varthabharthi


ವಾರ್ತಾಭಾರತಿ 18ನೇ ವಾರ್ಷಿಕ ವಿಶೇಷಾಂಕ

ಕತೆ

ಅಭೀ ಕಿತ್ನಾ ದೂರ್ ಹೈ?

ವಾರ್ತಾ ಭಾರತಿ : 23 Jan, 2021
ಮಲಯಾಳಂ:ವಿ. ಶನಿಲಾಲ್ ವಿ. ಶಿನಿಲಾಲ್ | ಕನ್ನಡಕ್ಕೆ: ಸುನೈಫ್

‘ಹಾಗೆ ಬಾಲ ಹನುಮ ಸೂರ್ಯನ ಕಡೆಗೆ ನೋಡುತ್ತಾ ಛಂಗನೆ ಜಿಗಿದ...’ ಅಮ್ಮ ಇನ್ನೊಂದು ಕತೆ ಶುರುವಿಟ್ಟಳು.

ಮಗು ಹೂಂಗುಟ್ಟುತ್ತಾ ಕೇಳಿತು. ಎರಡು ದಿನಗಳಿಂದ ಆಕೆ ಹೇಳಿ ಮುಗಿಸಿದ ಕತೆಗಳಿಗೆ ಲೆಕ್ಕವಿಲ್ಲ. ಆದರೂ ಕತೆ ಪುನರಾವರ್ತನೆಯಾದರೆ ‘ಮಾಜೀ, ಇರಿ ಇರಿ, ಈ ಕತೆ ಆಗಲೇ ಮಧ್ಯಾಹ್ನದ ಹೊತ್ತಿಗೆ ಹೇಳಿದ್ದೀರಿ. ರಾಮ ಸೀತೆಯರ ಮದುವೆ ಮತ್ತು ಅಮಿತ್ ಮಾಜಿ ಗುಂಡೇಟು ತಿಂದು ಸಾಯುವ ನಡುವೆ ಹೇಳಿದ್ದು.’ ಎಂದು ಕತೆ ಹೇಳಿದ ಸಂದರ್ಭ ಸಹಿತ ನೆನಪಿಸಿಕೊಳ್ಳುತ್ತಾನೆ ಮಗ.

ಆಗೆಲ್ಲ ಅಮ್ಮ ಕಣ್ಣು ಕಿರಿದು ಮಾಡಿ ನಗುತ್ತಾಳೆ. ಮತ್ತೊಂದು ಕತೆ ಹುಡುಕುತ್ತಾಳೆ.

ಕೊನೆಗೊಮ್ಮೆ ಕತೆಯೆಲ್ಲ ಮುಗಿದಾಗ ಅಮ್ಮ ತನ್ನ ಜನರ ಕತೆಯನ್ನೇ ಹೇಳಿದಳು.

‘ಬೇಟಾ, ಭೂಮಿಯ ಮೇಲೆ ಎಷ್ಟು ದೇಶಗಳಿವೆಯೆಂದು ಗೊತ್ತಾ ನಿನಗೆ?’

‘ಇಲ್ಲ.’

‘ಭೂಮಿಯ ಮೇಲೆ ಎಂಭತ್ತಾರು ದೇಶಗಳಿವೆ. ಆ ಎಂಭತ್ತಾರು ದೇಶಗಳಿಗೆ ಎಂಭತ್ತಾರು ರಾಜರುಗಳಿದ್ದಾರೆ. ಅವರಲ್ಲಿ ಅತ್ಯಂತ ಉತ್ತಮರು ನಾವು, ಭೀಲ್‌ಗಳು. ಭಗವಂತ ಉಳಿದವರನ್ನು ಸೃಷ್ಟಿ ಮಾಡುವ ಮೊದಲೇ ನಮ್ಮನ್ನು ಸೃಷ್ಟಿಸಿದ. ನಮಗಾಗಿ ವಿಂಧ್ಯಾ ಪರ್ವತವನ್ನೇ ಸೀಳಿ ನರ್ಮದೆಯನ್ನು ಹರಿಸಿದ. ನಂತರ ಭಗವಂತ ಹೇಳಿದ: ‘ಈ ನದಿ ನಿನಗಾಗಿ ನಾನು ಸೃಷ್ಟಿ ಮಾಡಿರುವೆ. ಮೀನು ಹಿಡಿದು ತಿನ್ನುತ್ತಾ, ಕಾಡುಗಳಿಂದ ಬೇಕಾದಷ್ಟು ಪಡೆಯುತ್ತಾ, ಬಯಲುಗಳಲ್ಲಿ ಭತ್ತ ಮತ್ತು ಗೋಧಿ ಬೆಳೆಯುತ್ತಾ ನಿನಗಿಲ್ಲಿ ಬದುಕಬಹುದು.’

ಶತ್ರುಗಳಿಂದ ಆತ್ಮರಕ್ಷಣೆಗೆಂದು ಬಿಲ್ಲುಬಾಣಗಳನ್ನೂ ಕೊಟ್ಟ.’

‘ನರ್ಮದೆಯನ್ನು ನೀನು ನೋಡಿಲ್ಲ ಅಲ್ವಾ?’ ಕೇಳಿದಳು ಅಜ್ಜಿ.

‘ಇಲ್ಲ.’

‘ಅದು ಪುಣೆಯ ನಮ್ಮ ಕೇರಿಯಾಚೆ ಹರಿಯುವ ಮೂಲ ನದಿಯ ಹಾಗೆ ಅಲ್ಲ. ಅದಕ್ಕಿಂತ ಎಷ್ಟು ದೊಡ್ಡದಿದೆ ಅಂತ ಗೊತ್ತಾ ನಿನಗೆ?’

‘ಉಂ.’

‘ಭಗವಂತ ಕೊಟ್ಟ ಬಿಲ್ಲು ಬಾಣಗಳನ್ನು ಹೊತ್ತೇ ನಡೆದರು ಭೀಲ್‌ಗಳು. ಹೀಗಿರುವಾಗ ಒಂದು ದಿನ ವಿಂಧ್ಯಾ ಪರ್ವತದ ಅಹಂಕಾರ ಮುರಿದ ಅಗಸ್ತ್ಯಮುನಿ ನರ್ಮದೆಯ ತೀರದ ಮೂಲಕ ದಕ್ಷಿಣಕ್ಕೆ ಹೊರಟಿದ್ದರು. ತಮ್ಮ ನೆಲದಲ್ಲಿ ಹೊರಗಿನ ಮನುಷ್ಯನ ಹೆಜ್ಜೆ ಸದ್ದು ಕೇಳಿ ಭೀಲ್ ವೀರರು ಓಡೋಡಿ ಬಂದರು. ನಾಲ್ಕು ದಿಕ್ಕುಗಳಿಂದಲೂ ಆಯುಧ ಹಿಡಿದು ಅಗಸ್ತ್ಯಮುನಿಯನ್ನು ಬಂಧಿಸಿದರು. ಸುತ್ತ ವೀರಾಧಿವೀರರು ಆಯುಧ ಹಿಡಿದು ನಿಂತಿದ್ದರೂ ಅಗಸ್ತ್ಯ ಮುನಿ ಆ ವ್ಯೆಹವನ್ನು ಭೇದಿಸಿ ನಸುನಗುತ್ತಾ ಹೊರ ಬಂದರು. ಸತ್ಯವಂತರಿಗೆ ಪರಸ್ಪರ ಮನಸ್ಸು ಓದಬಹುದಾಗಿದ್ದ ಕಾಲವದು. ಮುನಿ ಯಾರೆಂದು ಗೊತ್ತಾದ ಕೂಡಲೇ ಭೀಲ್‌ಗಳು ತಲೆಬಾಗಿದರು. ಮುನಿಗೆ ದಕ್ಷಿಣಕ್ಕೆ ಹೋಗುವ ದಾರಿ ತಿಳಿಯಬೇಕಿತ್ತು. ಅವರು ದಕ್ಷಿಣದ ದಿಕ್ಕಿಗೆ ಬೆರಳು ತೋರಿಸಿದರು.

‘ಈ ಕತೆ ಚೆನ್ನಾಗಿಲ್ಲ. ಯುದ್ಧದ ಕತೆ ಹೇಳಜ್ಜಿ.’ ಮಗು ನಡುವೆ ಬಾಯಿ ಹಾಕಿತು. ಅಜ್ಜಿ ಮತ್ತು ಅಮ್ಮ ಏನನ್ನೂ ಹೇಳಲಿಲ್ಲ. ಆಗ ಮಗನೇ ಹೇಳಿದ: ‘ಆ ಅರ್ಧ ಯುದ್ಧ ಬಾಕಿ ಉಂಟಲ್ಲ? ಅದನ್ನು ನಾನೇ ಮಾಡುತ್ತೇನೆ.’ಯಾರೂ ಮಾತನಾಡಲಿಲ್ಲ. ಸುಮಾರು ಸಮಯದ ನಂತರ ಅಮ್ಮ ಕೇಳಿದಳು: ‘ಯಾರೊಂದಿಗೆ?’

