ಕನ್ನಡ ಪತ್ತೇದಾರಿ ನಾಪತ್ತೆ!
ಪತ್ತೇದಾರಿ ಕತೆೆಗಳನ್ನು ಬರೆಯಬೇಕೆಂದರೆ ಹೆಚ್ಚು ಓದಿರಬೇಕು. ಇಲ್ಲ ಕೇಳಿ ತಿಳಿದಿರಬೇಕು, ಕಲ್ಪಿಸಿಕೊಂಡು ಬರೆಯುವ ಕಲೆ ಗೊತ್ತಿರಬೇಕು. ಹಾಗೆಯೇ ಮನುಷ್ಯರ ಹಾವಭಾವಗಳು, ಸ್ಥಳಪುರಾಣ-ಪರಿಚಯವನ್ನು ಹೊಂದಿರಬೇಕು. ಇದು ಪತ್ತೇದಾರಿ ಕಥೆಗಾರರಿಗೆ ತುಂಬಾ ಮುಖ್ಯ. ಹಾಗೆಯೇ ಕಥೆ ಎಷ್ಟೇ ಚೆನ್ನಾಗಿ ಪ್ರಾರಂಭಿಸಿದರೂ, ಎಷ್ಟೇ ಚೆನ್ನಾಗಿ ನಿರೂಪಿಸಿದರೂ ಓದುಗರ ಮನಸ್ಸಲ್ಲಿ ನಿಲ್ಲಬೇಕೆಂದರೆ, ಗೆಲ್ಲಬೇಕಾದರೆ ಕ್ಲೈಮ್ಯಾಕ್ಸ್ ಅದ್ಭುತವಾಗಿರಲೇಬೇಕು.
ಬಸವರಾಜು ಮೇಗಲಕೇರಿಯವರು 1990ರಿಂದ ಪತ್ರಕರ್ತರಾಗಿ ಹಲವು ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯಕ್ಕೆ ‘ವಾರ್ತಾ ಭಾರತಿ’ ದಿನಪತ್ರಿಕೆಯಲ್ಲಿ ಬೆಂಗಳೂರು ಬ್ಯೂರೋ ಮುಖ್ಯಸ್ಥರಾಗಿದ್ದಾರೆ. 2013ರಲ್ಲಿ ಚಿತ್ರ ನಟ ನರಸಿಂಹರಾಜು ಕುರಿತ ‘ಯುಗದ ನಗು’, 2019ರಲ್ಲಿ ಅಂಕಣ ಬರಹಗಳ ‘ಅವರಿವರು’, 2020ರಲ್ಲಿ ದೇವರಾಜ ಅರಸು ಕುರಿತ ‘ನಮ್ಮ ಅರಸು’ ಕೃತಿ ಪ್ರಕಟನೆೆ. 2015ರ ಕನ್ನಡ ಹಾಗೂ ಪ್ರಾದೇಶಿಕ ಚಲನಚಿತ್ರಗಳ ರಾಜ್ಯ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯನಾಗಿ, 2015ರಲ್ಲಿ ದೇವರಾಜ ಅರಸು ಹಿಂದುಳಿದ ಜಾತಿಗಳ ಅಭಿವೃದ್ಧಿ ನಿಗಮದಿಂದ ದೇವರಾಜ ಅರಸು ಪುಸ್ತಕ ಪ್ರಕಟನೆಯ ಸಂಪಾದಕೀಯ ಮಂಡಳಿಯ ಸಂಪನ್ಮೂಲ ವ್ಯಕ್ತಿಯಾಗಿ, 2018ರ ಕಿರುಚಿತ್ರಗಳ ರಾಜ್ಯ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದಾರೆ.
ಒಬ್ಬ ವ್ಯಕ್ತಿ, ಒಂದು ಘಟನೆ, ಒಂದು ವಸ್ತುವಿನ ವಿಷಯವನ್ನಿಟ್ಟುಕೊಂಡು ಕಥೆ ಬರೆಯುವುದು ಒಂದು ರೀತಿ. ಸ್ವಲ್ಪ ಸಾಹಿತ್ಯದ ಗಂಧಗಾಳಿ ಗೊತ್ತಿದ್ದರೆ, ಅದನ್ನು ಉತ್ತಮ ಕಥೆಯನ್ನಾಗಿ ರೂಪಿಸುವುದು ಮತ್ತೊಂದು ರೀತಿ. ಆದರೆ ಪತ್ತೇದಾರಿ ಕಥೆ-ಕಾದಂಬರಿ ಹಾಗಲ್ಲ, ಅದನ್ನು ಬರೆಯಲಿಕ್ಕೆ ಅದರದೇ ಆದ ಕೆಲವು ಕಟ್ಟುಪಾಡುಗಳಿವೆ. ಅದು ಅಷ್ಟು ಸುಲಭವಾಗಿ ದಕ್ಕುವಂಥದ್ದಲ್ಲ. ಹೇಗಾದರೂ ಬರೆದರಾದೀತು ಅನ್ನುವಂಥದ್ದೂ ಅಲ್ಲ.
ಪತ್ತೇದಾರಿ ಕಥೆಗಳಿಗೆ ವಿಷಯ ಆಯ್ಕೆಯೇ ಒಂದು ದೊಡ್ಡ ಸವಾಲು. ನಿರೂಪಣೆ ಅತ್ಯಂತ ಮುಖ್ಯವಾದ ಅಂಶ. ಹೇಳಬೇಕಾದ್ದನ್ನು ಸ್ಪಷ್ಟವಾಗಿ ಸರಳವಾಗಿ ಹೇಳಬೇಕು. ಕಥೆಯನ್ನು ವೇಗವಾಗಿ ಓಡಿಸಬೇಕು. ಕಥೆಯ ಆರಂಭದಿಂದಲೇ ಓದುಗನನ್ನು ಹಿಡಿದಿಡುವ, ಕುತೂಹಲವನ್ನು ಕೆರಳಿಸುವ ಕುಶಲತೆಯಿರಬೇಕು. ಜೊತೆಗೆ ರಂಜಕ, ರೋಚಕ, ಪ್ರಚೋದಕ ಗುಣಗಳನ್ನು ಬಳಸುವ ಬುದ್ಧಿವಂತಿಕೆಯೂ ಬರಹಗಾರನಿಗಿರಬೇಕು. ಓದುತ್ತಾ ಹೋದಂತೆ ಓದುಗ ಪುಳಕಗೊಳ್ಳಬೇಕು. ಮುಂದೇನು ಎಂದು ತುದಿಗಾಲಲ್ಲಿ ನಿಂತು ತಲೆಕೆಡಿಸಿಕೊಳ್ಳಬೇಕು. ಪತ್ತೇದಾರಿ ಕಥೆಗಳಲ್ಲಿ ಶೃಂಗಾರ ಸಾಮಾನ್ಯ. ಅದು ಅತಿಯಾಗದಂತೆ, ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವ ಜಾಣ್ಮೆ ಇರಬೇಕು. ಹೆಣ್ಣಿನ ಸೌಂದರ್ಯವನ್ನು ರಸವತ್ತಾಗಿ ವರ್ಣಿಸಿ ಓದುಗರನ್ನು ಉನ್ಮಾದಗೊಳಿಸುವುದನ್ನೂ ತಿಳಿದಿರಬೇಕು.
ಅಂದರೆ ಆತಂಕ, ಕೌತುಕ, ಭಯಾನಕ ಹಾಗೂ ಶೃಂಗಾರ ದೃಶ್ಯಗಳನ್ನು ಒಂದಕ್ಕೊಂದು ಹೆಣೆಯುತ್ತಾ ಹೋಗುವುದೇ ಪತ್ತೇದಾರಿ ಕಥೆಯ ತಿರುಳು. ಹಾಗೆಯೇ ಪತ್ತೇದಾರಿ ಕಾದಂಬರಿಕಾರ ಅಪರಾಧ ಜಗತ್ತಿನ ಅನೇಕ ವಿಷಯಗಳನ್ನು ತಿಳಿದುಕೊಂಡಿರಬೇಕು. ಹೊಡೆದಾಟ, ದರೋಡೆ, ಅಪಹರಣಗಳ ಬಗ್ಗೆ ಅರಿವಿರಬೇಕು. ಆಯುಧಗಳ ಬಗ್ಗೆ ತಿಳಿವಳಿಕೆ ಮತ್ತು ಅವುಗಳನ್ನು ಬಳಸುವ ವಿಧಾನವನ್ನು ತಿಳಿದಿರಬೇಕು. ಪೊಲೀಸು, ಕೋರ್ಟು, ಕಾನೂನು, ಕಟ್ಟಳೆಗಳನ್ನು, ಐಪಿಸಿ ಸೆಕ್ಷನ್‌ಗಳನ್ನು, ಆಧುನಿಕ ವೈಜ್ಞಾನಿಕ ಜಗತ್ತಿನ ಬಗೆಗಿನ ತಿಳಿವಳಿಕೆಯನ್ನೂ ಹೊಂದಿರಬೇಕು.
ಪತ್ತೇದಾರಿ ಕಥೆಗಳನ್ನು ಬರೆಯಬೇಕೆಂದರೆ ಹೆಚ್ಚು ಓದಿರಬೇಕು. ಇಲ್ಲ ಕೇಳಿ ತಿಳಿದಿರಬೇಕು, ಕಲ್ಪಿಸಿಕೊಂಡು ಬರೆಯುವ ಕಲೆ ಗೊತ್ತಿರಬೇಕು. ಹಾಗೆಯೇ ಮನುಷ್ಯರ ಹಾವಭಾವಗಳು, ಸ್ಥಳಪುರಾಣ-ಪರಿಚಯವನ್ನು ಹೊಂದಿರಬೇಕು. ಇದು ಪತ್ತೇದಾರಿ ಕಥೆಗಾರರಿಗೆ ತುಂಬಾ ಮುಖ್ಯ. ಹಾಗೆಯೇ ಕಥೆ ಎಷ್ಟೇ ಚೆನ್ನಾಗಿ ಪ್ರಾರಂಭಿಸಿದರೂ, ಎಷ್ಟೇ ಚೆನ್ನಾಗಿ ನಿರೂಪಿಸಿದರೂ ಓದುಗರ ಮನಸ್ಸಲ್ಲಿ ನಿಲ್ಲಬೇಕೆಂದರೆ, ಗೆಲ್ಲಬೇಕಾದರೆ ಕ್ಲೈಮ್ಯಾಕ್ಸ್ ಅದ್ಭುತವಾಗಿರಲೇಬೇಕು.
ಇಂತಹ ಅದ್ಭುತ ಲೋಕವನ್ನು ಸೃಷ್ಟಿಸಿ, ಕನ್ನಡದ ಆಧುನಿಕ ಪತ್ತೇದಾರಿ ಸಾಹಿತ್ಯಕ್ಕೆ ಮುನ್ನುಡಿ ಬರೆದವರು ಎನ್. ನರಸಿಂಹಯ್ಯ(1925-2011)ನವರು. ಕನ್ನಡದ ಪತ್ತೇದಾರಿ ಪಿತಾಮಹ, ಕನ್ನಡದ ಶೆರ್ಲಾಕ್ ಹೋಮ್ಸ್ ಎಂದೆಲ್ಲ ಖ್ಯಾತರಾಗಿದ್ದ ಇವರು ಇವತ್ತಿಲ್ಲ, ಇವರ ಪುಸ್ತಕಗಳಿವೆ.
