋದಿ ಸರಕಾರ ಜಾರಿಗೆ ತಂದಿರುವ ರೈತ ವಿರೋಧಿ ಮತ್ತು ದೇಶವಿರೋಧಿ ಕಾಯ್ದೆಗಳ ವಿರುದ್ಧ ರೈತರು ದಿಲ್ಲಿಗೆ ಮುತ್ತಿಗೆ ಹಾಕಿ ತಿಂಗಳ ಮೇಲಾಯಿತು. ದಿಲ್ಲಿಗೆ ಪ್ರವೇಶ ಕೊಡುವ ಟಿಕ್ರಿ ಬಾರ್ಡರ್ ಮತ್ತು ಸಿಂಘು ಬಾರ್ಡರ್‌ಗಳು ಅಕ್ಷರಶಃ ಜನಭಾರತ ಮತ್ತು ಜನವಿರೋಧಿ ಮೋದಿ ಭಾರತಗಳನ್ನು ಬೇರ್ಪಡಿಸುವ ಬಾರ್ಡರ್‌ಗಳಾಗಿಬಿಟ್ಟಿವೆ. ರೈತ ಹೋರಾಟವು ಕೊರೆವ ಚಳಿಯಲ್ಲೂ ಕಾವು ಪಡೆಯುತ್ತಿದ್ದಂತೆ ದೇಶದ ಎಲ್ಲಾ ವಿರೋಧ ಪಕ್ಷಗಳೂ ಮೋದಿ ಕಾಯ್ದೆಗಳ ವಿರುದ್ಧ ಸ್ಪಷ್ಟ ನಿಲುವನ್ನು ತೆಗೆದುಕೊಳ್ಳುತ್ತಿವೆ. ಅಷ್ಟು ಮಾತ್ರವಲ್ಲ. ಎನ್‌ಡಿಎ ಒಳಗಿನ ಹಲವಾರು ಪಕ್ಷಗಳು ಒಂದೋ ಬಹಿರಂಗವಾಗಿ ಈ ಕಾಯ್ದೆಗಳನ್ನು ವಿರೋಧಿಸುತ್ತಿವೆ ಅಥವಾ ಅವಕಾಶವಾದಿ ಮೌನವನ್ನು ವಹಿಸಿವೆ. ಹೀಗಾಗಿ ಇಂದು ದೇಶದಲ್ಲಿ ಈಗ ಈ ದೇಶದ್ರೋಹಿ, ರೈತದ್ರೋಹಿ ಕಾಯ್ದೆಯನ್ನು ಬೆಂಬಲಿಸುತ್ತಿರುವ ಏಕೈಕ ಪಕ್ಷ ಬಿಜೆಪಿಯಾಗಿದೆ. ಆದರೆ ಅಸಲು ವಿಷಯವೇನೆಂದರೆ ಬಿಜೆಪಿ ಹಾಗೂ ಸಾಕ್ಷಾತ್ ನರೇಂದ್ರ ಮೋದಿಯವರೂ ಸಹ ಈ ಮಸೂದೆಗಳನ್ನು ವಿರೋಧಿಸಿದ್ದರು. ಈಗ ಯಾವ ಕಾರಣಕ್ಕೂ ಎಂಎಸ್‌ಪಿಯನ್ನು ಶಾಸನಬದ್ಧ ಕಾಯ್ದೆಗೊಳಿಸುವುದಿಲ್ಲ ಎಂದು ಹಠ ಹಿಡಿದಿರುವ ಪ್ರಧಾನಿ ಮೋದಿ, ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಎಂಎಸ್‌ಪಿಯನ್ನು ಶಾಸನಬದ್ಧಗೊಳಿಸಬೇಕೆಂದು ಶಿಫಾರಸು ಮಾಡಿದ್ದರು. ಈಗ ವಿದೇಶಿ ಹಾಗೂ ದೇಶಿ ಕಾರ್ಪೊರೇಟ್ ಕಂಪೆನಿಗಳು ಕೃಷಿ ಮಾರುಕಟ್ಟೆಗೆ ಲಗ್ಗೆ ಹಾಕಲು ಅವಕಾಶ ಮಾಡಿಕೊಟ್ಟಿರುವ ಬಿಜೆಪಿ ಸರಕಾರದ ಮುಖಂಡರು ಯಾವ ಕಾರಣಕ್ಕೂ ಖಾಸಗಿ ಮಂಡಿ ಹಾಗೂ ಮಾರುಕಟ್ಟೆಗೆ ಅವಕಾಶ ಮಾಡಿಕೊಡಕೂಡದೆಂದು ಸಂಸತ್ತಿನಲ್ಲಿ ರಣಭೀಷಣವಾಗಿ ವಾದಿಸಿದ್ದರು.

ವ್ಯತ್ಯಾಸ ಇಷ್ಟೆ.. ಆಗ ಬಿಜೆಪಿ ವಿರೋಧಪಕ್ಷವಾಗಿತ್ತು. ಕಾಂಗ್ರೆಸ್ ಅಧಿಕಾರದಲ್ಲಿತ್ತು. ಈಗ ಪಾತ್ರಗಳು ಅದಲು ಬದಲಾಗಿವೆ. ಬಿಜೆಪಿಯ ರೈತ ಕಾಳಜಿಯೆಲ್ಲಾ ಮಾಯವಾಗಿ ಕಾರ್ಪೊರೇಟ್ ನಿಷ್ಠೆಯೇ ಕಾಯ್ದೆಯಾಗುತ್ತಿದೆ. ಅದನ್ನೇ ದೇಶಭಕ್ತಿ ಎಂಬಂತೆ ಅವರ ಸಾಕುಮಾಧ್ಯಮಗಳು ಪ್ರಚಾರ ಮಾಡುತ್ತಿವೆ. ಅಷ್ಟೆ ವ್ಯತ್ಯಾಸ. ಉದಾಹರಣೆಗೆ ಈ ಕೆಳಗಿನ ಸಂಗತಿಗಳನ್ನು ಗಮನಿಸಿ.

ಎಂಎಸ್‌ಪಿಯನ್ನು ಶಾಸನಬದ್ಧಗೊಳಿಸಿ: ಮುಖ್ಯಮಂತ್ರಿ ಮೋದಿ ಸಮಿತಿ, 2011  

2011ರಲ್ಲಿ ಯುಪಿಎ ಸರಕಾರ ಕೃಷಿ ಮಾರುಕಟ್ಟೆ ಸುಧಾರಣೆಯ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು, ಹಾಲಿ ಪ್ರಧಾನಿ-ಆಗ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿತ್ತು.

ಆ ಮೋದಿ ಸಮಿತಿ 2011ರ ಡಿಸೇಂಬರ್ 1ರಂದು ತನ್ನ ವರದಿಯನ್ನು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲ್ಲಿಸಿತ್ತು. ಅದು 20 ಪ್ರಮುಖ ಶಿಫಾರಸುಗಳನ್ನು ಒಳಗೊಂಡಿತ್ತು. ಅದರಲ್ಲಿ ಎಪಿಎಂಸಿಯ ಯಾಜಮಾನಿಕೆಯನ್ನು ಮುರಿಯಲು ಖಾಸಗಿ ಮಂಡಿಗಳಿಗೆ ಅವಕಾಶ ಕೊಡಬೇಕು, ಕಾಂಟ್ರಾಕ್ಟ್ ಫಾರ್ಮಿಂಗ್‌ಗೆ ಅವಕಾಶ ಕೊಡಬೇಕು ಇನ್ನಿತ್ಯಾದಿ ಶಿಪಾರಸ್ಸುಗಳಿದ್ದಿದ್ದೇನೋ ನಿಜ. ಆದರೆ ಅದರ ಜೊತೆಗೆ ಈ ಕೆಳಗಿನ ಪ್ರಮುಖ ಶಿಫಾರಸುಗಳನ್ನು ಅದೂ ಮಾಡಿತ್ತು:

‘‘...Reduction in farmers marketing risk will improve farm income and thus increase the agriculture production. For the purpose, Government should announce of MSPs well in advance and ensure that no farmer-trader transaction is below MSP”

ಅಂದರೆ: ‘‘ಮಾರುಕಟ್ಟೆಯಲ್ಲಿ ರೈತರು ಎದುರಿಸುವ ರಿಸ್ಕನ್ನು ಕಡಿಮೆ ಮಾಡುವುದರಿಂದ ಕೃಷಿ ಆದಾಯ ಹೆಚ್ಚುವುದಲ್ಲದೆ ಕೃಷಿ ಉತ್ಪಾದನೆಯೂ ಹೆಚ್ಚುತ್ತದೆ. ಇದನ್ನು ಸಾಧಿಸಲು ಸರಕಾರವು ಮುಂಚಿತವಾಗಿಯೇ ಕನಿಷ್ಠ ಬೆಂಬಲ ಬೆಲೆ ಎಂಎಸ್‌ಪಿಯನ್ನು ಘೋಷಿಸಬೇಕು ಮತ್ತು ವ್ಯಾಪಾರಿ-ರೈತರ ನಡುವಿನ ಯಾವುದೇ ವ್ಯವಹಾರವು ಎಂಎಸ್‌ಪಿಗಿಂತ ಕಡಿಮೆ ಇಲ್ಲದಿರುವುದನ್ನು ಖಾತರಿಗೊಳಿಸಬೇಕು’’

b.3 Enforce MSP: Since intermediaries play a vital role in the functioning of the market and at times they have advance contract with farmers. In respect of all essential commodities, we should protect farmer’s interests by mandating through statutory provisions that no farmer - trader transaction should be below MSP, wherever prescribed.

ಅಂದರೆ: ‘‘ಕೃಷಿ ಮಾರುಕಟ್ಟೆಯ ವ್ಯವಹಾರಗಳಲ್ಲಿ ಮಧ್ಯವರ್ತಿಗಳು ಕೀಲಕ ಪಾತ್ರ ವಹಿಸುತ್ತಾರೆ ಮತ್ತು ಕೆಲವು ಸಂದರ್ಭಗಳಲ್ಲಿ ರೈತರ ಜೊತೆ ಮುಂಗಡ ಒಪ್ಪಂದವನ್ನೂ ಮಾಡಿಕೊಂಡಿರುತ್ತಾರೆ. ಎಲ್ಲಾ ಅತ್ಯಗತ್ಯ ಸರಕುಗಳ ವಹಿವಾಟುಗಳ ವಿಷಯದಲ್ಲಿ ರೈತಾಪಿ ಮತ್ತು ವ್ಯಾಪಾರಿಗಳ ನಡುವೆ ನಡೆಯುವ ಯಾವುದೇ ವಹಿವಾಟುಗಳು ಎಂಎಸ್‌ಪಿ- ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ನಡೆಯದಂತೆ ಮಾಡುವುದನ್ನು ಶಾಸನಾತ್ಮಕವಾಗಿ ಕಡ್ಡಾಯಗೊಳಿಸುವ ಮೂಲಕ ರೈತರ ಹಿತಾಸಕ್ತಿಯನ್ನು ರಕ್ಷಿಸಬೇಕು’’.

