varthabharthi


ಓ ಮೆಣಸೇ

ಓ ಮೆಣಸೇ...

ವಾರ್ತಾ ಭಾರತಿ : 18 Jan, 2021
ಪಿ.ಎ.ರೈ

ಗೋವುಗಳ ಸಂರಕ್ಷಣೆಗಾಗಿ ಪ್ರತೀ ತಾಲೂಕಿಗೆ 2 ಗೋಶಾಲೆಗಳನ್ನು ಮಂಜೂರು ಮಾಡಲು ಚಿಂತನೆ ನಡೆದಿದೆ - ಪ್ರಭು ಚೌಹಾಣ್, ಸಚಿವ
ಸರಕಾರಿ ಶಾಲೆಗಳನ್ನು ಮುಚ್ಚಿಸಿ ಅಲ್ಲೇ ಗೋಶಾಲೆ ತೆರೆಯುವ ಉದ್ದೇಶವಿದೆಯೇ?


ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿರುವುದರಿಂದ ಅಲ್ಲಿನ ನಾಯಕರು ಬಿಜೆಪಿ ನಾಯಕರ ವಿರುದ್ಧ ಅನಗತ್ಯ ಆರೋಪ ಮಾಡುತ್ತಿದ್ದಾರೆ - ಶೋಭಾ ಕರಂದ್ಲಾಜೆ, ಸಂಸದೆ
ಆದರೆ ಸಿಡಿ ಕುರಿತಂತೆ ಆರೋಪ ಮಾಡಿರುವುದು ಬಿಜೆಪಿ ನಾಯಕರೇ ಅಲ್ಲವೇ?


ಯಡಿಯೂರಪ್ಪ ಸಂಪುಟದಲ್ಲಿ ನಾನು ಸಚಿವನಾಗುವುದಿಲ್ಲ - ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಇನ್ನೊಂದು ಪರಿಣಾಮಕಾರಿ ಸಿಡಿ ಮುಂದಿಟ್ಟು ಮತ್ತೆ ಪ್ರಯತ್ನಿಸಿ.


ಅವಕಾಶ ಸಿಕ್ಕರೆ ನಾನೇ ಮೊದಲ (ಕೋವಿಡ್) ಲಸಿಕೆ ಪಡೆಯುವೆ - ಡಾ.ಕೆ.ಸುಧಾಕರ್, ಸಚಿವ
ನಿಮಗೆ ಯಾಕೆ ಅವಕಾಶ ಸಿಕ್ಕಿಲ್ಲ?


ಕಾಂಗ್ರೆಸ್ ಅವಸಾನಕ್ಕೆ ಗಾಂಧೀಜಿ, ಅಂಬೇಡ್ಕರ್, ಗೋಮಾತೆ ಹಾಗೂ ರಾಷ್ಟ್ರದ್ರೋಹ ಈ ನಾಲ್ಕು ಶಾಪಗಳು ಕಾರಣ - ನಳಿನ್‌ಕುಮಾರ್ ಕಟೀಲು, ಸಂಸದ
ದೇಶದ ಅವಸಾನಕ್ಕೆ ಮಾತ್ರ ಒಬ್ಬರನ್ನೇ ಹೊಣೆ ಮಾಡಬೇಕಾಗುತ್ತದೆ.


ಜಗತ್ತಿನಲ್ಲಿ ಎಲ್ಲಿಯಾದರೂ ಪ್ರಜಾಪ್ರಭುತ್ವ ಸದೃಢವಾಗಿದೆ ಎಂದಾದರೆ ಅದು ಭಾರತದಲ್ಲಿ ಮಾತ್ರ -ನರೇಂದ್ರ ಮೋದಿ, ಪ್ರಧಾನಿ
ಹೌದು, ನೀವು ಇಷ್ಟೆಲ್ಲ ಪ್ರಯತ್ನಿಸಿದರೂ ಅದನ್ನು ಪೂರ್ಣವಾಗಿ ಬೀಳಿಸಲಾಗಲಿಲ್ಲ ನೋಡಿ. 


ವಂಚಕ ಯುವರಾಜ್‌ಗೂ ಬಿಜೆಪಿ, ಆರೆಸ್ಸೆಸ್‌ಗೂ ಯಾವುದೇ ಸಂಬಂಧವಿಲ್ಲ - ಬಸವರಾಜ ಬೊಮ್ಮಾಯಿ, ಸಚಿವ
ನೂರಾರು ವಂಚಕ ರಾಜರನ್ನು ಹೊಂದಿರುವ ಪಕ್ಷ, ಸಂಘಟನೆಯಲ್ಲವೇ?


35 ವರ್ಷದ ನನ್ನ ರಾಜಕೀಯ ಜೀವನದಲ್ಲಿ ಅಧಿಕಾರ ದಾಹಕ್ಕಾಗಿ ರಾಜಕೀಯ ಮಾಡಿಲ್ಲ - ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ
ಅಧಿಕಾರ ಮೋಹಕ್ಕಾಗಿ ರಾಜಕೀಯ ಮಾಡಿದ ಬಗ್ಗೆ ವದಂತಿಗಳಿವೆ.


