ಪ್ರಭುತ್ವದ ನಡೆಯನ್ನು ಪ್ರಶ್ನಿಸುವ ‘ದೇವರ ಗೂಳಿ’
ವಾಸ್ತವದ ತಲ್ಲಣಗಳಿಂದ ನೊಂದ ಮನದ ನಿಟ್ಟುಸಿರಿನಲ್ಲೂ ಭಿನ್ನ ಬದುಕಿನ ಪರ್ಯಾಯಗಳ ಕುರಿತು ಚಿಂತಿಸುವ ಕವಿ ಪಿ. ಆರ್. ವೆಂಕಟೇಶರವರದು ಹೋರಾಟದ ಬದುಕು. ಕಾರ್ಪೊರೇಟ್ ವಲಯದ ಅಡಿಯಾಳಾಗುತ್ತಿರುವ ಪ್ರಭುತ್ವದ ನಡೆಯನ್ನು ಕವಿ ಅವರ ‘ದೇವರ ಗೂಳಿ’ ಕವನ ಸಂಕಲನದಲ್ಲಿ ಪ್ರಶ್ನಿಸುತ್ತಾರೆ. ಅತ್ಯಂತ ಸ್ವಾಭಿಮಾನಿ, ಹೋರಾಟಗಾರರಾದ ಬಳ್ಳಾರಿಯ ಕವಿ ವೆಂಕಟೇಶ್ ಅವರ ಬದುಕೇ ಒಂದು ಹೋರಾಟ ರಂಗ. ಅವರು ರೈತ, ಕೂಲಿಕಾರ, ದೇವದಾಸಿ ಹೋರಾಟಗಳಲ್ಲಿ ತೊಡಗಿಕೊಂಡವರು. ಇದಕ್ಕಾಗಿಯೇ ಅವರು ಸೆರೆಮನೆವಾಸವನ್ನೂ ಅನುಭವಿಸಿದವರು.
ಇವರ ಕವನ ಸಂಕಲನ ‘ದೇವರ ಗೂಳಿ’ ಹೆಸರೇ ಗಮನ ಸೆಳೆಯುತ್ತದೆ. ಇವರ ದೇವರ ಗೂಳಿ ಜಾಗತೀಕರಣ ಕಾಲದಲ್ಲಿ ಮುನ್ನೆಲೆಗೆ ಬಂದ ಕಾರ್ಪೊರೇಟ್ ವಲಯದ ಬಂಡವಾಳಶಾಹಿ ವ್ಯವಸ್ಥೆಗೆ ಕವನ ಸಂಕಲನದ ಹೆಸರು ರೂಪಕವಾಗಿ ಬಳಸಲಾಗಿದೆ. ಊರ ದೇವರಿಗೆ ದನಗಳನ್ನು ಗೂಳಿ ಬಿಡುವುದು ವಾಡಿಕೆ. ಈ ದೇವರ ಗೂಳಿ ಎಲ್ಲೆಂದರಲ್ಲೇ ಬಾಯಿ ಹಾಕಬಹುದು. ಬೆಳೆ, ದಿನಸಿ ತಿಂದರೂ ಯಾರೂ ಅದನ್ನು ಹೊಡೆದು ಓಡಿಸುವಂತಿಲ್ಲ. ಏಕೆಂದರೆ ಅದು ದೇವರಿಗೆ ಬಿಟ್ಟ ದೇವರಗೂಳಿ. ನೊಗ ಹೊರಲಿಲ್ಲ, ನೇಗಿಲ ತೊಡಲಿಲ್ಲ
ಬಂಡಿ ಎಳೆಯಲಿಲ್ಲ, ರಂಟೆ ಹರಗಲಿಲ್ಲ
ಕುಂಟಿಯ ಮೆಟ್ಟಲಿಲ್ಲ.
ಮಕಾಡವಿಲ್ಲ, ಮೂಗುದಾಣ ಮೊದಲೇ ಇಲ್ಲ
ಉಸ್ ಅಂಬಂಗಿಲ್ಲ, ಬಡಗಿ ಎತ್ತಂಗಿಲ್ಲ
ಆಣತಿಗೊಳಪಟ್ಟಿಲ್ಲ.
ಬೇಂದ್ರೆಯವರ ಕವನ ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬಂತೆ, ‘ಹದ್ದು ಹಾರುತಿದೆ ನೋಡಿದಿರಾ’ ಎಂದು ವೆಂಕಟೇಶರವರು ಕವನ ರಚಿಸಿದ್ದಾರೆ. ಇಲ್ಲಿಯ ಹದ್ದು ಯುದ್ಧ ದಾಹದ್ದು. ಈ ಹದ್ದು ಶಾಂತಿ ಗೋರಿಯ ಮೇಲೆ ಕುಂತು ಯುದ್ಧದ ಧ್ಯಾನ ಮಾಡುತ್ತದೆ. ಇವರ ಮತ್ತೊಂದು ಕವಿತೆ ‘ಬುದ್ಧನ ನಗೆಯು ಮಾಸುತಿದೆ’ ಶಾಂತಿ ಸಮಾನತೆಯ ಕುರಿತು ಹೇಳುತ್ತದೆ. ಇನ್ನೊಂದು ‘ಧರ್ಮವೆಂದರೆ’ ಕವಿತೆಯಲ್ಲಿ ಧರ್ಮವನ್ನು ನಿರಾಕರಿಸುತ್ತ, ಹಸಿವಿನ ಧರ್ಮ, ಕಾಯಕದ ಧರ್ಮ, ರೊಟ್ಟಿಯ ಧರ್ಮ ಮಾತ್ರ ಗೊತ್ತು ಎನ್ನುವ ವೆಂಕಟೇಶರವರ ಕವಿತೆಗಳು ಪ್ರಭುವನ್ನೂ ನಿಲ್ಲಿಸಿ ಪ್ರಶ್ನಿಸುತ್ತವೆ. ‘ಸಾವು ಹೊತ್ತ ಹೆಜ್ಜೆಗಿಲ್ಲಿ ನೆಲವಿಲ್ಲ’ವೆಂದು ಧೈರ್ಯದಿಂದ ನುಡಿಯುತ್ತವೆ ವೆಂಕಟೇಶರವರ ಕವಿತೆಗಳು. ವಾಸ್ತವದ ಕಟು ಸತ್ಯಗಳೇ ಇವರ ಕಾವ್ಯವಾಗಿದೆ. ಈ ಕಾವ್ಯ ಅಬ್ಬರದ ಘೋಷಣೆ ಅಥವಾ ಮೌನದ ಸ್ವಗತವಾಗದೆ ವಾಸ್ತವದ ಸತ್ಯಗಳ ಪಡಿಯಚ್ಚಾಗಿದ್ದರಿಂದ ಆಪ್ತವೆನಿಸುತ್ತವೆ.
ದೇವರ ಗೂಳಿ ಕೃತಿಯ ಪ್ರಕಾಶಕರು ದುಡಿಮೆ ಪ್ರಕಾಶನ, ಸಿರಗುಪ್ಪ, ಬಳ್ಳಾರಿ. ಒಟ್ಟು 64 ಪುಟಗಳಿರುವ ಈ ಕೃತಿಯ ಬೆಲೆ. ರೂ. 80. ಬರಗೂರು ರಾಮಚಂದ್ರಪ್ಪನವರ ಮುನ್ನುಡಿ, ಎಮ್.ಡಿ. ಒಕ್ಕುಂದರವರ ಬೆನ್ನುಡಿ ಈ ಕೃತಿಗಿದೆ.