ಈಗ ಧರಣಿ ನಿರತ ರೈತಾಪಿ ಕೇಳುತ್ತಿರುವುದೂ ಇದನ್ನೇ ಅಲ್ಲವೇ? ಆಗ ಕಾಂಗ್ರೆಸ್ ಸರಕಾರದ ಮುಂದೆ ಎಂಎಸ್‌ಪಿಯನ್ನು ಶಾಸನಾತ್ಮಕವಾಗಿ ಕಡ್ಡಾಯಗೊಳಿಸಿ ಎಂದು ಆಗ್ರಹಿಸಿದ ನರೇಂದ್ರ ಮೋದಿಯವರು ಈಗ ತಮ್ಮ ಬಳಿ ಅಧಿಕಾರವಿದ್ದರೂ ಅದನ್ನು ಜಾರಿಗೊಳಿಸದಿರುವುದು ಏಕೆ? ಎಂಎಸ್‌ಪಿ ಇರುತ್ತದೆ ಎಂದು ಬರೆದುಕೊಡುತ್ತೇವೆ ಎಂದು ಹೇಳುವ ಬಿಜೆಪಿ ಸರಕಾರ ಅವರ ಪ್ರಧಾನಿ ಮೋದಿ ಮುಖ್ಯಮಂತ್ರಿಯಾಗಿದ್ದಾಗ ನೀಡಿದ ವರದಿಯಲ್ಲಿ ಹೇಳಿರುವಂತೆ ‘‘ಯಾವುದೇ ವ್ಯಾಪಾರಿ-ರೈತರ ನಡುವಿನ ವ್ಯವಹಾರವು ಎಂಎಸ್‌ಪಿಗಿಂತ ಕಡಿಮೆ ಇಲ್ಲದಿರುವುದನ್ನು ಖಾತರಿಗೊಳಿಸಲು’’ ಯಾವುದೇ ಶಾಸನ ಬದ್ಧ ಕ್ರಮಗಳನ್ನು ತೆಗೆದುಕೊಳ್ಳಲು ಏಕೆ ತಯಾರಿಲ್ಲ? ರೈತರ ಆಗ್ರಹವನ್ನು ಬಿಡಿ.. ಮುಖ್ಯಮಂತ್ರಿ ನರೇಂದ್ರ ಮೋದಿಯವರ ಮಾತನ್ನು ಪ್ರಧಾನಿ ನರೇಂದ್ರ ಮೋದಿ ಏಕೆ ಕೇಳುತ್ತಿಲ್ಲ? ಅಷ್ಟು ಮಾತ್ರವಲ್ಲ...

".. The Essential Commodities Act should be amended to put non-perishable essential commodities under licensing/ registration order. There should be a centralized authority for issuing registration. Special courts should also be set up for speedy trial of offences under the EC Act.'' (p.27) 

ಅದೇ ವರದಿಯಲ್ಲಿ ಕೃಷಿ ಮಾರುಕಟ್ಟೆಯಲ್ಲಿ, ಕೋಲ್ಡ್ ಸ್ಟೋರೇಜ್ ಇತ್ಯಾದಿಗಳಲ್ಲಿ ವಿದೇಶಿ ಮತ್ತು ಖಾಸಗಿ ಬಂಡವಾಳ ಹರಿದು ಬರುವ ರೀತಿ ಅವಕಾಶಗಳನ್ನು ಕಲ್ಪಿಸಬೇಕು ಎಂದು ಮೋದಿಯವರು ಶಿಪಾರಸು ಮಾಡುತ್ತಾ ಈ ಕೆಳಗಿನ ಪ್ರಸ್ತಾಪವನ್ನು ಮುಖ್ಯಮಂತ್ರಿ ಮೋದಿಯವರು ಮಾಡಿದ್ದರು: ಅಂದರೆ: ‘‘ಅಗತ್ಯ ವಸ್ತುಗಳ ಕಾಯ್ದೆಯನ್ನು ತಿದ್ದುಪಡಿ ಮಾಡಿ ಹಾಳಾಗದ ಅತ್ಯಗತ್ಯ ಸರಕುಗಳನ್ನು ನೋಂದಾವಣೆ/ಪರವಾನಿಗೆಯ ಆದೇಶಕ್ಕೆ ಒಳಪಡಿಸಬೇಕು. ಇವುಗಳಿಗೆ ನೋಂದಾವಣಿಯನ್ನು ನೀಡಲು ಕೇಂದ್ರೀಯವಾದ ಪ್ರಾಧಿಕಾರವನ್ನು ಸ್ಥಾಪಿಸಬೇಕು. ಹಾಗೂ ಅಗತ್ಯ ಸರಕುಗಳ ಕಾಯ್ದೆಯಡಿ ಎಸಗುವ ಅಪರಾಧಗಳ ತ್ವರಿತವಾದ ವಿಚಾರಣೆಯನ್ನು ನಡೆಸಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು.

