ಪ್ರತಿಬಿಂಬ ಅನ್ನೋ ವಿಸ್ಮಯ
ಇಂಗ್ಲಿಷ್ ಅಧ್ಯಾಪಕರಾಗಿರುವ ಗೌತಮ್ ಜ್ಯೋತ್ಸ್ನಾ, ‘ಕುಬ್ರಿಕ್ ಚಿತ್ರಗಳಲ್ಲಿ ವಾಸ್ತವದ ಪ್ರತಿಬಿಂಬ’ ಎನ್ನುವ ಮಹಾ ಪ್ರಬಂಧಕ್ಕೆ ಕುವೆಂಪು ವಿಶ್ವ ವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಕತೆಗಾರ, ಕವಿಯಾಗಿ ಗುರುತಿಸಿಕೊಂಡಿರುವ ಗೌತಮ್, ಸಿನೆಮಾಗಳಿಗೆ ಚಿತ್ರಕತೆ ಬರೆಯುವ ಹವ್ಯಾಸವನ್ನೂ ಹೊಂದಿದ್ದಾರೆ.
ವಿಪರೀತ ಜ್ಞಾನದಿಂದ ನಾಶವಾಗಿ ಶುದ್ಧನಾದ ಈಡಿಪಸ್‌ನಂತೆ ಈ ಎಡ್ಗರ್ ಪೋ ಕೂಡ. ಕವಿ ಚಾರ್ಲ್ಸ್ ಬೋದಿಲೇರ್‌ಗೆ ಅಲ್ಲನ್ ಪೋ ಇಷ್ಟ ಆಗಿದ್ದು ಇದೇ ಕಾರಣಕ್ಕೆ. ಬೋದಿಲೇರ್‌ನಂತೆ ಅಲ್ಲನ್ ಪೋ ಕೂಡ ತನ್ನದೇ ದೇಶದಲ್ಲಿ ಪರಕೀಯನಾದವ. ಅವನ ಹಾಗೇ ಇವನೂ ಕೂಡ ಬಿಳಿ ಸಭ್ಯರಿಂದ ವಿಕೃತ ಅಂತ ಉಗಿಸಿಕೊಂಡು ಎಲ್ಲ ಪಬ್ಲಿಷರ್ಸ್ ರಿಂದ ಛೀಮಾರಿ ಹಾಕಿಸಿಕೊಂಡ ದೊಡ್ಡ ಕುಡುಕನಾಗಿದ್ದ. ಕೊನೆಗೆ ಅನಾಮಿಕನಾಗಿ ಲಂಡನಿನ ಯಾವುದೋ ಮೂಲೆಯಲ್ಲಿ ತುಂಬಾ ಸಣ್ಣ ವಯಸ್ಸಲ್ಲೇ ಅನಾಥವಾಗಿ ಸತ್ತ ದಾರಭ ವ್ಯಕ್ತಿ ಈ ಪೋ
ಪ್ಯಾರಿಸಿನ ಬೋದಿಲೇರ್ ಮತ್ತು ಅಮೆರಿಕದ ಎಡ್ಗರ್ ಅಲ್ಲನ್ ಪೋ ಇಬ್ಬರೂ ಒಂಥರಾ ತದ್ರೂಪಿಗಳು. ಇಬ್ಬರೂ ಬಂಡೆದ್ದವರು. ಒಳ್ಳೆಯವರಾಗೋ ಅನುಕೂಲವನ್ನು ಬೇಕಂತಲೇ ಕೈ ಚೆಲ್ಲಿದವರು. ರಶ್ಯದ ದಸ್ತಯೇವ್‌ಸ್ಕಿ ಮೆಚ್ಚಿದ ಪ್ರನಾಳ ಸೀಳಿ ಬಂದ, ಜ್ಞಾನ ಶಿಶುಗಳು ಅಥವಾ ನಂಜಿನಲ್ಲಿ ಮುನಿಸಿಕೊಂಡು ಏನೂ ಮಾಡಕ್ಕೇ ಆಗದೆ ಏನನ್ನೂ ಮರೀದೆ, ಯಾರ ಮೇಲೆ ದ್ವೇಷ ತೀರಿಸಿಕೊಳ್ಳಬೇಕು ಅಂತಿದ್ದರೋ, ಅವರಿಗಿಂತ ಜಾಸ್ತಿನೇ ಒದ್ದಾಡಿ ಹ್ಯಾಮ್ಲೆಟ್‌ನಂತೆ ಗೊಂದಲದಲ್ಲಿ ತಮ್ಮ ದಾರುಣ ಅಂತ್ಯವನ್ನು ತಾವೇ ನಿರ್ಮಿಸಿ ಸ್ವಇಚ್ಛೆಯಿಂದ ನಾಶ ಆಗೋ ವ್ಯಕ್ತಿಗಳು. ಎಲ್ಲಿ ರಶ್ಯ... ಎಲ್ಲಿ ಫ್ರಾನ್ಸ್... ಎಲ್ಲಿ ಇಂಗ್ಲೆಂಡ್... ಅನುವಾದ ಅನ್ನೋ ಹಂಗನ್ನೇ ಮೀರಿ, ರೂಪಾಂತರ ಆದವರು ಇವರೆಲ್ಲ. ಈ ಪ್ರತಿಬಿಂಬ ಅನ್ನೋ ವಿಶೇಷವಾದ ಜಾದೂ, ರೂಪಾಂತರವನ್ನು ಮೀರಿ, ಮನುಷ್ಯನೆಂಬ ವಿಲಕ್ಷಣ ಜೀವಿಯ ತದ್ರೂಪವನ್ನು ಕಾಲದೇಶಗಳ ಮಿತಿಗಳನ್ನು ಮೀರಿ ಎಲ್ಲ ಕಡೆ ಬಿಂಬಿಸುತ್ತದೆ. ಅಲ್ಲನ್ ಪೋನ ಕಪ್ಪು ಬೆಕ್ಕು ಅನ್ನೋ ಭಯಂಕರ ಸಣ್ಣ ಕಥೆಯನ್ನೇ ಸೂಕ್ಷ್ಮವಾಗಿ ನೋಡಿ; ಗ್ರೀಕಿನ ಈಡಿಪಸ್ ರೆಕ್ಸ್‌ನನ್ನೂ ಅಮೆರಿಕದ ಮಾರ್ಜಾಲವನ್ನೂ ಗುಪ್ತವಾಗಿ ಜೋಡಿಸೋ ಟೆಲಿಪತಿ ಬೇರು ಗೋಚರಿಸುತ್ತದೆ ನಿಮ್ಮ ಮನಸ್ಸಿನ ಕಣ್ಣಿಗೆ. ಈ ಎಡ್ಗರ ಅಲ್ಲನ್ ಪೋನ ಕತೆಯಲ್ಲಿ ಹೆಂಡತಿಯನ್ನು ಕೊಂದು ಗೋಡೆಯಲ್ಲಿ ಅವಳ ಹೆಣವನ್ನು ಹೂತು ಹಾಕಿರೋ ಗಂಡ, ಪೊಲೀಸರಿಂದ ಹೇಗೆ ತಪ್ಪಿಸಿಕೊಳ್ಳಲಿ ಎಂದು ಲೆಕ್ಕ ಹಾಕುತ್ತಾ ಇದ್ದಾಗಲೇ, ತನಗೆ ಮಾತ್ರ ಕೇಳುತ್ತಿರುವ ಗೋಡೆಯ ಯಾವುದೋ ಆಳದಿಂದ ಝೇಂಕರಿಸುತ್ತಿರುವ ಒಂದು ನಿಗೂಢ ಕಪ್ಪು ಬೆಕ್ಕಿನ ಬೊಬ್ಬೆ ಕೇಳಿ ಕೇಳಿ ಸುಸ್ತಾಗಿ, ಆ ಕೊರೆಯುವ ತರಂಗಗಳನ್ನು ಸಹಿಸಲಾಗದೆ, ಯಾವ ಸಾಕ್ಷಿಯೂ ಸಿಗದೆ ಮರಳುತ್ತಾ ಇದ್ದ ಪೊಲೀಸರನ್ನು ಈ ಕೊಲೆಪಾತಕಿಯೇ ವಾಪಸ್ ಕರೆದು, ಆ ರಹಸ್ಯ ಕಾಲ್ಪನಿಕ ಬೆಕ್ಕಿನ ಕೂಗಿನ ವ ುೂಲವನ್ನು ತೋರಿಸುತ್ತೇನೆ ಎಂದು ಭ್ರಾಂತ್ಯಾತ್ಮಕವಾಗಿ ಕನವರಸಿ, ತನ್ನ ಹೆಂಡತಿಯ ಹೆಣವಿದ್ದ ಗೋಡೆಯನ್ನೇ ಅಗೆದು ಬಿಡುತ್ತಾನೆ. ಕೊನೆಗೆ ಎಲ್ಲವನ್ನೂ ಒಪ್ಪಿ ಸ್ವಇಚ್ಛೆಯಿಂದಲೇ ಶರಣಾಗತನಾಗುತ್ತಾನೆ. ಈ ಕಥೆಯ ಕಪ್ಪುಬೆಕ್ಕನ್ನು ನಾವು ಆ ಹೆಂಡತಿ ಕೊಲೆಗಾರನ ಮನಃಸಾಕ್ಷಿ ಅನ್ನೋದಕ್ಕಿಂತ, ಆತನ ಇವಿಲ್ ಟ್ವಿನ್ ಅಥವಾ ಅಪಾಯಕಾರಿ ಅವಳಿ ಅನ್ನಬಹುದು. ಏಕೆಂದರೆ ಎಲ್ಲ ಸಂಪನ್ನ ಆಗಿರುವಾಗ ಇಷ್ಟಪಟ್ಟೇ ನಾಶ ಆಗೋ ಮನುಷ್ಯರ ನಿದರ್ಶನ ನಮಗೆ ಇತಿಹಾಸದುದ್ದಕ್ಕೂ ಮಾತ್ರ ಅಲ್ಲ, ಚಿರಂತನವಾಗಿ ಹೊಳೆಯುವ ಜಗತ್ತಿನ ಸಾಹಿತ್ಯಲೋಕದಲ್ಲೂ ಸಿಕ್ಕೇ ಸಿಗುತ್ತದೆ!
