ಉಸಿರಾಟಕ್ಕೆ ಕಷ್ಟವಾದಾಗ ಹೀಗೆ ಮಾಡಿ
ಕೆಲವೊಮ್ಮೆ ಉಸಿರಾಡಿಸಲು ಅಥವಾ ಶ್ವಾಸಕೋಶಗಳಲ್ಲಿ ಗಾಳಿಯನ್ನು ಎಳೆದುಕೊಳ್ಳಲು ಕಷ್ಟವಾಗುತ್ತದೆ. ಈ ಸ್ಥಿತಿಯನ್ನು ವೈದ್ಯಕೀಯವಾಗಿ ಡಿಸ್ಪ್ನೀಯಾ ಎಂದು ಕರೆಯಲಾಗುತ್ತದೆ. ಹೃದಯ ಮತ್ತು ಶ್ವಾಸಕೋಶಗಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಉಸಿರಾಟದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಉಂಟು ಮಾಡುತ್ತವೆ. ಕೆಲವರು ಏಕಾಏಕಿ ಅಲ್ಪಾವಧಿಯ ಉಸಿರಾಟದ ತೊಂದರೆಯನ್ನು ಅನುಭವಿಸಿದರೆ ಕೆಲವರಲ್ಲಿ ಹಲವಾರು ವಾರಗಳ ವಿರಾಮಗಳೊಂದಿಗೆ ದೀರ್ಘಾವಧಿಯ ಉಸಿರಾಟಕ್ಕೆ ಸಮಸ್ಯೆಯುಂಟಾಗಬಹುದು. ಕೋವಿಡ್-19ರ ಪ್ರಮುಖ ಲಕ್ಷಣಗಳಲ್ಲಿ ಉಸಿರಾಟ ಸಮಸ್ಯೆಯು ಒಂದಾಗಿದೆ.
ವ್ಯಕ್ತಿಗೆ ಉಸಿರಾಡಲು ಸಾಕಷ್ಟು ಗಾಳಿಯನ್ನು ಒಳಗೆಳೆದುಕೊಳ್ಳಲು ಸಾಧ್ಯವಾಗದಾದಾಗ ಉಸಿರಾಟಕ್ಕೆ ಕಷ್ಟವುಂಟಾಗುತ್ತದೆ. ಇದು ಬೇರೆ ಬೇರೆ ರೋಗಿಗಳಲ್ಲಿ ಸೌಮ್ಯದಿಂದ ತೀವ್ರ ಸ್ವರೂಪವನ್ನು ಹೊಂದಿರುತ್ತದೆ. ಕೆಲವೊಮ್ಮೆ ಮೂಗಿನಲ್ಲಿ ತಡೆ ಅಥವಾ ಮೂಗು ಕಟ್ಟಿಕೊಳ್ಳುವುದು ಕೂಡ ಉಸಿರಾಟಕ್ಕೆ ಕಷ್ಟವನ್ನುಂಟು ಮಾಡುತ್ತದೆ. ಆದರೆ ಈ ಸ್ಥಿತಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಕಾರಣವಲ್ಲದಿದ್ದರೆ ಮತ್ತು ತುರ್ತು ಸಂದರ್ಭವಲ್ಲದಿದ್ದರೆ ಅದನ್ನು ಮನೆಯಲ್ಲಿಯೇ ನಿಭಾಯಿಸಬಹುದು.