ಆದರೆ 2020ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೊರಡಿಸಿರುವ ಮೂರು ಶಾಸನಗಳಲ್ಲಿ ಒಂದಾದ ‘ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ’ಯಡಿ ಹೊಸ ಸರಕುಗಳನ್ನು ಪರವಾನಿಗೆಯಡಿ ತರುವುದಿರಲಿ, ಪಟ್ಟಿಯಲ್ಲಿ ಇದ್ದ ಎಲ್ಲಾ ಸರಕುಗಳನ್ನು ಸರಕಾರದ ನಿಯಂತ್ರಣದಿಂದ ಹೊರಗಿಡಲಾಗಿದೆ ಹಾಗೂ, ಈ ಕಾಯ್ದೆಯನ್ನು ಜಾರಿ ಮಾಡಲು ಇದ್ದ ಎಲ್ಲಾ ಅಂಗರಚನೆಗಳನ್ನು ಕಿತ್ತುಹಾಕಲಾಗಿದೆ. ದೊಡ್ಡ ವ್ಯಾಪಾರಿಗಳು ಅಪರಿಮಿತವಾಗಿ ಸಂಗ್ರಹಿಸಿಟ್ಟುಕೊಳ್ಳುವುದನ್ನು ಶಾಸನಬದ್ಧಗೊಳಿಸಲಾಗಿದೆ! ಮತ್ತು ರಫ್ತಿಗಾಗಿ ಹಾಗೂ ಸಂಸ್ಕರಣೆಗಾಗಿ ಕಂಪೆನಿಗಳು ಸಂಗ್ರಹಿಸಿಟ್ಟುಕೊಂಡ ದಾಸ್ತಾನನ್ನು ಯುದ್ಧ, ಪ್ರವಾಹಗಳು ಬಂದರೂ ಸರಕಾರ ಮುಟ್ಟುಗೋಲು ಹಾಕಿಕೊಳ್ಳುವುದಿರಲಿ ಮುಟ್ಟುವುದೂ ಇಲ್ಲವೆಂದು ಶಾಸನ ಮಾಡಲಾಗಿದೆ!! ಹಾಗಾದರೆ 2012-2020ರ ನಡುವೆ ಬದಲಾದದ್ದು ಏನು? ಬಿಜೆಪಿಯ ನಿಷ್ಟೆ ರೈತರ ಬದಲಿಗೆ ಕಾರ್ಪೊರೇಟ್‌ಗಳ ಪರವಾಗಿ ಬದಲಾಗಿದೆ..ಅಷ್ಟೆ.

ಮುಖ್ಯಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ The Working Group on Consumer Affairsನ ಸಂಪೂರ್ಣ ಶಿಪಾರಸುಗಳನ್ನು ಆಸಕ್ತರು ಈ ಕೆಳಕಂಡ ವಿಳಾಸದಲ್ಲಿ ಪಡೆದುಕೊಳ್ಳಬಹುದು.

(https://consumeraffairs.nic.in/sites/default/files/file-uploads/recommendation_of%20working_group/1535352127_Working%20Group.pdf)

