ವಾರ್ತಾಭಾರತಿ 18ನೇ ವಾರ್ಷಿಕ ವಿಶೇಷಾಂಕ
ಭಾರೀ ಕಠಿಣ ಕಗ್ಗಂಟು ನೀನು

ನಾಝ್ ಖಿಯಾಲ್ವಿ
‘ಶಹೆನ್ ಶಾಹೆ ಖವ್ವಾಲಿ’ ಅಥವಾ ‘ಸುಲ್ತಾನೆ ಖವ್ವಾಲಿ’ ಎಂದೇ ಖ್ಯಾತರಾಗಿರುವ ನುಸ್ರತ್ ಫತೇಹ್ ಅಲಿ ಖಾನ್ (1948-1997) ಈ ಲೋಕದಿಂದ ತೆರಳಿ 23 ವರ್ಷಗಳಾದವು. ಆದರೆ ಅವರ ಗಗನಚುಂಬಿ ಧ್ವನಿ ಈಗಲೂ ಸಂಗೀತಲೋಕದಲ್ಲಿ ಮಾರ್ದನಿಸುತ್ತಲೇ ಇದೆ. ಗಾಯನವನ್ನು ಸದಾ ಸೌಮ್ಯ ಧ್ವನಿಯಲ್ಲೇ ನಿರೀಕ್ಷಿಸುವವರು ಮತ್ತು ಮೃದುವಾದ ಧ್ವನಿಯ ಹಾಡುಗಳಿಗೆ ಮಾತ್ರ ಒಗ್ಗಿಹೋದವರು ನುಸ್ರತ್ರ ಸಿಡಿಲಬ್ಬರದ ಹಾಡುಗಳನ್ನು ಕೇಳಿದರೆ ಬೆಚ್ಚಿ ಬೀಳುವುದು ಖಚಿತ. ಏಕೆಂದರೆ ಅವರ ಹಾಡುಗಳ ಹೆಚ್ಚಿನ ಭಾಗ ಅಬ್ಬರ, ಆರ್ಭಟಗಳ ರೂಪದಲ್ಲಿರುತ್ತದೆ. ಹಾಡಿಗೆ ಆರ್ಭಟವೆಂಬ ಒಂದು ಆಯಾಮವೂ ಇದೆ ಎಂಬುದನ್ನು ನುಸ್ರತ್ಗೆ ಮುಂಚೆ ಹಲವು ಖವ್ವಾಲಿ ಕಲಾವಿದರು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಆದರೆ, ಆರ್ಭಟ ಸ್ವರೂಪದ ಹಾಡಿಗೆ ಪೂರ್ವ ಪಶ್ಚಿಮಗಳ ಸಂಗೀತಾಭಿಮಾನಿಗಳಿಂದ ಮನ್ನಣೆ ಕೊಡಿಸಿದ ಶ್ರೇಯ ನುಸ್ರತ್ ಫತೇಹ್ ಅಲಿ ಖಾನ್ರಿಗೆ ಸಲ್ಲುತ್ತದೆ. ಉಪಭೂಖಂಡದಲ್ಲಂತೂ ನುಸ್ರತ್ರಿಗೆ ಕೋಟ್ಯಂತರ ಅಭಿಮಾನಿಗಳು ಮೊದಲೇ ಇದ್ದರು. ಅವರ ಬದುಕಿನ ಕೊನೆಯ ದಶಕದಲ್ಲಿ ಯುರೋಪಿಯನ್ ದೇಶಗಳಲ್ಲಿ ಮತ್ತು ಅಮೆರಿಕದಲ್ಲಿ ಅವರ ‘ಲೈವ್ ಕನ್ಸರ್ಟ್’ ಗಳು ನಡೆದಾಗ ಅಲ್ಲೂ ಭಾರೀ ಸಂಖ್ಯೆಯಲ್ಲಿ ಶ್ರೋತೃಗಳು ಅವರ ಆರ್ಭಟದ ಅಭಿಮಾನಿಗಳಾದರು. ಸಂಗೀತ ಪರಂಪರೆಯಲ್ಲಿ 600 ವರ್ಷಗಳ ದೀರ್ಘ ಪರಂಪರೆ ಇರುವ ‘ಪಾಟಿಯಾಲಾ ಘರಾನಾ’ ವಂಶಸ್ಥರಾಗಿದ್ದ ನುಸ್ರತ್ ಸಾಹೇಬರು ಹಾಡಲು ಆರಿಸಿಕೊಂಡ ಗಾನಗಳ ವೈವಿಧ್ಯ ಗಮನಾರ್ಹವಾಗಿತ್ತು. ಕೇವಲ ಮನರಂಜನೆ ಒದಗಿಸುವ ಕಮರ್ಷಿಯಲ್ ಗಾನಗಳು, ಪ್ರೇಮಗೀತೆಗಳು, ಭಗ್ನ ಪ್ರೇಮಿಯ ನೋವನ್ನು ವರ್ಣಿಸುವ ಕವಿತೆಗಳು, ಆಧ್ಯಾತ್ಮಿಕ ಸ್ಫೂರ್ತಿ ತುಂಬುವ ಸೂಫಿ ಹಾಡುಗಳು, ಮಹಾಪುರುಷರ ಮಹಿಮೆ ವರ್ಣಿಸುವ ಕವಿತೆಗಳು, ಪ್ರವಾದಿವರ್ಯರನ್ನು (ಸ) ಪರಿಚಯಿಸುವ ‘ನಅತ್’ಗಳು, ಇಮಾಮ್ ಹುಸೈನ್(ರ) ಮತ್ತವರ ಕುಟುಂಬದ ತ್ಯಾಗದ ವೃತ್ತಾಂತ - ಹೀಗೆ ತೀರಾ ಭಿನ್ನ ವಿಷಯಗಳನ್ನು ಆವರಿಸುವ ರಚನೆಗಳನ್ನು ಅವರು ಆಯ್ದುಕೊಳ್ಳುತ್ತಿದ್ದರು. ಖವ್ವಾಲಿ ಕಾರ್ಯಕ್ರಮಗಳಲ್ಲಿ ನುಸ್ರತ್ ಹಾಡತೊಡಗಿದರೆ ಅವರ ನೇರ ಶ್ರೋತೃಗಳು ಸಂಪೂರ್ಣ ಮಂತ್ರಮುಗ್ಧರಾಗಿ ಮೈಮರೆಯುತ್ತಿದ್ದರು. ಅವರು ಹಾಡಿದ ಹಲವು ಹಾಡುಗಳು ಜಾಗತಿಕ ಮಟ್ಟದಲ್ಲಿ ಅಪಾರ ಜನಪ್ರಿಯತೆ ಪಡೆದಿವೆ. ಆ ಪೈಕಿ ಅತ್ಯಂತ ಜನಪ್ರಿಯ ಎನ್ನಬಹುದಾದ ಹಾಡುಗಳ ಸಾಲಲ್ಲಿದೆ - ‘ತುಮ್ ಎಕ್ ಗೋರಖ್ ಧಂದಾ ಹೋ’. ಸುಮಾರು 30 ನಿಮಿಷದಷ್ಟು ದೀರ್ಘವಾಗಿರುವ ಈ ಹಾಡನ್ನು ಕೇವಲ ಯೂಟ್ಯೂಬ್ನಲ್ಲೇ ಹಲವು ಕೋಟಿ ಮಂದಿ ವೀಕ್ಷಿಸಿದ್ದಾರೆ. ‘ತುಮ್ ಏಕ್ ಗೋರಖ್ ದಂಧಾ ಹೋ’ ಹಾಡನ್ನು ರಚಿಸಿದವರು ಮುಹಮ್ಮದ್ ಸಿದ್ದೀಕ್ (1947-2010). ಆದರೆ ಅವರು ‘ನಾಝ್ ಖಿಯಾಲ್ವಿ’ ಎಂಬ ತಮ್ಮ ಕಾವ್ಯನಾಮದಿಂದಲೇ ಹೆಚ್ಚು ಪರಿಚಿತರು. ಇದರ ಧಾಟಿ ಅಲ್ಲಾಮಾ ಸರ್. ಮುಹಮ್ಮದ್ ಇಕ್ಬಾಲ್ ಅವರ ಜಗದ್ವಿಖ್ಯಾತ ‘ಶಿಕ್ವಾ’ ಹಾಡಿಗೆ ಹೋಲುತ್ತದೆ. ವಿವಿಧ ಸನ್ನಿವೇಶಗಳಲ್ಲಿ ಒಬ್ಬ ಭಾವುಕ, ದೇವಭಕ್ತ, ಸತ್ಯಶೋಧಕನ ಮನದಲ್ಲಿ ಮೂಡುವ ಆವೇಶ, ಸಂದೇಹ, ಆಕ್ರೋಶ, ಗೊಂದಲ, ಹತಾಶೆ ಇತ್ಯಾದಿ ವಿಭಿನ್ನ ಭಾವನೆಗಳಿಗೆ ಇಲ್ಲಿ ಅಭಿವ್ಯಕ್ತಿ ನೀಡಲಾಗಿದೆ. ದೇವರ ಸ್ವರೂಪ ಮತ್ತು ಅವನ ಕ್ರಮಗಳ ಕುರಿತು ಮುಗ್ಧಮನದಲ್ಲಿ ಮೂಡುವ ಪ್ರಶ್ನೆಗಳ ಸರಮಾಲೆಗೆ ಇಲ್ಲಿ ಧ್ವನಿ ಒದಗಿಸಲಾಗಿದೆ. ತೀಕ್ಷ್ಣ ಪ್ರಶ್ನೆಗಳ ಈ ದೀರ್ಘ ಸರಣಿ ಅಂತಿಮವಾಗಿ ದೇವರ ಮಹಿಮೆ ಮತ್ತು ಅನನ್ಯತೆಯನ್ನು ಅಂಗೀಕರಿಸುವುದರೊಂದಿಗೆ ಕೊನೆಗೊಳ್ಳುತ್ತದೆ. ಈ ಹಾಡಿನ ಸವಿಸ್ತಾರ ವ್ಯಾಖ್ಯಾನವನ್ನು ಬಯಸುವ ಕೆಲವು ಸಂಕೀರ್ಣ ಭಾಗಗಳನ್ನು ಬಿಟ್ಟು ಉಳಿದ ಭಾಗಗಳ ಸರಳ ಭಾವಾನುವಾದ ಇಲ್ಲಿದೆ:
ನಿನ್ನನ್ನು ನಾನು ಇಲ್ಲೆಲ್ಲಾ ಹುಡುಕಿದೆ, ಹುಡುಕುತ್ತಾ ಎಲ್ಲೆಲ್ಲಿ ತಲುಪಿದೆ
ನಿನ್ನ ದರ್ಶನ ಬಯಸಿ ಎಲ್ಲೆಲ್ಲಿಗೆ ತಲುಪಿದೆ
ಬಡಪಾಯಿಗಳು ನಿನ್ನನರಸುತಾ ಅಳಿದು ಹೋದರು, ದೀವಾಳಿಯಾದರು,
ಆದರೆ
ನಿನ್ನ ಯಾವ ಸುಳಿವೂ ಈ ತನಕ ದಕ್ಕಿಲ್ಲ ಯಾರಿಗೂ
ನೀನಿಲ್ಲವೆಂಬುದೂ ನಿಜ ಎಲ್ಲೆಲ್ಲೂ ನೀನಿರುವೆ ಎಂಬುದೂ ನಿಜ
ಭಾರೀ ಕಠಿಣ ಕಗ್ಗಂಟು ನೀನು
ಕಣಕಣದಲ್ಲೂ ಎಷ್ಟೊಂದು ವೈಭವದೊಂದಿಗೆ ಮೊೆಯುತ್ತಿರುವೆ ನೀನು !
ಇಷ್ಟಿದ್ದೂ ಬುದ್ಧಿ ಬೆರಗಾಗಿದೆ, ಹೇಗಿರುವೆ ನೀನು, ಏನು ನೀನೆಂದು,
ಭಾರೀ ಕಠಿಣ ಕಗ್ಗಂಟು ನೀನು
ನಿನಗಾಗಿ ನಾನು ಹುಡುಕಾಡಿದೆ ಮಂದಿರ-ಮಸೀದಿಗಳಲ್ಲಿ, ನೀನು ಸಿಗಲೊಲ್ಲೆ
ಆದರೆ ನನ್ನ ಹೃದಯದಲ್ಲಿ ಮಾತ್ರ ನೀನು ವಿಜೃಂಭಿಸುವುದನ್ನು ನಾನು ಕಂಡಿರುವೆ
ಭಾರೀ ಕಠಿಣ ಕಗ್ಗಂಟು ನೀನು
ಎಷ್ಟು ಹುಡುಕಿದರೂ ಸಿಗಲಿಲ್ಲ ನೀನು, ಎಷ್ಟು ಹುಡುಕಿದರೂ ಸಿಗಲಾರೆ ನೀನು
ಆದರೂ ಇದೆಂತಹ ತಮಾಶೆ! ನಾವೆಲ್ಲಿಯೋ, ಅಲ್ಲೇ ಇರುವೆ ನೀನು
ಭಾರೀ ಕಠಿಣ ಕಗ್ಗಂಟು ನೀನು
ನಿನ್ನೊಬ್ಬನ ಬಿಟ್ಟರೆ ಇನ್ನೊಬ್ಬನು ಇಲ್ಲವೇ ಇಲ್ಲವೆಂದ ಮೇಲೆ
ನೀನು ಅವಿತಿರುವುದೇಕೆ ? ನನಗೆ ಅರ್ಥವಾಗುತ್ತಿಲ್ಲ,
ಭಾರೀ ಕಠಿಣ ಕಗ್ಗಂಟು ನೀನು
ಮಂದಿರ- ಮಸೀದಿಗಳಲ್ಲಿ ಮೊಯುತ್ತಿರುವುದು ನಿನ್ನದೇ ಕಲಾತ್ಮಕ ವೈಭವ
ಎರಡು ಕಡೆಯೂ ಬೆಳಗುತ್ತಿರುವುದು ನಿನ್ನ ಒಂದೇ ಮುಖದ ಬೆಳಕು
ಭಾರೀ ಕಠಿಣ ಕಗ್ಗಂಟು ನೀನು
ನಿನ್ನ ಪ್ರೀತಿಯಲಿ ಕಳೆದು ಹೋದವನು
ಏನಾದರೂ ದಕ್ಕಿರುವುದು ಆ ಕಳೆದು ಹೋದವನಿಗೆ ಮಾತ್ರ.
ವಿಗ್ರಹಾಲಯದಲ್ಲಾಗಲಿ, ಕಾಬಾದಲ್ಲಾಗಲಿ ಸಿಗದ ನೀನು
ಭಗ್ನ ಹೃದಯದಲ್ಲಿ ಮಾತ್ರ ಸಿಕ್ಕಿರುವೆ.
ಶೂನ್ಯನಾಗಿ ಎಲ್ಲೋ ನೀನು ಅವಿತಿರುವೆ
ಮತ್ತೆಲ್ಲೋ ನೀನು, ಇರುವವನಾಗಿ ಕಂಡು ಬರುವೆ
ನೀನಿಲ್ಲವೆಂದರೆ ಮತ್ತೆಲ್ಲಿದೆ ನಿರಾಕರಣೆಯ ಔಚಿತ್ಯ?
ನಿರಾಕರಣೆ ಕೂಡಾ ನಿನ್ನ ಅಸ್ತಿತ್ವದ ಸೂಚನೆಯಾಗಿದೆ
ನಾನು ನನ್ನದೆನ್ನುವ ಅಸ್ತಿತ್ವ
ಅದು ನೀನಲ್ಲವಾದರೆ ಮತ್ತೆ ಏನದು?
ಚಿಂತನೆಗೆ ನೀನು ನಿಲುಕದಿದ್ದರೆ
ಮತ್ತೆ ನೀನು ದೇವರೆಂದು ನನಗೆ ತಿಳಿಯುವುದೆಂತು ?
ಭಾರೀ ಕಠಿಣ ಕಗ್ಗಂಟು ನೀನು
ಯಾರು ನೀನು, ಏನು ನೀನು ಎಂದು ಬೆರಗಾಗಿದ್ದೇನೆ
ಕೈಗೆ ಸಿಕ್ಕರೆ ವಿಗ್ರಹ, ಸಿಗದಿದ್ದರೆ ದೇವರು ನೀನು
ಭಾರೀ ಕಠಿಣ ಕಗ್ಗಂಟು ನೀನು
ಬುದ್ಧಿಗೆ ನಿಲುಕುವವನು ನಿಸ್ಸೀಮನಾಗಿರಲು ಹೇಗೆ ಸಾಧ್ಯ?
ಅರ್ಥವಾಗಿ ಬಿಟ್ಟವನು ದೇವರಾಗಿರಲು ಹೇಗೆ ಸಾಧ್ಯ?
ಭಾರೀ ಕಠಿಣ ಕಗ್ಗಂಟು ನೀನು
ತತ್ವಶಾಸ್ತ್ರ ಪ್ರವೀಣನಿಗೆ ದೇವರು ವಾದದಲ್ಲಿ ಸಿಗುವುದಿಲ್ಲ
ಗಂಟು ಬಿಡಿಸಲು ಹೆಣಗುತ್ತಿದ್ದಾನೆ, ದಾರದ ತುದಿಯೇ ಸಿಗುತ್ತಿಲ್ಲ
ಭಾರೀ ಕಠಿಣ ಕಗ್ಗಂಟು ನೀನು
ಅನಿಕೇತನವೇ ನಿನ್ನ ವಿಳಾಸವೆಂದು ಜನರಿಗೆಲ್ಲ ಹೇಳಿರುವೆ ನೀನು
ಆದರೂ ಇದೆಂತಹ ವಿಸ್ಮಯ, ಭಗ್ನಹೃದಯದ ನಿವಾಸಿ ನೀನು
ಭಾರೀ ಕಠಿಣ ಕಗ್ಗಂಟು ನೀನು
ನೀನಲ್ಲದೆ ಬೇರಾರೂ ಅಸ್ತಿತ್ವದಲ್ಲೇ ಇಲ್ಲವೆಂದ ಮೇಲೆ
ದೇವರೇ, ಇಲ್ಲಿ ಇಷ್ಟೆಲ್ಲಾ ಕೋಲಾಹಲ, ಏನರ್ಥ?
ಭಾರೀ ಕಠಿಣ ಕಗ್ಗಂಟು ನೀನು
ನೀನು ಅಡಗುವುದೂ ಇಲ್ಲ, ಸ್ಪಷ್ಟವಾಗಿ ಪ್ರಕಟನಾಗುವುದೂ ಇಲ್ಲ,
ವೈಭವ ಮೊದು ವೈಭವವನು ಮರೆ ಮಾಡುವವನು ನೀನು
ಮಂದಿರ-ಮಸೀದಿಗಳ ವಿವಾದವನು ಕೊನೆಗೊಳಿಸುವುದಿಲ್ಲ ನೀನು
ವಾಸ್ತವ ಏನೆಂಬುದನ್ನು ತಿಳಿಸುವುದಿಲ್ಲ ನೀನು
ಅಚ್ಚರಿಯಾಗುತ್ತಿದೆ, ನನ್ನ ಮನದಲ್ಲಿ ನೀನು ನೆಲೆಸಿರುವುದು ಹೇಗೆಂದು
ನಿನ್ನನ್ನು ಒಳಗೊಳ್ಳಲು ಇಹ - ಪರ ಎಂಬೆರಡೂ ಲೋಕಗಳಿಗೆ ಸಾಧ್ಯವಿಲ್ಲದಿರುವಾಗ
ಈ ಪೂಜಾಲಯ, ಮಸೀದಿ, ಇಗರ್ಜಿ, ಮಂದಿರಗಳೆಲ್ಲಾ ಏಕೆ?
