ಇದು ಬರೀ ಮಣ್ಣಲ್ಲ...!
ಸಹನಾ ಕಾಂತಬೈಲು
ಕೃಷಿಯನ್ನೇ ಬದುಕಾಗಿಸಿಕೊಂಡಿರುವ ಸಹನಾ ಕಾಂತಬೈಲು ಸಾಹಿತ್ಯ ಕೃಷಿಗೆ ಇಳಿದಿರುವುದು ತೀರಾ ತಡವಾಗಿ. ಆದರೆ ತನ್ನ ಮೊದಲ ಪ್ರಬಂಧ ಸಂಕಲನ ‘ಆನೆ ಸಾಕಲು ಹೊರಟವಳು’ ಕೃತಿಯ ಮೂಲಕವೇ ನಾಡಿನಾದ್ಯಂತ ಗುರುತಿಸಿಕೊಂಡರು. ಈ ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ. ನಾಯಕ ಅಂಕಣ ಬರಹ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ ದೊರಕಿವೆ. ‘ಸಿಂಚನ’ ಇವರ ಹನಿಗವನ ಸಂಕಲನ.
ಮಣ್ಣಿಗೆ ಒಂದು ವಿಶಿಷ್ಟ ಸುವಾಸನೆಯಿದೆ. ಎಷ್ಟೋ ವರ್ಷಗಳಿಂದ ಹಳ್ಳಿ ತ್ಯಜಿಸಿ ಪೇಟೆಯಲ್ಲಿ ವಾಸವಾಗಿರುವ ನನ್ನ ಒಬ್ಬ ಮಿತ್ರನಿಗೆ ಮೊನ್ನೆ ಮೊದಲ ಮಳೆ ಭೂಮಿಗೆ ಬಿದ್ದಾಗ ಏಳುವ ಮಣ್ಣಿನ ಪರಿಮಳದ ಬಗ್ಗೆ ವಿವರಿಸುತ್ತಿದ್ದೆ. ಆಗ ಅವನು ‘ನೀವು ಪುಣ್ಯವಂತರು. ಮೊದಲ ಮಳೆಗೆ ನಮ್ಮ ಪೇಟೆಯ ಮಣ್ಣಿನಲ್ಲಿ ದುರ್ಗಂಧವೇ ಏಳುವುದು. ಆ ಮಣ್ಣಿನ ಸುಗಂಧ ನನಗೀಗ ಮರೆತು ಹೋಗಿದೆ’ ಎಂದ.
ಈ ವರ್ಷ ಸುರಿದ ಭಾರೀ ಮಳೆಗೆ ನಮ್ಮೂರಿನ ಬ್ರಹ್ಮಗಿರಿ ಬೆಟ್ಟ ಕರಗಿ ಮಣ್ಣಿನ ಹೊಳೆಯಾಗಿ ಹರಿದುಹೋದದ್ದನ್ನು ನೆನೆವಾಗಲೆಲ್ಲ ಮನ ಪರಿತಪಿಸುತ್ತದೆ. ಕೊಡಗನ್ನು ಕಾಯುವ ಕಾವೇರಿ ಮಾತೆಗೆ ನಿತ್ಯ ಪೂಜೆ ಮಾಡುವ ಅರ್ಚಕರ ಸಮೇತ ಅವರ ಮನೆಯೇ ಮಣ್ಣಿನ ಅಡಿಯಲ್ಲಿ ಅವಶೇಷವೂ ಕಾಣದಂತೆ ಮರೆಯಾಯಿತಲ್ಲ! ಇದೊಂದು ಉದಾಹರಣೆ ಸಾಕು ಮಣ್ಣಿನ ಹಿರಿಮೆಯ ಬಗ್ಗೆ ತಿಳಿಯಲು. ಮಣ್ಣಿಗಿಂತ ಬೇರೆ ದೇವರಿಲ್ಲ ಎಂದು ನನಗೆ ಯಾವತ್ತೂ ಅನಿಸುತ್ತಿರುತ್ತದೆ.
ನಾನು ಚಿಕ್ಕವಳಿರುವಾಗ ಶಾಲೆಯಲ್ಲಿ ಅಧ್ಯಾಪಕರೊಬ್ಬರು ಅವರ ಪ್ರಶ್ನೆಗಳಿಗೆ ನಾವು ಸರಿಯಾಗಿ ಉತ್ತರ ಕೊಡದೆ ಇದ್ದರೆ ‘ನಿಮ್ಮ ತಲೆಯಲ್ಲೇನು ಮಣ್ಣು ತುಂಬಿದೆಯಾ? ಗೊಬ್ಬರ ಹೊರಲು ಹೋಗಿ’ ಎಂದು ಬೈಯುತ್ತಿದ್ದರು. ‘ಅವನಿಗೇನು ಗೊತ್ತಿದೆ ಮಣ್ಣು?’ ಎಂದು ಬುದ್ಧಿವಂತರಲ್ಲದವರಿಗೆ ಹೇಳುವುದನ್ನು ನಾವು ಸಾಮಾನ್ಯವಾಗಿ ಕೇಳಿರುತ್ತೇವೆ. ಹೀಗೆ ಮಣ್ಣು ಪದ ಕನಿಷ್ಠ ಎಂಬ ಅರ್ಥದಲ್ಲೂ ಬಳಕೆಯಾಗುತ್ತದೆ! ಆದರೆ ‘ಮಣ್ಣಿನ ಮಗ’ ಎಂದು ಹೇಳಿಕೊಳ್ಳಲು ಎಲ್ಲರಿಗೂ (ರೈತರನ್ನು ಬಿಟ್ಟು) ಅದೇನೋ ಹೆಮ್ಮೆ! ರಾಜಕಾರಣಿಗಳಂತೂ ತಮ್ಮ ಚುನಾವಣಾ ಭಾಷಣಗಳಲ್ಲಿ ‘ನಾನು ಮಣ್ಣಿನ ಮಗ. ರೈತರ ಕಷ್ಟಗಳೇನೆಂದು ನನಗೆ ಗೊತ್ತಿದೆ. ನನ್ನನ್ನು ಗೆಲ್ಲಿಸಿದರೆ ನನ್ನ ಮೊದಲ ಆದ್ಯತೆ ಮಣ್ಣಿನ ಮಕ್ಕಳಿಗೆ’ ಎಂದು ಹೇಳುತ್ತಾರೆ. ಆಮೇಲೆ ಮರೆತೂ ಬಿಡುತ್ತಾರೆ ಎನ್ನಿ.