► ಆವಿಯ ಉಸಿರಾಟ
ಶ್ವಾಸಕೋಶ ಸಮಸ್ಯೆಗಳ ಹೆಚ್ಚಿನ ಲಕ್ಷಣಗಳನ್ನು ಶಮನಿಸುವಲ್ಲಿ ಬಿಸಿ ನೀರಿನ ಹಬೆಯನ್ನು ಉಸಿರಾಡಿಸುವ ತಂತ್ರವು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮೂಗಿನಲ್ಲಿ ಲೋಳೆಯಿಂದ ತಡೆಯುಂಟಾಗಿದ್ದರೆ ನಿವಾರಿಸಲು ಇದು ಅತ್ಯುತ್ತಮ ವಿಧಾನವಾಗಿದೆ. ನೀವು ಶೀತ,ಕೆಮ್ಮು ಮತ್ತು ಅಲರ್ಜಿಗಳಿಂದ ನರಳುತ್ತಿದ್ದರೆ ವೈದ್ಯರೂ ಆವಿಯನ್ನು ಉಸಿರಾಡಿಸುವಂತೆ ಸೂಚಿಸುತ್ತಾರೆ. ಇದು ಮೂಗಿನ ದ್ವಾರಗಳು ಮತ್ತು ಶ್ವಾಸಕೋಶಗಳಲ್ಲಿಯ ಲೋಳೆಯನ್ನು ನಿವಾರಿಸುವ ಮೂಲಕ ಉಸಿರಾಟವನ್ನು ಸುಲಭವಾಗಿಸುತ್ತದೆ. ತುಂಬ ಬಿಸಿಯಾದ ನೀರಿಗೆ 2-3 ಹನಿ ನೀಲಗಿರಿ ಎಣ್ಣೆಯನ್ನು ಸೇರಿಸಿ ಆವಿಯನ್ನು ಒಳಗೆಳೆದುಕೊಳ್ಳಬಹುದು. ದಿನಕ್ಕೆರಡು ಸಲ ಸುಮಾರು 10 ನಿಮಿಷಗಳ ಕಾಲ ಹೀಗೆ ಮಾಡಿದರೆ ಸಮಸ್ಯೆ ಶಮನಗೊಳ್ಳುತ್ತದೆ.
► ಜೇನು
ಔಷಧೀಯ ಗುಣಗಳನ್ನು ಹೊಂದಿರುವ ಜೇನು ಕೆಮ್ಮು ಮತ್ತು ಶೀತಗಳಿಗೆ ಪರಿಣಾಮಕಾರಿ ಚಿಕಿತ್ಸೆಯನ್ನು ನೀಡುತ್ತದೆ. ಚಹಾದಲ್ಲಿ ಸ್ವಲ್ಪ ಜೇನನ್ನು ಬೆರೆಸಿಕೊಂಡು ಕುಡಿದರೆ ಹಲವಾರು ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಪ್ರತಿ ದಿನ ರಾತ್ರಿ ಮಲಗುವ ಮುನ್ನ ಸ್ವಲ್ಪ ಜೇನು ಸೇವಿಸಿದರೆ ಉಸಿರಾಟ ಸಮಸ್ಯೆ ಮತ್ತು ಉಬ್ಬಸದ ವಿರುದ್ಧ ಹೋರಾಡಲು ನೆರವಾಗುತ್ತದೆ. ಉತ್ಕರ್ಷಣ ನಿರೋಧಕ, ಸೂಕ್ಷ್ಮಾಣುಜೀವಿ ನಿರೋಧಕ ಮತ್ತು ಉರಿಯೂತ ನಿರೋಧಕ ಗುಣಗಳನ್ನು ಹೊಂದಿರುವ ಜೇನು ಶ್ವಾಸಕೋಶಗಳಲ್ಲಿಯ ಲೋಳೆಯನ್ನು ಹೊರಹಾಕುತ್ತದೆ.
► ಫ್ಯಾನ್ ಬಳಕೆ
ಮೂಗು ಮತ್ತು ಮುಖವನ್ನು ಫ್ಯಾನ್‌ನ ತಂಪು ಗಾಳಿಗೆ ಒಡ್ಡಿಕೊಳ್ಳುವುದು ಉಸಿರಾಟ ಸಮಸ್ಯೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ. ಕೈಯಲ್ಲಿ ಹಿಡಿದುಕೊಳ್ಳುವ ಬೀಸಣಿಕೆಯನ್ನೂ ಇದಕ್ಕೆ ಬಳಸಬಹುದು. ನಿಮ್ಮ ಶರೀರವನ್ನು ಪ್ರವೇಶಿಸುವ ಗಾಳಿಯು ಹೆಚ್ಚಿನ ಒತ್ತಡದಿಂದ ಕೂಡಿರುವುದರಿಂದ ಉಸಿರನ್ನು ಒಳಗೆಳೆದುಕೊಳ್ಳಲು ಸುಲಭವಾಗುತ್ತದೆ.