ನೀನು ಒಂದೆಡೆ ನೆಲೆಸದವನು, ಆದ್ದರಿಂದಲೇ ಏನನ್ನೂ ತಿಳಿಸಲಾರೆ ನೀನು
ಭಾರೀ ಕಠಿಣ ಕಗ್ಗಂಟು
ನೀನು ನನ್ನ ಮನದಲ್ಲಿ ಅಚ್ಚರಿ ಇಲ್ಲ, ವಿಚಿತ್ರ ಭಾವವೊಂದಿದೆ
ತೀರಾ ಅಸ್ಪಷ್ಟ ಚಿತ್ರವೊಂದನ್ನು ಬಿಡಿಸಿರುವೆ ನೀನು
ಸಂಗತಿಯೇನೆಂಬುದು ಕಿಂಚಿತ್ತೂ ಹೊಳೆಯುತ್ತಿಲ್ಲ.
ಆದಿಯಿಂದಲೇ ನೀನು ಈ ಆಟ ಆಡುತ್ತಿರುವೆಯೇನು?
ಆತ್ಮವನ್ನು ಶರೀರವೆಂಬ ಪಂಜರದ ಕೈದಿಯಾಗಿಸಿರುವೆ
ಅದರ ಮೇಲೆ ಮತ್ತೆ ಮರಣದ ಕಾವಲು ಕೂರಿಸಿರುವೆ ನೀನು
ಯೋಜನೆಗಳ ಪಕ್ಷಿಯನ್ನು ಎತ್ತರೆತ್ತರಕ್ಕೆ ಹಾರಲು ಬಿಟ್ಟಿರುವೆ,
ಜೊತೆಗೆ, ವಿಧಿ ಎಂಬ ಜಾಲವನ್ನು ಎಲ್ಲೆಡೆ ಹರಡಿರುವೆ ನೀನು
ಯುಗಯುಗಾಂತರಗಳಿಂದ ಇಹ-ಪರಗಳನ್ನು ಶೃಂಗರಿಸಿಟ್ಟಿರುವೆ,
ಜೊತೆಗೆ, ಎಲ್ಲವನು ಲಯಗೊಳಿಸುವ ಯೋಜನೆಯನ್ನೂ ಸಿದ್ಧವಿಟ್ಟಿರುವೆ ನೀನು
ಅನಿಕೇತನ ನಾನೆಂದು ಹೇಳಿಕೊಳ್ಳುವ
ನೀನು ನಾವು ತುಂಬಾ ನಿಕಟವಿದ್ದೇವೆ
ಎಂಬ ಸಂದೇಶವನ್ನೂ ಸಾರಿರುವೆ ನೀನು
(ಕುರ್ ಆನ್-50:16)
ಇದು ಒಳಿತು, ಅದು ಕೆಡುಕು, ಇದು ನರಕ, ಅದು ಸ್ವರ್ಗ
ಏನಡಗಿದೆ ಈ ಅಲ್ಲಟ ಪಲ್ಲಟಗಳಲ್ಲಿ ? ತಿಳಿಸಿಬಿಡು ನೀನು
ತಪ್ಪು ಆದಮ್ ರದ್ದು ಮತ್ತು ಶಿಕ್ಷೆ ಅವರ ಸಂತತಿಗೆ
ನ್ಯಾಯ-ನೀತಿಗೆ ಏನನ್ನು ಮಾನದಂಡವಾಗಿಸಿರುವೆ ನೀನು !
ಭೂಮಿಯಲ್ಲಿ ಮಾನವನಿಗೆ ನಿನ್ನ ಪ್ರತಿನಿಧಿಯ ಸ್ಥಾನ ನೀಡಿ
ಲೋಕದಲ್ಲೊಂದು ದೊಡ್ಡ ತಮಾಷೆಯನ್ನೇ ಏರ್ಪಡಿಸಿರುವೆ ನೀನು
ನಿನ್ನನು ಗುರುತಿಸಲೆಂದು ಎಲ್ಲರನ್ನು ಸೃಷ್ಟಿಸಿರುವೆ ನೀನು
ಆದರೆ ಸ್ವತಃ ನಿನ್ನನ್ನು ಎಲ್ಲರ ಕಣ್ಣಿಂದ ಮರೆಯಾಗಿಟ್ಟಿರುವೆ ನೀನು
ಭಾರೀ ಕಠಿಣ ಕಗ್ಗಂಟು ನೀನು
ನಿತ್ಯ ಹೊಸ ಚಿತ್ರಗಳನ್ನು ಬಿಡಿಸಿ, ಅಳಿಸಿ ಹಾಕುವೆ ನೀನು
ಯಾವ ಮೋಹದ ತಪ್ಪಿಗೆ ಈ ರೀತಿ ದಂಡಿಸುತ್ತಿರುವೆ ನೀನು ?
