varthabharthi


ವಾರ್ತಾಭಾರತಿ 18ನೇ ವಾರ್ಷಿಕ ವಿಶೇಷಾಂಕ

ಪ್ರಾದೇಶಿಕತೆಯೊಂದಿಗೆ ವಿಶ್ವಾತ್ಮಕತೆ..

ವಾರ್ತಾ ಭಾರತಿ : 1 Feb, 2021
ಕೇಸರಿ ಹರವೂ

  1997-98ರಲ್ಲಿ ತೆರೆ ಕಂಡ ‘ಭೂಮಿ ಗೀತ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಂಡ ಕೇಸರಿ ಹರವೂ, ಪರಿಸರ ವಿಭಾಗದಲ್ಲಿ ರಾಷ್ಟ್ರೀಯ ಪುರಸ್ಕಾರಗಳಿಗೆ ಪಾತ್ರರಾಗಿ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದವರು. 2016ರಂದು ತೆರೆಕಂಡ 2ನೇ ಚಿತ್ರ ‘ಒಳ್ಳೆಯವರು’ ಕೂಡ ಹಲವು ಪ್ರಶಸ್ತಿ-ಪುರಸ್ಕಾರಗಳಿಗೆ ಪಾತ್ರವಾದ ಚಿತ್ರ. ಬಾಗೂರು-ನವಿಲೆ ಸುರಂಗದಿಂದಾದ ಅಂತರ್ಜಲ ಕುಸಿತಕ್ಕೆ ರೈತರ ಪರವಾಗಿ ಹೋರಾಟಕ್ಕೆ ಇಳಿದು, ನಾಟಕ, ಚಳವಳಿಗಳ ಮೂಲಕ ಪ್ರಭುತ್ವಕ್ಕೆ ನಿಜಸ್ಥಿತಿಯನ್ನು ತೆರೆದು ತೋರಿದವರು. ಪಶ್ಚಿಮ ಘಟ್ಟದ ಅತಿ ಸೂಕ್ಷ್ಮ ಪರಿಸರ ವಲಯವೆಂದೇ ಗುರುತಿಸುವ ಗುಂಡ್ಯದಲ್ಲಿ ಸರಕಾರ ವಿದ್ಯುತ್ ಯೋಜನೆಗೆ ಕೈಹಾಕಿದಾಗ, ಗುಂಡ್ಯ ಕುರಿತು ಸಾಕ್ಷಚಿತ್ರ ತಯಾರಿಸಿ, ಜನರಲ್ಲಿ ಜಾಗೃತಿ ಉಂಟು ಮಾಡಿದವರು. ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯನವರ ಮೇಲೆ ಸಾಕ್ಷಚಿತ್ರ ನಿರ್ಮಿಸಿ, ರೈತರ ಮನಗೆದ್ದವರು. ಹಾಗೆಯೇ ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಕೇಸರಿಯವರು, ಹಲವು ಪತ್ರಿಕೆಗಳಿಗೆ ಸಿನೆಮಾ, ಪರಿಸರ ಮತ್ತು ಅಭಿವೃದ್ಧಿ ಕುರಿತು ಹಲವು ಲೇಖನಗಳನ್ನು ಬರೆದಿರುವವರು.

 ಸಾಂಪ್ರದಾಯಿಕ ಚಿತ್ರ ನಿರ್ಮಾಣ ಮತ್ತು ಪ್ರದರ್ಶನ ವ್ಯವಸ್ಥೆಯಲ್ಲಿ ಚಿತ್ರವೊಂದರ ಪ್ರಿಂಟುಗಳು ಚಿತ್ರಮಂದಿರಗಳನ್ನು ಭೌತಿಕವಾಗಿ ತಲುಪಿದರಷ್ಟೇ ಅವನ್ನು ಪ್ರದರ್ಶಿಸಲು ಸಾಧ್ಯವಿತ್ತು. ನೂರು ಪ್ರಿಂಟು ಹಾಕಿಸಿದರೂ ಗರಿಷ್ಠ ಇನ್ನೂರು ಚಿತ್ರಮಂದಿರಗಳಲ್ಲಿ ಪ್ರದರ್ಶಿಸಬಹುದಿತ್ತು. ಹೆಚ್ಚೆಚ್ಚು ಚಿತ್ರಮಂದಿರಗಳನ್ನು ತಲುಪಲು ಹೆಚ್ಚೆಚ್ಚು ಪ್ರಿಂಟುಗಳು, ಸಮಯ ಬೇಕಾಗುತ್ತಿತ್ತು. ಅಷ್ಟರಲ್ಲಿ ಚಿತ್ರವೊಂದನ್ನು ಪ್ರೇಕ್ಷಕರು ಮೆಚ್ಚಿದ್ದಾರೋ ಇಲ್ಲವೋ ಎಂದು ನಿರ್ಧಾರವಾಗಿ, ಅದು ಇನ್ನೂ ತಲುಪದ ಪ್ರೇಕ್ಷಕರಿಗೂ ಜನಾಭಿಪ್ರಾಯ ತಲುಪಿ, ಸೋಲು-ಗೆಲುವುಗಳು ನಿರ್ಧಾರವಾಗಿ ಬಿಡುತ್ತಿದ್ದವು. ಹಾಗಾದರೆ ಮೊದಲ ಪ್ರೇಕ್ಷಕರ ಪ್ರತಿಕ್ರಿಯೆ ಇತರರಿಗೆ ತಲುಪುವ ಮೊದಲೇ ಗರಿಷ್ಠ ಪ್ರೇಕ್ಷಕರನ್ನು ತಲುಪಲು ಸಾಧ್ಯವಾದರೆ ಒಳಿತಲ್ಲವೇ? ಒಮ್ಮೆ ಒಂದು ಚಿತ್ರವನ್ನು ಸ್ಯಾಟಲೈಟ್‌ಗೆ ಏರಿಸಿಬಿಟ್ಟರೆ, ಅದನ್ನು ಜಗತ್ತಿನಗಲಕ್ಕೂ ಎಷ್ಟು ಚಿತ್ರಮಂದಿರಗಳಲ್ಲಿ ಬೇಕಾದರೂ ಏಕಕಾಲಕ್ಕೆ ಪ್ರದರ್ಶನ ಮಾಡಬಹುದು. ಈ ಅವಕಾಶವೇ ಇಡೀ ಚಿತ್ರಜಗತ್ತು ಡಿಜಿಟಲೀಕರಣವಾಗಲು ಕಾರಣವಾಯಿತು.

 ನೋವೆಲ್ ಕೊರೋನ ವೈರಸ್ ದೆಸೆಯಿಂದಾಗಿ ಜಗತ್ತಿನಾದ್ಯಂತ ಚಿತ್ರಮಂದಿರಗಳು ಬಂದ್ ಆದಮೇಲೆ ಕನ್ನಡ ಚಿತ್ರಗಳಿಗೆ ಬಂಡವಾಳ, ನಿರ್ಮಾಣ, ಪ್ರದರ್ಶನ ಮತ್ತು ಚಿತ್ರರಂಗದ ಏಳಿಗೆ ಹೇಗೆ? ಈಗ ನಮ್ಮಲ್ಲಿ ಚಿತ್ರಮಂದಿರಗಳು ಮತ್ತೆ ಆರಂಭವಾಗಿವೆ. ಆದರೂ, ಪ್ರೇಕ್ಷಕರು ಮೊದಲಿನ ಹಾಗೆಯೇ ಚಿತ್ರವೀಕ್ಷಣೆಯಲ್ಲಿ ತೊಡಗುತ್ತಾರೆಯೇ? ಅಥವಾ ಇನ್ನು ಮುಂದೆ ಬರೀ ಟಿವಿ, ಓಟಿಟಿ ತಾಣಗಳು ಮತ್ತು ಮೊಬೈಲ್ ಪರದೆಗಳ ಮೇಲೆ ಮಾತ್ರ ಸಿನೆಮಾ ನೋಡುವಂತಾಗುವುದೇ? ಹೂಡಿಕೆಯನ್ನು ಹಿಂಪಡೆಯಲು ಆದೀತೇ? ಎನ್ನುವ ಧೃತಿಗೆಡಿಸುವ ಪ್ರಶ್ನೆಗಳು ಏಳುವುದು ಸಹಜ. ಆದರೆ ಅದಕ್ಕೂ ಬಹಳ ಮೊದಲಿಂದಲೇ ಈ ಪ್ರಶ್ನೆಗಳು ಇದ್ದವು. ಕನ್ನಡ ಚಿತ್ರರಂಗ ಸೊರಗಿ ಹೋಗುತ್ತಲಿತ್ತು.

 ಸಂಖ್ಯೆಯನ್ನು ಒಟ್ಟುಹಾಕಿದರೆ ಕನ್ನಡದಲ್ಲಿ ಚಿತ್ರ ತಯಾರಿಕೆಯೇನೂ ಕಡಿಮೆಯಾಗಿಲ್ಲ. ಒಂದು ದಶಕದಿಂದ ಈಚೆಗೆ ವರ್ಷಕ್ಕೆ ಇನ್ನೂರ ಐವತ್ತಕ್ಕೂ ಹೆಚ್ಚು ಚಿತ್ರಗಳು ನಿರ್ಮಾಣವಾಗುತ್ತಿವೆ. 2018-19ರಲ್ಲಿ ಮುನ್ನೂರ ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳು ತಯಾರಾದವು. ಆದರೆ ಅವುಗಳಲ್ಲಿ ಶೇ.60ರಷ್ಟು ತೆರೆ ಕಾಣುವುದಿಲ್ಲ. ತೆರೆಕಂಡ ಚಿತ್ರಗಳಲ್ಲಿ ನಷ್ಟ ಅನುಭವಿಸುವ ಸಂಖ್ಯೆಯೇ ಹೆಚ್ಚು. ಇತರ ಮಾಧ್ಯಮಗಳ, ಇತರ ಭಾಷಾ ಚಿತ್ರಗಳ ನಡುವೆ ಕನ್ನಡ ಚಿತ್ರಗಳು ನಡೆಸಬೇಕಾದ ಪೈಪೋಟಿ, ಚಿತ್ರಮಂದಿರಗಳ ಮತ್ತು ಪ್ರೇಕ್ಷಕರ ಕೊರತೆ, ಗುಣಮಟ್ಟ, ರಾಜ್ಯದಾಚೆಗೆ ಬಿಡುಗಡೆಯನ್ನು ವಿಸ್ತರಿಸಲಾಗದಿರುವ ಪರಿಸ್ಥಿತಿ-ಹೀಗೆ ದಶಕಗಳಿಂದಲೂ ಹೇಳುತ್ತಲೇ ಬಂದಿರುವ ಹಲವಾರು ಕಾರಣಗಳನ್ನು ಕನ್ನಡ ಚಿತ್ರರಂಗದ ಇಳಿಮುಖ ಚಲನೆಗೆ ಆರೋಪಿಸುವುದು ಸುಲಭ. ಆದರೆ ವಾಸ್ತವ ಇನ್ನೂ ಆಳವಾಗಿದೆ.

  ಹೀಗಿರುವಾಗ ನಾವೆಲ್ಲ ನಮ್ಮ ಸೃಜನದಾಹವನ್ನು ತೀರಿಸಿಕೊಳ್ಳಬಹುದಾದ, ಸಾಮಾಜಿಕ ಗಾಂಭೀರ್ಯ ಹೊತ್ತ ಕನ್ನಡದ ಅಸ್ಮಿತೆಯನ್ನು ಪ್ರತಿನಿಧಿಸುವ ಚಿತ್ರಗಳನ್ನು ಈ ಕಾಲದಲ್ಲಿ ಮಾಡಲು ಸಾಧ್ಯವಿದೆಯೇ? ಸ್ವಲ್ಪ ನೋಟವನ್ನು ವಿಸ್ತರಿಸಿಕೊಂಡು ಎಲ್ಲೆಡೆ ನೋಡಿದರೆ ಇದು ನನ್ನೊಬ್ಬನ ಪ್ರಶ್ನೆಯಾಗದೆ ಜಾಗತಿಕವಾಗಿ ಎಲ್ಲ ಸ್ವತಂತ್ರ ಸೃಜನದಾಹಿ ನಿರ್ಮಾಪಕ, ನಿರ್ದೇಶಕರ ಪ್ರಶ್ನೆಯೂ ಹೌದು. ಏಕೆಂದರೆ ಚಿತ್ರರಂಗದ ಜಾಗತೀಕರಣವಾಗಿ ದಶಕದ ಮೇಲಾಯಿತು.

ಚಿತ್ರಮಾಧ್ಯಮದ ಡಿಜಿಟಲೀಕರಣ

ಈ ಸಹಸ್ರಮಾನದ ಆರಂಭದಲ್ಲಿ ಡಿಜಿಟಲ್ ತಂತ್ರಜ್ಞಾನವು ಚಿತ್ರಮಾಧ್ಯಮವನ್ನೂ ಆವರಿಸಿಕೊಂಡಿತು. ಕ್ಯಾಮರಾ, ಧ್ವನಿಗ್ರಹಣ, ಚಿತ್ರಿಕೆಗಳ ಸಂಗ್ರಹಣೆ ಮತ್ತು ಸಂಸ್ಕರಣೆ, ಪ್ರದರ್ಶನ ಎಲ್ಲವೂ ಡಿಜಿಟಲೀಕರಣವಾದವು. ಡಿಜಿಟಲ್ ಆವಿಷ್ಕಾರ ಪ್ರೇಕ್ಷಕರಿಗೆ ಮೊದಲಿಗಿಂತಲೂ ಉನ್ನತಮಟ್ಟದಲ್ಲಿ ಚಿತ್ರವೀಕ್ಷಣೆಯ ಸ್ವಾದಾನುಭವ ನೀಡುತ್ತದೆ ಎನ್ನುವುದು ಸುಳ್ಳಲ್ಲ. ಹಾಗಾಗಿ ಚಿತ್ರೋದ್ಯಮಗಳೂ ಈ ತಂತ್ರಜ್ಞಾನವನ್ನು ಸ್ವಾಗತಿಸಿದವು. ಜೊತೆಗೆ ಡಿಜಿಟಲ್ ಚಿತ್ರೀಕರಣದಲ್ಲಿ ಕಚ್ಚಾ ಫಿಲ್ಮನ್ನು ಬಳಸುವ ಅಗತ್ಯವೇ ಇಲ್ಲ, ಡಿಜಿಟಲ್ ಪ್ರದರ್ಶನದಲ್ಲಿ ಪ್ರಿಂಟುಗಳನ್ನು ಹಾಕಿಸುವ ಖರ್ಚೇ ಇಲ್ಲ, ಸಾಕಷ್ಟು ಉಳಿತಾಯವಾಗುತ್ತದೆ ಎಂದು ಬಿಂಬಿಸಲಾಯಿತು. ಕನ್ನಡದಲ್ಲೂ ಸೇರಿದಂತೆ ಎಲ್ಲೆಡೆಯೂ ಡಿಜಿಟಲ್ ಚಿತ್ರನಿರ್ಮಾಣ ಆರಂಭವಾಯಿತು. ಹೆಚ್ಚು ಹೆಚ್ಚು ಆಸಕ್ತರೂ ಚಿತ್ರ ನಿರ್ಮಾಣದಲ್ಲಿ ತೊಡಗಿದರು. ಇದು ವ್ಯಾಪಕವಾಗುತ್ತಿದ್ದಂತೆ ಡಿಜಿಟಲ್ ಪ್ರದರ್ಶನ ಮತ್ತೊಂದು ತಾಂತ್ರಿಕ ಮೆಟ್ಟಿಲು ಹತ್ತಿ ಉಪಗ್ರಹದ ಮೂಲಕ ಬಿತ್ತರಿಸುವ ಸ್ಯಾಟಲೈಟ್ ಪ್ರದರ್ಶನ ವ್ಯವಸ್ಥೆ ಆರಂಭವಾಯಿತು.

  ಚಿತ್ರರಂಗ ಜಾಗತಿಕವಾಗಿ ಡಿಜಿಟಲೀಕರಣವಾಗುವ ತುರ್ತಾದರೂ ಏನಿತ್ತು? ಚಿತ್ರ ನಿರ್ಮಾಣದ ಲಾಭನಷ್ಟಗಳ ಅನಿಶ್ಚಿತತೆ ಜಾಗತಿಕವಾದುದು. ಸಾಂಪ್ರದಾಯಿಕ ಚಿತ್ರ ನಿರ್ಮಾಣ ಮತ್ತು ಪ್ರದರ್ಶನ ವ್ಯವಸ್ಥೆಯಲ್ಲಿ ಚಿತ್ರವೊಂದರ ಪ್ರಿಂಟುಗಳು ಚಿತ್ರಮಂದಿರಗಳನ್ನು ಭೌತಿಕವಾಗಿ ತಲುಪಿದರಷ್ಟೇ ಅವನ್ನು ಪ್ರದರ್ಶಿಸಲು ಸಾಧ್ಯವಿತ್ತು. ನೂರು ಪ್ರಿಂಟು ಹಾಕಿಸಿದರೂ ಗರಿಷ್ಠ ಇನ್ನೂರು ಚಿತ್ರಮಂದಿರಗಳಲ್ಲಿ ಪ್ರದರ್ಶಿಸಬಹುದಿತ್ತು. ಹೆಚ್ಚೆಚ್ಚು ಚಿತ್ರಮಂದಿರಗಳನ್ನು ತಲುಪಲು ಹೆಚ್ಚೆಚ್ಚು ಪ್ರಿಂಟುಗಳು, ಸಮಯ ಬೇಕಾಗುತ್ತಿತ್ತು. ಅಷ್ಟರಲ್ಲಿ ಚಿತ್ರವೊಂದನ್ನು ಪ್ರೇಕ್ಷಕರು ಮೆಚ್ಚಿದ್ದಾರೋ ಇಲ್ಲವೋ ಎಂದು ನಿರ್ಧಾರವಾಗಿ, ಅದು ಇನ್ನೂ ತಲುಪದ ಪ್ರೇಕ್ಷಕರಿಗೂ ಜನಾಭಿಪ್ರಾಯ ತಲುಪಿ, ಸೋಲು-ಗೆಲುವುಗಳು ನಿರ್ಧಾರವಾಗಿ ಬಿಡುತ್ತಿದ್ದವು. ಹಾಗಾದರೆ ಮೊದಲ ಪ್ರೇಕ್ಷಕರ ಪ್ರತಿಕ್ರಿಯೆ ಇತರರಿಗೆ ತಲುಪುವ ಮೊದಲೇ ಗರಿಷ್ಠ ಪ್ರೇಕ್ಷಕರನ್ನು ತಲುಪಲು ಸಾಧ್ಯವಾದರೆ ಒಳಿತಲ್ಲವೇ? ಒಮ್ಮೆ ಒಂದು ಚಿತ್ರವನ್ನು ಸ್ಯಾಟಲೈಟ್‌ಗೆ ಏರಿಸಿಬಿಟ್ಟರೆ, ಅದನ್ನು ಜಗತ್ತಿನಗಲಕ್ಕೂ ಎಷ್ಟು ಚಿತ್ರಮಂದಿರಗಳಲ್ಲಿ ಬೇಕಾದರೂ ಏಕಕಾಲಕ್ಕೆ ಪ್ರದರ್ಶನ ಮಾಡಬಹುದು. ಈ ಅವಕಾಶವೇ ಇಡೀ ಚಿತ್ರಜಗತ್ತು ಡಿಜಿಟಲೀಕರಣವಾಗಲು ಕಾರಣವಾಯಿತು.

