varthabharthi


ವಾರ್ತಾಭಾರತಿ 18ನೇ ವಾರ್ಷಿಕ ವಿಶೇಷಾಂಕ

'ಮಲೆಗಳಲ್ಲಿ ಮದುಮಗಳು' ನಿರ್ವಹಿಸುವ ಹಿಂದೂ ಪ್ರಜ್ಞೆಯ ನಾಲ್ಕು ಮಾದರಿಗಳು

ವಾರ್ತಾ ಭಾರತಿ : 16 Jan, 2021
ಡಾ. ನೆಲ್ಲುಕುಂಟೆ ವೆಂಕಟೇಶ್

ಡಾ. ನೆಲ್ಲುಕುಂಟೆ ವೆಂಕಟೇಶ್

ಮದುಮಗಳನ್ನು ಮೊದಲು ಓದಿದಾಗ ನನಗೆ ಹತ್ತೊಂಭತ್ತು ವರ್ಷ. ಕಾಲೇಜಿನ ಲೈಬ್ರರಿಯಿಂದ ಪಡೆದ ಪುಸ್ತಕ ಅದು. ಜೋಳ ಕಾಯುತ್ತಾ ಊಟ ನೀರು ಬಿಟ್ಟು ಒಂದೇ ಗುಕ್ಕಿಗೆ ಮುಕ್ಕಿಬಿಟ್ಟ ಕಲಾಕೃತಿ. ಶೂದ್ರ ನೆರಳಿನಲ್ಲಿದ್ದ ನನಗೆ ಮದುಮಗಳು ನನ್ನಂಥವರದೇ ಕತೆ ಅನ್ನಿಸಿತ್ತು. ಅಲ್ಲಿನ ಅನೇಕ ಪಾತ್ರಗಳು ನನ್ನ, ನನ್ನ ಮನೆಯ, ಊರಿನ, ಕಾಡಿನ ಕತೆಯನ್ನೇ ಹೇಳುತ್ತಿವೆ ಅನ್ನಿಸಿತ್ತು. ಅದಾದ ಮೇಲೂ ಆಗಾಗ ಮದುಮಗಳಿಗೆ ಕಣ್ಣು ಹಾಕಿದ್ದೇನೆ (ದೇವನೂರರು ಹೇಳುವ ಅರ್ಥದಲ್ಲಿ). ಮದುಮಗಳು ಮೊದಲ ಪ್ರೇಮದಂತೆ, ಮೊದಲ ಮಳೆಯಂತೆ ಬಿಡದೆ ಕಾಡುವ, ಓದುಗನ ಚಿತ್ತ ಭಿತ್ತಿಯ ಮೇಲೆ ದಾಖಲಾಗುವ ಕೃತಿ.

ಮನಸ್ಸು ಸಂಕ್ಷೋಭೆಗೆ ಸಿಕ್ಕಿಕೊಂಡಾಗಲೆಲ್ಲ ಕುವೆಂಪು, ತೇಜಸ್ವಿ, ಕಾರಂತ, ಲಂಕೇಶ್ ಮುಂತಾದ ಕನ್ನಡದ ಲೇಖಕರ ಬಳಿಗೆ ಮತ್ತು ಹೊರಗಿನ ಅನೇಕ ಚಿಂತಕ, ಕಲಾವಿದರ ಬಳಿಗೆ ಸಾಂತ್ವನಕ್ಕಾಗಿ, ಉತ್ತರಗಳಿಗಾಗಿ ಹೋಗುತ್ತದೆ. ಬಿಸಿಲಲ್ಲಿ ಉಸಿರುಕಟ್ಟಿ ಸಾಯುವವನಿಗೆ ಬೊಗಸೆ ನೀರು, ಮುಷ್ಟಿ ಹಣ್ಣು ಮತ್ತು ಒಂದಿಷ್ಟು ನೆರಳು ಸಾಕು. ಇಂಥ ನೆರಳು ನೀಡುವ ಕೆಲಸವನ್ನು ಈ ಬರಹಗಾರರು ಮಾಡುತ್ತಾರೆಂದು ನಾನು ಅನುಗಾಲದಿಂದ ನಂಬಿದ್ದೇನೆ. ದಾರ್ಶನಿಕ ಕಲಾವಿದರು ತಮ್ಮ ಉದಾತ್ತ ಲೋಕಗ್ರಹಿಕೆಗಳ ಮೂಲಕ ಓದುಗನ ಮನಸ್ಸಿನ ಕ್ಯಾನ್ವಾಸನ್ನು ದೊಡ್ಡದು ಮಾಡುತ್ತಾರೆ. ಲೋಕದ ನೋವಿನಲ್ಲಿ ತನ್ನ ನೋವು ಮರೆಯುವಂಥ ತಾತ್ವಿಕ ದರ್ಶನವನ್ನು ಓದುಗನಿಗೆ ನೀಡುತ್ತಾರೆ. ಲೋಕದ ಕಾಯಿಲೆಯ ಮೂಲ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಪ್ರಯತ್ನಿಸುತ್ತಾರೆ. ಸಮಾಜಶಾಸ್ತ್ರಜ್ಞರು ರೋಗ ಲಕ್ಷಣಗಳನ್ನು ವಿವರಿಸಿ ಅವಕ್ಕೆ ಸಾಮಾಜಿಕ ಪರಿಹಾರಗಳನ್ನು ಹೇಳುತ್ತಾರೆ. ಬುದ್ಧ, ಗಾಂಧಿ, ಟಾಗೂರರು ಇತಿಹಾಸವನ್ನು ಗುಮಾನಿಗಳಿಂದ ನೋಡುತ್ತಾರೆ. ಇತಿಹಾಸದ ಪ್ರಮುಖ ಸಮಸ್ಯೆಯೆಂದರೆ ಅದು ಎಲ್ಲ ಸಂಗತಿಗಳನ್ನೂ ಸಂಕೇತಗಳ ಮೂಲಕ ಗ್ರಹಿಸುತ್ತದೆ. ನೆನಪುಗಳನ್ನು ಪುನರ್ ನಿರ್ಮಿಸುತ್ತೇವೆಂದು ಎಡ, ಬಲ ಪ್ರಮೇಯಗಳೆರಡೂ ಪ್ರತಿಪಾದಿಸುತ್ತವೆ. ನೆನಪುಗಳ ನಿರ್ಮಿತಿಯೆಂದರೆ, ನೆನಪುಗಳ ಉತ್ಪಾದನೆ ಕೂಡ ಆಗಿರುತ್ತದೆ. ಅಲ್ಲಿ ನಿಜ ಯಾವುದು, ಸುಳ್ಳು ಯಾವುದು ಎಂದು ತೀರ್ಮಾನಿಸಲು ಸಾಮಾನ್ಯ ನಾಗರಿಕರಿಗೆ ಸಾಧ್ಯವಾಗದು. ಚಿಂತಕರಿಗೆ, ಜ್ಞಾನದ ಹಂಬಲವುಳ್ಳವರಿಗೆ ಇದು ಸಾಧ್ಯವಾಗುತ್ತದೆಯಾದರೂ, ಅವರನ್ನು ಆಕ್ರಮಣಕಾರಿ ರಾಷ್ಟ್ರವಾದಿಗಳು ದುರುಳೀಕರಿಸಿಬಿಡುತ್ತಾರೆ.

ಸಮಾಜವಾದಿ ಚಿಂತನೆಗಳಲ್ಲಿ ಜ್ಞಾನದರ್ಶನಗಳಿಗೆ ಎಲ್ಲಿಲ್ಲದ ಮಹತ್ವ ಇರುತ್ತದೆ. ಜ್ಞಾನ- ವಿಜ್ಞಾನಗಳು ಮಾತ್ರ ಲೋಕದ ನೋವಿಗೆ ಔಷಧವಾಗಬಲ್ಲವು ಎಂದು ಅವು ನಂಬುತ್ತವೆ. ಜ್ಞಾನವು ಬಿಡುಗಡೆಯತ್ತ ನಡೆಸಬಲ್ಲುದು ಎಂಬುದು ಈ ಗುಂಪಿನವರ ನಿಲುವು. ಹಾಗಿದ್ದರೆ ಜ್ಞಾನದ್ವೇಷಿಗಳು ಪರಿವರ್ತನೆಯನ್ನು ವಿರೋಧಿಸುತ್ತಾರೆಯೇ ಎಂದರೆ ಕುವೆಂಪು ಹೌದೆನ್ನುತ್ತಾರೆ. ಬುದ್ಧ, ಬಸವಣ್ಣ, ಅಂಬೇಡ್ಕರ್, ಗಾಂಧಿ, ಲೋಹಿಯಾ, ಕುವೆಂಪು ಮುಂತಾದ ಸಮಾಜವಾದಿ ದಾರ್ಶನಿಕರು ಸ್ಥಗಿತ ಸಾಮಾಜಿಕ ಮೌಲ್ಯಗಳ ವಿರೋಧಿಗಳು. ಲೋಕ ನೆಮ್ಮದಿಯಾಗದಿದ್ದರೆ ನೀನು ತಣ್ಣಗಿರಲಾರೆ ಎಂದು ಮನುಷ್ಯನನ್ನು ಪರಿವರ್ತನೆಯ ಚಿಂತನೆಗೆ ತಳ್ಳುವವರಿವರು.

ದಾರ್ಶನಿಕ ಬರಹಗಾರರೂ ಜ್ಞಾನಸೃಷ್ಟಿಯ ಹಂಬಲ ಇರುವವರೇ. ನಾಳಿನ ಸಮಾಜ ಚೆನ್ನಾಗಿರಬೇಕೆಂದು ಆಶಿಸುವವರೇ. ಅವರು ವ್ಯಕ್ತಿಯನ್ನು ಬಿಡಿ ಬಿಡಿಯಾಗಿ ನೋಡುವುದಿಲ್ಲ. ಅವರಿಗೆ ಕಾಲದ ಹಂಗೂ ಇಲ್ಲ. ಲೋಕದ ಎಲ್ಲ ಶಾಸ್ತ್ರಗಳು, ಕಲೆಗಳು, ವಿಜ್ಞಾನಗಳು, ತತ್ವಗಳು, ಪ್ರಮೇಯಗಳು ಬೆರೆತು ಅದ್ಭುತ ಜ್ಞಾನ ರಸಾಯನ ಸಿದ್ಧವಾಗುತ್ತದೆ. ಹಾಗಾಗಿ ಓದುಗರು ದೊಡ್ಡ ಲೇಖಕರ ಬರಹದ ನೆರಳಿಗೆ ದಾಪುಗಾಲಿಡುತ್ತಾರೆ, ಅಗತ್ಯ ಬಿದ್ದಾಗಲೆಲ್ಲ. ದಾರ್ಶನಿಕ ಕಲಾವಿದರು ಅಥವಾ ಬರಹಗಾರರು ಹಲವು ಬಾರಿ ಕ್ಲಿನಿಕಲ್ ಆಗಿರುತ್ತಾರೆ. ಸಂಸ್ಕೃತಿ, ನಾಗರಿಕತೆಗಳಲ್ಲಿರುವ ರ್ಯಾಶನಲ್ ಮತ್ತು ಇರ್ಯಾಶನಲ್ ಅಂಶಗಳಾವುವು ಎಂಬುದನ್ನು ಶೋಧಿಸಿ, ಬೇಕಾದ ಯುಗಧರ್ಮವನ್ನು ರೂಪಿಸುವ ಹೊಣೆಗಾರಿಕೆ ತಮ್ಮ ಹೆಗಲ ಮೇಲೆ ಬಿದ್ದಿದೆ ಎಂದು ಭಾವಿಸುತ್ತಾರೆ. ಆದರೆ ಚಿಂತನೆ, ಬರಹಗಳ ಕ್ಲಿನಿಕಲ್ ಗುಣ ಅನೇಕ ಸಾರಿ ಕಲಾಕೃತಿಯನ್ನು ಬೋನ್ಸಾಯ್ ಮಾದರಿಗೆ ತಳ್ಳಿ ಬಿಡಬಹುದು ಎಂಬ ಆತಂಕ ಅವರಿಗೆ ಸದಾ ಕಾಡುತ್ತಿರಬಹುದು. ಸಮಾಜವಾದಿ ದರ್ಶನಗಳು ತುಸು ಮಟ್ಟಿಗೆ ಈ ಕೊರತೆಯನ್ನು ಮೀರಿ ಬೆಳೆಯಲೆತ್ನಿಸುತ್ತವೆ. ಹಾಗೆ ನೋಡಿದರೆ ಮಲೆಗಳಲ್ಲಿ ಮದುಮಗಳು ಸಮಾಜವಾದಿ ದರ್ಶನಕ್ಕೆ ಅತ್ಯತ್ತಮ ಮಾದರಿ. ಇತಿಹಾಸದ ಹಂಗು ಮೀರಿ, ತತ್ವ ಶಾಸ್ತ್ರೀಯ ಪಾತಳಿಗೆ ವಿಸ್ತರಿಸಿಕೊಳ್ಳುವ ಭಾರತದ ಅರಳಿಮರ ಅದು. ಮದುಮಗಳನ್ನು ಮೊದಲು ಓದಿದಾಗ ನನಗೆ ಹತ್ತೊಂಭತ್ತು ವರ್ಷ. ಕಾಲೇಜಿನ ಲೈಬ್ರರಿಯಿಂದ ಪಡೆದ ಪುಸ್ತಕ ಅದು. ಜೋಳ ಕಾಯುತ್ತಾ ಊಟ ನೀರು ಬಿಟ್ಟು ಒಂದೇ ಗುಕ್ಕಿಗೆ ಮುಕ್ಕಿಬಿಟ್ಟ ಕಲಾಕೃತಿ. ಶೂದ್ರ ನೆರಳಿನಲ್ಲಿದ್ದ ನನಗೆ ಮದುಮಗಳು ನನ್ನಂಥವರದೇ ಕತೆ ಅನ್ನಿಸಿತ್ತು. ಅಲ್ಲಿನ ಅನೇಕ ಪಾತ್ರಗಳು ನನ್ನ, ನನ್ನ ಮನೆಯ, ಊರಿನ, ಕಾಡಿನ ಕತೆಯನ್ನೇ ಹೇಳುತ್ತಿವೆ ಅನ್ನಿಸಿತ್ತು. ಅದಾದ ಮೇಲೂ ಆಗಾಗ ಮದುಮಗಳಿಗೆ ಕಣ್ಣು ಹಾಕಿದ್ದೇನೆ(ದೇವನೂರರು ಹೇಳುವ ಅರ್ಥದಲ್ಲಿ). ಮದುಮಗಳು ಮೊದಲ ಪ್ರೇಮದಂತೆ, ಮೊದಲ ಮಳೆಯಂತೆ ಬಿಡದೆ ಕಾಡುವ, ಓದುಗನ ಚಿತ್ತ ಭಿತ್ತಿಯ ಮೇಲೆ ದಾಖಲಾಗುವ ಕೃತಿ.