ಮುನಿ ಪುನಹ ಕೇಳಿದರು: ‘ಅಭೀ ಕಿತ್ನಾ ದೂರ್ ಹೇ?’

ಭೀಲ್‌ಗಳಿಗೆ ಏನೊಂದೂ ಅರ್ಥವಾಗಲಿಲ್ಲ. ಅವರು ಪರಸ್ಪರ ಮುಖ ನೋಡುತ್ತಾ ನಿಂತರು. ನಕ್ಷತ್ರಗಳನ್ನು ನೋಡಿ ಸಮಯ ಮತ್ತು ಕಾಲವನ್ನು ಹೇಳಬಲ್ಲವರು ಭೀಲ್‌ಗಳು. ಮಳೆಯ ವೃತ್ತಾಂತವನ್ನೂ ಹೇಳಬಲ್ಲವರು. ಆದರೆ, ದೂರ ಮತ್ತು ಸ್ಥಳಗಳನ್ನು ಅಳೆಯುವ ಬಗ್ಗೆ ಅವರು ಯೋಚಿಸಿಯೂ ಇರಲಿಲ್ಲ. ಅನಂತವಾಗಿ ಹಬ್ಬಿರುವ ಆ ಕಾಡು ಅವರ ಸಾರ್ವಜನಿಕ ಸೊತ್ತು. ಒಂದೂರಿನಿಂದ ಇನ್ನೊಂದೂರಿಗೆ ಕೂಗಳತೆಯ ದೂರ. ಅಲ್ಲಿ ಹುಟ್ಟಿದವರು ಯಾರೂ ಊರು ಬಿಟ್ಟು ಹೋಗಿಲ್ಲ. ಸತ್ತವರು ಕೂಡ ಅಲ್ಲೇ ಬದುಕಿದರು. ದೂರದ ಬಗ್ಗೆ ಕೇಳಿದ ಪ್ರಶ್ನೆಗೆ ಭೀಲ್ ತನಗೆ ತಿಳಿದ ಹಾಗೆ ಹೇಳಿದ:

‘ಇತ್ನಾ ಇತ್ನಾ ದೂರ್ ಹೇ!’

ಅವರ ನಿಷ್ಕಲಂಕತೆ ಕಂಡು ಮುನಿಗೆ ಸಹತಾಪ ಮೂಡಿತು. ಮುನಿ ಅವರಿಗೆ ಎಂಭತ್ತೈದು ಯುದ್ಧ ಗೆಲ್ಲಲು ವರ ಕೊಟ್ಟರು.

ಹಾಗೆ ನಮ್ಮ ಅಜ್ಜಂದಿರು ಲೋಕ ಜಯಿಸಲು ಹೊರಟರು. ಆಯುಧ ಎತ್ತಿದ ಭೀಲ್‌ರನ್ನು ಯಾರಿಂದಲೂ ತಡೆಯಲಾಗಲಿಲ್ಲ. ಗೊಂಡರು, ಸಂತಾಲ್ಮಾರರು ಹೆದರಿ ನಡುಗಿದರು. ಎಂಭತ್ತಾರು ದೇಶಗಳಲ್ಲಿ ಎಂಭತ್ತೈದು ದೇಶಗಳನ್ನೂ ಸೋಲಿಸಿದರು. ರಾಕ್ಷಸರು, ದೇವತೆಗಳು ಎಂದು ನೋಡಲಿಲ್ಲ. ಕೊನೆಯದು ಮಾತ್ರ ಅರ್ಧ ಯುದ್ಧ. ಹಾಗೆ ಎಂಭತ್ತೈದೂವರೆ ಯುದ್ಧ ಮಾಡಿದರು ಭೀಲ್‌ಗಳು. ಇನ್ನು ಬಾಕಿ ಅರ್ಧ ಯುದ್ಧ ಮಾತ್ರ. ಅದು ಮುಗಿದರೆ ಭೂಮಿ ಭೀಲರ ಕಾಲಡಿಯಲ್ಲಿ.

ಸ್ವಲ್ಪ ಸಮಯ ಸಿಕ್ಕಿದ್ದರೆ ನಮ್ಮ ಹಿರಿಯರು ಬಿಳಿಯರನ್ನು ಸೋಲಿಸುತ್ತಿದ್ದರು. ಆದರೆ, ಅವರು ಅರ್ಧದಲ್ಲಿ ನಿಲ್ಲಿಸಿ ಹೊರಟು ಹೋದರು. ಅವರ ಬದಲಿಗೆ ಬಂದವರು ಇನ್ಯಾರೋ ಹೊಸಬರು. ನಮ್ಮ ಅರ್ಧ ಯುದ್ಧ ಅಲ್ಲೇ ಬಾಕಿಯುಳಿಯಿತು.

‘ಮಾಜೀ, ಆಮೇಲೆ ಬಂದವರು ಯಾರು?’

‘ಆಮೇಲೆ ಬಂದವರು ಹೊಸಬರು.’

ಸುಮಾರು ಹೊತ್ತಿನಿಂದ ಮೌನವಾಗಿಯೇ ಇದ್ದ ಅಜ್ಜಿ ಈಗ ಕತೆ ಮುಂದುವರಿಸುತ್ತಿದ್ದಾಳೆ. ಆಕೆಗೆ ಕತೆಗಳು ನೂರಾರು ಗೊತ್ತಿದ್ದರೂ ಹಾಗೆಲ್ಲ ಬಾಯಿ ತೆರೆಯುವವಳಲ್ಲ.

‘ಕಂಪೆನಿಯವರು.’

‘ಅವರು ಯಾಕೆ ನಮ್ಮಂದಿಗೆ ಯುದ್ಧಕ್ಕೆ ಬಂದದ್ದು?’

‘ಅವರು ಯುದ್ಧಕ್ಕೆ ಬಂದದ್ದಲ್ಲ ಕಂದಾ.’

‘ಮತ್ತೆ?’

‘ಭಗವಂತ ಭೀಲ್‌ಗೋಸ್ಕರ ಪರ್ವತ ಸೀಳಿ ಹರಿಸಿದ ನರ್ಮದೆಯನ್ನು ತಡೆದು ನಿಲ್ಲಿಸಲು.’

‘ಉಂ.’

‘ಬೇಟಾ, ನಮ್ಮ ಹಳ್ಳಿ ಇದ್ದದ್ದು ನದಿತೀರದ ಮರಳು ಭೂಮಿಯಲ್ಲಿ. ಗದ್ದೆಗಳಲ್ಲಿ ನಾವು ಹದಿನಾಲ್ಕು ತರದ ಗೋಧಿ ಮತ್ತು ಒಂಭತ್ತು ತರದ ಭತ್ತ ಬೆಳೆದೆವು. ಹೆಸರು, ಬೇಳೆಕಾಳುಗಳು, ತರಕಾರಿಗಳನ್ನು ಮನಬಂದಂತೆ ತಿಂದೆವು. ಅದು ಸಮೃದ್ಧಿಯ ಕಾಲ. ನಮ್ಮ ಹಳ್ಳಿಯಲ್ಲಿ ಯಾರೂ ಹಸಿದು ಮಲಗುತ್ತಿರಲಿಲ್ಲ. ನದಿ ಬೇಕಾದಷ್ಟು ಮೀನುಗಳನ್ನು ಕೊಟ್ಟಿತು. ಗದ್ದೆ ಧಾನ್ಯಗಳನ್ನೂ ಕೊಟ್ಟಿತು. ಕಾಡಿನಲ್ಲಿ ಆಹಾರಕ್ಕೆ ಯಾವ ಕೊರತೆಯೂ ಇರಲಿಲ್ಲವಾದ್ದರಿಂದ ಕಾಡುಪ್ರಾಣಿಗಳು ಕೂಡ ನಮ್ಮ ತಂಟೆಗೆ ಬರಲಿಲ್ಲ.’

ಮಗು ಅದರ ಪುಟ್ಟ ಭಾವನೆಗೆ ನಿಲುಕುವಷ್ಟು ದೊಡ್ಡದಾದ ನದಿ ಮತ್ತು ಅದರ ತೀರದ ಗ್ರಾಮವನ್ನು ಸೃಷ್ಟಿಸಿಕೊಂಡಿತು. ಅವ ಸಮೃದ್ಧವಾದ ಗೋಧಿ ತೆನೆಗಳ ನಡುವೆ ಗೆಳೆಯರೊಂದಿಗೆ ಕಣ್ಣಾಮುಚ್ಚಾಲೆ ಆಡಿದ.

