varthabharthi


ವಾರ್ತಾಭಾರತಿ 18ನೇ ವಾರ್ಷಿಕ ವಿಶೇಷಾಂಕ

ಕವನ

ವಾರ್ತಾ ಭಾರತಿ : 12 Jan, 2021
ಬಾಲ ಸುಬ್ರಹ್ಮಣ್ಯ ಕಂಜರ್ಪಣೆ

ಬಾಲ ಸುಬ್ರಹ್ಮಣ್ಯ ಕಂಜರ್ಪಣೆ

ಖ್ಯಾತ ವಕೀಲರಾಗಿರುವ ಬಾಲ ಸುಬ್ರಹ್ಮಣ್ಯ ಕಂಜರ್ಪಣೆ ಕವಿ ಮನಸ್ಸಿನ ಬರಹಗಾರರು. ವಿಮರ್ಶೆ, ಅಂಕಣ ಬರಹ, ರಾಜಕೀಯ ವಿಶ್ಲೇಷಣೆಗಳ ಮೂಲಕ ಈಗಾಗಲೇ ನಾಡಿನಾದ್ಯಂತ ಗುರುತಿಸಿಕೊಂಡಿರುವ ಕಂಜರ್ಪಣೆ ಕಾವ್ಯ ಕ್ಷೇತ್ರದಲ್ಲೂ ಕೈಯಾಡಿಸಿದವರು. ಸ್ವಯಂ ಪ್ರಭೆ, ಒಡೆದ ಪ್ರತಿಮೆಗಳು, ಗರುಡಾವತಾರ (ಮುದ್ದಣ ಕಾವ್ಯ ಪ್ರಶಸ್ತಿ ಪುರಸ್ಕೃತ) ಇವರ ಕವನಸಂಕಲನಗಳು. ‘ಅದೃಷ್ಟದ ಹುಡುಗಿ’ ಕಥಾಸಂಕಲನ. ಒಟ್ಟು 11 ಕೃತಿಗಳನ್ನು ನೀಡಿರುವ ಕಂಜರ್ಪಣೆ, ವರ್ತಮಾನದ ರಾಜಕೀಯ ಬೆಳವಣಿಗೆಗಳ ಕುರಿತಂತೆ ವಸ್ತುನಿಷ್ಠವಾಗಿ ಬರೆಯುತ್ತಿರುವ ಬೆರಳೆಣಿಕೆಯ ಲೇಖಕರಲ್ಲಿ ಒಬ್ಬರು.

ನೆರಳು

ಈ ನೆರಳು ನನ್ನದೇ, ನನ್ನ ಒಡಹುಟ್ಟು;

ನನ್ನ ಜೊತೆಗೇ ಬೆಳಕ ಕಂಡಿತು.

ಕಂಡದ್ದೆ ತಡ ನನ್ನ ಜೊತೆಗಂಟಿ ನಿಂತು

ನಿನ್ನಲ್ಲೆ ನಾನಿರುವೆನೆಂದಿತು.

ಒಂದೊಂದು ದಿಕ್ಕಿಂದ ಒಂದೊಂದು ಥರ ನನ್ನ ಕಾಣಿಸಿತು-ಅಲ್ಲ, ಕುಣಿಸಿತು;

ನಿರ್ಜೀವ ಭಾವಕ್ಕೆ ಜೀವ ಕೊಡುವವರಂತೆ

ಪರವಶದ ದೃಷ್ಟಿಯಲಿ ಕಾಡಿತು.

ಕೃತಿಗಿಂತಲೂ ದೊಡ್ಡ ಆಕೃತಿಯು ತಾನೆಂಬ

ಗರ್ವವನು ನನ್ನತ್ತ ಚಾಚಿತು;

ವಿಶ್ವರೂಪದ ದಿವ್ಯದರ್ಶನದ ಠೀವಿಯಲಿ

ನಿಶ್ಚಲದ ಚಲನೆಯನು ಬಾಚಿತು.

ಒಂದೊಂದು ಹೆಜ್ಜೆಗೂ ನೂರು ಕನಸನು ಬಿತ್ತಿ

ಅಸ್ಪಷ್ಟ ನೋವುಗಳ ಚುಚ್ಚಿತು;

ಯಾರೋ ಬಿಟ್ಟುಹೋದಂಥ ಮೊಟ್ಟೆಗಳ ಕಾವುಕೊಡುವವರಂತೆ ಮುಚ್ಚಿತು.

ಮಟಮಟಾ ಮಧ್ಯಾಹ್ನದಂತಿದ್ದ ದಣಿವನ್ನು

ಆರಿಸುವ ಭಂಗಿಯಲಿ ಮುಟ್ಟಿತು;

ಕಾಡಿ ಕದಡುವ ಬೆಳಕಿನೊಡನಾಟದಾಟದಲಿ

ನೋವಿರುವ ನಲಿವನ್ನು ಕೊಟ್ಟಿತು.

ಕತ್ತಲಾಯಿತು; ನಾಳೆ ಬೆಳಗಿಗೆಷ್ಟೋ ದೂರ,

ಇಲ್ಲಿದ್ದ ನೆರಳೆಲ್ಲಿ ಮಾಸಿತು?

ಅಡಗಿತೇ? ಇಲ್ಲ ಹುಡುಕೆಂದು ಹೇಳಿತೇ?

ಗುಟ್ಟಿನೊಳಗೇ ಇಟ್ಟು ಹೋಯಿತು. 

*********************************

ದೇವರು

ಮಗುವಿನಂತೆ ಮುಗ್ಧನಾಗಲಾರೆ;

ಹುಡುಗಾಟದಲ್ಲಿ ಅಮರನಾಗಲಾರೆ;

ಸಂ-ಸಾರ ಮಡಿಲಲ್ಲೇ ಮಾಗುವುದನ್ನು ನೋಡಲಾರೆ;

ನೋವನ್ನು ಊಹಿಸಲಾರೆ; ಅನುಭವಿಸಲಾರೆ;

ಅದಕ್ಕೇ ಮನುಷ್ಯನಾಗಲಾರೆ. ಹುಟ್ಟಿನ ಹೊತ್ತುಗೊತ್ತಿಲ್ಲದ, ಸದ್ಯಕ್ಕೆ ಸಾವಿಲ್ಲದ,

ಅತಂತ್ರ ದೇವರೇ,

ಅತ್ತು ನಿನಗೆಲ್ಲಿ ಗೊತ್ತು?

ಎಲ್ಲಿ ಒಮ್ಮೆಯಾದರೂ ಅಳು.

ಅತೃಪ್ತಿಯ ಅಮೂರ್ತವೇ

ವ್ರತಪಥದ ಸ್ವೀಕಾರದ ಹಾದಿಯನ್ನು ಬಿಡಲಾರದವನೇ

ನಮಸ್ಕರಿಸದವನೇ

ನರನಾಗುವ ವರ ಬೇಡದವನೇ,

ಕಾದು ನೋಡದ ಅಪಕ್ವನೇ,

ನೀನು ಮನುಷ್ಯನಾಗಲಾರೆ.

**********************************

ಮಿಡಿತೆಗೂ ಒಂದು ಕತೆ

ನಮ್ಮ ನಿಮ್ಮ ನಡುವೆ ಹಾರುವ ಸೂರ್ಯನ ಕುದುರೆಯಂತಿರುವ ಮಿಡಿತೆಗೂ ಒಂದು ಕತೆಯಿದೆ:

ಇದು ಟಿತೋನಿಯಸ್; ಒಮ್ಮೆ ಮನುಷ್ಯನಾಗಿದ್ದ; ಸ್ಪುರದ್ರೂಪಿ ಯುವಕ;

ನಾನು ನೀವು ನೋಡದ ಮುಂಜಾವಿನ ದೇವತೆ ಇಯೋಸ್:

ಸದಾ ಚಿರಯವ್ವನೆ.

ಕಂಡದ್ದೇ ಪ್ರೀತಿ ಆವರಿಸಿತು; ಎಲ್ಲ ಕಟ್ಟುಕತೆಗಳಂತೆ ಸುಖವಾಗಿ ಕಾಲಕಳೆದರು.

ಇಯೋಸ್ ಮುಂಜಾವಿನ ದೇವತೆ-ಬಿಸಿಲಾಗದು; ಅಲರಾಂ ಇಟ್ಟಂತೆ ಒಂದೇ ಕಾಲ; ವಯಸ್ಸಾಗದು.

ಟಿತೋನಿಯಸ್ ಮರ್ತ್ಯ-

ನಿನ್ನೆ ಇಂದಲ್ಲ, ಇಂದು ನಾಳೆಯಲ್ಲ;

ಸಾವಿನ ಅರುಣೋದಯದ ಮುದಿತನದ ನರೆನೆರಳು ಅವನ ಮೇಲೂ ಬಿತ್ತು.

ಚಿಂತೆಯ ಮಳೆಮೋಡದಂತೆ ಟಿತೋನಿಯಸ್ ಕಣ್ಣಂಚಿನಲ್ಲಿ ನೀರನ್ನಿಟ್ಟು ಇಯೋಸ್‌ಗೆ ಹೇಳಿದ: ಪ್ರಿಯೆ, ನನಗೂ ಕಲ್ಪಿಸು ನಿನ್ನಂತೆ ಮರಣವಿಲ್ಲದಂತೆ. ಅವಳೋ ಸೀಮಿತ ಶಕ್ತಿಯ ಅಪ್ಸರೆ;

ಬೇಡಿದಳು ಪರಮ ಶಕ್ತಿಯ ಜಿಯೂಸ್‌ನನ್ನು ?

ಆರ್ತತೆಯ ಪ್ರಾರ್ಥನೆ:

ನೀಡು ನನ್ನೀ ಅಮರಪ್ರೇಮಿಗೆ ಅಮರತ್ವ. ತಥಾಸ್ತು ಎಂದಿತು ಅಮರವಾಣಿ.

ಸಾವಿಲ್ಲದೇ ಕತೆ ಮುಗಿಯುವುದೆಂತು?

ಸಾವಲ್ಲದೇ ಕತೆಗೆ ಅಂತ್ಯವೆಂತು?

ಕೊನೆಯಿರಲಿ, ತಿರುವಾದರೂ ಎಲ್ಲಿ?

ಟಿತೋನಿಯಸ್ ಉಳಿದ; ನಿರಿಗಟ್ಟಿಯೂ ಬಾಳಿದ;

ಮುದಿತನ ಬಂದಿತು; ಶಕ್ತಿ ಕುಂದಿತು;

ಈಗಾತ ಸಾವಿಗೆ ಬಲಿಯಾಗದ ಮುದುಕ,

ಇನ್ನೊಬ್ಬರಿಗಷ್ಟೇ ಅಲ್ಲ, ತನಗೇ ಸಹ್ಯವಾಗದ ಜೀವ-ಜೀವನ.

ಪ್ರಿಯೆ ನನ್ನ ಕಾಪಾಡೆಂದ ಇಯೋಸ್‌ಗೆ;

ಆಕೆ ಅತ್ತಳು. ಶಾಪದಂತೆ ಕಾಡುವ ವರದಿಂದ ಯಾರೂ ಕಾಪಾಡರು. ಎಲ್ಲಿ ಜಿಯೂಸ್? ಎಲ್ಲಿ ಚಿರಯವ್ವನ? ಎಲ್ಲಿ ಶಾಶ್ವತ ಪ್ರಣಯ?

ಇದೀಗ ದ್ವಾ ಸುಪರ್ಣಾ ಕಾಲಕಳೆದು ಭಗ್ನವರ್ಣ;

ಸಾವು ಸಂಪೂರ್ಣವಾದ ಮನುಷ್ಯರಿಗೆ ಮಾತ್ರ

ಜರೆ ಅಪೂರ್ಣ.

ಹೇಗೆ ಜಯಿಸಲಿ ಈ ಸೋತ ಬದುಕನ್ನು?

ಹೇಗೆ ತೀರಿಸಲಿ ಈ ಸಾವಿನ ಸಾಲವನ್ನು?

ಇಯೋಸ್‌ಳ ಮಂತ್ರ-ಭಕ್ತಿಗಿತ್ತು ಒಂದಷ್ಟು ಶಕ್ತಿ;

ರೂಪಬದಲಾವಣೆಯ ಅಲ್ಪಯುಕ್ತಿ. ಆಕೆ ಅವನನ್ನು ರೂಪಾಂತರಿಸಿದ್ದಾಳೆ, ತನ್ನ ಪ್ರೀತಿಯ ಹಸಿರಾಗಿಸಿದ್ದಾಳೆ, ಮಿಡಿತೆಯೆಂಬ ಹೊಸ ಹೆಸರಲ್ಲಿ ಉಸಿರಾಗಿಸಿದ್ದಾಳೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)