ಕೃಷ್ಣ ಮಗುವಾಗಿದ್ದಾಗ ಮಣ್ಣು ತಿನ್ನುತ್ತಿದ್ದನಂತೆ. ಮಣ್ಣು ತಿಂದಿದ್ದೀಯಾ? ಎಂದು ತಾಯಿ ಯಶೋದೆ ಕೇಳಿದರೆ ಇಲ್ಲ ಎಂದು ಹೇಳುತ್ತಿದ್ದನಂತೆ. ಇದರಿಂದ ಸಿಟ್ಟುಗೊಂಡ ಯಶೋದೆ ಒಮ್ಮೆ ಒಂದು ಏಟು ಕೊಟ್ಟು ಅವನ ಬಾಯಿ ತೆರೆಯಲು ಹೇಳಿದಳಂತೆ. ಅವನು ‘ಆ’ ಎಂದು ಬಾಯಿ ತೆರೆದಾಗ ಅವಳಿಗೆ ಅಲ್ಲಿ ಬ್ರಹ್ಮಾಂಡವೇ ಕಂಡಿತಂತೆ. ಇದು ಕೃಷ್ಣ ಮಹಿಮೆಯ ಕತೆ ಆದರೂ ಮಣ್ಣು ಬಿಟ್ಟು ಬೇರೆ ಏನನ್ನು ತಿಂದಿದ್ದರೂ ಯಶೋದೆಗೆ ಬ್ರಹ್ಮಾಂಡ ದರ್ಶನವಾಗುತ್ತಿತ್ತೊ?! ಇಲ್ಲವೊ?! ನಮ್ಮೆಲ್ಲರ ಪ್ರೀತಿಯ ದೇವರು ಗಣಪತಿ ತಾಯಿಯ ಹೊಟ್ಟೆಯಿಂದ ಜನಿಸಿದವನಲ್ಲ. ಪಾರ್ವತಿ ತನ್ನ ಮೈಯ ಮಣ್ಣಿನಿಂದ ಅವನನ್ನು ಸೃಷ್ಟಿಸಿದಳು ಎಂದು ಕಥೆಯಲ್ಲಿ ಹೇಳಲಾಗುತ್ತದೆ.
ವನ್ಯಜೀವಿ-ಪರಿಸರ ತಜ್ಞರಾದ ಕೃಪಾಕರ ಸೇನಾನಿ ತಮ್ಮ ಒಂದು ಲೇಖನದಲ್ಲಿ ‘ಜೀವಪರಿಸರದ ದೃಷ್ಟಿಯಿಂದ ನೋಡಿದರೆ, ಮನುಷ್ಯನ ಕೈವಾಡವಿಲ್ಲದೆ ಬರುವ ಬರ ಭೂಮಿಯ ಆರೋಗ್ಯಕ್ಕೆ ಪೂರಕವಾಗಿಯೇ ಸಂಭವಿಸುವ ಒಂದು ಸಹಜ ಪ್ರಕ್ರಿಯೆಯೊ ಏನೊ!’ ಎಂದು ಬರೆದಿದ್ದಾರೆ. ಮನುಷ್ಯನ ಕೈವಾಡವಿಲ್ಲದೆ ಕಾಡಿನಲ್ಲಿ ಏಳುವ ಬೆಂಕಿ ಸಹ ಮಣ್ಣಿನ ಆರೋಗ್ಯಕ್ಕೆ ಪೂರಕವಾಗಿರುತ್ತದೆ ಎಂಬುದು ನಾನು ಕಂಡುಕೊಂಡ ಅಂಶ. ಇದಕ್ಕೆ ಕಾರಣ ಮೂರು ವರ್ಷಗಳ ಹಿಂದೆ ನಾನು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿದ್ದಾಗ ನಡೆದ ಒಂದು ಘಟನೆ. ಅಲ್ಲಿ ಒಂದು ಕಾಡಿಗೆ ಬೆಂಕಿ ಬಿದ್ದಿತ್ತು. ಸಾವಿರ, ಸಾವಿರ ಎಕರೆಗಟ್ಟಲೆ ಭೂಮಿ ಬೆಂಕಿಗೆ ಆಹುತಿಯಾಗಿತ್ತು. ಇನ್ನೂ ಆಗುತ್ತಲೇ ಇತ್ತು. ಐನೂರಕ್ಕೂ ಮೇಲ್ಪಟ್ಟು ಕಾರ್ಯಕರ್ತರು ಬೆಂಕಿ ನಂದಿಸಲು ಶ್ರಮಿಸುತ್ತಿದ್ದರು. ಬೆಂಕಿ ಹಿಡಿದು ತಿಂಗಳ ಹತ್ತಿರವಾಗಿತ್ತು. ಕಾಡಿನ ಒಂದು ಬದಿಯಲ್ಲಿ ನಂದಿಸಿದಾಗ ಇನ್ನೊಂದು ಬದಿಯಿಂದ ಹಿಡಿದುಕೊಳ್ಳುತ್ತಿತ್ತು. ಎಲ್ಲಿ ನೋಡಿದರೂ ಕರಟಿ ಕಪ್ಪಾದ ಮರ-ಮಣ್ಣು, ಹೊಗೆಯ ವಾಸನೆ. ಆ ಸಂದರ್ಭದಲ್ಲಿ ಬೆಂಕಿ ನಂದಿಸುತ್ತಿದ್ದ ಒಬ್ಬ ಕಾರ್ಯಕರ್ತನನ್ನು ಮಾತನಾಡಿಸಿದೆ.