‘ಹೀಗಿರುವಾಗ ನೋಡು, ಒಂದು ದಿನ ಅವರು ನಮ್ಮ ಹಳ್ಳಿಗೆ ಬಂದರು. ನಮಗೆ ಏನೊಂದೂ ಅರ್ಥವಾಗಲಿಲ್ಲ. ಯಂತ್ರಗಳಿಂದಲೂ ಸಂಕೋಲೆಗಳಿಂದಲೂ ಅವರು ನಮ್ಮ ನೆಲವನ್ನು ಅಳೆದರು. ಯಾವ ಪ್ರಶ್ನೆಗಳಿಗೂ ಅವರು ಉತ್ತರಿಸಲಿಲ್ಲ. ಕೊನೆಗೆ ನಮ್ಮ ಊರ ಪಂಚಾಯಿತಿ ಸೇರಿತು. ಇನ್ನೊಂದು ಅರ್ಧ ಯುದ್ಧ ಬಾಕಿ ಉಂಟಲ್ಲ. ಅದನ್ನು ಮಾಡಿ ಮುಗಿಸುವುದೆಂದೇ ತೀರ್ಮಾನಿಸಿದೆವು. ಬಿಲ್ಲುಗಳು ಹೆದೆಯೇರಿದವು. ಕಲ್ಲು ಕವಣೆಗಳು ಆಯುಧಗಳಾದವು. ನಾವು ಯುದ್ಧಕ್ಕೆ ನಿಂತೇ ಬಿಟ್ಟೆವು.’

‘ಹಾಗೆ ಅವರನ್ನು ಸೋಲಿಸಿದರಾ?’ ಮಗು ಆವೇಶದಿಂದ ಕೇಳಿತು.

‘ಇಲ್ಲ ಬೇಟಾ. ವರ್ಷಗಳಿಂದ ಆಯುಧ ಮುಟ್ಟದಿದ್ದ ನಮ್ಮ ಗಂಡಸರು ಯುದ್ಧ ವಿಧಾನಗಳನ್ನೇ ಮರೆತಿದ್ದರು. ಬಂದವರ ಬಳಿ ತುಪಾಕಿಗಳಿದ್ದವು. ನಾವು ಸೋತು ಹೋದೆವು. ಗುಂಡೇಟಿಗೆ ಸತ್ತ ವಿಲೋಮ್ ಭೀಲ್‌ರನ್ನು ಅವರು ನರ್ಮದೆಗೆ ಎಸೆದರು. ಬೇರೆ ದಾರಿ ಇಲ್ಲದೆ ಹಿರಿಯರು ಅವರ ಒಪ್ಪಂದಗಳಿಗೆ ಒಪ್ಪಿದರು. ಅಗತ್ಯಕ್ಕೆ ಬೇಕಾದಷ್ಟು ಕೃಷಿಭೂಮಿ ಮತ್ತು ನೀರು ಕೊಡುತ್ತೇವೆ ಎಂದು ಅವರ ಒಪ್ಪಂದ. ಹಾಗೆ ಹಸಿರು ಗದ್ದೆಗಳನ್ನೂ, ಬಿದಿರ ಗುಡಿಸಲುಗಳನ್ನೂ ಬಿಟ್ಟು ನಾವು ಕಾಡೊಳಗೆ ಸೇರಿಕೊಂಡೆವು. ಆಗ ನಿನ್ನಮ್ಮ ನನ್ನ ಹೊಟ್ಟೆಯಲ್ಲಿದ್ದಳು.’

ಹೋರಾಡದೆಯೇ ಸೋತ ಕತೆ ಕೇಳಿ ಮಗುವಿಗೆ ಬೇಸರವಾಯಿತು. ಅಜ್ಜಿ ಕತೆ ಮುಂದುವರಿಸಿದಳು.