 ಈ ತಾಂತ್ರಿಕತೆಯನ್ನು ಬಳಸಿಕೊಂಡು ಜಾಗತಿಕ ಬಂಡವಾಳಶಾಹಿ ಶಕ್ತಿಗಳು ತಮ್ಮ ವಹಿವಾಟನ್ನು ಎಲ್ಲ ದೇಶಗಳಿಗೂ ಪಸರಿಸುವುದಕ್ಕೆ ಆರಂಭಿಸಿದವು. ತಮ್ಮ ವಹಿವಾಟನ್ನು ಎಲ್ಲ ದೇಶಗಳಿಗೂ ವಿಸ್ತರಿಸುವುದಕ್ಕಾಗಿ ಜಾಗತಿಕ ಬಂಡವಾಳಶಾಹಿ ಶಕ್ತಿಗಳು ಡಿಜಿಟಲ್ ತಂತ್ರಜ್ಞಾನವನ್ನು ಚಿತ್ರರಂಗಕ್ಕೂ ವಿಸ್ತರಿಸಿದವು. ಮೇಲಿನ ಎರಡು ವಾಕ್ಯಗಳಲ್ಲಿ ಯಾವುದು ಸರಿ? ಎರಡೂ ಸರಿಯೇ. ಯಾವುದು ಹೆಚ್ಚು ಸರಿ? ಉತ್ತರ ಅವರವರ ತಾತ್ವಿಕ ನಿಲುವಿನ ಮೇಲೆ ಅವಲಂಬಿಸಿರುತ್ತದೆ. ಏನೇ ಇರಲಿ, ಈಗಿನ ಸ್ಯಾಟಲೈಟ್ ಪ್ರದರ್ಶನ ವ್ಯವಸ್ಥೆ ಇಂದು ಕೆಲವೇ ಬಂಡವಾಳಶಾಹಿಗಳ ಕೈಯಲ್ಲಿದೆ. ಅಷ್ಟಲ್ಲದೆ, ಇಂಟರ್‌ನೆಟ್ ಸಂಪರ್ಕದಲ್ಲಿ ಓಟಿಟಿ ತಾಣಗಳ ಮೂಲಕ ಮತ್ತು ಮೊಬೈಲ್ ಪರದೆಗಳ ಮೂಲಕ ಚಿತ್ರಗಳನ್ನು ಪ್ರಸರಿಸುವ ವ್ಯವಸ್ಥೆಯೂ ಬಹುತೇಕ ಅಂತಹ ಬಂಡವಾಳದ ಕೈಯಲ್ಲೇ ಇದೆ.

ದೊಡ್ಡ ಬಂಡವಾಳಿಗನ ಮತ್ತೊಂದು ಉದ್ಯಮ ಮಲ್ಟಿಪ್ಲೆಕ್ಸ್‌ಗಳು. ಈಗ ಎಲ್ಲ ನಗರ ಪ್ರದೇಶಗಳಲ್ಲೂ ಅತ್ಯಾಕರ್ಷಕವಾದ ಮಲ್ಟಿಪ್ಲೆಕ್ಸ್‌ಗಳು ಬಂದಿವೆ. ಒಂದೊಂದು ಮಲ್ಟಿಪ್ಲೆಕ್ಸ್‌ನಲ್ಲೂ 8-10 ಪರದೆಗಳಿವೆ. ಹಲವು ದೊಡ್ಡ ಹೂಡಿಕೆಯ ಕಾರ್ಪೊರೇಟ್ ಸಂಸ್ಥೆಗಳು ಅನೇಕ ನಗರಗಳಲ್ಲಿ ಹೊಟೇಲ್ ಸರಪಳಿಯನ್ನು ನಡೆಸುವ ಹಾಗೆ, ಸೂಪರ್ ಮಾರ್ಕೆಟ್‌ಗಳನ್ನು, ಆಸ್ಪತ್ರೆಗಳನ್ನು ನಡೆಸುವ ಹಾಗೆ ಈ ಮಲ್ಟಿಪ್ಲೆಕ್ಸ್‌ಗಳನ್ನೂ ನಡೆಸುತ್ತವೆ. ಕರ್ನಾಟಕದಲ್ಲಿ ಚಿತ್ರಮಂದಿರಗಳ ಕೊರತೆ ಇದೆ ಎನ್ನುವುದು ಈಗ ಸುಳ್ಳು. ಒಟ್ಟು ಪ್ರದರ್ಶನ ಪರದೆಗಳ ಸಂಖ್ಯೆ ಹತ್ತು ವರ್ಷದಲ್ಲಿ ಕನಿಷ್ಠ ಒಂದೂವರೆ ಪಟ್ಟು ಹೆಚ್ಚಾಗಿದೆ. ಶಾಪಿಂಗ್ ಮಾಲ್‌ಗಳು ಹೆಚ್ಚಾದಂತೆ ಈ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ. ಆದರೆ ಅಲ್ಲೆಲ್ಲ ಐದಾರು ಭಾಷೆಗಳ ಚಿತ್ರಗಳು ಓಡುತ್ತವೆ. ಕನ್ನಡ ಚಿತ್ರಗಳಿಗೆ ದೊರಕುವ ಪರದೆಗಳ ಸಂಖ್ಯೆ ಕಡಿಮೆಯೇ ಇದೆ. ಬಾಕ್ಸ್ ಆಫೀಸ್ ಗಳಿಕೆಯ ದೃಷ್ಟಿಯಿಂದ ಹೆಚ್ಚು ಅದ್ದೂರಿ ಮತ್ತು ತಾರಾ ಮೌಲ್ಯ ಇರುವ ಚಿತ್ರಗಳಿಗೆ ಹೆಚ್ಚು ಪರದೆಗಳು ಮೀಸಲಿರುತ್ತವೆ. ಅಂದರೆ ಚಿತ್ರವೊಂದು ಗಳಿಕೆಯನ್ನು ತರುವುದು ಅದರ ಗುಣಮಟ್ಟವಲ್ಲ, ಅದರ ಬ್ರ್ಯಾಂಡ್ ಮೌಲ್ಯ. ಮೊದಲಿಂದಲೂ ಇದ್ದ ಈ ಅಳತೆಗೋಲನ್ನು ಈಗ ಗ್ರಾಹಕ ಸೆಳೆತದ ತಂತ್ರವನ್ನಾಗಿಸಿ ಗಟ್ಟಿಗೊಳಿಸಲಾಗುತ್ತಿದೆ. ಕಡಿಮೆ ಬ್ರ್ಯಾಂಡ್ ಮೌಲ್ಯ ಅಥವಾ ಅದೂ ಇಲ್ಲದ ಉತ್ತಮ ಚಿತ್ರಗಳು ಪ್ರೇಕ್ಷಕರನ್ನು ಮುಟ್ಟಲು ಈ ವ್ಯವಸ್ಥೆಯೇ ಅಡ್ಡಗಾಲು ಎಂದಾಯ್ತು.

ಇದರಿಂದಾದ ಲಾಭನಷ್ಟಗಳೇನು? ತಾನು ಸ್ವತಂತ್ರವಾಗಿ ನಿರ್ಮಿಸಿದ ಚಿತ್ರಗಳನ್ನು ಉಪಗ್ರಹಕ್ಕೆ ಅಪ್‌ಲೋಡ್ ಮಾಡಿ, ಚಿತ್ರಮಂದಿರಗಳಿಗೆ ಸಿಗ್ನಲ್ ಕಳುಹಿಸುವುದಕ್ಕೆ ಚಿತ್ರ ನಿರ್ಮಾಪಕ ಸ್ಯಾಟಲೈಟ್ ಪ್ರದರ್ಶನ ಸಂಸ್ಥೆಗಳಿಗೆ ಒಂದು ಪ್ರದರ್ಶನಕ್ಕೆ ಇಂತಿಷ್ಟು ಎಂದು ಶುಲ್ಕ ಪಾವತಿ ಮಾಡಬೇಕಿದೆ. ಅದರ ಮೇಲೆ ಜಾಹೀರಾತು ಖರ್ಚು ಮತ್ತು ಚಿತ್ರಮಂದಿರದ ಬಾಡಿಗೆಯನ್ನೂ ಭರಿಸಬೇಕಿದೆ. ಅದೇ ರೀತಿ, ತಾನು ಇಚ್ಛಿಸಿದ, ಆಯ್ಕೆ ಮಾಡಿಕೊಂಡ ಚಲನಚಿತ್ರಗಳ ರೀಲುಗಳನ್ನು ತರಿಸಿಕೊಂಡು ಸ್ವತಂತ್ರವಾಗಿ ತನ್ನ ಚಿತ್ರಮಂದಿರದಲ್ಲಿ ಪ್ರದರ್ಶಿಸುತ್ತಿದ್ದ ಮಾಲಕ ಇಂದು ಚಿತ್ರಗಳಿಗಾಗಿ ಅವೇ ಸ್ಯಾಟಲೈಟ್ ಪ್ರದರ್ಶನ ಸಂಸ್ಥೆಗಳನ್ನೇ ಅವಲಂಬಿಸಬೇಕಿದೆ. ಏಕಪರದೆಯ ಚಿತ್ರಮಂದಿರಗಳು ದಿನೇ ದಿನೇ ಕಡಿಮೆಯಾಗುತ್ತಿರುವುದಕ್ಕೆ ಇದೂ ಒಂದು ಮುಖ್ಯ ಕಾರಣ.