ಮರಳಕಣವನ್ನು ವಜ್ರದ ಗಣಿಯಾಗಿಸಿದ್ದುಂಟು ನೀನು
ವಜ್ರವನ್ನು ಮಣ್ಣಾಗಿಸಿ ಬಿಟ್ಟದ್ದೂ ಉಂಟು ನೀನು
ತೂರ್ ಬೆಟ್ಟದ ಬಳಿ ಒಬ್ಬರು ನಿನ್ನನ್ನು ಕಾಣಲು ಕಾತರ ಪಟ್ಟಾಗ
ದಿವ್ಯ ತೇಜಸ್ಸಿನಿಂದ ತೂರ್ ಬೆಟ್ಟವನ್ನೇ ಸುಟ್ಟು ಬಿಟ್ಟೆ ನೀನು
ನಿನ್ನ ಆತ್ಮೀಯನನ್ನು ನಮ್ರೂದನ ಅಗ್ನಿಕುಂಡಕ್ಕೆ ಬೀಳಿಸಿದೆ ನೀನು
ಮತ್ತೆ ಅದೇ ಅಗ್ನಿಯನ್ನು ಉದ್ಯಾನವಾಗಿಸಿ ಬಿಟ್ಟೆ ನೀನು
ಕನ್ಆನ್ನ ಚಂದಿರ (ಯೂಸುಫ್)ರನ್ನು ಪಾಳು ಬಾವಿಗೆಸೆದೆ ನೀನು
ಯಅಕೂಬರ ಕಣ್ಣನ್ನು ಕುರುಡಾಗಿಸಿ ಬಿಟ್ಟೆ ನೀನು
ಯೂಸುಫ್ರನ್ನು ಈಜಿಪ್ತ್ನ ನಡುಪೇಟೆಯಲ್ಲಿ ಮಾರಿದ್ದಾಯಿತು
ಕೊನೆಗೆ ಅವರಿಗೆ ಈಜಿಪ್ತ್ನ ಆಡಳಿತವನ್ನೊಪ್ಪಿಸಿದೆ ನೀನು
ನೀನಿಚ್ಛಿಸಿದರೆ ನಿನ್ನಾಪ್ತನನ್ನು ದಿವ್ಯ ಸಿಂಹಾಸನದ ಬಳಿಗೆ ಕರೆಸಿಕೊಳ್ಳುವೆ ನೀನು
ಒಂದೇ ಇರುಳಲ್ಲಿ ವಿಶ್ವ ಸಾಮ್ರಾಜ್ಯದ ‘ಮೀರಾಜ್’ ಯಾತ್ರೆ ಮಾಡಿಸುವೆ ನೀನು
ಭಾರೀ ಕಠಿಣ ಕಗ್ಗಂಟು
ನೀನು ನಿನ್ನನು ಮರೆಮಾಡುವ ತೆರೆಯೂ ನೀನೇ
ಭಾರೀ ಕಠಿಣ ಕಗ್ಗಂಟು ನೀನು
ಅಕ್ರಮಿಯ ಭಾಗ್ಯದಲ್ಲಿ ಅನ್ಯಾಯಗಳೇ ತುಂಬಿರುತ್ತವೆ
ಆಕ್ರಮಿತನ ಪಾಲಿಗೆ ನೆಮ್ಮದಿಯೂ ಇಲ್ಲ, ಸಾಂತ್ವನವೂ ಇಲ್ಲ
ನಿನ್ನೆ ಯಾರ ತಲೆಮೇಲೆ ರಾಜ ಕಿರೀಟ ಮೊದಿತ್ತೋ
ಇಂದು ಅವನ ಕೈಯಲ್ಲಿದೆ ಭಿಕ್ಷಾಪಾತ್ರೆ
ಹೀಗೆಲ್ಲಾ ಏಕಾಗುತ್ತದೆ ? ಎಂದು ಕೇಳಿದರೆ ನಾನು
ಯಾರಿಗೂ ಭೇದಿಸಲಾಗದ ರಹಸ್ಯ ಇದು ಎನ್ನುವೆ ನೀನು
ಭಾರೀ ಕಠಿಣ ಕಗ್ಗಂಟು ನೀನು
ಅಚ್ಚರಿಯ ಒಂದು ಲೋಕ ನೀನು
ಭಾರೀ ಕಠಿಣ ಕಗ್ಗಂಟು ನೀನು
ಎಲ್ಲೆಲ್ಲೂ ನೀನಿರುವೆ ಆದರೆ ನಿನಗೊಂದು ವಿಳಾಸವಿಲ್ಲ
ನಿನ್ನ ಹೆಸರು ಕೇಳಿರುವೆ ಆದರೆ ಸುಳಿವು ಸಿಕ್ಕಿಲ್ಲ
ಭಾರೀ ಕಠಿಣ ಕಗ್ಗಂಟು ನೀನು
ಅದೆಷ್ಟು ನಿರಪೇಕ್ಷನು ನೀನು !
ಒಂದು ಬಹು ದೀರ್ಘ ಕಥೆ ನೀನು !
ಭಾರೀ ಕಠಿಣ ಕಗ್ಗಂಟು ನೀನು
ಸತ್ಯಶೋಧದ ಹಾದಿಯಲ್ಲಿ ಎಲ್ಲೆಲ್ಲೂ ತೊಡಕುಗಳನ್ನೇ ಕಾಣುತ್ತೇನೆ
ವಾಸ್ತವ ಮತ್ತು ಚಿಂತನೆಗಳ ನಡುವೆ ಘರ್ಷಣೆಯನ್ನೇ ಕಾಣುತ್ತೇನೆ
ಚಿಂತಾಕ್ರಾಂತನಾಗಿ ತಲೆ ಹಿಡಿದು ಕುಳಿತು ಬಿಡುತ್ತೇನೆ
ಗಮನವಿಟ್ಟು ಈ ಜಗದ ವಿಸ್ಮಯಗಳನ್ನು ಕಂಡಾಗಲೆಲ್ಲಾ ಚಕಿತನಾಗುತ್ತೇನೆ.
ಒಂದೇ ಮಣ್ಣಿನಲ್ಲಿ ಪ್ರಕೃತಿಯ ಇಷ್ಟೊಂದು ವೈರುಧ್ಯಗಳು
ಒಂದೇ ಅಂಗಳದಲ್ಲಿ ಎಷ್ಟೊಂದು ಗಡಿ-ಬೇಲಿಗಳಿವೆ, ನೋಡುತ್ತಿದ್ದೇನೆ
ಒಂದೆಡೆ ಸಂಕಷ್ಟಗಳ ವಸಂತ ಮೊಯುತ್ತಿದೆ
ಇನ್ನೊಂದೆಡೆ ಸುರಿಯುತ್ತಿರುವ ಶ್ರಾವಣದ ಅನುಗ್ರಹ ನೋಡುತ್ತಿದ್ದೇನೆ
ಒಂದೆಡೆ ಅಬ್ಬರಿಸುವ ಕಡಲು, ಇನ್ನೊಂದೆಡೆ ಪ್ರಶಾಂತ ಪರ್ವತ
ಕಾನನ, ಮರುಭೂಮಿ ಮತ್ತು ಉದ್ಯಾನಗಳನ್ನೂ ಕಾಣುತ್ತಿದ್ದೇನೆ
ನಿನ್ನ ಈ ವಿತರಣೆಯ ವೈಖರಿ ಕಂಡು ಕಣ್ಣಿಂದ ಉದುರುತ್ತಿವೆ ನೆತ್ತರ ಹನಿಗಳು
ಇಲ್ಲಿ ಕೆಲವರನ್ನು ಧನವಂತರಾಗಿ ಮತ್ತೆ ಕೆಲವರನ್ನು ನಿರ್ಧನರಾಗಿ ಕಾಣುತ್ತಿದ್ದೇನೆ
ಹಗಲ ಬಳಿ ಕೇವಲ ಒಂದು ಉರಿಯುವ ಸೂರ್ಯ
ಇರುಳಿನ ಹಣೆಯಲ್ಲಿ ಮಿನುಗುವ ತಾರೆಗಳ ಶೃಂಗಾರ ಕಾಣುತ್ತಿದ್ದೇನೆ
ಕೆಲವೆಡೆ ಬಾಡಿ ಮುದುಡಿವೆ ಸತ್ಯದ ಹೂವುಗಳು
ಮತ್ತೆ ಕೆಲವೆಡೆ ಸುಳ್ಳಿನ ಮುಳ್ಳಲ್ಲೂ ಯವ್ವನ ಕಂಡಿದ್ದೇನೆ
ಇರುಳೆಂದರೇನು, ಬೆಳಗೆಂದರೇನು?
ಬೆಳಕೆಂದರೇನು, ಕತ್ತಲೆಂದರೇನು?
ನಾನೂ ನಿನ್ನ ಪ್ರತಿನಿಧಿಯೇ ತಾನೇ ?
ನಿನ್ನದೇನಿದೆ ? ಎಂದೇಕೆ ಕೇಳುವೆ ನೀನು?
ಭಾರೀ ಕಠಿಣ ಕಗ್ಗಂಟು ನೀನು
ನೋಡುವವನು ನಿನ್ನನ್ನು ನೋಡುವುದಾದಾರೂ ಹೇಗೆ?
ಎಲ್ಲ ಬಗೆಯಲ್ಲೂ ನಿನ್ನನ್ನು ಮರೆಯಾಗಿಸಿರುವೆ ನೀನು
ಭಾರೀ ಕಠಿಣ ಕಗ್ಗಂಟು ನೀನು
ಈ ಮಸೀದಿ, ಮಂದಿರ, ಮಧುಶಾಲೆಗಳು
ಕೆಲವರು ಇದನ್ನು ನಂಬಿದರೆ ಕೆಲವರು ಅದನ್ನು ನಂಬುವರು
ಪ್ರಿಯನೇ, ಎಲ್ಲವೂ ನಿನಗೆ ಸೇರಿವೆ
ಕೆಲವರು ಹಾಗೆಂದು ನಂಬಿದರೆ ಕೆಲವರು ಹೀಗೆಂದು ನಂಬುವರು
ನೀನೊಬ್ಬನೆಂದು ಹಲವರು ಒಪ್ಪುವರು
ಹಲವರು ನಿನ್ನನು ನಿರಾಕರಿಸುವರು
ಸತ್ಯವೇನೆಂಬುದು ನಿನಗೇ ಗೊತ್ತು
ಕೆಲವರು ಹಾಗೆ ನಂಬಿದರೆ ಕೆಲವರು ಹೀಗೆ ನಂಬುವರು
ಅವರೆಲ್ಲರನ್ನು ಒಂದೇ ಸೃಷ್ಟಿಯಲಿ ಸೇರಿಸುವೆ ನೀನು
ಎಲ್ಲರಿಂದ ಮುಕ್ತನಾಗಿ ಒಂಟಿಯಾಗಿರುವೆ ನೀನು
ಇಬ್ಬರೂ ನಿನ್ನ ಮೈಮರೆತ ಭಕ್ತರೇ
ಒಬ್ಬರು ಅದನ್ನು ನಂಬಿದರೆ ಇನ್ನೊಬ್ಬರು ಇದನ್ನು ನಂಬಿರುವರು
ಎಲ್ಲರೂ ನಿನ್ನ ನಾಮದ ಅಭಿಮಾನಿಗಳು
ಮತ್ತೇಕೆ ಈ ರಾಮ ರಹೀಮರ ಜಗಳ ?
ಭಾರೀ ಕಠಿಣ ಕಗ್ಗಂಟು ನೀನು
ಮಂದಿರದಲೂ ನೀನೇ, ಮಸೀದಿಯಲ್ಲೂ ನೀನೇ, ಬಾನಲೂ ನೀನೇ,
ಭುವಿಯಲೂ ನೀನೇ
ಯಾರೆಷ್ಟು ದೂರ ತಲುಪಬಲ್ಲರೋ ಅಲ್ಲಿ ಅವರಿಗೆ ಸಿಗುವೆ ನೀನು
ಭಾರೀ ಕಠಿಣ ಕಗ್ಗಂಟು ನೀನು
ಎಲ್ಲ ಬಣ್ಣಗಳಲ್ಲೂ ಅನುಪಮನು ನೀನು
ಭಾರೀ ಕಠಿಣ ಕಗ್ಗಂಟು ನೀನು
ಬಣ್ಣ ಮತ್ತು ಕಂಪಿನ ಲೋಕದಲಿ ಎಲ್ಲ ಶೋಧಗಳ ಗುರಿಯು ನೀನು
ಉಸಿರು ಉಸಿರಲ್ಲಿ ನೀನು, ನಾಲ್ಕೂ ದಿಕ್ಕುಗಳಲ್ಲಿ ವೈಭವಿಸುತ್ತಿರುವೆ ನೀನು
ಎಲ್ಲೆಂದರಲ್ಲಿ ಇರುವೆ ನೀನು, ಯಾರೂ ಇಲ್ಲ ನಿನ್ನ ಹೊರತು
ಬಹಳ ಸುಂದರನು ನೀನು, ಮನಮೋಹಕನು ನೀನು
ಬಾನಲೋಕದ ಶೋಭೆ, ಭೂಲೋಕದ ಮಾನ ನೀನು
ಉಭಯ ಲೋಕಗಳ ಶ್ರದ್ಧೆಯ ಸಾರ ನೀನು
ಕಣ್ಣುಗಳು ಕಣ್ಣೀರಲ್ಲಿ ಮಿಂದದ್ದಾಯಿತು
ಇನ್ನಾದರೂ ದಯಪಾಲಿಸು, ಕಿಂಚಿತ್ ದರ್ಶನವನು
ತೆರೆಮರೆಯಿಂದ ಹೊರಬಂದು ಕಣ್ಣಿಗೊಮ್ಮೆ ಕಾಣಿಸು
ಘಳಿಗೆಯ ಮಿಲನಕ್ಕೆ, ಕ್ಷಣಗಳ ಮಾತುಕತೆಗೆ ಪ್ರತ್ಯಕ್ಷನಾಗು ನೀನು
‘ನಾಜ್’ ಜಪಿಸುತ್ತಿರಲಿ ಅಲ್ಲಲ್ಲಿಯೂ, ಎಲ್ಲೆಲ್ಲಿಯೂ
ಇರುವವನು ಅವನೊಬ್ಬನೇ ಎಂದು, ಇಲ್ಲ ಅನ್ಯರಾರೂ ಎಂದು
ಅಲ್ಲಾಹೂ ಅಲ್ಲಾಹೂ ಅಲ್ಲಾಹೂ ಅಲ್ಲಾಹೂ ಎಂದು
► ನಾಝ್-ಕಾವ್ಯನಾಮ
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