► ಉಪ್ಪುನೀರಿನಿಂದ ಮುಕ್ಕಳಿಸುವುದು
ಉಸಿರಾಡಲು ಕಷ್ಟವಾಗಿರುವುದಕ್ಕೆ ಮೂಗು ಕಟ್ಟಿರುವುದು ಕಾರಣವಾಗಿದ್ದಾಗ ಈ ಚಿಕಿತ್ಸೆಯು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಕೆಮ್ಮು,ಗಂಟಲು ಕೆರೆತ,ಶೀತ ಮತ್ತು ಫ್ಲೂಗಳಿಂದ ಬಳಲುತ್ತಿದ್ದಾಗ ಮೊದಲು ನೆನಪಾಗುವುದೇ ಉಪ್ಪು ನೀರಿನಿಂದ ಗಾರ್ಗಲ್ ಮಾಡುವುದು. ಬೆಚ್ಚಗಿನ ನೀರು ಶ್ವಾಸಕೋಶಗಳಲ್ಲಿಯ ದಟ್ಟಣೆಯನ್ನು ನಿವಾರಿಸುವ ಮೂಲಕ ನೆಮ್ಮದಿಯನ್ನು ನೀಡುತ್ತದೆ. ಅರ್ಧ ಕಪ್ ಬಿಸಿ ನೀರಿಗೆ ಅರ್ಧ ಚಮಚ ಉಪ್ಪನ್ನು ಸೇರಿಸಿ 4-5 ನಿಮಿಷಗಳ ಕಾಲ ಬಾಯಿ ಮುಕ್ಕಳಿಸಿದರೆ ಪರಿಣಾಮಕಾರಿಯಾಗಿರುತ್ತದೆ.
► ಸಿಟ್ರಸ್ ವರ್ಗದ ಹಣ್ಣುಗಳು
ಕಿತ್ತಳೆ ಮತ್ತು ಲಿಂಬೆಯಂತಹ ಸಿಟ್ರಸ್ ವರ್ಗಕ್ಕೆ ಸೇರಿದ ಹಣ್ಣುಗಳು ಬ್ರಾಂಕೈಟಿಸ್ ಮತ್ತು ಅಸ್ತಮಾದಂತಹ ಶ್ವಾಸಕೋಶ ಸಮಸ್ಯೆಗಳನ್ನು ನಿವಾರಿಸುವ ಗುಣಗಳನ್ನು ಹೊಂದಿವೆ. ಇವುಗಳಲ್ಲಿ ಸಮೃದ್ಧವಾಗಿರುವ ಉತ್ಕರ್ಷಣ ನಿರೋಧಕಗಳು ಶ್ವಾಸಕೋಶಗಳ ಕಾರ್ಯ ನಿರ್ವಹಣೆಯನ್ನು ಉತ್ತಮಗೊಳಿಸುವ ಮೂಲಕ ಉಸಿರಾಟ ಸಮಸ್ಯೆಯನ್ನು ಶಮನಿಸುತ್ತವೆ. ಸೋಂಕುಗಳು ಮತ್ತು ಉರಿಯೂತದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವ ಸಿ ವಿಟಮಿನ್ ಈ ಹಣ್ಣುಗಳಲ್ಲಿ ಸಮೃದ್ಧವಾಗಿರುತ್ತದೆ.
► ಶುಂಠಿ
ಎಲ್ಲ ಅಡಿಗೆಮನೆಗಳಲ್ಲಿ ಸಾಮಾನ್ಯವಾಗಿರುವ ಶುಂಠಿಯು ಶ್ವಾಸಕೋಶಗಳನ್ನು ಬಲಗೊಳಿಸುತ್ತದೆ. ಪ್ರತಿದಿನ ಬಿಸಿಯಾದ ಶುಂಠಿ ಕಷಾಯವನ್ನು ಸೇವಿಸುವುದರಿಂದ ಆರೋಗ್ಯವು ಹೆಚ್ಚುತ್ತದೆ ಮತ್ತು ಉಸಿರಾಟದ ಸಮಸ್ಯೆಗಳೂ ಕಡಿಮೆಯಾಗುತ್ತವೆ. ಉಸಿರಾಟದ ಸಮಸ್ಯೆಯನ್ನು ಶಮನಿಸುವಲ್ಲಿ ತಾಜಾ ಶುಂಠಿಯನ್ನು ಅಗಿದು ತಿನ್ನುವುದು ಪರಿಣಾಮಕಾರಿಯಾಗುತ್ತದೆ. ಉಸಿರಾಟ ಸಮಸ್ಯೆಗೆ ಸಾಮಾನ್ಯ ಕಾರಣವಾಗಿರುವ ಸೋಂಕುಗಳಿಗೆ ಚಿಕಿತ್ಸೆ ನೀಡಲು ಶುಂಠಿ ಬಳಕೆಯು ಉತ್ತಮ ವಿಧಾನವಾಗಿದೆ ಎಂದು ಅಧ್ಯಯನಗಳು ತೋರಿಸಿವೆ.
► ಕಾಫಿ
ಉಸಿರಾಟದ ಸಮಸ್ಯೆಗಳಿಗೆ ಕಾಫಿಯೂ ನೈಸರ್ಗಿಕ ಪರಿಹಾರವಾಗಿದೆ. ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕೆಫೀನ್ ವಾಯುನಾಳಗಳನ್ನು ಸ್ವಚ್ಛಗೊಳಿಸುವ ಮೂಲಕ ಶ್ವಾಸಕೋಶಗಳ ಆರೋಗ್ಯವನ್ನು ಹೆಚ್ಚಿಸಲು ನೆರವಾಗುತ್ತದೆ. ಉಸಿರಾಟದ ಸಮಸ್ಯೆಯಿದ್ದಾಗ ಬ್ಲಾಕ್ ಕಾಫಿ ಸೇವನೆಯು ಉತ್ತಮವಾಗಿರುತ್ತದೆ. ಶ್ವಾಸನಾಳ ಸ್ನಾಯುಗಳಲ್ಲಿ ಬಿಗಿತವನ್ನು ತಗ್ಗಿಸುವ ಸಾಮರ್ಥ್ಯವನ್ನು ಕೆಫೀನ್ ಹೊಂದಿದೆ. ಅಸ್ತಮಾ ರೋಗಿಗಳಿಗೂ ಕಾಫಿಯು ನೈಸರ್ಗಿಕ ಚಿಕಿತ್ಸೆಯನ್ನು ನೀಡುತ್ತದೆ. ಆದರೆ ಹೃದಯ ರೋಗಿಗಳು ಅತಿಯಾಗಿ ಕಾಫಿಯನ್ನು ಸೇವಿಸಬಾರದು. ವೈದ್ಯರ ಸಲಹೆಯಂತೆ ಕಾಫಿ ಸೇವನೆಗೆ ಮಿತಿಯಿರಬೇಕು.
ಈ ಮನೆಮದ್ದುಗಳಿಂದ ಉಸಿರಾಟ ಸಮಸ್ಯೆ ಕಡಿಮೆಯಾಗದಿದ್ದರೆ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಭೇಟಿ ನೀಡುವುದು ಅಗತ್ಯವಾಗುತ್ತದೆ. ಉಸಿರಾಟದ ಸಮಸ್ಯೆಯೊಂದಿಗೆ ಪಾದಗಳಲ್ಲಿ ಊತ,ಜ್ವರ ಮತ್ತು ಉಬ್ಬಸಗಳಿದ್ದರೆ ಅದು ಹೆಚ್ಚು ಕಳವಳಕ್ಕೆ ಕಾರಣವಾಗುತ್ತದೆ.