ಮಾನವ ಅಭಿವೃದ್ಧಿ ವರದಿ: ಹಿನ್ನಡೆ ಕಂಡ ಭಾರತ?
ನಮ್ಮ ದೇಶದ ನೀತಿ ನಿರೂಪಣಾ ವಿಧಾನಗಳಲ್ಲಿ ಬಡತನ, ಪರಿಸರ ನ್ಯಾಯ, ಬಹುತ್ವ, ಒಳಗೊಳ್ಳುವಿಕೆ ಇವುಗಳು ಸಂಪೂರ್ಣ ಕಾಣೆಯಾಗಿವೆ ಎಂದು ಮಾನವ ಅಭಿವೃದ್ಧಿ ವರದಿಯು ಗಮನಿಸಿದೆ. ಸಮರ್ಥನೀಯ ಮಟ್ಟದಲ್ಲಿ ಅಸಮತೋಲನವನ್ನು ಉಂಟು ಮಾಡುವ ನೀತಿ ನಿರೂಪಣೆಗಳನ್ನು ಯೋಜನೆಯಿಂದ ಕೈ ಬಿಡಲು ವರದಿ ಸೂಚಿಸುತ್ತದೆ. ಉತ್ಪಾದನಾ ಸಾಧನಗಳ ಮೇಲಿನ ನಿಯಂತ್ರಣವನ್ನು ಅಂಚಿನ ಸಮುದಾಯಗಳಿಗೆ ವರ್ಗಾಯಿಸಿದಾಗ ಆ ಸಮುದಾಯ ಸಬಲೀಕರಣ ಪಡೆಯಲು ಸಾಧ್ಯ ಮತ್ತು ಪರಿಸರ ಸ್ನೇಹಿ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಮತ್ತಷ್ಟು ವಿಕೇಂದ್ರೀಕರಣಗೊಳಿಸಲು ನಿರ್ದಿಷ್ಟವಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ದೇಶದಲ್ಲಿ ಹೆಚ್ಚು ಒಳಗೊಳ್ಳುವಿಕೆಯ ಬೆಳವಣಿಗೆಗೆ ಕಾರಣವಾಗಬಹುದು. ಇದಲ್ಲದೆ, ಪಾರದರ್ಶಕತೆ ಉತ್ತರದಾಯಿತ್ವ, ಭಾಗವಹಿಸುವಿಕೆ ಇತ್ಯಾದಿ ಭಾರತದ ಆಡಳಿತದಲ್ಲಿ ಅಳವಡಿಸಿಕೊಳ್ಳುವಿಕೆಯ ಅಗತ್ಯತೆಯನ್ನು ಹೇಳುವುದಕ್ಕೆ ವರದಿ ಮರೆತಿಲ್ಲ.
ಐದು ಟ್ರಿಲಿಯನ್ ಆರ್ಥಿಕತೆ ಕುರಿತು ಚರ್ಚೆ ನಡೆಸುವ ಈ ಸಮಯದಲ್ಲಿ ವಿಶ್ವ ಮಾನವ ಅಭಿವೃದ್ಧಿ ವರದಿ ಇತ್ತೀಚೆಗೆ ಪ್ರಕಟವಾಗಿದ್ದು ಭಾರತವು ಕಳೆದ ಬಾರಿಗಿಂತ 2 ಸ್ಥಾನ ಹಿಂದಕ್ಕೆ ಜಾರಿದೆ!. ಮಾನವ ಅಭಿವೃದ್ಧಿ ಸೂಚ್ಯಂಕವು ದೇಶದ ಆರೋಗ್ಯ, ಶಿಕ್ಷಣ ಮತ್ತು ಜೀವನಮಟ್ಟದ ವಿಶಿಷ್ಟ ಅಳತೆ ಗೋಲು. ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್‌ಡಿಪಿ) ಬಿಡುಗಡೆ ಮಾಡಿದ ವರದಿಯ ಪ್ರಕಾರ ಭಾರತ 189 ದೇಶಗಳಲ್ಲಿ 131ನೇ ಸ್ಥಾನವನ್ನು ಗಳಿಸಿದೆ. ಭಾರತ 131, ಭೂತಾನ್ 129, ಬಾಂಗ್ಲಾದೇಶ 133, ನೇಪಾಳ 142 ಮತ್ತು ಪಾಕಿಸ್ತಾನ 154 ಸ್ಥಾನ ಗಳಿಸಿವೆ ಎಂದು ವರದಿ ತಿಳಿಸಿದೆ. 2018ರಲ್ಲಿ ಭಾರತ ಮಾನವ ಅಭಿವೃದ್ಧ್ದಿ ಸೂಚ್ಯಂಕದಲ್ಲಿ 129 ಅಂಕಗಳನ್ನು ಗಳಿಸಿತ್ತು. ಅಂದರೆ ಈ ಬಾರಿ(2019)ಎರಡು ಸ್ಥಾನ ಕುಸಿತಕಂಡಿದೆ. ಸೂಚ್ಯಂಕದಲ್ಲಿ ನಾರ್ವೆ ಅಗ್ರಸ್ಥಾನದಲ್ಲಿದ್ದರೆ, ಐರ್‌ಲ್ಯಾಂಡ್, ಸ್ವಿಟ್ಸರ್‌ಲ್ಯಾಂಡ್, ಹಾಂಕಾಂಗ್ ಮತ್ತು ಐಸ್‌ಲ್ಯಾಂಡ್ ನಂತರದ ಸ್ಥಾನದಲ್ಲಿವೆ. ಈ ವರದಿಯ ಪ್ರಕಾರ ಭಾರತದ ಮಾನವ ಅಭಿವೃದ್ಧ್ದಿ ಮೌಲ್ಯ 0.645 ಆಗಿದ್ದು ಅದು ಮಧ್ಯಮ ಮಾನವ ಅಭಿವೃದ್ಧಿ ವಿಭಾಗದಲ್ಲಿ ಸ್ಥಾನ ಪಡೆದಿದೆ.
ಪ್ರಸ್ತುತ ಈ ಮಾನವ ಅಭಿವೃದ್ಧಿ ವರದಿಯ ಪ್ರಕಾರ, ಪ್ರತಿ ಭಾರತೀಯರ ಜೀವಿತಾವಧಿ 69.7 ವಷರ್ಗಳು. ಇದು ದಕ್ಷಿಣ ಏಶ್ಯದ ಸರಾಸರಿ ವಷರ್ಕ್ಕಿಂತ ಸ್ವಲ್ಪಕಡಿಮೆ ಎನ್ನಬಹುದು. ಈ ವರದಿ ಪ್ರಕಾರ ಜನನದ ಸಮಯದಲ್ಲಿ ಪ್ರತಿ ಮಗುವಿನ ಗ್ಯಾರೆಂಟಿ ಜೀವಿತಾವಧಿ 11.8 ವಷರ್ಗಳು. ಇದು ಇತರ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗಿಂತ ಕಡಿಮೆ. ವರದಿ ಪ್ರಕಾರ ಪ್ರತಿ ಭಾರತೀಯ ಮಗುವಿನ ಸರಾಸರಿ ಶಾಲಾ ವಷರ್ಗಳು 3.5 ವಷರ್ಗಳಿಂದ 4.5 ವಷರ್ಗಳು ಹೆಚ್ಚಾಗಿದೆ. ಅದೇ ರೀತಿ ಶಾಲೆ ಬಿಡುವವರ ಮಕ್ಕಳ ಸಂಖ್ಯೆಯು ಸಹ ಹೆಚ್ಚಾಗುತ್ತಿದೆ. ಆದರೆ ಶಾಲಾ ಶಿಕ್ಷಣದ ಸರಾಸರಿ ವಷರ್ಗಳು ಮತ್ತು ಸರಾಸರಿ ಶಾಲಾ ಶಿಕ್ಷಣವು ದೇಶದಲ್ಲಿ ಸುಧಾರಿಸಿಲ್ಲ. ಈ ವರದಿ 1990 ಮತ್ತು 2019ರ ನಡುವೆ ಭಾರತದ ಸರಾಸರಿ ರಾಷ್ಟ್ರೀಯ ಸೂಚ್ಯಂಕ ಶೇ. 273.9ರಷ್ಟು ಹೆಚ್ಚಾಗಿದೆ ಎಂದು ಹೇಳುತ್ತದೆ. ಆದರೆ ಈ ವರದಿಯ ಪ್ರಕಾರ ಪ್ರತಿ ಭಾರತೀಯನ ಕೊಳ್ಳುವ ಶಕ್ತಿ ಸಮಾನತೆ (ಪಿಪಿಪಿ) 2018ರ 6,829 ಡಾಲರ್‌ನಿಂದ 2019ರಲ್ಲಿ ತಲಾ ರಾಷ್ಟ್ರೀಯ ಆದಾಯ 6,681 ಡಾಲರ್‌ಗೆ ಇಳಿದಿದೆ ಎಂದು ತೋರಿಸುತ್ತಿದೆ. ಅಂದರೆ ನಮ್ಮ ಕೊಳ್ಳುವ ಶಕ್ತಿ ಕಡಿಮೆಯಾಗಿದೆ ಎಂದು ಅರ್ಥ. ಈ ವರದಿಯ ಪ್ರಕಾರ ಭಾರತ ಮತ್ತು ಥಾಯ್ಲೆಂಡ್ ದೇಶದ ಬುಡಕಟ್ಟು ಮಕ್ಕಳು ಅಪೌಷ್ಟಿಕತೆ-ಸಂಬಂಧಿತ ಸಮಸ್ಯೆಗಳನ್ನು ತೀವ್ರವಾಗಿ ಹೊಂದಿವೆ. ಈ ವರದಿಯಂತೆ ಭಾರತದಲ್ಲಿ ಜನಸಂಖ್ಯೆಯ ಒಟ್ಟು ಶೇ. 27.9 ಮಂದಿ ಬಹು ಆಯಾಮದ ಬಡವರು ಇದ್ದಾರೆ. ಅಂದರೆ ಬಡವರ ಸಂಖ್ಯೆ ಹೆಚ್ಚಾದಂತೆ ಮೇಲ್ನೋಟಕ್ಕೆ ಕಾಣುತ್ತದೆ.
ಲಿಂಗ ಅಸಮಾನತೆ ಸೂಚ್ಯಂಕದಲ್ಲಿ ಭಾರತ 123ನೇ ಸ್ಥಾನದಲ್ಲಿದೆ. ದೇಶದಲ್ಲಿ ಮಹಿಳೆಯರ ಕಾರ್ಮಿಕ ಬಲದ ಭಾಗವಹಿಸುವಿಕೆಯ ಪ್ರಮಾಣವು ಶೇ. 20.5ರಷ್ಟಿದ್ದರೆ, ಇದು ಪುರುಷರಿಗೆ ಶೇ. 76.1ರಷ್ಟಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳನ್ನು ಬೆಳೆಸುವುದರ ವಿಚಾರದಲ್ಲಿ ಪೋಷಕರ ವ್ಯತ್ಯಾಸ ನಡವಳಿಕೆಯು ಹುಡುಗಿಯರಲ್ಲಿ ಹೆಚ್ಚಿನ ಅಪೌಷ್ಟಿಕತೆಗೆ ಕಾರಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆರೋಗ್ಯ ನಿರೀಕ್ಷೆ 2019ರಲ್ಲಿ ಶೇಕಡಾ 14.5ರಷ್ಟು ನಷ್ಟವಾಗಿದೆ. ಜೀವಿತಾವಧಿ ಯಲ್ಲಿ ಅಸಮಾನತೆಯು 19.7ರಷ್ಟಿದ್ದರೆ, ಲಿಂಗ ಅಸಮಾನತೆ ಸೂಚ್ಯಂಕ 0.488 ರಷ್ಟು ಹೆಚ್ಚಾಗಿದೆ ಎನ್ನುತ್ತದೆ ವರದಿ. ಗಂಡು ಮಕ್ಕಳ ಆರೋಗ್ಯ ಮತ್ತು ಶಿಕ್ಷಣದ ಗುಣಮಟ್ಟ ಮತ್ತು ಪ್ರತಿಕೂಲ ಲಿಂಗ ಅನುಪಾತ ಸೇರಿದಂತೆ ಇತರ ಹೆಚ್ಚಿನ ಅಭಿವೃದ್ಧಿ ಸೂಚಕದ ವಿಚಾರದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ವಿಚಾರದಲ್ಲಿ ಮತ್ತಷ್ಟು ಪ್ರಗತಿಯ ಅಗತ್ಯವಿದೆ. ಸುಸ್ಥಿರ ಅಭಿವೃದ್ಧಿಗೆ ಶಿಕ್ಷಣ ಅದರ ಪರಿಣಾಮಕಾರಿತ್ವದ ಮತ್ತು ವಿಕಾಸದ ಕೊರತೆಯಿಂದ ವರದಿಯಲ್ಲಿ ಟೀಕಿಸಲ್ಪಟ್ಟಿದೆ. ವರದಿಯು ನಿರ್ದಿಷ್ಟವಾಗಿ ಮೆಕ್ಸಿಕೊದ ಜೊತೆಗೆ ಭಾರತವನ್ನು ಉಲ್ಲೇಖಿಸುತ್ತದೆ. ಈ ಎರಡು ದೇಶಗಳಲ್ಲಿ ಬೋಧನೆಯನ್ನು ಹೆಚ್ಚಾಗಿ ಶಿಸ್ತುಬದ್ಧ ಮತ್ತು ಪಠ್ಯಪುಸ್ತಕ ಆಧಾರಿತವೆಂದು ವರದಿ ಹೇಳುತ್ತದೆ. ಇಲ್ಲಿನ ಶಿಕ್ಷಣ ವಿಧಾನದಲ್ಲಿ ಕಾರಣಗಳು ಮತ್ತು ಪರಿಹಾರಗಳನ್ನು ಅಧ್ಯಯನ ಮಾಡಲು ವಿದ್ಯಾರ್ಥಿಗಳಿಗೆ ಹೆಚ್ಚಿನ ಒತ್ತು ನೀಡುತ್ತಿಲ್ಲ ಮತ್ತು ಶಿಕ್ಷಣದ ಗುಣಮಟ್ಟ ಸಂಪೂರ್ಣ ಕಡಿಮೆಯಾಗಿದೆ.
ಕೊರೋನ ಪರಿಣಾಮದ ನಡುವೆ ಭಾರತದಲ್ಲಿ ಜನಿಸಿದ ಮಗುವು ತಮ್ಮ ಸಂಭಾವ್ಯ ಮಾನವ ಬಂಡವಾಳದ ಕೇವಲ 56 ಶೇಕಡಾವನ್ನು ಮಾತ್ರ ಸಾಧಿಸಬಹುದು ಎಂದು ನಿರೀಕ್ಷಿಸಬಹುದು ಎನ್ನುತ್ತದೆ ವರದಿ. ಇದು ಭಾರತದ ಸಂಪೂರ್ಣ ಶಿಕ್ಷಣ ಮತ್ತು ಪೂರ್ಣ ಆರೋಗ್ಯದ ಮಾನದಂಡಕ್ಕೆ ಹೋಲಿಸಿದರೆ ಕಡಿಮೆ ಎಂದು ವರದಿ ಹೇಳಿದೆ. ಕೊರೋನ ಸಾಂಕ್ರಾಮಿಕ ಭಾರತದ ಮಾನವ ಬಂಡವಾಳವನ್ನು ನಿರ್ಮಿಸುವಲ್ಲಿ ದೇಶವನ್ನು ಹತ್ತು ವರ್ಷದಷ್ಟು ಹಿಂದಕ್ಕೆ ತಳ್ಳುವ ಅಪಾಯವಿದೆ ಮತ್ತು ಕೊರೋನದಿಂದ ಆರೋಗ್ಯ, ಬದುಕುಳಿಯುವಿಕೆಯ ಪ್ರಮಾಣ, ಶಾಲಾ ದಾಖಲಾತಿ ಮತ್ತಷ್ಟು ಕಡಿಮೆಯಾಗಿದೆ ಹಾಗೂ ಸಾಂಕ್ರಾಮಿಕ ರೋಗದ ಆರ್ಥಿಕ ಪರಿಣಾಮವು ಮಹಿಳೆಯರಿಗೆ ಮತ್ತು ಅತ್ಯಂತ ಹಿಂದುಳಿದ ಕುಟುಂಬಗಳಿಗೆ ವಿಶೇಷವಾಗಿ ತಗಲಿದೆ ಎನ್ನುತ್ತದೆ ವರದಿ. ಇದರಿಂದ ಹೆಚ್ಚಿನ ಅಂಚಿನ ಜನರು ಆಹಾರ ಅಭದ್ರತೆ ಮತ್ತು ಬಡತನಕ್ಕೆ ಗುರಿಯಾಗುತ್ತಾರೆ ಎಂದು ವಿಶ್ವ ಬ್ಯಾಂಕ್ ತಿಳಿಸಿದೆ. ಕೊರೋನದಿಂದ ನಿರುದ್ಯೋಗದ ದರ ಸಹ ಹೆಚ್ಚಾಗುವ ಸೂಚನೆಯನ್ನು ವರದಿ ನೀಡಿದೆ. ಕೊಂಚ ಸಮಾಧಾನದ ವಿಚಾರವೆಂದರೆ ವಿಶ್ವ ಬ್ಯಾಂಕಿನ ವಾರ್ಷಿಕ ಮಾನವ ಬಂಡವಾಳ ಸೂಚ್ಯಂಕದ ಇತ್ತೀಚಿನ ಆವೃತ್ತಿಯಲ್ಲಿ ಭಾರತವು 116 ನೇ ಸ್ಥಾನದಲ್ಲಿದೆ. ಇದು ದೇಶಾದ್ಯಂತ ಮಾನವ ಬಂಡವಾಳ ಅಳೆಯುವ ಪ್ರಮುಖ ಮಾನದಂಡವಾಗಿದೆ. ವಿಶ್ವ ಬ್ಯಾಂಕ್ ಬಿಡುಗಡೆ ಮಾಡಿದ ಮಾನವ ಬಂಡವಾಳ ಸೂಚ್ಯಂಕದ ವರದಿಯ ಪ್ರಕಾರ ಭಾರತದ ಅಂಕ 2018ರಲ್ಲಿ 0.44ರಿಂದ ಸದ್ಯ 0.49ಕ್ಕೆ ಏರಿದೆ.
ಭಾರತದಲ್ಲಿ ಇನ್ನೂ ಹೆಚ್ಚಿನ ಆರ್ಥಿಕ ಭದ್ರತೆ ಮತ್ತು ಭೂಮಿಯ ಮಾಲಕತ್ವವು ಮಹಿಳೆಯರ ಸುರಕ್ಷತೆಯನ್ನು ಸುಧಾರಿಸುತ್ತದೆ ಮತ್ತು ಲಿಂಗದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ವರದಿ ಹೇಳುತ್ತದೆ. ಲಿಂಗ ಆಧಾರಿತ ಹಿಂಸೆ ಮತ್ತು ಆಸ್ತಿಯ ಮೇಲಿನ ಹಕ್ಕು ಗ್ರಾಮೀಣ ಮಹಿಳೆಯರನ್ನು ಹೆಚ್ಚು ಸಬಲೀಕರಣಗೊಳಿಸುತ್ತದೆ ಎಂದು ವರದಿ ಸೂಚಿಸುತ್ತದೆ. ಭಾರತದಲ್ಲಿ ಪೋಷಕರು ಹೆಣ್ಣು ಮಕ್ಕಳ ಆರೋಗ್ಯ ಮತ್ತು ಶಿಕ್ಷಣದಲ್ಲಿ ಹೆಚ್ಚಿನ ಹೂಡಿಕೆ ಮಾಡುವುದರಿಂದ ಹುಡುಗಿಯರಲ್ಲಿ ಅಪೌಷ್ಟಿಕತೆ ಕಡಿಮೆಯಾಗುತ್ತದೆ ಮತ್ತು ಸ್ತ್ರೀ ಸಬಲೀಕರಣ ಹೆಚ್ಚಾಗುತ್ತದೆ. ಚುನಾಯಿತ ಸ್ಥಳೀಯ ಸರಕಾರಗಳಲ್ಲಿ ಮಹಿಳೆಯರು ಹೆಚ್ಚಿನ ಪ್ರಾತಿನಿಧ್ಯವನ್ನು ಹೊಂದಿರುವ ದೇಶಗಳ ಮೊದಲ ಮೂರನೇ ಗುಂಪಿನಲ್ಲಿ ಭಾರತ ಕಾಣಿಸಿಕೊಂಡಿದೆ ಮತ್ತು ದೇಶದ ಕೇವಲ 13.5ರಷ್ಟು ಮಹಿಳೆಯರು ಮಾತ್ರ ಸಂಸತ್ತಿನಲ್ಲಿ ಸ್ಥಾನಗಳನ್ನು ಪಡೆದಿದ್ದಾರೆ ಎಂದು ವರದಿ ವಿಷಾದಿಸುತ್ತದೆ.
ಈ ವರದಿ ಮೊದಲ ಬಾರಿಗೆ ಪ್ರತಿ ದೇಶಗಳ ಅಲ್ಲಿನ ಪರಿಸರದ ಒತ್ತಡವನ್ನು ಅಂದಾಜು ಮಾಡಿದೆ ಮತ್ತು ಭೂಮಿಯ ಒತ್ತಡಗಳನ್ನು ಸರಿಹೊಂದಿಸಿದ ಮಾನವ ಅಭಿವೃದ್ಧಿ ಸೂಚ್ಯಂಕವನ್ನು (ಪಿಎಚ್‌ಡಿಐ) ಸಿದ್ಧಪಡಿಸಲಾಗಿದೆ. ಇದು ಪರಿಸರ ಸ್ನೇಹಿ ಮಾನವ ಅಭಿವೃದ್ಧಿಯ ಬಗ್ಗೆ ಸ್ವಲ್ಪಸ್ಪಷ್ಟವಾದ ಚಿತ್ರವನ್ನು ನೀಡುತ್ತದೆ ಮತ್ತು ಉತ್ತಮ ಪರಿಸರಕ್ಕೆ ಇರುವ ಬೆದರಿಕೆಗಳ ಕುರಿತು ನಮ್ಮ ಗಮನ ಸೆಳೆೆಯುತ್ತದೆ. ಪರಿಸರ ಕುರಿತ ಕೆಂಪು ಪಟ್ಟಿ ಸೂಚ್ಯಂಕದಲ್ಲಿ ಭಾರತ 0.676 ಅಂಕಗಳನ್ನು ಗಳಿಸಿದೆ. ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಸೂಚ್ಯಂಕ ಸ್ಕೋರ್ ಭಾರತದಲ್ಲಿ 0.972ರಷ್ಟು ಇದ್ದು ಇಂಗಾಲ ಹೆಜ್ಜೆ ಗುರುತು ಸೂಚ್ಯಂಕ ಸ್ಕೋರ್ 0.970 ಇರುವುದರಿಂದ ಹೆಚ್ಚಿನ ಸುಧಾರಣೆಯ ಅಗತ್ಯವಿದೆ ಎನ್ನುತ್ತದೆ ವರದಿ. ಈ ವಿಷಯದಲ್ಲಿ ಭಾರತದ ಕಾರ್ಯಕ್ಷಮತೆ ಸ್ವಲ್ಪಉತ್ತಮವಾಗಿದ್ದರೂ ಪರಿಸರ ಸುಸ್ಥಿರ ಅಭಿವೃದ್ಧಿ ಗುರಿಯನ್ನು ಸಾಧಿಸುವ ಹಾದಿಯಲ್ಲಿ ದೇಶ ಇನ್ನು ಹಲವಾರು ಮೈಲುಗಳಷ್ಟು ದೂರದಲ್ಲಿದೆ ಎನ್ನುತ್ತದೆ ವರದಿ. ಈ ವರದಿ ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ಮಾಡಿದ ಕೆಲವು ಬದ್ಧತೆ ಮತ್ತು ಕಟ್ಟುಪಾಡುಗಳನ್ನು ಸ್ವಲ್ಪಮಟ್ಟಿಗೆ ಭಾರತ ಪಾಲಿಸಿದೆ ಎನ್ನುತ್ತದೆ. ಹವಾಮಾನ ಬದಲಾವಣೆಯೊಂದಿಗೆ ಸಂಬಂಧ ಹೊಂದಿದ ಪರಿಣಾಮವಾಗಿ ದುರ್ಬಲ ಉದ್ಯೋಗದಲ್ಲಿರುವ ಶೇಕಡಾವಾರು ವಿಚಾರದಲ್ಲಿ ದೇಶವು ಮೂರನೇ ಸ್ಥಾನದಲ್ಲಿದೆ. ವರದಿ ಪ್ರಕಾರ ಸೌರ ಸಾಮರ್ಥ್ಯ ಬಳಕೆಯ ವಿಚಾರದಲ್ಲಿ ಭಾರತ ಐದನೇ ಸ್ಥಾನದಲ್ಲಿದೆ.
ನಮ್ಮ ಸರಕಾರ ಮತ್ತು ನೀತಿ ನಿರೂಪಕರು ಹವಾಮಾನ ಬದಲಾವಣೆಯ ಪರಿಣಾಮ ಉಂಟಾಗುವ ತಾಪಮಾನ, ಪ್ರವಾಹ, ತೀವ್ರ ನೀರಿನ ಕೊರತೆ, ಕೃಷಿ ವೈಫಲ್ಯ ಇದರ ಕುರಿತಾಗಿ ತುರ್ತು ಗಮನವಹಿಸಬೇಕೆಂದು ವರದಿಯಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ. ಸುಸ್ಥಿರ, ಅಂತರ್ಗತ ಚೇತರಿಕೆ ಮತ್ತು ಅಂಚಿನ ಜನಗಳ ಒಳಗೊಳ್ಳುವಿಕೆಯ ಬೆಳವಣಿಗೆಗೆ ಅಡಿಪಾಯ ಹಾಕಲು ಶಿಕ್ಷಣ ಮತ್ತು ಆರೋಗ್ಯದ ವಿಚಾರದಲ್ಲಿ ಭಾರತ ಹೆಚ್ಚಿನ ಹೂಡಿಕೆ ಮಾಡುವುದು ಅತ್ಯಗತ್ಯ ಎನ್ನುತ್ತದೆ ವರದಿ. ಕೊರೋನ ಸಾಂಕ್ರಾಮಿಕ ಪ್ರಭಾವದಿಂದಾಗಿ, ದೇಶದಲ್ಲಿ 1 ಬಿಲಿಯನ್‌ಗಿಂತ ಹೆಚ್ಚಿನ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಮತ್ತು ಸರಾಸರಿ ಅರ್ಧ ವಷರ್ದ ಶಾಲಾ ಶಿಕ್ಷಣವನ್ನು ಕಳೆದುಕೊಳ್ಳಬಹುದು, ಅಲ್ಲದೇ ಸಾಕಷ್ಟು ವಿತ್ತೀಯ ನಷ್ಟಗಳಿಗೆ ದೇಶ ಸಿದ್ಧವಾಗಬೇಕಿದೆ ಎನ್ನುತ್ತದೆ ವರದಿ. ಮಹಿಳೆಯರು ಮತ್ತು ಮಕ್ಕಳಿಗೆ ಅಗತ್ಯವಾದ ಆರೋಗ್ಯ ಸೇವೆಗಳಿಗೆ ಇರುವ ಗಮನಾರ್ಹವಾದ ಅಡೆತಡೆಗಳನ್ನು ದೇಶ ತೆಗೆದುಹಾಕಬೇಕಿದೆ. ಅಲ್ಲದೆ ಅನೇಕ ಬಡಮಕ್ಕಳು ನಿರ್ಣಾಯಕ ವ್ಯಾಕ್ಸಿನೇಷನ್‌ಗಳನ್ನು ಪಡೆಯುವ ಅವಕಾಶವನ್ನು ಕಳೆದುಕೊಳ್ಳುತ್ತಾರೆ ಎಂದು ವರದಿ ಅಭಿಪ್ರಾಯ ಪಡುತ್ತದೆ.
ಅಂತಿಮವಾಗಿ ಈಗ ನಾವು ಏನು ಮಾಡಬೇಕು? ನಮ್ಮ ದೇಶದ ನೀತಿ ನಿರೂಪಣಾ ವಿಧಾನಗಳಲ್ಲಿ ಬಡತನ, ಪರಿಸರ ನ್ಯಾಯ, ಬಹುತ್ವ, ಒಳಗೊಳ್ಳುವಿಕೆ ಇವುಗಳು ಸಂಪೂರ್ಣ ಕಾಣೆಯಾಗಿವೆ ಎಂದು ವರದಿಯು ಗಮನಿಸಿದೆ. ಸಮರ್ಥನೀಯ ಮಟ್ಟದಲ್ಲಿ ಅಸಮತೋಲನವನ್ನು ಉಂಟು ಮಾಡುವ ನೀತಿ ನಿರೂಪಣೆಗಳನ್ನು ಯೋಜನೆಯಿಂದ ಕೈ ಬಿಡಲು ವರದಿ ಸೂಚಿಸುತ್ತದೆ. ಉತ್ಪಾದನಾ ಸಾಧನಗಳ ಮೇಲಿನ ನಿಯಂತ್ರಣವನ್ನು ಅಂಚಿನ ಸಮುದಾಯಗಳಿಗೆ ವರ್ಗಾಯಿಸಿದಾಗ ಆ ಸಮುದಾಯ ಸಬಲೀಕರಣ ಪಡೆಯಲು ಸಾಧ್ಯ ಮತ್ತು ಪರಿಸರ ಸ್ನೇಹಿ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಮತ್ತಷ್ಟು ವಿಕೇಂದ್ರೀಕರಣಗೊಳಿಸಲು ನಿರ್ದಿಷ್ಟವಾಗಿ ವರದಿಯಲ್ಲಿ ಉಲ್ಲೇಖಿಸ ಲಾಗಿದೆ. ಇದರಿಂದ ದೇಶದಲ್ಲಿ ಹೆಚ್ಚು ಒಳಗೊಳ್ಳುವಿಕೆಯ ಬೆಳವಣಿಗೆಗೆ ಕಾರಣವಾಗಬಹುದು. ಇದಲ್ಲದೆ, ಪಾರದರ್ಶಕತೆ ಉತ್ತರದಾಯಿತ್ವ, ಭಾಗವಹಿಸುವಿಕೆ ಇತ್ಯಾದಿ ಭಾರತದ ಆಡಳಿತದಲ್ಲಿ ಅಳವಡಿಸಿಕೊಳ್ಳುವಿಕೆಯ ಅಗತ್ಯತೆಯನ್ನು ಹೇಳುವುದಕ್ಕೆ ವರದಿ ಮರೆತಿಲ್ಲ.