varthabharthi


ವಾರ್ತಾಭಾರತಿ 18ನೇ ವಾರ್ಷಿಕ ವಿಶೇಷಾಂಕ

ಆಂಗ್ಲರ ನಾಡಿನಲಿ ಕನ್ನಡಕ್ಕಾಗಿ ಮಿಡಿಯುವವರು

ವಾರ್ತಾ ಭಾರತಿ : 23 Jan, 2021
ನವೀನ ಸುನಗ, ಲಂಡನ್

ಸ್ವಾಭಾವಿಕವಾಗಿ ತಾಯಿನಾಡಿನಿಂದ ದೂರ ನೆಲೆಸಿರುವ ಯಾರಿಗೇ ಆಗಲಿ ತನ್ನ ಭಾಷೆ, ಸಂಸ್ಕೃತಿ ಪರಂಪರೆಗಳ ಬಗ್ಗೆ ಅಭಿಮಾನ ಮತ್ತು ಅವುಗಳನ್ನು ಬೆಳೆಸುವ ಉಳಿಸುವ ಹಂಬಲ ಇದ್ದೇ ಇರುತ್ತದೆ. ಇಂತಹ ಹಂಬಲದ ಪ್ರಯತ್ನವಾಗಿಯೇ ಇಲ್ಲಿ ಕನ್ನಡಿಗರ ಅನೇಕ ಸಂಘ-ಸಂಸ್ಥೆಗಳು ಹುಟ್ಟಿಕೊಂಡಿರುವುದು. 1980ರ ದಶಕದಲ್ಲಿ (doctor)ಗಳ ಗುಂಪೊಂದು ಸೇರಿಕೊಂಡು ಚಿಕ್ಕದಾಗಿ ಸ್ಥಾಪಿತಗೊಂಡ ಕನ್ನಡ ಬಳಗ ಇಂದು ವಿಶ್ವದಾದ್ಯಂತ ಹೆಸರು ವಾಸಿಯಾಗಿದೆ. ಹಾಗೆಯೇ 2000ದ ದಶಕದಲ್ಲಿ (engineer)ಗಳ ಗುಂಪೊಂದು ಸೇರಿ ಈ ರೆಡಿಂಗ್ ನಗರದಲ್ಲಿ ಸ್ಥಾಪಿಸಿದ ಕನ್ನಡಿಗರು ಯುಕೆ ಎಂಬ ಸಂಸ್ಥೆ ಕೂಡ ತಕ್ಕ ಮಟ್ಟಿಗೆ ಹೆಸರು ವಾಸಿಯಾಗಿದೆ. ಇವುಗಳಲ್ಲದೆ ಹ್ಯಾರೋ ಕುವೆಂಪು ಕನ್ನಡ ಸಂಘ, ಸ್ವಿಂಡನ್ ಕನ್ನಡ ಬಳಗ, ಕನ್ನಡ ಸಂಘ ನಾರ್ಥ್ ಯುಕೆ ಹಾಗೂ ಸ್ಕಾಟ್‌ಲ್ಯಾಂಡ್ ಕರ್ನಾಟಕ ಸಂಘ ಮತ್ತು ಇನ್ನೂ ಅನೇಕ ಸಂಘಗಳು ಒಂದಕ್ಕೊಂದು ಪೈಪೋಟಿಯಂತೆ ತಮ್ಮ ಪರಿಮಿತಿಯಲ್ಲೇ ಕನ್ನಡ ಕಾರ್ಯಕ್ರಮಗಳನ್ನು ಅನೇಕ ವರ್ಷಗಳಿಂದ ಹಮ್ಮಿಕೊಳ್ಳುತ್ತಿವೆ. ಈಗ ಸಂಘಗಳು ಮತ್ತು ಇಲ್ಲಿ ಆಯೋಜಿಸಲಾಗುವ ಕಾರ್ಯಕ್ರಮಗಳು ತನ್ನವರೊಂದಿಗೆ ಒಡನಾಡಲು ಕನ್ನಡಿಗರಿಗೆ ಇರುವ ಕೇಂದ್ರ ಬಿಂದು ಅಂದರೆ ತಪ್ಪಾಗಲಾರದು.

 ಲಂಡನ್‌ನಲ್ಲಿ ಐಬಾಲ್ ಡ್ರೀಮ್ಸ್ ಲಿ. ಸಂಸ್ಥೆಯ ನಿರ್ದೇಶಕರಾಗಿರುವ ನವೀನ ಸುನಗ, ಲಂಡನ್‌ನ ಕನ್ನಡ ಕಾರ್ಯಕ್ರಮಗಳಲ್ಲಿ ಸದಾ ಸಕ್ರಿಯವಾಗಿರುವವರು. ಮುಂಬೈ ರಂಗಭೂಮಿಯಲ್ಲೂ ಕೆಲಸ ಮಾಡಿರುವ ಸುನಗ, ಹಲವು ನಾಟಕ, ಕಿರುಚಿತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಕತೆ, ಕವಿತೆಗಳನ್ನು ಬರೆಯುವ ಹವ್ಯಾಸವನ್ನು ಇವರು ಹೊಂದಿದ್ದಾರೆ. ಬಸವಣ್ಣ ಅವರ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಿರುವ ನವೀನ್, ಈ ನಿಟ್ಟಿನಲ್ಲಿ ಲಂಡನ್‌ನಲ್ಲೂ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.

