ಸುಧಾರಣೆಗಳ ರಾಜಕಾರಣ ಮತ್ತು ರೈತ ಚಳವಳಿ
2020-21ನೇ ಸಾಲಿನ ಕೇಂದ್ರ ಸರಕಾರದ ಆರ್ಥಿಕ ಸಮೀಕ್ಷಾ ವರದಿ ಸದ್ಯದ ರೈತ ಚಳವಳಿಯನ್ನು ಕುರಿತ ಸರಕಾರದ ಧೋರಣೆಯ ಮರ್ಮವನ್ನು ಅರಿಯಲು ಸಹಾಯ ಮಾಡುವಂತಹ ಒಂದು ಅಂಶವನ್ನು ಹೊರಗೆಡಹಿದೆ. ಅದೆಂದರೆ. ರೈತನನ್ನು ಉತ್ಪಾದಕನನ್ನಾಗಿ ಗ್ರಹಿಸಿ, ಕೃಷಿ ವಲಯವನ್ನು ಒಂದು ಉದ್ಯಮವನ್ನಾಗಿ ಬೆಳೆಸುವುದು ಅಗತ್ಯ ಎಂದು ಅದು ಹೇಳಿರುವುದು. ಇದನ್ನು ಅದು ಸುಧಾರಣೆ ಎಂದೂ ಕರೆದು, ಇದಕ್ಕೆ ವ್ಯಕ್ತವಾಗಬಹುದಾದ ವಿರೋಧವನ್ನು ಸುಧಾರಣಾ ವಿರೋಧಿ ಕ್ರಮವೆಂದು ಬಣ್ಣಿಸಲು ಪೂರ್ವ ಸಿದ್ಧತೆಯನ್ನೂ ಮಾಡಿಕೊಂಡಿದೆ. ಜಾಗತೀಕರಣದ ಭಾಗವಾದ ಆರ್ಥಿಕ ಉಪಕ್ರಮಗಳನ್ನೆಲ್ಲ ಬದಲಾವಣೆಗಳೆಂದಷ್ಟೇ ಕರೆಯದೆ ಸುಧಾರಣೆಗಳು ಎಂದು ಕರೆಯುವ ಪಾರಿಭಾಷಿಕ ರಾಜಕಾರಣದ ಮೂಲಕವೇ ಜಾಗತೀಕರಣದ ರಾಜಕಾರಣವೂ ಆರಂಭವಾಗುತ್ತದೆ ಎಂಬುದು ಜಾಗತೀಕರಣ ತನ್ನ ನಿರ್ಣಾಯಕ ಘಟ್ಟ ಮುಟ್ಟಿರುವ ಇಂದಿನ ದಿನಗಳಲ್ಲೂ ನಮ್ಮ ತಿಳುವಳಿಕೆಗಿನ್ನೂ ಬಂದಂತಿಲ್ಲ. ಆದ್ದರಿಂದಲೇ ಇಂದಿನ ರೈತ ಚಳವಳಿಗೆ ಕಾರಣವಾಗಿರುವ ಕೃಷಿ ಸಂಬಂಧಿತ ಮೂರು ಕಾಯ್ದೆಗಳ ತಿದ್ದುಪಡಿಗಳನ್ನು ಕುರಿತು ಮಾಧ್ಯಮಗಳಲ್ಲಿ ನಡೆದಿರುವ ಚರ್ಚೆಗಳೆಲ್ಲದರಲ್ಲೂ ಈ ತಿದ್ದುಪಡಿಗಳನ್ನು ಸುಧಾರಣೆೆಗಳೆಂದು ಕರೆಯುತ್ತಿರುವುದೂ, ಈ ಸಂಬಂಧದ ಭಿನ್ನಾಭಿಪ್ರಾಯಗಳನ್ನು ಸುಧಾರಣಾ ವಿರೋಧಿ ಕ್ರಮಗಳೆಂದು ಬಣ್ಣಿಸುತ್ತಾ, ಈ ಭಿನ್ನಾಭಿಪ್ರಾಯಗಳನ್ನು ಪ್ರಗತಿ ವಿರೋಧಿ ಎಂಬಂತೆ ಬಿಂಬಿಸುವುದೂ ಈ ಪರಿಭಾಷಾ ರಾಜಕಾರಣದ ಭಾಗವೇ ಆಗಿದೆ. ಹಾಗಾಗಿ ಈ ಚಳವಳಿ ಮತ್ತು ಕಾಯ್ದೆ ತಿದ್ದುಪಡಿಗಳನ್ನು ಕುರಿತ ಚರ್ಚೆಯು ಪ್ರಗತಿ ಎಂಬ ಪರಿಕಲ್ಪನೆಯ ಅರ್ಥವನ್ನು ಸ್ಪಷ್ಟಡಿಸುವುದರ ಭಾಗವಾಗಿ ಸುಧಾರಣೆ ಎಂಬ ಶಬ್ದದ ಅರ್ಥವನ್ನು ಪರಿಶೀಲಿಸುವುದರೊಂದಿಗೇ ಆರಂಭವಾಗಬೇಕಿದೆ.
ಸುಧಾರಣೆ ಎಂದರೆ ಈಗಿರುವ ಸ್ಥಿತಿಯಿಂದ ಉತ್ತಮ ಸ್ಥಿತಿಗೆ ಹೋಗುವುದು. ಆದರೆ ಈ ಚಲನೆ ಉತ್ತಮ ಸ್ಥಿತಿಯೆಡೆಗೆ ಇದೆಯೆಂದು ನಿರ್ಧರಿಸಲು ಇರುವ ಒರೆಗಲ್ಲುಗಳಾದರೂ ಯಾವುವು ಮತ್ತು ಅವನ್ನು ಬಳಸಿ ಅದನ್ನು ನಿರ್ಧರಿಸಬೇಕಾದವರಾದರೂ ಯಾರು? ಎಲ್ಲ ದೇಶ-ಪ್ರದೇಶಗಳ ಯಾವುದೇ ಕಾರ್ಯಕ್ಷೇತ್ರಗಳಲ್ಲಿನ ಈ ಉತ್ತಮಿಕೆಯನ್ನು ನಿರ್ಣಯಿಸುವ ಒಳಿತು ಕೆಡುಕುಗಳನ್ನು ಯಾರೇ ಒಬ್ಬರು ಅಥವಾ ಒಂದು ಸಂಸ್ಥೆ ನಿರ್ಧರಿಸಲು ಸಾಧ್ಯವಿಲ್ಲ. ಅಂತಹ ಅಧಿಕಾರವನ್ನು ಯಾವ ರೂಪದಲ್ಲೂ-ಶಾಸನಸಭೆ ಅಥವಾ ಸಂಸತ್ತೂ ಸೇರಿದಂತೆ-ಯಾರಿಗೂ ಕೊಡಲಾಗಿಲ್ಲ. ಇದು ಸಾಮಾನ್ಯ ವಿವೇಕಕ್ಕೆ ವಿರುದ್ಧವಾದದ್ದು. ಆದರೆ ಜಾಗತೀಕರಣದ ಹೆಸರಿನಲ್ಲಿ ಭಾರತಕ್ಕಿಂತ ಭಿನ್ನವಾದ ಚರಿತ್ರೆ ಮತ್ತು ