ಮುಂಬೈ ಕನ್ನಡಿಗರ ಸಾಹಿತ್ಯದ ಅಡ್ಡೆಗಳು
ದಯಾನಂದ ಸಾಲ್ಯಾನ್
ಮಾಟುಂಗದಲ್ಲಿರುವ ಕರ್ನಾಟಕ ಸಂಘದಲ್ಲಿ ವ್ಯಾಸರಾವ್ ನಿಂಜೂರು ಅವರ ಮುತುವರ್ಜಿಯಲ್ಲಿ (80-90ದಶಕ) ಅನಿಯಮಿತವಾಗಿ, ವಾರಕ್ಕೊಮ್ಮೆ ಸಾಹಿತಿಗಳು ಒಟ್ಟು ಸೇರಿ ಸಾಹಿತ್ಯದ ಚರ್ಚೆ ನಡೆಸುತ್ತಿದ್ದರು. ಆದರೆ ಕೆಲವೊಮ್ಮೆ ಎರಡು ವಾರಕ್ಕೊಮ್ಮೆ ಸೇರುತ್ತಿದ್ದರು. ಯಶವಂತ ಚಿತ್ತಾಲ, ವ್ಯಾಸರಾಯ ಬಲ್ಲಾಳ್, ಡಾ. ಎಸ್. ಎಸ್. ಬ್ಯಾತನಾಳ, ಪ್ರಾ. ಚಿದಂಬರ ದೀಕ್ಷಿತ್, ಜಿ. ಡಿ. ಜೋಶಿ ಮೊದಲಾದ ಹಿರಿಯ ಸಾಹಿತಿಗಳ ಜತೆ ಕೆಲ ಕಿರಿ ಸಾಹಿತಿಗಳು ಬಂದು ಭಾಗವಹಿಸುತ್ತಿದ್ದರು. ಹೆಚ್ಚಾಗಿ ಸಂಘದ ಕಾನ್‌ಫೆರೆನ್ಸ್ ಹಾಲ್‌ನಲ್ಲಿ ಜರುಗುತ್ತಿದ್ದ ಈ ಚರ್ಚೆಗಳಲ್ಲಿ ಕೆಲವೊವ್ಮೆು ಒಳನಾಡಿನಿಂದ ಬರುತ್ತಿದ್ದ ಸಾಹಿತಿಗಳ ಜತೆ ಮುಖಾಮುಖಿ ಹಾಗೂ ಸಾಹಿತಿಗಳ ಚರ್ಚೆಗಳು ನಡೆಯುತ್ತಿತ್ತು. ಅದಾಗಲೇ ಹಿರಿ ಸಾಹಿತಿಗಳ ಜತೆ ಪಳಗಿ ಓರ್ವ ಒಳ್ಳೆಯ ವಿಮರ್ಶಕ ಎಂದು ಗುರುತಿಸಿಕೊಂಡಿದ್ದ ಪ್ರಾ. ಸೀತಾರಾಮ ಆರ್. ಶೆಟ್ಟಿಯವರು ಚಿತ್ತಾಲರ ‘ಕತೆಯಾದಳು ಹುಡುಗಿ’ ಕೃತಿಯ ಬಗ್ಗೆ ವಿಶ್ಲೇಷಿಸುತ್ತಾ ‘‘ಕತೆಯಾದಳು ಹುಡುಗಿ ಕನ್ನಡದ ಶ್ರೇಷ್ಠ ಹತ್ತು ಕೃತಿಗಳಲ್ಲಿ ಒಂದು’’ ಎಂದು ಅಂದು ವಿಶ್ಲೇಷಿಸಿದ್ದನ್ನು ಅಲ್ಲಿ ನೆರೆದಿದ್ದ ಕೆಲ ಹಿರಿ ಸಾಹಿತಿಗಳು ಖಂಡಿಸಿ, ‘‘ಇದಕ್ಕೆ ಆಧಾರ ಇಲ್ಲ’’ ಎಂದು ವಾದಿಸಿದ್ದರು. ಆಗ ಶಾಂತವಾಗಿ, ‘‘ನೀವು ಆ ಕೃತಿ ಶ್ರೇಷ್ಠ ಕೃತಿ ಅಲ್ಲ ಎಂದು ಪ್ರೂವ್ ಮಾಡಿ’’ ಎಂದು ಸವಾಲೆಸೆಯುತ್ತಾರೆ. ಮುಂದೆ ಆ ಕೃತಿ ರಾಜ್ಯ, ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುದು ಇತಿಹಾಸ.
ಕರ್ನಾಟಕದಲ್ಲಿ ಧಾರವಾಡದ ಜಿ.ಬಿ.ಜೋಷಿಯವರ ‘ಅಟ್ಟ’, ಹೆಗ್ಗೋಡಿನ ನಿನಾಸಂ, ಉಡುಪಿಯ ಜನರಲ್ ಕ್ರಾಪ್ಟರ್ಸ್‌ನ ಜಗಲಿ-ಮೊದಲಾದವು ಸಾಹಿತಿಗಳು ಕೂಡುವ, ಸಾಹಿತ್ಯದ ಗಂಭೀರ ವಾದ ಚರ್ಚೆಗಳು ನಡೆಯುತ್ತಿದ್ದ, ಹಿರಿಯ ಸಾಹಿತಿಗಳ ಜತೆಗೆ ಕಿರಿ ಸಾಹಿತಿಗಳು ಸಾಹಿತ್ಯದಲ್ಲಿ ಅರ್ಥಪೂರ್ಣವಾದ ಹೆಜ್ಜೆಗಳನ್ನೂರಲು ಸಹಾಯಕವಾಗಿದ್ದ ಕೇಂದ್ರಗಳಾಗಿದ್ದವು. ಇವುಗಳನ್ನು ಸಾಹಿತಿಗಳ ‘ಅಡ್ಡೆ’ ಎಂದೂ ಕರೆಯಲಾಗುತ್ತಿತ್ತು. ಇಂತಹ ‘ಅಡ್ಡೆ’ಗಳ ಕೊಡುಗೆ ಕನ್ನಡ ಸಾಹಿತ್ಯಕ್ಕೆ ಅಪಾರವಾದುದು, ಅನುಪಮವಾದುದು.
ಅಂತಹ ಸಾಹಿತ್ಯ ಅಡ್ಡೆಗಳು ಮುಂಬೈ ಮಹಾನಗರದಲ್ಲಿ ಅಲ್ಲಲ್ಲಿ ಚಿಗುರೊಡೆದು, ಇಲ್ಲಿ ಗಂಭೀರವಾದ ಸಾಹಿತ್ಯ ಚರ್ಚೆಗಳು ನಡೆಯಲು; ಗಟ್ಟಿಯಾದ ಸಾಹಿತ್ಯ ರೂಪುಗೊಳ್ಳಲು ಮಹತ್ತರವಾದ ದೇಣಿಗೆಯನ್ನು ನೀಡಿದ್ದುದನ್ನು ನಾವು ಗಮನಿಸಬಹುದು. ಅಂತಹ ಸಾಹಿತ್ಯ ಅಡ್ಡೆಗಳಲ್ಲಿ ಮುಂಚೂಣಿಯಲ್ಲಿದ್ದ, ಸಾಹಿತಿಗಳು ಸೇರುತ್ತಿದ್ದ, ಕೇವಲ ಸಾಹಿತ್ಯದ ಚರ್ಚೆ ನಡೆಯುತ್ತಿದ್ದ ಸ್ಥಳ ಬಲಾರ್ಡ್ ಪಿಯರ್‌ನಲ್ಲಿದ್ದ ‘ಸಾಧನಾ ವಠಾರ’. ಕಳೆದ ಶತಮಾನದ ಐವತ್ತರ ದಶಕದಲ್ಲಿ ಅಡ್ವೆ ವಾಸು ಶೆಟ್ಟಿಯವರ ಟೈಲರಿಂಗ್ ಅಂಗಡಿಯನ್ನು ಡಿ. ಕೆ. ಮೆಂಡನ್ ತನ್ನ ತಮ್ಮ ಸೋಮನಾಥ್ ಕೆ. ಮೆಂಡನ್‌ಗಾಗಿ ಒದಗಿಸಿ ಕೊಟ್ಟರು. ಎಸ್. ಕೆ. ಮೆಂಡನ್ ನಡೆಸುತ್ತಿದ್ದ ‘ಸಾಧನಾ ಟೈಲರ್’ ಅಂಗಡಿಗೆ ಸ್ವಾತಂತ್ರ ಹೋರಾಟಗಾರ ಕಾದಂಬರಿಕಾರ ಕುಳುಕುಂದ ಶಿವರಾಯ (ನಿರಂಜನ)ರ ಸ್ಫೂರ್ತಿ ಹಾಗೂ ಪ್ರೇರಣೆಯಿಂದ ಆ ಟೈಲರಿಂಗ್ ಅಂಗಡಿಯಲ್ಲಿ ‘ಸಾಧನಾ ವಠಾರ’ವನ್ನು ದತ್ತಾತ್ರೆಯ ಮೆಂಡನ್ ಹಾಗೂ ರಾಮಚಂದ್ರ ಉಚ್ಚಿಲ್ ಮೊದಲಾದವರು ಸೇರಿ ಕಟ್ಟಿಕೊಂಡರು. ಸಾಯಂಕಾಲ ಸಾಹಿತಿಗಳು ಒಟ್ಟುಗೂಡುತ್ತಿದ್ದ ಆ ವಠಾರದಲ್ಲಿ ಇದ್ದ ಎರಡು ಬೆಂಚುಗಳಲ್ಲಿ ಕುಳಿತು ನಡೆಯುತ್ತಿದ್ದುದು ಕೇವಲ ಕೇವಲ ಸಾಹಿತ್ಯದ ಚರ್ಚೆಗಳು. ನಿರಂಜನರು ಮುಂಬೈಗಾಗಮಿಸಿದಾಗ ಅಥವಾ ಇಲ್ಲಿನ ಉಚ್ಚಿಲ್ ಮೊದಲಾದ ಕೆಲ ಸಾಹಿತಿಗಳ ವಿಳಾಸಗಳೂ ಈ ಸಾಧನಾ ವಠಾರದ್ದೇ ಆಗಿತ್ತೆಂಬುವುದು ಗಮನಾರ್ಹ. ಪ್ರತಿದಿನ ಸಂಜೆ ಇಲ್ಲಿ ಒಟ್ಟು ಸೇರುತ್ತಿದ್ದ ಈ ಸಾಹಿತಿಗಳು ಕೇವಲ ಸಾಹಿತ್ಯ ಮಾತ್ರವಲ್ಲದೆ ಸಾಹಿತ್ಯಕ್ಕೆ ಸಂಬಂಧಪಟ್ಟ, ಭಾಷೆಗೆ ಸಂಬಂಧ ಪಟ್ಟ, ಸಾಹಿತಿಗಳಿಗೆ ಸಂಬಂಧಪಟ್ಟ ಚರ್ಚೆಗಳನ್ನು ನಡೆಸುತ್ತಿದ್ದರು.
ಡಿ. ಕೆ. ಮೆಂಡನ್, ರಾಮಚಂದ್ರ ಉಚ್ಚಿಲ್, ಕೆ. ಎಸ್. ನಿಡಂಬೂರು, ಎಸ್. ಸೋಮನಾಥ್, ಎ. ಎಸ್. ಕೆ. ರಾವ್, ನಿರಂಜನ್, ಅನಕೃ, ರಂಗನಾಥ ಮುಗುಳಿ, ಚಿದಂಬರ್ ದೀಕ್ಷಿತ್, ಅಡ್ವಕೇಟ್ ಶ್ರೀಧರ್ ಕಲ್ಮಾಡಿ, ಬಿ. ಎ. ಸನದಿ, ಶ್ರೀನಿವಾಸ್ ಹಾವನೂರು, ವೈ. ಜಿ. ಶೆಟ್ಟಿ, ಸುನೀತಾ ಎಂ. ಶೆಟ್ಟಿ, ಸಬಿಕು, ಸಂಜೀವ ಶೆಟ್ಟಿ, ವ್ಯಾಸರಾಯ ಬಲ್ಲಾಳ್ ಜತೆಗೆ ಕರ್ನಾಟಕದಿಂದ ಬರುತ್ತಿದ್ದ ಬೇಂದ್ರೆಯಂತಹ ಸಾಹಿತಿಗಳು ಈ ‘ಸಾಧನಾ ವಠಾರ’ದ ಸಾಗಹಿತ್ಯ ಚರ್ಚೆಗಳಿಗೆ ಹೊಸ ಮೆರುಗನ್ನು ನೀಡುತ್ತಿದ್ದರು. ಎಸ್ಕೆ ಸುಂದರ್, ಎ. ನರಸಿಂಹ, ರವಿ ಅಂಚನ್, ಶಿವ ಬಿಲ್ಲವ, ಜೀವಿ ಶೆಟ್ಟಿಗಾರ್, ನಾರಾಯಣ ಉಚ್ಚಿಲ್ಕರ್, ವಾಣಿ ಉಚ್ಚಿಲ್ಕರ್ ಮೊದಲಾದ ಕಿರಿಯರು ಹಿರಿ ಸಾಹಿತಿಗಳ ಚರ್ಚೆಯಲ್ಲಿ ಸೇರಿಕೊಂಡು ಪರಿಣಾಮ ಹೊಸ ತಲೆಮಾರೊಂದು ‘ಸಾಧನಾ ವಠಾರ’ದಲ್ಲಿ ಸಾಹಿತ್ಯ ಲೋಕಕ್ಕೆ ಅಣಿಗೊಳ್ಳುತ್ತಿತ್ತು. ಮುಂದೆ ಕನ್ನಡ ಸಾಹಿತ್ಯ ಲೋಕದಲ್ಲಿ ಕೆಲವರು ಗುರುತಿಸಿಕೊಂಡರೆ ಇನ್ನು ಕೆಲವರು ಸದ್ದಿಲ್ಲದೆ ಸಾಹಿತ್ಯ ಪರಿಚಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಡಿ. ಕೆ. ಮೆಂಡನ್ ಅವರ ‘ತಾಯಿ ನುಡಿ’ಯು ‘ಸಾಧನಾ ವಠಾರ’ದಲ್ಲಿ ರೂಪುಗೊಂಡು, ತಮ್ಮ ವರ್ಲಿಯಲ್ಲಿದ್ದ ಪ್ರಿಂಟಿಂಗ್ ಪ್ರೆಸ್‌ಗೆ ರವಾನೆಯಾಗುತ್ತಿತ್ತು. ‘ತಾಯಿ ನುಡಿ’ಯು ‘ಸಾಧನಾ ವಠಾರ’ದ ಗೆಳೆಯರ ಜತೆ ಸೇರಿ ಎರಡು ಬಾರಿ ‘ಮುಂಬೈ ಕನ್ನಡಿಗರ ಸ್ನೇಹ ಸಮ್ಮೇಳನ’ಗಳನ್ನು ಆಯೋಜಿಸಿತ್ತು.
ನಿರಂಜನ ಅವರ ಆತ್ಮಸಂಗಾತಿ ಅನುಪಮ ನಿರಂಜನ ಆವರು ಕರ್ಕ ರೋಗದಿಂದ ಬಳಲುತ್ತಿದ್ದಾಗ ಅನುಪಮ ಅವರು ಬರುತ್ತಿದ್ದುದು ‘ಸಾಧನಾ ವಠಾರ’ಕ್ಕೆ. ಅಲ್ಲಿಂದ ಎಸ್ಕೆ ಸುಂದರ್ ಅನುಪಮ ನಿರಂಜನ ಅವರನ್ನು ಬಾಂಬೆ ಹಾಸ್ಪಿಟಲಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಮಾಡಿಸುತ್ತಿದ್ದರು.
‘ಸಾಧನಾ ವಠಾರ’ ಇದ್ದ ಆ ಸಂದರ್ಭದಲ್ಲಿ ರಾಮಚಂದ್ರ ಉಚ್ಚಿಲ್ ಅವರು ‘ಮುದ್ದಣ ಜಯಂತಿ’ ಆಚರಣೆಯನ್ನು ಬಾಂಬೆ ಫೋರ್ಟ್ ರಾತ್ರಿ ಶಾಲಾ ವಿದ್ಯಾರ್ಥಿಗಳನ್ನು ಸೇರಿಸಿ ಅರ್ಥಪೂರ್ಣವಾಗಿ ನೆರವೇರಿಸುತ್ತಿದ್ದರು. ಈ ಕಾರ್ಯಕ್ರಮಕ್ಕೆ ‘ಸಾಧನಾ ವಠಾರ’ದ ಮಿತ್ರರು ರಾಮಚಂದ್ರ ಉಚ್ಚಿಲರಿಗೆ ಬಲಗೈಯಾಗಿ, ಅದರ ಯಶಸ್ಸಿಗೆ ಕಾರಣರಾಗುತ್ತಾರೆ. ಉಚ್ಚಿಲ್ ಅವರು ದುಡಿಯುತ್ತಿದ್ದ ‘ಮರ್ಕೆಂಟೈಲ್ ಬ್ಯಾಂಕ್’ (ಹಾಂಗ್‌ಕಾಂಗ್)ನ ಬಿಲ್ಡಿಂಗ್‌ನಲ್ಲೇ ಮುದ್ದಣ ಜಯಂತಿ ಜರಗುತ್ತಿತ್ತು. ಮುಂದೆ ಕೋಟೆ ಪರಿಸರದ ಕಾಮಹಾಲ್ ಮೊದಲಾದ ಕಡೆ ನಡೆಸತೊಡಗಿದರು. ಈ ಸಂದರ್ಭಗಳಲ್ಲಿ ಶಿವರಾಮ ಕಾರಂತ ಮೊದಲಾದ ಖ್ಯಾತನಾಮರನ್ನು ಆಹ್ವಾನಿಸಿ ಮುದ್ದಣನ ಬಗ್ಗೆ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸುತ್ತಿದ್ದರು. ಜತೆಜತೆಗೆ ಮುಂಬೈಯ ಅಂದಿನ ಯುವಪೀಳಿಗೆಯಿಂದಲೂ (ಸುನೀತಾ ಶೆಟ್ಟಿ ಮೊದಲಾದವರನ್ನು) ಉಪನ್ಯಾಸಗಳನ್ನು ಇರಿಸಲಾಗುತ್ತಿತ್ತು. ಈ ರೀತಿಯಿಂದಲೂ ಹೊಸ ಪೀಳಿಗೆಯೊಂದು ಸಜ್ಜಾಗುವುದರಲ್ಲಿ ‘ಮುದ್ದಣ ಜಯಂತಿ’ಯ ಕೊಡುಗೆ ಅಪಾರ, ಅನುಪಮ. ಮುದ್ದಣ ಜಯಂತಿಯ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸಾಧನಾ ವಠಾರದ ಗೆಳೆಯರು ಫೌಂಟನ್‌ನ ಕೂಡು ರಸ್ತೆಯ ಮಧ್ಯೆ ಈ ಕಾರ್ಯಕ್ರಮದ ಬಗ್ಗೆ ಬಿಳಿ ಬಣ್ಣದಲ್ಲಿ ಎದ್ದು ಕಾಣುವಂತೆ ಕನ್ನಡದಲ್ಲಿ ಬರೆಯುತ್ತಿದ್ದರು. ಅದನ್ನು ನೋಡುವಾಗ ನಾವು ಕರ್ನಾಟಕದಲ್ಲೇ ಇದ್ದೇವೆ ಎಂಬ ಭಾವ ನಮ್ಮಲ್ಲಿ ಮೂಡುತ್ತಿತ್ತು. ಉಚ್ಚಿಲರ ಕನಸಿನ ಕೂಸು ‘ಮುದ್ದಣ ಜಯಂತಿ’ ನಿರಂತರ ಇಪ್ಪತ್ತೈದು ವರ್ಷಗಳ ತನಕ ಅರ್ಥಪೂರ್ಣವಾಗಿ ಜರುಗಿತ್ತು.
-ಹೀಗೆ ಸಾಗುತ್ತಿದ್ದ ‘ಸಾಧನಾ ವಠಾರ’ ಕಳೆದ ಶತಮಾನದ ಸುಮಾರು ತೊಂಭತ್ತರ ದಶಕದ ಪ್ರಾರಂಭದಲ್ಲಿ ಸ್ಥಗಿತಗೊಂಡಿತ್ತು.
‘ಸಾಧನಾ ವಠಾರ’ ಅಸ್ತಿತ್ವ ಇದ್ದ ಸಂದರ್ಭದಲ್ಲೇ; ಬೆಳಗ್ಗೆ, ಮಧ್ಯಾಹ್ನ ಹಾಗೂ ಸಾಯಂಕಾಲ ಮುಂಬೈ ಕನ್ನಡಿಗರ ಹೃದಯ ಭಾಗ ಕೋಟೆ ಪರಿಸರದಲ್ಲಿ ಎಂ. ಎಸ್. ಕೋಟ್ಯಾನ್ ಅವರ ‘ವಿದ್ಯಾನಿಧಿ’ಯೂ ಸಾಹಿತ್ಯ ದಿಗ್ಗಜರ ಕೂಡುವಿಕೆಯ, ಚರ್ಚಿಸುವ ಕೇಂದ್ರವಾಗಿತ್ತು. ಮುಂಬೈಯ ಹಿರಿಕಿರಿ ಸಾಹಿತಿಗಳು, ಕಲಾವಿದರು, ಶಿಕ್ಷಕರು ಕೂಡುತ್ತಿದ್ದ; ನಿಂತುಕೊಂಡೇ ಚರ್ಚಿಸುತ್ತಿದ್ದ ಸಾಹಿತ್ಯದ ಅಡ್ಡೆಯಾಗಿತ್ತು. ಒಳನಾಡಿನಿಂದ ಶಿವರಾಮ ಕಾರಂತರನ್ನೊಳಗೊಂಡು ಹಲವು ಹಿರಿಸಾಹಿತಿಗಳು ಇಲ್ಲಿ ಭೇಟಿಕೊಡುತ್ತಿದ್ದರು. ವಿದ್ಯಾನಿಧಿ ಬುಕ್‌ಡಿಪೋ ಪ್ರಕಾಶನದ ಮೂಲಕ ಕನ್ನಡದ ಹಲವು ಶೈಕ್ಷಣಿಕ ಹಾಗೂ ಸಾಹಿತ್ಯ ಕೃತಿಗಳು ಪ್ರಕಟವಾಗುತ್ತಿತ್ತು. ವಿದ್ಯಾನಿಧಿಯ ಎಂ. ಎಸ್. ಕೋಟ್ಯಾನ್ ಅವರ ಮುತುವರ್ಜಿಯಲ್ಲಿ ಬಿಲ್ಲವರ ಅಸೋಸಿಯೇಶನ್ ಗುರುನಾರಾಯಣ ಮಂಡಳಿಯ ಯಕ್ಷಗಾನ ತಾಳಮದ್ದಳೆ ಪ್ರತಿತಿಂಗಳು ನಿರಂತರವಾಗಿ ಮುಂಬೈ ಆಕಾಶವಾಣಿಯಲ್ಲಿ ನಡೆಯುತ್ತಿತ್ತು. ವಿದ್ಯಾನಿಧಿ ಬುಕ್ ಅಡ್ಡೆಯ ಸದಸ್ಯರಾದ ಅಡ್ವೆ ವಾಸು ಶೆಟ್ಟಿ, ಡಾ.ತಾಳ್ತಜೆ ವಸಂತಕುಮಾರ್ ತಾಳ್ತಜೆ, ಬಿ.ಎಸ್.ಕುರ್ಕಾಲ್ ಮೊದಲಾದವರು ಈ ಕಾರ್ಯಕ್ರಮಗಳಲ್ಲಿ ಅರ್ಥಧಾರಿಗಳಾಗಿ ಭಾಗವಹಿಸುತ್ತಿದ್ದರು. ವಿದ್ಯಾನಿಧಿಯಲ್ಲಿ ಅಪರೂಪದ ಸಾಹಿತ್ಯದ ಎಲ್ಲ ಕೃತಿಗಳು ಲಭ್ಯವಾಗುತ್ತಿದ್ದವು. ಇಲ್ಲಿಗೆ ಒಳನಾಡಿನಿಂದ ಪ್ರಕಟಗೊಳ್ಳುತ್ತಿದ್ದ ಹೊಸ ಕೃತಿಗಳು ನಿರಂತರವಾಗಿ ಹರಿದು ಬರುತ್ತಿದ್ದವು; ಇಲ್ಲಿನ ಸಾಹಿತ್ಯ ಪ್ರೇಮಿಗಳ ದಾಹವನ್ನು ಇಂಗಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದವು. ಕೋಟ್ಯಾನ್ ಅವರ ನಿಧನದ ನಂತರ ಈ ಅಡ್ಡೆಯು ಒಮ್ಮೆಲೆ ಸ್ತಬ್ಧಗೊಂಡಿತು. ಇದು ಸಾಹಿತಿಗಳಿಗೆ, ಕಲಾವಿದರಿಗೆ, ಸಾಹಿತ್ಯಾಸಕ್ತರಿಗೆ ಬಹುದೊಡ್ಡ ಅಘಾತವನ್ನುಂಟುಮಾಡಿದ ಸಂಗತಿ. ಎಂ. ಎಸ್. ಕೋಟ್ಯಾನ್ ಅವರ ಆ ಸ್ಥಾನವನ್ನು ಇನ್ನೂ ಯಾರಿಂದಲೂ ಭರಿಸಲಾಗದೇ ಇರುವುದು ವಿಷಾದನೀಯ.
ನೇರ ನಡೆ-ನುಡಿಯ ಕವಿ ವಿಮರ್ಶಕ ಪ್ರಾ. ಸೀತಾರಾಮ ಶೆಟ್ಟಿಯವರ ಕಾಂಜೂರು ಮಾರ್ಗ ರೈಲು ನಿಲ್ದಾಣದ ಬಳಿ ಇದ್ದ ‘ಆಶಿಷ್ ಪ್ಯಾಕೇಜಿಂಗ್ ಇಂಡಸ್ಟ್ರೀಸ್’ ಒಂದು ಸಾಹಿತ್ಯಕ-ಸಾಂಸ್ಕೃತಿಕ ಅಡ್ಡೆ ಎಂದೇ (1983-1996) ಗುರುತಿಸಲ್ಪಡುತ್ತಿತ್ತು. ಅಡ್ವೆ ವಾಸು ಶೆಟ್ಟಿ, ಎಚ್. ಬಿ. ಎಲ್. ರಾವ್, ಜಯಂತ ಕಾಯ್ಕಿಣಿ, ಕೆ.ಟಿ.ವೇಣುಗೋಪಾಲ್, ಕೆ. ರಘುನಾಥ್, ಶಿಮುಂಜೆ ಪರಾರಿ, ಮುಕುಂದ ಜೋಶಿ, ಜಿ. ಡಿ. ಜೋಶಿ ಮೊದಲಾದವರು ಇಲ್ಲಿ ಆಗಾಗ ಸೇರುತ್ತಿದ್ದರು. ಅರ್ಥಪೂರ್ಣವಾದ ಸಾಹಿತ್ಯಕ-ಸಾಂಸ್ಕೃತಿಕ ಚರ್ಚೆಗಳು ಇಲ್ಲಿ ನಡೆಯುತ್ತಿದ್ದವು.
‘ಸಾಧನಾ ವಠಾರ’ ನಿಂತ ನಂತರ ಹಿರಿಸಾಹಿತಿಗಳ ಜೊತೆ ರವಿ ರಾ. ಅಂಚನ್, ಎ. ನರಸಿಂಹ, ಎಸ್ಕೆ ಸುಂದರ್ ಮೊದಲಾದವರನ್ನು ಒಂದು ರೀತಿಯ ಶೂನ್ಯ ಆವರಿಸಿದಂತಾಗಿತ್ತು. ಆಗ ಅವರು ಕಂಡುಕೊಂಡ ಹೊಸ ಜಾಗ ಅಥವಾ ‘ಅಡ್ಡೆ’ ಕೋಟೆ ಪರಿಸರದಲ್ಲಿದ್ದ ಎನ್. ಎಸ್. ಪ್ರಭು ಅವರ ‘ವೆಸ್ಟ್ ಕೋಸ್ಟ್ ಹೊಟೇಲ್’. ಮಧ್ಯಾಹ್ನ, ಆಫೀಸಿನಲ್ಲಿ ‘ಲಂಚ್ ಬ್ರೇಕ್’ ಹೊತ್ತಿನಲ್ಲಿ ಇಲ್ಲಿ ಸುಮಾರು ಇಪ್ಪತ್ತರಷ್ಟು ಹಿರಿ-ಕಿರಿ ಸಾಹಿತಿಗಳು ಕೂಡುತ್ತಿದ್ದರು. ಕ್ಷಮಿಸಿ, ಹೊಟೇಲಿನ ಒಳಗಲ್ಲ; ಹೊರಗೆ, ರಸ್ತೆ ಬದಿಯಲ್ಲಿ! ಗುರಿಯೊಂದಿದ್ದರೆ ರಸ್ತೆ ಬದಿಯಾದರೇನು, ಮಹಲಾದರೇನು! ಆ ಹೊಟೇಲಿನ ಎದುರುಗಡೆ ಗಂಭೀರವಾದ ಸಾಹಿತ್ಯಕ ಚರ್ಚೆಗಳು ಅರ್ಥಪೂರ್ಣವಾಗಿ ನಡೆಯುತ್ತಿದ್ದವು. ಆ ಸಂದರ್ಭಗಳಲ್ಲಿ ಆ ಬಳಗದ ಓರ್ವ ಸದಸ್ಯರಾಗಿದ್ದ ಎಚ್. ಬಿ. ಎಲ್. ರಾವ್ ಅವರಿಗೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಉಂಟಾದಾಗ ಶಸ್ತ್ರಚಿಕಿತ್ಸೆಗೊಂಡ ರಾವ್ ಅವರನ್ನು ಈ ಬಳಗದ ಗೆಳೆಯರು ನೋಡಲು ಹೋಗುತ್ತಿದ್ದರು. ಅವರನ್ನು ಕಂಡ ರಾವ್ ಒಂದಿಷ್ಟು ಉತ್ಸಾಹದಿಂದ ಚೇತರಿಸುತ್ತಿದ್ದರು. ಬಂದ ಈ ಗೆಳೆಯರು ಸ್ವಾಭಿಮಾನಿಯಾದ ರಾವ್ ಅವರಿಗೆ ತಿಳಿಯದಂತೆ ಅವರ ತಲೆದಿಂಬಿನಡಿ ಒಂದಿಷ್ಟು ನೋಟುಗಳನ್ನಿಟ್ಟು ಬರುತ್ತಿದ್ದರು.
ಈ ಅಡ್ಡೆಯಲ್ಲಿ ಕ್ರಿಯಾಶೀಲರಾಗಿದ್ದ ರಾಮಚಂದ್ರ ಉಚ್ಚಿಲ್, ಬನ್ನಂಜೆ ಬಾಬು ಅಮೀನ್, ರವಿ ರಾ. ಅಂಚನ್, ಎಸ್ಕೆ ಸುಂದರ್, ಪಂಜು ಗಂಗೊಳ್ಳಿ, ಶಿವ ಬಿಲ್ಲವ ಅಲ್ಲದೆ ದಿನೇಶ್ ಅಮೀನ್ ಮಟ್ಟು ಮೊದಲಾದವರು ಹುಟ್ಟುಹಾಕಿದ ‘ಗುರುಭಾರತಿ ಅಧ್ಯಯನ ಕೇಂದ್ರ’ ಹೊಸ ಚಿಂತನೆ, ವಿಚಾರಧಾರೆಯೊಂದಿಗೆ ನಿಶಬ್ದವಾಗಿ ಸಾಹಿತ್ಯಕ ಕಾರ್ಯಗಳಲ್ಲಿ ಬಿರುಸಿನ ಹೆಜ್ಜೆಗಳನ್ನಿಟ್ಟಿತು. ಕೆಲವೊಂದು ಪತ್ರಿಕೆಗಳ ಒಡಂಬಡಿಕೆಯೊಂದಿಗೆ ವಿಚಾರಪೂರಿತ ಅಂಕಣಗಳನ್ನು ಪ್ರಾರಂಭಿಸಿತ್ತು. ಈ ಕೇಂದ್ರದ ಮೂಲಕ ‘ಕಡೆಗೋಲು’ (ರವಿ ರಾ. ಅಂಚನ್) ಮೊದಲ್ಗೊಂಡು ಗೋಪಾಲ್ ತ್ರಾಸಿಯವರ ಕೃತಿಯ ತನಕ ಹಲವಾರು ಕನ್ನಡ-ಇಂಗ್ಲಿಷ್ (ಕೋಟಿ-ಚೆನ್ನಯ್ಯ-ಶಿವ ಬಿಲ್ಲವ) ಕೃತಿಗಳು ಬೆಳಕು ಕಂಡಿವೆ.
ಮಾಟುಂಗದಲ್ಲಿರುವ ಕರ್ನಾಟಕ ಸಂಘದಲ್ಲಿ ವ್ಯಾಸರಾವ್ ನಿಂಜೂರು ಅವರ ಮುತುವರ್ಜಿಯಲ್ಲಿ (80-90ದಶಕ) ಅನಿಯಮಿತವಾಗಿ, ವಾರಕ್ಕೊಮ್ಮೆ ಸಾಹಿತಿಗಳು ಒಟ್ಟು ಸೇರಿ ಸಾಹಿತ್ಯದ ಚರ್ಚೆ ನಡೆಸುತ್ತಿದ್ದರು. ಆದರೆ ಕೆಲವೊಮ್ಮೆ ಎರಡು ವಾರಕ್ಕೊಮ್ಮೆ ಸೇರುತ್ತಿದ್ದರು. ಯಶವಂತ ಚಿತ್ತಾಲ, ವ್ಯಾಸರಾಯ ಬಲ್ಲಾಳ್, ಡಾ.ಎಸ್.ಎಸ್.ಬ್ಯಾತನಾಳ, ಪ್ರಾ.ಚಿದಂಬರ ದೀಕ್ಷಿತ್, ಜಿ.ಡಿ.ಜೋಶಿ ಮೊದಲಾದ ಹಿರಿಯ ಸಾಹಿತಿಗಳ ಜತೆ ಕೆಲ ಕಿರಿ ಸಾಹಿತಿಗಳು ಬಂದು ಭಾಗವಹಿಸುತ್ತಿದ್ದರು. ಹೆಚ್ಚಾಗಿ ಸಂಘದ ಕಾನ್ಫರೆನ್ಸ್ ಹಾಲ್‌ನಲ್ಲಿ ಜರುಗುತ್ತಿದ್ದ ಈ ಚರ್ಚೆಗಳಲ್ಲಿ ಕೆಲವೊವ್ಮೆು ಒಳನಾಡಿನಿಂದ ಬರುತ್ತಿದ್ದ ಸಾಹಿತಿಗಳ ಜತೆ ಮುಖಾಮುಖಿ ಹಾಗೂ ಸಾಹಿತಿಗಳ ಚರ್ಚೆಗಳು ನಡೆಯುತ್ತಿದ್ದವು. ಅದಾಗಲೇ ಹಿರಿ ಸಾಹಿತಿಗಳ ಜತೆ ಪಳಗಿ ಓರ್ವ ಒಳ್ಳೆಯ ವಿಮರ್ಶಕ ಎಂದು ಗುರುತಿಸಿಕೊಂಡಿದ್ದ ಪ್ರಾ. ಸೀತಾರಾಮ ಆರ್. ಶೆಟ್ಟಿಯವರು ಚಿತ್ತಾಲರ ‘ಕತೆಯಾದಳು ಹುಡುಗಿ’ ಕೃತಿಯ ಬಗ್ಗೆ ವಿಶ್ಲೇಷಿಸುತ್ತಾ ‘‘ಕತೆಯಾದಳು ಹುಡುಗಿ ಕನ್ನಡದ ಶ್ರೇಷ್ಠ ಹತ್ತು ಕೃತಿಗಳಲ್ಲಿ ಒಂದು’’ ಎಂದು ಅಂದು ವಿಶ್ಲೇಷಿಸಿದ್ದನ್ನು ಅಲ್ಲಿ ನೆರೆದಿದ್ದ ಕೆಲ ಹಿರಿ ಸಾಹಿತಿಗಳು ಖಂಡಿಸಿ, ‘‘ಇದಕ್ಕೆ ಆಧಾರ ಇಲ್ಲ’’ ಎಂದು ವಾದಿಸಿದ್ದರು. ಆಗ ಶಾಂತವಾಗಿ, ‘‘ನೀವು ಆ ಕೃತಿ ಶ್ರೇಷ್ಠ ಕೃತಿ ಅಲ್ಲ ಎಂದು ಪ್ರೂವ್ ಮಾಡಿ’’ ಎಂದು ಸವಾಲೆಸೆಯುತ್ತಾರೆ. ಮುಂದೆ ಆ ಕೃತಿ ರಾಜ್ಯ, ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುದು ಇಂದು ಇತಿಹಾಸ. ಮುಂದೆ, ಕರ್ನಾಟಕ ಸಂಘ ಮಾಟುಂಗದ ಮಹಿಳಾ ವಿಭಾಗದ ಸಂಚಾಲಕಿಯಾಗಿದ್ದ ಕತೆಗಾರ್ತಿ ಮಿತ್ರಾ ವೆಂಕಟ್ರಾಜ್ ಮಹಿಳಾ ವಿಭಾಗದ ಮೂಲಕ ಪ್ರತಿ ತಿಂಗಳು ‘ಪ್ರತಿಭಾ ಚಿಂತನ’ ಎಂಬ ಸಾಹಿತ್ಯ ಚರ್ಚೆಯನ್ನು ಆಯೋಜಿಸುತ್ತಿದ್ದರು. ಸಂಘದ ಕಾನ್ಫರೆನ್ಸ್ ರೂಮ್‌ನಲ್ಲಿ ಯಾವುದೇ ಪೂರ್ವಾಗ್ರಹವಿಲ್ಲದೆ ಅರ್ಥಪೂರ್ಣವಾಗಿ ಸಾಹಿತ್ಯದ ಎಲ್ಲಾ ಆಯಮಗಳಿಂದಲೂ ಚರ್ಚೆಗಳನ್ನು ನಡೆಸಲಾಗುತ್ತಿತ್ತು. ಸನದಿ, ಬಲ್ಲಾಳ್, ಕಾಯ್ಕಿಣಿ, ಮುಕುಂದ ಜೋಶಿ, ಕುರ್ಕಾಲ್, ಉಮಾರಾವ್, ವೇಣುಗೋಪಾಲ್ ದಂಪತಿ, ಗಾಯತ್ರಿ ರಾಮು ಮೊದಲಾದವರು ಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಮುಕುಂದ ಜೋಶಿಯವರ ‘ನಿರುತ್ತರ’ ಕಾದಂಬರಿಯ ಕೆಲ ಅಧ್ಯಾಯಗಳನ್ನು ಓದಿ ಅದರ ಚರ್ಚೆಯು ನಡೆದಿದ್ದನ್ನು ನೆನಪಿಸಬಹುದು. ಮಲಯಾಳಂನ ಮಾನಸಿ ಮೊದಲಾದ ಅನ್ಯ ಭಾಷಿತ ಸಾಹಿತಿಗಳನ್ನು ‘ಪ್ರತಿಭಾ ಚಿಂತನ’ಕ್ಕೆ ಆಹ್ವಾನಿಸಿ ಅವರ ಅನುಭವ ಹಾಗೂ ಅವರ ಸಾಹಿತ್ಯ ಚರ್ಚೆಗಳನ್ನು ನಡೆಸುತ್ತಿದ್ದರು. ಕೆಲವರು ಉತ್ತಮ ಕತೆಗಳನ್ನು ಬರೆಯುತ್ತಾರೆ. ಆದರೆ ಅವರು ಗೋಷ್ಠಿಗಳಲ್ಲಿ ಸಮರ್ಥವಾಗಿ ಪ್ರಸ್ತುತಪಡಿಸಲು ಅಥವಾ ವಾಚಿಸಲು ಹೆಣಗಾಡುತ್ತಾರೆ. ಇದನ್ನು ಸೂಕ್ಷ್ಮವಾಗಿ ಅರಿತ ಮಿತ್ರಾ ಅವರು ಕವಿತೆಗಳನ್ನು ಹೇಗೆ ಓದುವುದು ಎಂಬ ಕುರಿತಾದ ವಿಶಿಷ್ಟವಾದ ಕಾರ್ಯಕ್ರಮವನ್ನು ಈ ಪ್ರತಿಭಾ ಚಿಂತನ ಸಾಹಿತ್ಯ ಕೂಟದಲ್ಲಿ ಆಯೋಜಿಸುತ್ತಿದ್ದರು.
ಸರಿಸುಮಾರು ಅದೇ ಹೊತ್ತಿಗೆ ಶ್ರೀನಿವಾಸ ಹಾವನೂರು ಅವರು ‘ಮಂಥನ’ ಸಾಹಿತ್ಯ ಕೂಟ ಆಯೋಜಿಸುತ್ತಿದ್ದರು. ಈ ‘ಮಂಥನ’ಕ್ಕೆ ನಿರ್ದಿಷ್ಟವಾದ ಸ್ಥಳ ಇರಲಿಲ್ಲ. ಸ್ಥಳಾವಕಾಶ ಸಿಕ್ಕಲ್ಲಿ ಅರ್ಥಪೂರ್ಣವಾದ ವೈವಿಧ್ಯಮಯ ಚರ್ಚೆಗಳು ನಡೆಯುತ್ತಿದ್ದವು. ಚಿತ್ತಾಲರ ‘ಕೇಂದ್ರ ವೃತ್ತಾಂತ’ ಕಾದಂಬರಿಯ ಬಗ್ಗೆ ಕೆಲವೊಂದು ಚಿತ್ರಗಳನ್ನು ಬಿಡಿಸಿ ಆ ಮೂಲಕ ಕಾದಂಬರಿ ಬಗ್ಗೆ ವಿಶಿಷ್ಟ ರೀತಿಯಲ್ಲಿ ವಿವರ ನೀಡಿ ಚಿತ್ತಾಲರು ಮಾತನಾಡಿದ್ದನ್ನು ಗಮನಿಸಬಹುದು. ಅದೇ ರೀತಿ ಕೆ.ಕೆ.ಹೆಬ್ಬಾರ್ ಅವರ ‘ಆಟಂ ಬಾಂಬ್’ ಚಿತ್ರದ ಕುರಿತ ವಿಮರ್ಶಾ ರೂಪದ ಅರ್ಥಪೂರ್ಣ ಚರ್ಚೆ ನಡೆದಿದ್ದೂ ‘ಮಂಥನ’ದಲ್ಲಿ. ಹಾಗೆಯೇ ಪ್ರತಿಷ್ಠಿತ ಸಂಸ್ಥೆ ಡೊಂಬಿವಲಿ ಕರ್ನಾಟಕ ಸಂಘ, ಮಿನಿ ಕರ್ನಾಟಕ ಎಂದೇ ಆಪ್ತರಿಂದ ಕರೆಯಲ್ಪಡುತ್ತಿದ್ದ ಲಯನ್ ಭಾಸ್ಕರ ಶೆಟ್ಟಿಯವರ ಕೋಟೆ ಪರಿಸರದಲ್ಲಿದ್ದ ‘ಕರ್ನಾಟಕ ಆಪ್ಟಿಕಲ್ ಕಂಪೆನಿ’, ಮುಂಬೈ ಚುಕ್ಕಿ ಸಂಕುಲ, ಮುಲುಂಡ್‌ನ ಸಾಹಿತ್ಯ ಸಂವಾದ ಕಾರ್ಯಕ್ರಮ...ಹೀಗೆ ಎಣಿಸಿದಷ್ಟು ಮುಗಿಯದ ಕನ್ನಡದ ಅಡ್ಡೆಗಳನ್ನು ಮುಂಬೈಯಲ್ಲಿ ಗುರುತಿಸಬಹುದು. ಅಂತಹ ಅಡ್ಡೆಗಳ ಜರೂರಿ ಇಂದು ಮುಂಬೈಗೆ ಅತ್ಯಗತ್ಯವಾಗಿ ಬೇಕಾಗಿದೆ. ಪ್ರಾ. ಸೀತಾರಾಮ್ ಶೆಟ್ಟಿಯವರು ಇಪ್ಪತ್ತು ವರ್ಷಗಳ ಹಿಂದೆ ಹೇಳಿರುವ ಮಾತಿನ ಮೂಲಕ ಈ ಬರಹವನ್ನು ಮುಗಿಸುತ್ತೇನೆ. ‘ಕೇವಲ ಸಾಂಸ್ಕೃತಿಕ ಚಟುವಟಿಕೆಗಳು, ಸಾಹಿತ್ಯ ಕೂಟಗಳು ಮಾತ್ರ ಇಂದು ದಾರಿ ತಪ್ಪಿದ ಮನುಷ್ಯನಿಗೆ ದಾರಿ ದೀಪಗಳಾಗಿವೆ’. ಮುಂಬೈಯ ಕನ್ನಡದ ಓಣಿಗಳನ್ನು ಬೆಳಗಿದ ದೀಪಗಳಿಗೆ ಎಣ್ಣೆ ಹುಯ್ಯುವ ಕೆಲಸ ನಡೆಯಬೇಕಾಗಿದೆ.