ಭಾರತ ಸ್ವಾತಂತ್ರಗೊಂಡ ನಂತರ ಆಂಗ್ಲನಾಡಿಗೆ ತಂಡೋಪ ತಂಡವಾಗಿ ವಲಸೆ ಬಂದ ಭಾರತೀಯರಲ್ಲಿ ಕನ್ನಡಿಗರೂ ಕೂಡಾ ಒಬ್ಬರು. ಪಂಜಾಬಿಗರು, ಗುಜರಾತಿಗರು ಮತ್ತು ಬಂಗಾಳಿಗಳಿಗೆ ಹೋಲಿಸಿದರೆ, ಕನ್ನಡಿಗ ವಲಸಿಗರ ಸಂಖ್ಯೆ ತುಂಬಾ ಕಡಿಮೆ. ಸ್ವಾತಂತ್ರ ಪೂರ್ವದಲ್ಲಿಯೂ ಆಂಗ್ಲನಾಡಿಗೆ ಉನ್ನತ ಶಿಕ್ಷಣಕ್ಕಾಗಿಯೋ, ಉದ್ಯೋಗ, ವ್ಯಾಪಾರಗಳಿಗಾಗಿಯೋ ಇಲ್ಲಿಗೆ ಬಂದಂತಹ ಕನ್ನಡಿಗರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಹಾಗಾಗಿ, ಐತಿಹಾಸಿಕವಾಗಿ ಕನ್ನಡಿಗರು ಯಾವ ಕಾಲಘಟ್ಟದಲ್ಲಿ ಆಂಗ್ಲನಾಡಿಗೆ ಬಂದು ನೆಲೆಸಿದರು ಎಂಬುದು ನಿರ್ದಿಷ್ಟವಾಗಿ ಹೇಳುವುದು ಕಷ್ಟ ಸಾಧ್ಯ.

ಈ ವಿಷಯ ಕುರಿತು ಇತಿಹಾಸವನ್ನು ತಡಕಾಡುತ್ತಾ ಹೋದಲ್ಲಿ ಬಹುಶಃ ನಮಗೆ (Reference Point)  ಎನ್ನುವುದು 1853ನೇ ಇಸವಿ ಇರಬಹುದು. ಬ್ರಿಟಿಷರು ತನ್ನ ಸಾಮ್ರಾಜ್ಯವನ್ನು ಕಸಿದುಕೊಂಡ ಸಂದರ್ಭದಲ್ಲಿ ಅದನ್ನು ಹಿಂದಿರುಗಿಸುವಂತೆ ಅಹವಾಲನ್ನು ರಾಣಿಯ ಮುಂದಿಡಲು, ಕೊಡಗಿನ ರಾಜ ಚಿಕ್ಕವೀರ ರಾಜೇಂದ್ರ ತನ್ನ ಪತ್ನಿ ಮತ್ತು ಮಗಳೊಂದಿಗೆ 1853ರಲ್ಲಿ ಸೌಥ್‌ಹ್ಯಾಂಪ್ಟನ್ ಬಂದರಿಗೆ ಬಂದಿಳಿಯುತ್ತಾನೆ. ಅಲ್ಲಿಂದ ಆತ ರೈಲು ಮಾರ್ಗವಾಗಿ ಲಂಡನ್ ನಗರವನ್ನು ತಲುಪಿ ಇಲ್ಲಿನ ರ್ಯಾಡ್ಲಿ ಹೊಟೇಲಿನಲ್ಲಿ ವಾಸ ಪ್ರಾರಂಭಿಸುತ್ತಾನೆ. ತನ್ನ ಕೋರಿಕೆಯ ಉತ್ತರಕ್ಕಾಗಿ ಕಾಯುತ್ತಾ ಅವನು ಸುಮಾರು 7 ವರ್ಷಗಳನ್ನು ಲಂಡನ್ ನಗರದಲ್ಲೇ ಕಳೆಯಬೇಕಾಗುತ್ತದೆ. ಇದೇ ಸಮಯದಲ್ಲಿ ದುರದೃಷ್ಟವಶಾತ್ ಅವನ ಆರೋಗ್ಯ ಹದೆಗೆಟ್ಟು ಲಂಡನ್ ನಗರದಲ್ಲೇ ಅವನು ಸಾವನ್ನಪ್ಪುತ್ತಾನೆ. ರಾಜ ಚಿಕ್ಕವೀರ ರಾಜೇಂದ್ರನ ಸಮಾಧಿ ಈಗಲೂ ಲಂಡನ್ ನಗರದ ಕೆನ್‌ಸಲ್ ಗ್ರೀನ್ ಸ್ಮಶಾನದಲ್ಲಿದೆ. ಗಮನಿಸಬೇಕಾದ ಅಂಶ ಏನೆಂದರೆ! ರಾಜ ಚಿಕ್ಕವೀರ ರಾಜೇಂದ್ರ ವ್ಯಾಸಂಗಕ್ಕಾಗಲಿ, ಉದ್ಯೋಗವನ್ನರಸಿಯಾಗಲಿ ಅಥವಾ ಇಲ್ಲಿ ನೆಲೆಸುವ ಉದ್ದೇಶದಿಂದಾಗಲಿ ಬಂದಿರಲಿಲ್ಲ. ಹೀಗಿದ್ದರೂ ಅವನು ಇಲ್ಲೇ ಶಾಶ್ವತವಾಗಿ ನೆಲೆಸುವಂತಹ ಪರಿಸ್ಥಿತಿ ನಿರ್ಮಾಣವಾಯಿತು.

ತಂದೆಯ ಸಾವಿನ ನಂತರ ಸುಮಾರು 10 ವರ್ಷದ ಹುಡುಗಿ ಗೌರಮ್ಮ ತನ್ನನ್ನು ದತ್ತು ಪಡೆದ ರಾಣಿಯ ಆಶ್ರಯದಲ್ಲಿ ಲಿಂಗಾಯತ ಧರ್ಮವನ್ನು ತ್ಯಜಿಸಿ ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿ ರಾಜಕುಮಾರಿಯಂತೆ ಸಕಲ ಸೌಲತ್ತಿನೊಂದಿಗೆ ಬೆಳೆಯುತ್ತಾಳೆ. ಪ್ರಾಪ್ತ ವಯಸ್ಸಿಗೆ ಬಂದಾಗ ರಾಣಿಯು ಗೌರಮ್ಮಳ ಮದುವೆಯನ್ನು ಇವಳಂತೆ ದತ್ತು ಪಡೆದಿದ್ದ ರಾಜಕುಮಾರ ದುಲಿಪ್‌ಸಿಂಗ್‌ನೊಂದಿಗೆ ನೆರವೇರಿಸಲು ಮುಂದಾದಾಗ ಆ ಮದುವೆಯನ್ನು ನಿರಾಕರಿಸಿ ಗೌರಮ್ಮ ತನಗಿಂತ ಮೂವತ್ತು ವರ್ಷ ಹಿರಿಯನಾದ ಲೆಫ್ಟಿನಂಟ್ ಕರ್ನಲ್ ಜಾನ್ ಕಾಂಪಬೆಲ್‌ನನ್ನು ವರಿಸಿ ಇಲ್ಲೇ ಸಂಸಾರ ಹೂಡುತ್ತಾಳೆ. 1864ನೇ ಇಸವಿಯಲ್ಲಿ ಕಾಯಿಲೆಯಿಂದ ಬಳಲುತ್ತಿದ್ದ ಗೌರಮ್ಮ ವಿಧಿವಶಳಾಗುತ್ತಾಳೆ. ಇವಳ ಸಮಾಧಿಯು ಲಂಡನ್ ನಗರದ ಬ್ರಾಂಪ್ಟನ್ ಸ್ಮಶಾನದಲ್ಲಿದೆ. ಗೌರಮ್ಮಳು ಸಹ ಇಲ್ಲಿ ನೆಲೆಸುವ ಯಾವ ಉದ್ದೇಶದಿಂದಲೂ ಆಂಗ್ಲನಾಡಿಗೆ ಬಂದವಳಾಗಿರಲಿಲ್ಲ.

ಈಗ ಇಲ್ಲಿ ನೆಲೆಸಿರುವ ಕನ್ನಡಿಗರ ಸ್ಥಿತಿ ಕೂಡ ಮೇಲೆ ಹೇಳಿದ ಇಬ್ಬರಿಗಿಂತ ಭಿನ್ನವಾಗೇನೂ ಇಲ್ಲ. ‘‘ಇಲ್ಲಿ ಸ್ವಲ್ಪ ವರ್ಷ ಇದ್ದು ಚೂರು ದುಡ್ಡು ಸಂಪಾದಿಸಿಕೊಂಡು ನಮ್ಮೂರಿಗೆ ಮರಳಿ ಹೋಗೋಣಾಂತ ಬಂದಿದ್ದೆವು’’ ಎಂದು ಕೆಲವರು ಹೇಳಿದರೆ, ‘‘ಸುಮ್ಮನೆ ಒಂದು ಅವಕಾಶ ಸಿಕ್ಕಿದೆ ಇಂಗ್ಲೆಂಡ್ ನೋಡಿಕೊಂಡು ಚೂರು ಕಾಸು ಮಾಡಿಕೊಂಡು ಬರೋಣ ಅಂತ ಬಂದಿದ್ದೆವು’’! ಅಂತ ಇನ್ನು ಕೆಲವರು ಹೇಳುತ್ತಾರೆ. ಮೊದಲಿನ ಮಾತುಗಳನ್ನು 70, 80ರ ದಶಕಗಳಲ್ಲಿ ವಲಸೆ ಬಂದಂತಹ (doctor)ಗಳು ಹೇಳಿದರೆ, ಎರಡನೇ ಮಾತುಗಳನ್ನು 90, 2000 ದಶಕಗಳಲ್ಲಿ ವಲಸೆ ಬಂದ (engineer)ಗಳು ಹೇಳುತ್ತಾರೆ. ಒಟ್ಟಿನಲ್ಲಿ ಬೇಕಾಗಿಯೋ, ಬೇಡವಾಗಿಯೋ ಇಂಗ್ಲೆಂಡಿಗೆ ಬಂದ ಕನ್ನಡಿಗರು ಇಲ್ಲಿ ಶಾಶ್ವತವಾಗಿ ನೆಲೆಯೂರಿದ್ದಂತೂ ಸುಳ್ಳಲ್ಲ.

ಹಾಗಾದರೆ ಬಂದವರೆಲ್ಲಾ ಮರಳಿ ಹೋಗೇ ಇಲ್ಲವಾ? ಖಂಡಿತಾ ಹೋಗಿದ್ದಾರೆ. ತಾಯಿನಾಡಿಗೆ ತಮ್ಮ ಕೊಡುಗೆ ನೀಡುವ ಇಚ್ಛೆಯಿಂದಲೋ ಅಥವಾ ಸಾಂಸಾರಿಕ ಜವಾಬ್ದಾರಿಯನ್ನು ನಿರ್ವಹಿಸಲೆಂದು ಅಥವಾ ಇಲ್ಲೇ ನೆಲೆಯೂರಲು ವೀಸಾ ಸಿಗದ ಕಾರಣಕ್ಕೋ ಕೆಲವರು ಮರಳಿ ಹೋಗಿದ್ದಾರೆ. ಆದರೆ ಅಂತಹವರ ಸಂಖ್ಯೆ ತೀರಾ ಕಡಿಮೆ.

