ಸ್ವಪ್ನ ವ್ಯಾಖ್ಯಾನ
ನಗುವಿನಂಗಳ..
ಮೀರತ್‌ನಲ್ಲಿ ಒಬ್ಬ ಸಜ್ಜನ ಮುಸ್ಲಿಮ್ ವಿದ್ವಾಂಸರಿದ್ದರು. ಅವರ ನಡೆ, ನುಡಿ, ಪಾಂಡಿತ್ಯ ಮತ್ತು ಉಪದೇಶಗಳಿಂದ ಸಾವಿರಾರು ಮಂದಿ ಪ್ರಭಾವಿತರಾಗಿದ್ದರು. ಅವರ ಅಭಿಮಾನಿ ಬಳಗ ದಿನೇ ದಿನೇ ವಿಸ್ತರಿಸುತ್ತಲೇ ಇತ್ತು. ಅವರ ಜನಪ್ರಿಯತೆಯ ಸುದ್ದಿ ಕೇಳಿ ಪಕ್ಕದ ದಿಲ್ಲಿಯ ಅಹಂಭಾವಿ ವಿದ್ವಾಂಸರೊಬ್ಬರಿಗೆ ಭಾರೀ ಹೊಟ್ಟೆ ಉರಿಯ ತೊಡಗಿತು. ಒಮ್ಮೆ ಒಂದು ಸಭೆಯಲ್ಲಿ ಆ ಸಜ್ಜನ ವಿದ್ವಾಂಸ ಸಿಕ್ಕಾಗ ಪ್ರಸ್ತುತ ದಿಲ್ಲಿಯ ವಿದ್ವಾಂಸ, ಎಲ್ಲರ ಮುಂದೆ ಮೀರತ್‌ನ ವಿದ್ವಾಂಸರನ್ನು ಅಪಮಾನಿಸಬೇಕೆಂದು ನಿರ್ಧರಿಸಿದರು. ‘‘ನಿಮಗೆ ಸ್ವಪ್ನಗಳನ್ನು ವ್ಯಾಖ್ಯಾನಿಸುವ ವಿದ್ಯೆ ಗೊತ್ತೇ?’’ ದಿಲ್ಲಿಯ ವಿದ್ವಾಂಸ ಕೇಳಿದರು.
‘‘ಇಲ್ಲ. ನಾನು ಆ ವಿಷಯದಲ್ಲಿ ತಜ್ಞನಲ್ಲ.’’ ಮೀರತ್ ವಿದ್ವಾಂಸರು ಸೌಜನ್ಯದೊಂದಿಗೆ ಉತ್ತರಿಸಿದರು. ‘‘ಹಾಗಾದರೆ ನೀವು ಅದೆಂತಹ ವಿದ್ವಾಂಸ?’’ ಎಂದು ದಿಲ್ಲಿಯ ವಿದ್ವಾಂಸ ಛೇಡಿಸಿದರು.
‘‘ಹೌದು ವಿದ್ವಾಂಸರೇ, ನಾನು ನಿಮ್ಮಂತಹ ಮಹಾ ವಿದ್ವಾಂಸನೇನೂ ಅಲ್ಲ.’’ ಮೀರತ್‌ನ ವಿದ್ವಾಂಸ ಹೇಳಿದರು. ಇದರಿಂದ ದಿಲ್ಲಿಯ ವಿದ್ವಾಂಸರ ಅಹಂಕಾರ ಮತ್ತಷ್ಟು ಹೆಚ್ಚಿತು. ‘‘ನಾನು ನಿಮ್ಮಂತಹ ಸಾಮಾನ್ಯ ವಿದ್ವಾಂಸನಲ್ಲ. ನೀವು ನಿಮ್ಮ ಯಾವುದಾದರೂ ಕನಸನ್ನು ನನಗೆ ತಿಳಿಸಿ ನೋಡಿ. ನಾನು ಅದೇ ಕ್ಷಣ ನಿಮಗೆ ಅದರ ವ್ಯಾಖ್ಯಾನವನ್ನು ತಿಳಿಸುತ್ತೇನೆ’’ ಎಂದು ಅವರು ಎಲ್ಲರಿಗೆ ಕೇಳಿಸುವಂತೆ ಸವಾಲು ಹಾಕಿದರು. ಕೂಡಲೇ ಅಕ್ಕಪಕ್ಕದ ಹಲವಾರು ಮಂದಿ ಬಂದು ಈ ಇಬ್ಬರು ವಿದ್ವಾಂಸರ ಸಂವಾದ ನೋಡಲು ಅವರ ಸುತ್ತ ಸೇರಿಕೊಂಡರು.
