varthabharthi


ವಾರ್ತಾಭಾರತಿ 18ನೇ ವಾರ್ಷಿಕ ವಿಶೇಷಾಂಕ

ಎಲ್ಲರನ್ನೂ ಪ್ರಶ್ನಿಸುವ ದೇಶಭಕ್ತ ಆಕಾಶ್ ಬ್ಯಾನರ್ಜಿ

ವಾರ್ತಾ ಭಾರತಿ : 17 Jan, 2021
ಸಂದರ್ಶನ: ಸಯ್ಯದ್ ಅಬ್ದುಲ್ ಖಾದರ್

 ಲಕ್ನೊದ ಲಾ ಮಾರ್ಟಿನೇರ್ ಕಾಲೇಜಿನಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ. ದಿಲ್ಲಿಯ ಹಿಂದೂ ಕಾಲೇಜು ಹಾಗೂ ಸೈಂಟ್ ಸ್ಟೀಫನ್ಸ್ ಕಾಲೇಜುಗಳಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ. ಮುದ್ರಣ ಮಾಧ್ಯಮ, ಟಿವಿ ವರದಿಗಾರಿಕೆ, ಆ್ಯಂಕರಿಂಗ್, ಪುಸ್ತಕ ಪ್ರಕಾಶನ, ರೇಡಿಯೊ ಜಾಕಿ, ಎಫ್‌ಎಂ ರೇಡಿಯೊ ಉಸ್ತುವಾರಿ ಇವೆಲ್ಲದರಲ್ಲೂ ಪಳಗಿದ ಆಕಾಶ್ ಬ್ಯಾನರ್ಜಿ ಇವತ್ತು ದೇಶದ ಸುಪ್ರಸಿದ್ಧ ದೇಶಭಕ್ತ! ಏಕೆಂದರೆ ಅದೇ ಅವರ ಯೂಟ್ಯೂಬ್ ಚಾನೆಲ್‌ನ ಹೆಸರು (TheDeshbhakt).

 ಯೂಟ್ಯೂಬ್ ಒಂದರಲ್ಲೇ ಸುಮಾರು 17 ಲಕ್ಷ ಚಂದಾದಾರರಿರುವ ಒಟ್ಟು 25 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇರುವ ದೇಶದ ಪ್ರಪ್ರಥಮ ಹಾಗೂ ಅತಿದೊಡ್ಡ ರಾಜಕೀಯ ವಿಡಂಬನಾ ಮಾಧ್ಯಮ ಇದು. ಜನರ ಸದಸ್ಯತ್ವ ಚಂದಾ ಒಂದನ್ನೇ ನಂಬಿಕೊಂಡು ನಡೆಯುವ ಈ ಚಾನೆಲ್‌ನ ನಿಷ್ಠೆ ದೇಶಕ್ಕೆ ಮಾತ್ರ, ಇಲ್ಲಿನ ಪುಢಾರಿಗಳಿಗಲ್ಲ. ಹಾಗಾಗಿ ಇವರ ಸತ್ಯದ ಚಾಟಿಯಿಂದ, ಮೊನಚು ಪ್ರಶ್ನೆಗಳಿಂದ, ಚುಚ್ಚುವ ಹಾಸ್ಯದಿಂದ ತಪ್ಪಿಸಿಕೊಂಡ ರಾಜಕಾರಣಿಗಳು ಬಹಳ ಕಡಿಮೆ. ಅದರಿಂದ ಇವರಿಗೆ ಸೃಷ್ಟಿಯಾಗಿರುವ ‘ದ್ವೇಷಭಕ್ತರ’ ಸಂಖ್ಯೆ ಬಹಳ ದೊಡ್ಡದು. ಭಯೋತ್ಪಾದಕ ದಾಳಿ, ನೈಸರ್ಗಿಕ ದುರಂತ, ನಕ್ಸಲ್ ದಾಳಿಗಳ ಸ್ಥಳದಿಂದ ವರದಿ ಮಾಡಿದಷ್ಟೇ ಸುಲಲಿತವಾಗಿ ಪ್ರೈಮ್ ಟೈಮ್ ನ್ಯೂಸ್ ಶೋ ಆ್ಯಂಕರಿಂಗ್ ಮಾಡಿದ, ಹಾಸ್ಯ ಮಿಶ್ರಿತ ರೇಡಿಯೊ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಆಕಾಶ್ ಬ್ಯಾನರ್ಜಿ ಬರೆದಿರುವ ‘Tales from Shining and Sinking India’ ಪತ್ರಿಕೋದ್ಯಮ ವಿದ್ಯಾರ್ಥಿಗಳು ಅದರಲ್ಲೂ ಟಿವಿ ಮಾಧ್ಯಮದಲ್ಲಿ ಕೆಲಸ ಮಾಡುವವರು ಓದಲೇಬೇಕಾದ ಪುಸ್ತಕ. ತಾನು ‘ಪ್ರಶ್ನೆ ಕೇಳುವ ದೇಶಭಕ್ತ’ನಾದ ಬಗೆ ಹಾಗೂ ಈಗ ಅದರ ಅಗತ್ಯಗಳ ಕುರಿತು ಇಲ್ಲಿ ಅವರು ಮುಕ್ತವಾಗಿ ಮಾತನಾಡಿದ್ದಾರೆ.

 ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿದ್ದ ನೀವು ವಿಡಂಬನೆ, ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳಿಗೆ ಬರಲು ಕಾರಣವೇನು?

► ಅದು ಬಹಳ ದೀರ್ಘ ಕತೆ. ನಾನು ಸುಮಾರು 10 ವರ್ಷ ಟಿವಿ ಮಾಧ್ಯಮದಲ್ಲಿ ಹಾಗೂ 5 ವರ್ಷ ರೇಡಿಯೊದಲ್ಲಿ ಕೆಲಸ ಮಾಡಿದ್ದೇನೆ. ರೇಡಿಯೊದಲ್ಲಿ ಆಡಳಿತ ಹಾಗೂ ಪ್ರೋಗ್ರಾಮಿಂಗ್ ವಿಭಾಗದಲ್ಲಿದ್ದೆ. ಮೊದಲು ರೇಡಿಯೊ ಜಾಕಿಯಾಗಿ, ಮತ್ತೆ ಟಿವಿ ವರದಿಗಾರ ಹಾಗೂ ಆ್ಯಂಕರ್ ಆಗಿ ಮತ್ತೆ ಪುನಃ ಆರ್‌ಜೆಗಳನ್ನು ಸಂಭಾಳಿಸುವ ಕೆಲಸ ಮಾಡಿದೆ. ರೇಡಿಯೊದಲ್ಲಿ ಪಕ್ಕಾ ವರದಿಗಾರಿಕೆ ಹಾಗೂ ಮಸಾಲೆ ಒಟ್ಟಿಗೆ ಸೇರಿಸುವ ವಿಭಿನ್ನ ಅನುಭವ ನನಗೆ ಸಿಕ್ಕಿತು. ವಾಸ್ತವ ಹಾಗೂ ಅಂಕಿ-ಅಂಶಗಳನ್ನೇ ತಮಾಷೆಯಾಗಿ, ಮಜವಾಗಿ ಜನರಿಗೆ ತಲುಪಿಸುವ ಶೈಲಿ ಅಲ್ಲಿದೆ. ಅಲ್ಲಿಂದಲೇ ಈ ರಾಜಕೀಯ ವಿಡಂಬನೆಯ ಐಡಿಯಾ ಹುಟ್ಟಿಕೊಂಡಿತು. ಆದರೆ ಟಿವಿ, ರೇಡಿಯೊಗಳಲ್ಲಿ ರಾಜಕೀಯ ವಿಡಂಬನೆಗೆ ಅವಕಾಶ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಏಕೆಂದರೆ ಅಲ್ಲಿ ಅದರಿಂದ ನೇರವಾಗಿ ಜಾಹೀರಾತಿಗೆ ಪೆಟ್ಟು ಬೀಳುವ ಭಯವಿದೆ. ಹಾಗಾಗಿ ನನಗೆ ಸೋಷಿಯಲ್ ಮೀಡಿಯಾ ಹಾಗೂ ಯೂಟ್ಯೂಬ್ ಸಹಜ ಆಯ್ಕೆಯಾಯಿತು. ಇಲ್ಲಿಯವರೆಗೆ ರಾಜಕೀಯ ವಿಡಂಬನೆಗೆ ಮುಕ್ತ ಅವಕಾಶವಿರುವುದು ಅಲ್ಲಿ ಮಾತ್ರ. ಮುಂದೆ ಏನಾಗುತ್ತದೆ ಗೊತ್ತಿಲ್ಲ.

ಗದ್ದುಗೆಯಲ್ಲಿರುವವರನ್ನು ಪ್ರಶ್ನಿಸಲು ವಿಡಂಬನೆ ಎಷ್ಟು ಪರಿಣಾಮಕಾರಿ? ಇದು ಕೇವಲ ನಕ್ಕುಬಿಡುವುದಕ್ಕೆ ಸೀಮಿತವೇ ಅಥವಾ ಜನರನ್ನು ಆಲೋಚಿಸುವುದಕ್ಕೆ ಪ್ರೇರೇಪಿಸುತ್ತದೆಯೇ?

► ರಾಜಕೀಯ ವಿಡಂಬನೆ ಎಂದರೆ ಕಾಮಿಡಿ ಅಲ್ಲ ಎಂದು ಜನರಿಗೆ ಮನವರಿಕೆ ಮಾಡುವುದು ನಮಗಿರುವ ದೊಡ್ಡ ಸವಾಲುಗಳಲ್ಲಿ ಒಂದು. ಅಯ್ಯೋ, ನಿಮ್ಮ ಕಾರ್ಯಕ್ರಮದಲ್ಲಿ ಮಜಾ ಇರಲಿಲ್ಲ, ಹಾಸ್ಯ ಕಡಿಮೆ ಇತ್ತು, ನಗು ಬರಲಿಲ್ಲ ಎಂದು ಜನರು ಹೇಳೋದಿದೆ. ರಾಜಕೀಯ ವಿಡಂಬನೆ ಕೇವಲ ನಗಿಸುವ ಸಾಧನ ಅಲ್ಲ ಎಂಬುದನ್ನು ನಾವು ಮೊದಲು ತಿಳಿದುಕೊಳ್ಳಬೇಕಿದೆ. ಅಲ್ಲಿ ನಗುವಿಗೆ ಎರಡನೇ ಸ್ಥಾನ. ವಿಡಂಬನೆಯಲ್ಲಿ ಬಹಳ ಮುಖ್ಯ ಅದು ನಿಮಗೆ ತೀವ್ರವಾಗಿ ತಾಗಬೇಕು, ನಿಮ್ಮನ್ನು ಪ್ರಚೋದಿಸಬೇಕು, ನಿಮಗೆ ಬೇಸರ ತರಿಸಬೇಕು, ಚಿಂತಿಸಲು ಪ್ರಚೋದಿಸಬೇಕು. ಇವೆಲ್ಲದರ ಜೊತೆ ಅದು ನಿಮ್ಮನ್ನು ನಗಿಸುತ್ತದೆ ಎಂದಾದರೆ ಬಹಳ ಒಳ್ಳೆಯದು. ಆದರೆ ನಗುವೇ ಮುಖ್ಯವಲ್ಲ. ಅದಕ್ಕೆ ಸ್ಟಾಂಡ್ ಅಪ್ ಕಾಮಿಡಿ ಇತ್ಯಾದಿ ಹಲವು ಆಯ್ಕೆಗಳಿವೆ. ರಾಜಕೀಯ ವಿಡಂಬನೆ ಎಂದರೆ ಅದರಿಂದ ಒಂದು ಸ್ಪಷ್ಟ ಸಂದೇಶ ರವಾನೆಯಾಗಬೇಕು. ಅದರಲ್ಲಿ ಸತ್ಯ ಇರಬೇಕು, ಅಂಕಿ-ಅಂಶ ಇರಬೇಕು. ಅದರ ಜೊತೆ ತುಂಬಾ ವ್ಯಂಗ್ಯ ಇರುತ್ತದೆ. ಒಟ್ಟಾರೆ ಅದು ಜನರನ್ನು ಯೋಚಿಸುವಂತೆ ಮಾಡಬೇಕು. ಭಾರತದಲ್ಲಿ ಜನರಿಗೆ ವಿಡಂಬನೆ ಬೇಗ ಜೀರ್ಣವಾಗುವುದಿಲ್ಲ. ಅವರಿಗೆ ನೀವು ಒಂದೋ ಕಾಂಗ್ರೆಸ್ ಇಲ್ಲವೇ ಬಿಜೆಪಿ ಅಥವಾ ಆಮ್ ಆದ್ಮಿ ಪಾರ್ಟಿ. ವಿಡಂಬನೆ ಮಾಡುವವನು ಯಾವ ಪಕ್ಷದ ಬೆಂಬಲಿಗನೂ ಅಲ್ಲ, ಆತ ಸಂವಿಧಾನ ಪಾಲಿಸುವವನು ಅದನ್ನು ರಕ್ಷಿಸುವ ಕೆಲಸ ಮಾಡುವವನು ಎಂದು ಒಪ್ಪಿಕೊಳ್ಳಲು ಜನರು ಸಿದ್ಧರಿಲ್ಲ.