ಕನ್ನಡ ಸಾಹಿತ್ಯ ಲೋಕದ ದುರದೃಷ್ಟಕರ ಸಂಗತಿ ಎಂದರೆ, ನರಸಿಂಹಯ್ಯನವರು ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆ ಪತ್ತೇದಾರಿ ಸಾಹಿತ್ಯ ಸೌಧ ತಲೆ ಎತ್ತಿ ನಿಲ್ಲಲೇ ಇಲ್ಲ. ಅವರು ಬರೆಯುತ್ತಿದ್ದ ಕಾಲಕ್ಕೂ, ಇವತ್ತಿನ ಕಾಲಕ್ಕೂ ಕನ್ನಡ ಪತ್ತೇದಾರಿ ಕಾದಂಬರಿ ಲೋಕದಲ್ಲಿ ನರಸಿಂಹಯ್ಯನವರೊಬ್ಬರೇ ನೆಲೆ ನಿಂತ ನಿಜಲೇಖಕರು. ಈ ನಡುವೆ ಹತ್ತಾರು ಲೇಖಕರು, ನಾಲ್ಕಾರು ಪ್ರಕಾಶಕರು, ಸಾವಿರಾರು ಪುಸ್ತಕಗಳು ಬಂದುಹೋದರೂ ಕನ್ನಡಿಗರ ಮನದಲ್ಲಿ ಉಳಿದದ್ದು ನರಸಿಂಹಯ್ಯನವರೊಬ್ಬರೆ ಪತ್ತೇದಾರಿ ಪುರುಷೋತ್ತಮ.
ಬೆಂಗಳೂರಿನ ಬಳೇಪೇಟೆ ಸರ್ಕಲ್ಲಿನಲ್ಲಿರುವ ಗೀತಾ ಏಜನ್ಸೀಸ್ ಸಗಟು ಪುಸ್ತಕ ಮಳಿಗೆ ಮಾಲಕ ಸುಂದರ್ ರಾಜ್, ‘ಕನ್ನಡದ ಪತ್ತೇದಾರಿ ಕಾದಂಬರಿಗಳ ಕಾಲ ಮುಗೀತು, ಇವತ್ತು ಕೇಳುವವರೂ ಇಲ್ಲ ಬರೆಯುವವರೂ ಇಲ್ಲ’ ಎಂದಿದ್ದು ಪತ್ತೇದಾರಿ ಕಾದಂಬರಿ ಜಗತ್ತಿನ ಜಾತಕವನ್ನೇ ಬಿಚ್ಚಿಟ್ಟಿತ್ತು. ಯಾಕೆಂದರೆ, ಸುಂದರ್ ರಾಜ್‌ರ ಪುಸ್ತಕ ಪ್ರಕಾಶನ ಮತ್ತು ಮಾರಾಟ ಮಳಿಗೆಗೆ ಎಂಭತ್ತು ವರ್ಷಗಳ ಸುದೀರ್ಘ ಇತಿಹಾಸವಿದೆ. ಪುಸ್ತಕ ವ್ಯಾಪಾರದಲ್ಲಿ ಅಪಾರ ಅನುಭವವಿದೆ. ಇಂಥವರು, ‘ಇವತ್ತಿಗೂ ಪತ್ತೇದಾರಿ ಕಾದಂಬರಿ ಎಂದರೆ ಎನ್. ನರಸಿಂಹಯ್ಯನವರದೆ’ ಎಂದಿದ್ದು ಕನ್ನಡ ಪತ್ತೇದಾರಿ ಸಾಹಿತ್ಯದ ದಿಕ್ಕು ದೆಸೆಗಳನ್ನು ಅನಾವರಣಗೊಳಿಸಿತ್ತು.
ಇದು ನಿಜಕ್ಕೂ ಕನ್ನಡ ಸಾರಸ್ವತ ಲೋಕ ಗಂಭೀರವಾಗಿ ಯೋಚಿಸಬೇಕಾದ ಸಂಗತಿ.
ಒಬ್ಬ ಲೇಖಕನಿಗೆ ಇಬ್ಬರು ಪ್ರಕಾಶಕರು
ಆಂಧ್ರಪ್ರದೇಶದ ವಿಜಯವಾಡದ ಹತ್ತಿರದ ಮಧುಬಾಬು ವೃತ್ತಿಯಲ್ಲಿ ಶಾಲಾ ಹೆಡ್‌ಮಾಸ್ಟರ್. ಇವರು ತೆಲುಗಿನ ಬಹುಬೇಡಿಕೆಯ, ಜನಪ್ರಿಯ ಪತ್ತೇದಾರಿ ಕಾದಂಬರಿಕಾರರು. ಇವರು 1970ರಿಂದ 90ರವರೆಗೆ ಬರೆದ ನೂರಾರು ಪತ್ತೇದಾರಿ ಕಾದಂಬರಿಗಳು ತೆಲುಗಿನ ಓದುಗರ ಕತೂಹಲವನ್ನು ತಣಿಸಿದ್ದುಂಟು. ಈ ಲೇಖಕರ ಹೆಚ್ಚುಗಾರಿಕೆ ಎಂದರೆ, ಎಂಟ್ಹತ್ತು ರೂಪಾಯಿಗಳ ಮುಖಬೆಲೆಯ ಇವರ ಪಾಕೆಟ್ ಪುಸ್ತಕಗಳು ಹಾಟ್ ಕೇಕ್‌ನಂತೆ ಖರ್ಚಾಗುತ್ತವೆ. ಈ ಕಾರಣದಿಂದಲೇ ಮಧುಬಾಬು ಬರೆಯುವ ಪತ್ತೇದಾರಿ ಕಾದಂಬರಿಗಳಿಗೆ ವಿಜಯವಾಡ ಮತ್ತು ಚೆನ್ನೈನಲ್ಲಿ ಎರಡು ಪ್ರಕಾಶನ ಸಂಸ್ಥೆಗಳಿದ್ದು, ಹೊಸ ಪುಸ್ತಕವನ್ನು ಪಬ್ಲಿಷ್ ಮಾಡುವಲ್ಲಿ ಇಬ್ಬರ ನಡುವೆ ಪೈಪೋಟಿಯಿದ್ದ ಕಾಲವೂ ಇತ್ತು.
ಬೆಂಗಳೂರಿನಲ್ಲಿ ತೆಲುಗು ಭಾಷೆ ಮಾತನಾಡುವ ಮಂದಿ ಹೆಚ್ಚಾಗಿದ್ದಾರೆ, ಕನ್ನಡಕ್ಕಿಂತಲೂ! ಮಧುಬಾಬು ಪುಸ್ತಕಗಳನ್ನು ಓದುವವರ ಸಂಖ್ಯೆಯೂ ಹೆಚ್ಚಾಗಿದೆ. ಬೆಂಗಳೂರಿನ ತೆಲುಗು ಪುಸ್ತಕಗಳ ಸಗಟು ವಿತರಕರಾದ ಲಕ್ಷ್ಮೀನಾರಾಯಣ ಮತ್ತು ಕೇಶವ್ ಹೇಳುವ ಪ್ರಕಾರ, ‘ಮಧುಬಾಬು ಪುಸ್ತಕಗಳು ಆ ಕಾಲದಲ್ಲಿ ಒಂದೊಂದು ಟೈಟಲ್ ಕಡಿಮೆ ಎಂದರೂ ಐದು ನೂರು ಪುಸ್ತಕಗಳು ಖರ್ಚಾಗುತ್ತಿದ್ದವು, ಈಗ ಕೊಂಚ ಕಡಿಮೆಯಾಗಿದೆ. ಆದರೆ ಕೇಳುವವರು ಈಗಲೂ ಇದ್ದಾರೆ’ ಎನ್ನುತ್ತಾರೆ.
ನರಸಿಂಹಯ್ಯನವರ ನಂತರದ ಕನ್ನಡದ ಕೆಲ ಪತ್ತೇದಾರಿ ಕಾದಂಬರಿಕಾರರು ಮಧುಬಾಬು ಅವರ ಹೊಸ ಪತ್ತೇದಾರಿ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸುವುದು 90ರ ದಶಕದ ದಿನಗಳಲ್ಲಿ ಸಾಮಾನ್ಯವಾಗಿತ್ತು. ಇತ್ತೀಚೆಗೆ ಮಧುಬಾಬು ಬೇಡಿಕೆ ಕಡಿಮೆಯಾಗಿ ಬರೆಯುವುದು ಕಡಿಮೆಯಾಯಿತು. ಕನ್ನಡದಲ್ಲೂ ಇಲ್ಲವಾಯಿತು.
ಹಾಗೆ ನೋಡಿದರೆ ಪತ್ತೇದಾರಿ ಕಾದಂಬರಿ ಗಂಭೀರ ಸಾಹಿತ್ಯವಲ್ಲ. ನರಸಿಂಹಯ್ಯ ಮಹಾ ಕಾವ್ಯ-ಕಾದಂಬರಿಗಳನ್ನು ಬರೆದವರಲ್ಲ. ಸಂಸ್ಕೃತಿ ಚಿಂತಕರೆಂದು ಪ್ರಸಿದ್ಧಿ ಪಡೆದವರಲ್ಲ. ಕನ್ನಡ ಸಾರಸ್ವತ ಲೋಕವನ್ನು ಉದ್ಧರಿಸಿದವರೂ ಅಲ್ಲ. ಆದರೆ ತಾವು ಕಂಡ, ಕೇಳಿದ, ಕಲ್ಪನೆಯಿಂದ ಮೂಡಿದ ಕಥೆಗಳನ್ನೇ ಕುತೂಹಲಕರ ರೀತಿಯಲ್ಲಿ ಕಂಡಿರಿಸಿ, ಕನ್ನಡಿಗರನ್ನು ಕುತೂಹಲದ ಕಡಲಿಗೆ ಕರೆದುಕೊಂಡು ಹೋದವರು. ಸಾಮಾನ್ಯ ಓದುಗರಿಗೆ ಅರ್ಥವಾಗುವಂತೆ ಬರೆದವರು. ಪತ್ತೇದಾರಿ ಪುರುಷೋತ್ತಮ, ಮಧುಸೂದನ, ಅರಿಂಜಯ, ಗಾಳಿರಾಯಗಳೆಂಬ ‘ಕನ್ನಡದ ಬಾಂಡ್’ ಗಳನ್ನು ಸೃಷ್ಟಿಸಿ, ರೋಚಕ ಜಗತ್ತನ್ನು ರೋಮಾಂಚಕ ಘಟನೆಗಳ ಮೂಲಕ ರಂಜಕವಾಗಿ, ಕಣ್ಣಿಗೆ ಕಟ್ಟುವಂತೆ ವಿವರಿಸಿ ಓದುಗರ ಮನ ಗೆದ್ದವರು. ಒಂದು ತಲೆಮಾರನ್ನೇ ಓದಿನ ಗೀಳಿಗೆ ಹಚ್ಚುವ ಮೂಲಕ, ಮುಂದೊಂದು ದಿನ ಅವರು ಕನ್ನಡ ಸಾಹಿತ್ಯ ಲೋಕದೊಂದಿಗೆ ಒಡನಾಡಲು ಸಂಪರ್ಕ ಸೇತುವೆಯಾದವರು.
ಇದು ಅಂತಿಂಥ ಕೊಡುಗೆಯಲ್ಲ.
ಚಿಕ್ಕ ವಯಸ್ಸಿನಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡು ಬಡತನದಲ್ಲಿ ಬೆಳೆದ ನರಸಿಂಹಯ್ಯನವರು, ಹೊಟ್ಟೆಪಾಡಿಗಾಗಿ ಮಾಡದೆ ಇದ್ದ ಕೆಲಸಗಳೇ ಇಲ್ಲ. ‘ನನ್ನ ಕೆಲಸಗಳು ಮತ್ತು ದಿಕ್ಕೆಟ್ಟ ದರಿದ್ರ ಸ್ಥಿತಿಯೇ ನನ್ನನ್ನು ಬರೆಯಲು ಪ್ರೇರೇಪಿಸಿತು’ ಎಂದಿರುವ ನರಸಿಂಹಯ್ಯನವರು ಸುಮಾರು ಮೂವತ್ತೆರಡು ವರ್ಷಗಳ ಕಾಲ ಐನೂರೈವತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದಾರೆ. ಕನ್ನಡ ಪತ್ತೇದಾರಿ ಸಾಹಿತ್ಯ ಲೋಕ ಸ್ಮರಿಸಿಕೊಳ್ಳುವ ಕೊಡುಗೆ ನೀಡಿದ್ದಾರೆ.
ನರಸಿಂಹಯ್ಯನವರ ‘ಭಯಂಕರ ಬೈರಾಗಿ’ ಕಾದಂಬರಿಯಂತೂ ಅದೆಷ್ಟು ಸಲ ಮರುಮುದ್ರಣ ಕಂಡಿದೆಯೋ, ಪ್ರಿಂಟ್ ಹಾಕಿದವರೇ ಬಲ್ಲರು. ಇವರ ಪತ್ತೇದಾರಿ ಕಾದಂಬರಿಗಳನ್ನು 70ರ ದಶಕದ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸರೂ ಓದುತ್ತಿದ್ದರಂತೆ. ಕುತೂಹಲಕರ ಸಂಗತಿಗಳನ್ನು, ಘಟನೆಗಳನ್ನು ಕೆಲವರು ಕನ್ನಡ ಸಿನೆಮಾಗಳಲ್ಲಿ ಉಪಯೋಗಿಸಿಕೊಂಡಿದ್ದೂ ಉಂಟು. ನರಸಿಂಹಯ್ಯನವರ ಜೊತೆ ಜೊತೆಗೆ ಇವರ ಸಮಕಾಲೀನ ಲೇಖಕ ಎಂ. ರಾಮಮೂರ್ತಿಯವರು ಇಪ್ಪತ್ತಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಬರೆದು, ಕನ್ನಡದ ಓದುಗರ ಕುತೂಹಲವನ್ನು ತಣಿಸಿದ್ದಾರೆ.
ಇವರಿಬ್ಬರು ಬರೆಯುವ ಕಾಲಕ್ಕೇ, ಭಿನ್ನ ಬಗೆಯಲ್ಲಿ, ಜನಪ್ರಿಯ ಧಾಟಿಯಲ್ಲಿ ಪತ್ತೇದಾರಿ ಕಾದಂಬರಿಗಳಲ್ಲಿ ರಾಜಕೀಯವನ್ನು ತಂದವರು ಎಚ್.ಕೆ. ಅನಂತರಾವ್. ಇವರು ಸುಮಾರು ಮೂವತ್ನಾಲ್ಕು ಪತ್ತೇದಾರಿ ಪುಸ್ತಕಗಳನ್ನು ಬರೆದರು. ಇವರ ‘ಅಂತ’ ರಾಜಕೀಯ ಬೆರೆತ ಪತ್ತೇದಾರಿ ಕಾದಂಬರಿ. ಇದು ಮೊದಲು ‘ಸುಧಾ’ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು. ಜನಮೆಚ್ಚುಗೆ ಪಡೆಯಿತು. ಆ ನಂತರ ಈ ಕಾದಂಬರಿಯನ್ನು ಆಧರಿಸಿ ಚಲನಚಿತ್ರ ನಿರ್ಮಿಸಲಾಯಿತು. ಅದ್ಭುತ ಯಶಸ್ಸು ಕಂಡ ಚಿತ್ರ, ಅಂಬರೀಷ್‌ರನ್ನು ಜನಪ್ರಿಯ ನಟನನ್ನಾಗಿಸಿತು. ಪತ್ತೇದಾರಿ ಸಾಹಿತ್ಯಕ್ಕೆ ಹೊಸ ತಿರುವು ನೀಡಿತು.
ಅನಂತರಾವ್‌ರ ಹಾದಿಯಲ್ಲಿ, ಕೊಂಚ ಭಿನ್ನವಾಗಿ ಪತ್ತೇದಾರಿ ಕಾದಂಬರಿಗಳನ್ನು ಬರೆದ ಮತ್ತೊಬ್ಬರು, ಸುದರ್ಶನ್ ದೇಸಾಯಿ. ಇವರು ಈ ಮೊದಲೇ ಕಥೆೆ, ಕಾದಂಬರಿಗಳನ್ನು ಬರೆದು ಸಾಹಿತಿಗಳ ಸಾಲಿಗೆ ಸೇರಿಹೋಗಿದ್ದರೂ, ಮನೋ ವೈಜ್ಞಾನಿಕ ಪತ್ತೇದಾರಿ ಕಾದಂಬರಿಗಳನ್ನು ಬರೆಯುವ ಮೂಲಕ ಪತ್ತೇದಾರಿ ಪ್ರಕಾರಕ್ಕೆ ಜನಪ್ರಿಯ ಆಯಾಮವನ್ನು ನೀಡಿದವರು. ಇವರ ‘ಹಳದಿ ಚೇಳು’ ಜನಮೆಚ್ಚಿಗೆ ಪಡೆದ ಪತ್ತೇದಾರಿ ಕಾದಂಬರಿ. ಇವರ 29ಕ್ಕೂ ಹೆಚ್ಚು ಕಾದಂಬರಿಗಳು ಕೆಲವು ಚಲನಚಿತ್ರಗಳಿಗೆ ವಸ್ತುವಾಗಿವೆ. ಲೇಖಕರಿಗೂ, ಸಾಹಿತ್ಯ ಜಗತ್ತಿಗೂ ಜನಪ್ರಿಯತೆಯನ್ನು ತಂದುಕೊಟ್ಟಿವೆ.
ನೆಟ್‌ನಲ್ಲಿ ನಾಲ್ಕು ಜನ
ಪುಸ್ತಕ ರೂಪದಲ್ಲಿ ಪತ್ತೇದಾರಿ ಕಾದಂಬರಿಗಳು ಪ್ರಿಂಟಾಗುತ್ತಿಲ್ಲ. ಈ ಆಧುನಿಕ ಕಂಪ್ಯೂಟರ್-ಮೊಬೈಲ್ ಕಾಲದಲ್ಲಿ, ಬ್ಲಾಗ್‌ಗಳಲ್ಲಿ, ವೆಬ್ ಸೈಟ್‌ಗಳಲ್ಲಾದರೂ ಹೊಸ ಪತ್ತೇದಾರಿ ಕಾದಂಬರಿಕಾರರು ಬರೆಯುತ್ತಿರಬಹುದೆ ಎಂದು ನೋಡಿದರೆ, ನಿಮಗೆ ನಿರಾಸೆ ಕಟ್ಟಿಟ್ಟ ಬುತ್ತಿ. ಆರ್ಕುಟ್‌ನಲ್ಲಿ ಅರವಿಂದ್ ಅಯ್ಯಂಗಾರ್ ಎನ್ನುವವರು ಒಂದು ಬ್ಲಾಗ್ ತೆರೆದು ಕನ್ನಡಿಗರಿಗಾಗಿ ಪತ್ತೇದಾರಿ ಕಥೆಗಳನ್ನು ಬರೆದು ಅಪ್‌ಲೋಡ್ ಮಾಡಿದ್ದಾರೆ. ಅಷ್ಟೇ ಅಲ್ಲ, ಆಸಕ್ತರು ನಮ್ಮ ಬಳಗದ ಸದಸ್ಯರಾಗಬಹುದು, ಬರೆಯಬಹುದು, ಬೇರೆಯವರು ಬರೆದದ್ದನ್ನು ಓದಬಹುದು, ಪ್ರತಿಕ್ರಿಯಿಸಬಹುದು ಎಂದಿದ್ದಾರೆ. ಆಶ್ಚರ್ಯಕರ ಸಂಗತಿ ಎಂದರೆ, ಜುಲೈ 2010ರಲ್ಲಿ ಈ ಬ್ಲಾಗ್ ಆರಂಭವಾಗಿದೆ. ಇಲ್ಲಿಯವರೆಗೆ, ಒಂದಷ್ಟು ಜನ ಮೆಂಬರ್ ಆಗಿದ್ದಾರೆ, ಪ್ರತಿಕ್ರಿಯಿಸಿದ್ದಾರೆ. ಮತ್ತೆ ಕೆಲವರು ತಮ್ಮ ಹೊಸ ಪತ್ತೇದಾರಿ ಕಾದಂಬರಿಗಳನ್ನು ಅಪ್‌ಲೋಡ್ ಮಾಡಿದ್ದಾರೆ.
ಸುದರ್ಶನ್ ದೇಸಾಯಿ ಅವರದೇ ಹಾದಿಯಲ್ಲಿ ಪತ್ತೇದಾರಿ ಕಾದಂಬರಿ ಲೋಕವನ್ನು ಇನ್ನಷ್ಟು ಜನಪ್ರಿಯಗೊಳಿಸಿ, ವಿಸ್ತರಿಸಿದವರು ಟಿ.ಕೆ. ರಾಮರಾವ್ ಮತ್ತು ವಿಜಯ ಸಾಸನೂರು. ಇವರ ಅನೇಕ ಕಥೆಗಳು ಕನ್ನಡ ದಿನಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದ್ದೂ ಉಂಟು. ಜ್ಞಾನಪೀಠ ಪುರಸ್ಕೃತ ಸಾಹಿತಿ ಶಿವರಾಮ ಕಾರಂತರು ಮತ್ತು ಹಾಸ್ಯ ಪ್ರಕಾರಕ್ಕೆ ಹೆಸರಾಗಿದ್ದ ಬೀಚಿ ಕೂಡ ತಲಾ ಒಂದೊಂದು ಕಾದಂಬರಿಗಳನ್ನು ಬರೆದಿದ್ದೂ ಉಂಟು.
ನರಸಿಂಹಯ್ಯ, ರಾಮಮೂರ್ತಿ, ಮಾಭಿಶೇ, ಜಿಂದೆ ನಂಜುಂಡಸ್ವಾಮಿ, ಕೌಂಡಿನ್ಯ, ಕಾಕೋಳು ರಾಮಯ್ಯ, ಎಂ. ಶಿವಾಜಿರಾವ್ ಅವರು ಒಂದು ಕಡೆಯಾದರೆ, ಮತ್ತೊಂದು ಕಡೆಯಲ್ಲಿ ಎಚ್.ಕೆ. ಅನಂತರಾವ್, ಟಿ.ಕೆ. ರಾಮರಾಮ್, ಸುದರ್ಶನ್ ದೇಸಾಯಿ, ವಿಜಯ ಸಾಸನೂರು. ಈ ಲೇಖಕರದೊಂದು ಘಟ್ಟ. ಈ ಪೀಳಿಗೆಯ ಪತ್ತೇದಾರಿ ಕಾದಂಬರಿಕಾರರ ನಂತರ ಬಂದವರು ಜಿ. ಪ್ರಕಾಶ್, ಸಾಸ್ಕಾಮೂರ್ತಿ, ಬಿ.ವಿ. ಅನಂತರಾಮ್, ಸಿ.ಎಸ್. ರಾವ್, ವಿಜಯಕುಮಾರ್ ಮುಂತಾದವರು. ಇವರೆಲ್ಲರೂ ಕನ್ನಡ ಪತ್ತೇದಾರಿ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ, ತಾವೂ ಬೆಳೆದು ಸಾಹಿತ್ಯಲೋಕವನ್ನೂ ಬೆಳೆಸಿದ್ದಾರೆ.
ವಿಪರ್ಯಾಸಕರ ಸಂಗತಿ ಎಂದರೆ, ಕೌತುಕ ಜಗತ್ತಿನ ಸೃಷ್ಟಿಕರ್ತ ಎನ್. ನರಸಿಂಹಯ್ಯನವರಿಂದಾಗಿ ಒಂದಿಷ್ಟು ಲೇಖಕರು ಬಂದರು; ಪುಸ್ತಕ ಲೋಕ, ಪ್ರಕಾಶನ ಸಂಸ್ಥೆಗಳು, ವ್ಯಾಪಾರ ವಹಿವಾಟು ಕೂಡ ವೃದ್ಧಿಯಾಯಿತು. ಅದಕ್ಕಿಂತ ಹೆಚ್ಚಾಗಿ ಪುಸ್ತಕ ಓದುವ ಒಂದು ವರ್ಗವೇ ಸೃಷ್ಟಿಯಾಯಿತು. ಆದರೆ ನರಸಿಂಹಯ್ಯನವರ ತಲೆಮಾರಿನ ನಂತರ, ಅಂದರೆ ಎಂಭತ್ತರ ಅಂತ್ಯ ಮತ್ತು ತೊಂಭತ್ತರ ಆರಂಭದ ಕಾಲಕ್ಕೆ ಕನ್ನಡ ಪತ್ತೇದಾರಿ ಕಾದಂಬರಿ ಲೋಕವನ್ನು ಮುನ್ನಡೆಸುವ ಮಹಾನುಭಾವರೇ ಇಲ್ಲದಂತಾದರು.
ಇದು ನಿಜಕ್ಕೂ ದುರಂತ.
ನನ್ನ ಅನುಭವದ ಪ್ರಕಾರ ಸಿ.ಎಸ್. ರಾವ್, ವಿಜಯಕುಮಾರ್ ನಂತರದ ಪತ್ತೇದಾರಿ ಲೇಖಕರ ಪೈಕಿ, ಇತ್ತೀಚಿನ ದಿನಗಳಲ್ಲಿ ರವಿರಾಜ್ ಬೈಕಂಪಾಡಿ, ವಾಸುದೇವಮೂರ್ತಿ, ಎಚ್.ಎನ್.ರಾಮಮೂರ್ತಿ ಎಂಬ ಮೂರ್ನಾಲ್ಕು ಲೇಖಕರ ಹೆಸರು ಕೇಳಿಬಂದದ್ದಿದೆ. ಆದರೆ ಈ ಲೇಖಕರು ಕೂಡ ಕೆಲ ಮಾಸ ಪತ್ರಿಕೆಗಳಲ್ಲಿ ಮಾತ್ರ ಪತ್ತೇದಾರಿ ಕಾದಂಬರಿ ಬರೆದು, ಒಂದೆರಡು ಪುಸ್ತಕಗಳನ್ನು ಪ್ರಕಟಿಸಿದ್ದು ಬಿಟ್ಟರೆ ಮುಂದುವರಿಸಿದ ಸುದ್ದಿ ಇಲ್ಲ. ಈ ಬಗ್ಗೆ ಮಾಸ ಪತ್ರಿಕೆಯ ಸಂಪಾದಕರನ್ನು ಕೇಳಿದರೆ, ‘ಓದುಗರಿದ್ದಾರೆ, ಬರೆಯುವವರಿಲ್ಲ’ ಎನ್ನುವ ಉತ್ತರ ಬರುತ್ತದೆ. ಹಾಗೆಯೇ ಪುಸ್ತಕ ಮಾರಾಟ ಮಳಿಗೆಯ ಮಾಲಕರನ್ನು ಕೇಳಿದರೆ, ‘ಇವತ್ತು ಪತ್ತೇದಾರಿ ಕಾದಂಬರಿಗಳನ್ನು ಕೇಳುವವರು ಕಡಿಮೆ, ಪತ್ತೇದಾರಿ ಕಾದಂಬರಿಗಳ ಥರಾನೆ ಇರುವ, ಸ್ವಲ್ಪ ಮಸಾಲೆ ಬೆರೆತ ರವಿ ಬೆಳಗೆರೆ, ಯಂಡಮೂರಿ ವೀರೇಂದ್ರನಾಥ್ ಪುಸ್ತಕಗಳು ಇದೇ ರೀತಿ ಓಡ್ತಾಯಿದ್ದವು. ಈಗ ಅವೂ ಕಡಿಮೆಯಾಗಿವೆ’ ಎನ್ನುತ್ತಾರೆ.
ಅಂದರೆ ಕನ್ನಡ ಪತ್ತೇದಾರಿ ಕಾದಂಬರಿ ಜಗತ್ತು ಕಣ್ಮರೆಯಾಯಿತೇ? ಕನ್ನಡ ಸಾರಸ್ವತ ಲೋಕದ ಒಂದು ಅವಿಭಾಜ್ಯ ಅಂಗವಾಗಿದ್ದ ಪತ್ತೇದಾರಿ ಕಾದಂಬರಿ ಪ್ರಾಕಾರ ಹೀಗೆ ಇದ್ದಕ್ಕಿದ್ದಂತೆ ಇಲ್ಲವಾಗಿದ್ದಕ್ಕೆ ಕಾರಣಗಳೇನು? ನರಸಿಂಹಯ್ಯನವರು ಬರೆಯುವ ಕಾಲಕ್ಕೆ, ಅವರು ಕಂಡದ್ದು ಕೇಳಿದ್ದು ಕಾಲ್ಪನಿಕ ಕಥೆಯಾಗುತ್ತಿತ್ತು. ಅವರ ನಂತರದ ಪೀಳಿಗೆಯ ಲೇಖಕರೂ ಅದೇ ದಾರಿ ಹಿಡಿದರೂ, ಇಂಗ್ಲಿಷ್‌ನ ಅಗಾಥೆ ಕ್ರಿಸ್ಟಿ, ಸರ್ ಆರ್ಥರ್ ಕಾನನ್ ಡೈಲ್, ಜೇಮ್ಸ್ ಹ್ಯಾಡ್ಲಿ ಚೇಸ್ ಕ್ರೈಮ್ ಥ್ರಿಲ್ಲರ್‌ಗಳನ್ನು; ಹಿಂದಿ, ತೆಲುಗು ಮತ್ತು ತಮಿಳಿನ ಕ್ರೈಮ್ ಸ್ಟೋರಿಗಳನ್ನು ಅವಲಂಬಿಸುವುದು ಅನುವಾದಿಸುವುದು ಕಾಣುತ್ತಿತ್ತು. ಆದರೆ ಇವತ್ತಿಗೂ ಇಂಗ್ಲಿಷ್ ನಲ್ಲಾಗಲಿ, ಭಾರತೀಯ ಇತರ ಭಾಷೆಗಳಲ್ಲಾಗಲಿ ಥ್ರಿಲ್ಲರ್‌ಗಳಿಗೇನು ಕೊರತೆಯಾಗಿಲ್ಲ. ಕನ್ನಡದಲ್ಲಿ ಮಾತ್ರ ಪತ್ತೇದಾರಿ ಪ್ರಕಾರ ಇಲ್ಲವೇ ಇಲ್ಲ. ಇದ್ದರೂ ಅದು, ಅಲ್ಲೊಂದು ಇಲ್ಲೊಂದು. ಅದು ಬಿಟ್ಟರೆ ಸಾಮಾಜಿಕ ಜಾಲತಾಣಗಳಲ್ಲಿ, ಪಿಡಿಎಫ್ ಮಾದರಿಯಲ್ಲಿ ಕಾಣಸಿಗುತ್ತವೆ.
ಪತ್ತೇದಾರಿ ಸಾಹಿತ್ಯದ ಕಥೆ ಹೀಗಾದರೆ, ಇದಕ್ಕಿಂತ ಕೊಂಚ ಮೇಲ್ಮಟ್ಟದ ಜನಪ್ರಿಯ ಸಾಹಿತ್ಯದ ಕಥೆ ಇನ್ನೊಂದು ಬಗೆಯದು. 1990ರ ಸುಮಾರಿಗೆ ಕನ್ನಡ ಜನಪ್ರಿಯ ಸಾಹಿತ್ಯಲೋಕಕ್ಕೆ ತೆಲುಗಿನ ಯಂಡಮೂರಿ ವೀರೇಂದ್ರನಾಥ್ ಕಾಲಿಟ್ಟರು. ವಾರಪತ್ರಿಕೆಗಳು ಇವರ ಕಾದಂಬರಿಗಳನ್ನು ಧಾರಾವಾಹಿಯಾಗಿ ಪ್ರಕಟಿಸತೊಡಗಿದವು. ತೆಲುಗಿನಲ್ಲಿ ದಂಡಿಯಾಗಿ ಬರೆಯುತ್ತಿದ್ದ ಇವರ ಕಾದಂಬರಿಗಳು ಯಾವ ಮಟ್ಟದ ಜನಪ್ರಿಯತೆ ಗಳಿಸಿದವೆಂದರೆ, ಕನ್ನಡದ ಪತ್ತೇದಾರಿ ಮತ್ತು ಜನಪ್ರಿಯ ಲೇಖಕರೆಲ್ಲ ಒಂದೇ ಏಟಿಗೆ ಮೂಲೆಗುಂಪಾಗಿ ಹೋದರು.
ಇದೆಲ್ಲಕ್ಕಿಂತಲೂ ಮುಖ್ಯವಾಗಿ ಇಂದಿನ ಯುವ ಪೀಳಿಗೆಯನ್ನು ಓದಿನ ಜಗತ್ತಿನತ್ತ ಆಕರ್ಷಿಸುವ ಜನಪ್ರಿಯ ಸಾಹಿತ್ಯದ ಕೊರತೆ ಎದ್ದು ಕಾಣುತ್ತಿದೆ. ಜೊತೆಗೆ ಇವತ್ತಿನ ಯುವ ಪೀಳಿಗೆ ಓದುವುದಕ್ಕಿಂತ ನೋಡುವುದರ (ಟಿವಿ, ಟ್ಯಾಬ್, ಕಂಪ್ಯೂಟರ್, ಮೊಬೈಲ್) ಕಡೆ ಆಕರ್ಷಿತಗೊಂಡಿದೆ. ಮಕ್ಕಳು ಆರಂಭದಿಂದಲೇ ಕಾನ್ವೆಂಟು, ಇಂಗ್ಲಿಷು ಎನ್ನುವುದರಿಂದ, ಅವರೆಲ್ಲ ಹ್ಯಾರಿ ಪಾಟರ್‌ನಂತಹ ಫ್ಯಾಂಟಸಿ ಕೃತಿಗಳತ್ತ ಜಾರುವುದರಿಂದ, ಕನ್ನಡ ಪತ್ತೇದಾರಿ ಕಥೆಗಳತ್ತ ನೋಡುವವರಿಲ್ಲದೆ ಲೇಖಕರಿಗೆ, ಪ್ರಕಾಶಕರಿಗೆ ಕೆಲಸವಿಲ್ಲದಂತಾಗಿದೆ. ಹಾಗೆಯೇ ಪ್ರಕಾಶಕರಿಗೆ ಹಣ ತಂದು ಕೊಡುತ್ತಿದ್ದ ಸರಕಾರದ ಗ್ರಂಥಾಲಯ ಇಲಾಖೆಯ ಸಗಟು ಖರೀದಿ ಕಳೆದ ಹತ್ತು ವರ್ಷಗಳಿಂದ ಕುಂಟುತ್ತಾ, ತೆವಳುತ್ತಾ ಸಾಗುತ್ತಿರುವುದು, ಪುಸ್ತಕೋದ್ಯಮದ ಹಿನ್ನಡೆಗೆ ಕಾರಣವಾಗಿದೆ. ಸಗಟು ಖರೀದಿಯ ವಶೀಲಿಬಾಜಿಗೆ ಒಳಗಾಗದ ಕೆಲ ಮಾನವಂತ ಪ್ರಕಾಶಕರಾದ ನುಡಿ ಪುಸ್ತಕದ ರಂಗನಾಥ್, ಲೋಹಿಯಾ ಪ್ರಕಾಶನದ ಚೆನ್ನಬಸವಣ್ಣ ಪುಸ್ತಕೋದ್ಯಮವನ್ನು ನಿಲ್ಲಿಸಿದ್ದೂ ಇದೆ.
ಇದರ ಜೊತೆಗೆ... ಕಾಲ, ಜನ, ಜೀವನಶೈಲಿ ಬದಲಾಗಿದೆ. ನೀತಿ ನಿಲುವು ಮೌಲ್ಯವೂ ಬದಲಾಗಿದೆ. ಮಾರುಕಟ್ಟೆ ಮಂತ್ರವೂ ಬದಲಾಗಿದೆ. ಬದಲಾದ ಕಾಲದಲ