  ಈ ದೀಪಾವಳಿಯ ರಜೆಯಲ್ಲಿ ಮತ್ತೆ ಓದಿದೆ. ಲೋಕ ಸಂಗತಿಗಳು ಹುಟ್ಟಿಸುತ್ತಿರುವ ದಿಗಿಲುಗಳಿಂದ ಸಾಂತ್ವನ ಪಡೆವ ದಾರಿಗಳಲ್ಲಿ ಓದಿನ ದಾರಿಯೂ ಒಂದು. ಟಿಪ್ಪಣಿ ಮಾಡಿಕೊಳ್ಳುತ್ತಾ ಓದಿದ್ದರಿಂದ ಎರಡು ದಿನ ಬೇಕಾಯಿತು. ಹಿಂದಿನ ಓದುಗಳಲ್ಲಿ ತುಸು ರೋಮಾಂಚನ ಮತ್ತು ಸಾಂತ್ವನ ಇರುತ್ತಿತ್ತು. ಬದಲಾವಣೆಗಳು ನಡೆದು ಸಮಾಜ ದೃಢಕಾಯವಾಗುತ್ತದೆ ಎಂಬ ಭರವಸೆಯಿದ್ದಾಗ ಓದಿದ್ದರಿಂದ ಹಾಗನ್ನಿಸುತ್ತಿತ್ತು. ಈಗ ಆ ಭರವಸೆಗಳು ಕಡಿಮೆಯಾಗುತ್ತಿವೆ. ಇವತ್ತಲ್ಲ ನಾಳೆ ಬೆಳಕು ಹುಟ್ಟಲೇಬೇಕು ನಿಜ. ಅದು ಹುಟ್ಟುವ ಹೊತ್ತಿಗೆ ನನ್ನ ತಲೆಮಾರಿನ ಜೀವಿತಾವಧಿ ಮುಗಿದು ಹೋಗಿರುತ್ತದೆ ಅನ್ನಿಸಿದಾಗ ಇಡೀ ಕೃತಿ ದುರಂತ, ವಿಷಾದಗಳ ಪರ್ವತ ಅನ್ನಿಸುತ್ತದೆ. ಸ್ಮಶಾನಕ್ಕೆ ಕೊಬ್ಬುವ ಕನಸು ಬೀಳಬಾರದು. ಆದರೆ ಕಾಲ ದೇಶಗಳಿಗೇಕೆ ಪ್ರೀತಿಗಿಂತ ದ್ವೇಷ, ಒಳಗೊಂಡು ಬಾಳುವುದಕ್ಕಿಂತ ಒಡೆದು ಬಾಳುವುದು ಮುಖ್ಯ ಅನ್ನಿಸುತ್ತಿದೆ? ಮೌಢ್ಯದ ವಿಷ, ನೆನಪುಗಳ ಉರುಳು, ಕುತೂಹಲಗಳನ್ನು ಬೇಗ ಕೊಂದು ಹಾಕುವ ಮರುಭೂಮಿಗಳು ಯಾಕೆ ನಮ್ಮನ್ನು ನಿಯಂತ್ರಿಸುತ್ತಿವೆ? ಉದ್ಯಾನಗಳ ಬದಲಾಗಿ ಸ್ಮಶಾನಗಳು ಯಾಕೆ ಕೊಬ್ಬುತ್ತಿವೆ? ಎಂದೆನ್ನಿಸಿದಾಗ ರಾತ್ರಿಗಳು ನಿದ್ದೆಯಿಲ್ಲದಾಗುತ್ತವೆ. ಅಂಥ ಗಳಿಗೆಗಳಲ್ಲಿ ಮದುಮಗಳು ಮುಂತಾದ ಜಗತ್ತಿನ ತಾಯ್ತನದ ಕಲಾಕೃತಿಗಳು ಉಸುಬಿನ ಕಂಪದಲ್ಲಿ ಸಿಕ್ಕವರನ್ನು ತುಸು ಹೊತ್ತಾದರೂ ಕೈಕೊಟ್ಟು ಮೇಲೆತ್ತುವ ಕೆಲಸ ಮಾಡುತ್ತವೆ ಎಂದು ಭಾವಿಸಿದ್ದೇನೆ. ಲೋಕದ ಸಂಕ್ಷೋಭೆಗಳಿಂದ ಬಿಡುಗಡೆ ಪಡೆಯಲು ಕುವೆಂಪು ಅವರೂ ಕೂಡ ತುಸು ಕೃತಕವೆನ್ನಿಸುವ ಜನ್ಮಾಂತರಗಳ ಪ್ರಮೇಯಗಳಿಗೆ ಹೋಗಿ ಸಾಂತ್ವನ ಪಡೆಯುತ್ತಾರೆ. ಹೀಗೆ ನಂಬಿ ನೆಮ್ಮದಿ ಪಡೆಯಲು ಆಧುನಿಕರೆನ್ನಿಸಿಕೊಂಡ ನನ್ನ ತಲೆಮಾರಿಗೆ ಸಾಧ್ಯವಿಲ್ಲ. ಹಾಗೆ ನಂಬಲು ದಾರ್ಶನಿಕ ಮುಗ್ಧತೆ ಬೇಕು. ತರ್ಕಾತೀತ ಮನಸ್ಸು ಬೇಕು. ವಿಜ್ಞಾನದ, ವಿಚಾರವಾದದ ಟೂಲುಗಳು ತೇಜಸ್ವಿ, ಲಂಕೇಶರ ಕಾಲಕ್ಕೇ ಅಂಥ ಮುಗ್ಧತೆಯನ್ನು ಗೇಲಿ ಮಾಡಲು ಶುರು ಮಾಡಿದ್ದವು.

   ಕುವೆಂಪು ಕರ್ಮತತ್ವವನ್ನು ನಂಬುತ್ತಾರೆ. ಶ್ರದ್ಧೆ, ನಂಬಿಕೆಗಳು ಅನೇಕ ಸಂಗತಿಗಳನ್ನು ಆಗು ಮಾಡುತ್ತವೆ ಎಂಬ ನಿಲುವು ಮದುಮಗಳಲ್ಲೂ ಅಲ್ಲಲ್ಲಿ ಕಾಣುತ್ತದೆ. ತೇಜಸ್ವಿ ಇದನ್ನು ಕರ್ಮದ ಭಾಗವಾಗಿ ನೋಡದೆ, ಕಾಸ್ಮಿಕ್ ದರ್ಶನದ ಮೂಲಕ ಗ್ರಹಿಸುತ್ತಾರೆ. ಮದುಮಗಳು ಏಕ ಪಾತಳಿಯ ಸಮಾಜಶಾಸ್ತ್ರೀಯ ಕೃತಿಯಲ್ಲ. ಸಮಾಜ ದರ್ಶನದ ಕೃತಿ. ಅಲ್ಲಿನ ಪಾತ್ರಗಳು ತಮ್ಮ ವಿಧಿಯ ವಿರುದ್ಧವೇ ದಂಗೆ ಏಳುತ್ತವೆ. ಇರುವಷ್ಟು ಹೊತ್ತು ಹಿತವಾಗುವಂತೆ ಬದುಕಲು ಪಾಡುಪಡುತ್ತವೆ. ಹಾಗಾಗಿ ಅದು ಮನುಷ್ಯರ ಪಡಿಪಾಟಲ ಕತೆಯಾಗುತ್ತದೆ. ಸೆಗಣಿಹುಳ ತನ್ನ ಶಕ್ತಿ ಮೀರಿ ಉಂಡೆ ಕಟ್ಟಿ ಎತ್ತರಕ್ಕೆ ಸಾಗಿಸುವ ಪ್ರಯತ್ನ ಸಿಂಬಾವಿ ನಾಯಿಗುತ್ತಿಗೆ ಸ್ಫೂರ್ತಿ ನೀಡುತ್ತದೆ. ಸೇಸಿಯ ಉಗ್ರ ಸಿಟ್ಟು ಹೊನ್ನಾಳಿ ಸಾಬರನ್ನು ಅಧೀರರನ್ನಾಗಿಸಿ ಬಿಡುತ್ತದೆ. ಇಲ್ಲಿ ಬದುಕುವ ಮನುಷ್ಯರಾರೂ ಸಹ ಇಲ್ಲಿ ಬಂದೆ ಸುಮ್ಮನೆ ಎಂದು ಕೃತಕವಾಗಿ ಬದುಕುವವರಲ್ಲ. ತೀವ್ರ ಪ್ರೇಮ, ತೀವ್ರ ಕಾಮ, ಉಗ್ರ ದ್ವೇಷ, ಸಂಪೂರ್ಣ ದುಡಿಮೆ, ಮೈಮರೆವ ನಿದ್ದೆಮಾಡಿ ಎದ್ದು ಬದುಕುವವರು. ಕೃತಿಯಲ್ಲಿ ಮನುಷ್ಯರ ಯಾತನೆಯಷ್ಟೆ ಇಲ್ಲದೆ, ನಾಯಿ, ಕೋಳಿ, ಹಾವು, ಹುಲಿ, ಎತ್ತು, ಹಸು, ಪಕ್ಷಿ, ಹಂದಿ, ಕಾಡು, ನದಿ, ಮಳೆ, ಹಳ್ಳ ಮುಂತಾದವುಗಳ ಸಂಕಟ ಸಂಭ್ರಮಗಳ ಕತೆಯಾಗಿಯೂ ಮದು ಮಗಳು ರೂಪುಗೊಂಡಿದೆ. ಇಂಥ ಕಡೆ ಕುವೆಂಪು ಕಾಸ್ಮಿಕ್ ದರ್ಶನಗಳನ್ನು ಮುಟ್ಟಿ ಮಾತನಾಡಿಸುತ್ತಾರೆ. ಇದನ್ನು ತೇಜಸ್ವಿ ವಿಸ್ತರಿಸುತ್ತಾರೆ.

ಮದುಮಗಳನ್ನು ಬಹುಪಾಲು ಜನರು ಎರಡು ಮಾದರಿಯಲ್ಲಿ ಓದಿದ್ದಾರೆ ಅನ್ನಿಸುತ್ತದೆೆ. ಕಲೆಗಾಗಿ ಕಲೆ ಎಂಬ ಮಾದರಿಯಲ್ಲಿ ಸುಮಾರು ಎಂಭತ್ತರ ದಶಕದವರೆಗೆ ಒಂದು ಗುಂಪಿನವರು ಓದಿದ್ದಾರೆ. ಆ ನಂತರ ಓದಿದ ಬಹುಪಾಲು ಜನರು ಅದನ್ನು ಸಮಾಜೋ ರಾಜಕೀಯ ದರ್ಶನವೆಂದು ನೋಡಿದ್ದಾರೆ. ಈ ಎರಡೂ ದೃಷ್ಟಿಕೋನಗಳ ನಡುವೆ ನೆಲ ಮುಗಿಲಿನಷ್ಟು ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ಗ್ರಹಿಸಲು ಜಗತ್ತಿನ ಪ್ರಖರ ಚಿಂತಕ ಗ್ರಾಮ್ಷಿಯ ಚಿಂತನೆಗಳು ನೆರವು ನೀಡುತ್ತವೆ. ಗ್ರಾಮ್ಷಿ ಚಿಂತಕರನ್ನು ‘ರೂಲಿಂಗ್ ಇಂಟೆಲೆಕ್ಚುವಲ್ಸ್’ ಮತ್ತು ‘ಆರ್ಗ್ಯಾನಿಕ್ ಇಂಟೆಲೆಕ್ಚುವಲ್ಸ್’ ಎಂದು ವಿಭಾಗಿಸುತ್ತಾನೆ. ಮೊದಲ ವರ್ಗದ ಚಿಂತಕರು ಪ್ರಬಲ ಸಮುದಾಯಗಳ ಆಲೋಚನೆಗಳನ್ನು ಜನ ಮಾನಸದೊಳಗೆ ನೆಲೆಗೊಳಿಸಲು ಪ್ರಯತ್ನಿಸುತ್ತಾರೆ. ಬಹುಪಾಲು ಸಾರಿ ಸ್ಥಗಿತ ಮೌಲ್ಯಗಳನ್ನು ಇವರು ಪ್ರತಿಪಾದಿಸುತ್ತಾರೆ. ಆರ್ಗ್ಯಾನಿಕ್ ಚಿಂತಕರು ಸಮಾಜದ ಬದಲಾವಣೆಯನ್ನು ಪ್ರತಿಪಾದಿಸುತ್ತಾರೆ. ಪರ್ಯಾಯ ಸಂಸ್ಕೃತಿಗಳನ್ನು ರೂಪಿಸಲು ಪ್ರಯತ್ನಿಸುತ್ತಾರೆ. 

ಪ್ರಬಲ ಸಮುದಾಯಗಳ ಆಶೋತ್ತರಗಳನ್ನು ಪ್ರತಿನಿಧಿಸುವ ಚಿಂತಕರು ನಮ್ಮ ಸಮಾಜಗಳಲ್ಲೂ ಬಹುಪಾಲು ಸಾರಿ ಕೃತಿಗಳನ್ನು ಕಲಾ ಕೇಂದ್ರಿತವಾಗಿ ನೋಡುತ್ತಾರೆ. ಕೃತಿಯೊಂದರ ವಿದ್ರೋಹದ ಆಶಯಗಳನ್ನು ತಣ್ಣಗೆ ಮರೆಮಾಚಲು ಪ್ರಯತ್ನಿಸುತ್ತಾರೆ. ಬೇಲೂರಿನ ಶಿಲಾ ಬಾಲಿಕೆಯ ರೇಖೆಗಳು, ಕೋನಗಳು ಮುಂತಾದ ಶಾಸ್ತ್ರೀಯ ಸಂಗತಿಗಳು ಶಿಲ್ಪಿಗೆ ಮಾತ್ರ ಅಗತ್ಯವಿರಬಹುದು. ಉಳಿದವರಿಗಲ್ಲ. ದಾರ್ಶನಿಕ ಕಲಾಕೃತಿಯೊಂದು ಹಳೆಯ ತತ್ವಗಳನ್ನು ಮುರಿದು ಹೊಸ ದಿಗಂತಗಳನ್ನು ಮುಟ್ಟಿ ನೋಡಲು ಪ್ರಯತ್ನಿಸುತ್ತದೆ. ಮದುಮಗಳನ್ನು ಕೇವಲ ಕಲಾಕೃತಿ ಎಂದು ನೋಡಿದವರಿಗೆ ತೀವ್ರ ನಿರಾಶೆಯಾಗಿರಬಹುದು. ಅಂಥವರು ಮದುಮಗಳಿಗೆ ಕೇಂದ್ರವಿಲ್ಲ. ಸೂತ್ರವಿಲ್ಲ. ವಿವರಗಳಿಂದ ಕೊಬ್ಬಿದೆ ಎಂದೆಲ್ಲ ನುಡಿದು ಕೆಲವು ವರ್ಷಗಳ ಕಾಲ ಓದುಗರನ್ನು ಕಕ್ಕಾಬಿಕ್ಕಿ ಮಾಡಿಬಿಟ್ಟರು. ಇದು ಒಂದು ಕಾಲದ ಓದು ಇರಬಹುದು. ಆದರೆ ಆ ರೀತಿಯ ಓದು ತುಂಬ ಮಿತಿಗಳಿಂದ ಕೂಡಿತ್ತು ನಿಜ. ಆದರೆ ಆ ಓದಿನ ಒಳಗಿನ ಉದ್ದೇಶಗಳೇನಾಗಿದ್ದವು? ಎಂಬುದನ್ನು ಕನ್ನಡ ಪರಂಪರೆ ಪರಿಶೀಲಿಸಬೇಕು.

ಮದುಮಗಳನ್ನು ಸಮಾಜೋ ರಾಜಕೀಯ ಅಧ್ಯಯನ ಮಾಡಿದ ಡಿ ಆರ್ ಮುಂತಾದವರು ಮದುಮಗಳಲ್ಲಿ ವರ್ಗವರ್ಣಗಳ ಸಂಘರ್ಷ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಷರಾ ಬರೆಯಲು ಯತ್ನಿಸಿದರು. ಜಿ. ರಾಜಶೇಖರ್ ಇಕಾಲಜಿ ಪ್ರಶ್ನೆ ಬಹಳ ಮುಖ್ಯ, ಅದನ್ನು ಮದುಮಗಳು ನಿರೂಪಿಸಿದೆ ಆದರೆ ರಾಷ್ಟ್ರಪ್ರಭುತ್ವ ಕುರಿತಾದ ಸಮಕಾಲೀನ ಆಲೋಚನೆಗಳು ಈ ಕೃತಿಯಲ್ಲಿಲ್ಲ ಅಂದರು. ಡಿ ಆರ್ ಅದಕ್ಕೆ ಬದಲಾಗಿ ಆಧುನಿಕ ರಾಷ್ಟ್ರಕ್ಕೆ ಬೇಕಾದ ಮನಸ್ಥಿತಿಯನ್ನು ನಿರ್ಮಿಸಲು ಕುವೆಂಪು ಮುಂತಾದ ದಾರ್ಶನಿಕ ಲೇಖಕರು ಪ್ರಯತ್ನಿಸಿದ್ದಾರೆ ಎಂದರು. ಇದೇ ನೆಲೆಯ ಅಧ್ಯಯನ ಮಾಡಿದ ಕೃಷ್ಣಪ್ಪನವರು ಮತ್ತು ರಹಮತ್ ತರೀಕೆರೆಯವರು ದಲಿತ ಮತ್ತು ಮುಸ್ಲಿಂ ಪಾತ್ರಗಳು ಹೀನೋಪಮೆಗೆ ಬಳಕೆಯಾಗಿವೆ. ದುರುಳೀಕರಣಗೊಂಡಿವೆ. ಇದು ಕುವೆಂಪು ಅವರ ದೃಷ್ಟಿಕೋನದಲ್ಲಿನ ಕೊರೆ ಎನ್ನುತ್ತಾರೆ. ಆದರೆ ಇಲ್ಲಿನ ಮುಸ್ಲಿಂ ಪಾತ್ರಗಳು ಮುಸ್ಲಿಂ ಸಮುದಾಯದ ಪ್ರತಿನಿಧಿಗಳಲ್ಲ. ಆಳುವ ವರ್ಗದ ವೃತ್ತಿ ನಿರತ ಕಟುಕರು. ಬಿ. ಕೃಷ್ಣಪ್ಪನವರು ಎತ್ತುವ ಕೆಲವು ಪ್ರಶ್ನೆಗಳನ್ನು ಸುಲಭಕ್ಕೆ ತಳ್ಳಿ ಹಾಕಲಾಗದು. ಕಲಾಕೃತಿಯನ್ನು ಯಾವ ಹಿನ್ನೆಲೆಯವರು, ಯಾವ ಸಂದರ್ಭದಲ್ಲಿ ಹೇಗೆ ನೋಡುತ್ತಾರೆ ಎನ್ನುವುದೂ ಸಹ ಒಪ್ಪಿಗೆ ಮತ್ತು ತಕರಾರುಗಳ ಹಿಂದೆ ಕೆಲಸ ಮಾಡುತ್ತದೆ.

ಎಂ.ಎನ್. ಶ್ರೀನಿವಾಸ್ ಅವರು ತಮ್ಮ ‘ರಿಮೆಂಬರ್ಡ್ ವಿಲೇಜ್’ ಕೃತಿಯಲ್ಲಿ ಥೇಟ್ ಮಲೆಗಳಲ್ಲಿ ಮದುಮಗಳು ಕೃತಿಯಂಥದೇ ಸಮಾಜವನ್ನು ವಿವರಿಸುತ್ತಾರೆ. ಆಧುನಿಕತೆ ಅಂತ ಕುವೆಂಪು ಯಾವುದನ್ನು ಕರೆಯುತ್ತಾರೊ ಅಂಥ ಸಮಾಜ ನಿರ್ಮಾಣವಾಗುವ ಕಾಲದ ಸಂಕ್ರಮಣ ಸ್ಥಿತಿಯನ್ನು ಶ್ರೀನಿವಾಸ್ ವಿವರಿಸುತ್ತಾರೆ. ಕಾದಂಬರಿಕಾರರೊಬ್ಬರು ಸಮಾಜವನ್ನು ನೋಡುವುದಕ್ಕೂ ಸಮಾಜಶಾಸ್ತ್ರಜ್ಞರೊಬ್ಬರು ನೋಡುವುದಕ್ಕೂ ವ್ಯತ್ಯಾಸವಿರುತ್ತದೆ ನಿಜ. ಆದರೆ ಅತ್ಯುತ್ತಮ ಕೃತಿಗಳು ನಿರಂತರವಾಗಿ ತಮ್ಮ ರೂಪವನ್ನು ತಾವೇ ಮುರಿದು ಮೇಲೇಳುತ್ತವೆ. ಕವಿರಾಜ ಮಾರ್ಗದಂತಹ ಲಾಕ್ಷಣಿಕ ಕೃತಿಗಳು ಜೀವ ಪಡೆದುಕೊಂಡಿದ್ದು ಹೀಗೆಯೇ. ಈ ರೀತಿಯ ಹಲವು ಉದಾಹರಣೆಗಳನ್ನು ನಮ್ಮ ಪರಂಪರೆಯಿಂದ ಉದಾಹರಿಸಬಹುದು. ಮೈಸೂರಿನ ಕಾಲಬುಡದಲ್ಲಿರುವ ರಾಮಪುರ ಗ್ರಾಮದಲ್ಲಿ ನಡೆವ ಸಮಾಜದ ಚಲನೆಗೂ ಮಲೆನಾಡಿನ ಕಗ್ಗಾಡಿನಲ್ಲಿ 19ನೇ ಶತಮಾನದಲ್ಲಿ ನಡೆವ ಚಲನೆಗೂ ಸ್ಥೂಲ ಮಟ್ಟದಲ್ಲಿ ನೋಡಿದರೆ ಬಹಳ ವ್ಯತ್ಯಾಸಗಳಿಲ್ಲ. ಒಕ್ಕಲಿಗ, ಲಿಂಗಾಯತ ಭೂಮಾಲಕರ ದರ್ಪ. ತಳಜಾತಿಗಳ ಜೀತಗಾರಿಕೆ, ದೌರ್ಜನ್ಯ ಗಳು ಮಲೆನಾಡಿನಂತೆಯೇ ಇಲ್ಲೂ ಇವೆ. ರಾಮಪುರದ ಪಟೇಲ, ನಾಡುಗೌಡ ಮತ್ತು ಕುಳ್ಳೇಗೌಡ ಮತ್ತು ಅವರುಗಳ ವರ್ತುಲದಲ್ಲಿರುವವರು ಥೇಟ್ ಸುಬ್ಬಯ್ಯ ಹೆಗ್ಗಡೆ, ಬೆಟ್ಟಳ್ಳಿ ಕಲ್ಲಯ್ಯ ಹೆಗ್ಗಡೆ, ಸಿಂಬಾವಿ ಭರಮೈ ಹೆಗ್ಗಡೆ ಹೂವಳ್ಳಿ ವೆಂಕಟಪ್ಪ ನಾಯಕರಂತೆಯೇ ಕಾಣಿಸುತ್ತಾರೆ. ಊಳಿಗಮಾನ್ಯ ಸಮಾಜವೊಂದು ಅರೆ ಬಂಡವಾಳಿಗ ಸಮಾಜದ ಕಡೆಗೆ ಚಲಿಸುವ ಚಿತ್ರಣವನ್ನು ಶ್ರೀನಿವಾಸ್ ಚಿತ್ರಿಸುತ್ತಾರೆ. ಮದುಮಗಳು ಸಾಂಪ್ರದಾಯಿಕ ಸಮಾಜ ಆಧುನಿಕತೆಯ ಕಡೆಗೆ ಹೊರಳುವಾಗಿನ ಸಂಕಟ, ಪಲ್ಲಟಗಳನ್ನು ಹೇಳುತ್ತದೆ. ಮದುಮಗಳಲ್ಲಿ ಹಳೆಪೈಕದ ಸೇಸನಾಯ್ಕನ ಮಗ ಹಮ್ಮೀರನಾಯ್ಕನ ಮದುವೆ ಸಂದರ್ಭದಲ್ಲಿ ದಂಡಿಗೆ ಹತ್ತಬಾರದು ಎಂಬ ಅಲ್ಲಿನ ಮುಂದುವರಿದ ಜಾತಿಗಳ ನಿರ್ಣಯಕ್ಕೆ ಮೈಸೂರು ಅರಸರು ಒಪ್ಪಿಗೆಯ ಮುದ್ರೆಯನ್ನು ಒತ್ತುತ್ತಾರೆ. ರಿಮೆಂಬರ್ಡ್ ವಿಲೇಜ್‌ನಲ್ಲಿ ಕಂಚಿ ಮಠವು ಜಾತಿ ಶ್ರೇಣಿಯ ತಕರಾರುಗಳೆದ್ದಾಗ ಯಾರು ಮೇಲು ಯಾರು ಕೀಳು ಎಂದು ನಿರ್ಧಾರ ಮಾಡುವ ದೃಷ್ಟಾಂತದ ಪ್ರಸ್ತಾಪ ಬರುತ್ತದೆ. ಮಡಿವಾಳ ಮತ್ತು ಹಡಪದ ಸಮುದಾಯಗಳ ಸ್ಥಾನಮಾನಗಳ ಕುರಿತು ಕಂಚಿ ಮಠವು ನೀಡಿದ್ದ ತಾಮ್ರಪತ್ರ ಮತ್ತು ಶಾಸನದ ಗೊಂದಲ ವಿಪರೀತವಾಗಿ ಗ್ರಾಮದಲ್ಲಿ ಅಶಾಂತಿ ನೆಲೆಸಿದ್ದನ್ನು ಶ್ರೀನಿವಾಸ್ ದಾಖಲಿಸುತ್ತಾರೆ.

 ರಿಮೆಂಬರ್ಡ್ ವಿಲೇಜ್ ಕೃತಿ ಸ್ವತಂತ್ರ ಭಾರತದ ಮೊದಲ ದಶಕದ ನೆನಪುಗಳ ರಚನೆಯಾಗಿದೆ. 1976 ರಲ್ಲಿ ಕೃತಿ ಪ್ರಕಟವಾದರೂ ಅಧ್ಯಯನ ನಡೆಯುವುದು 1948 ರ ಆಸುಪಾಸಿನಲ್ಲಿ. ನಾಲ್ವಡಿಯವರ ಕನಸಿನ ಯೋಜನೆಗಳು ಮತ್ತು ಹಿಂದುಳಿದ ವರ್ಗಗಳಿಗೆ ತುಸು ಐಡೆಂಟಿಟಿ ಬಂದಿದ್ದ ಕಾಲದ ಬರಹ ಇದು. ಆದರೂ ಮದುಮಗಳಲ್ಲಿನ ಕ್ರೌರ್ಯದ, ಜೀತದ ಅನೇಕ ಮುಖಗಳು ಹಸಿ ಹಸಿಯಾಗಿರುವುದನ್ನು ಸಮಾಜಶಾಸ್ತ್ರೀಯವಾದ ಈ ಅಧ್ಯಯನವು ನೆನಪಿಸುತ್ತದೆ. ನೆನಪಿನ ಹಳ್ಳಿಯನ್ನು ಓದುವಾಗ ಮದುಮಗಳು ನೆನಪಾಗದಿದ್ದರೆ ಅದನ್ನು ಓದಿನ ಸಮಸ್ಯೆ ಎಂದು ಭಾವಿಸುವಂತೆ ಮಾಡುತ್ತದೆ. ಕಾದಂಬರಿಯೊಂದು ಸಮಾಜಶಾಸ್ತ್ರೀಯ ಕಥನವನ್ನು ನೆನಪಿಸುವುದು ಮತ್ತು ಸಮಾಜಶಾಸ್ತ್ರೀಯ ಕಥನವೊಂದು ಕಲಾಕೃತಿಯನ್ನು ನೆನಪಿಸುವುದು ಕನ್ನಡದ ಅಪರೂಪದ ಸಂಗತಿಯಾಗಿದೆ. ಆ ಮೂಲಕ ಎರಡೂ ಕೃತಿಗಳು ಅಥೆಂಟಿಕ್ ಆಗುತ್ತವೆ. ಇಷ್ಟರ ನಡುವೆಯೂ, ಶ್ರೀನಿವಾಸ್ ಸಮಾಜದ ಚಲನೆಗೆ ಕನ್ನಡಿ ಹಿಡಿಯುವಾಗ ಪ್ರತಿಭಾವಂತ ಕಥನಕಾರರಾಗಿ ಕಾಣಿಸುತ್ತಾರೆ. ಸಮಾಜದ ಚಲನೆಗಳನ್ನು ಪ್ರಮೇಯಗಳ ಫ್ರೇಮಿನಲ್ಲಿ ಕೂರಿಸುವಾಗ ಮಾತ್ರ ಜಾತಿ ಶ್ರೇಷ್ಠತೆಯ ವ್ಯಸನ ಢಾಳಾಗಿ ಕಾಣಿಸುತ್ತದೆ. ಪ್ರತಿಭಾವಂತ ಸಮಾಜಶಾಸ್ತ್ರಜ್ಞನೊಬ್ಬ ಸಮಾಜವನ್ನು ನೋಡುವ ಕ್ರಮದಲ್ಲಿ ದಾಖಲೆಗಳ ಸಂಗ್ರಹ ಮತ್ತು ವಿಶ್ಲೇಷಣೆ ಪ್ರಧಾನ ಪಾತ್ರ ವಹಿಸುತ್ತವೆ. ನಾನು ಸಮಾಜದ ಮುಖಕ್ಕೆ ಕನ್ನಡಿ ಹಿಡಿಯುತ್ತೇನೆ ಮತ್ತು ಸಮಸ್ಯೆಯ ಮೂಲವೆಲ್ಲಿ ಎಂದು ಕಂಡು ಹಿಡಿದು ಪರಿಹಾರಗಳನ್ನು ಹೇಳುತ್ತೇನೆ ಎಂಬ ಜಂಭ ಸಮಾಜಶಾಸ್ತ್ರಜ್ಞನಲ್ಲಿರುತ್ತದೆ. ಆದರೆ ಕಲಾವಿದನೊಬ್ಬ ಜ್ಞಾನ ವಿಜ್ಞಾನಗಳ ಪ್ರಮೇಯಗಳನ್ನು ಹಿಂಡಿ ಹೊಸ ರಸತತ್ವವನ್ನು ರೂಪಿಸುತ್ತಾನೆ. ಕಲಾಕೃತಿಯಲ್ಲಿ ಬರುವ ಸೆಗಣಿ ಹುಳ, ನಾಯಿ, ಏಟು ತಿಂದು ನೆನಪು ಹೊತ್ತು ಬೆಳೆದ ಮರ, ಮಸೆಗಲ್ಲು ಎಲ್ಲವೂ ರೂಪಕಗಳಾಗಿ ಮನುಷ್ಯನ ಪ್ರಜ್ಞೆಯ ವಿಕಾಸಕ್ಕೆ ದಾರಿ ಮಾಡುತ್ತವೆ.

ಮದುಮಗಳು ಕೃತಿಯ ಆಳದ ಎದೆಯಲ್ಲಿ ತಾಯ್ತನವೊಂದು ಧುಮ್ಮಿಕ್ಕಿ ಹರಿಯುತ್ತದೆ. ಕೃತಿಯಲ್ಲಿ ದುಷ್ಟವೆನ್ನಿಸುವ ಹೆಣ್ಣು ಪಾತ್ರಗಳಿಲ್ಲ. ಕ್ರೂರವೆನ್ನಿಸುವ ಅನೇಕ ಗಂಡುಗಳ ಎದೆಯೂ ಸಹ ಅನೇಕ ಬಾರಿ ಹೆಂಗರುಳನ್ನು ಹೊತ್ತು ಮನಸ್ಸನ್ನು ಆರ್ದ್ರಗೊಳಿಸುತ್ತವೆ. ಹಳೆಮನೆ ಸುಬ್ಬಣ್ಣ ಹೆಗ್ಗಡೆ ಇದಕ್ಕೆ ಅತ್ಯುತ್ತಮ ಉದಾಹರಣೆ. ಒಂದರ್ಥದಲ್ಲಿ ಕಾದಂಬರಿಯ ಸೂತ್ರ ಪ್ರಜ್ಞೆ ಇದೇ ಇರಬಹುದು. ಹುಲಿಯನ ಅಂತಿಮ ಗಳಿಗೆಗಳ ಬಗ್ಗೆ ಸಾವು ಬದುಕಿನ ಮಧ್ಯೆ ಹೋರಾಡುವ ದೋಣಿಯಲ್ಲಿದ್ದರೂ ಜನರು ವರ್ತಿಸುವ ರೀತಿಯನ್ನು ಮದುಮಗಳು ಕಾದಂಬರಿಯ ರೂಪಕವೆನ್ನಬಹುದು.

ಇದೆಲ್ಲಕ್ಕಿಂತ ಮಿಗಿಲೆನಿಸುವ ಸಂಗತಿಗಳು ಕಾದಂಬರಿಯಲ್ಲಿ ನೆರೆದು ಬೆಳೆದಿವೆ. ಕುವೆಂಪು ಜನರ ಚಿಂತಕರಾದ ಕಾರಣ, ಜನರ ನೋವಿನ ಮೂಲ ಯಾವುದು? ಎಂದು ನಿರಂತರವಾಗಿ ಶೋಧಿಸಿದ್ದಾರೆ. ಸ್ಥಗಿತ ಮೌಲ್ಯಗಳ ಪರ ವಕಾಲತ್ತು ವಹಿಸುವ ಚಿಂತನೆಗಳ ವಿರುದ್ಧ ಕುವೆಂಪು ತಮ್ಮ ಇಡೀ ಜೀವನವನ್ನು ತೆತ್ತುಕೊಂಡಿದ್ದಾರೆ. ಅನಿಕೇತನ ತತ್ವ ಮಾತ್ರ ಸಮಾಜವನ್ನು ಜೀವಂತವಾಗಿಡಬಲ್ಲುದು ಎಂಬುದು ಅವರ ಪ್ರಮುಖ ವಿಚಾರ. ಅನಿಕೇತನ ತತ್ವ ಬಹುಪಾಲು ಸಾರಿ ಬಸವಣ್ಣನವರ ಜಂಗಮ ತತ್ವಕ್ಕೆ ಹೋಲಿಕೆಯಾಗುತ್ತದೆ. ಹಾಗಿದ್ದರೆ ಸ್ಥಾವರ ತತ್ವ ಯಾವುದು? ಕುವೆಂಪು ಪ್ರಕಾರ ಜಾತಿ, ಮತ ತತ್ವಗಳೇ ಸಮಾಜದ ಸ್ಥಗಿತ ಪ್ರಮೇಯಗಳು. ಮತ ಮತ್ತು ಧರ್ಮವನ್ನು ಕುವೆಂಪು ಒಂದೇ ಅರ್ಥದಲ್ಲಿ ಗ್ರಹಿಸುವ ಹಾಗೆ ಕಾಣುತ್ತದೆ.

ಸ್ವಾತಂತ್ರ್ಯಹೋರಾಟದ ಸಂದರ್ಭದಲ್ಲಿ ಬದುಕಿ, ಬರಹ ಮಾಡಿದ ಕುವೆಂಪು ರೀತಿಯ ಚಿಂತಕರು ರೂಪಿಸಿಕೊಂಡ ಹಾದಿಗಳು ಅತ್ಯಂತ ಸಂಕೀರ್ಣವಾಗಿವೆ. ಇಂಗ್ಲಿಷ್ ಶಿಕ್ಷಣದ ಮೂಲಕ ಬಂದ ಆಧುನಿಕತೆಯನ್ನು ನಿರಾಕರಿಸದೆ ಪರಂಪರೆಯಲ್ಲಿನ ಅತ್ಯುತ್ತಮ ಅಂಶಗಳನ್ನು ಯುಗಧರ್ಮದ ಬಯಕೆಗೆ ತಕ್ಕ ಹಾಗೆ ಮುರಿದು ಕಟ್ಟಿಕೊಂಡರು. ಆಯ್ದ ನೆನಪುಗಳು ಪುನರ್ ಸಂಘಟಿತಗೊಂಡು ಹೊಸ ರಾಷ್ಟ್ರವಾದದ ಕಲ್ಪನೆ ಕುವೆಂಪು ಮುಂತಾದವರಲ್ಲಿ ಜೀವ ತಳೆಯಿತು. ಫ್ಯಾನನ್ ಗುರುತಿಸುವ ರಾಷ್ಟ್ರೀಯವಾದಿ ಚಿಂತಕರ ಮಾದರಿ ಇದಕ್ಕಿಂತ ತುಸು ಭಿನ್ನವಾದುದು. ನೀಗ್ರಿಟೊ ಪ್ರಜ್ಞೆಯನ್ನು ವಿಶ್ವಾತ್ಮಕ ಮೌಲ್ಯವಾಗಿಸಿದ ಆಫ್ರಿಕನ್, ಆಫ್ರೋಅಮೆರಿಕನ್, ಮಧ್ಯ ಲ್ಯಾಟಿನ್ ಅಮೆರಿಕದ ದೇಶಗಳ, ಅರಬ್‌ನ ರಾಷ್ಟ್ರೀಯವಾದಿ ಚಿಂತಕರು ಶೋಧಿಸಿಕೊಂಡ ಸ್ಮತಿಗಳ ಮಾದರಿಗಳಲ್ಲಿ ಕಲೋನಿಯಲ್ ಆದುದೆಲ್ಲವನ್ನೂ ನಿರಾಕರಿಸುವ ಧಾರೆಯನ್ನು ಫ್ಯಾನನ್ ಗುರುತಿಸುತ್ತಾನೆ. ಬುಡಕಟ್ಟು ಸಮಾಜಗಳ ರಾಷ್ಟ್ರೀಯವಾದಿ ಚಿಂತಕರು ವಸಾಹತುವಾದದ ಮೂಲಕ ಬಂದ ಆಧುನಿಕತೆಯನ್ನು ಸಂಪೂರ್ಣ ನಿರಾಕರಿಸುತ್ತಾರೆ. ಆಗಂತುಕವಾದದ್ದರ ಬಗ್ಗೆ ಆತಂಕ ಮತ್ತು ಭಯ ಅವರಿಗೆ. ಥಿಂಗ್ಸ್ ಫಾಲ್ ಅಪಾರ್ಟ್ ಕೃತಿ ಬೈಸಿಕಲ್ಲನ್ನು ನೋಡುವುದಕ್ಕೂ ಮದುಮಗಳು ನೋಡುವುದಕ್ಕೂ ವ್ಯತ್ಯಾಸವಿದೆ. ಅಲ್ಲಿ ಒಕಾಂಕೊ ಪಾದ್ರಿಯನ್ನು ಕೊಂದು ಸೈಕಲ್ಲನ್ನು ಮರಕ್ಕೆ ನೇತು ಹಾಕುತ್ತಾನೆ. ಮದುಮಗಳಲ್ಲಿ ಬೈಸಿಕಲ್ಲು ರೋಮಾಂಚಕ ಸಾಹಸದ ಸಂಗತಿಯಾಗುತ್ತದೆ. ಪ್ರತಿಷ್ಠೆಯ ವಿಚಾರವಾಗುತ್ತದೆ. ಬುಡಕಟ್ಟು ಸಮಾಜಗಳಿಗಿಂತ ಸಂಕೀರ್ಣವಾದ ಜಾತಿ ಸಮಾಜದ ಸಂರಚನೆ ಮತ್ತು ಅದರಲ್ಲಿರುವ ತರತಮಗಳು ಭಿನ್ನ ರೀತಿಯವು. ಇಷ್ಟರ ನಡುವೆಯೂ ಕುವೆಂಪು, ಟಾಗೂರ್ ಮುಂತಾದವರು ಪರಂಪರೆಯನ್ನೂ ಕ್ರಿಟಿಕಲ್ ಆಗಿ ನೋಡುತ್ತಾರೆ. ಜಾತಿ ಸಮಾಜದ ಸ್ಥಾವರ ಮೌಲ್ಯಗಳು ಶೂದ್ರನೊಬ್ಬ ಸಮಾಜದ ಮೇಲುಸ್ತರಕ್ಕೆ ಏರುವುದನ್ನು ನಿರಾಕರಿಸುತ್ತವೆ. ಹಾಗಾಗಿ ಚಲನೆಯನ್ನು ಬಯಸುವ, ಸಮಾನತೆಯನ್ನು ಪ್ರತಿಪಾದಿಸುವ ಚಿಂತಕರು ಪರಂಪರೆಯ ಬಗ್ಗೆ ಕ್ರಿಟಿಕಲ್ ದೃಷ್ಟಿಕೋನವನ್ನು ರೂಪಿಸಿಕೊಳ್ಳಲೇಬೇಕಾಗುತ್ತದೆ. ಆಧುನಿಕತೆಯನ್ನು ಕಂದೀಲಾಗಿ ಬಳಸಬೇಕಾಗುತ್ತದೆ ಎಂದು ಕುವೆಂಪು ರೀತಿಯ ಚಿಂತಕರು ಭಾವಿಸಿದ ಹಾಗೆ ಕಾಣುತ್ತದೆ. ಇಂಥ ಚಿಂತನೆಗಳನ್ನು ಗ್ರಾಮ್ಷಿ ಆರ್ಗ್ಯಾನಿಕ್ ಚಿಂತನೆಗಳು ಎನ್ನುತ್ತಾನೆ. ಕುವೆಂಪು ಅವರ ಸಮಾಜವಾದಿ ದಾರ್ಶನಿಕತೆಯಲ್ಲಿ ಆಧ್ಯಾತ್ಮಿಕ ಸಮಾನತಾ ಆಶಯಗಳೂ ಸಹ ಕೇಂದ್ರಕ್ಕೆ ಬಂದು ನಿಲ್ಲುತ್ತವೆ. ಈ ಆಶಯಗಳನ್ನು ಮತ್ತು ಮಾದರಿಗಳನ್ನು ಪರಂಪರೆಯಿಂದಲೇ ಎತ್ತಿಕೊಳ್ಳುತ್ತಾರೆ. ಈ ಮಾದರಿ ಕುವೆಂಪು ಅವರಿಗೆ ವಿವೇಕಾನಂದರಿಂದ ದೊರೆತಿರಬಹುದು. ಮೂಲ ಪ್ರತಿಮೆಗಳನ್ನು ಭಂಜಿಸದೆ ತುಸು ಮಾರ್ಪಾಡು ಮಾಡಿ ಬಳಸಿಕೊಳ್ಳುತ್ತಾರೆ. ಫ್ಯಾನನ್ ಹೇಳುವ ರಾಷ್ಟ್ರೀಯವಾದಿ ಚಿಂತಕರ ಹಾಗೆ ಕುವೆಂಪು ಮಾದರಿಯವರು ಪರಂಪರೆಯ ಕುರಿತು ಅತಿ ರಕ್ಷಣಾತ್ಮಕವಾಗುವುದಿಲ್ಲ. ಮದುಮಗಳು ಕಾದಂಬರಿಯು ಚರ್ಚಿಸುವ ಜಾತಿ, ಮತ ತತ್ವಗಳು ಕುವೆಂಪು ಅವರ ಕೆಲವು ಆಶಯಗಳನ್ನು ಬಿಂಬಿಸುತ್ತವೆ. ಅದರಲ್ಲೂ ಜನಮಾನಸದಲ್ಲಿನ ಹಿಂದೂ ಪ್ರಜ್ಞೆ ಹೇಗೆ ಕೆಲಸ ಮಾಡಿದೆ ಎಂಬುದನ್ನು ಈ ಕೃತಿ ಹಿಡಿಯಲು ಪ್ರಯತ್ನಿಸುತ್ತದೆ. 

ಮದುಮಗಳು ಚರ್ಚಿಸುವ ಹಿಂದೂ ಪ್ರಜ್ಞೆಯ ನಾಲ್ಕು ಮಾದರಿಗಳು

ಕಾದಂಬರಿಯಲ್ಲಿ ಕುವೆಂಪು ನಾಲ್ಕು ಮಾದರಿಯ ಹಿಂದೂ ಮನಸ್ಸುಗಳನ್ನು ವಿವರಿಸುತ್ತಾರೆ. ಆ ಮೂಲಕ ನೈಜ ಹಿಂದೂವಾದವೆಂದರೆ ಏನು ಎಂದು ಹೇಳಲು ಪ್ರಯತ್ನಿಸಿದ್ದಾರೆ. ಭಾರತದ ಮನಸ್ಸುಗಳು ಇಂದು ತೀವ್ರ ಸಂಘರ್ಷ ಮತ್ತು ಗೊಂದಲದಲ್ಲಿವೆ ಹಾಗೂ ಅಪ ವ್ಯಾಖ್ಯಾನಗಳಿಂದ ಹೊಲಬು ತಪ್ಪಿವೆ ಎಂದು ಕುವೆಂಪು ಭಾವಿಸಿದ ಹಾಗೆ ಕಾಣುತ್ತದೆ. ಕರ್ಮಠ ಮತ್ತು ಪುರೋಹಿತಶಾಹಿ ಮೌಲ್ಯಗಳು ಸಮಾಜವನ್ನು ಕುಟ್ಟೆ ಹುಳುವಿನ ಹಾಗೆ ತಿಂದು ಹಾಕುತ್ತಿರುವ ಕುರಿತು ಎಲ್ಲ ಸುಧಾರಕರಿಗೆ ವಿಪರೀತ ದಿಗಿಲು. ಅವರು ಕಾಲ ಕಾಲಕ್ಕೆ ಅದರ ವಿರುದ್ಧ ನಿರಂತರ ಪ್ರತಿಭಟನೆಗಳನ್ನೂ ದಾಖಲಿಸುತ್ತಾ ಬಂದಿದ್ದಾರೆ. ಆದರೆ ಸಾಹಿತ್ಯ ತತ್ವಶಾಸ್ತ್ರಗಳ ವಿದ್ಯಾರ್ಥಿಯಾದ ಮತ್ತು ಸೃಜನಶೀಲ ಬರಹಗಾರರೂ ಆದ ಕುವೆಂಪು ಈ ಸಮಸ್ಯೆಯನ್ನು ಸ್ಪರ್ಶಿಸುವ ರೀತಿ ತುಸು ಬೇರೆ ಸ್ವರೂಪದ್ದು. ಬಸವಣ್ಣನವರ ಹಾಗೆ ಕುವೆಂಪು ಕೂಡ ವಿಚಾರಶೀಲನಾಗದೆ ಮನುಷ್ಯನಿಗೆ ಬಿಡುಗಡೆಯಿಲ್ಲ ಎಂದು ನಂಬಿದವರು. ನಾಡಿನಲ್ಲಿ ಸಂಚಲನ ಹುಟ್ಟಿಸಿದ್ದ ವಚನ ಚಳವಳಿಯ ಯಾವ ನೆನಪುಗಳೂ, ಪ್ರೇರಣೆಗಳೂ ಸಹ ಮದುಮಗಳು ಪ್ರಸ್ತಾಪಿಸುವ ಸಮಾಜಗಳ ಮೇಲೆ ಇಲ್ಲ. ಪುರೋಗಾಮಿಯಾದ ಸಾಮಾಜಿಕ- ಸಾಂಸ್ಕೃತಿಕ ಮೌಲ್ಯಗಳ ಸಾತತ್ಯತೆಯ ಅಮೃತಧಾರೆಗಳಿಗೆ ಸ್ಥಾವರ ಮೌಲ್ಯಗಳನ್ನು ಪ್ರತಿಪಾದಿಸುವ ಪ್ರಮೇಯಗಳು ಒಡ್ಡುಗಟ್ಟುವ ರೀತಿ ಗಾಬರಿ ಹುಟ್ಟಿಸುತ್ತದೆ. ಹೀಗೆ ಮಾಡುವಲ್ಲಿ ಆಳುವ ವರ್ಗದ ಚಿಂತಕರ ಪಾತ್ರ ಮಾರಣಾಂತಿಕವಾಗಿರುತ್ತದೆ. ಮದುಮಗಳು ಕೃತಿಯಲ್ಲಿ ಕಿಲಸ್ತರು, ಸಾಬರನ್ನು ತಮಗಿಂತಲೂ ಕೀಳು ಎಂದು ಭಾವಿಸಿದ ಹೊಲೆಯರು, ಬೇಲರು, ಹಸಲರು, ಹಳೇ ಪೈಕದವರಿದ್ದಾರೆ. ಇವರಲ್ಲಿಯೂ ಒಂದು ಹೆಚ್ಚುಗಾರಿಕೆಯಿದೆ. ಹೊಲೆಯರ ಕೇರಿಗೆ ಗೌಡರ ಹುಡುಗ ತಿಮ್ಮಪ್ಪ ನುಗ್ಗಿಬಿಟ್ಟರೆ ದೇವರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಭಾವನೆಯಿದೆ. ಜೀತ, ಗುಲಾಮಗಿರಿಯನ್ನು ಬದುಕಿನ ಭಾಗ ಎಂದು ಪಳಗಿಸಲಾಗಿದೆ. ಪ್ರತಿಭಟನೆಯ ಮಾದರಿಗಳು ಇಲ್ಲ ಎನ್ನುವಷ್ಟು ಕಡಿಮೆ ಇಲ್ಲಿ. ಧಣಿಗಳ ದೌರ್ಜನ್ಯವನ್ನು ಗುಪ್ತವಾಗಿ ಹಂಗಿಸುವ, ಪ್ರತಿಭಟಿಸುವ ಚೀಂಕ್ರ ಇಲ್ಲಿ ದಾರಿ ತಪ್ಪಿದ ದುಷ್ಟ ಎಂದು ಚಿತ್ರಿಸಲಾಗುತ್ತದೆ. ಒಂದು ಹಟ್ಟಿಯ ಒಕ್ಕಲ ನಿಯಮಗಳನ್ನು ಉಲ್ಲಂಘಿಸಿ ಇನ್ನೊಂದು ಹಟ್ಟಿಗೆ ಹೋದ ಸೇಸಿಗೆ ಮಾತ್ರ ತನ್ನ ಗಂಡ ಮತ್ತು ಮಗನ ಮೇಲೆ ಹಲ್ಲೆ ಮಾಡಿಸಿದ ಧಣಿಗಳ ಒಡವೆ ಕದಿಯುವ ಮನಸ್ಸಾಗುತ್ತದೆ. ಇಂಥವು ಅಪರೂಪದ ಸಂಗತಿಗಳಷ್ಟೆ.

 ಹಳೇಪೈಕದವರು ಮಾತ್ರ ಸಣ್ಣದಾಗಿ ಪ್ರತಿಭಟಿಸುವ ಪ್ರಯತ್ನಮಾಡುತ್ತಾರೆ. ತುಸು ಜಮೀನು, ತೋಟ ಉಳ್ಳ ಹಳೇಪೈಕದವರು ಮದುವೆ ಗಂಡನ್ನು ದಂಡಿಗೆಯ ಮೇಲೆ ಕೂರಿಸುವ ಹಠ ತೊಡುತ್ತಾರೆ. ಆದರೆ ಒಕ್ಕಲಿಗರಾಗಿದ್ದ ಗೌಡ, ಹೆಗ್ಗಡೆ, ನಾಯಕ ಮುಂತಾದವರೆಲ್ಲ ಸೇರಿ ಹಳೇ ಪೈಕದವರ ಹೊಸ ಸಾಹಸಾಕಾಂಕ್ಷೆಯನ್ನು ವಿರೋಧಿಸುತ್ತಾರೆ. ಈ ವಿಚಾರ ಮೈಸೂರು ಸರಕಾರದವರೆಗೂ ಹೋಯಿತಂತೆ. ಸರಕಾರ ಒಕ್ಕಲಿಗರ ಪರವಾಗಿಯೇ ತೀರ್ಪು ನೀಡಿತಂತೆ. ‘ಮಾಮೂಲಿಗೂ ಮಾತ್ಸರ್ಯಕ್ಕೂ ಕಾನೂನಿನ ಮುದ್ರೆ ಬಿತ್ತು’ ಎಂದು ಕಾದಂಬರಿ ವಿವರಿಸುತ್ತದೆ. ಈ ಪ್ರಸಂಗ ಹಲವು ಸಂಗತಿಗಳನ್ನು ವಿವರಿಸುತ್ತದೆ. ಭೂಮಿ ಎಂಬುದು ಛಲ, ಸ್ವಾಭಿಮಾನಗಳನ್ನು ಹುಟ್ಟಿಸುವ ಪ್ರಮುಖ ಆಸರೆ. ಆದರೆ ಉತ್ಪಾದನೆಯ ಮೇಲಿನ ಒಡೆತನವನ್ನು ಪ್ರಬಲ ಸಮುದಾಯಗಳು ವಿರೋಧಿಸುತ್ತವೆ. ಜೊತೆಗೆ ಉತ್ಪಾದನಾಂಗಗಳಾದ ಭೂಮಿ, ಹಣ, ವಿದ್ಯೆ, ಜ್ಞಾನಗಳ ಆರ್ಜನೆಗೆ ಪ್ರಬಲ ಪ್ರತಿರೋಧ ಒಡ್ಡುತ್ತದೆ. ತಮಗಿಂತ ಕೆಳಗಿನವರು ತಮ್ಮ ಜಾಗಕ್ಕೆ ಬರುವುದನ್ನು ಮೇಲಿನವರು ಸದಾ ವಿರೋಧಿಸುತ್ತಾರೆ. ಅದಕ್ಕಾಗಿ ಕೆಲವು ಮೌಲ್ಯಗಳನ್ನು ಉತ್ಪಾದಿಸಿ ಬಹುಸಂಖ್ಯೆಯ ದುಡಿವ ವರ್ಗ ನಂಬಿಕೊಂಡು ಅದನ್ನು ಉಲ್ಲಂಘಿಸದಂತೆ ನೋಡಿಕೊಳ್ಳಲಾಗುತ್ತದೆ.

ಗ್ರಾಮ್ಷಿಯ ಪ್ರಕಾರ ಸಂಸ್ಕೃತಿಯ ಹೆಸರಲ್ಲಿ ರೂಪಿಸುವ ಪದ್ಧತಿಗಳು, ನಿಯಮಗಳು, ವಿಧಿ, ನಿಷೇಧಗಳು, ಶಾಸ್ತ್ರಾಚಾರಗಳು ಮುಂತಾದವುಗಳೆಲ್ಲ ಅಮೂರ್ತವಾದವುಗಳಲ್ಲ. ಅವು ಅತ್ಯಂತ ಮೂರ್ತವಾಗಿ ಸಮಾಜವನ್ನು ನಿಯಂತ್ರಿಸುತ್ತಿರುತ್ತವೆ. ಇವನ್ನು ಆತ ಬ್ಲೈಂಡ್ ಸ್ಪಾಟ್ಸ್ ಎನ್ನುತ್ತಾನೆ. ಈ ಅಂಧ ತಾಣಗಳು ಯಜಮಾನ ಸಮುದಾಯಗಳ ಆಳುವಿಕೆಯನ್ನು ಸುಲಭಗೊಳಿಸುತ್ತವೆ. ಹಾಗಾಗಿ ದುಡಿವ ಸಮುದಾಯಗಳು ಈ ಮೌಲ್ಯಗಳನ್ನು ಪ್ರಶ್ನಿಸದೆ ಬಾಳುವಂತೆ ನೋಡಿಕೊಳ್ಳಲಾಗುತ್ತದೆ. ಯಜಮಾನರ ಮೌಲ್ಯಗಳು ಸಮಾಜದ ಆರೋಗ್ಯಕ್ಕೆ ಇರುವ ಮೌಲ್ಯಗಳು ಎಂದು ನಂಬಿಕೊಂಡಿರುವಂತೆ ಮಾಡಲಾಗುತ್ತದೆ. ಹಾಗಾಗಿ ಹಳೇಪೈಕದವರ ಸಾಹಸಕ್ಕೆ ಸಮಾಜದ ಉಳಿದ ಸಮುದಾಯಗಳು ಅಸಮ್ಮತಿ ತೋರುತ್ತವೆ. ಪ್ರಭುತ್ವ ಸುಲಭವಾಗಿ ಅಸ್ತಿತ್ವದಲ್ಲಿರುವ ನಿಯಮಗಳನ್ನು ಆಧರಿಸಿಯೇ ತೀರ್ಪು ನೀಡುತ್ತದೆ. ಹಾಗೆ ನೀಡುವುದರಿಂದ ಅದಕ್ಕೂ ಅತಿ ಹೆಚ್ಚಿನ ಲಾಭವಿದೆ. ಈ ಪ್ರಕ್ರಿಯೆಯನ್ನೇ ಗ್ರಾಮ್ಷಿ ಸಾಂಸ್ಕೃತಿಕ ಯಜಮಾನಿಕೆ ಎಂದು ಕರೆದದ್ದು. ಮದುಮಗಳಲ್ಲಿ ಪ್ರಸ್ತಾಪವಾಗುವ ಈ ಮಾದರಿಯನ್ನು ಶರಣಾಗತಿಯ ಮಾದರಿ ಎಂದು ಕರೆಯಬಹುದು.

ಎರಡನೇ ಮಾದರಿಗೆ ಆಸ್ತಿಯ ಬೆಂಬಲವಿದೆ. ಇಲ್ಲಿ ನಿರ್ಣಾಯಕ ಪಾತ್ರ ವಹಿಸುವವರು ಜಮೀನ್ದಾರ ಒಕ್ಕಲಿಗರು. ಒಕ್ಕಲಿಗರಲ್ಲಿ ಮೂರು ಮಾದರಿಯ ಹಿಂದೂ ಮನಸ್ಸುಗಳಿವೆ. ಎರಡರಲ್ಲಿ ತಮ್ಮನ್ನು ಬ್ರಾಹ್ಮಣ ಪುರೋಹಿತಶಾಹಿ ತುಳಿಯುತ್ತಿದೆ ಎಂಬ ಭಾವನೆಯಿದೆ. ಆದರೆ ಪ್ರತಿಭಟಿಸುವ ಮಾದರಿಗಳು ಮಾತ್ರ ಭಿನ್ನವಾಗಿವೆ. ಚಿನ್ನಪ್ಪಗೌಡ, ಬೆಟ್ಟಳ್ಳಿಯ ದೇವಯ್ಯ ಹೆಗ್ಗಡೆಯವರು ಬ್ರಾಹ್ಮಣ ದೌರ್ಜನ್ಯವನ್ನು ವಿರೋಧಿಸಿ ಕ್ರಿಶ್ಚಿಯಾನಿಟಿಯ ಕಡೆಗೆ ಒಲವು ತೋರಿಸುತ್ತಾರೆ. ಕ್ರಿಶ್ಚಿಯಾನಿಟಿಯ ಮೂಲಕ ಬರುವ ಆಧುನಿಕ ವಸ್ತು ವಿಚಾರಗಳನ್ನು ಅಳವಡಿಸಿಕೊಳ್ಳಲು ಉತ್ಸುಕತೆ ತೋರುತ್ತಾರೆ. ಇದನ್ನು ನಿರಾಕರಣೆಯ ಮಾದರಿ ಎನ್ನಬಹುದು.

ಇದೇ ಶೂದ್ರ ವರ್ಗದಲ್ಲಿ ಹಳೆಮನೆಯ ಶಂಕರಪ್ಪ ಹೆಗ್ಗಡೆ ಮುಂತಾದವರಿದ್ದಾರೆ. ಶಂಕರಪ್ಪ ಹೆಗ್ಗಡೆ ಬ್ರಾಹ್ಮಣ ಸಂಸ್ಕೃತಿಯ ಅನುಕರಣೆಯ ಮಾದರಿಗೆ ಉತ್ತಮ ಉದಾಹರಣೆ. ಮದ್ಯ, ಮಾಂಸಗಳಿಲ್ಲದ, ತುಳಸಿ ಪೂಜೆ ಮಾಡುವ ಪ್ರತಿನಿತ್ಯ ಸ್ನಾನ, ವಂದನೆ ಮಾಡುವ, ನಾಮ ಬಳಿದುಕೊಳ್ಳುವ, ಪೂಜೆ ಪುರಸ್ಕಾರಗಳಲ್ಲಿ ಮುಳುಗಿರುವುದರ ಜೊತೆಗೆ ಮೌಢ್ಯವೇ ಮೈವೆತ್ತಂತೆ ಬದುಕುವ ಮಾದರಿ ಇದು.. ವಿಚಾರ, ವಿವೇಚನೆಗಳಿಲ್ಲ. ಇದೂ ಸಹ ಶರಣಾಗತಿಯ ಮಾದರಿಯೆ. ಮನಸ್ಸು, ಮೆದುಳುಗಳು ರೋಗಪೀಡಿತವಾಗುವುದರ ಜೊತೆಗೆ, ಶಂಕರ ಹೆಗ್ಗಡೆಯ ಕುಟುಂಬವೂ ಕ್ಷಯರೋಗ ಪೀಡಿತವಾಗಿದೆ. ಹುಟ್ಟಿದ ಮಕ್ಕಳು ಉಳಿಯುವುದಿಲ್ಲ. ಜೀವಂತವಿರುವ ಮಡದಿ ಮತ್ತು ಮಗು ಭೀಕರ ಅಸ್ವಸ್ಥತೆ ಅನುಭವಿಸುತ್ತಿದ್ದರು. ಇವರನ್ನು ಕಂಡರೆ ಕಲ್ಲೂರು ಮಂಜಭಟ್ಟರಿಗೆ ತುಸು ಗೌರವ. ಭಟ್ಟರ ಗೌರವ ಹುಸಿಯಾದುದು, ಸ್ವಾರ್ಥ ರೀತಿಯದು ಎಂಬ ಅರಿವಿಲ್ಲದ ಶಂಕರ ಹೆಗ್ಗಡೆ ಕುಟುಂಬವನ್ನು ದಿನೇ ದಿನೇ ನರಕ ರೂಪಿ ಮಾಡುತ್ತಾ ಹೋಗುತ್ತಾರೆ. ದುರ್ಬಲ ಮಗುವನ್ನು ದಂಡಿಸುವ, ರೋಗಗ್ರಸ್ತ ಬಸುರಿ ಹೆಂಡತಿ ಸೀತಮ್ಮನನ್ನು ಹಿಂಸಿಸುವ ರೀತಿಯ ಕುರಿತು ಕಾದಂಬರಿಕಾರರಿಗೆ ಸಿಟ್ಟಿದೆ, ವ್ಯಂಗ್ಯವಿದೆ. ಸಂಪೂರ್ಣ ಶರಣಾಗತಿಯ ಮನಸ್ಸು ಮಾತ್ರ ಅನುಕರಣೆ ದಾರಿಗೆ ಹೊರಳುತ್ತದೆ. ಮತಿ ಹೀನಗೊಳ್ಳುವ ಮನಸ್ಸು ಮಾತ್ರ ಮೌಢ್ಯದ ಪರಮ ಅನುಯಾಯಿಯಾಗಿ ಬಾಳಲು ಸಾಧ್ಯ. ಬಡತನ ಇನ್ನಷ್ಟು ಬಡವನಾಗುವುದಕ್ಕೆ ಕಾರಣವಾಗುತ್ತದೆ. ಎಲ್ಲ ರೋಗಗಳಿಗಿಂತ ಮತಿಗೆ ಅಂಟಿಕೊಂಡ ರೋಗ ಮಾತ್ರ ಅತ್ಯಂತ ಭೀಕರ. ಕೋಣೂರು ರಂಗಪ್ಪಗೌಡ, ಬೆಟ್ಟಳ್ಳಿ ದೇವಯ್ಯ ಹೆಗ್ಗಡೆ ಮುಂತಾದವರ ಮದ್ಯದ ಚಟ, ಹಾದರ ಮುಂತಾದವುಗಳನ್ನು ಗೇಲಿಮಾಡುವಂತೆ ಬರೆವ ಕುವೆಂಪು ಶಂಕರಹೆಗ್ಗಡೆಯ ಸಾಂಸ್ಕೃತಿಕ ದಾಸ್ಯವನ್ನೂ ಗೇಲಿಮಾಡುತ್ತಾರೆ ಮತ್ತು ವಿಷಾದದಿಂದ ವಿವರಿಸುತ್ತಾರೆ. ಶೂದ್ರ ಸಮಾಜದ ಏಳಿಗೆಗೆ ಈ ಎರಡೂ ಮಾದರಿಗಳು ಶಾಪಗ್ರಸ್ಥ, ವಿನಾಶಕಾರಿ ಎಂದು ಕುವೆಂಪು ಪ್ರತಿಪಾದಿಸಿದ್ದಾರೆ. ಮಲೆನಾಡಿನ ಒಕ್ಕಲಿಗ ಯುವಕರ ಬಗ್ಗೆ ಕುವೆಂಪು ಕ್ಲಿನಿಕಲ್ ಆಗಿ ಯೋಚಿಸಿದ್ದಾರೆ. ನೀವು ಮೆದುಳನ್ನು ಅನ್ಯರಿಗೆ ಒತ್ತೆ ಇಟ್ಟರೆ ದಾಸ್ಯದ ರಾಕ್ಷಸ ಕಾಲುಗಳಿಗೆ ಸಿಕ್ಕಿ ಅಸ್ತಿತ್ವ ಕಳೆದು ಕೊಳ್ಳುತ್ತೀರಿ ಎಂದು ನಿರಂಕುಶ ಮತಿತ್ವವನ್ನು ಒಂದು ಪ್ರಮೇಯದಂತೆ ಮಂಡಿಸುತ್ತಾರೆ.

ಬಸವಣ್ಣನವರ ಹಾಗೆ ಕುವೆಂಪು ಕೂಡ ವಿಚಾರಶೀಲನಾಗದೆ ಮನುಷ್ಯನಿಗೆ ಬಿಡುಗಡೆಯಿಲ್ಲ ಎಂದು ನಂಬಿದವರು. ನಾಡಿನಲ್ಲಿ ಸಂಚಲನ ಹುಟ್ಟಿಸಿದ್ದ ವಚನ ಚಳವಳಿಯ ಯಾವ ನೆನಪುಗಳೂ, ಪ್ರೇರಣೆಗಳೂ ಸಹ ಮದುಮಗಳು ಪ್ರಸ್ತಾಪಿಸುವ ಸಮಾಜಗಳ ಮೇಲೆ ಇಲ್ಲ. ಪುರೋಗಾಮಿಯಾದ ಸಾಮಾಜಿಕ- ಸಾಂಸ್ಕೃತಿಕ ಮೌಲ್ಯಗಳ ಸಾತತ್ಯತೆಯ ಅಮೃತಧಾರೆಗಳಿಗೆ ಸ್ಥಾವರ ಮೌಲ್ಯಗಳನ್ನು ಪ್ರತಿಪಾದಿಸುವ ಪ್ರಮೇಯಗಳು ಒಡ್ಡುಗಟ್ಟುವ ರೀತಿ ಗಾಬರಿ ಹುಟ್ಟಿಸುತ್ತದೆ. ಹೀಗೆ ಮಾಡುವಲ್ಲಿ ಆಳುವ ವರ್ಗದ ಚಿಂತಕರ ಪಾತ್ರ ಮಾರಣಾಂತಿಕವಾಗಿರುತ್ತದೆ.

 ದುರಂತವೆಂದರೆ ಈ ಎರಡು ಮಾದರಿಗಳೇ ಇಂದು ರಾರಾಜಿಸುತ್ತಿವೆ. ನಾಡಿನ ಅಧೋಗತಿಗೆ ಶೂದ್ರ ಸಮುದಾಯಗಳು ಮೆದುಳು ಕಳೆದುಕೊಂಡು ಸಾಂಸ್ಕೃತಿಕ ಶರಣಾಗತಿ ಸಾರಿರುವುದರಿಂದ ಆಗುತ್ತಿರುವ ಸಮಸ್ಯೆಗಳ ಪರಿಣಾಮ ಊಹಾತೀತ. ಶೂದ್ರತ್ವದ ಸಾಂಸ್ಕೃತಿಕ ಐಡೆಂಟಿಟಿ ಕಾಣೆಯಾಗುತ್ತಿರುವುದರಿಂದ ನಾಡನ್ನು ಮತ್ತೆ ನೂರಾರು ಶತಮಾನಗಳಷ್ಟು ಹಿಂದಕ್ಕೆ ಹೊತ್ತೊಯ್ಯಲಾಗುತ್ತಿದೆ. ಶಂಕರಹೆಗ್ಗಡೆಯ ರೋಗಗ್ರಸ್ಥ ಅನುಕರಣೆಯ ಮಾದರಿಯ ಬದಲಾಗಿ ಕುವೆಂಪು ತುಸು ಮಟ್ಟಿಗೆ ಮುಕುಂದಯ್ಯನ ಮಾದರಿಯ ಕುರಿತು ಆಸ್ಥೆ ವಹಿಸಿದ ಹಾಗೆ ಕಾಣುತ್ತದೆ. ಮುಕುಂದಯ್ಯನ ಮಾದರಿ ಒಂದು ರೀತಿಯಲ್ಲಿ ಸಮನ್ವಯದ, ಸ್ವಾಭಿಮಾನದ ಮಾದರಿ. ಹಳೆ ಕಾವ್ಯ ಪುರಾಣಗಳ ಕುರಿತು ಹೆಮ್ಮೆ, ಗೌರವಗಳಿರುವ ಮಾದರಿಯಾದರೂ ಬೇಟೆ, ಮಾಂಸಾಹಾರಗಳನ್ನು ವರ್ಜಿಸುವುದಿಲ್ಲ. ಐತ ಪೀಂಚಲುವಿನಲ್ಲಿ ಶಿವಶಿವಾಣಿಯರನ್ನು ಕಾಣುವ ಮುಕುಂದಯ್ಯನಲ್ಲಿ ರೆವರೆಂಡ್ ಲೇಕ್ ಹಿಲ್ ಪಾದ್ರಿಯ ಒಳ್ಳೆಯ ವಿಚಾರಗಳಿಗೆ ಸಹಮತಿ ವ್ಯಕ್ತಪಡಿಸುವಷ್ಟು ಪ್ರಬುದ್ಧತೆ ಇದೆ. ಪುರೋಹಿತಶಾಹಿ ಸಂಸ್ಕೃತಿಯ ಕುರಿತು ತುಸು ಮಟ್ಟಿಗಾದರೂ ವಿಮರ್ಶಾತ್ಮಕ ನೋಟವಿದೆ. ಅದೇ ಸಂದರ್ಭದಲ್ಲಿ ಕ್ರಿಶ್ಚಿಯಾನಿಟಿಯ ಮತಾಂತರದ ಪ್ರಲೋಭನೆಗಳನ್ನು ವಿರೋಧಿಸುವ ನಿಲುವೂ ಇದೆ. ಪರಂಪರೆಯಲ್ಲಿನ ಉತ್ತಮ ಅಂಶಗಳನ್ನು ಗೌರವಿಸುವ, ಅನಾರೋಗ್ಯಕರವಾದವುಗಳನ್ನು ವರ್ಜಿಸಬೇಕೆನ್ನುವ ನಿಲುವು ಇಲ್ಲಿ ಸ್ಪಷ್ಟವಾಗಿದೆ. ಮುಕುಂದಯ್ಯನಿಗೆ ಋಷಿ ಪರಂಪರೆಯವರಾದ ಗಡ್ಡದಯ್ಯನ ಬಗ್ಗೆ ಗೌರವವಿದೆ. ಕಲ್ಲೂರು ಮಂಜಭಟ್ಟರ ಬಗ್ಗೆ ಸಿಟ್ಟೂ ಇದೆ. ತನ್ನ ಗುರುವಾದ ಅನಂತ ಐಗಳಿಗೂ ಹೆಮ್ಮೆಯ ಶಿಷ್ಯ ಆತ. ಮಕ್ಕಳ ಕಲಿಕೆಯ ಕುರಿತು ಮುಂಗಾಣ್ಕೆಯೂ ಆತನಿಗಿದೆ. ಆದರೆ ಜನ್ಮಾಂತರಗಳಲ್ಲಿನ ನಂಬಿಕೆಯ ಕುರಿತಾದ ಗಡ್ಡದಯ್ಯನ ಮಾತುಗಳು ತುಸು ಕೃತಕ ಎನ್ನಿಸುತ್ತವೆ. ಅನುಕರಣೆ, ಸ್ವಾಭಿಮಾನ ಮತ್ತು ಪ್ರತಿಭಟನೆ ಎಂಬ ಮೂರೂ ಮಾದರಿಗಳು ಇಲ್ಲಿ ಕ್ರಿಯಾಶೀಲವಾಗಿವೆ. ಭೂಮಿ ತೋಟಗಳಿರುವ ಮಲೆನಾಡಿನ ಪ್ರಬಲ ಸಮುದಾಯವಾದ ಒಕ್ಕಲಿಗರಲ್ಲಿರುವ ವರ್ಗ ಪ್ರಜ್ಞೆಯನ್ನು ಆಧರಿಸಿ ಈ ಮೂರೂ ಮಾದರಿಗಳು ಕ್ರಿಯಾಶೀಲವಾಗಿವೆ. ಆರ್ಥಿಕ ಸ್ಥಾನಮಾನಗಳು ಸಾಮಾಜಿಕ ಅಂತಸ್ತನ್ನು ನಿರ್ಧರಿಸುತ್ತವೆ ಅಥವಾ ನಿರ್ಧರಿಸುವಂತೆ ಒತ್ತಾಯಿಸುತ್ತವೆ. ದೇವಯ್ಯ ಹೆಗ್ಗಡೆ, ಕಲ್ಲೂರು ಮಂಜ ಭಟ್ಟರ ವರ್ತನೆಗೆ ಪ್ರತಿಭಟಿಸುವಾಗ ಇದೇ ಪ್ರಮೇಯ ಕೆಲಸ ಮಾಡುವುದು.

ಮೂರನೆಯದು ಕಣ್ಣಾಪಂಡಿತರು, ವೆಂಕಟಪ್ಪ ನಾಯಕ ಮುಂತಾದವರದೊಂದು ಮಾದರಿ ಇದೆ. ಇದು ಸಂಪೂರ್ಣ ಅವಕಾಶವಾದಿಯಾದುದು. ಕಣ್ಣಾಪಂಡಿತರು ತಿಮ್ಮಿಯ ವಿಚಾರವಾಗಿ ಗುತ್ತಿಗೂ ತಾಯಿತ ಕೊಡಬಲ್ಲರು. ಬಚ್ಚನಿಗೂ ಕೊಡಬಲ್ಲರು. ವೈದ್ಯದಂತೆ ಧಾರ್ಮಿಕ ವೈದ್ಯವೂ ಅವಕಾಶವಾದಿಯೊ ಲಾಭಬುರುಕತನದ್ದೊ ಏನೊ? ಹೂವಳ್ಳಿ ವೆಂಕಟಪ್ಪ ನಾಯಕ ಸ್ವಾರ್ಥಕ್ಕಾಗಿ ನೈತಿಕತೆಯ ಎಲ್ಲ ಗಡಿಗಳನ್ನು ಮೀರುವ ವ್ಯಕ್ತಿ. ಮೃಗೀಯ ಸ್ವಭಾವದವನು ಎಂದು ಕಾದಂಬರಿಯೆ ಷರಾ ಬರೆಯುತ್ತದೆ. ಒಂದೇ ಆಸ್ತಿಯನ್ನು ಹಲವರಿಗೆ ಬರೆದುಕೊಡುವ, ತತ್ ಕ್ಷಣದ ಸುಖಕ್ಕಾಗಿ ಏನು ಬೇಕಾದರೂ ಮಾಡಬಯಸುವ ವ್ಯಕ್ತಿ ಈತ. ಹಾರ್ಡಿ, ಟಾಲ್ ಸ್ಟಾಯ್, ಮಾರ್ಕ್ವೆಜ್ ಕಾದಂಬರಿಗಳ ಪಾತ್ರಗಳಂತೆ ತುಸು ಮಟ್ಟಿಗೆ ವಂಶದ ಕುರಿತು ಹೆಮ್ಮೆಯಿರುವ ಪಾತ್ರ. ವಾಸ್ತವದಲ್ಲಿ ದಯನೀಯವಾಗಿ ಬದುಕುತ್ತಿದ್ದರೂ ವಂಶ ಗೌರವ ಉರಿವ ಗಾಯಕ್ಕೆ ತುಸು ಮಂಪರು ನೀಡುವ ಅನಸ್ತೇಸಿಯಾದಂತೆ ಕೆಲಸ ಮಾಡಬಹುದೇ? ನಾಸ್ಟಾಲ್ಜಿಯಾ ಭಾರತದ ಮಧ್ಯಮ ವರ್ಗದ ರೋಗವೂ, ಬಿಡುಗಡೆಯೂ ಆಗಿರುವುದು ಹೀಗೆಯೇ ಅನ್ನಿಸುತ್ತದೆ. ಈ ಪ್ರಮೇಯವು ವ್ಯಕ್ತಿಗಳಿಗಷ್ಟೇ ಅಲ್ಲ ನಾಗರಿಕತೆ ಹಾಗೂ ರಾಷ್ಟ್ರಗಳಿಗೂ ಆವರಿಸಿಕೊಂಡಿದೆ. ಅಂಥ ಕಡೆ ಜನ ವಾಸ್ತವದಲ್ಲಿ ಹುಳ ಸಮಾನವಾಗಿ ನರಳುತ್ತಿದ್ದರೂ ತಮ್ಮ ಶೋಷಕರು ಯಾರು ಎಂದು ಪತ್ತೆಹಚ್ಚಿ ಪ್ರತಿಭಟಿಸುವ ಬದಲು ಪರಂಪರೆಯ ಹುಚ್ಚು ವ್ಯಸನದಲ್ಲಿ ಬಿದ್ದು ನರಳುತ್ತಿರುತ್ತಾರೆ. ಕಲ್ಲೂರು ಮಂಜಭಟ್ಟರಾದಿಯಾಗಿ ಅನೇಕ ಶ್ರೀಮಂತರು ತನ್ನ ದುಸ್ಥಿತಿಗೆ ಕಾರಣರೆಂದು ಗೊತ್ತಿದ್ದರೂ ಸಾಬರೊಂದಿಗೆ ಹೊಡೆದಾಡಿ ಕಾಲು ಗಾಯಮಾಡಿಕೊಂಡು ಸತ್ತು ಹೋಗುವ ವ್ಯಕ್ತಿ ವೆಂಕಟಪ್ಪ ನಾಯಕ. ಅವಕಾಶವಾದಿತನಕ್ಕೆ ಅತ್ಯುತ್ತಮ ಮಾದರಿ ಇದು.

ಕೋಣೂರು ರಂಗಪ್ಪಗೌಡ, ಬೆಟ್ಟಳ್ಳಿ ದೇವಯ್ಯ ಹೆಗ್ಗಡೆ ಮುಂತಾದವರ ಮದ್ಯದ ಚಟ, ಹಾದರ ಮುಂತಾದವುಗಳನ್ನು ಗೇಲಿಮಾಡುವಂತೆ ಬರೆವ ಕುವೆಂಪು ಶಂಕರಹೆಗ್ಗಡೆಯ ಸಾಂಸ್ಕೃತಿಕ ದಾಸ್ಯವನ್ನೂ ಗೇಲಿಮಾಡುತ್ತಾರೆ ಮತ್ತು ವಿಷಾದದಿಂದ ವಿವರಿಸುತ್ತಾರೆ. ಶೂದ್ರ ಸಮಾಜದ ಏಳಿಗೆಗೆ ಈ ಎರಡೂ ಮಾದರಿಗಳು ಶಾಪಗ್ರಸ್ಥ, ವಿನಾಶಕಾರಿ ಎಂದು ಕುವೆಂಪು ಪ್ರತಿಪಾದಿಸಿದ್ದಾರೆ. ಮಲೆನಾಡಿನ ಒಕ್ಕಲಿಗ ಯುವಕರ ಬಗ್ಗೆ ಕುವೆಂಪು ಕ್ಲಿನಿಕಲ್ ಆಗಿ ಯೋಚಿಸಿದ್ದಾರೆ. ನೀವು ಮೆದುಳನ್ನು ಅನ್ಯರಿಗೆ ಒತ್ತೆ ಇಟ್ಟರೆ ದಾಸ್ಯದ ರಾಕ್ಷಸ ಕಾಲುಗಳಿಗೆ ಸಿಕ್ಕಿ ಅಸ್ತಿತ್ವ ಕಳೆದು ಕೊಳ್ಳುತ್ತೀರಿ ಎಂದು ನಿರಂಕುಶ ಮತಿತ್ವವನ್ನು ಒಂದು ಪ್ರಮೇಯದಂತೆ ಮಂಡಿಸುತ್ತಾರೆ.

ಸುಬ್ಬಣ್ಣ ಹೆಗ್ಗಡೆ, ಕಲ್ಲಯ್ಯ ಹೆಗ್ಗಡೆ, ಅಂತಕ್ಕ, ರಂಗಪ್ಪ ಮುಂತಾದವರ ಹಿಪೊಕ್ರಸಿಯೂ ಕಾದಂಬರಿಯುದ್ದಕ್ಕೂ ಹಾದುಬರುತ್ತದೆ. ತಮ್ಮ ಯವ್ವನದ ದಿನಗಳಲ್ಲಿ ಸಾಕಷ್ಟು ಪೋಲಿ ಪುಂಡಾಟಗಳನ್ನು ಮಾಡಿದವರೆ. ಆದರೂ ಕಿರಿಯ ಪ್ರಾಯದವರಿಗೆ ಬುದ್ಧಿಹೇಳುವ ಕ್ರಮ ತುಸು ಹಿಪೊಕ್ರೆಟಿಕ್ ಅನ್ನಿಸಿಕೊಳ್ಳುತ್ತದೆ. ಇಲ್ಲಿ ಕಿರಿಯರಿಗೆ ಹಿರಿಯರ ಮಾತುಗಳ ಮೇಲೆ ಗೌರವವಿಲ್ಲ. ಹಿರಿಯರಿಗೆ ಕಿರಿಯರ ಮೇಲೆ ನಂಬುಗೆಯೂ ಇಲ್ಲ. ಆದರೂ ನಟನೆಯ ರೀತಿಯಲ್ಲಿ ಬದುಕು ನಡೆದು ಹೋಗುತ್ತದೆ.

ನಾಲ್ಕನೆಯದಾಗಿ ಕಲ್ಲೂರು ಮಂಜಭಟ್ಟರ ಯಜಮಾನಿಕೆಯ ಮಾದರಿ. ಮಂಜಭಟ್ಟರು ಪೂಜೆಗೆಂದು ಘಟ್ಟದ ಮೇಲಕ್ಕೆ ಬರಿ ಕೈಯಲ್ಲಿ ಬಂದವರು. ಕಾದಂಬರಿ ಹೇಳುತ್ತದೆ, ‘‘ಗಟ್ಟದ ಕೆಳಗಿನಿಂದ ಪಂಚ ಪಾತ್ರೆ ಪಾಣಿಪಂಚೆಯೊಡನೆ ಪೂಜಾರಿಯಾಗಿ ಮೇಲೆ ಬಂದವರು ಸ್ವಸಾಮರ್ಥ್ಯದಿಂದಲೂ, ನೈಪುಣ್ಯದಿಂದಲೂ, ‘ಪುಣ್ಯ’ ದಿಂದಲೂ ಶ್ರೀಮಂತರೂ ಜಮೀನುದಾರರೂ ಆದರು.ಸಾಲ ಕೊಟ್ಟೋ, ಸಾಲ ಕೊಟ್ಟಂತೆ ಬರೆಯಿಸಿಕೊಂಡೋ, ಅಕ್ಷರ ಬಂದವರಿಂದ ರುಜು ಹಾಕಿಸಿಕೊಂಡೋ, ಅಕ್ಷರ ಬಾರದವರಿಂದ ಹೆಬ್ಬೆಟ್ಟೊತ್ತಿಸಿಕೊಂಡೋ ಎಲ್ಲರ ಭಯ ಗೌರವಗಳಿಗೆ ಪಾತ್ರರಾಗಿ ಸುಪ್ರಸಿದ್ಧರಾದರು. ಆದರೆ ದಂಡಶಕ್ತಿ ಇಲ್ಲದಿದ್ದರೆ ಲಕ್ಷ್ಮೀಯನ್ನುಳಿಸಿಕೊಳ್ಳುವುದು ಕಷ್ಟ ಎನ್ನುವುದು ಅವರಿಗೆ ಬೇಗ ಅನುಭವಕ್ಕೆ ಬಂತು’’(235). ಅದಕ್ಕಾಗಿ ಹೊನ್ನಾಳಿಯಿಂದ ಸಾಬರ ಗೂಂಡಾ ಪಡೆ ಕರೆತರುತ್ತಾರೆ. ಕೃತಿಯಲ್ಲಿ ಜನ ಸಾಬರನ್ನು ನಿಂದಿಸುತ್ತಾರೆಯೇ ಹೊರತು ಭಟ್ಟರನ್ನಲ್ಲ. ಭಕ್ತಿಯೆಂಬುದು ತೋರುಂಬ ಲಾಭ ಎಂಬ ಮಾತು ಇವರಿಗೆ ಹೇಳಿ ಮಾಡಿಸಿದ್ದು. ಕ್ರಿಶ್ಚಿಯಾನಿಟಿಯು ಧರ್ಮದೊಳಗಿನ ಟೊಳ್ಳನ್ನು ಗುರುತಿಸಿ ನುಗ್ಗಲೆತ್ನಿಸುತ್ತಿರುವಾಗ ಇವರು ಶ್ರೀಮಂತಿಕೆ, ಕ್ರೌರ್ಯಗಳಲ್ಲಿ, ಲೋಲುಪತೆಯಲ್ಲಿ ಮುಳುಗಿದ್ದರು ಎಂದು ಕಾದಂಬರಿ ರೂಪಕಾತ್ಮಕವಾಗಿ ವಿವರಿಸುತ್ತದೆ. ಧಾರ್ಮಿಕ ಯಜಮಾನಿಕೆಯೆಂಬುದು ಬರಿ ಪೂಜೆ ಪುನಸ್ಕಾರಗಳ ಮೂಲಕ ಬಂದುದಲ್ಲ ಅದರ ಹಿಂದೆ ಭೂಮಿ ಇದೆ, ಸಂಪತ್ತಿದೆ, ಚಕ್ರ ಬಡ್ಡಿ ವ್ಯವಹಾರವಿದೆ, ವಸೂಲಿ ಸಾಬರ ಗೂಂಡಾ ಪಡೆ ಇದೆ. ಇಡೀ ಪ್ರಾಂತದ ಆಗು ಹೋಗುಗಳಿಗೆ ಇವರ ಪಾತ್ರ ನಿರ್ಣಾಯಕವಾದುದ್ದಾಗಿದೆ. ಗ್ರಾಮ್ಷಿ ‘ಹೆಜೆಮೊನಿಯ’ ಕುರಿತಂತೆ ಪ್ರಸ್ತಾಪಿಸುವಾಗ ಪ್ರಾಚೀನ ಗ್ರೀಕಿನ ಮಾದರಿಗಳನ್ನು ಬಳಸುತ್ತಾನೆ. ಸೈನಿಕ ದಾಳಿಗಳ ಮೂಲಕ ಇತರ ಗುಂಪುಗಳ ಮೇಲೆ ಆಳ್ವಿಕೆ ನಡೆಸುವುದನ್ನು ಸೈನಿಕ ಹೆಜೆಮೊನಿ ಎನ್ನುತ್ತಾನೆ. ಇಲ್ಲಿ ಗೂಂಡಾ ಪಡೆಯೂ ಇದೆ. ಸಾಂಸ್ಕೃತಿಕ ಹೆಜೆಮೊನಿಗೆ ಬೇಕಾದ ಮೌಲ್ಯಗಳ ಉತ್ಪಾದನೆಯನ್ನೂ ಮಾಡುತ್ತಾರೆ. ವಿಧೇಯರಿಲ್ಲದಿದ್ದರೆ ಯಜಮಾನಿಕೆೆಗೆ ಅಸ್ತಿತ್ವವಿಲ್ಲ. ವಿಧೇಯರಾಗಬೇಕಾದರೆ ಜ್ಞಾನ ಇರಬಾರದು. ಅಜ್ಞಾನದ ಉತ್ಪತ್ತಿಗೆ ಬೇಕಾದುದೆಲ್ಲವನ್ನೂ ಈ ವರ್ಗ ಮಾಡುತ್ತಾ ಹೋಗುತ್ತದೆ.

