ಏನಿದು ಡಿಫ್ತೀರಿಯಾ?
ಗಂಟಲುಮಾರಿ ಅಥವಾ ಗಳಚರ್ಮರೋಗವೆಂದು ಕರೆಯಲಾಗುವ ಡಿಫ್ತೀರಿಯಾ ಕೊರಿನೆಬ್ಯಾಕ್ಟೀರಿಯಂ ಡಿಫ್ತೆರಿಯೆ ಎಂಬ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಗಂಭೀರ ಕಾಯಿಲೆಯಾಗಿದೆ. ಇದು ಅತ್ಯಂತ ಸಾಂಕ್ರಾಮಿಕವಾಗಿದ್ದು ಜನರ ದಟ್ಟಣೆಯಿರುವ ಪ್ರದೇಶಗಳಲ್ಲಿ ತೀವ್ರವಾಗಿ ಹರಡುತ್ತದೆ. ಈ ಕಾಯಿಲೆಯು ಶ್ವಾಸಕೋಶಗಳಲ್ಲಿಯ ಸ್ರವಿಸುವಿಕೆಗಳು ಅಥವಾ ವಾಯುವಿನಲ್ಲಿಯ ರೋಗಕಾರಕ ಹನಿಗಳಿಂದ ಪ್ರಸರಿಸುತ್ತದೆ. ಮೂಗು ಅಥವಾ ಬಾಯಿಯ ಮೂಲಕ ಬ್ಯಾಕ್ಟೀರಿಯಾಗಳು ಶರೀರವನ್ನು ಪ್ರವೇಶಿಸುತ್ತವೆ. ಚರ್ಮದಲ್ಲಿಯ ಬಿರುಕಿನ ಮೂಲಕವೂ ಅವು ಪ್ರವೇಶಿಸಬಹುದು ಮತ್ತು ಗಾಯಗಳ ಮೇಲ್ಮೈಗಳಲ್ಲಿ ವೃದ್ಧಿಗೊಳ್ಳಬಹುದು.
ಲಕ್ಷಣಗಳು
ಬ್ಯಾಕ್ಟೀರಿಯಾಗಳು ಗಂಟಲು ಅಥವಾ ಗಾಯಗಳ ಮೇಲೆ ವೃದ್ಧಿಗೊಳ್ಳುತ್ತವೆ. ಅವು ಗಂಟಲಿನಲ್ಲಿ ಮತ್ತು ಗಲಗ್ರಂಥಿಗಳ ಮೇಲೆ ವಪೆಯೊಂದನ್ನು ನಿರ್ಮಿಸಬಹುದು. ಉಸಿರಾಟಕ್ಕೆ ಕಷ್ಟ,ಗೊಗ್ಗರು ಧ್ವನಿ,ಕುತ್ತಿಗೆಯಲ್ಲಿನ ದುಗ್ಧರಸ ಗ್ರಂಥಿಗಳ ದೊಡ್ಡದಾಗುವಿಕೆ (ಬುಲ್ ನೆಕ್),ಮೂಗು ಸೋರುವಿಕೆ,ಸೌಮ್ಯ ಜ್ವರ ಮತ್ತು ಹೆಚ್ಚಿನ ಹೃದಯ ಬಡಿತ ದರ ಇವು ಡಿಫ್ತೀರಿಯಾದ ಇತರ ಸಾಮಾನ್ಯ ಲಕ್ಷಣಗಳಲ್ಲಿ ಸೇರಿವೆ. ರೋಗಕಾರಕ ಬ್ಯಾಕ್ಟೀರಿಯಾಗಳು ಉತ್ಪಾದಿಸುವ ವಿಷವಸ್ತುಗಳಿಂದಾಗಿ ಕೆಲವೊಮ್ಮೆ ಡಿಫ್ತೀರಿಯಾ ಲಕ್ಷಣಗಳು ಕಂಡು ಬರಬಹುದು ಮತ್ತು ಈ ವಿಷವಸ್ತುಗಳು ಡಿಫ್ತೀರಿಟಿಕ್ ಮಯೊಕಾರ್ಡೈಟಿಸ್ ಅಥವಾ ಹೃದಯದ ಸ್ನಾಯುಗಳಿಗೆ ಹಾನಿ ಮತ್ತು ನ್ಯೂರಿಟಿಸ್ ಅಥವಾ ಬಾಹ್ಯ ನರಗಳಿಗೆ ಹಾನಿಯನ್ನುಂಟು ಮಾಡುತ್ತವೆ.
ರೋಗನಿರ್ಧಾರ ಹೇಗೆ?
ಗಂಟಲಿನಲ್ಲಿ ರೂಪುಗೊಂಡಿರುವ ವಪೆಯು ಸಾಮಾನ್ಯವಾಗಿ ಗುರುತಿಸುವಷ್ಟು ಸ್ಪಷ್ಟವಿರುತ್ತದೆ. ಗಂಟಲಿನ ಹಿಂಭಾಗದಲ್ಲಿಯ ದ್ರವದ ಮಾದರಿಯನ್ನು ಪಡೆದುಕೊಂಡು ರೋಗಕ್ಕೆ ಕಾರಣವಾಗಿರುವ ಬ್ಯಾಕ್ಟೀರಿಯಾವನ್ನು ಗುರುತಿಸಲು ಪರೀಕ್ಷೆಗೊಳಪಡಿಸಲಾಗುತ್ತದೆ. ಈ ಬ್ಯಾಕ್ಟೀರಿಯಾಗಳನ್ನು ಪ್ರತ್ಯೇಕಿಸಿ ಅವು ವಿಷವಸ್ತುಗಳನ್ನು ಉತ್ಪಾದಿಸುತ್ತವೆಯೇ ಎಂದು ಕಂಡುಕೊಳ್ಳಲು ಅವುಗಳನ್ನು ಬೆಳೆಸಲಾಗುತ್ತದೆ.
ಚಿಕಿತ್ಸೆ ಏನು?
ವಿಷವಸ್ತುಗಳ ಪರಿಣಾಮವನ್ನು ತಟಸ್ಥಗೊಳಿಸುವುದು,ಇನ್ನಷ್ಟು ವಿಷವಸ್ತುಗಳ ಉತ್ಪಾದನೆಯನ್ನು ತಡೆಯುವುದು,ಸ್ಥಳೀಯ ಸೋಂಕನ್ನು ನಿಯಂತ್ರಿಸುವುದು ಇವು ಚಿಕಿತ್ಸೆಯ ಉದ್ದೇಶಗಳಾಗಿವೆ. ಡಿಫ್ತೀರಿಯಾದಿಂದ ರಕ್ತದಲ್ಲಿ ವಿಷವಸ್ತುಗಳು ಬಿಡುಗಡೆಗೊಳ್ಳುವುದಕ್ಕೆ ಮುನ್ನ ಅದಕ್ಕೆ ಚಿಕಿತ್ಸೆ ನೀಡಲು ಸಾಮಾನ್ಯವಾಗಿ ಪೆನ್ಸಿಲಿನ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆದರೆ ರಕ್ತಪ್ರವಾಹದಲ್ಲಿ ಸೇರಿಕೊಂಡಿರುವ ವಿಷವಸ್ತುಗಳನ್ನು ತಟಸ್ಥಗೊಳಿಸುವುದು ಅತ್ಯಗತ್ಯವಾಗಿರುತ್ತದೆ. ಔಷಧಿಗಳ ಮೂಲಕ ಈ ಕೆಲಸವನ್ನು ವೈದ್ಯರು ಮಾಡುತ್ತಾರೆ. ಅಪರೂಪದ ಪ್ರಕರಣಗಳಲ್ಲಿ ರೋಗಿಗೆ ಉಸಿರಾಡಲು ತೀವ್ರ ಕಷ್ಟವಾಗುತ್ತಿದ್ದರೆ ಟ್ರಾಕಿಯೊಸ್ಟಮಿ ಅಥವಾ ಶ್ವಾಸನಾಳದಲ್ಲಿ ಉಸಿರಾಟ ಕೊಳವೆಯನ್ನು ಸೇರಿಸಲು ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಹೃದಯ ಬಡಿತ ದರವು ತುಂಬ ನಿಧಾನವಾಗಿದ್ದರೆ ರೋಗಿಗೆ ಕಾರ್ಡಿಯಾಕ್ ಪೇಸ್‌ಮೇಕರ್ ಅಳವಡಿಸಬಹುದು. ಡಿಫ್ತೀರಿಯಾವನ್ನು ತಡೆಯುವುದು ಹೇಗೆ?
ಪ್ರತಿರಕ್ಷಣೆ ಅಥವಾ ನಿರೋಧಕತೆಯನ್ನು ಹೆಚ್ಚಿಸುವುದು ಡಿಫ್ತೀರಿಯಾವನ್ನು ತಡೆಯಲು ಅತ್ಯುತ್ತಮ ಮುನ್ನೆಚ್ಚರಿಕೆ ಕ್ರಮವಾಗಿದೆ. ಡಿಪಿಟಿ ಸಂಯೋಜಿತ ಲಸಿಕೆಯ ಮೂಲಕ ಡಿಫ್ತೀರಿಯಾ,ನಾಯಿಕೆಮ್ಮು ಮತ್ತು ಟೆಟಾನಸ್‌ಗೆ ಪ್ರತಿರಕ್ಷಣೆಯನ್ನು ಒದಗಿಸಲಾಗುತ್ತದೆ. ಮಗುವಿನ ಎರಡು,ನಾಲ್ಕು ಮತ್ತು ಆರು ತಿಂಗಳು ಪ್ರಾಯದಲ್ಲಿ ಡಿಪಿಟಿ ಲಸಿಕೆಯ ಡೋಸ್ ನೀಡಲಾಗುತ್ತದೆ. ಒಂದೂವರೆ ವರ್ಷ,ಐದು ಮತ್ತು 8ರಿಂದ 10 ವರ್ಷ ಪ್ರಾಯದಲ್ಲಿ ಬೂಸ್ಟರ್ ಡೋಸ್ ನೀಡಲಾಗುತ್ತದೆ.