 ದೊಡ್ಡ ಬಂಡವಾಳಿಗನ ಮತ್ತೊಂದು ಉದ್ಯಮ ಮಲ್ಟಿಪ್ಲೆಕ್ಸ್‌ಗಳು. ಈಗ ಎಲ್ಲ ನಗರ ಪ್ರದೇಶಗಳಲ್ಲೂ ಅತ್ಯಾಕರ್ಷಕವಾದ ಮಲ್ಟಿಪ್ಲೆಕ್ಸ್‌ಗಳು ಬಂದಿವೆ. ಒಂದೊಂದು ಮಲ್ಟಿಪ್ಲೆಕ್ಸ್‌ನಲ್ಲೂ 8-10 ಪರದೆಗಳಿವೆ. ಹಲವು ದೊಡ್ಡ ಹೂಡಿಕೆಯ ಕಾರ್ಪೊರೇಟ್ ಸಂಸ್ಥೆಗಳು ಅನೇಕ ನಗರಗಳಲ್ಲಿ ಹೊಟೇಲ್ ಸರಪಳಿಯನ್ನು ನಡೆಸುವ ಹಾಗೆ, ಸೂಪರ್ ಮಾರ್ಕೆಟ್‌ಗಳನ್ನು, ಆಸ್ಪತ್ರೆಗಳನ್ನು ನಡೆಸುವ ಹಾಗೆ ಈ ಮಲ್ಟಿಪ್ಲೆಕ್ಸ್‌ಗಳನ್ನೂ ನಡೆಸುತ್ತವೆ. ಕರ್ನಾಟಕದಲ್ಲಿ ಚಿತ್ರಮಂದಿರಗಳ ಕೊರತೆ ಇದೆ ಎನ್ನುವುದು ಈಗ ಸುಳ್ಳು. ಒಟ್ಟು ಪ್ರದರ್ಶನ ಪರದೆಗಳ ಸಂಖ್ಯೆ ಹತ್ತು ವರ್ಷದಲ್ಲಿ ಕನಿಷ್ಠ ಒಂದೂವರೆ ಪಟ್ಟು ಹೆಚ್ಚಾಗಿದೆ. ಶಾಪಿಂಗ್ ಮಾಲ್‌ಗಳು ಹೆಚ್ಚಾದಂತೆ ಈ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ. ಆದರೆ ಅಲ್ಲೆಲ್ಲ ಐದಾರು ಭಾಷೆಗಳ ಚಿತ್ರಗಳು ಓಡುತ್ತವೆ. ಕನ್ನಡ ಚಿತ್ರಗಳಿಗೆ ದೊರಕುವ ಪರದೆಗಳ ಸಂಖ್ಯೆ ಕಡಿಮೆಯೇ ಇದೆ. ಬಾಕ್ಸ್ ಆಫೀಸ್ ಗಳಿಕೆಯ ದೃಷ್ಟಿಯಿಂದ ಹೆಚ್ಚು ಅದ್ದೂರಿ ಮತ್ತು ತಾರಾ ಮೌಲ್ಯ ಇರುವ ಚಿತ್ರಗಳಿಗೆ ಹೆಚ್ಚು ಪರದೆಗಳು ಮೀಸಲಿರುತ್ತವೆ. ಅಂದರೆ ಚಿತ್ರವೊಂದು ಗಳಿಕೆಯನ್ನು ತರುವುದು ಅದರ ಗುಣಮಟ್ಟವಲ್ಲ, ಅದರ ಬ್ರ್ಯಾಂಡ್ ಮೌಲ್ಯ. ಮೊದಲಿಂದಲೂ ಇದ್ದ ಈ ಅಳತೆಗೋಲನ್ನು ಈಗ ಗ್ರಾಹಕ ಸೆಳೆತದ ತಂತ್ರವನ್ನಾಗಿಸಿ ಗಟ್ಟಿಗೊಳಿಸಲಾಗುತ್ತಿದೆ. ಕಡಿಮೆ ಬ್ರ್ಯಾಂಡ್ ಮೌಲ್ಯ ಅಥವಾ ಅದೂ ಇಲ್ಲದ ಉತ್ತಮ ಚಿತ್ರಗಳು ಪ್ರೇಕ್ಷಕರನ್ನು ಮುಟ್ಟಲು ಈ ವ್ಯವಸ್ಥೆಯೇ ಅಡ್ಡಗಾಲು ಎಂದಾಯ್ತು.

 ಅಂದರೆ, ಚಿತ್ರ ನಿರ್ಮಾಣ ಮತ್ತು ಪ್ರದರ್ಶನದ ಎಲ್ಲ ರಿಸ್ಕುಗಳೂ ನಿರ್ಮಾಪಕನ ತಲೆಯ ಮೇಲೆ ಬಿತ್ತು. ಚಿತ್ರ ಮಂದಿರದ ನಿವೇಶನ, ಕಟ್ಟಡ, ನಿರ್ವಹಣೆ ಮತ್ತು ಪ್ರದರ್ಶನದ ಖರ್ಚು ಚಿತ್ರಮಂದಿರದ ಮಾಲಕ ಅಥವಾ ಪ್ರದರ್ಶಕನ ಹೊಣೆಯಾಯ್ತು. ಡಿಜಿಟಲೀಕರಣದಿಂದ ಚಿತ್ರ ನಿರ್ಮಾಣವು ವಿಕೇಂದ್ರೀಕರಣ (ಡೆಮಾಕ್ರಟೈಸ್) ಆಗಿ ಯಾರು ಬೇಕಾದರೂ ಚಿತ್ರ ತಯಾರಿಸಬಹುದು ಎನ್ನುವುದು ಒಂದು ಕಡೆಯಾದರೆ, ಚಿತ್ರ ಪ್ರದರ್ಶನ ವ್ಯವಸ್ಥೆ ದೊಡ್ಡ ಬಂಡವಾಳದ ಏಕಸ್ವಾಮ್ಯದಲ್ಲಿ ಕೇಂದ್ರೀಕೃತವಾಗಿದೆ. ಇಂತಹ ವ್ಯವಸ್ಥೆ ದೊಡ್ಡ ಬಂಡವಾಳಿಗನ ಮರ್ಜಿಯಲ್ಲಲ್ಲದೆ ಮತ್ತೆ ಹೇಗೆ ನಡೆದೀತು?

 ಚಿತ್ರೋದ್ಯಮದ ಜಾಗತೀಕರಣ

ದೊಡ್ಡ ತಾರಾ ಮೌಲ್ಯ, ಬ್ರ್ಯಾಂಡ್ ಮೌಲ್ಯ ಹೊಂದಿದ್ದು, ಅತಿಶಯ ತಾಂತ್ರಿಕ ವೈಭವಗಳೊಂದಿಗೆ ತಯಾರಾಗಿ, ದೊಡ್ಡ ಮಟ್ಟದಲ್ಲಿ ಸಾವಿರ, ಎರಡು ಸಾವಿರಕ್ಕೂ ಹೆಚ್ಚು ಪರದೆಗಳ ಮೇಲೆ ಏಕಕಾಲಕ್ಕೆ ಬಿಡುಗಡೆಯಾದಾಗ ಚಿತ್ರವೊಂದು ಗೆಲ್ಲುವ ದೊಡ್ಡ ಸಾಧ್ಯತೆಯನ್ನು ಹೊಂದಿರುತ್ತದೆ. ಹಾಗಾಗಿ ಅತಿದೊಡ್ಡ ಬಂಡವಾಳ ಹೂಡಿಕೆಯೇ ಚಿತ್ರೋದ್ಯಮದ ಲಾಭನಷ್ಟಗಳ ಅನಿಶ್ಚಿತತೆಯನ್ನು ಹೊಡೆದು ಹಾಕಬಲ್ಲುದು. ಒಂದೆರಡು ವಾರಗಳಲ್ಲೇ ನೂರಾರು, ಸಾವಿರಾರು ಕೋಟಿ ರೂ. ಲಾಭವನ್ನು ತರಬಹುದು. ಇದು ಹಾಲಿವುಡ್ ಕಂಡುಕೊಂಡ ವ್ಯಾಪಾರಿ ಸತ್ಯ. ಯೂರೋಪ್, ಆಸ್ಟ್ರೇಲಿಯ, ಚೀನಾ, ಹಾಂಕಾಂಗ್, ಕೊರಿಯಾ ಚಿತ್ರೋದ್ಯಮಗಳೂ ಇದನ್ನು ಒಪ್ಪಿಕೊಂಡಿವೆ. ನಮ್ಮಲ್ಲಿರುವ ಬಾಲಿವುಡ್, ಕಾಲಿವುಡ್, ಮತ್ತೆಲ್ಲ ವುಡ್ಡುಗಳೂ ಜಾಗತಿಕವಾಗಿ ಬಿಡುಗಡೆ ಮಾಡುವಂತಹ ಅತಿದೊಡ್ಡ ಬಂಡವಾಳ ಹೂಡಿಕೆ ಮತ್ತು ಅಪ್ಪಟ ಕಾರ್ಪೊರೇಟ್ ವ್ಯಾಪಾರಿ ಮನೋಭಾವವನ್ನು ರೂಢಿಸಿಕೊಂಡಿವೆ. ಇಂಥ ಚಿತ್ರಗಳಿಗೆ ಒಂದು ಮಟ್ಟದ ಅಂತರ್‌ರಾಷ್ಟ್ರೀಯ ಮಾರುಕಟ್ಟೆ ದೊರೆತರೂ, ಮಧ್ಯಮ ಮತ್ತು ಸಣ್ಣ ಬಜೆಟ್‌ನ ಮುಖ್ಯವಾಹಿನಿ ಸಿನೆಮಾಗಳಿಗೆ ಆ ದೊಡ್ಡ ಮಾರುಕಟ್ಟೆಯ ಪೈಪೋಟಿ ಎದುರಿಸುವುದು ಕಷ್ಟವಾಗಿದೆ. ಪರಿಣಾಮವಾಗಿ ದೇಶದ ಹಿಂದಿ ವಲಯ ಭಾಷೆಗಳ ಮತ್ತು ಪಂಜಾಬಿ, ಅಸ್ಸಾಮಿ, ಒಡಿಯಾ ಮುಂತಾದ ಭಾಷೆಗಳ ಚಿತ್ರರಂಗಗಳು ಬಹುತೇಕ ಸ್ಥಗಿತವಾಗಿವೆ.

 ಕೆಲವು ಅಪವಾದಗಳನ್ನು ಹೊರತುಪಡಿಸಿದರೆ, ಮೊದಲಿಂದಲೂ ಬಾಲಿವುಡ್ ಮತ್ತು ದಕ್ಷಿಣ ಭಾರತ ಚಿತ್ರಗಳ ವಸ್ತು, ವಿನ್ಯಾಸಗಳನ್ನು ಅನುಸರಿಸುತ್ತಿದ್ದ ಕನ್ನಡದ ಮುಂಚೂಣಿಯ ತಾರೆಗಳ ಚಿತ್ರಗಳು ಈಗ ಹೂಡಿಕೆ ಮತ್ತು ತಾಂತ್ರಿಕ ವೈಭವ ಎರಡನ್ನೂ ಹೆಚ್ಚಿಸಿಕೊಂಡು, ಮೊದಲೇ ಕಡಿಮೆಯಿದ್ದ ಕನ್ನಡತನ ಈಗ ಇಲ್ಲವೇ ಇಲ್ಲ ಎಂದಾಗಿದೆ. ದೊಡ್ಡ ಚಿತ್ರೋದ್ಯಮಗಳ ಪೈಪೋಟಿಯ ಪ್ರವಾಹದೆದುರು ಬೀಳಲಾರದೇ ನಿಲ್ಲುವ ಪ್ರಯತ್ನವಾಗಿ ನಮ್ಮಲ್ಲಿ ಕೆಲವರು ಕೆಜಿಎಫ್, ಕುರುಕ್ಷೇತ್ರ ಮುಂತಾದ ಮೆಗಾ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನಿರ್ಮಿಸಿ ದೇಶದಾದ್ಯಂತ ಬಿಡುಗಡೆ ಮಾಡುವಂತಹ ಸ್ಪರ್ಧೆಗೆ ಕೈಹಾಕಿದ್ದಾರೆ. ಆದರೆ ಇಂಥ ಪ್ರಯತ್ನಗಳು ಬೆರಳೆಣಿಕೆಯವು. ಒಬ್ಬ ಮುಂಚೂಣಿ ತಾರೆಯ ಚಿತ್ರ ವರ್ಷಕ್ಕೆ ಒಂದು ಬರಬಹುದು, ಅಷ್ಟೇ.

ಈ ವ್ಯಾಪಾರಿ ತಂತ್ರ ಚಲನಚಿತ್ರವೊಂದನ್ನು ಬರಿಯ ಸರಕಾಗಿ ನೋಡಿತೇ ಹೊರತು ಒಂದು ಕೃತಿಯನ್ನಾಗಿ ಅಲ್ಲ. ಸರಕೊಂದಕ್ಕೆ ಮಾರುಕಟ್ಟೆಯಲ್ಲಿ ಗೆಲ್ಲುವ ಸೂತ್ರವೇ ಮುಖ್ಯವಾಗುತ್ತದೆ. ಮೊದಲು ಸಿದ್ಧಸೂತ್ರ ಎಂದು ಗುರುತಿಸಿಕೊಳ್ಳುತ್ತಿದ್ದು, ಈಗ ಅವುಗಳಲ್ಲೂ ಬೇರೆಬೇರೆ ಪ್ರಕಾರಗಳು ನಿರ್ದಿಷ್ಟತೆ ಪಡೆದುಕೊಂಡಿವೆ. ಚಿತ್ರವೊಂದು ಯಾವ ವಸ್ತುವನ್ನೇ ಹೊಂದಿರಲಿ, ಅದು ತನಗೆ ತಕ್ಕುದಾದ ವಿನ್ಯಾಸಸೂತ್ರವನ್ನು ಪಾಲಿಸಿತೆಂದರೆ ಗೆಲ್ಲುವ ಅವಕಾಶಗಳು ಹೆಚ್ಚು ಎನ್ನುವುದು. ಈ ಸೂತ್ರಗಳೇ ಈಗ ಇನ್ನಷ್ಟು ಗೌರವ ಲೇಪಿಸಿಕೊಂಡು ‘ಜಾನ್ರಾ’ (genre) ಎಂದು ಕರೆಸಿಕೊಳ್ಳುತ್ತಿವೆ. ಪ್ರೇಕ್ಷಕರಿಗೂ ಯಾವ ಚಿತ್ರ ಯಾವ ಜಾನ್ರಾ ಎಂದು ಮೊದಲೇ ಪ್ರಚುರಪಡಿಸಿ, ಅಂಥದ್ದನ್ನು ಮೆಚ್ಚುವವರನ್ನು ಚಿತ್ರ ವೀಕ್ಷಿಸಲು ಸೆಳೆಯುತ್ತಾರೆ. ಆಯಾ ಚಿತ್ರದ ಜಾನ್ರಾಕ್ಕೆ ಅನುಗುಣವಾಗಿ ಇರಬಹುದಾದ ಪ್ರೇಕ್ಷಕವರ್ಗದ ಗಾತ್ರ, ಗಳಿಕೆಯ ಗಾತ್ರಗಳನ್ನು ಅದರ ತಯಾರಿಕೆಯ ಮೊದಲೇ ಲೆಕ್ಕಹಾಕಿ, ಅದಕ್ಕೆ ಹೂಡಬಹುದಾದ ಬಂಡವಾಳದ ಗಾತ್ರವನ್ನೂ, ಜಾಹೀರಾತು ಮತ್ತು ಬಿಡುಗಡೆಯ ವಿನ್ಯಾಸವನ್ನೂ ನಿರ್ಧರಿಸುತ್ತಾರೆ. ಬಿಡುಗಡೆಯ ಸಮಯದಲ್ಲಿ ಚಿತ್ರದ ವಹಿವಾಟಿಗೆ ಮಾಡಿದ ಅಂದಾಜುಗಳನ್ನು ಗುರಿಗಳೆಂದಾಗಿಸಿ, ಅವನ್ನು ಮುಟ್ಟಲು ಶ್ರಮ, ಸಂಪನ್ಮೂಲ, ತಂತ್ರಗಳನ್ನು ಹೂಡುತ್ತಾರೆ. ಇಷ್ಟು ನಿರ್ದಿಷ್ಟವಾಗಿ ಹೂಡಿಕೆ, ಗಳಿಕೆಯ ಲೆಕ್ಕಾಚಾರ ಮಾಡಿ ಚಿತ್ರ ನಿರ್ಮಾಣವನ್ನು ಕನ್ನಡದಲ್ಲಿ ಸದ್ಯ ಮಾಡುತ್ತಿಲ್ಲವಾದರೂ, ಇಲ್ಲಿನ ಚಿತ್ರೋದ್ಯಮಿಗಳು ಇತ್ತೀಚಿನ ವರ್ಷಗಳಲ್ಲಿ ‘ಜಾನ್ರಾ’ಗಳ ಬಗ್ಗೆ ಮಾತಾಡುತ್ತಿದ್ದಾರೆ ಎಂದರೆ ಸೋಜಿಗಪಡಬೇಕಿಲ್ಲ.

ಇಷ್ಟಾದರೂ ನಮ್ಮಲ್ಲಿ ಎಲ್ಲ ಜಾನ್ರಾಗಳ ಚಿತ್ರಗಳು ಬರುತ್ತಿಲ್ಲ ಎನ್ನುವುದು ಬೇರೆ ಮಾತು. ಚಿತ್ರಮಂದಿರಗಳಿಗೆ ಹೆಚ್ಚು ಭೇಟಿ ನೀಡುವ ಯುವಪೀಳಿಗೆಗೆ ಮೆಚ್ಚುಗೆಯಾಗುವ ಆ್ಯಕ್ಷನ್, ರೊಮ್ಯಾನ್ಸ್, ಥ್ರಿಲ್ಲರ್ ಜಾನ್ರಾಗಳೇ ಹೆಚ್ಚು. ಇಲ್ಲಿ ನೈತಿಕ, ಅನೈತಿಕ ಎನ್ನುವುದು ಇಲ್ಲ. ಗೆಲ್ಲುವುದೇ ಗುರಿ, ಗುರಿ ಮುಟ್ಟುವುದೇ ಆರ್ಥಿಕ ಶಿಸ್ತು ಮತ್ತು ಆ ಆರ್ಥಿಕ ಶಿಸ್ತೆ ನೈತಿಕತೆ.

 ಉದ್ಯಮಕ್ಕೆ ಇದು ಸ್ವಾಗತಾರ್ಹವಾದರೂ, ಮಾಧ್ಯಮಕ್ಕೆ ಇದರಿಂದ ದೊಡ್ಡ ಪೆಟ್ಟು ಬೀಳುತ್ತದೆ ಎನ್ನುವುದನ್ನು ಹೇಳದೇ ಇರಲಾಗದು. ಒಂದೊಳ್ಳೆ ಕೌಶಲ್ಯದ ಆಟವಾಗಿದ್ದ ಕ್ರಿಕೆಟ್ ಇಂದು ರನ್ ಗಳಿಸುವ ಮೆಷೀನುಗಳನ್ನು ಹೂಡಿದ ಒಂದು ವಾಣಿಜ್ಯ ಚಟುವಟಿಕೆ ಆದ ಹಾಗೆ. ಒಂದು ಸಂಸ್ಕೃತಿಯಾಗಿದ್ದ ಕೃಷಿ ಮತ್ತು ಆಹಾರ ಸೇವನೆ ಇಂದು ಹೊಟ್ಟೆಬಾಕತನವನ್ನು ಕೆರಳಿಸುವ ಆಹಾರ ಸರಬರಾಜು ಉದ್ಯಮ ಆದ ಹಾಗೆ.

 ಒಬ್ಬ ಮ್ಯಾನೇಜ್ಮೆಂಟ್ ವಿದ್ಯಾರ್ಥಿಯನ್ನೋ, ಕಾರ್ಪೊರೇಟ್ ವಾಣಿಜ್ಯೋದ್ಯೋಗಿಯನ್ನೋ ಕೇಳಿದರೆ ಹೂಡಿಕೆ ಸಾಯಬಾರದೆಂದರೆ ಮತ್ತು ಅದು ಬೆಳೆಯಬೇಕೆಂದರೆ ಇಷ್ಟೆಲ್ಲ ಲೆಕ್ಕಾಚಾರ ಅತ್ಯಗತ್ಯ, ಇಲ್ಲವಾದರೆ ಈ ಉದ್ಯಮದಲ್ಲೇ ಇರಲಾಗದು ಎನ್ನುತ್ತಾನೆ. ಒಬ್ಬ ಹೂಡಿಕೆದಾರನನ್ನು ಕೇಳಿದರೆ ಆತ ಈ ಲೆಕ್ಕಾಚಾರಕ್ಕೆ ಒಗ್ಗದಿದ್ದರೆ ಈ ಉದ್ಯಮವೇ ಇರಲಾಗದು ಎನ್ನುತ್ತಾನೆ. ಬಂಡವಾಳಶಾಹಿ ವಾತಾವರಣದಲ್ಲಿ ಇದನ್ನು ಅನುಸರಿಸುವ ಎಲ್ಲ ಕ್ಷೇತ್ರ, ಮಾನವೀಯ ಚಟುವಟಿಕೆಗಳಿಗೂ ಇದೇ ಅಂತಿಮ ಸತ್ಯ. ಇದೇ ಜಾಗತಿಕ ಬಂಡವಾಳಶಾಹಿ ಆರ್ಥಿಕತೆಯ ಅತಿದೊಡ್ಡ ಸಮಸ್ಯೆ. ಇದೇ ಮನುಷ್ಯನ ಎಲ್ಲ ತಾರತಮ್ಯಗಳಿಗೂ, ಭೂಮಿಯ ಎಲ್ಲ ಸಮಸ್ಯೆಗಳಿಗೂ ಮೂಲ.

 ಡಿಜಿಟಲೀಕೃತ ವಾತಾವರಣದಲ್ಲಿ ಕನ್ನಡ ಚಿತ್ರೋದ್ಯಮ

ಕೆಲವು ಅಪವಾದಗಳನ್ನು ಹೊರತುಪಡಿಸಿದರೆ, ಮೊದಲಿಂದಲೂ ಬಾಲಿವುಡ್ ಮತ್ತು ದಕ್ಷಿಣ ಭಾರತ ಚಿತ್ರಗಳ ವಸ್ತು, ವಿನ್ಯಾಸಗಳನ್ನು ಅನುಸರಿಸುತ್ತಿದ್ದ ಕನ್ನಡದ ಮುಂಚೂಣಿಯ ತಾರೆಗಳ ಚಿತ್ರಗಳು ಈಗ ಹೂಡಿಕೆ ಮತ್ತು ತಾಂತ್ರಿಕ ವೈಭವ ಎರಡನ್ನೂ ಹೆಚ್ಚಿಸಿಕೊಂಡು, ಮೊದಲೇ ಕಡಿಮೆಯಿದ್ದ ಕನ್ನಡತನ ಈಗ ಇಲ್ಲವೇ ಇಲ್ಲ ಎಂದಾಗಿದೆ. ದೊಡ್ಡ ಚಿತ್ರೋದ್ಯಮಗಳ ಪೈಪೋಟಿಯ ಪ್ರವಾಹದೆದುರು ಬೀಳಲಾರದೇ ನಿಲ್ಲುವ ಪ್ರಯತ್ನವಾಗಿ ನಮ್ಮಲ್ಲಿ ಕೆಲವರು ಕೆಜಿಎಫ್, ಕುರುಕ್ಷೇತ್ರ ಮುಂತಾದ ಮೆಗಾ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನಿರ್ಮಿಸಿ ದೇಶದಾದ್ಯಂತ ಬಿಡುಗಡೆ ಮಾಡುವಂತಹ ಸ್ಪರ್ಧೆಗೆ ಕೈಹಾಕಿದ್ದಾರೆ. ಆದರೆ ಇಂಥ ಪ್ರಯತ್ನಗಳು ಬೆರಳೆಣಿಕೆಯವು. ಒಬ್ಬ ಮುಂಚೂಣಿ ತಾರೆಯ ಚಿತ್ರ ವರ್ಷಕ್ಕೆ ಒಂದು ಬರಬಹುದು, ಅಷ್ಟೇ. ಮಿಕ್ಕಂತೆ ಎರಡನೇ ಸಾಲಿನ ನಾಯಕ ನಟರ ಚಿತ್ರಗಳು ರಾಜ್ಯದಲ್ಲಿ ಬಿಡುಗಡೆಯಾಗುವ ಪರಭಾಷಾ ಚಿತ್ರಗಳು ಮತ್ತು ಕನ್ನಡದ ದೊಡ್ಡ ಚಿತ್ರಗಳ ಜೊತೆಯೇ ಸ್ಪರ್ಧಿಸಬೇಕು. ಈ ಚಿತ್ರಗಳು ಕನ್ನಡ ಪ್ರೇಕ್ಷಕನಿಗೆ ರುಚಿಸುವಂತಹ ಕನ್ನಡದ ವಸ್ತುಗಳನ್ನು ಕೊಟ್ಟಾಗ ಅವು ಗೆಲ್ಲುವ ಅವಕಾಶಗಳು ಹೆಚ್ಚಿರುತ್ತವೆ. ಆದರೆ ಪ್ರದರ್ಶನ ವ್ಯವಸ್ಥೆಯ ಸ್ಪರ್ಧೆಯಲ್ಲಿ ಗೆಲ್ಲಬೇಕಾದರೆ ಆ ದೊಡ್ಡ ಚಿತ್ರಗಳ ಮಾದರಿಯನ್ನೇ ಅನುಸರಿಸಬೇಕೆಂದು ಹೋಗಿ ಅನೇಕ ಸಾರಿ ಸೋಲುತ್ತಿವೆ.

 ಇನ್ನು ಪ್ರತೀ ವರ್ಷ ಬರುವ ಹೊಸ ನಿರ್ಮಾಪಕರ ಮೂರನೆಯ ವರ್ಗವೂ ಇದೆ. ಇವರಲ್ಲಿ ಅನೇಕರು ಚಿತ್ರ ನಿರ್ಮಾಣದಲ್ಲಿ ಆಸಕ್ತಿಯಿದ್ದು ಸಣ್ಣ ಬಂಡವಾಳ ಹೊಂದಿಸಿಕೊಂಡು ಬಂದು ಹೊಸ ಕಲಾವಿದರು, ತಂತ್ರಜ್ಞರೊಂದಿಗೆ ಚಿತ್ರ ನಿರ್ಮಿಸುತ್ತಾರೆ. ಮೊದಲಿದ್ದಂತೆ ಚಿತ್ರೋದ್ಯಮದ ವಿತರಕರಂತೂ ಅವರ ಜೊತೆ ಕೈಜೋಡಿಸುವುದಿಲ್ಲ. ಬಿಡುಗಡೆಗೆ ಹಣ ಇಲ್ಲವೆಂದಾದರೆ ಆ ಚಿತ್ರಗಳು ಬಿಡುಗಡೆಯನ್ನೇ ಕಾಣುವುದಿಲ್ಲ. ಟಿವಿಗಳಿಗೆ, ಓಟಿಟಿ ತಾಣಗಳಿಗೆ ಹಕ್ಕುಗಳು ಮಾರಾಟವಾಗುವುದೂ ತೀರಾ ವಿರಳ. ಇಂಥ ನಿರ್ಮಾಪಕರ ಸಂಖ್ಯೆಯೇ ಹೆಚ್ಚು. ಅವರು ಮತ್ತೆ ನಿರ್ಮಾಣ ಸಾಹಸಕ್ಕೆ ಇಳಿಯುವುದಿಲ್ಲ ಹಾಗೂ ಕೆಲವು ಬಿಡುಗಡೆಯಾದರೂ ಪ್ರೇಕ್ಷಕರು ಮೆಚ್ಚಿದರೆ ಆ ಚಿತ್ರ ಹೂಡಿಕೆಯನ್ನು ಹಿಂಪಡೆಯಬಹುದು, ಕೆಲವೊಮ್ಮೆ ಲಾಭವನ್ನೂ ಗಳಿಸಬಹುದು. ಹೀಗಾಗಿ, ಸಣ್ಣಚಿತ್ರಗಳ ನಿರ್ಮಾಣ ಮೊದಲಿಗಿಂತಲೂ ಈಗ ಹೆಚ್ಚು ಅನಿಶ್ಚಿತ ಎನ್ನುವ ಲೆಕ್ಕಕ್ಕೆ ಬಂದಿದೆ. ಇದು ಆಘಾತಕಾರಿ. ಭಾಷಾತೀತವಾಗಿ ದೊಡ್ಡ ಚಿತ್ರಗಳು ಮಧ್ಯಮ ಮತ್ತು ಸಣ್ಣ ಬಜೆಟ್‌ನ ಸಿನೆಮಾಗಳನ್ನು ಹೊಸಕಿಹಾಕಿವೆ.

 ಮುಖ್ಯವಾಹಿನಿ ಚಿತ್ರಗಳ ಪರಿಸ್ಥಿತಿ ಇದಾದರೆ, ಕಲಾತ್ಮಕ ಎನ್ನುವ ಹಣೆಪಟ್ಟಿ ಹೊತ್ತು ತಯಾರಾಗುವ ಚಿತ್ರಗಳು ಗಾಂಧಿನಗರದ ಓಣಿಗಳಿಗೆ ಕಾಲಿಡುವುದೇ ಇಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರಗಳು ನೀಡುವ ಪ್ರಶಸ್ತಿಗಳು, ಪುರಸ್ಕಾರಗಳು ಮತ್ತು ಸಬ್ಸಿಡಿಗಳನ್ನೇ ನಂಬಿ ಇಂಥ ಬಹುತೇಕ ಚಿತ್ರಗಳು ತಯಾರಾಗುತ್ತಿವೆ. ಇವುಗಳಲ್ಲಿ ಎಲ್ಲೋ ಕೆಲವು ಚಿತ್ರಗಳು ಅಂತರ್‌ರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗುತ್ತಿವೆ.

 ಇನ್ನೊಂದು ಮುಖ್ಯ ಅಂಶವನ್ನೂ ಇಲ್ಲಿ ಗಮನಿಸಬೇಕು. ಡಿಜಿಟಲೀಕರಣದಿಂದ ಕಚ್ಚಾಫಿಲ್ಮ್ ಮತ್ತು ಸಂಸ್ಕರಣ ವೆಚ್ಚದಲ್ಲಿ ಸ್ವಲ್ಪ ಉಳಿತಾಯವಾಯಿತು ನಿಜ. ಆದರೆ, ಚಿತ್ರೀಕರಣದ ಇತರ ಖರ್ಚುಗಳು ಹೆಚ್ಚಾಗಿವೆ. ಆ ನಂತರದ ತಾಂತ್ರಿಕ ಕೆಲಸಗಳಿಗೆ ತಗಲುವ ಖರ್ಚುಗಳೂ ಎರಡು ಪಟ್ಟಾಗಿವೆ. ಚಿತ್ರವೊಂದಕ್ಕೆ ಯಾವ ಗಾತ್ರದ ಹೂಡಿಕೆಯನ್ನೇ ಮಾಡಿರಲಿ, ಚಿತ್ರದ ವಸ್ತು, ವಿನ್ಯಾಸ ಯಾವ ಹಣೆಪಟ್ಟಿಗಾದರೂ ಅಂಟಿಕೊಂಡಿರಲಿ, ಡಿಜಿಟಲೀಕರಣ ತೆರೆದಿಟ್ಟಿರುವ ಅಗಾಧ ತಾಂತ್ರಿಕ ಸಾಧ್ಯತೆಗಳ ಕನಿಷ್ಠ ಗುಣಮಟ್ಟವನ್ನಾದರೂ ಎಲ್ಲ ಚಿತ್ರಗಳೂ ಸಾಧಿಸಲೇಬೇಕು. ಇಲ್ಲವಾದರೆ ಅವು ಬಿಡುಗಡೆಯಾಗುವ, ಬೇರೆ ಮಾಧ್ಯಮಗಳಲ್ಲಿ ತೆರೆಕಾಣುವ ಅಥವಾ ಪುರಸ್ಕಾರಗಳಿಗೆ ಅರ್ಹವಾಗುವ ಅವಕಾಶವನ್ನೂ ಕಳೆದುಕೊಳ್ಳುತ್ತವೆ. ಹಾಗಾಗಿ ನಿರ್ಮಾಪಕ ಅಷ್ಟು ಹಣ ಮತ್ತು ಸಮಯವನ್ನು ಹೂಡಲೇಬೇಕು.

 ಈ ವಾತಾವರಣದಲ್ಲಿ ನಾಳಿನ ಗಂಭೀರ ಸಿನೆಮಾ  

ಈ ಎಲ್ಲ ಒಂದಕ್ಕಿಂತ ಒಂದು ಎತ್ತರದ ಹೊಸ್ತಿಲುಗಳನ್ನು ದಾಟಿ ಜನಸ್ಪಂದಿಯಾಗುವ ಗಂಭೀರ ಚಿತ್ರ ಮಾಡುವುದೆಂದರೆ ಮತ್ತು ಕೊಳ್ಳುಬಾಕ ಸೆಳೆತಗಳಿಗೆ ಮಾರುಹೋಗದೆ ಗುಣಾತ್ಮಕತೆ, ರಸಸ್ವಾದನೆಯನ್ನು ಬಯಸುವ ಪ್ರೇಕ್ಷಕವರ್ಗ ಅಂಥ ಚಿತ್ರಗಳನ್ನು ತಪ್ಪದೇ ನೋಡುತ್ತದೆ ಎಂದಾದರೆ ನಾವು ಒಂದು ಆದರ್ಶ ಸಮಾಜದಲ್ಲಿ ಇದ್ದೇವೆ ಎಂದೇ ಅರ್ಥ. ಅಂತಹ ಸಮಾಜದಲ್ಲಿ ನಾವಿಲ್ಲ. ಹಾಗಾಗಿ ಗಂಭೀರ ಚಿತ್ರಗಳನ್ನು ನೋಡಲು ಇಷ್ಟಪಡುವ ಪ್ರೇಕ್ಷಕರನ್ನು ನಾವು ಗುರುತಿಸಿ, ಅವರನ್ನು ನಮ್ಮಾಡನೆಯೇ ಉಳಿಸಿಕೊಳ್ಳುವುದೂ ದೊಡ್ಡ ಸಾಹಸ. ಅದಕ್ಕೂ ಮೇಲೆ ಹೇಳಿದ ಮಾರುಕಟ್ಟೆ ಕುತಂತ್ರಗಳಲ್ಲದಿದ್ದರೂ ತಂತ್ರಗಳೇ ಬೇಕು. ಇದು ಈ ಇಂಟರ್‌ನೆಟ್ ಮತ್ತು ಡಿಜಿಟಲ್ ಕಾಲದ ವಿಪರ್ಯಾಸವೂ ಹೌದು, ದೊಡ್ಡ ಅವಕಾಶವೂ ಹೌದು. ಇಲ್ಲಿ ಕುಳಿತು ನಾನೊಬ್ಬನೇ ಹೀಗೆ ಯೋಚಿಸುತ್ತಿಲ್ಲ, ನನ್ನಂತೆಯೇ ನನ್ನ ಕಾಲದ ಇಡೀ ಜಗತ್ತಿನ ಸಾವಿರಾರು ಚಿತ್ರನಿರ್ಮಾತೃಗಳೂ, ಒಂದು ವರ್ಗದ ಚಿತ್ರೋದ್ಯಮಿಗಳೂ ಯೋಚಿಸುತ್ತಿದ್ದಾರೆ ಎನ್ನುವುದು ನನಗೆ ದೊಡ್ಡ ಆಶಾದಾಯಕ ಅಂಶ.

 ಚಲನಚಿತ್ರಕ್ಕೆ ಒಂದು ಪರಿಭಾಷೆ ಇದೆ, ವಿಶ್ವಭಾಷೆ ಇದೆ. ಚಿತ್ರವೊಂದರ ಪ್ರಾದೇಶಿಕತೆಯನ್ನೂ, ವಿಶ್ವಾತ್ಮಕತೆಯನ್ನೂ ಒಂದೇ ಕಾಲ, ಚೌಕಟ್ಟಿನಲ್ಲಿ ಸಮರ್ಥವಾಗಿ ಕಟ್ಟಿಕೊಡುವ ಶಕ್ತಿ ಆ ಪರಿಭಾಷೆಗೆ ಇದೆ. ಅದು ತನ್ನೊಳಗೆ ತನ್ನದೇ ಆದ ಒಂದು ದೇಶಕಾಲವನ್ನು ಸೃಷ್ಟಿಸಬಲ್ಲದು. ಆ ಜಗತ್ತಿನೊಳಕ್ಕೆ ಭಾಷಾತೀತವಾಗಿ ವಿಶ್ವದ ಯಾವ ಭಾಗದ ಪ್ರೇಕ್ಷಕರಿಗೂ ಸರಾಗವಾಗಿ ಪ್ರವೇಶ ನೀಡುವ ಶಕ್ತಿಯೂ ಆ ಪರಿಭಾಷೆಗೆ ಇದೆ. ಪ್ರವೇಶಿಸುವ ವಾಂಛೆ ಮತ್ತು ಸಣ್ಣ ಪ್ರಮಾಣದ ಪೂರ್ವಪ್ರವೇಶಿಕೆ ಆ ಪ್ರೇಕ್ಷಕರಿಗೂ ಇರಬೇಕಷ್ಟೇ. ಚಿತ್ರಕಲೆ, ಶಿಲ್ಪಕಲೆ, ಸಂಗೀತ ಮುಂತಾದವಕ್ಕೆ ಇರುವಂತೆ ಚಲನಚಿತ್ರ ಮಾಧ್ಯಮಕ್ಕೂ ಇರುವ ಗುಣ ವಿಶೇಷ ಇದು. ಬಹುಶಃ ಕನ್ನಡದಲ್ಲಿ ತಯಾರಾಗುವ ಗಂಭೀರ ಚಿತ್ರವೊಂದಕ್ಕೆ ಕರ್ನಾಟಕದಲ್ಲಿ ಬಹಳ ಕಡಿಮೆ ಪ್ರೇಕ್ಷಕ ಸಂಖ್ಯೆ ಇರಬಹುದು. ಆದರೆ ಇಡೀ ಜಗತ್ತಿನ ಈ ಅಭಿರುಚಿಯ ಪ್ರೇಕ್ಷಕರು ಒಂದೆಡೆ ಕಲೆತರೆ ಅದು ದೊಡ್ಡ ಸಂಖ್ಯೆಯೇ ಆಗುತ್ತದೆ. ಹಾಗೆ ಅವರನ್ನು ಮುಟ್ಟುವ ಅವಕಾಶವನ್ನು ಈ ಇಂಟರ್‌ನೆಟ್ ಮತ್ತು ಡಿಜಿಟಲ್ ಕಾಲ ನಮಗೆ ಕೊಟ್ಟಿದೆ. ಹಾಗಾಗಿ ಇಂದು ಚಿತ್ರಭಾಷೆಯನ್ನು ಗಂಭೀರವಾಗಿ ಪ್ರಯೋಗಿಸಿ ಚಿತ್ರಮಾಡುವ ನಿರ್ಮಾತೃವೊಬ್ಬ ಒಂದು ಪ್ರದೇಶಕ್ಕೆ ಸೀಮಿತನಾಗದೆ ಇಡೀ ವಿಶ್ವದ ಚಿತ್ರವೀಕ್ಷಕರಿಗೆ ಉಣಬಡಿಸುವವನಾಗಿರುತ್ತಾನೆ. ನಮ್ಮ ಪ್ರಾದೇಶಿಕತೆಯೊಂದಿಗೆ ನಾವು ಜಾಗತಿಕವೂ ಆಗಬೇಕು ಎನ್ನುವುದು ಈ ಕಾಲ ನಮಗೆ ಕಲಿಸಿಕೊಟ್ಟಿರುವ ಸಾರ.

ಎಲ್ಲ ದೇಶಗಳ ಗಂಭೀರ ಚಿತ್ರಗಳೂ ಇಂದು ಪ್ರೇಕ್ಷಕ ವರ್ಗವನ್ನು ಹೀಗೆಯೇ ವಿಸ್ತರಿಸಿಕೊಳ್ಳುತ್ತಿವೆ. ಇದೂ ಆರ್ಥಿಕ ಜಾಗತೀಕರಣದ ಒಂದು ಭಾಗವೇ? ಚಿತ್ರವೊಂದು ಸರಕಾದರೆ, ಹೌದು. ಅದೊಂದು ಕಲಾಕೃತಿಯಾಗಿ ಭಾಷೆ, ಗಡಿಗಳನ್ನು ದಾಟಿ ಇಡೀ ವಿಶ್ವದ ಪ್ರೇಕ್ಷಕರೊಂದಿಗೆ ಸಂವಾದಿಸಿದರೆ, ಅಲ್ಲ.

 ಆದರೆ ಈ ವಾತಾವರಣ ತುಂಬಾ ಸ್ಪರ್ಧಾತ್ಮಕವಾಗಿದೆ. ಈ ಮೊದಲು ಕನ್ನಡದ ಅಥವಾ ಭಾರತದ ನಿರ್ಮಾತೃಗಳ ಜೊತೆಗೆ ಸ್ಪರ್ಧಿಸುತ್ತಿದ್ದ ನಮ್ಮ ನಿರ್ಮಾತೃವೊಬ್ಬ ಇಂದು ಜಾಗತಿಕವಾಗಿ ಸ್ಪರ್ಧಿಸಬೇಕಾಗಿದೆ. ಬಹಳ ಕುತೂಹಲಕರ ಅಂಶವೆಂದರೆ ಈ ಸ್ಪರ್ಧೆಯಲ್ಲಿ ಗುರುತಿಸಿಕೊಳ್ಳಬೇಕಾದರೆ ನಮ್ಮ ಚಿತ್ರಗಳು ಸ್ವಲ್ಪವೂ ತೋರಿಕೆಯಲ್ಲದ, ನಮ್ಮದೇ ನೈಜ ಪ್ರಾದೇಶಿಕ ಪ್ರಾತಿನಿಧ್ಯವನ್ನು ಮತ್ತು ಕ್ರಿಯಾತ್ಮಕ ಚಿತ್ರಭಾಷೆಯನ್ನು ಕಂಡುಕೊಳ್ಳಬೇಕು. ಅದು ಸಾಧ್ಯವಾಗುವುದು ನಮ್ಮ ವಸ್ತು, ವಿನ್ಯಾಸಗಳ ಎಡರುತೊಡರಿಲ್ಲದ ಮಿಲನದಿಂದ. ಇಲ್ಲಿ ವಿನ್ಯಾಸ ಎನ್ನುವುದು ಮುಖ್ಯವಾಹಿನಿ ಚಿತ್ರಗಳನ್ನು ಕುರಿತಂತೆ ಹೇಳಿದ ಜಾನ್ರಾ ಅಲ್ಲ. ಪ್ರತಿಯೊಂದು ಚಿತ್ರವೂ ತನಗಷ್ಟೇ ಸರಿಹೊಂದುವ ವಿನ್ಯಾಸವನ್ನು ಹುಟ್ಟಿಹಾಕಲೂಬಹುದಾದ ಕಲಾತ್ಮಕ, ಕ್ರಿಯಾತ್ಮಕ ಸ್ವಾತಂತ್ರ್ಯ ಇಲ್ಲಿದೆ. ಸ್ವೇಚ್ಛೆಯಲ್ಲ, ಚಿತ್ರಭಾಷೆಯಲ್ಲಿ ಪ್ರಯೋಗಶೀಲವಾಗಬಹುದಾದ ಸ್ವಾತಂತ್ರ್ಯ ಅದು. ಇಲ್ಲಿಯೇ ನಮ್ಮ ಸೃಜನಶೀಲತೆ ಅಡಗಿರುವುದು. ಇವೆಲ್ಲವೂ ಪ್ರಾಮಾಣಿಕವಾಗಿದ್ದು, ಸಹ್ಯವೂ ಆದಾಗ ಆ ಚಿತ್ರ ನಿಜಕ್ಕೂ ಒಂದು ಗಮನಾರ್ಹ ಕೃತಿ ಎಂದೆನಿಸಿ ಜಾಗತಿಕ ಚಿತ್ರೋಪಾಸಕರನ್ನು ತಲುಪುತ್ತದೆ. ಆ ಮಟ್ಟದ ಕಲಿಕೆ, ಅಭ್ಯಾಸ, ಸೃಜನಶೀಲತೆ, ದೃಢತೆ ಮತ್ತು ಬದ್ಧತೆ ನನ್ನನ್ನೂ ಸೇರಿದಂತೆ ನಮ್ಮಲ್ಲಿನ ಎಷ್ಟು ನಿರ್ಮಾತೃಗಳಿಗೆ ಇದೆ ಎನ್ನುವುದು ನಮ್ಮ ನಮ್ಮ ವೈಯಕ್ತಿಕತೆಯ ಮೇಲೆ ನಿರ್ಧಾರವಾಗುತ್ತದೆ. ಹಣ ಹೂಡುವ ನಮ್ಮ ನಿರ್ಮಾಪಕರಿಗೂ ಇಂಥಾ ಪ್ರಯತ್ನಗಳ ಮೇಲೆ ಒಲವು, ನಂಬಿಕೆ ಇದೆಯೇ ಎನ್ನುವುದೂ ಮುಖ್ಯವಾಗುತ್ತದೆ. ಒಮ್ಮೆ ಈ ಹೊಸ್ತಿಲುಗಳನ್ನು ದಾಟಿ ಒಬ್ಬ ನಿರ್ಮಾತೃ ಮುನ್ನಡೆದನೆಂದರೆ, ಮುಂದಿನ ಅವನ ಅಷ್ಟೇ ಪ್ರಾಮಾಣಿಕ ಪ್ರಯತ್ನಗಳಿಗೆ ಹೂಡಿಕೆ ಮತ್ತು ಪ್ರೇಕ್ಷಕವರ್ಗ ಎರಡೂ ಸಮಸ್ಯೆಯಾಗಲಾರದು.

 ಕನ್ನಡದಲ್ಲಿ ಇನ್ನು ಮುಂದೆಯೂ ನಮ್ಮ ಪ್ರಾದೇಶಿಕತೆಯ ಪ್ರಾಮಾಣಿಕ ಅಭಿವ್ಯಕ್ತಿಯ ಗಂಭೀರ ಚಿತ್ರಗಳು ಬರಬೇಕೆಂದರೆ ನಮ್ಮ ನಿರ್ಮಾತೃಗಳೂ ನವೀಕರಿಸಿಕೊಳ್ಳಬೇಕಿದೆ. ಜೊತೆಗೆ ಹೊಸಪ್ರತಿಭೆ, ಹೊಸನೀರು ಹರಿಯಬೇಕಿದೆ. ಹಳೆಯ ಜಾಡಿನಲ್ಲೇ ಚಿತ್ರ ಮಾಡುತ್ತೇನೆ ಎಂದರೆ ಅದು ಇಲ್ಲಿಯೂ, ಅಲ್ಲಿಯೂ, ಎಲ್ಲಿಯೂ ಸಲ್ಲದಂತಾಗುತ್ತದೆ. ಕನ್ನಡದ ಗಂಭೀರ ಚಿತ್ರಗಳ ಬಗ್ಗೆ ಅಸಡ್ಡೆ ಬೆಳೆಸಿಕೊಂಡಿರುವ ಕನ್ನಡದ ಪ್ರೇಕ್ಷಕನನ್ನು ನಮ್ಮಲ್ಲಿಯೇ ಉಳಿಸಿಕೊಳ್ಳುವುದಕ್ಕೆ, ಹೊಸ ಪೀಳಿಗೆಯ ನಮ್ಮದೇ ಪ್ರೇಕ್ಷಕರನ್ನು ಆಕರ್ಷಿಸುವುದಕ್ಕೆ ಗುಣಾತ್ಮಕ ಪ್ರಯತ್ನಗಳು ಸಹಕಾರಿಯಾಗಬಹುದು. ಜೊತೆಗೆ, ವಿಶ್ವದ ಎಲ್ಲೆಡೆಯೂ ನಮ್ಮದೇ ಆದ ಒಂದು ಚಿಕ್ಕದಾದರೂ ನಿರ್ದಿಷ್ಟ ಪ್ರೇಕ್ಷಕವೃಂದವನ್ನೂ ಬೆಳೆಸಿಕೊಳ್ಳಲು ಅನುವಾಗಬಹುದು. ಕೋವಿಡ್ ನಂತರದ ಕಾಲದಲ್ಲೂ ಚಿತ್ರಮಾಧ್ಯಮ ತನ್ನ ಶಕ್ತಿಯಿಂದಲೇ ಒಂದಿಲ್ಲೊಂದು ರೀತಿಯಲ್ಲಿ ಜನರನ್ನು ತಲುಪುತ್ತಲೇ ಇರುತ್ತದೆ ಎನ್ನುವುದರಲ್ಲಿ ನನಗೆ ಅನುಮಾನವಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)