varthabharthi


ವಾರ್ತಾಭಾರತಿ 18ನೇ ವಾರ್ಷಿಕ ವಿಶೇಷಾಂಕ

ಕೋವಿಡ್- 19 ಮತ್ತು ಸೂಕ್ಷ್ಮ ಜೀವಜಗತ್ತಿನ ಸುತ್ತ

ವಾರ್ತಾ ಭಾರತಿ : 19 Jan, 2021
ಕೆ.ಸಿ. ರಘು

ಆಹಾರ ತಜ್ಞರಾಗಿರುವ ಕೆ.ಸಿ. ರಘು ಪತ್ರಕರ್ತ, ಅಂಕಣಕಾರ, ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದವರು. ಮನುಷ್ಯನನ್ನು ರೂಪಿಸುವ ಬೌದ್ಧಿಕ ಆಹಾರದ ಕುರಿತಂತೆಯೂ ಅಪಾರ ಕಾಳಜಿಯುಳ್ಳ ರಘು, ವರ್ತಮಾನದ ರಾಜಕೀಯ ಬೆಳವಣಿಗೆಗಳಿಗೆ ಸ್ಪಂದಿಸಿ ಹಲವು ಬರಹಗಳನ್ನು ಬರೆದಿದ್ದಾರೆ.

ವೈರಸ್ ವಿರುದ್ಧ ಸಮರ ಗೆದ್ದೆವು ಎಂಬ ಧೈರ್ಯದ ಮಾತನ್ನು ಹೇಳುವಂತಿಲ್ಲ. ಕಾರಣ ಲಸಿಕೆಯೇ ವೈರಸನ್ನು ತೀವ್ರಗೊಳಿಸುವ ಸಾಧ್ಯತೆಯೂ ಇರಬಹುದು. ಇದನ್ನು ನಮ್ಮ ರೋಗನಿರೋಧಕ ಶಕ್ತಿಯೇ ವೈರಸ್‌ಗಳಿಗೆ ಹೊಸ ಆಯುಧಗಳಾಗಿ ಮಾರ್ಪಾಡಾಗಬಹುದು ಅಥವಾ ಫ್ಲೂ ರೋಗಾಣುವಿನಂತೆ ಪ್ರತಿವರ್ಷವೂ ಮಾರ್ಪಾಡಾಗುತ್ತಲೇ ಇರಬಹುದು.

ಹಿಂದೆಂದೂ ಕಂಡರಿಯದ, ಮನುಕುಲವನ್ನೇ ಕಾಡುವ ಮಹಾಮಾರಿ ಎಂದರೆ ಸಾಕು ಕೋವಿಡ್-19 ಎಂದೇ ಎಲ್ಲರೂ ಕಳೆದೊಂದು ವರ್ಷದಿಂದ ಗ್ರಹಿಸುವಂತಾಗಿದೆ. ಯಾವ ರೀತಿಯಲ್ಲಿ ಕೋವಿಡ್-19 ಶರವೇಗದಲ್ಲಿ ಇಡೀ ಜಗತ್ತನ್ನು ಸ್ತಬ್ಧಗೊಳಿಸಿ ಜಗತ್ತಿನ ಆರ್ಥಿಕತೆಯಿಂದ ಸುಮಾರು 400 ಲಕ್ಷಕೋಟಿಯಷ್ಟು ಹಣವನ್ನು ಗಾಳಿಗೆ ತೂರಿತು. ಅಂದರೆ ಭಾರತದ ಒಟ್ಟು ವಾರ್ಷಿಕ ಆರ್ಥಿಕತೆಯ ಸುಮಾರು ಎರಡರಷ್ಟು ಆರ್ಥಿಕ ಸಂಪತ್ತು ನಾಶವಾಯಿತು. ಇದು ಸುಮಾರು 100 ಕೋಟಿ ಜನರನ್ನು ಬಡತನರೇಖೆಯಿಂದ ಕೆಳಕ್ಕೆ ತಳ್ಳಬಹುದು ಎನ್ನುವುದು ತಜ್ಞರ ಅಭಿಪ್ರಾಯ. ಆರ್ಥಿಕ ಅಸಮಾನತೆ, ಅಪೌಷ್ಟಿಕತೆ ಹಾಗೂ ಒಂದು ಯುವಪೀಳಿಗೆಯ ಏಳಿಗೆಯನ್ನೇ ಚಿವುಟಿ ಹಾಕಿದಂತಾಗಿದೆ. ಕೋವಿಡ್ ಮಕ್ಕಳನ್ನು ಎರಡನೇ ಮಹಾಯುದ್ಧದ ಮಕ್ಕಳಿಗೆ ಆದಂತಹ ಆಘಾತಕ್ಕೆ ಹೋಲಿಕೆ ಮಾಡಲಾಗುತ್ತಿದೆ. ಯುದ್ಧ ಸಂದರ್ಭದಲ್ಲಿ ಶಿಕ್ಷಣ ಕಲಿಕೆಯಿಂದ ವಂಚಿತರಾದವರು ತಮ್ಮ ಇಡೀ ಜೀವನದಲ್ಲಿಯೇ ಆರ್ಥಿಕವಾಗಿ ಹಿಂದುಳಿದು ಗಳಿಕೆಯಲ್ಲಿ ಹಿಂದಿನ ಮೂರು ಪೀಳಿಗೆಯಷ್ಟು ಹಿನ್ನಡೆ ಉಂಟಾಯಿತು.

ಕೋವಿಡ್-19ರ ಬಗ್ಗೆ ವರ್ಷವಾದರೂ ತಿಳಿದಿರುವ ವಿಷಯಗಳಿಗಿಂತ ಇನ್ನೂ ತಿಳಿಯಬೇಕಾಗಿರುವ ವಿಷಯಗಳೇ ಹೆಚ್ಚು ಎನ್ನಬಹುದು. ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಡಾನಲ್ಡ್ ರಮ್ಸ್ಫೆಲ್ಡ್ ಇರಾಕಿನ ಬಗೆಗೆ ಅಂದು ಕೊಟ್ಟ ಹೇಳಿಕೆಯನ್ನು ಅನೇಕ ಸಂದರ್ಭಗಳಿಗೆ ಬಳಸಲಾಗುತ್ತಿದೆ. ಅಂದು ಆತ ಹೇಳಿದ ಮಾತು ಹೀಗಿದೆ. ‘‘ಕೆಲವು ನಮಗೆ ಗೊತ್ತೆಂದು ಗೊತ್ತು. ಕೆಲವು ಗೊತ್ತಿಲ್ಲವೆಂದು ಗೊತ್ತು. ಇನ್ನೂ ಕೆಲವು ಗೊತ್ತಿಲ್ಲವೆಂದು ಸಹಾ ಗೊತ್ತಿಲ್ಲ’’. ಸಾರ್ಸ್ ಕೋವಿ-2 ವೈರಸ್ ಬಗ್ಗೆ ಇನ್ನೂ ಗೊತ್ತಿಲ್ಲವೆಂದು ಗೊತ್ತಿಲ್ಲದ ಅನೇಕ ನಿಗೂಢ ವಿಚಾರಗಳಿವೆ. ದಿನಕ್ಕೊಂದು ಕೋವಿಡ್ ಅವಾಂತರಗಳು ಹೊರಬರುತ್ತಿವೆ. ವೈರಾಲಜಿಸ್ಟ್ ಒಬ್ಬ ವೈರಸ್ ಬಗ್ಗೆ ಹೀಗೆಂದಿದ್ದಾನೆ, ಅತ್ಯಂತ ದಡ್ಡ ವೈರಸ್ ಅತ್ಯಂತ ಬುದ್ಧಿವಂತ ವೈರಾಲಜಿಸ್ಟಿಗಿಂತಲೂ ಬುದ್ಧಿವಂತ. ಇಂತಹ ಸಂದರ್ಭದಲ್ಲೂ ಇನ್ನೊಂದು ರೀತಿಯಲ್ಲಿ ಹಿಂದೆಂದೂ ಕಾಣದ ಕೇಳದ ಬೆಳಕಿನಾಚೆಯ ವೇಗದಲ್ಲಿ (WARP SPEED) ಲಸಿಕೆಯನ್ನು ಕಂಡುಹಿಡಿದು ಬಳಸಲು ಆರಂಭವಾಗಿದೆ. ಲಸಿಕೆಗಳ ಇತಿಹಾಸವನ್ನು ಗಮನಿಸಿದರೆ ಇಷ್ಟು ವೇಗದಲ್ಲಿ ಹೊಸ ರೀತಿಯಲ್ಲಿ ಲಸಿಕೆಯನ್ನು ಕಂಡುಹಿಡಿದಿರುವುದು ವಿಜ್ಞಾನ ತಂತ್ರಜ್ಞಾನಕ್ಕೆ ಕಳಸಪ್ರಾಯವಾಗಿದೆ. ಇದುವರೆಗೆ ಲಸಿಕೆಗಳನ್ನು ನಿರ್ಜೀವ ಅಥವಾ ನಿಷ್ಕ್ರಿಯ ಸೂಕ್ಷ್ಮಜೀವಿಗಳ ಮೂಲಕವೇ ದೇಹಕ್ಕೆ ಆಯಾ ಶತ್ರುವನ್ನು ಪರಿಚಯಿಸಿ ದೇಹದ ಅಂತರ್ ರೋಗನಿರೋಧಕ ಸಾಮರ್ಥ್ಯವನ್ನು ಹೊರಹೊಮ್ಮಿಸುವುದಾಗಿತ್ತು. ಆದರೆ ಈ ಬಾರಿ ಮುಂಚೂಣಿಯಲ್ಲಿರುವ ಲಸಿಕೆಗಳು ನ್ಯೂಕ್ಲೀಕ್ ಆ್ಯಸಿಡ್ ಲಸಿಕೆಗಳಾಗಿದ್ದು ಅಥವಾ MRNA ಲಸಿಕೆಗಳಾಗಿವೆ. ಈ ಲಸಿಕೆಗಳು ನಮ್ಮ ಜೀವಕೋಶಗಳಿಗೆ ಕೇವಲ ಮಾಹಿತಿಯನ್ನು ಕೊಟ್ಟು ರೋಗನಿರೋಧಕ ಕಣಗಳನ್ನು ಉತ್ಪಾದಿಸಲು ಎಡೆಮಾಡಿಕೊಡುವುದಾಗಿವೆ.

ಹೀಗಿದ್ದಲ್ಲೂ ವೈರಸ್ ವಿರುದ್ಧ ಸಮರ ಗೆದ್ದೆವು ಎಂಬ ಧೈರ್ಯದ ಮಾತನ್ನು ಹೇಳುವಂತಿಲ್ಲ. ಕಾರಣ ಲಸಿಕೆಯೇ ವೈರಸನ್ನು ತೀವ್ರಗೊಳಿಸುವ ಸಾಧ್ಯತೆಯೂ ಇರಬಹುದು. ಇದನ್ನು ನಮ್ಮ ರೋಗನಿರೋಧಕ ಶಕ್ತಿಯೇ ವೈರಸ್‌ಗಳಿಗೆ ಹೊಸ ಆಯುಧಗಳಾಗಿ ಮಾರ್ಪಾಡಾಗಬಹುದು ಅಥವಾ ಫ್ಲೂ ರೋಗಾಣುವಿನಂತೆ ಪ್ರತಿವರ್ಷವೂ ಮಾರ್ಪಾಡಾಗುತ್ತಲೇ ಇರಬಹುದು. ಇತ್ತೀಚೆಗೆ ನೆದರ್‌ಲ್ಯಾಂಡ್ ದೇಶದಲ್ಲಿ ಸುಮಾರು ಎರಡೂವರೆ ಕೋಟಿ ಬೆಕ್ಕಿನ ರೂಪದಲ್ಲೇ ಇರುವ ಮಿಂಕ್ ಪ್ರಾಣಿಗಳನ್ನು ಮಾರಣಹೋಮ ಮಾಡಲಾಯಿತು. ಮಿಂಕ್ ಪ್ರಾಣಿಯ ಉಣ್ಣೆಯನ್ನು ಕೈಚೀಲ ಮಾಡಲು ಬಳಸುತ್ತಿದ್ದರು. ಆದರೆ ಮನುಷ್ಯನಿಂದ ವೈರಾಣು ಮಿಂಕ್ ಪ್ರಾಣಿಗೆ ಹರಡಿತ್ತು. ಮಿಂಕ್ ಪ್ರಾಣಿಯಿಂದ ಮನುಷ್ಯರಿಗೂ ಹರಡುವುದನ್ನು ಗಮನಿಸಿ ಇಡೀ ಮಿಂಕ್ ಉದ್ಯಮವನ್ನೇ ಸರ್ವನಾಶ ಮಾಡಲಾಯಿತು. ಈ ನಡುವೆ ವರದಿಗಳ ಪ್ರಕಾರ ಕೆಲವು ವೈರಾಣುವಿನಿಂದ ಸೋಂಕಿತ ಮಿಂಕ್ ಬೆಕ್ಕುಗಳು ತಪ್ಪಿಸಿಕೊಂಡು ಕಾಡಿಗೆ ಹೋಗಿದ್ದಾವೆ. ಈ ವೈರಾಣು ಈ ರೀತಿ ಕಾಡಿಗೆ ಹಬ್ಬಿ ವನ್ಯಜೀವಿಗಳಿಗೆ ಕಾಯಿಲೆ ಹರಡಿದರೆ ಏನುಗತಿ ಎಂದು ಕೆಲವರಿಗೆ ಆತಂಕ ಉಂಟುಮಾಡಿದೆ. ವೈರಾಣುಗಳು ನಾಡಿನಿಂದ ಕಾಡಿಗೆ ಕಾಡಿನಿಂದ ನಾಡಿಗೆ ಹರಡುವುದು ಸಹಜ. ಶಿವವೊಗ್ಗದ ಮಂಗನ ಕಾಯಿಲೆ ಇದಕ್ಕೆ ನಿದರ್ಶನ. ಈ ನಡುವೆ ನಮಗೆ ಈಗ ತಿಳಿದಿರುವ ಹಾಗೆ ಕಾಡಿನ ಬಾವಲಿಯಿಂದ ಮನುಷ್ಯನಿಗೆ ಕೊರೋನ ವೈರಾಣು ಬಂತೆಂದು ಸದ್ಯಕ್ಕೆ ವಿಜ್ಞಾನ ಹೇಳುವ ವಿಷಯ. ಅದೇ ವೈರಾಲಜಿಸ್ಟ್‌ಗಳು ಮನುಷ್ಯ ಶಿಲೀಂದ್ರಗಳನ್ನು ನಾಡಿನಿಂದ ಕಾಡಿಗೆ ಕೊಂಡೊಯ್ದು ಬಾವಲಿಗೆ ಬಿಳಿಯ ಮೂಗಿನ ಹೊಸ ಕಾಯಿಲೆಯನ್ನುಂಟು ಮಾಡಿದ್ದಾನೆ ಎನ್ನುತ್ತಾರೆ. ಮನುಷ್ಯನೇ ಹಂಚಿ ಹರಡಿರುವ ಕಾಯಿಲೆಗಳು ಇಂದು ವನ್ಯ ಜಗತ್ತಿಗೆ ಹೆಚ್ಚು ಕಾಟವನ್ನು ಕೊಡುತ್ತಿವೆ. ಸ್ವಲ್ಪ ವರ್ಷಗಳ ಹಿಂದೆ ಒಂದು ಚಳವಳಿಗೆ ಘೋಷಣೆ ‘ಡಾಲ್ಡಾ ಓರಾಂಗುಟಾನ್‌ನನ್ನು ಕೊಲ್ಲುತ್ತದೆ’ ಎನ್ನುವುದಾಗಿತ್ತು. ಡಾಲ್ಡಾ ಹೇಗೆ ಓರಾಂಗುಟಾನ್‌ನನ್ನು ಕೊಲ್ಲುತ್ತದೆ ಎನ್ನುವುದನ್ನು ವಿಶ್ಲೇಷಿಸಿದಾಗ ಡಾಲ್ಡಾಗೆ ಬೇಕಾದ ತಾಳೆಗಾಗಿ ಮಲೇಶ್ಯ, ಇಂಡೋನೇಶ್ಯ ಮತ್ತು ಬಾಂಗ್ಲಾದೇಶಗಳ ಕಾಡಿಗೆ ಬೆಂಕಿಹಚ್ಚಿ ನಿರ್ನಾಮ ಮಾಡಿ ತಾಳೆ ಗಿಡ ಬೆಳೆಯುವುದಾಗಿದೆ. ಆಗ ಕಾಡಿನಲ್ಲಿದ್ದ ಓರಾಂಗುಟಾನ್ ಸಂತತಿ ನಾಶವಾಗುತ್ತದೆ ಅಥವಾ ತಪ್ಪಿಸಿಕೊಂಡಿದ್ದರೂ ತಿರುಗಿ ತನ್ನ ತಾಣಕ್ಕೆ ಹೋಗಲು ಸಾಧ್ಯವಾಗುವುದಿಲ್ಲ.

ಇಂದು ಹೊಸ ಸೋಂಕು ರೋಗಾಣುಗಳ ಹುಟ್ಟುವಿಕೆಗೆ ಎರಡು ಮುಖ್ಯ ಕಾರಣಗಳು ಒಂದು ನಾವು ಪ್ರಾಣಿಗಳನ್ನು ಕೋಟಿಗಟ್ಟಲೆ ಕಟ್ಟಿ ಸಾಕುತ್ತಿರುವ ಕೊಟ್ಟಿಗೆ ವ್ಯವಸ್ಥೆ. ಇನ್ನೊಂದು ಈ ಕೊಟ್ಟಿಗೆಗೆ ಬೇಕಾದ ಮೇವಿಗೆ ಕಾಡನ್ನು ಕಡಿದು ಆಹುತಿಕೊಟ್ಟು ಸೋಯಾ ಬೀನ್ ಬೆಳೆಯುವ ತಂತ್ರದಿಂದಾಗಿದೆ.This is the barn and bush effect or ambush.

ಪೀಟರ್ ಹೊಟೇಸ್ ತನ್ನ (‘Forgotten people Forgotten diseases’) ಪುಸ್ತಕದಲ್ಲಿ ಆಫ್ರಿಕ ಮತ್ತು ಏಶ್ಯ ಬಡದೇಶಗಳಲ್ಲಿ ಶತಮಾನಗಳಿಂದ ಬೀಡುಬಿಟ್ಟಿರುವ ಸೋಂಕುಗಳಿಗೆ ಲಸಿಕೆ ಹೋಗಲಿ, ಸರಿಯಾದ ಔಷಧಗಳನ್ನೂ ಕಂಡುಹಿಡಿಯದೆ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಳ್ಳುವ ಉದಾಹರಣೆಯನ್ನು ವಿವರಿಸುತ್ತಾನೆ. ಅದು ಮಂಗನ ಕಾಯಿಲೆಯಿಂದ ಹಿಡಿದು, ಮಲೇರಿಯಾ, ಏಡ್ಸ್ ರೀತಿಯ ನೂರಾರು ಕಾಯಿಲೆಗಳು ಇಂದಿಗೂ ವೈಜ್ಞಾನಿಕವಾಗಿ ಹತ್ತಿಕ್ಕಲಾಗಿಲ್ಲ. ಇದೇ ಕಾಯಿಲೆಗಳು ಮುಂದುವರಿದ ರಾಷ್ಟ್ರಗಳಿಗೆ ತಗಲಿದ್ದರೆ ಒಂದೇ ವರ್ಷದಲ್ಲಿ ಔಷಧಿಯೋ ಲಸಿಕೆಯೋ ಬರುವ ಸಾಧ್ಯತೆ ಇತ್ತೇನೋ. ಏಡ್ಸ್ ಕಾಯಿಲೆ ಬಂದು ಸುಮಾರು 40 ವರ್ಷಗಳಾದರೂ ಇಂದಿಗೂ ಲಸಿಕೆ ಲಭ್ಯವಾಗಿಲ್ಲ. ಪ್ರಯತ್ನಗಳೇ ನಡೆದಿಲ್ಲವೆಂದಲ್ಲ. ಆದರೆ ಕೊರೋನ ಕಾಯಿಲೆಗೆ ಸರಕಾರಗಳು ಕೊಟ್ಟ ಲಕ್ಷಾಂತರ ಕೋಟಿ ಹಣ ಯಾವ ಕಾಯಿಲೆಯ ಔಷಧಿಗಳಿಗೂ ಹೂಡಿಕೆಯಾಗಿಲ್ಲ.

ಕೊರೋನದಿಂದ ನಾವು ನಿಜವಾಗಿ ಪಾಠ ಕಲಿತೆವಾ ಎಂದು ಅವಲೋಕಿಸಿದಾಗ ವೈಜ್ಞಾನಿಕ ಮಾಹಿತಿ ವಿಶ್ಲೇಷಣೆಗಿಂತ ಊಹಾಪೋಹ, ಪಿತೂರಿ, ಒಳಸಂಚು ಎನ್ನುವ ವಾದವಿವಾದಗಳೇ ಹೆಚ್ಚು ಪ್ರಚಾರ ಪಡೆಯಿತು. ಚೀನಾ ದೇಶ ವಿಶ್ವ ಆರೋಗ್ಯ ಸಂಸ್ಥೆಯನ್ನು ಗುಪ್ತವಾಗಿ ತನ್ನ ಹಿಡಿತಕ್ಕೆ ತೆಗೆದುಕೊಂಡು ಸರಿಯಾಗಿ ಕಾಯಿಲೆಯ ಹುಟ್ಟನ್ನು ಹುಡುಕಲು ಅವಕಾಶ ಕೊಡದೆ ಇರುವುದು ಒಂದೆಡೆಯಾದರೆ, ಇಟಲಿ ದೇಶವೂ ಇದೇ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಕೈಜೋಡಿಸಿ ತನ್ನ ದೇಶದ ಜನತೆ ಮತ್ತು ವಿಶ್ವಕ್ಕೆ ಮಾಹಿತಿಯನ್ನು ಮುಚ್ಚಿಟ್ಟಿದ್ದು ಈಗ ಬೆಳಕಿಗೆ ಬಂದಿರುವ ಸಂಗತಿ. ಪ್ರಯೋಗಾಯಲಗಳಲ್ಲಿ ವೈರಾಣುಗಳನ್ನು ಕೃತಕವಾಗಿ ವಿಕಾಸಗೊಳಿಸುವ ಪರೀಕ್ಷೆಗಳು ನಡೆದಿರುವುದೂ ಸತ್ಯವೇ. ಇದನ್ನು ಗೈನ್ ಆಫ್ ಫಂಕ್ಷನ್ ಎಕ್ಸ್ಪೆರಿಮೆಂಟ್ ಎನ್ನುತ್ತಾರೆ. ಅಂದರೆ ಮುಂದೊಂದು ದಿನ ಈ ವೈರಾಣು ಎಷ್ಟು ಭಯಾನಕ ಹಂತಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಇಂದೇ ತಿಳಿದುಕೊಳ್ಳುವ ಪ್ರಯೋಗ. ಈ ರೀತಿ ಪ್ರಯೋಗಗಳಿಂದ ಮುಂಬರುವ ಅನಾಹುತಕ್ಕೆ ಮನುಕುಲ ಇಂದೇ ಸಿದ್ಧತೆಯನ್ನು ಮಾಡಬಹುದೆಂಬುದು ಒಂದು ವಾದವಾದರೆ, ಇನ್ನೊಂದು ರೀತಿಯಲ್ಲಿ ನಾವೇ ನಮ್ಮ ಬೆನ್ನಿಗೆ ಹತಾರ ಮಾಡಿಕೊಂಡೆವಾ ಎನ್ನುವುದಾಗಿದೆ. ಸಾರ್ಸ್ ಕೋವಿ-2 ವೈರಾಣುವಿನ ಬಗ್ಗೆ ಸುಮಾರು ಒಂದು ದಶಕದ ಹಿಂದೆಯೇ ವಿಜ್ಞಾನಿಗಳು ಅವಲೋಕಿಸಿದ್ದರು. ಸಿದ್ಧತೆಗಳ ಬಗ್ಗೆ ಜಗತ್ತನ್ನು ಎಚ್ಚರಿಸಿದ್ದರು. ಆದರೆ ಮನುಕುಲದ ಗಮನ ಮಂಗಳಗ್ರಹ, ಚಂದ್ರನ ಮೇಲೆ ವೈಜ್ಞಾನಿಕವಾಗಿ ಹೆಚ್ಚು ಒತ್ತುಕೊಡಲಾಗುತ್ತಿತ್ತು. ಆದರೆ ಇಂಥಾ ಸೂಕ್ಷ್ಮ ಜೀವಿಯೋ ನಿರ್ಜೀವಿಯೋ ಕೊಡುವಂತಹ ಕಾಟದ ಬಗ್ಗೆ ಹೆಚ್ಚು ಅಧ್ಯಯನ ನಡೆಯಲಿಲ್ಲ.

ಇದೇ ಸಾರ್ಸ್ ಕೋವಿ-2 ಆಫ್ರಿಕ ದೇಶಕ್ಕೋ, ಏಶ್ಯ ಖಂಡಕ್ಕೋ ಬಂದಿದ್ದರೆ ಖಂಡಿತವಾಗಿಯೂ ಒಂದು ವರ್ಷಕ್ಕೆ ಲಸಿಕೆ ಕಂಡುಹಿಡಿಯಲು ಆಗುತ್ತಿರಲಿಲ್ಲ.

ಪೀಟರ್ ಹೊಟೇಸ್ ತನ್ನ ‘Forgotten people Forgotten diseases’ ಪುಸ್ತಕದಲ್ಲಿ ಆಫ್ರಿಕ ಮತ್ತು ಏಶ್ಯ ಬಡದೇಶಗಳಲ್ಲಿ ಶತಮಾನಗಳಿಂದ ಬೀಡುಬಿಟ್ಟಿರುವ ಸೋಂಕುಗಳಿಗೆ ಲಸಿಕೆ ಹೋಗಲಿ, ಸರಿಯಾದ ಔಷಧಗಳನ್ನೂ ಕಂಡುಹಿಡಿಯದೆ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಳ್ಳುವ ಉದಾಹರಣೆಯನ್ನು ವಿವರಿಸುತ್ತಾನೆ. ಅದು ಮಂಗನ ಕಾಯಿಲೆಯಿಂದ ಹಿಡಿದು, ಮಲೇರಿಯಾ, ಏಡ್ಸ್ ರೀತಿಯ ನೂರಾರು ಕಾಯಿಲೆಗಳು ಇಂದಿಗೂ ವೈಜ್ಞಾನಿಕವಾಗಿ ಹತ್ತಿಕ್ಕಲಾಗಿಲ್ಲ. ಇದೇ ಕಾಯಿಲೆಗಳು ಮುಂದುವರಿದ ರಾಷ್ಟ್ರಗಳಿಗೆ ತಗಲಿದ್ದರೆ ಒಂದೇ ವರ್ಷದಲ್ಲಿ ಔಷಧಿಯೋ ಲಸಿಕೆಯೋ ಬರುವ ಸಾಧ್ಯತೆ ಇತ್ತೇನೋ. ಏಡ್ಸ್ ಕಾಯಿಲೆ ಬಂದು ಸುಮಾರು 40 ವರ್ಷಗಳಾದರೂ ಇಂದಿಗೂ ಲಸಿಕೆ ಲಭ್ಯವಾಗಿಲ್ಲ. ಪ್ರಯತ್ನಗಳೇ ನಡೆದಿಲ್ಲವೆಂದಲ್ಲ. ಆದರೆ ಕೊರೋನ ಕಾಯಿಲೆಗೆ ಸರಕಾರಗಳು ಕೊಟ್ಟ ಲಕ್ಷಾಂತರ ಕೋಟಿ ಹಣ ಯಾವ ಕಾಯಿಲೆಯ ಔಷಧಿಗಳಿಗೂ ಹೂಡಿಕೆಯಾಗಿಲ್ಲ.

ಕೋವಿಡ್-19 ಬಂದ ನಂತರ ನಮ್ಮ ವಿಜ್ಞಾನ ಕಲಿಕೆಯ ಮೂಲ ಉದ್ದೇಶ ಕೃತಕ ಬುದ್ಧಿಮತ್ತೆ, ಯಂತ್ರಗಳ ಕಲಿಕೆ ಅಥವಾ ವರ್ಚುವಲ್ ರಿಯಾಲಿಟಿ, ಆಗ್ಮೆಂಟೆಂಡ್ ರಿಯಾಲಿಟಿಯತ್ತ ಇದ್ದರೂ ಅವುಗಳನ್ನೇ ಬಳಸಿಕೊಂಡು ಇತ್ತ ಸೋಂಕು ರೋಗಾಣುಗಳನ್ನು ಅಧ್ಯಯನ ಮಾಡಲು, ವಿಶ್ಲೇಷಿಸಲು, ಅವುಗಳ ಗುಣಗಳನ್ನು ಪರಿಶೀಲಿಸಲು ಮತ್ತು ಪ್ರೊಟೀನ್‌ಗಳ ವಿನ್ಯಾಸ, ಅವುಗಳ ಮಡಿಕೆಯನ್ನು(Foldings) ತಿಳಿದುಕೊಳ್ಳಲು ಬಳಸುವತ್ತ ಗಮನಹರಿಸಬೇಕಾಗಿದೆ. ಇತ್ತೀಚೆಗೆ ಗೂಗಲ್ ಕಂಪೆನಿಯ ಡೀಪ್ ಮೈಂಡ್ ಎಂಬ ಆಲ್ಗೋ ಪ್ರೊಟೀನ್‌ಗಳ ವಿನ್ಯಾಸ ಮತ್ತು ಮಡಿಕೆಯ ನಿಗೂಢತೆಯನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ಜಗತ್ತಿನಲ್ಲಿ ಸುಮಾರು 200 ಮಿಲಿಯನ್ ರೀತಿಯ ಪ್ರೊಟೀನ್‌ಗಳಿದ್ದು ಅವುಗಳಲ್ಲಿ 1 ಲಕ್ಷ 70 ಸಾವಿರ ಪ್ರೊಟೀನ್‌ಗಳ ಮಡಿಕೆ((folding)ಯ ಬಗ್ಗೆ ನಮಗೆ ಗೊತ್ತಿತ್ತು. ಕೃತಕ ಬುದ್ಧಿಮತ್ತೆಯಿಂದ ನಮಗೆ ಇದನ್ನು ಭೇದಿಸಲು ಸಾಧ್ಯವಾಯಿತು. ಈ ರೀತಿ ತಂತ್ರಜ್ಞಾನವನ್ನು ವಸ್ತುಗಳ, ಜೀವಿಗಳ, ಅಂತರ್ ಕಾರ್ಯಚಟುವಟಿಕೆಗಳ ಬಗ್ಗೆ ಇನ್ನೂ ತಿಳಿಯಬೇಕಾದ ಅನೇಕ ವಿಷಯಗಳಿವೆ. ಸೂಕ್ಷ್ಮಜೀವಜಗತ್ತೇ ಒಂದು ರೀತಿಯಲ್ಲಿ ಚರ್ಚಿಲ್ ರಶ್ಯ ದೇಶದ ಬಗ್ಗೆ ಹೇಳಿದ ಮಾತನ್ನು ನೆನಪಿಸುತ್ತದೆ “It’s a riddle rapped in mystery inside an enigma” ಇದಕ್ಕೆ ಉದಾಹರಣೆಯಂತೆ, ಟಾಕ್ಸೋ ಪ್ಲಾಸ್ಮಾ ಗೋಂಡೈ ಎನ್ನುವ ಸೂಕ್ಷಜೀವಿಯೊಂದು ಇಲಿಯ ದೇಹಕ್ಕೆ ಹೊಕ್ಕರೆ ಇಲಿಯ ಮೆದುಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಇಲಿಗೆ ಬೆಕ್ಕಿನ ಉಚ್ಚೆಯ ಆಸೆ ಹುಟ್ಟಿಸುತ್ತದೆ. ಇಲಿ ಈಗ ಬೆಕ್ಕನ್ನು ಹುಡುಕಿ ಹೊರಡುತ್ತದೆ. ಈ ರೀತಿ ಬೆಕ್ಕಿನ ಬಾಯಿಗೆ ತಾನೇ ಬಿದ್ದು ಸಾಯುತ್ತದೆ. ಇದಕ್ಕೆಲ್ಲಾ ಕಾರಣ ಟಾಕ್ಸೋ ಪ್ಲಾಸ್ಮಾ ಗೋಂಡೈ ಸಂತಾನೋತ್ಪತ್ತಿಯ ಜಾಗ ಬೆಕ್ಕಿನ ಕರುಳು. ಇಲ್ಲಿ ಯಾವುದು ಯಾರ ಕೈಯಲ್ಲಿದೆ? ಯಾರ ನಿಯಂತ್ರಣದಲ್ಲಿದೆ? ನಮಗೆ ನಮ್ಮ ಸ್ವತಂತ್ರವಾದ ಆಯ್ಕೆಗಳುಂಟೇ ಎನ್ನುವುದು ಪ್ರಶ್ನೆಗಳಾಗಿಯೇ ಉಳಿಯುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)