‘ಕಾಡಿನ ಈ ಬೆಂಕಿ ನೋಡಿ ನನಗೆ ತುಂಬ ದುಃಖವಾಗಿದೆ. ಛೆ! ಎಷ್ಟು ಗಿಡಮರಗಳು ಸುಟ್ಟುಹೋಗಿ ಪ್ರಾಣಿಪಕ್ಷಿಗಳು ಅನ್ಯಾಯವಾಗಿ ಜೀವ ಕಳೆದುಕೊಳ್ಳುತ್ತವಲ್ಲ. ಮುಂದುವರಿದ ದೇಶ ನಿಮ್ಮದು! ಇದಕ್ಕೆ ಪರಿಹಾರ ಇಲ್ಲವೇ? ನಿಮ್ಮ ಬಳಿ ಅತ್ಯಾಧುನಿಕ ಹೆಲಿಕಾಪ್ಟರುಗಳಿವೆ. ಕ್ಷಣಮಾತ್ರದಲ್ಲಿ ಬೆಂಕಿ ನಂದಿಸಬಲ್ಲ ಫಯರ್ ಇಂಜಿನ್‌ಗಳಿವೆ. ಊರು, ನಗರವನ್ನು ಕಾಯುವಂತೆ ಯಾವಾಗಲೂ ಸಂಚರಿಸುತ್ತಲೇ ಇರುವ ಅಗ್ನಿಶಾಮಕ ದಳವಿದೆ. ಸದಾ ಸಿದ್ಧವಾದ ಸ್ವಯಂಸೇವಕ ದಳವಿದೆ. ಇಷ್ಟೆಲ್ಲ ಅನುಕೂಲಗಳಿದ್ದೂ ನಿಮಗೆ ಬೆಂಕಿಯನ್ನು ನಂದಿಸಲು ಸಾಧ್ಯವಾಗಿಲ್ಲವಲ್ಲ!’ ಎಂದೆ. ಅದಕ್ಕವನು ‘ನಮ್ಮ ಪ್ರಯತ್ನ ನಾವು ಮಾಡುತ್ತೇವೆ. ನಮಗೂ ದುಃಖವಾಗುತ್ತದೆ. ಆದರೆ ಪ್ರಕೃತಿಯ ಮುಂದೆ ಮನುಷ್ಯರ ಯಾವ ಆಟವೂ ನಡೆಯುವುದಿಲ್ಲ. ನಿಮಗೆ ಒಂದು ವಿಷಯ ಹೇಳಬೇಕು. ಅದೆಂದರೆ ಕಾಡು ಒಮ್ಮೆ ಹೊತ್ತಿದಂತೆ ಕಂಡರೂ ನಾಶವಾಗುವುದಿಲ್ಲ. ಇನ್ನು ನಾಲ್ಕೈದು ವರ್ಷಗಳಾಗುವಾಗ ಮೊದಲಿಗಿಂತ ದಟ್ಟವಾಗಿ ಬೆಳೆಯುತ್ತದೆ. ಹೊತ್ತಿದ ಮಣ್ಣಿನಲ್ಲಿ ಫಲವತ್ತತೆ ಹೆಚ್ಚು’ ಎಂದು ಹೇಳಿದ. ಅದು ಎಷ್ಟು ಸತ್ಯವಲ್ಲವೇ ಎಂದು ನನಗೆ ಈಗ ಅನಿಸಿದೆ. ಕಳೆದ ವರ್ಷ ನನ್ನ ಮನೆ ಮುಂದಿನ ಕಾಡಿಗೆ ಬೆಂಕಿ ಬಿದ್ದಿತ್ತು. ಗಿಡ, ಮರ, ಮಣ್ಣು ಎಲ್ಲ ಹೊತ್ತಿ ಉರಿದು ಮಸಿ ಬಣ್ಣ ತಾಳಿತ್ತು. ‘ಅಯ್ಯೋ! ಎಂಥ ಅನಾಹುತ ಆಗಿಹೋಯ್ತು. ಈ ಬಂಜರು ಭೂಮಿಯಲ್ಲಿ ಇನ್ನು ಹಸಿರು ಹುಟ್ಟಲಿಕ್ಕಿಲ’್ಲ ಎಂದು ನಾನು ಮನದಲ್ಲೇ ಅತ್ತಿದ್ದೆ. ಈ ವರ್ಷ ಮೊದಲ ಮಳೆ ಬಿದ್ದದ್ದೇ ತಡ ನಾವಿದ್ದೇವೆ ಎಂಬಂತೆ ಅದೆಲ್ಲಿಂದ ಗಿಡಗಳೆಲ್ಲ ಎದ್ದು ನಿಂತವೋ ನನಗೆ ಗೊತ್ತಿಲ್ಲ. ಬೇರೆ ಎಲ್ಲ ವಸ್ತುಗಳೂ ಸುಟ್ಟುಹೋದರೆ ಅದರ ಅಂತ್ಯವಾಯಿತೆಂದೇ ಅರ್ಥ. ಆದರೆ ಮಣ್ಣಿನ ವಿಷಯದಲ್ಲಿ ಹಾಗೆ ಆಗುವುದಿಲ್ಲ. ಮಣ್ಣನ್ನು ಸುಟ್ಟರೆ ಅದು ಮತ್ತಷ್ಟು ಫಲವತ್ತಾಗುತ್ತದೆ ಹೊರತು ಸಾಯುವುದಿಲ್ಲ. ಮುತ್ತಜ್ಜನ ಕಾಲದಿಂದ ಈಗಲೂ ಕರಾವಳಿ, ಮಲೆನಾಡಿನ ಹಲವು ರೈತರು ಬೇಸಿಗೆಯ ಕೊನೆಗೆ ಅಂದರೆ ಅಡಕೆ ಕೊಯ್ಲು ಮುಗಿದಾದ ಮೇಲೆ ಅಂಗಳದ ಕಸಕಡ್ಡಿಗಳನ್ನೆಲ್ಲ ರಾಶಿ ಮಾಡಿ ಮಣ್ಣು ಸೇರಿಸಿ ಮುಸ್ಸಂಜೆ ಹೊತ್ತಲ್ಲಿ ಬೆಂಕಿ ಕೊಡುತ್ತಾರೆ. ಒಂದು ವಾರ ಆಗುವಾಗ ಮಣ್ಣು ಹೊತ್ತಿ ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ. ಇದನ್ನು ‘ಸೂಟುಮಣ್ಣು’ ಎಂದು ಕರೆಯುತ್ತಾರೆ. ಈ ಸೂಟುಮಣ್ಣಲ್ಲಿ ತರಕಾರಿ ಬೀಜ ಹಾಕಿದರೆ ದಷ್ಟಪುಷ್ಟ ಗಿಡಗಳಾಗುತ್ತವೆ. ಅಡಿಕೆ ಮರದ ಬುಡಕ್ಕೆ ಈ ಮಣ್ಣನ್ನು ಹಾಕಿದರೆ ಫಸಲು ಜಾಸ್ತಿ. ಬೇಸಿಗೆಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಗುಣವೂ ಇದಕ್ಕಿದೆ. ಮಣ್ಣೆಂದರೆ ಜಡ ಅಲ್ಲ ಚೈತನ್ಯ.