ಯಾವ ಪ್ರಚಾರವಾದರೂ ನಮಗೆ ಒಳ್ಳೆಯ ಪ್ರಚಾರವೇ ಎಂದು ರಾಜಕಾರಣಿಗಳು ಹೇಳುತ್ತಾರೆ. ಹಾಗಾಗಿ ನೀವು ಮಾಡುವ ವಿಡಂಬನೆ ಕೊನೆಗೆ ಈ ರಾಜಕಾರಣಿಗಳು ಹಾತೊರೆಯುವ ಪ್ರಚಾರ ಕೊಡುವುದಕ್ಕೆ ಬಳಕೆಯಾಗಲಿದೆಯೇ?

 ► ಒಳ್ಳೆಯ ಪ್ರಶ್ನೆ. ಟ್ರಂಪ್ ವಿಷಯದಲ್ಲಿ ಹೀಗೇ ಆಯಿತು. ಆತನದ್ದು ಅತ್ಯಂತ ಕುತೂಹಲ ಕೆರಳಿಸುವ ವ್ಯಕ್ತಿತ್ವ. ವಿಚಿತ್ರ ಆರೋಪಗಳನ್ನು ಮಾಡುತ್ತಿದ್ದ. ಹಾಗಾಗಿ ಫ್ರೀ ಪಬ್ಲಿಸಿಟಿ ಸಿಕ್ಕಿತು. ಜನರು ಆತನ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ಚರ್ಚಿಸಿದರು. ಕೊನೆಗೆ ಎಲ್ಲ ಪ್ರಚಾರದ ಲಾಭ ಪಡೆದು ಆತ ಅಮೆರಿಕ ಅಧ್ಯಕ್ಷನಾದ. ಆದರೆ ಅದರರ್ಥ ಯಾರಿಗೆ ಲಾಭ ಸಿಗುತ್ತದೆ ಎಂದು ನೋಡಿ ರಾಜಕೀಯ ವಿಡಂಬನೆ ಮಾಡಲಾಗದು. ನಾವು ಅಧಿಕಾರದಲ್ಲಿರುವ ವ್ಯಕ್ತಿಯ ಮೂರ್ಖತನ, ಧೂರ್ತತನ ಎಲ್ಲವನ್ನೂ ಜನರೆದುರು ಇಡುತ್ತೇವೆ. ಆಮೇಲೂ ಅದೇ ವ್ಯಕ್ತಿಗೆ ಓಟು ನೀಡಬೇಕು ಎಂದು ಜನರು ನಿರ್ಧರಿಸಿದರೆ ಅದಕ್ಕೆ ಏನೂ ಮಾಡಲಾಗದು. ಪ್ರಜಾಪ್ರಭುತ್ವ ಎಂದರೆ ಅದೇ. ಆದರೆ ತಾವು ಯಾರಿಗೆ ಮತ ಹಾಕುತ್ತಿದ್ದೇವೆ ಎಂದು ಜನರಿಗೆ ಅರಿವು ಮೂಡಿಸುವುದು ನಮ್ಮ ಕರ್ತವ್ಯ.

ರಾಜಕೀಯ ವಿಡಂಬನೆ ಎಂದರೆ ಅದರಿಂದ ಒಂದು ಸ್ಪಷ್ಟ ಸಂದೇಶ ರವಾನೆಯಾಗಬೇಕು. ಅದರಲ್ಲಿ ಸತ್ಯ ಇರಬೇಕು, ಅಂಕಿ-ಅಂಶ ಇರಬೇಕು. ಅದರ ಜೊತೆ ತುಂಬಾ ವ್ಯಂಗ್ಯ ಇರುತ್ತದೆ. ಒಟ್ಟಾರೆ ಅದು ಜನರನ್ನು ಯೋಚಿಸುವಂತೆ ಮಾಡಬೇಕು. ಭಾರತದಲ್ಲಿ ಜನರಿಗೆ ವಿಡಂಬನೆ ಬೇಗ ಜೀರ್ಣವಾಗುವುದಿಲ್ಲ. ಅವರಿಗೆ ನೀವು ಒಂದೋ ಕಾಂಗ್ರೆಸ್ ಇಲ್ಲವೇ ಬಿಜೆಪಿ ಅಥವಾ ಆಮ್ ಆದ್ಮಿ ಪಾರ್ಟಿ. ವಿಡಂಬನೆ ಮಾಡುವವನು ಯಾವ ಪಕ್ಷದ ಬೆಂಬಲಿಗನೂ ಅಲ್ಲ, ಆತ ಸಂವಿಧಾನ ಪಾಲಿಸುವವನು ಅದನ್ನು ರಕ್ಷಿಸುವ ಕೆಲಸ ಮಾಡುವವನು ಎಂದು ಒಪ್ಪಿಕೊಳ್ಳಲು ಜನರು ಸಿದ್ಧರಿಲ್ಲ.

ಈಗ ದೇಶದಲ್ಲಿರುವ ಬೃಹತ್ ಗೋದಿ ಮೀಡಿಯಾಗೆ ಹೋಲಿಸಿದರೆ ನಿಮ್ಮ ಪ್ರಕಾರ ಇಲ್ಲಿನ ಸ್ವತಂತ್ರ ಮಾಧ್ಯಮ ಎಷ್ಟು ಬಲಿಷ್ಠವಾಗಿದೆ?

 ► ಸ್ವತಂತ್ರ ಮಾಧ್ಯಮ ಬಹಳ ಸಣ್ಣ ಪ್ರಮಾಣದಲ್ಲಿದೆ. ಟಿವಿ, ಮುದ್ರಣ ಮಾಧ್ಯಮಗಳಿಗೆ ಹೋಲಿಸಿದರೆ ಅಸ್ತಿತ್ವವೇ ಇಲ್ಲದಷ್ಟು ಕಡಿಮೆ ಇದೆ. ಇಂಟರ್‌ನೆಟ್‌ನಲ್ಲಿ ಸ್ವತಂತ್ರ ಮಾಧ್ಯಮ ವೇಗವಾಗಿ ಬೆಳೆಯುತ್ತಿದೆ. ಆದರೆ ಸರಕಾರ ಈಗ ಅದಕ್ಕೆ ನಿಯಂತ್ರಣ ಹೇರಲು ಹೊರಟಿದೆ. ಹೊಸ ಕಾನೂನುಗಳ ಮೂಲಕ ವೆಬ್ ಮೀಡಿಯಾಕ್ಕೆ ಕಡಿವಾಣ ಹಾಕಲು ನಿರ್ಧರಿಸಿದೆ. ಇನ್ನು ಇದರಲ್ಲಿ ಎಫ್‌ಡಿಐ (ವಿದೇಶಿ ಹೂಡಿಕೆ)ಗೆ ಅವಕಾಶವಿಲ್ಲದ ಹಾಗೆ ಮಾಡಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಬಲಪಂಥೀಯರ ಪೂರ್ಣ ಸ್ವಾಮ್ಯದ ಕಾಲ ಮುಗಿಯಿತು ಎಂಬುದು ನಿಜವೇ?