ಕೃಷಿ ಮಾರುಕಟ್ಟೆಯ ಕಾರ್ಪೊರೇಟೀಕರಣದಿಂದ ರೈತರ ನಾಶ-ಅರುಣ್ ಜೇಟ್ಲಿ, 2012

ಮೋದಿ ಸರಕಾರ ಜಾರಿ ಮಾಡಿರುವ ಆ ಮೂರು ಕಾಯ್ದೆಗಳು ಕೃಷಿ ಮಾರುಕಟ್ಟೆಯಲ್ಲಿ ಈಗ ಇರುವ ಮಧ್ಯವರ್ತಿಗಳು, ಸಣ್ಣ ವ್ಯಾಪಾರಿಗಳನ್ನು ನಾಶಮಾಡಿ ಇಡೀ ಕೃಷಿ ಮಾರುಕಟ್ಟೆಯನ್ನು ಸರಕಾರದ ಯಾವುದೇ ನಿಯಂತ್ರಣವಿಲ್ಲದೆ ಬೃಹತ್ ದೇಶೀಯ ಮತ್ತು ವಿದೇಶೀಯ ಅಗ್ರಿ ಬಿಝಿನೆಸ್ ಕಂಪೆನಿಗಳಿಗೆ ಪರಭಾರೆ ಮಾಡುತ್ತದೆ. ಕೃಷಿ ಮಾರುಕಟ್ಟೆಯ ಈ ಬಗೆಯ ಕಾರ್ಪೊರೇಟೀಕರಣವು ರೈತರ ಬದುಕನ್ನೂ, ಗ್ರಾಮೀಣ ಆರ್ಥಿಕತೆಯ ಹಾಗೂ ದೇಶದ ಆಹಾರ ಭದ್ರತೆಯನ್ನು ನಾಶಮಾಡುತ್ತದೆ ಎಂಬುದು ದೇಶದ ಜನರೆಲ್ಲರ ಒಕ್ಕೊರಲ ಅಭಿಪ್ರಾಯ. ಆದರೆ ಇದರಿಂದ ಗ್ರಾಮೀಣ ಮೂಲ ಸೌಲಭ್ಯಗಳು ಹೆಚ್ಚುತ್ತದೆ ಮತ್ತು ರೈತರಿಗೆ ಹೆಚ್ಚಿನ ಬೆಲೆ, ಸೌಲಭ್ಯ ಮತ್ತು ಸವಲತ್ತುಗಳು ಸಿಗುತ್ತವೆ ಮತ್ತು ಗ್ರಾಮೀಣ ಆರ್ಥಿಕತೆಯಲ್ಲಿ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂಬುದು ಸರಕಾರದ ವಾದವಾಗಿದೆ. ಆದರೆ ಕೃಷಿ ಮಾರುಕಟ್ಟೆಯ ಕಾರ್ಪೊರೇಟೀಕರಣವನ್ನು ಅತ್ಯಂತ ವೈಚಾರಿಕ ನೆಲೆಗಟ್ಟಿನಿಂದ ರಾಜ್ಯಸಭೆಯಲ್ಲಿ ವಿರೋಧಿಸಿದ್ದವರು ಬಿಜೆಪಿಯ ನಂ.2 ನಾಯಕರಾಗಿದ್ದ ಹಾಗೂ ಬಿಜೆಪಿಯ ರಾಜ್ಯಸಭೆಯ ವಿರೋಧಿ ಪಾಳಯದ ನಾಯಕರಾಗಿದ್ದ ಅರುಣ್ ಜೇಟ್ಲಿ ಅವರು. ಆದರೆ ಅದು 2012ರಲ್ಲಿ..ಕಾಂಗ್ರೆಸ್‌ನ ವಿರುದ್ಧ..!

2012ಲ್ಲಿ ಆಗಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಕೃಷಿ ಸರಕುಗಳನ್ನೂ ಒಳಗೊಂಡ ಚಿಲ್ಲರೆ ವ್ಯಾಪಾರದಲ್ಲಿ ಶೇ. 51ರಷ್ಟು ವಿದೇಶಿ ಬಂಡವಾಳಕ್ಕೆ ಹಾಗೂ ಕಾಂಟ್ರಾಕ್ಟ್ ಫಾರ್ಮಿಂಗ್‌ನಲ್ಲಿ ವಿದೇಶಿ ಕೃಷಿ ಉದ್ಯಮಗಳಿಗೆ ಅವಕಾಶ ಮಾಡಿಕೊಡುವ ಮಸೂದೆಯೊಂದನ್ನು ಮಂಡಿಸಿತ್ತು. ಅದರ ಬಗ್ಗೆ ಎರಡೂ ಸದನಗಳಲ್ಲಿ ಸಾಕಷ್ಟು ಚರ್ಚೆ ನಡೆಯಿತು ಮತ್ತು ಅದನ್ನು ಎರಡೂ ಸದನಗಳಲ್ಲಿ ಬಿಜೆಪಿಯ ಮುಖಂಡರು ಸಾರಾಸಗಟು ವಿರೋಧಿಸಿದ್ದರು.

ಈ ಬಗ್ಗೆ 2012ರ ಡಿಸೆಂಬರ್ 6ರಂದು ರಾಜ್ಯಸಭೆಯಲ್ಲಿ ಒಂದಿಡೀ ದಿನದ ಚರ್ಚೆ ನಡೆಯಿತು. ಅದರಲ್ಲಿ ಮುಕ್ಕಾಲು ಸಮಯವನ್ನು ಆಕ್ರಮಿಸಿದ್ದ ಆಗಿನ ರಾಜ್ಯಸಭೆಯ ವಿರೋಧ ಪಾಳೆಯದ ನಾಯಕ ಹಾಗೂ ಬಿಜೆಪಿ ಸಂಸದೀಯ ಪಕ್ಷದ ನಾಯಕ ಅರುಣ್ ಜೇಟ್ಲಿಯವರು: ‘‘ಕೃಷಿಯ ಕಾರ್ಪೊರೇಟೀಕರಣದಿಂದ ರೈತರಿಗೆ ಹೆಚ್ಚು ಬೆಲೆ ಸಿಗುತ್ತದೆ ಎಂಬ ಸರಕಾರದ ವಾದ ಅಸಂಬದ್ಧವಾಗಿದೆ. ಏಕೆಂದರೆ ಆ ರೀತಿ ಸಿಗುವುದಿದ್ದರೆ ಕಳೆದ ಹಲವಾರು ದಶಕಗಳಿಂದ ಕಾರ್ಪೊರೇಟಿಕರಣವಾಗಿರುವ ಅಮೆರಿಕದ ಕೃಷಿಯಿಂದ ಅಮೆರಿಕದ ರೈತರು ಲಾಭ ಪಡೆದಿರಬೇಕಿತ್ತು. ಅಲ್ಲಿ Walmart, Carefour ಇನ್ನಿತ್ಯಾದಿ ದೈತ್ಯ ಕಾರ್ಪೊರೇಟ್ ಕಂಪೆನಿಗಳು ಕೃಷಿ ಮಾರುಕಟ್ಟೆಯನ್ನು ಆವರಿಸಿಕೊಂಡು ಅಲ್ಲಿನ ರೈತರನ್ನು ಸುಲಿಗೆ ಮಾಡುತ್ತಿವೆ. ಹೀಗಾಗಿ ಅಲ್ಲಿನ ರೈತರನ್ನು ರಕ್ಷಿಸಲು ಅಮೆರಿಕ ಸರಕಾರ ಪ್ರತಿವರ್ಷ 400 ಬಿಲಿಯನ್ ಡಾಲರ್ ಅಂದರೆ ದಿನಕ್ಕೆ 6,000 ಕೋಟಿ ರೂ.ಗಳಷ್ಟು ಸಬ್ಸಿಡಿ ನೀಡುತ್ತಿದೆ. ಅಲ್ಲಿಯ ಪರಿಸ್ಥಿತಿಯೇ ಹೀಗಿರುವಾಗ ನಮ್ಮ ರೈತರನ್ನು ಇಂತಹವರಿಂದ ರಕ್ಷಿಸುವಷ್ಟು ನಮ್ಮ ಸರಕಾರಗಳಿಗೆ ತಾಕತ್ತಿವೆಯೇ?’’ ಎಂದು ಕೇಳಿದ್ದರು. 

ಹಾಗೆಯೇ..

‘‘ಸರಕಾರವು ಈಗಿರುವ ಕೃಷಿ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾಗೂ ವ್ಯಾಪಾರಿಗಳಿಂದ ರೈತರು ಶೋಷಣೆಗೆ ಗುರಿಯಾಗುತ್ತಿದ್ದಾರೆ ಎಂದು ಹೇಳುತ್ತಿದೆ. ಅದು ನಿಜವೇ ಆಗಿದ್ದರೂ ಸರಕಾರ ಆ ಸಣ್ಣ ವ್ಯಾಪಾರಿ ಅಥವಾ ಮಧ್ಯವರ್ತಿಗಳ ಜಾಗದಲ್ಲಿ ವಾಲ್‌ಮಾರ್ಟ್‌ನಂತಹ ದೈತ್ಯ ವ್ಯಾಪಾರಿಗಳ ಮರ್ಜಿಗೆ ರೈತರನ್ನು ದೂಡುತ್ತಿದೆ. ಇದರ ಹಿಂದೆ ವಾಲ್‌ಮಾರ್ಟ್‌ನಂತಹ ಕಂಪೆನಿಗಳು ರೈತರ ಬಳಿ ಹೋಗಿ ಅವರ ಸರಕುಗಳನ್ನು ಹೆಚ್ಚಿನ ಬೆಲೆಗೆ ಖರೀದಿಸುತ್ತಾರೆ ಎಂಬ ಹುಂಬ ನಂಬಿಕೆ ಇದೆ. ಇಂತಹ ಅಗ್ರಿ ಬಿಝಿನೆಸ್ ಕಂಪೆನಿಗಳು ಜಗತ್ತಿನಾದ್ಯಂತ ಎಲ್ಲೂ ರೈತರಿಗೆ ಮಾರುಕಟ್ಟೆ ದರದಲ್ಲಿ ಖರೀದಿ ಮಾಡಿದ ಉದಾಹರಣೆಯಿಲ್ಲ. ಅಷ್ಟು ಮಾತ್ರವಲ್ಲ ಈ ಕಂಪೆನಿಗಳು ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿ ಮಾಡುವುದಿಲ್ಲ ಹಾಗೂ ಕಾರ್ಮಿಕ ಕಾನೂನುಗಳನ್ನು ಪಾಲಿಸುವುದಿಲ್ಲ. ಹೀಗಾಗಿಯೇ ವಾಲ್ ಮಾರ್ಟ್ ಕಂಪೆನಿ ಅಮೆರಿಕದ ಮನ್‌ಹಟನ್ ಸಂಸ್ಥಾನದಲ್ಲೇ ಜನರ ಪ್ರತಿರೋಧದ ಕಾರಣದಿಂದಾಗಿ ತನ್ನ ಶಾಖೆಯನ್ನು ತೆರೆಯಲಾಗಲಿಲ್ಲ’’ ಎಂದು ಅಂಕಿಅಂಶಗಳ ಸಮೇತ ಬಿಜೆಪಿಯ ಅರುಣ್ ಜೇಟ್ಲಿಯವರು ಕೃಷಿ ಮಾರುಕಟ್ಟೆಯ ಕಾರ್ಪೊರೇಟೀಕರಣವನ್ನು ಖಂಡತುಂಡವಾಗಿ ವಿರೋಧಿಸಿದ್ದರು.

ಅರುಣ್ ಜೇಟ್ಲಿಯವರು ಸದನದಲ್ಲಿ ಈ ಬಗ್ಗೆ ಮಾಡಿದ ಭಾಷಣದ ಸಂಪೂರ್ಣ ವರದಿಯನ್ನು ಈ ಕೆಳಗಿನ ವೆಬ್‌ಸೈಟಿನಲ್ಲಿ ಆಸಕ್ತರು ಓದಬಹುದು:

(http://164.100.47.5/newdebate/227/06122012/Fullday.pdf)

APMCಯಲ್ಲಿನ ಮಧ್ಯವರ್ತಿಗಳು ರೈತಾಪಿಗಳ ಆಪದ್ಬಾಂಧವರು- ಸುಷ್ಮಾ ಸ್ವರಾಜ್, 2012

ಯುಪಿಎ ಸರಕಾರ ಮಂಡಿಸಿದ್ದ ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ಬಂಡವಾಳದ ಮಸೂದೆಯ ಬಗ್ಗೆ ಡಿಸೆಂಬರ್ 4ರಂದು ಲೋಕಸಭೆಯಲ್ಲೂ ಸುದೀರ್ಘ ಚರ್ಚೆ ನಡೆಯಿತು. ಅದರಲ್ಲಿ ಬಿಜೆಪಿಯ ಪರವಾಗಿ ಪ್ರಧಾನವಾಗಿ ಆ ಮಸೂದೆಯನ್ನು ವಿರೋಧಿಸಿ ಬಿಜೆಪಿಯ ಹಿರಿಯ ನಾಯಕಿ ದಿವಂಗತ ಸುಷ್ಮಾ ಸ್ವರಾಜ್ ಅವರು ಸುದೀರ್ಘ ಭಾಷಣ ಮಾಡಿದ್ದರು. ಅದರಲ್ಲಿ ಅವರು ಕಾಂಟ್ರಾಕ್ಟ್ ಫಾರ್ಮಿಂಗ್ ಅನಾಹುತವನ್ನು ಕಣ್ಣಿಗೆ ಕಟ್ಟುವಂತೆ ಹೀಗೆ ವಿವರಿಸಿದ್ದರು: ‘‘ಪಂಜಾಬಿನಲ್ಲಿ ತನ್ನ ಫ್ಯಾಕ್ಟರಿಯನ್ನು ಪ್ರಾರಂಭಿಸುವ ಮುನ್ನ ಪೆಪ್ಸಿ ಕಂಪೆನಿ ತಾನು ಕೇವಲ ಕೋಲಾವನ್ನು ಮಾತ್ರವಲ್ಲದೆ ಆಲೂ ಚಿಪ್ಸ್ ಮಾಡಲು ರೈತರಿಂದ ಆಲೂಗಡ್ಡೆಯನ್ನು ಹಾಗೂ ಟೊಮ್ಯಾಟೊ ಸಾಸ್ ಮಾಡಲು ರೈತರಿಂದ ಟೊಮ್ಯಾಟೊವನ್ನು ಖರೀದಿಸುವುದಾಗಿ ಹೇಳಿತ್ತು.

ಆದರೆ ರೈತರು ಬೆಳೆ ಬೆಳೆದು ತಂದಾಗ ಸಿಹಿ ಜಾಸ್ತಿಯಿದೆಯೆಂದು ಆಲೂವನ್ನು, ಹುಳಿ ಜಾಸ್ತಿ ಇದೆ ಎಂದು ಟೊಮ್ಯಾಟೊವನ್ನು ಖರೀದಿಸಲಿಲ್ಲ ಹಾಗೂ ಅವರ ಫ್ಯಾಕ್ಟರಿಗೆ ಬೇಕಾದ ಆಲೂ ಮತ್ತು ಟೊಮ್ಯಾಟೊವನ್ನು ವಿದೇಶದಿಂದ ಆಮದು ಮಾಡಿಕೊಂಡರು. ಪಂಜಾಬಿನ ರೈತ ಬರ್ಬಾದ್ ಆಗಿಬಿಟ್ಟ’’.

ಮುಂದುವರಿದು ಐರೋಪ್ಯ ಒಕ್ಕೂಟದ ಪಾರ್ಲಿಮೆಂಟು ದೊಡ್ಡ ಸೂಪರ್ ಮಾರ್ಕೆಟ್‌ಗಳು ರೈತರಿಗೆ ಮಾಡುತ್ತಿರುವ ಶೋಷಣೆಯ ಬಗ್ಗೆ 2008ರಲ್ಲಿ ಮಾಡಿದ ಘೋಷಣೆಯನ್ನೂ ಪ್ರಸ್ತಾಪಿಸುತ್ತಾರೆ:

‘‘ಕೃಷಿಯ ಕಾರ್ಪೊರೇಟೀಕರಣ ಅತಿ ಹೆಚ್ಚಿನ ರೀತಿಯಲ್ಲಿ ಸಂಭವಿಸಿರುವ ಐರೋಪ್ಯ ಒಕ್ಕೂಟದ ಅನುಭವದ ಹಿನ್ನೆಲೆಯಲ್ಲಿ ಹೇಳುವುದಾದರೆ ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್‌ಗಳು ತಮ್ಮ ದೈತ್ಯ ಕೊಳ್ಳುವ ಶಕ್ತಿಯನ್ನು ದುರ್ಬಳಕೆ ಮಾಡಿಕೊಂಡು ಸರಬರಾಜುದಾರರಿಗೆ ನೀಡುವ ದರವನ್ನು ಅತ್ಯಂತ ಕನಿಷ್ಠ ಬೆಲೆಗೆ ಇಳಿಸುತ್ತಿದ್ದಾರೆಯಲ್ಲದೆ, ತಾರತಮ್ಯದಿಂದ ಕೂಡಿದ ಶರತ್ತುಗಳನ್ನು ಅವರ ಮೇಲೆ ಹೇರಲಾಗುತ್ತಿದೆ. ಈ ಘೋಷಣೆಯು ಫ್ರಾನ್ಸ್, ಇಟಲಿ, ನೆದರ್‌ಲ್ಯಾಂಡ್ಸ್, ಬೆಲ್ಜಿಯಮ್, ಐರ್ಲೆಂಡ್ ಮತ್ತು ಹಂಗೆರಿಗಳಲ್ಲಿ ಸೂಪರ್ ಮಾರ್ಕೆಟ್‌ಗಳ ವಿರುದ್ಧ ರೈತರು ನಡೆಸುತ್ತಿದ್ದ ಬೃಹತ್ ಹೋರಾಟಗಳ ಹಿನ್ನೆಲೆಯಲ್ಲಿ ಘೋಷಿಸಲಾಯಿತು. ಅವರೆಲ್ಲರಿಗೂ ಸೂಪರ್ ಮಾರ್ಕೆಟ್‌ಗಳ ವಿರುದ್ಧ ಇದ್ದ ದೂರುಗಳ ಸ್ವರೂಪ ಒಂದೇ ರೀತಿಯಲ್ಲಿತ್ತು. ಅದೇನೆಂದರೆ ವ್ಯಾಪಾರಿಗಳು ಒಟ್ಟುಗೂಡಿಕೊಂಡು ಹಾಲು, ಮಾಂಸ, ಕೋಳಿ ಮತ್ತು ವೈನ್ ಉತ್ಪಾದನೆಯಂತಹ ರೈತ ಉತ್ಪನ್ನಗಳ ಬೆಲೆಯನ್ನು ಕುಸಿಯುವಂತೆ ಹಾಗೂ ಕೆಲವೊಮ್ಮೆ ಅವರ ಉತ್ಪಾದಕ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರುವಂತೆ ಮಾಡಲಾಗುತ್ತಿದೆ ಎಂಬುದೇ ಆಗಿತ್ತು’’ ಎಂದು ಸತರ್ಕವಾಗಿ ಹಾಗೂ ಪ್ರಬಲವಾಗಿ ಕೃಷಿ ಮಾರುಕಟ್ಟೆಯ ಕಾರ್ಪೊರೇಟೀಕರಣದಿಂದ ರೈತರಿಗೆ ಆಗುವ ಅನ್ಯಾಯಗಳನ್ನು ಸಂಸತ್ತಿನ ಮುಂದೆ ಬಿಚ್ಚಿಟ್ಟಿದ್ದರು. ಮತ್ತೊಂದು ಕಡೆ: ‘‘ಎಪಿಎಂಸಿಯಲ್ಲಿರುವ ಮಧ್ಯವರ್ತಿಗಳು ರೈತರ ಎಟಿಎಂ ಇದ್ದ ಹಾಗೆ. ರೈತರಿಗೆ ದಿಢೀರ್ ಸಾಲಬೇಕಾದಾಗ ಸಾಲವನ್ನು, ಅವರ ಕುಟುಂಬದವರು ಆಸ್ಪತ್ರೆಗೆ ಸೇರಿದಾಗ ಔಷಧಿ-ಆಸ್ಪತ್ರೆ ಖರ್ಚುಗಳನ್ನು ನೋಡಿಕೊಳ್ಳುವ ಆಪದ್ಬಾಂಧವರು ಈ ಮಧ್ಯವರ್ತಿಗಳು. ರೈತನ ಬದುಕಿನ ವಾಸ್ತವಗಳು ಗೊತ್ತಿರುವವರು ಈ ವ್ಯವಸ್ಥೆಯನ್ನು ರದ್ದುಪಡಿಸುವುದಿಲ್ಲ’’ ಎಂದು ಹೇಳುತ್ತಾರೆ. ಕೃಷಿಯ ಕಾರ್ಪೊರೇಟೀಕರಣ ಹಾಗೂ ಕಾಂಟ್ರಾಕ್ಟ್ ಫಾರ್ಮಿಂಗ್ ವಿರುದ್ಧ ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಮಾಡಿರುವ ಭಾಷಣದ ಸಂಪೂರ್ಣ ವರದಿಯನ್ನು ಆಸಕ್ತರು ಈ ಕೆಳಗಿನ ವೆಬ್ ವಿಳಾಸದಲ್ಲಿ ಓದಬಹುದು:

http://loksabhaph.nic.in/Debates/Result_Archive.aspx?dbsl=1508701

ಇದು ಬಿಜೆಪಿ ಪಕ್ಷ. ವಿರೋಧಪಕ್ಷದಲ್ಲಿದ್ದಾಗ ರೈತಪರ ಮೊಸಳೆ ಕಣ್ಣೀರು..ಅಧಿಕಾರದಲ್ಲಿದ್ದಾಗ ನಿರ್ಲಜ್ಜವಾಗಿ ಕಾರ್ಪೊರೇಟ್ ಧಣಿಗಳ ಜೀತ. ಇದರ ಹಿಂದಿರುವುದು ಕಾರ್ಪೊರೇಟ್ ಭಕ್ತಿಯೇ ವಿನಾ ದೇಶಭಕ್ತಿಯೂ ಅಲ್ಲ.. ಮಣ್ಣಾಂಗಟ್ಟಿಯೂ ಅಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)