ಕುವೆಂಪು ಕಲ್ಲೂರು ಎಂಬ ಅಗ್ರಹಾರವನ್ನು ಭಾರತದ ಬದುಕಿನ ರೂಪಕದಂತೆ ಚಿತ್ರಿಸುತ್ತಾರೆ. ಕಾಡು ಎಂಬ ಸಣ್ಣ ಹುಡುಗನ ಮೂಲಕ ಈ ಅಧ್ಯಾಯವನ್ನು ನಿರೂಪಿಸುತ್ತಾರೆ. ಕಾಡು ತನ್ನ ಗೆಳೆಯರಿಗೆ ಹೇಳುತ್ತಾನೆ, ‘‘ಅಪ್ಪಯ್ಯನ ಸಂಗಡ ಒಂದು ಸಾರಿ ಕಲ್ಲೂರು ತೇರಿಗೆ ಬಂದಿದ್ದೆ ಕಣೊ. ಆಗ ಆ ಭಟ್ಟರ ಮನೇಲೇ ಊಟ ಮಾಡಿದ್ದು ನಾವು. ಹೋಳಿಗೆ ಪಾಯಸ ಏನೇನೋ ಇಕ್ಕಿದ್ರು ಕಣೊ! ಆದರೆ, ಮನೆ ಒಳಗೆ ಬಳ್ಳೆ ಹಾಕಿರಲಿಲ್ಲ; ಹೊರಾಂಗಣದ ತೆಣೆ ಮೂಲೇಲಿ ಹಾಕಿದ್ರೋ! ಅಪ್ಪಯ್ಯನೇ ನನ್ನ ಬಳ್ಳೇನೆಲ್ಲ ಎತ್ತಿ ಹಾಕಿ, ಅವರೇ ಅಲ್ಲೆಲ್ಲ ಗ್ವಾಮಯಾನೂ ಹಾಕಿದ್ರು! ನಂಗೆ ಇಸ್ಸಿ ಅನ್ನಿಸಿ ಬಿಟ್ಟಿತು! ಇನ್ನು ಎಂದೆಂದಿಗೂ ಅವರ ಮನೇಲಿ ಊಟ ಮಾಡಬಾರ್ದು ಅಂತಾ ಮಾಡಿಟ್ಟೀನಿ!’’(424) ಅನಂತ ಐಗಳ ಬಳಿ ಜೈಮಿನಿ ಭಾರತ ಮುಂತಾದ ಕಾವ್ಯ ಪುರಾಣಗಳನ್ನು ಕಲಿಯುತ್ತಿರುವ ಕಾಡುವಿಗೆ ಅನ್ನಿಸುವ ಭಾವವಿದು. ಆದರೆ ತನ್ನದೇ ಹಟ್ಟಿಯಲ್ಲಿ ಜೀತದಾಳುಗಳ ಮೇಲೆ ನಡೆಸುತ್ತಿರುವ ದೌರ್ಜನ್ಯದ ಕುರಿತು ಎಲ್ಲ ಪಾತ್ರಗಳೂ ಮೌನ ವಹಿಸುತ್ತವೆ. ಕಲ್ಲೂರು ಅಗ್ರಹಾರದಲ್ಲೂ ಹಾದರ, ಹಿಂಸೆ, ತಾರತಮ್ಯ, ವಿಕೃತಿ, ಕೊಳಕುತನ, ತೋರ್ಪಡಿಕೆ, ದರ್ಪ, ದಮನಕಾರಿ ಪ್ರವೃತ್ತಿಗಳನ್ನು ಕಣ್ಣಿಗೆ ರಾಚುವಂತೆ ಕಾದಂಬರಿ ವಿವರಿಸುತ್ತದೆ. ಬೋಳು ಹಾರ್ತಿಯನ್ನು ನೋಡಿ ಧರ್ಮುವಿಗೆ ‘ಸದ್ಯ ನಾನೂ ನನ್ನವ್ವನೂ ಬಿರಾಂಬ್ರ ಜಾತೀಲಿ ಹುಟ್ಟದೆ ಗೌಡರ ಜಾತೀಲಿ ಹುಟ್ಟಿದ್ದೀವಲ್ಲ’ ಎಂದು ಸಮಾಧಾನ ಪಟ್ಟುಕೊಳ್ಳುತ್ತಾನೆ.

 ಹಾದರದ ಬಗ್ಗೆ ಕಾಡು ಹೇಳುತ್ತಾನೆ, ‘‘ನಾರಾಯಣ ಭಟ್ಟ (ಮಂಜ ಭಟ್ಟರ ಮಗ) ಅಂತೆ ಕಣೊ ಅವನ ಹೆಸರು.. .. ಅಂವ ಇವರನ್ನು ಬಿಟ್ಟು (ಹೆಂಡತಿಯನ್ನು) ಕಿಟ್ಟ ಐತಾಳನ ಹೆಂಡ್ತಿ ಇಟ್ಟುಕೊಂಡಿದ್ದಾನಂತೆ’’ (430). ಸತ್ಯನಾರಾಯಣ ಪೂಜೆಗೆಂದು ಹೋದ ಶೂದ್ರ ಕುಟುಂಬವೊಂದರ ಹುಡುಗರು ಇಡೀ ಅಗ್ರಹಾರವನ್ನು ಬೆಚ್ಚಿ ಬೀಳಿಸುವಂತೆ ವಿವರಿಸುತ್ತಾರೆ. ದೇವಯ್ಯ ಹೆಗ್ಗಡೆ ಹಂದಿ ಹೊಡೆದು ತಿಂದು ಬರುತ್ತಾನೆ. ತನ್ನ ತಂದೆ ಕಲ್ಲಯ್ಯ ಹೆಗ್ಗಡೆಯವರನ್ನು ಭಟ್ಟರು ಕಲ್ಲಯ್ಯ ಬಂದಿದ್ದಾನೊ ಎಂದುದನ್ನು ಪ್ರತಿಭಟಿಸುತ್ತಾನೆ. ಹುಡುಗರು ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸದೆ ಗಡ್ಡದಯ್ಯ ಕೊಟ್ಟ ಹಣ್ಣುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಇದು ಸಣ್ಣ ಜಾಗೃತಿ ಮೂಡುತ್ತಿರುವುದರ ಚಲನೆ ಎಂದು ಕಾದಂಬರಿ ಗ್ರಹಿಸುತ್ತದೆ. ಮಂಜಭಟ್ಟರ ಮಾದರಿಯನ್ನು ಯಜಮಾನಿಕೆಯ ಮಾದರಿ ಎನ್ನಬಹುದು. ಸಮುದಾಯಗಳ ಮೇಲಿನ ಯಜಮಾನಿಕೆ ಸುಮ್ಮನೆ ಬರುವುದಿಲ್ಲ. ಆಸ್ತಿ, ದೇವರು, ದೇವಸ್ಥಾನವೆಂಬ ಸಂಸ್ಥೆ, ಗೂಂಡಾ ಪಡೆ ಎಲ್ಲವೂ ಬೇಕು. ಅದೆಲ್ಲವನ್ನೂ ಈ ವರ್ಗ ಸೃಜಿಸಿಕೊಂಡಿದೆ.

 ಭಟ್ಟರ ಪಾತ್ರವನ್ನು ಧರ್ಮವೊಂದರ ಕುಟ್ಟೆ ಹುಳದಂತೆಯೂ, ದುಷ್ಟ ಮಾದರಿಯಂತೆಯೂ ಕುವೆಂಪು ವಿವರಿಸುತ್ತಾರೆ. ಇವರಿಗೆ ಪರ್ಯಾಯವಾಗಿ ಗಡ್ಡದಯ್ಯನನ್ನು, ವಿವೇಕಾನಂದರನ್ನು ಮುನ್ನೆಲೆಗೆ ತರುತ್ತಾರೆ. ಸ್ಥಾವರ ವಿರೋಧಿಯಾದ, ಜಂಗಮರೂಪಿಯಾದ ಗಡ್ಡದಯ್ಯನ ಜ್ಞಾನ ಮಾರ್ಗ, ಮುಂಗಾಣ್ಕೆಗಳು ಧರ್ಮವನ್ನು ಸಂರಕ್ಷಿಸುತ್ತವೆಯೇ ಹೊರತು ಮಂಜಭಟ್ಟರ ಅನೈತಿಕ ಮತ್ತು ದುರ್ವಾಸನೆಯ ಧರ್ಮದ ಮಾದರಿಗಳಲ್ಲ ಎಂದು ಕಾದಂಬರಿ ವಿವರಿಸುತ್ತದೆ.. ದುರಂತವೆಂದರೆ ಮೇಲ್ಪಂಕ್ತಿಯ ಮಾದರಿಯೂ ಆಗಿ ಬಿಟ್ಟಿದೆ. ಇದರ ವಿರುದ್ಧ ಅನೇಕ ಹೋರಾಟಗಳಾಗಿವೆ. ಕುವೆಂಪು ಕೂಡ ಹೋರಾಡುತ್ತಾರೆ. ಆದರೂ ಈ ಮಾದರಿ ಸಮಾಜವನ್ನು ಆಳಕ್ಕೆ ಎಳೆದೊಯ್ಯುತ್ತಲೇ ಇದೆ. ಆವರಿಸಿ ಬಿದ್ದಿರುವ ಮೌಢ್ಯದ ಹೆಬ್ಬಂಡೆಯಿಂದಾಗಿ ಸಮಾಜಗಳು ಬಿಡುಗಡೆಯಿಲ್ಲದ ದಾಸ್ಯಕ್ಕೆ ಸಿಕ್ಕಿ ನರಳುತ್ತಿವೆ ಎಂಬ ವಿಷಾದ ಮತ್ತು ಸಿಟ್ಟು ಕಾದಂಬರಿಯಲ್ಲಿ ಕಾಣುತ್ತದೆ.

ಶರಣಾಗತಿ, ಅನುಕರಣೆ, ಹಿಪಾಕ್ರಸಿ ಮತ್ತು ಯಜಮಾನಿಕೆಯ ಮಾದರಿಗಳನ್ನು ಗೇಲಿ ಮಾಡುವ, ವಿಷಾದಪಡುವ, ದುರಂತವೆಂಬ ಭಾವನೆ ಹುಟ್ಟಿಸುವ ಮೂಲಕ ಅವುಗಳನ್ನು ನಿರಾಕರಿಸುವ ಕಾದಂಬರಿಕಾರರು ಸಮನ್ವಯದ, ಪ್ರತಿಭಟನೆಯ, ಆಯ್ಕೆಯ ಹಿಂದೂ ಪ್ರಜ್ಞೆಯ ಮಾದರಿಗಳನ್ನು ಪರ್ಯಾಯ ಮಾದರಿಗಳು ಎಂದು ವಿವರಿಸುತ್ತಾರೆ.

ಕನ್ನಡದ ಕಾದಂಬರಿಯೊಂದು ನಿರ್ವಚಿಸುವ ಈ ಎಲ್ಲ ಪ್ರಮೇಯಗಳ ಹಿಂದೆ ಆಧುನಿಕ ಭಾರತ ನಿರ್ಮಾಣ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದ ಆರ್ಗ್ಯಾನಿಕ್ ಅಥವಾ ಸಮಾಜವಾದಿ ಚಿಂತಕರ ಪ್ರಭಾವವಿದೆ. ಸಾಮಾಜಿಕ, ರಾಜಕೀಯ, ಆಧ್ಯಾತ್ಮಿಕ ಸಂಗತಿಗಳು ಕಲಾಕೃತಿಯೊಂದರ ಮೂಲಕ ಜೀವ ತಳೆಯುವ ಪ್ರಕ್ರಿಯೆ ಗಮನಾರ್ಹವಾದುದು. ವಿಜ್ಞಾನ, ಸಮಾಜ ವಿಜ್ಞಾನಗಳು ದರ್ಶನವಾಗಿ ಕಲಾಕೃತಿಯಲ್ಲಿ ಪ್ರವೇಶ ಪಡೆದ ಕೂಡಲೇ ಕಾಲಾತೀತವಾಗುತ್ತವೆ. ತತ್ವ ಶಾಸ್ತ್ರದ ಜೀವ ಕಾವ್ಯದ ಗರ್ಭದ ಮೂಲಕವೇ ಅರಳಬೇಕು. ತತ್ವಶಾಸ್ತ್ರವು ತಾನು ಗಂಡು ಎಂಬ ಅಹಮ್ಮನ್ನು ಬಿಡದ ಹೊರತು ಹೊಸ ಜೀವ ತಳೆದು ಹುಟ್ಟಲಾರದು. ಹಾಗಾಗಿ ಅದು ಕಾವ್ಯದ, ಕಲಾಕೃತಿಯ ಜೊತೆ ಕೂಡಿಯೇ ಚಿಗುರಬೇಕು. ಮದುಮಗಳು ಹಾಗೆ ಜೀವ ತಳೆದ ಕನ್ನಡದ ಅಪ್ರತಿಮ ಕಲಾಕೃತಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)