► ನೋಡಿ. ಟಿವಿ, ಮುದ್ರಣ ಮಾಧ್ಯಮಗಳು ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಬಲಪಂಥೀಯರ ಹಿಡಿತ ಬಹಳ ಗಟ್ಟಿಯಾಗಿದೆ. ಈಗಲೂ ಬಹಳಷ್ಟು ಜನರು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಭಯಪಡುವ ಪರಿಸ್ಥಿತಿ ಇದೆ. ಆದರೆ ಬಲಪಂಥೀಯರ ಪೂರ್ಣ ಸ್ವಾಮ್ಯ ಈಗ ಇಲ್ಲ ಎಂದು ಹೇಳಬಹುದು. ಆದರೂ ಅಲ್ಲಿ ಆಗಬೇಕಾದ ಕೆಲಸ ಇನ್ನೂ ಬಹಳಷ್ಟಿದೆ. ಎಲ್ಲ ವಿಭಾಗಗಳ ಎಲ್ಲ ಅಭಿಪ್ರಾಯಗಳಿಗೆ ಮುಕ್ತ ಸ್ವಾತಂತ್ರ್ಯ ಇರುವಂತೆ ಮಾಡಲು ಇನ್ನೂ ಶ್ರಮಪಡಬೇಕಿದೆ.

ಸೋಷಿಯಲ್ ಮೀಡಿಯಾದಲ್ಲಿ ಜಾತ್ಯತೀತ ಹೋರಾಟಗಾರರು ಸಕ್ರಿಯವಾಗಿರುವುದರಿಂದ ಸಮಾಜದ ಮೇಲೆ ಪರಿಣಾಮ ಬೀರಬಹುದು ಎಂದು ನಿಮಗೆ ಅನಿಸುತ್ತದೆಯೇ?

► ಅಂಧಭಕ್ತರು ಈಗಲೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆದರೆ ಡಿಜಿಟಲ್ ಮೀಡಿಯಾಗಳು, ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವವರು ಈ ಮಧ್ಯದಲ್ಲಿ ನಿಂತು ನೋಡುವವರನ್ನು ಹಾಗೂ ಯುವಜನರನ್ನು ತಲುಪಬೇಕಿದೆ. ಅವರಿಗೆ ಈ ವಾಟ್ಸ್‌ಆ್ಯಪ್ ಫೇಕ್ ಸುದ್ದಿಗಳ ಕುರಿತು ಅರಿವು ಮೂಡಿಸಬೇಕಾಗಿದೆ. ನಮ್ಮ ಸಂವಿಧಾನದಲ್ಲಿ ಜಾತ್ಯತೀತತೆ ಅತ್ಯಂತ ಮಹತ್ವದ ಅಂಶ ಎಂಬುದನ್ನು ನಾವು ಅವರಿಗೆ ಮನವರಿಕೆ ಮಾಡಿಸಬೇಕಾಗಿದೆ.

ನಿಮ್ಮಂತಹ ಪತ್ರಕರ್ತರು ಹಾಗೂ ವಿಡಂಬನಕಾರರಿಗೆ ದೇಶವಿರೋಧಿಗಳು ಎಂದು ಹಣೆಪಟ್ಟಿ ಕಟ್ಟಲಾಗುತ್ತದೆ. ಹಾಗಾಗಿ ಸರಕಾರದ ಟೀಕಾಕಾರರಿಗೆ ಮಾತ್ರ ನಿಮ್ಮ ಕಾರ್ಯಕ್ರಮಗಳು ಸೀಮಿತವಾಗುತ್ತಿವೆಯೇ?

 ► ನಮ್ಮ ಉದ್ದೇಶ ಎಷ್ಟು ಜನರನ್ನು ತಲುಪುತ್ತೇವೆ ಎಂಬುದಲ್ಲ. ನೀವು ಸರಕಾರವನ್ನು ಮೆಚ್ಚುವವರೇ ಆಗಿರಿ ಅಥವಾ ಅದರ ಟೀಕಾಕಾರರೇ ಆಗಿರಿ, ನೀವು ಪ್ರಜ್ಞಾವಂತರಾಗಿರಬೇಕು. ಸರಕಾರ ಮಾಡುವ ತಪ್ಪುಗಳನ್ನು ಪ್ರಶ್ನಿಸುವವರಾಗಬೇಕು. ಆ ಅಂಶ ನಮ್ಮಲ್ಲಿ ಈಗ ಎಲ್ಲೋ ಕಳೆದುಹೋಗಿದೆ. ಸರಕಾರವನ್ನು ಪ್ರಶ್ನಿಸುವುದು ಆಡಳಿತದ ಭಾಗ ಎಂಬುದು ಜನರು ತಿಳಿದುಕೊಳ್ಳುವ ಹಾಗೆ ಮಾಡಬೇಕು. ಅದು ನಮ್ಮ ಉದ್ದೇಶ.

ನಿಮ್ಮ ಕೆಲಸಕ್ಕೆ ನಿಮಗೆ ಸಿಗುತ್ತಿರುವ ಪ್ರತಿಕ್ರಿಯೆ, ಸ್ಪಂದನೆ ನಿಮಗೆ ತೃಪ್ತಿ ತಂದಿದೆಯೇ?

► ನಮಗೆ ಭಾರೀ ಸವಾಲುಗಳಿವೆ. ಬಹಳ ಕಷ್ಟದ ಕೆಲಸ ಇದು. ನಮಗೆ ಜನರೇ ಆದಾಯದ ಮೂಲ. ‘ದೇಶಭಕ್ತ’ಕ್ಕೆ ಸದಸ್ಯತ್ವ ದೇಣಿಗೆಯಿಂದ ನಮ್ಮ ಕೆಲಸ ನಡೆಯುತ್ತದೆ. ಕೆಲವು ಸ್ವಯಂಸೇವಕರೂ ನಮ್ಮ ಜೊತೆ ದುಡಿಯುತ್ತಿದ್ದಾರೆ. ಈಗ ಎರಡು ವರ್ಷವಾಯಿತು. ಇದು ಹೋರಾಟದ ಬದುಕು. ಆದರೆ ನಮ್ಮದು ವಿಭಿನ್ನ ಕೆಲಸ. ಹಾಗಾಗಿ ಇದಕ್ಕೆ ಜನರ ಪ್ರತಿಕ್ರಿಯೆ ಚೆನ್ನಾಗಿದೆ. ವೀಕ್ಷಕರು ಹೆಚ್ಚಾಗುತ್ತಿದ್ದಾರೆ.

ಮಾಧ್ಯಮ, ನ್ಯಾಯಾಂಗ, ಚುನಾವಣಾ ಆಯೋಗ, ಸಿಬಿಐ ಇತ್ಯಾದಿ ಸಂಸ್ಥೆಗಳನ್ನು ಫ್ಯಾಶಿಸ್ಟ್ ಶಕ್ತಿಗಳು ದುರ್ಬಲಗೊಳಿಸುತ್ತಿರುವ ಬಗ್ಗೆ ಈಗ ಪತ್ರಕರ್ತರು, ಲೇಖಕರು, ಚಿಂತಕರು ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಈ ಬೆಳವಣಿಗೆ ಬಗ್ಗೆ ನೀವು ಏನು ಹೇಳುತ್ತೀರಿ?

► ಇದು ಬಹಳ ಸ್ಪಷ್ಟವಾಗಿದೆ. ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಹೇಳುತ್ತಿರುವ ವಿಷಯಗಳು ಬಹಳ ಕಳವಳಕಾರಿಯಾಗಿವೆ. ಪ್ರತಿ ನ್ಯಾಯಾಧೀಶರಿಗೆ ಸರಕಾರದಿಂದ ಫೋಲ್ಡರ್‌ಗಳು ಬರುತ್ತವೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ನ್ಯಾಯಾಧೀಶರು ಸರಕಾರದ ಮರ್ಜಿಗೆ ಬಿದ್ದರೆ ಅದು ಬಹಳ ಅಪಾಯಕಾರಿ. ಇದರಿಂದಾಗುವ ಸಮಸ್ಯೆಗಳನ್ನು ನಾವು ಈಗಾಗಲೇ ನೋಡುತ್ತಿದ್ದೇವೆ.

ಕೋಮುವಾದ ಹಾಗೂ ಫ್ಯಾಶಿಸಂ ಹೊರತುಪಡಿಸಿ ಆಡಳಿತದ ವಿವಿಧ ವಿಭಾಗಗಳಲ್ಲಿ ಸರಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಪರಿಣಾಮಕಾರಿಯಾಗಿ ಆಗಬೇಕಲ್ಲವೇ?

► ಇದು ವಿಪಕ್ಷದ ಕೆಲಸ. ವಿಪಕ್ಷ ನಾಯಕರು ನಿಮ್ಮ (ವಿಡಂಬನಕಾರರ) ಟ್ವೀಟ್‌ಗಳನ್ನು ಯಾಕೆ ತೆಗೆದುಕೊಂಡು ಹೋಗಿ ಸಂಸತ್ತಿನಲ್ಲಿ ಪ್ರಶ್ನೆ ಕೇಳುವುದಿಲ್ಲ ಎಂದು ಮೊನ್ನೆ ಯಾರೋ ಕೇಳುತ್ತಿದ್ದರು. ನಾವು ಕೇಳಬೇಕಾದ ಪ್ರಶ್ನೆಗಳನ್ನು ಕೇಳುತ್ತಿದ್ದೇವೆ.

ಸರಕಾರ ತನ್ನ ಸಾಧನೆ ಎಂದು ಹೇಳಿಕೊಳ್ಳುವುದಕ್ಕೆ ಸಿಗುವ ಪ್ರಚಾರ ಅದರ ವೈಫಲ್ಯಗಳಿಗೆ ಸಿಗುತ್ತಿಲ್ಲ. ಇದರ ಬಗ್ಗೆ ನೀವು ಏನು ಹೇಳುತ್ತೀರಿ?

► ಬಲಪಂಥೀಯರ ಪ್ರಚಾರ ವ್ಯವಸ್ಥೆ ಬಹಳ ಸದೃಢವಾಗಿದೆ. ಅದು ಟ್ರಂಪ್ ಆಗಿರಲಿ ಅಥವಾ ನಮ್ಮ ದೇಶದಲ್ಲೇ ಆಗಿರಲಿ, ಅವರು ಪ್ರಚಾರದಲ್ಲಿ ಬಹಳ ಮುಂದಿರುತ್ತಾರೆ. ಅವರು ಈ ವೇಗದಲ್ಲೇ ಹೋಗುತ್ತಾರೆ ಹಾಗೂ ಅದಕ್ಕೆ ನಾವು ಯಾವ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದು ನಮಗೆ ತಿಳಿದಿರಬೇಕು.

ಸ್ವತಂತ್ರ ಸೋಷಿಯಲ್ ಮೀಡಿಯಾ ಆಧರಿತ ಮಾಧ್ಯಮಗಳು ಆರ್ಥಿಕವಾಗಿ ಸ್ವತಂತ್ರರಾಗಬೇಕಾದರೆ ದಾರಿ ಏನು?

► ನೋಡಿ ನಾವು ಜನರ ದೇಣಿಗೆಯನ್ನು ಪಡೆದು ನಮ್ಮ ಕೆಲಸ ಮಾಡುತ್ತಿದ್ದೇವೆ. ಇಲ್ಲಿ ಸದಸ್ಯತ್ವ ಚಂದಾ ಮಾತ್ರ ಆದಾಯದ ಮೂಲ. ಸ್ವತಂತ್ರ ಮಾಧ್ಯಮ ಬೇಕು ಎಂದಾದರೆ ಜನರು ಅದಕ್ಕೆ ಹಣ ಪಾವತಿಸಲು ಸಿದ್ಧರಿರಬೇಕು. ನಮ್ಮ ದೇಶಭಕ್ತ ಸದಸ್ಯರು ನಮಗೆ ಹಾಗೆಯೇ ಬೆಂಬಲ ನೀಡುತ್ತಿದ್ದಾರೆ. ಯಾವುದೇ ಕಾರ್ಪೊರೇಟ್ ಕಂಪೆನಿ ಅಥವಾ ರಾಜಕೀಯ ಪಕ್ಷ ಮಾಧ್ಯಮಗಳಿಗೆ ಹಣ ನೀಡುತ್ತಿದೆ ಎಂದಾದರೆ ಅವರು ಅದರಿಂದ ತಮ್ಮ ಲಾಭ ನಿರೀಕ್ಷಿಸುವುದು ಸಹಜ. ಹಾಗಾಗಿ ಜನರೇ ಮಾಧ್ಯಮಗಳಿಗೆ ಬೆಂಬಲವಾಗಿ ಹಣ ನೀಡಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)