1970, 1980ರ ದಶಕದಲ್ಲಿ ಇಲ್ಲಿನ ಆರೋಗ್ಯ ಇಲಾಖೆಯಲ್ಲಿ ಡಾಕ್ಟರ್‌ಗಳ ಬೇಡಿಕೆ ಅತ್ಯಧಿಕವಾಗಿತ್ತು. ಆ ಕಾಲದಲ್ಲಿ ಕರ್ನಾಟದಿಂದ ಅನೇಕ (MBBS) ಮತ್ತು (MD) ಪದವೀಧರರು ಇಲ್ಲಿಗೆ ಉದ್ಯೋಗ ಅರಸಿಕೊಂಡು ಬಂದು ಇಲ್ಲಿಯೇ ನೆಲೆಸಿದರು. ಮುಂದೆ 2000ದ ನಂತರದ ದಶಕಗಳಲ್ಲಿ (IT BOOM)ನಿಂದಾಗಿ ಹೆಚ್ಚು ಹೆಚ್ಚು (engineer)ಗಳು ಇಲ್ಲಿ ಬಂದು ನೆಲೆಸುವಂತಾಯಿತು. ಇವರ ಜೊತೆಗೆ ಇದೇ ಸಮಯದಲ್ಲಿ nurseಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ವಾಸಹೂಡಿದ್ದಾರೆ. ಇವರಷ್ಟೆ ಅಲ್ಲದೆ ಇಲ್ಲಿ ಉನ್ನತ ಶಿಕ್ಷಣಕ್ಕಾಗಿ ಬಂದು ತರುವಾಯ ತಮಗೆ ಲಭ್ಯವಾದ ಉದ್ಯೋಗಗಳನ್ನು ಬಳಸಿಕೊಂಡು ಇಲ್ಲೇ ನೆಲೆಯೂರಿದವರು ಹಾಗೂ (Taxi) ಚಾಲನೆಗಾಗಿ ಬಂದಂತಹ ಕನ್ನಡಿಗರೂ ಇದ್ದಾರೆ. ಆದರೆ ಮೊದಲನೇ ಎರಡು ವಿಧದ ಕನ್ನಡಿಗರಿಗೆ ಹೋಲಿಸಿದರೆ ಎರಡನೇ ವಿಧದ ಕನ್ನಡಿಗರು ಬಹಳ ಕಡಿಮೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶ ಏನೆಂದರೆ ಇವರ್ಯಾರು ಅಕ್ರಮವಾಗಿ ಇಂಗ್ಲೆಂಡಿಗೆ ಬಂದವರಲ್ಲ. ಇದು ಕನ್ನಡಿಗರ ಹೆಗ್ಗಳಿಕೆ.

ಸ್ವಾಭಾವಿಕವಾಗಿ ತಾಯಿನಾಡಿನಿಂದ ದೂರ ನೆಲೆಸಿರುವ ಯಾರಿಗೇ ಆಗಲಿ ತನ್ನ ಭಾಷೆ, ಸಂಸ್ಕೃತಿ ಪರಂಪರೆಗಳ ಬಗ್ಗೆ ಅಭಿಮಾನ ಮತ್ತು ಅವುಗಳನ್ನು ಬೆಳೆಸುವ ಉಳಿಸುವ ಹಂಬಲ ಇದ್ದೇ ಇರುತ್ತದೆ. ಇಂತಹ ಹಂಬಲದ ಪ್ರಯತ್ನವಾಗಿಯೇ ಇಲ್ಲಿ ಕನ್ನಡಿಗರ ಅನೇಕ ಸಂಘ-ಸಂಸ್ಥೆಗಳು ಹುಟ್ಟಿಕೊಂಡಿರುವುದು. 1980ರ ದಶಕದಲ್ಲಿ (doctor)ಗಳ ಗುಂಪೊಂದು ಸೇರಿಕೊಂಡು ಚಿಕ್ಕದಾಗಿ ಸ್ಥಾಪಿತಗೊಂಡ ಕನ್ನಡ ಬಳಗ ಇಂದು ವಿಶ್ವದಾದ್ಯಂತ ಹೆಸರು ವಾಸಿಯಾಗಿದೆ. ಹಾಗೆಯೇ 2000ದ ದಶಕದಲ್ಲಿ (engineer)ಗಳ ಗುಂಪೊಂದು ಸೇರಿ ರೆಡಿಂಗ್ ನಗರದಲ್ಲಿ ಸ್ಥಾಪಿಸಿದ ಕನ್ನಡಿಗರು ಯುಕೆ ಎಂಬ ಸಂಸ್ಥೆ ಕೂಡ ತಕ್ಕ ಮಟ್ಟಿಗೆ ಹೆಸರು ವಾಸಿಯಾಗಿದೆ. ಇವುಗಳಲ್ಲದೆ ಹ್ಯಾರೋ ಕುವೆಂಪು ಕನ್ನಡ ಸಂಘ, ಸ್ವಿಂಡನ್ ಕನ್ನಡ ಬಳಗ, ಕನ್ನಡ ಸಂಘ ನಾರ್ಥ್ ಯುಕೆ ಹಾಗೂ ಸ್ಕಾಟ್‌ಲ್ಯಾಂಡ್ ಕರ್ನಾಟಕ ಸಂಘ ಮತ್ತು ಇನ್ನೂ ಅನೇಕ ಸಂಘಗಳು ಒಂದಕ್ಕೊಂದು ಪೈಪೋಟಿಯಂತೆ ತಮ್ಮ ಪರಿಮಿತಿಯಲ್ಲೇ ಕನ್ನಡ ಕಾರ್ಯಕ್ರಮಗಳನ್ನು ಅನೇಕ ವರ್ಷಗಳಿಂದ ಹಮ್ಮಿಕೊಳ್ಳುತ್ತಿವೆ. ಈಗ ಸಂಘಗಳು ಮತ್ತು ಇಲ್ಲಿ ಆಯೋಜಿಸಲಾಗುವ ಕಾರ್ಯಕ್ರಮಗಳು ತನ್ನವರೊಂದಿಗೆ ಒಡನಾಡಲು ಕನ್ನಡಿಗರಿಗೆ ಇರುವ ಕೇಂದ್ರ ಬಿಂದು ಅಂದರೆ ತಪ್ಪಾಗಲಾರದು.

ಅಮೆರಿಕ ಹಾಗೂ ಆಸ್ಟ್ರೇಲಿಯ ದೇಶಗಳಿಗೆ ಹೋಲಿಸಿದರೆ ಇಂಗ್ಲೆಂಡಿನಲ್ಲಿ ನೆಲೆಸಿರುವ ಕನ್ನಡಿಗರ ಸಂಖ್ಯೆ ಮತ್ತು ಸಂಸ್ಥೆಗಳ ಸಂಖ್ಯೆ ಕಡಿಮೆ ಅನ್ನಿಸಿದರೂ ತಪ್ಪಿಲ್ಲ. ಅಮೆರಿಕದ ಶೇ.10 ವಿಸ್ತಾರವುಳ್ಳ ಮತ್ತು ಆಸ್ಟ್ರೇಲಿಯದ ಶೇ.20 ವಿಸ್ತಾರವುಳ್ಳ ಪುಟ್ಟ ದೇಶ ಬ್ರಿಟನ್‌ನಲ್ಲಿ, ಇಂಗ್ಲೆಂಡ್, ವೇಲ್ಯ, ನಾರ್‌ರ್ಧನ್ ಐರ್‌ಲ್ಯಾಂಡ್ ಮತ್ತು ಸ್ಕಾಟ್‌ಲ್ಯಾಂಡ್ ಒಳಗೊಂಡಂತೆ ಒಟ್ಟು ಕನ್ನಡಿಗರ ಸಂಖ್ಯೆ ಸುಮಾರು 8,000 ಇರಬಹುದು. ಅದರಲ್ಲೂ ಸರಿಸುಮಾರು 2,000ದಷ್ಟು (floating) (population) ಎಂದು ಹೇಳಲಾಗುತ್ತದೆ. ಅಂದರೆ ಇವರು ಇಲ್ಲಿ ಶಾಶ್ವತವಾಗಿ ನೆಲೆ ಊರಿದವರಲ್ಲ. ತಮ್ಮ ಉದ್ಯೋಗದ ನಿಮಿತ್ತ ಅಲ್ಪ ಸಮಯದವರೆಗೆ ಇಲ್ಲಿ ನೆಲೆಸಲು ಬಂದು ಮತ್ತೆ ಮರಳಿ ತಮ್ಮ ನಾಡಿಗೆ ಹಿಂದಿರುಗುವಂತಹವರು. ಗಮನಿಸಿಬೇಕಾದ ಮುಖ್ಯ ಅಂಶ ಏನೆಂದರೆ ಇಲ್ಲಿ ನೆಲೆಸಿರುವ ಬಹುಪಾಲು ಕನ್ನಡಿಗರು (doctor, engineer) ಅಥವಾ ಇನ್ನಾವುದೋ ಉದ್ಯೋಗ ಅವಲಂಬಿತರೇ ಹೊರತು ಭೂತಗನ್ನಡಿ ಹಿಡಿದು ಹುಡುಕಿದರೂ ಉದ್ಯಮಿಗಳು ಸಿಗಲಾರರು. ಈ ಮಾತಿಗೆ ಅಪವಾದ ಎಂಬಂತೆ ಸಿಕ್ಕರೂ ನಿಫ್ಟಿ ಲಾಜಿಸ್‌ಟಿಕ್‌ನ ಶರತ್ ಅಯ್ಯರ್‌ನಂತಹ ಒಬ್ಬರೋ ಇಬ್ಬರನ್ನೋ ಮಾತ್ರ ಹೆಸರಿಸಲು ಸಾಧ್ಯ. ವಿದ್ಯಾಭ್ಯಾಸ, ಹಣ, ವರ್ಚಸ್ಸು ಎಲ್ಲವನ್ನೂ ಹೊಂದಿರುವ ಕನ್ನಡಿಗರು ಆಂಟರ್‌ಪ್ರೆನರ್‌ಶಿಪ್ಪ್ ಕಡೆ ಒಲವು ತೋರದಿರುವುದು ಆಶ್ಚರ್ಯ.

ತಮ್ಮವರೊಡನೆ ಬೆಸಯಲು ಸದಾ ತವಕಿಸುವ ಕನ್ನಡಿಗರು ತಾವು ನಿರ್ಮಿಸಿಕೊಂಡ ಸಂಸ್ಥೆಗಳಲ್ಲಿ ವರ್ಷಕ್ಕೆ ಕನಿಷ್ಠ 3 ಅಥವಾ 4 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಪ್ರತೀತಿ. ಇವುಗಳಲ್ಲಿ ಯುಗಾದಿ, ದೀಪಾವಳಿಗಳಲ್ಲದೆ ಕರ್ನಾಟಕ ರಾಜ್ಯೋತ್ಸವವನ್ನೂ ಅದ್ದೂರಿಯಾಗಿ ಆಚರಿಸುವುದು ಇದೆ. ಈ ಕಾರ್ಯಕ್ರಮಗಳ ಉದ್ದೇಶವೆಂದರೆ ಸ್ಥಳೀಯ ಕಲಾಕಾರರಿಗೆ ತಮ್ಮ ಕಲಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವುದು ಒಂದಾದರೆ, ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕರ್ನಾಟಕದಿಂದ ಬರುವ ಅತಿಥಿಗಳೊಡನೆ ಬೆರೆಯುವುದು, ಒಡನಾಡುವುದು ಮತ್ತು ತಮ್ಮ ಸಂಸ್ಕೃತಿಗೆ ಬೆಸೆದುಕೊಳ್ಳುವುದು. ಹೆಚ್ಚಾಗಿ ಇಂತಹ ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳು ಸಿನೆಮಾ ನಟರೆ ಆದರೂ ಆಗೊಮ್ಮೆ ಈಗೊಮ್ಮೆ ಸಾಹಿತಿಗಳು ಮತ್ತು ಅನ್ಯ ಕಲಾವಿದರೂ ಬರುವುದುಂಟು.

ಇನ್ನು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವಿಚಾರವಾಗಿ ತಮ್ಮತನವನ್ನು ಉಳಿಸಲು ಬೆಳೆಸಲು ಬ್ರಿಟನ್‌ನ ಕನ್ನಡಿಗರು ಪಡುತ್ತಿರುವ ಶ್ರಮದಲ್ಲಿ ಎರಡು ಮಾತಿಲ್ಲ! ಇದೆಲ್ಲದರ ಭಾಗವಾಗಿ ಹುಟ್ಟಿಕೊಂಡಂತಹದ್ದು ವಾರಕ್ಕೆ ಒಮ್ಮೆ ನಡೆಸುವ ಕನ್ನಡ ಕಲಿ ಕ್ಲಾಸ್. (Volunteer)ಗಳೇ ನಡೆಸುವ ಈ ಕ್ಲಾಸ್‌ಗಳಲ್ಲಿ (UK)ನಲ್ಲೇ ಹುಟ್ಟಿ ಬೆಳೆದಿರುವ ಕನ್ನಡಿಗರ ಮಕ್ಕಳಿಗೆ ಕನ್ನಡ ಓದುವುದು, ಬರೆಯುವುದು ಮತ್ತು ಮಾತನಾಡುವುದನ್ನು ಹೇಳಿಕೊಡಲಾಗುತ್ತದೆ. ಇದೇ ರೀತಿ ಕನ್ನಡಿಗರ ಮನರಂಜನೆ ಮತ್ತು ಮಾಹಿತಿಗಾಗಿ ಇತ್ತೀಚಿನ ದಿನಗಳಲ್ಲಿ ಶುರುವಾಗಿರುವ, ಅಲ್ಪ ಸಮಯದಲ್ಲೇ ಮನೆ ಮಾತಾಗಿರುವ (BHF) ಕನ್ನಡ ರೇಡಿಯೊ. ಈ ರೇಡಿಯೊವನ್ನು ಹುಟ್ಟು ಹಾಕಿ ಮುನ್ನಡೆಸಿಕೊಂಡು ಹೋಗುತ್ತಿರುವವರು ಶಾಂತಾ ಗಿಣಿಮಾವ್, ಕಿರಣ ಬೆನ್ನೂರ, ರಮಾರಾವ್, ಸರಿತಾ ರಾಹುಲ್, ಕವಿತಾ ಶಂಕರ, ಪೂರ್ಣಿಮಾ ಗಣೇಶಗುಡಿ, ಚೇತನ ಅಯ್ಯರ್ ಹಾಗೂ ಪ್ರತಿಮಾ ಗೌಡ ಮೂಡಿಗೆರೆ ಮುಂತಾದ ಕನ್ನಡತಿಯರ ತಂಡ. ಪ್ರತಿ ವಾರವೂ ಹೊಸ ವಿಷಯಗಳ ಚರ್ಚೆಯೊಂದಿಗೆ ಕನ್ನಡ ಹಾಡುಗಳನ್ನು ಪ್ರಸಾರ ಮಾಡುವ ಈ ಕನ್ನಡತಿಯರ ಪ್ರಯತ್ನ ಶ್ಲಾಘನೀಯ. ಹಾಗೆಯೇ ಹರೀಶ ರಾಮಯ್ಯ ಎಂಬ ಕನ್ನಡಿಗರು ನಡೆಸುತ್ತಿರುವ ಕನ್ನಡ (TV) ಚಾನೆಲ್ ಕೂಡ ತುಂಬ ಯಶಸ್ವಿ ಪ್ರಯತ್ನವಾಗಿದೆ.

ತಮ್ಮ ಭಾಷೆ, ಸಂಸ್ಕೃತಿ ಸಾಧನೆಗಳನ್ನು ತಾವಷ್ಟೇ ಅಭಿಮಾನದಿಂದ ನೋಡದೆ, ಇವುಗಳನ್ನು ಬ್ರಿಟಿಷರಿಗೂ ಪರಿಚಯಿಸುವ ಪ್ರಯತ್ನ ಆಗಾಗ ಕನ್ನಡಿಗರಿಂದ ಆಗಿರುವುದು ನಿಜ. ಇವುಗಳಲ್ಲಿ ಮುಖ್ಯವಾಗಿ ಹೇಳುವುದಾದರೆ ಬ್ರಿಟಿಷ್ ಪಾರ್ಲಿಮೆಂಟ್ ಎದುರು ಸ್ಥಾಪನೆಗೊಂಡಿರುವ ಜಗಜ್ಯೋತಿ, ವಿಶ್ವಗುರು ಬಸವಣ್ಣನವರ ಪ್ರತಿಮೆಯಾದರೆ, ಕನ್ನಡ ಬಳಗದ ಮಾಜಿ ಅಧ್ಯಕ್ಷ ವಿವೇಕ ತೊಂಟದಾರ್ಯ ಅವರ ಸ್ವಪ್ರಯತ್ನದಿಂದ ಬ್ರಿಟಿಷ್ ಮ್ಯೂಝಿಯಮ್‌ನಲ್ಲಿ ಕನ್ನಡ ಭಾಷೆಯಲ್ಲಿ ಹಾಗೂ (English)ನಲ್ಲಿ ತರ್ಜುಮೆಗೊಂಡು ಬರೆಯಲ್ಪಟ್ಟ ಬಸವಣ್ಣನವರ ವಚನ.

ಹೀಗೆ ಬ್ರಿಟನ್‌ನ ತುಂಬಾ ಚದುರಿ ಹೋಗಿರುವ ಕನ್ನಡಿಗರು ತಮ್ಮ ಕಾರ್ಯ ಕಲಾಪಗಳೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಾ ರಾಜಕೀಯ ರಂಗದಲ್ಲೂ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಕೊಡಗಿನ ಮೂಲದ ಕೇಕಿ ತಮ್ಮಯ್ಯನವರು ಲಂಡನ್ ನಗರದ ಹ್ಯಾರೋ ಕಾಸೆಲ್‌ನ ಮೇಯರ್ ಆಗಿ 90ರ ದಶಕದಲ್ಲೇ ನೇಮಕಗೊಂಡಿದ್ದರು. ಇವರು ಬ್ರಿಟನ್‌ನಲ್ಲಿ ಮೇಯರ್ ಆಗಿ ಆಯ್ಕೆಗೊಂಡ ಮೊದಲ ಕನ್ನಡಿಗರು ಹಾಗೂ ಮೊದಲ Asian ಮೂಲದವರು. ಇವರಲ್ಲದೆ ಸ್ವಿಂಡನ್ ನಗರದ ಪ್ಯಾರಿಸ್ ಕೌನ್ಸಿಲರ್ (Conservative Party)ಯಿಂದ ಆಯ್ಕೆ ಆಗಿರುವ ಸುರೇಶ್ ಘಟ್ಟಪೂರ, ಡಾ. ಕುಮಾರ ನಾಯಕ, ಲೇಬರ್ ಪಾರ್ಟಿಯಿಂದ ನೇಮಕಗೊಂಡಿರುವ ರವಿ ವೆಂಕಟೇಶ ಮತ್ತು ಲಂಡನ್ ನಗರದ ಲ್ಯಾಂಬೆತ್ ಎಂಬ ಸ್ಥಳದ ಮಾಜಿ ಮೇಯರ್ ನೀರಜ ಪಾಟೀಲ ಪ್ರಮುಖರು.

ಬ್ರಿಟಿಷರಿಗೆ ದುಸ್ವಪ್ನವಾಗಿ ಕಾಡುತ್ತಿದ್ದ ಅಪ್ಪಟ ಕನ್ನಡಿಗ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಯುದ್ಧದಲ್ಲಿ ವೀರ ಮರಣ ಹೊಂದಿದ ನಂತರ, ಮೈಸೂರನ್ನು ವಶಪಡಿಸಿಕೊಂಡ ಸಂತೋಷದಲ್ಲಿ ಅದರ ನೆನಪಿನ ಪ್ರತೀಕವಾಗಿ ಆಗಿನ ಬ್ರಿಟಿಷ್ ರಾಜಮನೆತನದವರು ಲಂಡನ್ ನಗರದ ಕ್ಲಾಪ್‌ಹ್ಯಾಮ್ ಜಂಕ್ಷನ್ ಎಂಬ ಜಾಗದಲ್ಲಿ ಒಂದು ರಸ್ತೆಗೆ ಮೈಸೂರು ರೋಡ್ ಎಂದು ನಾಮಕರಣ ಮಾಡಿದ್ದರು. ಈಗಲೂ ಆ ರಸ್ತೆ ಅಲ್ಲಿ ಹಾಗೇ ಇದೆ. ಟಿಪ್ಪುವಿನ ಅನೇಕ ಸಾಮಗ್ರಿಗಳು ಇಲ್ಲಿನ ಮ್ಯೂಝಿಯಮ್‌ನಲ್ಲಿವೆ. ಎಷ್ಟು ಜನ ಕನ್ನಡಿಗರು ತಾವು ನೋಡುವುದಾಗಲಿ, ತಮ್ಮ ಮಕ್ಕಳಿಗೆ ಇವುಗಳನ್ನು ತೋರಿಸಿ ವಿವರಿಸುವುದಾಗಲಿ ಮಾಡಿದ್ದಾರೆ? ಎಷ್ಟು ಜನ ತಮ್ಮ ಮಕ್ಕಳಿಗೆ ನಮ್ಮ ನಾಡಿನ ಜನಪದ, ಸಾಹಿತ್ಯ ವಾದ್ಯಗಳ ಪರಿಚಯ ಮಾಡಿಸಿದ್ದಾರೆ? ಇವೆಲ್ಲವೂ ಕನ್ನಡ ಭಾಷೆ, ಸಂಸ್ಕೃತಿ ಪರಂಪರೆ ಉಳಿಸುವ ಬೆಳೆಸುವ ಭಾಗವಲ್ಲವೇ? ಈ ನಿಟ್ಟಿನಲ್ಲಿ ಬ್ರಿಟನ್‌ನ ಕನ್ನಡಿಗರು ಕಾರ್ಯೋನ್ಮುಖವಾಗುವ ಅಗತ್ಯವಿದೆ.

 ತಮ್ಮ ಪರಿಮಿತಿಯಲ್ಲೇ ಇಷ್ಟೆಲ್ಲಾ ಕಾರ್ಯಗಳನ್ನು ಸಾಧನೆಗಳನ್ನು ಮಾಡಿದರೂ ಕನ್ನಡಿಗರಾಗಿ ಭಾಷೆ, ಸಂಸ್ಕೃತಿಗೆ ಇಷ್ಟು ಮಾಡಿದರೆ ಸಾಕಾ ಎಂಬ ಪ್ರಶ್ನೆ ಕಾಡದಿರದು. ಕನ್ನಡ ಭಾಷೆ ಪಂಪನಿಗಿಂತ ಪುರಾತನವಾದದ್ದು ಮತ್ತು ನಮ್ಮೆಲ್ಲರಿಗಿಂತಲೂ ಹೆಚ್ಚಿನ ಆಯುಷ್ಯ ಪಡೆದಿರುವಂಥದ್ದು. ಅದರ ಅಳಿವು ಉಳಿವುಗಳ ಬಗ್ಗೆ ಆತಂಕ ಬೇಡ. ಮುಖ್ಯವಾಗಿ ಬ್ರಿಟನ್‌ನ ಕನ್ನಡಿಗರು ಅರ್ಥ ಮಾಡಿಕೊಳ್ಳಬೇಕಾದುದೇನೆಂದರೆ, ಕನ್ನಡ ಎಂಬುದು ಬರೀ ಭಾಷೆಯಲ್ಲ! ಈ ಭಾಷೆಗೆ ಅಂಟಿಕೊಂಡಂತಹ ಒಂದು ಸಂಸ್ಕೃತಿ, ಪರಂಪರೆ, ಕಲೆ, ಇತಿಹಾಸ ಇತ್ಯಾದಿಗಳಿವೆ. ಕನ್ನಡವನ್ನು ಕೇವಲ ಕಲಿಕೆಗಾಗಿಯೋ ಇಲ್ಲ ಮನರಂಜನೆಗಾಗಿಯೋ ಅಥವಾ ಸಂಪರ್ಕದ ಸಾಧನವಾಗಿಯೋ ನೋಡಿದರೆ ಬಹುಶಃ ನಾವು ನಮ್ಮ ಸಂಸ್ಕೃತಿಯನ್ನು ಗೌಣವಾಗಿಸಿದಂತೆ ಆಗುತ್ತದೆ. ಪರಂಪರಾಗತವಾಗಿ ಇಲ್ಲಿಯ ಸಂಘ-ಸಂಸ್ಥೆಗಳಲ್ಲಿ ಆಚರಿಸುವ ದೀಪಾವಳಿ, ದಸರಾಗಳೇ ಕನ್ನಡಿಗರ ಆಚರಣೆಗಳೇ? ಕನ್ನಡ ಭಾಷೆ, ಸಂಸ್ಕೃತಿ ಯಾವುದಾದರೂ ಒಂದು ಧರ್ಮದ ಸ್ವತ್ತಾ? ನಾವು ನಿರ್ಮಿಸಿರುವ ಸಂಘಗಳೋ ಕನ್ನಡ ಸಂಘಗಳೇ ಇಲ್ಲಾ ಧಾರ್ಮಿಕ ಸಂಘಟನೆಗಳೋ? ಅಥವಾ ರಾಜ್ಯೋತ್ಸವದಲ್ಲಿ ನಡೆಯುವ ಮನರಂಜನೆ ಕಾರ್ಯಕ್ರಮಗಳೇ ನಮ್ಮ ಸಂಸ್ಕೃತಿಯ ಬೆಳವಣಿಗೆಯೇ? ಮಕ್ಕಳಿಗೆ ಅ, ಆ, ಇ, ಈ ಕಲಿಸಿದರೆ ಅಥವಾ ಕನ್ನಡ ಮಾತನಾಡಲು ಕಲಿಸಿದರೆ ಸಾಕೆ? ಈ ಲೇಖನದ ಪ್ರಾರಂಭದಲ್ಲಿ ಪ್ರಸ್ತಾಪಿಸಿರುವ ಚಿಕ್ಕವೀರ ರಾಜೇಂದ್ರ ಮತ್ತು ಗೌರಮ್ಮಳ ಬಗ್ಗೆ ಎಷ್ಟು ಜನ ಕನ್ನಡಿಗರು ತಿಳಿದುಕೊಂಡಿದ್ದಾರೆ ಮತ್ತು ಅವರಲ್ಲಿ ಎಷ್ಟು ಜನ ತಮ್ಮ ಮಕ್ಕಳಿಗೆ ತಿಳಿಸಿದ್ದಾರೆ. ಎಷ್ಟು ಜನ ಕನ್ನಡಿಗರು ತಮ್ಮ ಮಕ್ಕಳಿಗೆ ಪಾರ್ಲಿಮೆಂಟ್ ಎದುರಿಗಿರುವ ಬಸವಣ್ಣನ ಮೂರ್ತಿಯನ್ನು ತೋರಿಸಿದ್ದಾರೆ. ಇಲ್ಲ ಬ್ರಿಟಿಷ್ ಮ್ಯೂಝಿಯಮ್‌ನಲ್ಲಿ ಬರೆದಿರುವ ವಚನ ಸಾಹಿತ್ಯ ತೋರಿಸುವ ಪ್ರಯತ್ನ ಮಾಡಿದ್ದಾರೆ. ಇಷ್ಟೇ ಏಕೆ, ಬ್ರಿಟಿಷರಿಗೆ ದುಸ್ವಪ್ನವಾಗಿ ಕಾಡುತ್ತಿದ್ದ ಅಪ್ಪಟ ಕನ್ನಡಿಗ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಯುದ್ಧದಲ್ಲಿ ವೀರ ಮರಣ ಹೊಂದಿದ ನಂತರ, ಮೈಸೂರನ್ನು ವಶಪಡಿಸಿಕೊಂಡ ಸಂತೋಷದಲ್ಲಿ ಅದರ ನೆನಪಿನ ಪ್ರತೀಕವಾಗಿ ಆಗಿನ ಬ್ರಿಟಿಷ್ ರಾಜಮನೆತನದವರು ಲಂಡನ್ ನಗರದ ಕ್ಲಾಪ್‌ಹ್ಯಾಮ್ ಜಂಕ್ಷನ್ ಎಂಬ ಜಾಗದಲ್ಲಿ ಒಂದು ರಸ್ತೆಗೆ ಮೈಸೂರು ರೋಡ್ ಎಂದು ನಾಮಕರಣ ಮಾಡಿದ್ದರು. ಈಗಲೂ ಆ ರಸ್ತೆ ಅಲ್ಲಿ ಹಾಗೇ ಇದೆ. ಟಿಪ್ಪುವಿನ ಅನೇಕ ಸಾಮಗ್ರಿಗಳು ಇಲ್ಲಿನ ಮ್ಯೂಝಿಯಮ್‌ನಲ್ಲಿವೆ. ಎಷ್ಟು ಜನ ಕನ್ನಡಿಗರು ತಾವು ನೋಡುವುದಾಗಲಿ, ತಮ್ಮ ಮಕ್ಕಳಿಗೆ ಇವುಗಳನ್ನು ತೋರಿಸಿ ವಿವರಿಸುವುದಾಗಲಿ ಮಾಡಿದ್ದಾರೆ? ಎಷ್ಟು ಜನ ತಮ್ಮ ಮಕ್ಕಳಿಗೆ ನಮ್ಮ ನಾಡಿನ ಜನಪದ, ಸಾಹಿತ್ಯ ವಾದ್ಯಗಳ ಪರಿಚಯ ಮಾಡಿಸಿದ್ದಾರೆ? ಇವೆಲ್ಲವೂ ಕನ್ನಡ ಭಾಷೆ, ಸಂಸ್ಕೃತಿ ಪರಂಪರೆ ಉಳಿಸುವ ಬೆಳೆಸುವ ಭಾಗವಲ್ಲವೇ? ಈ ನಿಟ್ಟಿನಲ್ಲಿ ಬ್ರಿಟನ್‌ನ ಕನ್ನಡಿಗರು ಕಾರ್ಯೋನ್ಮುಖವಾಗುವ ಅಗತ್ಯವಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)