ಮಳೆನೀರು, ಕೆರೆ, ಕೊಳ ಮತ್ತು ನದಿಯ ನೀರನ್ನು ಮಣ್ಣು ಬಸಿಯುತ್ತದೆ ಮತ್ತು ಶುದ್ಧೀಕರಿಸುತ್ತದೆ. ನೀರಿಗೆ ‘ವಿಶ್ವ ಜಲ ದಿನ’ ಎಂದು ಇರುವಂತೆ ಮಣ್ಣಿಗೂ ಒಂದು ದಿನವಿದೆ. ಪ್ರತಿವರ್ಷ ಡಿಸೆಂಬರ್ 5ನ್ನು ‘ವಿಶ್ವ ಮಣ್ಣು ದಿನಾಚರಣೆ’ಯನ್ನಾಗಿ ಆಚರಿಸುತ್ತೇವೆ. ‘ಮಣ್ಣಿನ ಸವಕಳಿ ನಿಲ್ಲಿಸಿ. ನಮ್ಮ ಭವಿಷ್ಯ ರಕ್ಷಿಸಿ’ ಎಂಬುದು ಕಳೆದ ವರ್ಷದ ಧ್ಯೇಯವಾಕ್ಯ. ಭವಿಷ್ಯ ರಕ್ಷಿಸಬೇಕಾದರೆ ನಾವು ಅರಣ್ಯ ಉಳಿಸಬೇಕು; ಬೆಳೆಸಬೇಕು. ಅರಣ್ಯದಲ್ಲಿರುವ ಮತ್ತಿ, ಹೊನ್ನೆ, ನೇರಳೆ, ನಂದಿ, ಬಿದಿರು, ಬೀಟೆ ಇತ್ಯಾದಿ ಕಾಡುಜಾತಿಯ ಗಿಡಮರಗಳು ಮಣ್ಣು ತೊಳೆದುಹೋಗದಂತೆ ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಹೊಂದಿವೆ. ನಾವಿಂದು ದುರಾಸೆಗೊಳಗಾಗಿ ಇವುಗಳನ್ನೆಲ್ಲ ಕಡಿದು ಅಲ್ಲಿ ಅಡಿಕೆ, ರಬ್ಬರ್, ಅಕೇಶಿಯ, ನೀಲಗಿರಿ ಮುಂತಾದ ಗಿಡಗಳ ತೋಟಗಳನ್ನು ಮಾಡುತ್ತಿದ್ದೇವೆ; ಮನೆಗಳನ್ನು ಕಟ್ಟುತ್ತಿದ್ದೇವೆ. ಇದೇ ಕಾರಣಕ್ಕೆ ಹಿಂದೆ ತಿಂಗಳಾನುಗಟ್ಟಲೆ ಎಡೆಬಿಡದೆ ಸುರಿಯುತ್ತಿದ್ದ ಮಳೆಗೂ ಜರಿಯದ ಗುಡ್ಡ ಈಗ ಮೂರು ದಿನದ ಮಳೆಗೆ ಕರಗುತ್ತಿದೆ. ನಮಗೆ ಬದುಕಲು ಬೇಕಾದ ಅನ್ನ ಕೊಡುವುದು ಮಣ್ಣಾದರೂ ಕೈಗೆ ಮಣ್ಣು ಮೆತ್ತುವ ವೃತ್ತಿ ನಿಕೃಷ್ಟ ಎಂಬ ಭಾವನೆ ಹಲವರಲ್ಲಿದೆ. ಅದಕ್ಕೇ ಇಂದು ಹಳ್ಳಿಯಲ್ಲಿ ಕೃಷಿ ಮಾಡಿಕೊಂಡಿರುವ ಯುವಕರಿಗೆ ಹೆಣ್ಣು ಸಿಗುವುದಿಲ್ಲ. ಹುಡುಗಿಯರಿಗೆ ಡಾಕ್ಟರ್, ಇಂಜಿನಿಯರ್ ಇತ್ಯಾದಿ ನಗರದಲ್ಲಿರುವ ವರನೇ ಆಗಬೇಕು. ಯಾರಿಗೂ ಇಂದು ಕೈ ಕೆಸರಾಗಬಾರದು. ಆದರೆ ಬಾಯಿಗೆ ಮಾತ್ರ ಮೊಸರು ಸಿಗಬೇಕು.
ಮಣ್ಣು-ಹೆಣ್ಣು-ಹೊನ್ನು ಈ ಮೂರು ವಿಷಯಗಳಿಗಾಗಿ ಯುದ್ಧಗಳು ಮಾತ್ರವಲ್ಲ ಕಲಹಗಳು, ಕೊಲೆಗಳು, ವೈಮನಸ್ಸುಗಳೂ ನಡೆಯುತ್ತವೆ ಎಂಬುದು ಹಿರಿಯರ ನುಡಿ. ಇದು ನಿಜವೂ ಹೌದು. ರಾಮಾಯಣ ಹೆಣ್ಣಿಗಾಗಿ ನಡೆದ ಯುದ್ಧವಾದರೆ ಮಹಾಭಾರತ ಮಣ್ಣಿಗಾಗಿ ನಡೆದ ಯುದ್ಧ. ಇಂದು ಕಾಶ್ಮೀರ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಕಲಹವೂ ಮಣ್ಣಿಗಾಗಿಯೇ ಎಂದರೆ ತಪ್ಪಾಗಲಿಕ್ಕಿಲ್ಲವೇನೋ. ದಿನಪತ್ರಿಕೆಯಲ್ಲಿ ಅಣ್ಣ-ತಮ್ಮಂದಿರ ಆಸ್ತಿ ವಿವಾದ ಕೊಲೆಯಲ್ಲಿ ಪರ್ಯಾವಸಾನವಾಗುವ ಸುದ್ದಿ ಆಗೊಮ್ಮೆ ಈಗೊಮ್ಮೆ ಬರುತ್ತಿರುತ್ತದೆ. ಮಣ್ಣಿನ ಮಹಿಮೆ ಹೇಳಿದಷ್ಟೂ ಮುಗಿಯುವಂತಹದ್ದಲ್ಲ. ನನ್ನ ಮನೆಗೂ, ಪೇಟೆಗೂ 8 ಕಿ.ಮೀ. ದೂರ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ದಾರಿಗೆ ಡಾಂಬರು ಆಗಿಲ್ಲ. ಹೊಂಡ, ಗುಂಡಿ ಇರುವ ಈ ಮಣ್ಣಿನ ರಸ್ತೆಯಲ್ಲಿ ಬಸ್ಸು, ಕಾರು ಬರುವುದಿಲ್ಲ. ರಿಕ್ಷಾದವರು ಕೇಳಿದಷ್ಟು ದುಡ್ಡು ಕೊಟ್ಟರೂ ನಮ್ಮೂರಿಗೆ ಬರಲು ಒಪ್ಪುವುದಿಲ್ಲ. ಆಗೊಮ್ಮೆ, ಈಗೊಮ್ಮೆ ಓಡಾಡುವ ಜೀಪುಗಳೇ ನಮ್ಮ ಸಂಚಾರಕ್ಕೆ ಇರುವ ಏಕೈಕ ಸಾರಿಗೆ. ನನಗೆ ಪೇಟೆಗೆ ಹೋಗಲು ಇದ್ದರೆ ನಾನು ಜೀಪಿಗಾಗಿ ಕಾಯುವುದಿಲ್ಲ. ಸೀದಾ ನಡೆಯಲು ಶುರು ಮಾಡುತ್ತೇನೆ. ಮಾರ್ಗದ ಒಂದು ಬದಿಯಲ್ಲಿ ಜುಳುಜುಳು ಹರಿಯುವ ನದಿ, ಇನ್ನೊಂದು ಬದಿಯಲ್ಲಿ ಕಡು ಹಸಿರು ಹೊದ್ದ ಬೆಟ್ಟ. ಮಳೆಗಾಲದಲ್ಲಿ ಬೆಟ್ಟದಿಂದ ಅಲ್ಲಲ್ಲಿ ಇಳಿವ ನೀರಧಾರೆ! ಚಳಿಗಾಲದಲ್ಲಿ ಬಣ್ಣ ಬಣ್ಣದ ಚಿಗುರು ಹೊತ್ತ ಮರಗಳು! ಬೇಸಿಗೆಯಲ್ಲಿ ಮರದ ತುಂಬ ಬಿಟ್ಟಿರುವ ಹೂವು, ಕಾಯಿ! ವಾಹನಗಳ ಕರ್ಕಶ ಶಬ್ದವಿಲ್ಲದೆ ಪ್ರಶಾಂತ ವಾತಾವರಣದಲ್ಲಿ ನಿಸರ್ಗ ರಮಣೀಯತೆಯನ್ನು ಸವಿಯುತ್ತಾ ನಡೆಯುವ ಈ ಸುಖ ಯಾರಿಗುಂಟು ಯಾರಿಗಿಲ್ಲ? ಇದಕ್ಕೆ ಕಾರಣವಾದ ನಮ್ಮೂರಿನ ಮಣ್ಣಿನ ರಸ್ತೆಗೆ ನಮೋ ನಮಃ
ಯಾವುದೇ ಬೀಜ ಮೊಳಕೆಯೊಡೆದು ಆರೋಗ್ಯವಂತ ಗಿಡ ಪಡೆಯಬೇಕಾದರೆ ಬೀಜದಲ್ಲಿ ತಿರುಳಿದ್ದರೆ ಮಾತ್ರ ಸಾಕಾಗುವುದಿಲ್ಲ. ಬಿತ್ತನೆ ಮಾಡುವ ಮಣ್ಣೂ ಬಹಳ ಮುಖ್ಯ. ಫಲವತ್ತತೆಯಿಂದ ಕೂಡಿದ ತೇವಯುಕ್ತವಾದ ಮಣ್ಣಿನಲ್ಲಿ ಕಡಿಮೆ ಶಕ್ತಿ ಇರುವ ಬೀಜವೂ ಹುಟ್ಟಿ ಸದೃಢವಾಗಿ ಬೆಳೆಯುತ್ತದೆ. ಮಣ್ಣು ನಿಸ್ಸಾರವಾಗಿದ್ದರೆ ಎಷ್ಟೇ ಸತ್ವಯುತವಾದ ಬೀಜವೂ ಮುರುಟಿ ಹೋಗುತ್ತದೆ. ಬೀಜದ ಗುಣಕ್ಕಿಂತ ಮಣ್ಣಿನ ಗುಣವೇ ಪ್ರಾಮುಖ್ಯವಾದುದು ಎಂಬುದು ರೈತಳಾದ ನನ್ನ ಅನುಭವ. ಬೀಜ ಮೊಳಕೆಯೊಡೆಯುವುದೂ ಒಂದು ಪವಾಡ. ಭೂಮಿಗೆ ಬಿದ್ದ ಬೀಜವನ್ನು ಮಣ್ಣು ತನ್ನ ಒಡಲಲ್ಲಿ ಹುದುಗಿಸಿ ತನ್ನೆಲ್ಲ ಸಾರವನ್ನು ಉಣಿಸಿ ಪೋಷಿಸುತ್ತದೆ. ಬೀಜ ತನ್ನೊಳಗೆ ಚಿಗುರನ್ನು ಮೂಡಿಸಿದೆ ಎನ್ನುವಾಗ ಮಣ್ಣು ಎಲ್ಲ ಬಲವನ್ನು ಹಾಕಿ ಬೀಜವನ್ನು ಹೊರಗೆ ದೂಡುತ್ತದೆ. ಗಿಡವೆಂಬುದು ಮಣ್ಣಿನ ಶಿಶು (ನಾವೂ ಮಣ್ಣಿನ ಶಿಶುವೇ).
ಮಣ್ಣಿಗೆ ರಸಗೊಬ್ಬರ ಕೊಟ್ಟರೇ ಫಸಲು ಜಾಸ್ತಿ ಎಂಬ ನಂಬಿಕೆ ಇಂದಿನವರದು. ಇದು ತಪ್ಪು ತಿಳಿವಳಿಕೆ. ನನ್ನ ಮನೆಗೆ ಬರುವ ಬಂಧುಮಿತ್ರರು ನನ್ನ ಅಂಗಳದಲ್ಲಿ ಕೇರೆ ಹಾವಿನಂತೆ ತೂಗುತ್ತಿರುವ ಪಡುವಲ, ದಾಸವಾಳ ಗಾತ್ರದ ಗುಲಾಬಿ, ಆನೆಕಿವಿಯಂತೆ ಅಗಲವಾಗಿರುವ ಬಸಳೆ ಸೊಪ್ಪನ್ನು ನೋಡಿ ‘ನಾವು ಎಷ್ಟು ಗೊಬ್ಬರ, ನೀರು ಕೊಟ್ಟರೂ ಗಿಡ ಇಷ್ಟು ಚೆನ್ನಾಗಿ ಬರುವುದಿಲ್ಲ. ನೀವು ಯಾವ ಕಂಪೆನಿಯ ಗೊಬ್ಬರ ಹಾಕುವುದು?’ ಎಂದು ಕೇಳುತ್ತಾರೆ. ಆಗ ನಾನು ‘ಕಂಪೆನಿ ಗೊಬ್ಬರ ನಮ್ಮ ಭೂಮಿಗೇ ತರುವುದಿಲ್ಲ. ಏನಿದ್ದರೂ ಹಟ್ಟಿ ಗೊಬ್ಬರ ಮಾತ್ರ’ ಎಂದು ನುಡಿಯುತ್ತೇನೆ. ಅತಿಯಾದ ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬಳಕೆಯಿಂದ ಮಣ್ಣು ತನ್ನ ಸತ್ವ ಕಳೆದುಕೊಳ್ಳುತ್ತಿದೆ. ಹಿಂದೆಯೆಲ್ಲ ಬೊಗಸೆ ಮಣ್ಣಿಗೂ ಸಿಗುತ್ತಿದ್ದ ಎರೆಹುಳ ಇಂದು ಕಾಣದಂತೆ ಮಾಯವಾಗಿದೆ. ಸಾವಯವ ಕೃಷಿಯೊಂದೇ ಮಣ್ಣಿನ ಫಲವತ್ತತೆ ಹೆಚ್ಚಿಸಲು ಇರುವ ಪರಿಹಾರ.
ನಗರಗಳಲ್ಲಿ ಮಣ್ಣು ಕಾಣುವುದು ಅಪರೂಪವಾಗುತ್ತಿದೆ. ರಸ್ತೆ, ನೆಲವೆಲ್ಲ ಕಾಂಕ್ರಿಟೀಕರಣಗೊಂಡಿದೆ. ಕೇವಲ ಒಂದು ದಿನ ಎಡೆಬಿಡದೆ ಮಳೆ ಸುರಿದರೆ ಸಾಕು ನೀರು ಇಂಗಲು ಮಣ್ಣು ಇಲ್ಲದೆ ರಸ್ತೆ ಹೊಳೆಯಾಗಿ ಹರಿಯುತ್ತದೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ ಕಾರು, ಬೈಕ್, ಸೈಕಲ್‌ಗಳು ನೀರಿನಲ್ಲಿ ತೇಲತೊಡಗುತ್ತವೆ. ಅತಿ ಆಧುನಿಕತೆಯ ಪರಿಣಾಮ ಇದು. ಮುಂಬೈಯಲ್ಲಿ ಬದುಕು ಕಟ್ಟಿಕೊಂಡಿರುವ ಅಲ್ಲಿನ ಫ್ಲಾಟೊಂದರಲ್ಲಿ ಪಾಟ್ ಇಟ್ಟು ಗಿಡ ಬೆಳೆಸಿರುವ ಮಲೆನಾಡಿನ ಗೆಳತಿಯೊಬ್ಬಳಲ್ಲಿ ಕೇಳಿದೆ ‘ಈ ಮಹಾನಗರದಲ್ಲಿ ಗಗನಚುಂಬಿ ಕಟ್ಟಡಗಳ ವಿನಾ ಮಣ್ಣು ಭೂತಗನ್ನಡಿ ಇಟ್ಟರೂ ಕಾಣುವುದಿಲ್ಲ. ನಿನ್ನ ಗಿಡಗಳಿಗೆ ಮಣ್ಣು ಎಲ್ಲಿಂದ ತರುತ್ತಿ?’ ಅವಳು ಹೇಳಿದಳು-‘ಇಲ್ಲಿನ ನರ್ಸರಿಗಳಲ್ಲಿ ಗಿಡ ಮಾತ್ರ ಮಾರಾಟ ಮಾಡುವುದಲ್ಲ. ಮಣ್ಣನ್ನೂ ಮಾರುತ್ತಾರೆ. ನಾವು ಚೀಲ ತೆಗೆದುಕೊಂಡು ಹೋದರೆ ಅದರಲ್ಲಿ ನಮಗೆ ಬೇಕಾದಷ್ಟು ಮಣ್ಣನ್ನು ತುಂಬಿಸಿಕೊಡುತ್ತಾರೆ. ಒಂದು ಹಾರೆ ಮಣ್ಣಿಗೆ ಇಂತಿಷ್ಟು ಅಂತ ದರ ನಿಗದಿಮಾಡಿರುತ್ತಾರೆ’. ಕಾಲ ಎಲ್ಲಿಂದ ಎಲ್ಲಿಗೆ ಹೋಯಿತು! ಮುಂದೊಂದು ದಿನ ದುಡ್ಡು ಕೊಟ್ಟರೂ ಮಣ್ಣು ಸಿಗದೆ ಇರುವ ಸ್ಥಿತಿ ತಲುಪಿದರೂ ತಲುಪಬಹುದು. ವಿಜ್ಞಾನಿಗಳು ಏನೆಲ್ಲಾ ಸೃಷ್ಟಿ ಮಾಡಿದರೂ ಮಣ್ಣನ್ನು ಸೃಷ್ಟಿ ಮಾಡಲು ಆಗಿಲ್ಲ. ಹೀಗೆಂದಾಗ ತಟ್ಟನೆ ಬೆಂಗಳೂರಿನ ಅಪಾರ್ಟ್ ಮೆಂಟೊಂದರಲ್ಲಿ ವಾಸಿಸುವ ಗೆಳತಿ ಹೇಳಿದ ಒಂದು ಪ್ರಸಂಗ ನೆನಪಾಗುತ್ತಿದೆ. ಅವಳ ಪುಟ್ಟ ಮಗ ಶಾಲೆಗೆ ರಜೆ ಸಿಕ್ಕಿದಾಕ್ಷಣ ಊರಿಗೆ ಹೋಗೋಣ ಎಂದು ಹಠ ಹಿಡಿಯುತ್ತಾನಂತೆ. ಊರಲ್ಲಿ ಏನಿದೆ ಎಂದು ಅವಳೊಮ್ಮೆ ಕೇಳಿದ್ದಕ್ಕೆ ಅವನು ‘ಮಣ್ಣು ಇದೆ’ ಎಂದನಂತೆ. ಅದರ ಅರ್ಥ ಏನೆಂದು ಫಕ್ಕನೆ ಅವಳ ತಲೆಗೆ ಹೋಗಲಿಲ್ಲವಂತೆ. ಆಮೇಲೆ ಅವಳಿಗೆ ಗೊತ್ತಾಯಿತು- ಊರಿಗೆ ಹೋದರೆ ಅಂಗಳದಲ್ಲಿ ಆಟವಾಡಬಹುದು. ಬೆಂಗಳೂರಿನ ಮನೆಯಲ್ಲಿ ಹೊರಗೆ ಕಾಲಿಟ್ಟರೆ ರಸ್ತೆಯೇ ಸಿಗುವುದು. ಮಕ್ಕಳು ಮಣ್ಣಿನಲ್ಲಿ ಆಟವಾಡಲು ಹಂಬಲಿಸುತ್ತಾರೆ ಎಂದು. ದಿಟ. ನಗರದ ಮಕ್ಕಳಿಗೆ ಇಂದು ಆಟವಾಡಲು ಅಂಗಳ ಇಲ್ಲ. ಕಂಪ್ಯೂಟರ್, ಮೊಬೈಲ್‌ಗಳಲ್ಲಿ ಕಾಲ ಕಳೆಯದೆ ಗತ್ಯಂತರವಿಲ್ಲ.
ದೇವರ ಪ್ರಸಾದವಾಗಿ ಹಣೆಗೆ ಹಚ್ಚಲು ಕುಂಕುಮ, ಗಂಧ ಕೊಡುವುದು ಸಾಮಾನ್ಯ. ಮಣ್ಣನ್ನೂ ಪ್ರಸಾದವಾಗಿ ಕೊಡುವ ಕ್ರಮ ಇದೆ ಎಂದರೆ ನೀವು ನಂಬಬೇಕು. ದಕ್ಷಿಣಕನ್ನಡ ಜಿಲ್ಲೆಯ ಪ್ರಸಿದ್ಧ ದೇವಸ್ಥಾನವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರಸಾದರೂಪವಾಗಿ ಮಣ್ಣನ್ನು ಕೊಡುತ್ತಾರೆ. ಇದಕ್ಕೆ ‘ಮೃತ್ತಿಕೆ’ಯೆಂದು ಹೆಸರು. ಜೈನರು ತಮ್ಮ ತೀರ್ಥಕ್ಷೇತ್ರ ಸಮ್ಮೇದಶಿಖರಜಿಗೆ ಹೋದರೆ ಅಲ್ಲಿನ ಮಣ್ಣನ್ನು ತೆಗೆದುಕೊಂಡು ಬಂದು ತಮ್ಮ ದೇವರಕೋಣೆಯಲ್ಲಿಡುತ್ತಾರೆ; ಹೊಸಮನೆ ಕಟ್ಟಿಸುವುದಿದ್ದರೆ ಈ ಮಣ್ಣನ್ನು ಸೇರಿಸುತ್ತಾರೆ. ಕೆರೆ, ಬಾವಿ ತೋಡುವಾಗ ಸಿಗುವ ‘ಸೇಡಿ’ ಎಂದು ಕರೆಯುವ ಬಿಳಿ ಬಣ್ಣದ ಮಣ್ಣನ್ನು ವೈದಿಕರು ಮಂಡಲ ಬರೆಯಲು ಉಪಯೋಗಿಸುತ್ತಾರೆ. ಮಣ್ಣೆಂದರೆ ಅಷ್ಟು ಪವಿತ್ರವಾದುದು.
ಬೆಳಗಾಗ ನಾನೆದ್ದು ಯಾರ್ಯಾರ ನೆನೆಯಲಿ/ ಎಳ್ಳು ಜೀರಿಗೆ ಬೆಳೆಯೋಳ ಭೂಮಿತಾಯ/ ಎದ್ದೊಂದು ಗಳಿಗೆ ನೆನೆದೇನ... ಈ ಜನಪದ ಪದ್ಯದಲ್ಲಿ ಹಳ್ಳಿಯ ಜನರ ಮಣ್ಣಿನ ಸ್ಮರಣೆ ಇದೆ. ಮಣ್ಣನ್ನು ನಂಬಿ ಕೆಟ್ಟವರಿಲ್ಲ. ಜನ್ಮ ಕೊಟ್ಟ ತಾಯಿಯ ಋಣವನ್ನು ತೀರಿಸಲು ಹೇಗೆ ಸಾಧ್ಯವಿಲ್ಲವೋ ಹಾಗೆ ಮಣ್ಣಿನ ಋಣವನ್ನೂ ತೀರಿಸಲು ಸಾಧ್ಯವಿಲ್ಲ. ವಲಸಿಗರು ಕೊನೆಗಾಲದಲ್ಲಿ ನೆಮ್ಮದಿ ಅರಸಿ ತಮ್ಮ ಮೂಲಸ್ಥಳಗಳಿಗೆ ಮರಳುವುದು ಆ ಮಣ್ಣಿನ ಮೇಲಿನ ಮೋಹದಿಂದಲೇ. ‘ಹೆತ್ತ ತಾಯಿ, ಜನ್ಮ ಕೊಟ್ಟ ಭೂಮಿ ಸ್ವರ್ಗಕ್ಕಿಂತ ಹೆಚ್ಚು’ ಎನ್ನುವುದು ಇದೇ ಕಾರಣಕ್ಕೆ.
ಮಣ್ಣಿಗೆ ಔಷಧೀಯ ಗುಣವೂ ಇದೆ. ಮಂಗಳೂರಿನ ಗುರುಪುರದ ಸಮೀಪ ಜಾಬಾಲ ಋಷಿ ಸ್ಥಾಪಿಸಿದರೆನ್ನಲಾದ ಗುಹಾದೇವಾಲಯವಿದೆ. ವರ್ಷದ ಆರು ತಿಂಗಳು ಮಾತ್ರ ತೆರೆಯಲಾಗುವ ಈ ದೇವಸ್ಥಾನದಲ್ಲಿ ಶಿವಲಿಂಗವಿದೆ. ಗುಹೆಯೊಳಗೆ ಪ್ರವೇಶಿಸಿ ಶಿವಲಿಂಗದ ಸುತ್ತ ಇರುವ ಮಣ್ಣನ್ನು ಮೈಗೆ ಬಳಿದುಕೊಂಡರೆ ಚರ್ಮದ ಕಾಯಿಲೆಗಳು ವಾಸಿಯಾಗುತ್ತವಂತೆ. ಹೊರಗೆ ಬರುವಾಗ ನಮ್ಮ ಮುಷ್ಟಿಯಲ್ಲಿ ಹಿಡಿವಷ್ಟು ಮಣ್ಣನ್ನು ಮಾತ್ರ ತರಲು ಅವಕಾಶವಿದೆ. ಧರ್ಮಸ್ಥಳದ ಉಜಿರೆಯ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಮಣ್ಣಿನ ಲೇಪನವೂ ಚಿಕಿತ್ಸೆಯ ಒಂದು ಭಾಗವಾಗಿರುತ್ತದೆ. ಮಣ್ಣಿಗೆ ಒಂದು ವಿಶಿಷ್ಟ ಸುವಾಸನೆಯಿದೆ. ಎಷ್ಟೋ ವರ್ಷಗಳಿಂದ ಹಳ್ಳಿ ತ್ಯಜಿಸಿ ಪೇಟೆಯಲ್ಲಿ ವಾಸವಾಗಿರುವ ನನ್ನ ಒಬ್ಬ ಮಿತ್ರನಿಗೆ ಮೊನ್ನೆ ಮೊದಲ ಮಳೆ ಭೂಮಿಗೆ ಬಿದ್ದಾಗ ಏಳುವ ಮಣ್ಣಿನ ಪರಿಮಳದ ಬಗ್ಗೆ ವಿವರಿಸುತ್ತಿದ್ದೆ. ಆಗ ಅವನು ‘ನೀವು ಪುಣ್ಯವಂತರು. ಮೊದಲ ಮಳೆಗೆ ನಮ್ಮ ಪೇಟೆಯ ಮಣ್ಣಿನಲ್ಲಿ ದುರ್ಗಂಧವೇ ಏಳುವುದು. ಆ ಮಣ್ಣಿನ ಸುಗಂಧ ನನಗೀಗ ಮರೆತು ಹೋಗಿದೆ’ ಎಂದ.ಬಾಲ್ಯದಲ್ಲಿ ಅಜ್ಜಿ ಮಣ್ಣಿನ ಮಡಕೆಯಲ್ಲಿ ಅನ್ನ, ಪದಾರ್ಥ ಮಾಡಿ ನಮಗೆಲ್ಲ ಬಡಿಸುತ್ತಿದ್ದರು. ಆ ಅಡುಗೆಯ ಘಮ ನನ್ನ ನಾಲಿಗೆಯಿಂದ ಇನ್ನೂ ಹೋಗಿಲ್ಲ. ಸ್ಟೀಲು, ಅಲ್ಯುಮಿನಿಯಂ, ನಾನ್‌ಸ್ಟಿಕ್‌ನ ನಾನಾ ನಮೂನೆಯ ಪಾತ್ರೆಗಳ ಭರಾಟೆಯಲ್ಲಿ ಇಂದು ಮಡಕೆ ಅಡುಗೆ ಮನೆಯಿಂದ ಸಂಪೂರ್ಣ ಮಾಯವಾಗಿದೆ. ಬೇಸಿಗೆಯಲ್ಲಿ ಮಣ್ಣಿನ ಹೂಜಿಯಲ್ಲಿ ನೀರನ್ನು ತುಂಬಿಸಿಟ್ಟು ಕುಡಿಯುತ್ತಿದ್ದರೆ ಸುಡುಬಿಸಿಲಿನಿಂದ ದಣಿದ ಮೈಮನ ತಂಪಾಗುತ್ತದೆ. ಕರಾವಳಿಯ ತುಳು ಭಾಷಿಕರು ಮಣ್ಣಿನ ಕಾವಲಿಯಲ್ಲಿ ಬೇಯಿಸಿ ಮಾಡುವ ಓಡಡ್ಯೆ ಎಂಬ ವಿಶಿಷ್ಟ ರುಚಿಯಿರುವ ಮೆತ್ತನೆ ದೋಸೆಗೆ ಸಾಟಿ ಇಲ್ಲ. ಇದನ್ನು ಬೆಲ್ಲ ಬೆರೆಸಿದ ತೆಂಗಿನ ಹಾಲಲ್ಲಿ ನೆನೆಸಿ ಜೇನಿನ ಎರಿಯಂತಾದಾಗ ತೆಗೆದು ತಿನ್ನುತ್ತಿದ್ದರೆ ಸ್ವರ್ಗ ಸುಖ. ಮಣ್ಣಿನಿಂದ ತಯಾರಿಸುವ ಪರಿಕರಗಳು ಪರಿಸರಸ್ನೇಹಿಯಾಗಿರುತ್ತವೆ. ಕೆಲವು ದೇವಾಲಯಗಳಲ್ಲಿ ಮಣ್ಣಿನಿಂದ ಮಾಡಿದ ದೇವರ ಮೂರ್ತಿಯನ್ನು ಪೂಜಿಸುತ್ತಾರೆ. ಮನೆಯ ಮಾಡುಗಳಿಗೆ ಹೊದಿಸುವ ಹಂಚು, ತಾಳವಾದ್ಯಗಳಲ್ಲಿ ಒಂದಾದ ಘಟ ಮಣ್ಣಿನಿಂದಲೇ ಸಿದ್ಧಗೊಳ್ಳುತ್ತದೆ. ದೇವಸ್ಥಾನಗಳಲ್ಲಿ ಸಾಲುದೀಪಗಳನ್ನಿರಿಸಲು, ದೀಪಾವಳಿಗೆ ಮನೆ ಬೆಳಗಲು ಮಣ್ಣಿನಿಂದ ತಯಾರಿಸಿದ ಹಣತೆಗಳು ಬೇಕಾಗುತ್ತವೆ. ಹಿಂದೆ, ಎಂಥ ಶ್ರೀಮಂತರಿಗೂ ಇರುತ್ತಿದ್ದದ್ದು ಮಣ್ಣಿನ ಮನೆಯೇ! ಸಾಕಷ್ಟು ದಿನ ಕಲಸಿ ಹಾಕಿ, ಸರಿಯ