‘ಇದರ ನಡುವೆ ಇಂಡಿಯಾದ ಮಹಾರಾಣಿ ಬಂದು ಅಣೆಕಟ್ಟೆಗೆ ಅಡಿಗಲ್ಲನ್ನೂ ಹಾಕಿದಳು. ಆಕೆ ಸುಂದರಿಯಾಗಿದ್ದಳು. ಆ ದಿನ ನಾವು ಕಾಡೊಳಗೆ ಅವಳ ವಿರುದ್ಧ ಒಂದು ಪೂಜೆ ಮಾಡಿದೆವು. ಮನುಷ್ಯರು ಮತ್ತು ಪ್ರೇತಗಳು ಒಟ್ಟಿಗೆ ಸೇರಿ ಭೂತಗಳನ್ನು ಛೂ ಬಿಟ್ಟೆವು. ನಮ್ಮೂರಿಗೆ ಬಂದು ಹೋದ ಎಂಟನೇ ದಿನಕ್ಕೆ ಮಹಾರಾಣಿ ಕೊಲೆಯಾದಳು. ಈ ಗುಟ್ಟನ್ನು ನೀನು ಹೊರಗೆಲ್ಲೂ ಹೇಳಬಾರದು ಆಯ್ತೆ. ನಮ್ಮ ಮಂತ್ರಕ್ಕೆ ಅಷ್ಟೊಂದು ಶಕ್ತಿಯಿದೆ.’

‘ನಾವು ಸುಮಾರು ಕಾಲ ಪ್ರತಿಭಟನೆ ಮಾಡುತ್ತಾ ಸಮಯ ಕಳೆದೆವು. ಕೊನೆಗೊಂದು ಮಳೆಗಾಲದಲ್ಲಿ ನರ್ಮದೆಯ ನೀರು ಏರುತ್ತಾ ಬಂತು. ನಾವು ನೋಡುತ್ತಿದ್ದಂತೆಯೇ ನಮ್ಮ ಗದ್ದೆಗಳು ಮುಳುಗಿದವು. ಗದ್ದೆಬದುಗಳೂ, ಬಿದಿರುಕಾಲುಗಳಲ್ಲಿ ನಿಂತಿದ್ದ ಗುಡಿಸಲುಗಳೂ ಕ್ರಮೇಣ ದೊಡ್ಡ ಮರಗಳೂ ಅವುಗಳ ಮೇಲೆ ವಾಸವಿದ್ದ ನಮ್ಮ ಹಿರಿಯರೂ ಮುಳುಗಿದರು. ಅದೊಂದು ಅದ್ಭುತವೇ ಆಗಿತ್ತು. ಭಗವಂತ ತೋಡಿದ ನದಿಯನ್ನು ಮನುಷ್ಯರು ತಡೆದು ನಿಲ್ಲಿಸಿದರು. ಬೇರೆ ದಾರಿಯಿಲ್ಲದೆ ನಾವು ದಟ್ಟಡವಿಗೆ ವಾಸ ಬದಲಿಸಿದೆವು.’

‘ಈ ಕತೆ ಚೆನ್ನಾಗಿಲ್ಲ. ಯುದ್ಧದ ಕತೆ ಹೇಳಜ್ಜಿ.’ ಮಗು ನಡುವೆ ಬಾಯಿ ಹಾಕಿತು. ಅಜ್ಜಿ ಮತ್ತು ಅಮ್ಮ ಏನನ್ನೂ ಹೇಳಲಿಲ್ಲ. ಆಗ ಮಗನೇ ಹೇಳಿದ: ‘ಆ ಅರ್ಧ ಯುದ್ಧ ಬಾಕಿ ಉಂಟಲ್ಲ? ಅದನ್ನು ನಾನೇ ಮಾಡುತ್ತೇನೆ.’

ಯಾರೂ ಮಾತನಾಡಲಿಲ್ಲ. ಸುಮಾರು ಸಮಯದ ನಂತರ ಅಮ್ಮ ಕೇಳಿದಳು: ‘ಯಾರೊಂದಿಗೆ?’

‘ಮಾ, ನನಗೆ ಜೋರು ಹೊಟ್ಟೆ ಹಸಿವಾಗ್ತಿದೆ.’

ಚೋಲಿಯ ಸೆರಗಿನಲ್ಲಿ ಗಂಟುಕಟ್ಟಿಕೊಂಡಿದ್ದ ಒಂದು ರೊಟ್ಟಿ ಮತ್ತು ಹಸಿಮೆಣಸಿನ ತುಂಡನ್ನು ಅಮ್ಮ ಮಗುವಿನ ಬಾಯಿಗೆ ಹಿಡಿದಳು. ಕೊನೆಯ ರೊಟ್ಟಿ.

‘ಬೇಟಾ, ನೀನು ಈ ನಡುರಾತ್ರಿಯಲ್ಲಿ ಮೊದಲು ನಿನ್ನ ಹಸಿವಿನೊಂದಿಗೆ ಯುದ್ಧ ಮಾಡು.’ ಅಜ್ಜಿ ಹೇಳಿದಳು.

‘ಹಳ್ಳಿಯನ್ನು ನೀರು ನುಂಗಿದರೂ, ದಾರಿದ್ರ್ಯ ಬೇಟೆಯಾಡಿದರೂ ಅಲ್ಲಿಂದ ಹೊರಟು ಹೋಗಲು ನಮಗೆ ಮನಸ್ಸಾಗಲಿಲ್ಲ. ನಿನಗೆ ಆಗ ಒಂದು ವರ್ಷ ಪ್ರಾಯ.’ ಅಜ್ಜಿ ಈಗ ಮಗಳೊಂದಿಗೆ ಮಾತನಾಡುತ್ತಿದ್ದಳು.

‘ಬೇಸಿಗೆ ಬಂದರೆ ನದಿಯ ನೀರು ತಗ್ಗುತ್ತದೆ. ಆಗ ನಾವು ನಮ್ಮ ಹಳೆಯ ಹಳ್ಳಿ ನೋಡಲು ಹೋಗುತ್ತಿದ್ದೆವು. ನಿನಗೆ ಹೇಳಿದರೆ ಅರ್ಥ ಆಗಲಿಕ್ಕಿಲ್ಲ. ನಮ್ಮ ಗದ್ದೆಬದುಗಳೂ ಮರಗಳೂ ಎಲ್ಲ ಮೇಲೆ ಬರುತ್ತವೆ. ನಾವು ಅದನ್ನು ನೋಡುತ್ತಾ ನಿಲ್ಲುತ್ತಿದ್ದೆವು. ಅದನ್ನು ಕಾಣುವಾಗ ಎಷ್ಟು ಸಂತೋಷ ಅಗುತ್ತಿತ್ತು ಗೊತ್ತಾ.’ ಒಮ್ಮೆ ನಿಲ್ಲಿಸಿ ಮತ್ತೆ ಪೂರ್ತಿ ಮಾಡಿದಳು: ‘ಅದನ್ನು ಕಾಣುವಾಗ ಎಷ್ಟು ನೋವಾಗುತ್ತಿತ್ತು ಗೊತ್ತಾ!’

ಮತ್ತೆ ಮಾತು ನಿಲ್ಲಿಸಿದಳು.

ಮಗು ದಣಿದು ನಿದ್ದೆ ಹೋದರೆ ಬಿದ್ದು ಹೋಗಬಹುದೆಂದು ಅಜ್ಜಿ ಮತ್ತೊಂದು ಕತೆ ಶುರು ಮಾಡಿದಳು.

‘ನೋಡು ಬೇಟಾ, ಸಿಂಧ್ಯಾ ಮಹಾರಾಜರು ಲೋಕ ಆಳುತ್ತಿದ್ದ ಕಾಲ...’

ಮಗು ಅಜ್ಜಿಯನ್ನು ಮುಂದುವರಿಯಲು ಬಿಡಲಿಲ್ಲ. ಅವ ಕೇಳಿದ: ‘ಮಾಜೀ, ಅಭೀ ಕಿತ್ನಾ ದೂರ್ ಹೇ?’

ಅಮ್ಮ ಮತ್ತು ಅಜ್ಜಿ ಇಬ್ಬರೂ ಅವನ ಬಾಡಿದ ಮುಖವನ್ನು ನೋಡಿದರು. ಮತ್ತೆ ಆಕಾಶದ ಕಡೆಗೆ. ನಕ್ಷತ್ರಗಳು ದಾರಿದೀಪಗಳಂತೆ ಮಿನುಗುತ್ತಿವೆ. ಮತ್ತೆ ತಾವು ಕಾಲ್ನಡಿಗೆಯಲ್ಲಿ ಬಂದ ಆ ಮಹಾರಸ್ತೆಯನ್ನು ನೋಡಿದರು. ನಿಧಾನಕ್ಕೆ ಸರಿಯುವ ಹುಳದಂತೆ ಜನರ ದಂಡು ಚಲಿಸುತ್ತಿದೆ. ಮಲೆಗಳನ್ನು ಹತ್ತಿ ಇಳಿದು ಸಮತಟ್ಟುಗಳನ್ನು ಹಾದು ಬರುತ್ತಿರುವುದು ಜನರಲ್ಲ, ಆ ದಾರಿಯೇ ಹರಿದು ಬರುತ್ತಿದೆ.