ರಾಜ್ಯದ ಬಹುತೇಕ ಯೋಜನೆಗಳಿಗೆ ಹಣಕಾಸಿನ ಕೊರತೆ ಎದುರಾಗಿದೆ - ಯಡಿಯೂರಪ್ಪ, ಮುಖ್ಯಮಂತ್ರಿ
ರಾಹುಲ್ ಇಟಲಿಗೆ ಪ್ರಯಾಣ ಮಾಡಿರುವುದು ಕಾರಣವಾಗಿರಬಹುದೇ?


ಅಮೆರಿಕ ಸಂಸತ್ ಒಳಗೆ ನುಗ್ಗಿದ ಟ್ರಂಪ್ ಬಂಟರು ಉಗ್ರರು - ಜೋ ಬೈಡನ್, ಅಮೆರಿಕದ ನಿಯೋಜಿತ ಅಧ್ಯಕ್ಷ
ಭಾರತದಲ್ಲಾದರೆ ಅವರು ದೇಶ ಭಕ್ತರು. 


ಪ್ರೀತಿ ಎಂದರೆ ದೇವರು ಇದ್ದ ಹಾಗೆ - ಪ್ರಜ್ಞಾಸಿಂಗ್ ಠಾಕೂರ್, ಸಂಸದೆ
ಈ ಜನ್ಮದಲ್ಲಿ ನಿಮಗೆ ದೇವರು ಒಲಿಯುವುದಿಲ್ಲ ಬಿಡಿ.


ಬಿಹಾರದಲ್ಲಿ ಎನ್‌ಆರ್‌ಸಿ ಜಾರಿಗೆ ಅವಕಾಶ ನೀಡುವುದಿಲ್ಲ - ನಿತೀಶ್‌ಕುಮಾರ್, ಬಿಹಾರ ಮುಖ್ಯಮಂತ್ರಿa
ಮೊದಲು ನಿಮ್ಮನ್ನು ಡಿಟೆನ್ಶನ್ ಸೆಂಟರ್‌ಗೆ ಸೇರಿಸದಂತೆ ನೋಡಿಕೊಳ್ಳಿ.


ಸಿಎಂ ಯಾರೇ ಇರಲಿ ವಿಧಾನಸೌಧದಲ್ಲಿ ಕಾಂಗ್ರೆಸ್ ಧ್ವಜ ಸದಾ ಹಾರುತ್ತಿರಲಿ -ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಬಿಜೆಪಿಯಲ್ಲಿರುವವರೆಲ್ಲರೂ ಮಾಜಿ ಕಾಂಗ್ರೆಸಿಗರಾಗಿರುವಾಗ ಸದಾ ಹಾರುತ್ತಲೇ ಇರುತ್ತದೆ ಬಿಡಿ.


ಜೆಡಿಎಸ್‌ಗೆ ಪೂರ್ಣ ಅಧಿಕಾರ ಕೊಟ್ಟರೆ ಕರ್ನಾಟಕವನ್ನು ನಿಜವಾದ ರಾಮರಾಜ್ಯವನ್ನಾಗಿ ಮಾಡಿ ತೋರಿಸುವೆ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಕರ್ನಾಟಕವನ್ನೀಗ ಭೀಮ ರಾಜ್ಯವನ್ನಾಗಿಸುವ ಅಗತ್ಯವಿದೆ.


ಗೋಮಾತೆಯ ಶಾಪದಿಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಪದವಿಯನ್ನು ಕಳೆದುಕೊಂಡಿದ್ದಾರೆ- ಕೆ.ಎಸ್.ಈಶ್ವರಪ್ಪ, ಸಚಿವ
ಗೋಸಾಕಿದ ರೈತರ ಶಾಪ ನಿಮ್ಮನ್ನು ಬೇಗನೇ ಸುಡಲಿದೆ.


ನಮ್ಮದು ವಿಶ್ವದಲ್ಲೇ ಅಗ್ಗದ ಕೊರೋನ ಲಸಿಕೆ - ನರೇಂದ್ರ ಮೋದಿ, ಪ್ರಧಾನಿ
ಅದಕ್ಕೇ ಇರಬೇಕು ತಾವು ಅದನ್ನು ತೆಗೆದುಕೊಳ್ಳದೇ ಇದ್ದುದು.


ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಳ್ಳಿ ಎಂದು ಜನರಿಗೆ ಹೇಳುವಷ್ಟು ‘ಧ್ಯೆರ್ಯ’ ನನಗಿಲ್ಲ - ಟಿ.ಎಸ್.ಸಿಂಗ್, ಛತ್ತೀಸ್‌ಗಡ ಸಚಿವ
ನಿಮಗೆ ತೆಗೆದುಕೊಳ್ಳುವ ಧೈರ್ಯ ಇದೆಯೇ, ಅದನ್ನು ಹೇಳಿ.