ಮೀರತ್ ವಿದ್ವಾಂಸ: ‘‘ನಿನ್ನೆ ನಾನೊಂದು ಕನಸು ಕಂಡೆ. ನಾನು ಮತ್ತು ನೀವು ಒಂದೆಡೆ ಜೊತೆಯಾಗಿದ್ದೆವು. ನನ್ನ ಕೈಯಲ್ಲಿ ಕೆಸರು ತುಂಬಿದ ಒಂದು ಪಾತ್ರೆಯಿತ್ತು. ನಿಮ್ಮ ಕೈಯಲ್ಲಿ ಜೇನುತುಪ್ಪ ತುಂಬಿದ್ದ ಒಂದು ಪಾತ್ರೆಯಿತ್ತು.... ....’’
ಅವರು ತಮ್ಮ ಮಾತನ್ನು ಪೂರ್ತಿಗೊಳಿಸುವ ಮುನ್ನವೇ ದಿಲ್ಲಿಯ ವಿದ್ವಾಂಸ ‘‘ನೋಡಿ, ನಾನು ನಿಮಗೆ ಮೊದಲೇ ಹೇಳಿದ್ದೆ. ನೀವು ನನ್ನಷ್ಟು ದೊಡ್ಡ ವಿದ್ವಾಂಸರಲ್ಲ. ನಿಮ್ಮ ಕನಸೇ ಅದಕ್ಕೆ ಸಾಕ್ಷಿ. ನಿಮ್ಮ ಕೈಯಲ್ಲಿದ್ದ ಕೆಸರಿನ ಪಾತ್ರೆಯು ನಿಮ್ಮ ಜ್ಞಾನ ಅಪೂರ್ಣ ಎಂಬುದನ್ನು ಸೂಚಿಸುತ್ತದೆ.’’ ನನ್ನ ಪಾತ್ರೆಯಲ್ಲಿ ಜೇನುತುಪ್ಪವಿರುವುದು, ನಾನು ಸರಿ ದಾರಿಯಲ್ಲಿರುವುದನ್ನು ಸೂಚಿಸುತ್ತದೆ ಎಂದು ಬೀಗುತ್ತಾ ಹೇಳಿದರು.
ಮೀರತ್‌ನ ವಿದ್ವಾಂಸ: ‘‘ಮಹಾವಿದ್ವಾಂಸರೇ, ನಾನು ನನ್ನ ಕನಸನ್ನು ಪೂರ್ತಿಯಾಗಿ ತಿಳಿಸುವ ಮುನ್ನವೇ ನೀವು ಅದನ್ನು ವ್ಯಾಖ್ಯಾನಿಸಿ ಬಿಟ್ಟಿರಲ್ಲ!’’
ದಿಲ್ಲಿಯ ವಿದ್ವಾಂಸರು ಹೇಳಿದರು: ‘‘ಹಾಗಾದರೆ ನಿಮ್ಮ ಕನಸನ್ನು ಪೂರ್ಣವಾಗಿ ತಿಳಿಸಿ.’’
ಮೀರತ್ ವಿದ್ವಾಂಸ: ‘‘ಕನಸಿನಲ್ಲಿ ನನ್ನ ಪಾತ್ರೆಯಲ್ಲಿದ್ದುದನ್ನು ನೀವು ತಿನ್ನುತ್ತಿದ್ದಿರಿ ಮತ್ತು ನಿಮ್ಮ ಪಾತ್ರೆಯಲ್ಲಿದ್ದುದನ್ನು ನಾನು ತಿನ್ನುತ್ತಿದ್ದೆ. ಈಗ ತಿಳಿಸಿ-ಇದರ ವ್ಯಾಖ್ಯಾನವೇನು?’’
ಜನರೆಲ್ಲಾ ಜೋರಾಗಿ ನಕ್ಕು ಬಿಟ್ಟರು. ಪಾಪ, ದಿಲ್ಲಿಯ ವಿದ್ವಾಂಸ ಬಾಯಿ ಮುಚ್ಚಿಕೊಂಡು ತೆಪ್ಪಗೆ ಅಲ್ಲಿಂದ ಹೊರಟು ಹೋದರು.