ಒಂದು ಬೆಟ್ಟ ಹತ್ತಿ ಈಗ ಅರ್ಧ ದಾರಿ ತಲುಪಿದ್ದಾರೆ. ಅವರು ನಡಿಗೆ ನಿಲ್ಲಿಸಿದರು. ಮುಳ್ಳುಗಿಡಗಳು ಬೆಳೆದು ನಿಂತಿರುವ ಆ ದಾರಿಬದಿಯಲ್ಲಿ ಮೊದಲು ಕುಳಿತದ್ದು ಮಗು. ‘ಕಾಲು ನೋಯುತ್ತಿದೆ ಮಾಜೀ.’ ಅವ ಹೇಳಿದ.

ಅವನ ಹಿಂದೆ ಅಮ್ಮ, ಮತ್ತೆ ಅಜ್ಜಿಯೂ ಕೂತರು. ಕಣ್ಣ ಮುಂದೆ ಗಂಡು ಹೆಣ್ಣುಗಳೆಂದಿಲ್ಲದೆ, ಮಕ್ಕಳು ಮುದುಕರೆಂದಿಲ್ಲದೆ ಹರಿಯುತ್ತಿರುವ ಮಹಾಪ್ರಸ್ಥಾನ. ನಡುವೆ ಬಿದ್ದಿರುವ ಮನುಷ್ಯರು ಬರೀ ಗುರುತಾಗಿದ್ದಾರೆ.

‘ಅವರು ಯಾಕೆ ಹೀಗೆ ಬಿದ್ದು ಸಾಯುತ್ತಿದ್ದಾರೆ?’ ಮಗುವಿನ ಅಮ್ಮ ಕೇಳಿದಳು.

‘ಅಹಂಕಾರದಿಂದ.’ ಅಜ್ಜಿ ಉತ್ತರಿಸಿದಳು.

‘ಅಹಂಕಾರವಾ?’

‘ಹಸಿದುಕೊಂಡು ನಾವು ಎಷ್ಟು ದೂರ ಬೇಕಾದರೂ ನಡೆಯಬಲ್ಲೆವೆಂದು ಅವರು ಅಹಂಕರಿಸಿದರು.’

‘ಉಂ.’

ಮಗು ಮುಚ್ಚುತ್ತಿದ್ದ ಕಣ್ಣುಗಳನ್ನು ಬಲವಾಗಿ ತೆರೆದು ಮತ್ತೆ ಅದೇ ಪ್ರಶ್ನೆಯನ್ನು ಕೇಳಿತು: ‘ಅಭೀ ಕಿತ್ನಾ ದೂರ್ ಹೇ?’

ದಾರಿ ಈಗ ಸಾವಿರ ತಲೆಯ ಹೆಬ್ಬಾವಿನಂತಾಯಿತು. ಪರ್ವತದ ಮೇಲೇರಿ ಅದು ಬಾಯಿ ತೆರೆಯಿತು. ಜನದಂಡು ಅದರೊಳಗೆ ನಡೆಯಿತು.

ಮಗು ಉತ್ತರಕ್ಕಾಗಿ ಅಮ್ಮನನ್ನೇ ನೋಡುತ್ತಿತ್ತು.

ಕೆಸರು ಮೆತ್ತಿದ್ದ ಚೋಲಿಯ ಸೆರಗಿನ ಅಂಚನ್ನು ಹರಿದು ಅಮ್ಮ ಅಜ್ಜಿಯ ಪಾದಕ್ಕೆ ಕಟ್ಟಿದಳು. ಬರಬಿದ್ದ ಹೊಲದ ಗಾಯದಂತೆ ಒಡೆದ ಪಾದದಿಂದ ರಕ್ತ ತೊಟ್ಟಿಕ್ಕಿತು.

ಮತ್ತೆ ಅಮ್ಮ ಮಗನ ಬಳಿ ಹೀಗಂದಳು:

‘ಇತ್ನಾ ಇತ್ನಾ ದೂರ್ ಹೇ!’

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)