ಮಹಾಕವಿ ಸೊಫೊಕ್ಲೆಸನ ರುದ್ರ ನಾಟಕ ಈಡಿಪಸ್ ರೆಕ್ಸ್ ಅಲ್ಲೂ ಇದೇ ಕಥೆ ತಾನೆ. ಈ ದೊರೆಯನ್ನು ಪ್ರಶ್ನಿಸೋ ಹಕ್ಕು ಯಾರಿಗೂ ಇಲ್ಲದೇ ಇದ್ದರೂ, ತಾನೇ ಸರ್ವಶಕ್ತನಾಗಿದ್ದರೂ, ಈಡಿಪಸ್ ಸ್ವಂತ ಇಚ್ಛೆಯಿಂದಲೇ, ಅವನ ಮೂಲ ಹುಡುಕುತ್ತಾ ಹೋಗಿ ನಾಶವಾಗುತ್ತಾನೆ. ಈ ಸತ್ಯಸಂಶೋಧನೆಗೆ ಚಾಲನೆ ಕೊಡುವುದೂ ಖುದ್ದು ಈಡಿಪಸ್ ರೆಕ್ಸ್! ಆಸ್ಥಾನದ ಮಂತ್ರಿಗಳು, ಪಟ್ಟದರಸಿ ಈ ಎಲ್ಲರೂ ದೊರೆಯ ಭೂತಕಾಲವನ್ನು ಪಾತಾಳಕ್ಕೆ ತಳ್ಳಲು ಯಾವುದೇ ತಕರಾರಿಲ್ಲದೆ ಸ್ವಯಂ ಸ್ಫೂರ್ತಿಯಿಂದ ಸಜ್ಜಾಗಿದ್ದಾರೆ. ಜೊಕಾಶ್ಟಳಿಗೂ ಗೊತ್ತಿದೆ ಈಡಿಪಸ್ ಅಪ್ಪನನ್ನು ಕೊಂದು ಅರಿಯದೇ ಅಮ್ಮನನ್ನು ಕಟ್ಟಿಕೊಂಡ ರಹಸ್ಯ ಆಚೆ ಬಂದರೆ ಎಲ್ಲವೂ ಘೋರ ದುರಂತದಲ್ಲಿ ಪರ್ಯಾವಸನಗೊಳ್ಳುವುದು ಎಂದು. ಆದರೂ ಈಡಿಪಸ್ ಈ ವಿನಾಶಕಾರಿ ಉಗ್ರ ಸತ್ಯವನ್ನು ಭೂತದ ಗರ್ಭದಿಂದ ಆಚೆಗೆ ಕೀಳುತ್ತಾನೆ. ಕೊನೆಗೆ ಆ ಸತ್ಯದ ತೀವ್ರತೆಯನ್ನು ಸಹಿಸಲಾಗದೆ ಕಣ್ಣು ಕಿತ್ತುಕೊಳ್ಳುತ್ತಾನೆ. ಹೀಗೆ ವಿಪರೀತ ಜ್ಞಾನದಿಂದ ನಾಶವಾಗಿ ಶುದ್ಧನಾದ ಈಡಿಪಸ್‌ನಂತೆ ಈ ಎಡ್ಗರ್ ಪೋ ಕೂಡ. ಕವಿ ಚಾರ್ಲ್ಸ್ ಬೋದಿಲೇರ್‌ಗೆ ಅಲ್ಲನ್ ಪೋ ಇಷ್ಟ ಆಗಿದ್ದು ಇದೇ ಕಾರಣಕ್ಕೆ. ಬೋದಿಲೇರ್‌ನಂತೆ ಅಲ್ಲನ್ ಪೋ ಕೂಡ ತನ್ನದೇ ದೇಶದಲ್ಲಿ ಪರಕೀಯನಾದವ. ಅವನ ಹಾಗೇ ಇವನೂ ಕೂಡ ಬಿಳಿ ಸಭ್ಯರಿಂದ ವಿಕೃತ ಅಂತ ಉಗಿಸಿಕೊಂಡು ಎಲ್ಲ ಪಬ್ಲಿಷರ್ಸ್‌ರಿಂದ ಛೀಮಾರಿ ಹಾಕಿಸಿಕೊಂಡ ದೊಡ್ಡ ಕುಡುಕನಾಗಿದ್ದ. ಕೊನೆಗೆ ಅನಾಮಿಕನಾಗಿ ಲಂಡನಿನ ಯಾವುದೋ ಮೂಲೆಯಲ್ಲಿ ತುಂಬಾ ಸಣ್ಣ ವಯಸ್ಸಲ್ಲೇ ಅನಾಥವಾಗಿ ಸತ್ತ ದಾರಭ ವ್ಯಕ್ತಿ ಈ ಪೋ. ಬೋದಿಲೇರಿಗಿದ್ದ ಫ್ರಾನ್ಸ್ ಕಲಾನಗರಿಯ ಸ್ವೇಚ್ಛೆಯ ಸವಲತ್ತು ಎಡ್ಗರ್‌ಗೆ ಇರಲೇ ಇಲ್ಲ. ಈ ಯುರೋಪಿನ ಬೇರೆ ಬೇರೆ ಮೂಲೆಯಿಂದ ಬಂದು ಇಲ್ಲಿದ್ದ ಮೂಲಭೂತ ನಿವಾಸಿಗಳನ್ನು ಕೊಂದೋ ಓಡಿಸಿಯೋ ನೆಲೆನಿಂತ ಬಿಳಿಯರ ಅಮೆರಿಕ ಅನ್ನೋ ಸಂಭಾವಿತರ ನಾಡಲ್ಲಿ, ಎಲ್ಲ ಅಚ್ಚುಕಟ್ಟಾಗಿ, ಚೆನ್ನಾಗಿ ಬಟ್ಟೆ ಹಾಕಿ, ವಿಶ್ವಕ್ಕೇ ಪಾಠ ಹೇಳೋ ವೈಟ್‌ಮನ್ ಬರ್ಡನ್ (ಬಿಳಿಜನರ ಜವಾಬ್ದಾರಿಯ ಹೊರೆ) ಹೊತ್ತಿದ್ದ ಆಷಾಢಭೂತಿ ಉದ್ಧಾರಕರ ನಾಡಲ್ಲಿ, ಯಾವ ನಾಚಿಕೆಯೂ ಇಲ್ಲದೆ, ಪಾಪಪ್ರಜ್ಞೆಯೂ ಇಲ್ಲದೆ ರೇಸಿಸ್ಟ್‌ಗಳ ನಾಡಲ್ಲಿ ಆತ್ಮಹತ್ಯಾಕಾರಕವಾಗಿ ಬದುಕಲು ಮತ್ತು ರಶ್ಯದ ದಸ್ತಯೇವ್‌ಸಿ್ಕ ಸೃಷ್ಟಿ ಮಾಡಿದ ಪಾತ್ರಗಳ ಹಾಗೇ ಕತ್ತಲಬೆಳಕಲ್ಲಿ ಇಳಿಯಲು ತಾಕತ್ತು ಬೇಕು. ಎಡ್ಗರ್ ಅಲ್ಲನ್ ಪೋಗೆ ಆ ಶಕ್ತಿ ಇತ್ತು. ಆದರೆ ಈ ತಾಕತ್ತು ಗ್ರೀಕ್ ರುದ್ರನಾಟಕದ ಈಡಿಪಸ್‌ನನ್ನು ಪ್ರತಿಬಿಂಬಿಸೋದು ಮಾತ್ರ ಬದುಕು ಕಾವ್ಯವನ್ನು ಅನುಕರಿಸೋ ಅಸಂಗತ ವ್ಯಂಗ್ಯ. ಅಮ್ಮನನ್ನು ಈ ಅಲ್ಲನ್ ಪೋ ಎಷ್ಟೊಂದು ಪ್ರೀತಿಸಿದ್ದನೆಂದರೆ, ಆಕೆ ಸತ್ತ ಮೇಲೆ ನಿರಂತರ ಶೋಕದಲ್ಲಿ ಬದುಕೋ ಶಾಪವನ್ನು ಖುಷಿಯಿಂದಲೇ ಆಹ್ವಾನಿಸಿಕೊಂಡಿದ್ದ. ಅವನ ಯಾವ ಕಥೆಯನ್ನೇ ನೋಡಿದರೂ ಅಲ್ಲಿ ಈ ಬತ್ತದ ಭಯ ಮತ್ತು ಬಯಕೆಗಳು, ಆತಂಕ ಮತ್ತು ವೇದನೆ ಮತ್ತೆ ಮತೆ್ತ ಮರುಕಳಿಸುತ್ತಲೇ ಇರುತ್ತದೆ.
ಈಡಿಪಸ್‌ನಂತೆ ಈತನೂ ಸತ್ಯವನ್ನು ಉಲ್ಲಾಸ ಹಾಗೂ ಆನಂದದ ಸೋಗಿನಲ್ಲಿ ಮುಚ್ಚಲು ಸಿದ್ಧವಿಲ್ಲದವ. ದ ಫಾಲ್ ಆಫ್ ಯುಶರ್ ಕಥೆಯಲ್ಲಿ ಮ್ಯಾಡೆಲಿನ ಯೂಶರ್ರ್ ಅನ್ನುವವಳನ್ನು ಇದ್ದಕ್ಕಿದ್ದ ಹಾಗೇ ನೆಲಮಾಳಿಗೆಯಲ್ಲಿ ಹೂತು ಹಾಕಲಾಗುತ್ತದೆ. ಈ ದೃಶ್ಯ ಅಲ್ಲನ್ ಪೋನ ಒಡಲಾಳದಲ್ಲಿ ಹೂತಿಟ್ಟ ಅಮ್ಮನ ಮೇಲಿದ್ದ ಮಿತಿಮೀರಿದ ಪ್ರೀತಿ ಮತ್ತು ಆಕೆ ಸಾವಿನಿಂದ ಕುದಿಯುತ್ತಿದ್ದ ದುಃಖ, ದಿಗ್ಭ್ರಾಂತಿಗಳ ಪ್ರತಿಬಿಂಬ. ಹಾಗೆಯೇ ಈ ಕಥೆ ನಡೆಯೋ ಆ ಮನೆಯೇ ಗರ್ಭದ ಪ್ರತಿಬಿಂಬ. ಈ ಗರ್ಭವನ್ನು ಹೋಲುವ ಗೃಹ ಸುರಕ್ಷತೆಯ ಸಂಕೇತ. ಇಂಥ ಸುರಕ್ಷ ಜೀವನವನ್ನೇ ಸೊಫೊಕ್ಲೆಸ್ ಸೃಷ್ಟಿ ಮಾಡಿದ ಈಡಿಪಸ್ ತನ್ನ ತಾಯಿಯಲ್ಲಿ ಅರಸಿ, ಅನೈಛ್ಛಿಕವಾಗಿದ್ದ ಕಾಮನೆಯನ್ನು ಪೂರೈಸಲು, ತಂದೆಯನ್ನು ಕೊಂದು ಅಮ್ಮನನ್ನು ಕಟ್ಟಿಕೊಂಡು, ಮತ್ತೆ ಸುಪ್ತ ಮನಸ್ಸಿನ ಅನಾಮಿಕ ಆಳದಲ್ಲಿ ಈ ಎಲ್ಲ ಸತ್ಯವನ್ನು ಅದುಮಿಟ್ಟು ಸಭ್ಯನಾಗಿ ಇರಲು ಯತ್ನಿಸಿದ್ದನೋ ಏನೋ. ಆದರೆ ಕೆಯಾಸ್ ಅಥವಾ ರೌದ್ರ ಘಟಿಸಿದ್ದು ಈಡಿಪಸ್ ಆತ್ಮಸಾಕ್ಷಿಯ ಮಾತು ಕೇಳಿ ಸತ್ಯವನ್ನು ಅಗೆದು ‘ಒಳ್ಳೆಯವನಾಗಿದ್ದಕ್ಕೆ.’ ಈ ದೊರೆ ತನ್ನ ಅಂತರಾಳದ ಭಯಂಕರ ಘರ್ಷಣೆಯ ಜತೆ ಮುಖಾಮುಖಿಯಾಗಲು ಹೋಗಿ ಸಂಪೂರ್ಣವಾಗಿ ನಾಶ ಆದ. ಆದರೆ ನಮ್ಮ ಅಮೆರಿಕದ ಅಲ್ಲನ್ ಪೋ ಹಾಗೆ ಭಸ್ಮ ಆಗಲಿಲ್ಲ. ಆತ ಯಾವತ್ತೂ ತನ್ನ ಸತ್ತ ಅಮ್ಮನಿಗೆ ನಿರಂತರವಾಗಿ ನಿಯತ್ತಾಗಿರಬೇಕು ಅನ್ನೋ ಗೀಳಿಗೆ ಬಿದ್ದು, ಕಥೆಗಳ ಮೂಲಕ ಆ ಗೀಳನ್ನು ಹೊರ ಹಾಕಿ ಹೇಗೋ ಬಚಾವಾದ. ಇಲ್ಲದಿದ್ದರೆ ಅಲ್ಲನ್ ಪೋ, ಭೂತಕಾಲ ಸೂಸುತ್ತಿದ್ದ ಸತ್ತಿದ್ದ ತಾಯಿ ಪ್ರೀತಿಯಿಂದ ಹುಚ್ಚನಾಗಿ ನೆಕ್ರೊಫಿಲಿಶ್ಟ್ (ಶವಪ್ರೇಮಿ) ಆಗಿ ಬಿಡುವ ಅಪಾಯವಿತ್ತು; ಅಥವಾ ಈಡಿಪಸ್ ಕಾಂಪ್ಲೆಕ್ಸ್‌ನಿಂದ ಹುಟ್ಟುವ ಈ ನೆಕ್ರೊಫಿಲಿಯಾ ಎಡ್ಗರ್‌ನನ್ನು ವಿಕೃತಪಾತಕಿಯನ್ನಾಗಿಸುತ್ತಿತ್ತೋ ಏನೋ. ಆತ ಮಹಾ ಕುಡುಕ ಆಗಿದ್ದು ಲೈಂಗಿಕವಾಗಿ ತೀರ ಕಟ್ಟುನಿಟ್ಟಾಗಿ ಆಗಿದ್ದು ನೀಗಿಕೊಂಡ ಅಮ್ಮನ ದುಃಖ ತನ್ನ ಎದೆಯಿಂದ ಆರಬಾರದೆಂದೇ. ಅಲ್ಲನ್ನ್ ಪೋನ ವೀರ್ಡ್ ಟೇಲ್ ಆಫ್ ಈಥಲ್ ರೆಡ್ ಕಥೆಯಲ್ಲಿ ಡ್ರಾಗನ್ ಅನ್ನೋ ಅಪ್ಪನನ್ನು ಕೊಂದು ಸೀಕ್ರೆಟ್ ಟ್ರೆಶರ್ರ್ ಅನ್ನೋ ಅಮ್ಮನನ್ನು ಸಂಪಾದಿಸೋದು, ಹಾಗೇ ‘ದ ಟೆಲ್ ಟೇಲ್ ಹಾರ್ಟ್’ ಅನ್ನೋ ಕಥೆಯಲ್ಲಿ ಅಪ್ಪನ ಮೇಲೆ ಸೇಡು ತೀರಿಸುಕೊಳ್ಳುವ ಪ್ರತಿಮೆ ಇವೆಲ್ಲ ಈ ಶೇಕ್ಸ್‌ಪಿಯರ್‌ನ ಹ್ಯಾಮ್ಲೆಟ್‌ಗೆ ಇದ್ದ ಸುಪ್ತ ತಲ್ಲಣಗಳ ಹಿಗ್ಗಿದ ಸ್ಥಿತಿ ಅನ್ನಿಸುತ್ತದೆ. ಇಷ್ಟು ಉಗ್ರವಾಗಿ ಗೀಳಿಗೆ ಬಿದ್ದು, ಸಾಹಿತ್ಯದ ಮುಲಾಮಿನಿಂದ ಚೂರೇ ಚೂರು ಬದುಕನ್ನು ಕಂಡ ಒಬ್ಬ ವಿಕ್ಷಿಪ್ತ ಕಥೆಗಾರನನ್ನು ನೋಡಿದಾಗ ವಿಚಿತ್ರ ಆಶ್ಚರ್ಯವಾಗುತ್ತದೆ. ಅಂದರೆ ಈ ಸೊಫೊಕ್ಲೆಸ್ ಕಾಲದಲ್ಲಿ ಶುರುವಾದ ಈ ಪ್ರಕ್ರಿಯೆ ಪ್ರಪಂಚದ ಇನ್ನೊಂದು ಮೂಲೆಯಲ್ಲಿರೋ, ಬೇರೆಯೇ ಸಂಸ್ಕೃತಿಯ, ಬೇರೆಯೇ ಕಾಲಮಾನದ, ಇನ್ನೊಬ್ಬನಲ್ಲಿ ಪ್ರತಿಬಿಂಬ ಆಗುತ್ತಾ ಇದೆ. ಇದನ್ನು ಪ್ರತಿಬಿಂಬ ಅನ್ನೋಣವೇ? ಅಥವಾ ವಿಕಾಸ ಅನ್ನೋಣವೇ? ಭಾರೀ ವಿಚಿತ್ರ ಇದು, ಅಷ್ಟೇ ತಮಾಷೆ.
ಫ್ರಾನ್ಝ್ ಕಾಫ್ಕನ ಮೆಟಮೋರ್ಫಸಿಸ್(ರೂಪಾಂತರ) ನೀಳ್ಗತೆಯಲ್ಲೂ ಈ ಅಲ್ಲನ್ ಪೋನ ಹಾಗೆ ಅವತಾರ ಎತ್ತಿರೋ ಮನುಷ್ಯ ಇದ್ದಾನೆ. ಅವನೇ ಜಾರ್ಜ್ ಸಂಸ. ಈ ಸಂಸ ಹುಳ ಆಗಿ ರೂಪಾಂತರ ಆಗೋದ ತಕ್ಷಣ ಕಥೆ ಶುರು ಆಗುತ್ತೆ! ಇದ್ದಕ್ಕಿದ್ದಂತೆ ಒಂದು ದಿನ ಎದ್ದಾಗ ಸಂಸ ಯದ್ವಾತದ್ವಾ ಬೆಳೆದಿದ್ದ ಹುಳ ಆಗಿದ್ದ ಅಂತ... ನಿಜಕ್ಕೂ ನೋಡಿದರೆ ಈ ಮಹಾಕಥೆಯ ಮೊದಲ ಸಾಲೇ ಒಂದು ಮಹಾ ಕ್ಲೈಮ್ಯಾಕ್ಸ್; ಕಥೆ ಅಲ್ಲಿಗೇ ಮುಗೀಬೇಕು. ಕಾ್ಕನ ರೂಪಾಂತರ ಶುರು ಆಗೋದೇ ಕೊನೆಯಿಂದ! ಈ ಸಂಸ ಅನ್ನೋ ಸಾಮಾನ್ಯ ಬಡಪಾಯಿ ಸೇಲ್ಸ್‌ಮ್ಯಾನ್ ದೈತ್ಯ ಹುಳವಾಗಲು ಕಾರಣವಾದ ಆ ತ್ರಾಸದಾಯಕವಾದ ಪ್ರಕ್ರಿಯೆ, ಸಂಸನ ಒದ್ದಾಟ, ಈ ಹಿಮ್ಮುಖ ವಿಕಾಸದ ಬಗ್ಗೆ ಯಾವ ವಿವರಣೆಯನ್ನೂ ಕೊಡದೆ ಕಾ್ಕ ನಮ್ಮನ್ನು ಅಂತ್ಯಕ್ಕೆ ತಂದು ನಿಲ್ಲಿಸಿ ಕಥೆ ಶುರು ಮಾಡುತ್ತಾನೆ. ಅದೇ ಭಯ, ಅದೇ ಗೊಂದಲ ಗಾಬರಿ ಎಲ್ಲವೂ ಉಂಟು ಇಲ್ಲಿ. ವಿಕಾಸ ಆಗಲ್ಲ ಅಂತ ಹಿಂದೆ ಹೋಗಿ ಹುಳ ಆಗಿದ್ದರೂ ಅಥವಾ ಹುಟ್ಟಲ್ಲ ಅಂತ ಹಟ ಮಾಡಿ ಗರ್ಭದೊಳಗೆ ಅವಿತರೂ ಹುಟ್ಟಲೇ ಬೇಕು, ಬದುಕಲೇ ಬೇಕು ಅನ್ನೋ ಒತ್ತಡದ ಜತೆ ಸಂಸ ಕೂಡ ನೋವಲ್ಲೇ ಬೆಂದು ಬೆಂದು ಕೊನೆಗೆ ಶುದ್ಧನಾಗಿ ಸಾಯುತ್ತಾನೆ. ಈ ಅಲ್ಲನ್ ಪೋ ತನ್ನ ಚಿತ್ತವಿಕಾರಗಳ ಜತೆ ನೊಂದು ನಿಜಕ್ಕೂ ಸತ್ತ ಹಾಗೆ.
ಗುಪ್ತಗಾಮಿನಿಯಂತೆ ಸಮಯದ ಆದಿಯಿಂದಲೂ ಹರಿಯುತ್ತಲೇ ಇರುವ ಈ ಪ್ರತಿಬಿಂಬ ಅನ್ನುವ ವಿಸ್ಮಯ ಪ್ರಪಂಚದಷ್ಟೇ ಪುರಾತನ, ಅಷ್ಟೇ ಹೊಸತು ಕೂಡ!
ಹೀಗೆ ಕಾಲ-ದೇಶ-ಕಾಲಗಳ ಅಳಿಸಿ ಪ್ರತೀ ಶತಮಾನಗಳಲ್ಲೂ ಪುನರಾವರ್ತನೆಯಾಗುವ ಈ ಪ್ರತಿಬಿಂಬ ಗೋಪಾಲಕೃಷ್ಣ ಅಡಿಗರು ಬರೆದ ಅಮೃತವಾಹಿನಿಯಂತೆ ಹರಿಯುತ್ತಲೇ ಇದೆ, ನಿರಂತರವಾಗಿ. ಈ ಪ್ರವಾಹ ಕೆಲವು ಸಲ ಎಷ್ಟು ವಿಲಕ್ಷಣವಾಗಿ ಪ್ರತಿಧ್ವನಿಸುತ್ತೆ ಎಂದರೆ ‘ಅಬ್ಬಾ!’ ಅನ್ನೋ ಉದ್ಗಾರ ಗೊತ್ತಿಲ್ಲದೆಯೇ ಸೂಕ್ಷ್ಮ ಹೃದಯಿಗಳ ಎದೆಯಲ್ಲಿ ಚಿಮ್ಮುತ್ತದೆ. ಮುಗಿಸುವ ಮುನ್ನ ಇನ್ನೊಂದು ಸೋಜಿಗವ ನೋಡಿ. ದಸ್ತೆಯೇವ್‌ಸ್ಕಿಯ ಈ ಕ್ರೈಂ ಆ್ಯಂಡ್ ಪನಿಶ್ಮೆಂಟ್‌ನ ದುರಂತ ನಾಯಕ ರಸ್ಕೋಲ್ನಿಕೊವ್‌ಗೆ ಒಂದು ಕನಸು ಬೀಳುತ್ತದೆ. ಆ ಕನಸಲ್ಲಿ ಒಂದು ಸಂತೆ. ಸಂತೆ ತುಂಬಾ ಜನ. ಒಂದು ಕಡೆ ಜನರೆಲ್ಲ ಒತ್ತೊತ್ತಾಗಿ ದೊಡ್ಡ ಗುಂಪು ಕಟ್ಟಿ ಏನೋ ತಮಾಷೆ ನೋಡುತ್ತಾ ಇರುತ್ತಾರೆ. ಅಲ್ಲೊಬ್ಬ ಜಟಕ ಸವಾರ ತನ್ನ ಕುದುರೆಗೆ ಬೇಕಾಬಿಟ್ಟಿ ಚಚ್ಚುತ್ತಾ ಇರುತ್ತಾನೆ. ಪಾಪ ಆ ಕುದುರೆ ನೋವು ತಿಂದು ತಿಂದು ಏಳಲೂ ಆಗದೇ ಸಾಯೋ ಸ್ಥಿತಿಯಲ್ಲಿರುತ್ತದೆ. ಹಾಗಿದ್ದೂ ಜಟಕಾ ಗಾಡಿಯ ಸವಾರ ಮಾತ್ರ ತೀರ ಕೆಟ್ಟ ಮಾತಲ್ಲಿ ಆ ಪ್ರಾಣಿಗೆ ಬೈಯುತ್ತಾ, ಚಾವಟಿಯಲ್ಲಿ ಬಾರಿಸಿ, ಕೊನೆಗೆ ಚಾಕು ತಂದು ಆ ಬಡಕಲು ಅಶ್ವವನ್ನು ಇರಿದು ಕೊಂದೇಹಾಕುತ್ತಾನೆ. ಹೌದು ಇದೆಲ್ಲ ಕನಸೇ; ರಸ್ಕೋಲ್ನಿಕೊವ್ ಕಂಡ ಕನಸು. ‘ಅಯ್ಯೋ ನನ್ಗೇನು ಮಾಡಾಕ್ಕೆ ಆಗ್ಲಿಲ್ಲ ಪಾಪ ಆ ಕುದ್ರೆ, ಸತ್ತೇ ಹೋಯ್ತಲ್ಲ...!’ ಅಂತ ಅವನ ಮಗು ಮನಸ್ಸು ಅಳುತ್ತೆ... ವಿಚಿತ್ರವೆಂದರೆ ಈ ಕನಸು ಬಿದ್ದು ಸ್ವಲ್ಪದಿನ ಆದ ಮೇಲೆ ಈತ ಆ ಬಡ್ಡಿ
ಬಂಗಾರಮ್ಮನಂತಹ ದುರಾಸೆ, ದರ್ಪವಿರೋ ಮುದುಕಿಯನ್ನು ಅರಿವಿದ್ದೂ, ಆಕೆಯ ಮುಗ್ಧೆ ತಂಗಿಯನ್ನೂ ಅರಿವಿಲ್ಲದೆಯೇ ಕೊಚ್ಚಿ ಹಾಕುತ್ತಾನೆ... ಯಾರನ್ನು ಮಹಾ ಕಟುಕ ಅಂತ ಆತನ ಸುಪ್ತ ಮನಸ್ಸು ಊಹಿಸಿತ್ತೋ ಅವನೇ ಇವನಾಗಿ ಬಿಡುತ್ತಾನೆ. ಇದು ನಮ್ಮ ಜಮಾನದ ಮಹಾ ಪತನ. ಆದರೆ ಈ ಅಧಃಪತನದಲ್ಲೂ ನಾನೊಬ್ಬ ಖಳ ಅಂತ ಅರಿತು, ಅದೇ ಸೂಕ್ಷ್ಮ ಮನಸ್ಸಲ್ಲಿ ‘‘ಖಳ ಆದ್ರೂ ಏನ್ ಮಾಡೋದು, ಇನ್ನೂ ಹಾಳ್ ಕೆಲ್ಸ್ ಮಾಡೋದು... ಬೇರೇನು ಮಾಡಕ್ಕಾಗಲ್ಲ ಅಷ್ಟ್ ಹಾಳಾಗೊಗಿದ್ದೀನಿ ನಾನು...’’ ಅನ್ನೋ ತೀರ್ಮಾನಕ್ಕೆ ಬರೋ ಕರಾಳ ಸ್ಥಿತಿ ಉಂಟಲ್ಲ ಅದೇ ಈ ಕಾಲಮಾನದ ರಣ ವ್ಯಂಗ್ಯ. ಆದರೆ ತಮಾಷೆಯ ವಿಷಯವೆಂದರೆ ಈ ಕಾಲ್ಪನಿಕವಾದ ಕನಸಿನ ತುಂಡು ಜರ್ಮನಿಯ ತತ್ವಜ್ಞಾನಿ ಫ್ರೆಡ್ರಿಕ್ ನೀಶ್‌ನ ಕಡೇ ದಿನಗಳಲ್ಲಿ ನಿಜಕ್ಕೂ ಘಟಿಸಿದ್ದು. ಆತ ನರಮಂಡಲಗಳ ವೈಫಲ್ಯತೆಯಲ್ಲಿ ಒದ್ದಾಡುತ್ತಾ, ಹುಚ್ಚುಹುಚ್ಚಾಗಿ ಬೀದಿಲಿ ಅಡ್ಡಾಡುತ್ತಾ ಇದ್ದ ಸಮಯದಲ್ಲಿ, ಯಾರೋ ಜಟಕಾಗಾಡಿಯವ, ಈ ದಸ್ತಯೇವ್‌ಸ್ಕಿಯ ಕಾದಂಬರಿಯಲ್ಲಿ ಪ್ರತ್ಯಕ್ಷವಾದ ಕನಸಿನಂತೆ, ತನ್ನ ಕುದುರೆಗೆ ಚಚ್ಚುತ್ತಾ ಇದ್ದ. ಆಗ ಈ ನೀಶ್ ತಾನೇ ಕುದುರೆಯನ್ನು ಕಾಪಾಡಲು ಓಡಿ, ಅಡ್ಡ ನಿಂತು, ‘ಹೊಡೆಯೋದಾದರೆ ನನ್ಗೇ ಹೊಡಿ’ ಅಂತ ಕೂಗಾಡುತ್ತಾನೆ. ಬಹುಶಃ ನೀಶ್ ದಿವ್ಯ ಮತ್ತು ಕೇಡುಗಳ ಆಚೆಗಿದ್ದ ಜಾಗವನ್ನು ಸಂಶೋಧಿಸಿ ದಂಗಾಗಿ, ಮತ್ತೆ ಮಗುವಿನ ಮುಗ್ಧತೆಯನ್ನು ಹುಡುಕಿದ್ದ ಅನ್ನಿಸುತ್ತೆ. ಈ ಕಾಲ್ಪನಿಕ ರಸ್ಕೋಲ್ನಿಕೊವ್ ಥರ. ಅದೇ ಅಮೆರಿಕದ ರಾಕ್‌ಸ್ಟಾರ್, ಕವಿ ಜಿಮ್ ಮಾರಿಸನ್ ಆತನ ಅದ್ಭ್ಬುತ ಪದ್ಯ ಸಾಫ್ಟ್ ಪೆರೇಡಲ್ಲಿ ಅಂತಾನೆ, ‘‘When all else fails, we shall whip the horse's eyes and we shall make them sleep and make them cry’’ ಈ ಜಿಮ್ ಮಾರಿಸನ್ ದಸ್ತಯೇವ್‌ಸ್ಕಿನ ಅನಾಯಕನಂತೆ, ಕುದುರೆಯ ಕೊಲ್ಲೋಣ ಅಂತ ಪಣ ತೊಟ್ಟಂತೆ ಮಾತನಾಡುತ್ತಾನೆ. ನಮ್ಮ ಪತನ ಎಷ್ಟು ಘೋರ ಅಂದರೆ ಏನೂ ಗಿಟ್ಟಿಸಕ್ಕೇ ಆಗದೆ ಇದ್ದಾಗ ಕ್ರೂರಿಗಳಾಗಿ ನಾವು ನಮಗಿಂತ ದಮನಿತರನ್ನು ಹಿಂಸಿಸಿ ವಿಲಕ್ಷಣ ಸುಖ ಪಡೆದು, ನಮಗಾದ ಅವಮಾನಗಳನ್ನೂ ನಮ್ಮ ಹತಾಶೆಗಳನ್ನೂ ಮರೆಯಲು ಯತ್ನಿಸುತ್ತೇವೆ. ಈ ಶಕ್ತಿ ಅಥವಾ ಪವರ್‌ನ ಹುಚ್ಚು ಅತಿಯಾಗೋದು ಇಂತಹ ನಿಗೂಢ ಸಂದರ್ಭಗಳಲ್ಲೇ. ಇದರ ಹಿಂದೆ ಹೋಗಿ ರಸ್ಕೋಲ್ನಿಕೊವ್ ನೆಪೋಲಿಯನ್ ಹಾಗೆ ಆಗ್ಬೇಕು ಅಂತ ಆಶೆ ಪಟ್ಟು, ನರಹಂತಕ ಆಗಿ ಉರಿದು ಉರಿದು ಸೋತು ಸರೆಂಡರ್ ಆಗುತ್ತಾನೆ. ಆದರೆ ಈ ದಸ್ತಯೇವ್‌ಸ್ಕಿಯ ಅನಾಯಕನ ನಿಜವಾದ ದುರಂತವಿದ್ದದ್ದು ಆತನ ಆತ್ಮಸಾಕ್ಷಿಯನ್ನು ಸುಮ್ಮನಾಗಿಸಲು ಸೋತು, ತಡೆಯಲಾಗದೆ ಶರಣಾಗಿ ಮುಕ್ತಿ ಬಯಿಸಿದ್ದರಲ್ಲಿ. ವಿಲ್ ಟು ಪವರ್ ಅಥವಾ ಶಕ್ತಿಗೆ ಉತ್ತೇಜನ ಕೊಡುವ ಸಿದ್ಧಾಂತ ಕಂಡು ಹಿಡಿದ ನೀಶ್ ಪಾಪ ಕಡೆಗಾಲದಲ್ಲಿ ಪೇಲವನಾಗಿ ಯಾರೋ ಬಡಪಾಯಿ ಪಾಪ ತನ್ನ ಕುದುರೆಗೆ ಚಚ್ಚುತ್ತಾ, ಆ ಮೂಲಕ ತನಗಾದ ಅವಮಾನ, ಹತಾಶೆ, ಒಡೆದ ಕನಸುಗಳ ಯಾತನೆ, ಎಲ್ಲಕ್ಕಿಂತ ಹೆಚ್ಚಾಗಿ ಸಮಾಜದಲ್ಲಿ ತನಗೆ ದಕ್ಕದೇ ಇದ್ದ ಶಕ್ತಿಯನ್ನು, ಈ ಕೃಶಜೀವಿಯ ಮೇಲೆ ಚಲಾಯಿಸುತ್ತಾ, ಅಸ್ವಸ್ಥ ನೆಮ್ಮದಿಯನ್ನು ಪಡೆಯಲು ಹೆಣಗುತ್ತಿದ್ದುದನ್ನು ನಿಲ್ಲಿಸಲು ಒದ್ದಾಡುತ್ತಾನೆ. ಅಮೆರಿಕನ್ ರಾಕ್ ದೊರೆ ಮಾರಿಸನ್ ಎಪ್ಪತ್ತರಲ್ಲಿ ಅಮೆರಿಕದಿಂದ ವಿಯೆಟ್ನಾಂ, ಕಾಂಬೋಡಿಯದಲ್ಲಿ ಆದ ಹತ್ಯಾಕಾಂಡವನ್ನು ಮತ್ತೆ ಭೋಳೆ ಕುದುರೆ ಬಲಿ ಕೊಡೋ ಪ್ರತಿಮೆ ಮೂಲಕ ಕಟ್ಟುತ್ತಾನೆ, ಹೇಗೆ ಮನುಷ್ಯ ಶಕ್ತಿಯ ಹುಚ್ಚು ಹಿಡಿದು ಮುಗ್ಧತೆಯನ್ನು ಕೊಚ್ಚಿಹಾಕುತ್ತಾನೆ ಎನ್ನುವಂತೆ. ಹೀಗೆ ಗುಪ್ತಗಾಮಿನಿಯಂತೆ ಸಮಯದ ಆದಿಯಿಂದಲೂ ಹರಿಯುತ್ತಲೇ ಇರುವ ಈ ಪ್ರತಿಬಿಂಬ ಅನ್ನುವ ವಿಸ್ಮಯ ಪ್ರಪಂಚದಷ್ಟೇ ಪುರಾತನ, ಅಷ್ಟೇ ಹೊಸತು ಕೂಡ!