ಬೇಕರ್ಸ್ ಸಿಸ್ಟ್ ಬಗ್ಗೆ ನಿಮಗೆ ಗೊತ್ತೇ?
ನಮ್ಮ ಮಂಡಿಯ ಹಿಂದೆ ಉಬ್ಬನ್ನುಂಟು ಮಾಡುವ ಮತ್ತು ಬಿಗಿದಿರುವ ಭಾವನೆಯನ್ನುಂಟು ಮಾಡುವ ದ್ರವದಿಂದ ತುಂಬಿದ ಕೋಶವನ್ನು ಬೇಕರ್ಸ್ ಸಿಸ್ಟ್ ಎಂದು ಕರೆಯಲಾಗುತ್ತದೆ. ಮೈಯನ್ನು ಸಂಪೂರ್ಣವಾಗಿ ಮುರಿದಾಗ ಅಥವಾ ಮಂಡಿಯನ್ನು ಚಾಚಿದಾಗ ಅಥವಾ ಕೆಲಸದಲ್ಲಿ ವ್ಯಸ್ತರಾಗಿದ್ದಾಗ ಈ ಭಾಗದಲ್ಲಿ ನೋವು ತೀವ್ರಗೊಳ್ಳುತ್ತದೆ.
ಪಾಪ್ಲಿಟೀಲ್ ಸಿಸ್ಟ್ ಎಂದೂ ಕರೆಯಲಾಗುವ ಬೇಕರ್ಸ್ ಸಿಸ್ಟ್ ಸಾಮಾನ್ಯವಾಗಿ ಸಂಧಿವಾತ ಅಥವಾ ಮೃದ್ವಸ್ಥಿಗೆ ಹಾನಿಯಂತಹ ಕೀಲುಗಳ ಸಮಸ್ಯೆಗಳಿಂದ ಉಂಟಾಗುತ್ತದೆ. ಇವೆರಡೂ ಸ್ಥಿತಿಗಳು ಕೀಲು ಹೆಚ್ಚಿನ ದ್ರವವನ್ನು ಉತ್ಪಾದಿಸುವಂತೆ ಮಾಡುತ್ತವೆ ಮತ್ತು ಇದು ಬೇಕರ್ಸ್ ಸಿಸ್ಟ್‌ಗೆ ಕಾರಣವಾಗುತ್ತದೆ.
ಬೇಕರ್ಸ್ ಸಿಸ್ಟ್ ಊತಕ್ಕೆ ಕಾರಣವಾಗಬಹುದು ಮತ್ತು ತೊಂದರೆಯನ್ನುಂಟು ಮಾಡುತ್ತದೆಯಾದರೂ ಅದಕ್ಕೆ ಕಾರಣವಾದ ಅನಾರೋಗ್ಯಕ್ಕೆ ಚಿಕಿತ್ಸೆಯನ್ನು ಪಡೆಯುವ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
ಲಕ್ಷಣಗಳು
ಕೆಲವು ಪ್ರಕರಣಗಳಲ್ಲಿ ಬೇಕರ್ಸ್ ಸಿಸ್ಟ್ ಯಾವುದೇ ನೋವನ್ನುಂಟು ಮಾಡುವುದಿಲ್ಲ ಮತ್ತು ವ್ಯಕ್ತಿಯು ಅದನ್ನು ಗಮನಿಸದಿರಬಹುದು. ಮಂಡಿಯ ಸುತ್ತ ಊತ,ಕೆಲವೊಮ್ಮೆ ಕಾಲು ಮತ್ತು ಮಂಡಿಯಲ್ಲಿ ನೋವು ಹಾಗೂ ಪೆಡಸಾಗುವಿಕೆ,ಮಂಡಿಯನ್ನು ಪೂರ್ಣವಾಗಿ ಚಾಚಲು ಸಾಧ್ಯವಾಗದಿರುವುದು ಇವು ಬೇಕರ್ಸ್ ಸಿಸ್ಟ್‌ನ ಲಕ್ಷಣಗಳಲ್ಲಿ ಸೇರಿವೆ. ವ್ಯಕ್ತಿಯು ಚಟುವಟಿಕೆಯಿಂದಿದ್ದರೆ ಮತ್ತು ತುಂಬಾ ಸಮಯ ನಿಂತುಕೊಂಡಿದ್ದರೆ ಈ ಲಕ್ಷಣಗಳು ತೀವ್ರಗೊಳ್ಳಬಹುದು.
ವೈದ್ಯರನ್ನು ಯಾವಾಗ ಕಾಣಬೇಕು?
ಮಂಡಿಯ ಹಿಂದೆ ಊತ ಮತ್ತು ನೋವು ಇದ್ದರೆ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಸಾಧ್ಯತೆ ಕಡಿಮೆಯಿದ್ದರೂ ಮಂಡಿಯ ಹಿಂದಿನ ಉಬ್ಬು ದ್ರವ ತುಂಬಿದ ಕೋಶಕ್ಕಿಂತ ಹೆಚ್ಚು ಗಂಭೀರ ಸ್ಥಿತಿಯ ಲಕ್ಷಣವಾಗಿರಬಹುದು.
ಕಾರಣಗಳು
ಸೈನೊವಿಯಲ್ ಎಂಬ ನಯಗೊಳಿಸುವ ದ್ರವವು ಕಾಲುಗಳನ್ನು ಸುಗಮವಾಗಿ ಚಲಿಸಲು ನೆರವಾಗುತ್ತದೆ ಮತ್ತು ಮಂಡಿಯಲ್ಲಿನ ಚಲಿಸುವ ಭಾಗಗಳ ನಡುವಿನ ಘರ್ಷಣೆಯನ್ನು ಕಡಿಮೆಗೊಳಿಸುತ್ತದೆ. ಆದರೆ ಕೆಲವೊಮ್ಮೆ ಮಂಡಿಯು ಅತಿಯಾಗಿ ಸೈನೊವಿಲ್ ದ್ರವವನ್ನು ಉತ್ಪಾದಿಸುತ್ತದೆ ಮತ್ತು ಇದರ ಪರಿಣಾಮವಾಗಿ ಮಂಡಿಯ ಹಿಂದಿನ ಪಾಪ್ಲಿಟೀಲ್ ಬರ್ಸಾ ಎಂದು ಕರೆಯಲಾಗುವ ಜಾಗದಲ್ಲಿ ದ್ರವವು ಸಂಗ್ರಹಗೊಳ್ಳುತ್ತದೆ ಮತ್ತು ಬೇಕರ್ಸ್ ಸಿಸ್ಟ್‌ಯ ನ್ನುಂಟು ಮಾಡುತ್ತದೆ. ಬೇರೆ ಬೇರೆ ವಿಧಗಳ ಸಂಧಿವಾತಗಳಲ್ಲಿ ಕೀಲಿನಲ್ಲಿ ಉಂಟಾಗುವ ಉರಿಯೂತ,ಮೃದ್ವಸ್ಥಿಗೆ ಹಾನಿಯನ್ನುಂಟು ಮಾಡುವ ಮಂಡಿಯ ಗಾಯ ಇವುಗಳು ಬೇಕರ್ಸ್ ಸಿಸ್ಟ್‌ಗೆ ಕಾರಣವಾಗುತ್ತವೆ.
ತೊಂದರೆಗಳು
ಅಪರೂಪಕ್ಕೆ ಬೇಕರ್ಸ್ ಸಿಸ್ಟ್ ಒಡೆಯುತ್ತದೆ ಮತ್ತು ಸೈನೊವಿಯಲ್ ದ್ರವವು ಕಣಕಾಲಿನ ಹಿಂಭಾಗಕ್ಕೆ ಹರಿಯುತ್ತದೆ. ಇದು ಮಂಡಿಯಲ್ಲಿ ತೀವ್ರ ನೋವು,ಕಣಕಾಲಿನಲ್ಲಿ ಊತ,ಕೆಲವೊಮ್ಮೆ ಕಣಕಾಲು ಕೆಂಪಾಗುವಿಕೆ ಮತ್ತು ಅದರಲ್ಲಿ ನೀರು ಹರಿಯುತ್ತಿದೆ ಎಂಬ ಅನಿಸಿಕೆ ಇತ್ಯಾದಿಗಳಿಗೆ ಕಾರಣವಾಗುತ್ತದೆ. ಈ ಲಕ್ಷಣಗಳು ಕಾಲಿನ ಅಭಿಧಮನಿಯಲ್ಲಿ ರಕ್ತವು ಹೆಪ್ಪುಗಟ್ಟಿದಾಗ ಉಂಟಾಗುವ ಲಕ್ಷಣಗಳನ್ನೇ ಹೋಲುತ್ತವೆ. ಕಣಕಾಲಿನಲ್ಲಿ ಊತವಿದ್ದು,ಕೆಂಪಾಗಿದ್ದರೆ ವೈದ್ಯಕೀಯ ಪರಿಶೀಲನೆ ಅಗತ್ಯವಾಗುತ್ತದೆ.
ರೋಗ ನಿರ್ಧಾರ
ಹೆಚ್ಚಿನ ಪ್ರಕರಣಗಳಲ್ಲಿ ದೈಹಿಕ ಪರೀಕ್ಷೆಯಿಂದ ಬೇಕರ್ಸ್ ಸಿಸ್ಟ್ ನಿರ್ಧರಿಸಲ್ಪಡುತ್ತದೆ. ಆದರೆ ಬೇಕರ್ಸ್ ಸಿಸ್ಟ್‌ನ ಲಕ್ಷಣಗಳು ರಕ್ತ ಹೆಪ್ಪುಗಟ್ಟುವಿಕೆ,ಅನ್ಯುರಿಸಂ ಅಥವಾ ಮಿದುಳಿನಲ್ಲಿ ಟ್ಯೂಮರ್‌ನಂತಹ ಗಂಭೀರ ಸಮಸ್ಯೆಗಳ ಲಕ್ಷಣಗಳನ್ನು ಹೋಲುವುದರಿಂದ ವೈದ್ಯರು ಅಲ್ಟ್ರಾಸೌಂಡ್,ಕ್ಷ-ಕಿರಣ,ಮ್ಯಾಗ್ನೆಟಿಕ್ ರೆಸೊನನ್ಸ್ ಇಮೇಜಿಂಗ್‌ನಂತಹ ಕೆಲವು ಪರೀಕ್ಷೆಗಳನ್ನು ಸೂಚಿಸಬಹುದು.
ಚಿಕಿತ್ಸೆ
ಕೆಲವೊಮ್ಮೆ ಬೇಕರ್ಸ್ ಸಿಸ್ಟ್ ತನ್ನಿಂತಾನೇ ಮಾಯವಾಗುತ್ತದೆ. ಆದರೆ ಕೋಶವು ದೊಡ್ಡದಾಗಿದ್ದರೆ ಮತ್ತು ನೋವನ್ನುಂಟು ಮಾಡುತ್ತಿದ್ದರೆ ವೈದ್ಯರು ಔಷಧಿ ಸೇವನೆ,ಕೀಲಿನಲ್ಲಿಯ ದ್ರವವನ್ನು ಹೊರತೆಗೆಯುವುದು,ಫಿಝಿಕಲ್ ಥೆರಪಿ ಮೂಲಕ ಗುಣಪಡಿಸುತ್ತಾರೆ. ಮೃದ್ವಸ್ಥಿಗೆ ಉಂಟಾಗಿರುವ ಹಾನಿಯಿಂದಾಗಿ ಸೈನೊವಿಯಲ್ ದ್ರವವು ಅತಿಯಾಗಿ ಉತ್ಪಾದನೆಯಾಗುತ್ತಿದ್ದರೆ ಹಾನಿಗೀಡಾದ ಮೃದ್ವಸ್ಥಿಯನ್ನು ಸರಿಪಡಿಸಲು ಅಥವಾ ಅದನ್ನು ತೆಗೆಯಲು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಬಹುದು.
ಬೇಕರ್ಸ್ ಸಿಸ್ಟ್ ಅಸ್ಥಿಸಂಧಿವಾತದೊಂದಿಗೆ ಗುರುತಿಸಿಕೊಂಡಿದ್ದರೆ ಸಾಮಾನ್ಯವಾಗಿ ಸಂಧಿವಾತಕ್ಕೆ ಚಿಕಿತ್ಸೆಯೊಂದಿಗೆ ಸ್ಥಿತಿಯಲ್ಲಿ ಸುಧಾರಣೆಯಾಗುತ್ತದೆ. ಅಪರೂಪದ ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು.