ರಕ್ತಹೀನತೆಯೇ?ಈ ಮನೆಮದ್ದುಗಳನ್ನು ಬಳಸಿ
ನಮ್ಮ ಶರೀರದಲ್ಲಿ ಆರೋಗ್ಯಕರ ಕೆಂಪು ರಕ್ತಕಣಗಳ ಸಂಖ್ಯೆ ಕಡಿಮೆಯಾದಾಗ ಅನೀಮಿಯಾ ಅಥವಾ ರಕ್ತಹೀನತೆ ಉಂಟಾಗುತ್ತದೆ. ಈ ರಕ್ತಕಣಗಳು ಶರೀರದಲ್ಲಿಯ ಎಲ್ಲ ಅಂಗಾಂಶಗಳಿಗೆ ಆಮ್ಲಜನಕವನ್ನು ಪೂರೈಸುವ ಕೆಲಸವನ್ನು ನಿರ್ವಹಿಸುತ್ತವೆ. ಕಡಿಮೆ ರಕ್ತಕಣಗಳ ಸಂಖ್ಯೆಯು ರಕ್ತದಲ್ಲಿ ಆಮ್ಲಜನಕವು ಇರಬೇಕಾದ ಪ್ರಮಾಣದಲ್ಲಿಲ್ಲ ಎನ್ನುವುದನ್ನು ಸೂಚಿಸುತ್ತದೆ. ಗರ್ಭಿಣಿಯರಲ್ಲಿ ರಕ್ತಹೀನತೆ ಸಾಮಾನ್ಯ ಸಮಸ್ಯೆಯಾಗಿದೆ,ಆದರೆ ಅದು ಗಂಭೀರವಲ್ಲ. ವೈದ್ಯರ ಸಲಹೆಯನ್ನು ಪಡೆದುಕೊಂಡು ರಕ್ತಹೀನತೆಯ ಸಮಸ್ಯೆಯಿಂದ ಪಾರಾಗಲು ಮನೆಮದ್ದುಗಳನ್ನು ಬಳಸಬಹುದು. ಆದರೆ ರಕ್ತಹೀನತೆಗೆ ಶರೀರದ ಇನ್ಯಾವುದೋ ಅನಾರೋಗ್ಯ ಕಾರಣವಾಗಿರಬಹುದು,ಹೀಗಾಗಿ ಅದನ್ನು ಕಡೆಗಣಿಸಕೂಡದು ಮತ್ತು ಅಗತ್ಯ ಚಿಕಿತ್ಸೆಯನ್ನು ಪಡೆಯಬೇಕು. * ಸಿಟ್ರಸ್ ವರ್ಗಕ್ಕೆ ಸೇರಿದ ಹಣ್ಣುಗಳು
ಕಬ್ಬಿಣದ ಕೊರತೆಯಿಂದ ಉಂಟಾಗುವ ರಕ್ತಹೀನತೆಯ ವಿರುದ್ಧ ಹೋರಾಡುವಲ್ಲಿ ವಿಟಾಮಿನ್ ಸಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಶರೀರವು ಕಬ್ಬಿಣವನ್ನು ಚೆನ್ನಾಗಿ ಹೀರಿಕೊಳ್ಳಲು ನೆರವಾಗುತ್ತದೆ. ಹೀಗಾಗಿ ಸಿಟ್ರಸ್ ವರ್ಗಕ್ಕೆ ಸೇರಿದ ಕಿತ್ತಳೆ,ಸ್ಟ್ರಾಬೆರಿ,ಕಿವಿ ಮತ್ತು ಟೊಮೆಟೊ ಇತ್ಯಾದಿಗಳ ಸೇವನೆಯು ಲಾಭದಾಯಕವಾಗಿದೆ. ಈ ವರ್ಗಕ್ಕೆ ಸೇರಿದ ಹಣ್ಣುಗಳು ಸಮೃದ್ಧ ಸಿ ವಿಟಾಮಿನ್ ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ಫಾಲೇಟ್‌ಗಳನ್ನೂ ಒಳಗೊಂಡಿವೆ. ಈ ಹಣ್ಣುಗಳನ್ನು ದಿನವಿಡೀ ತಿನ್ನಬಹುದು,ಆದರೆ ಹೊಟ್ಟೆಯುಬ್ಬರ ಉಂಟಾಗುವುದನ್ನು ತಡೆಯಲು ಖಾಲಿ ಹೊಟ್ಟೆಯಲ್ಲಿ ಅಥವಾ ರಾತ್ರಿ ಮಲಗುವ ಮುನ್ನ ಸೇವಿಸಕೂಡದು.
* ಬಾಳೆಹಣ್ಣು
ಬಾಳೆಹಣ್ಣನ್ನು ಹೆಚ್ಚಿನವರು ಇಷ್ಟಪಡುತ್ತಾರೆ. ಇದು ಹಲವಾರು ಪೋಷಕಾಂಷಗಳನ್ನು ಒಳಗೊಂಡಿದ್ದು ಪ್ರತಿದಿನ ಎರಡು ಬಾಳೆಹಣ್ಣುಗಳ ಸೇವನೆ ರಕ್ತಹೀನತೆಗೆ ಚಿಕಿತ್ಸೆ ನೀಡುತ್ತದೆ. ವಿಟಾಮಿನ್ ಸಿ,ಫಾಲೇಟ್,ಪೊಟ್ಯಾಷಿಯಂ ಮತ್ತು ಕಬ್ಬಿಣದಂತಹ ಪ್ರಮುಖ ಪೋಷಕಾಂಶಗಳು ಬಾಳೆಹಣ್ಣಿನಲ್ಲಿ ಹೇರಳವಾಗಿವೆ. ಇವು ಶರೀರದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆಯನ್ನು ಹೆಚ್ಚಿಸಿ ರಕ್ತಹೀನತೆಯ ಚಿಕಿತ್ಸೆಗೆ ನೆರವಾಗುತ್ತವೆ.
* ಬಸಳೆ
ರಕ್ತಹೀನತೆಯನ್ನು ತಡೆಯಲು ಶರೀರವು ನಾವು ಸೇವಿಸಿದ ಆಹಾರಗಳಿಂದ ಕಬ್ಬಿಣವನ್ನು ಹೀರಿಕೊಳ್ಳುವುದು ಮತ್ತು ಶರೀರದಲ್ಲಿ ಕಬ್ಬಿಣವು ಸೂಕ್ತ ಮಟ್ಟದಲ್ಲಿರುವುದು ಮುಖ್ಯವಾಗಿದೆ. ಗಾಢ ಮತ್ತು ಹಸಿರು ಸೊಪ್ಪುಗಳು ಕಬ್ಬಿಣದ ಉತ್ತಮ ಮೂಲಗಳಾಗಿವೆ. ರಕ್ತಹೀನತೆ ಸಮಸ್ಯೆಗೆ ನೈಸರ್ಗಿಕವಾಗಿ ಪರಿಹಾರವನ್ನು ಕಂಡುಕೊಳ್ಳಲು ಬಸಳೆ, ಬ್ರಾಕೊಲಿಯಂತಹ ತರಕಾರಿಗಳನ್ನು ಹೇರಳವಾಗಿ ಸೇವಿಸಬೇಕು. ಬಸಳೆಯನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿ ಫಾಲಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸಲು ನೆರವಾಗುತ್ತದೆ. ಅದು ವಿಟಾಮಿನ್ ಬಿ12,ಫಾಲಿಕ್ ಆಮ್ಲ ಮತ್ತು ಇತರ ಹಲವಾರು ಅಗತ್ಯ ಪೋಷಕಾಂಶಗಳ ನೈಸರ್ಗಿಕ ಮೂಲವಾಗಿದೆ
* ಖರ್ಜೂರ ಮತ್ತು ಒಣದ್ರಾಕ್ಷಿ
ಖರ್ಜೂರ ಮತ್ತು ಒಣದ್ರಾಕ್ಷಿಗಳು ವಿಟಾಮಿನ್ ಸಿ ಮತ್ತು ಕಬ್ಬಿಣದ ಅತ್ಯುತ್ತಮ ಮೂಲಗಳಾಗಿದ್ದು,ರಕ್ತಹೀನತೆಯಿಂದ ಚೇತರಿಸಿಕೊಳ್ಳುವಲ್ಲಿ ಇವು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಪ್ರತಿದಿನ ಬೆಳಿಗ್ಗೆ ನೀರಿನಲ್ಲಿ ನೆನೆಸಿದ ಖರ್ಜೂರ ಮತ್ತು ಒಣದ್ರಾಕ್ಷಿಗಳನ್ನು ಸೇವಿಸುವ ಮೂಲಕ ಹಿಮೊಗ್ಲೋಬಿನ್ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು.
* ತಾಮ್ರ
ತಾಮ್ರವು ಶರೀರದಲ್ಲಿ ಹಿಮೊಗ್ಲೋಬಿನ್ ಉತ್ಪಾದನೆಗಾಗಿ ಆಹಾರಗಳನ್ನು ವಿಭಜಿಸಲು ನೆರವಾಗುತ್ತದೆ. ಅದು ಶರೀರವು ಕಬ್ಬಿಣವನ್ನು ಚೆನ್ನಾಗಿ ಹೀರಿಕೊಳ್ಳಲೂ ನೆರವಾಗುತ್ತದೆ. ಹೀಗಾಗಿ ತಾಮ್ರದ ಪಾತ್ರೆಗಳಲ್ಲಿ ಅಡಿಗೆ ತಯಾರಿಸಲು ಆದ್ಯತೆ ನೀಡಬೇಕು ಮತ್ತು ತಾಮ್ರದ ಬಟ್ಟಲುಗಳಲ್ಲಿ ಆಹಾರವನ್ನು ಸೇವಿಸಬೇಕು.
* ಎಳ್ಳು
ರಕ್ತಹೀನತೆಯುಳ್ಳವರು ಎಳ್ಳನ್ನು,ವಿಶೇಷವಾಗಿ ಕಪ್ಪು ಎಳ್ಳನ್ನು ಅಗತ್ಯವಾಗಿ ಸೇವಿಸಬೇಕು. ಕಪ್ಪು ಎಳ್ಳು ಕ್ಯಾಲ್ಸಿಯಂ,ಮ್ಯಾಗ್ನೀಷಿಯಂ ಮತ್ತು ಕಬ್ಬಿಣದ ಉತ್ತಮ ಮೂಲವಾಗಿದ್ದು,ಇವೆಲ್ಲ ಶರೀರದಲ್ಲಿ ಕಬ್ಬಿಣದ ಮಟ್ಟವನ್ನು ಹೆಚ್ಚಿಸುವಲ್ಲಿ ಮುಖ್ಯವಾಗಿವೆ.
* ಬೀಟ್‌ರೂಟ್
ಬೀಟ್‌ರೂಟ್ ಸೇವನೆಯು ಶರೀರದಲ್ಲಿ ಹಿಮೊಗ್ಲೊಬಿನ್ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಉತ್ತಮ ವಿಧಾನವಾಗಿದೆ. ಅದರಲ್ಲಿ ಹೇರಳವಾಗಿರುವ ಫಾಲೇಟ್ ಶರೀರದಲ್ಲಿ ಹಿಮೊಗ್ಲೊಬಿನ್ ಮಟ್ಟವನ್ನು ಹೆಚ್ಚಿಸಲು ನೆರವಾಗುತ್ತದೆ. ಕಬ್ಬಿಣ ಮತ್ತು ವಿಟಾಮಿನ್ ಸಿ ಸಮೃದ್ಧವಾಗಿರುವ ಬೀಟ್‌ರೂಟ್ ರಕ್ತಹೀನತೆಯುಳ್ಳವರು ಅಗತ್ಯವಾಗಿ ಸೇವಿಸಬೇಕಾದ ತರಕಾರಿಯಾಗಿದೆ.
* ಆಮ್ಲಾ
ಆಮ್ಲಾ ಅಥವಾ ನೆಲ್ಲಿಕಾಯಿ ರಕ್ತಹೀನತೆಯ ವಿರುದ್ಧ ಹೋರಾಡಲು ನೆರವಾಗುವ ವಿಟಾಮಿನ್ ಸಿ,ಕಬ್ಬಿಣ ಮತ್ತು ಇತರ ಹಲವಾರು ಪೋಷಕಾಂಶಗಳನ್ನು ಹೇರಳವಾಗಿ ಒಳಗೊಂಡಿದೆ. ನೆಲ್ಲಿಕಾಯಿಯನ್ನು ತಿನ್ನುವುದರಿಂದ ಕಬ್ಬಿಣದ ಕೊರತೆ ನೀಗುತ್ತದೆ ಮತ್ತು ಹಿಮೊಗ್ಲೊಬಿನ್ ಮಟ್ಟವು ಹೆಚ್ಚುತ್ತದೆ. ದಿನನಿತ್ಯದ ಆಹಾರದಲ್ಲಿ ನೆಲ್ಲಿಕಾಯಿಯನ್ನು ಸೇರಿಸಿಕೊಂಡರೆ ಅದು ಇತರ ಹಲವಾರು ಆರೋಗ್ಯಲಾಭಗಳನ್ನೂ ನೀಡುತ್ತದೆ. ಅದರಲ್ಲಿ ಅಧಿಕ ಪ್ರಮಾಣದಲ್ಲಿರುವ ವಿಟಾಮಿನ್ ಸಿ ರಕ್ತದಲ್ಲಿಯ ಪ್ಲೇಟ್‌ಲೆಟ್‌ಗಳ ಸಂಖ್ಯೆಯನ್ನೂ ಹೆಚ್ಚಿಸುತ್ತದೆ. ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ 3-4 ನೆಲ್ಲಿಕಾಯಿ ತಿನ್ನುವುದು ಉತ್ತಮ ಪರಿಣಾಮವನ್ನು ನೀಡುತ್ತದೆ. ವೈದ್ಯರು ಸಹ ಗರ್ಭಿಣಿಯರಿಗೆ ನೆಲ್ಲಿಕಾಯಿ ತಿನ್ನುವಂತೆ ಸಲಹೆ ನೀಡುತ್ತಾರೆ.