ಲಾಕ್‌ಡೌನ್‌ನಿಂದ ಎಲ್ಲವೂ ಕೆಟ್ಟದ್ದೇ ಆಗಿತ್ತು ಎನ್ನುವ ಹಾಗಿಲ್ಲ, ಪರಿಸರ(ಮಾಲಿನ್ಯ)ಕ್ಕೆ ತುಂಬಾ ಒಳ್ಳೆಯದಾಗಿತ್ತು - ಜೂಹಿಚಾವ್ಲಾ, ನಟಿ
ಹೌದು, ಕೆಟ್ಟ ಸಿನೆಮಾಗಳಿಂದ ಸಮಾಜ ಕೆಟ್ಟುಹೋಗುವುದಕ್ಕೆ ಕೆಲ ಕಾಲ ತಡೆ ಬಿತ್ತು. 


ಬಿಜೆಪಿ ಗಾಂಧೀಜಿಯ ಕನಸನ್ನು ನನಸು ಮಾಡಲಿದೆ - ನಳಿನ್‌ಕುಮಾರ್ ಕಟೀಲು, ಸಂಸದ
ಬಹುಶಃ ಗೋಡ್ಸೆಯ ಪಿಸ್ತೂಲಿನಿಂದ ಕೊಲ್ಲುವ ಮೂಲಕ ಇರಬಹುದು.


ಕರ್ನಾಟಕದ ಯಾವ ನಾಯಕನಿಗೂ ಕೃತಜ್ಞತೆ ಇಲ್ಲ - ಎಚ್.ವಿಶ್ವನಾಥ್, ವಿ.ಪ.ಸದಸ್ಯ
ಕನಿಷ್ಠ ಲಜ್ಜೆಯಾದರೂ ಇರಬೇಕಿತ್ತು, ನಿಮಗೆ.


ಯಡಿಯೂರಪ್ಪ ಯಾವತ್ತೂ ನಂಬಿದವರ ಕೈಬಿಡುವುದಿಲ್ಲ - ಶ್ರೀರಾಮುಲು, ಸಚಿವ
ಸಿಡಿಯನ್ನು ನಂಬಿದವರ ಬಗ್ಗೆ ಇರಬೇಕು.


ಯಡಿಯೂರಪ್ಪ ಇನ್ನು ಏಳು ಜನ್ಮ ಎತ್ತಿ ಬಂದರೂ ದೇಶವನ್ನು ಕಾಂಗ್ರೆಸ್ ಮುಕ್ತಗೊಳಿಸಲು ಸಾಧ್ಯವಿಲ್ಲ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಅದಕ್ಕೆ ಕಾಂಗ್ರೆಸ್‌ನೊಳಗೇ ಜನರಿದ್ದಾರೆ.


ಕೆಲವರು ಹಾದಿ ಬೀದಿಯಲ್ಲಿ ನಿಂತು ಮಾತನಾಡಿದರೆ ಸಚಿವ ಸ್ಥಾನ ಸಿಗುತ್ತದೆ ಎಂದು ಭಾವಿಸಿದ್ದಾರೆ - ಯಡಿಯೂರಪ್ಪ, ಮುಖ್ಯಮಂತ್ರಿ
ಅದನ್ನೇ ಸಿಡಿ ಮಾಡಿಕೊಂಡು ಬಂದಿದ್ದರೆ ಸ್ಥಾನ ಸಿಗುತ್ತಿತ್ತೇ?


ಕುದುರೆಯನ್ನು ನೀರಿರುವಲ್ಲಿಗೆ ಕೊಂಡಯ್ಯಬಹುದು, ನೀರು ಕುಡಿಸಲು ಸಾಧ್ಯವಿಲ್ಲ - ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ನಾಯಕ
ಆದರೆ ಬಿಜೆಪಿ ಕುದುರೆ ಅಲ್ಲ, ಕತ್ತೆ ಎನ್ನುವುದು ಜನರಿಗೆ ಮನವರಿಕೆಯಾಗಿದೆ.


ನನ್ನ ಮೂಲ ಕಾಂಗ್ರೆಸಲ್ಲ , ಜನಸಂಘ. ಅಲ್ಲಿದ್ದಾಗ ಹಾಫ್‌ಚಡ್ಡಿ, ಟೋಪಿ ಧರಿಸುತ್ತಿದ್ದೆ - ರಮೇಶ್ ಜಾರಕಿಹೊಳಿ, ಸಚಿವ
ಒಟ್ಟಿನಲ್ಲಿ ಕಾಂಗ್ರೆಸ್‌ಗೂ, ಜನಸಂಘಕ್ಕೂ ಒಟ್ಟಿಗೆ ಟೋಪಿ ಹಾಕುವ ಉದ್ದೇಶವಿದ್ದಂತಿದೆ.


ಕುಟುಂಬ ರಾಜಕಾರಣ ಪ್ರಜಾಪ್ರಭುತ್ವದ ದೊಡ್ಡ ಶತ್ರು - ನರೇಂದ್ರ ಮೋದಿ, ಪ್ರಧಾನಿ

ಈಗ ದೇಶದ ಪ್ರಧಾನಿ ಕುಟುಂಬ ರಾಜಕಾರಣದಿಂದ ಬಂದವರಲ್ಲ. ಆದರೂ ಪ್ರಜಾಪ್ರಭುತ್ವ ಯಾಕೆ ಅಪಾಯದಲ್ಲಿದೆ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು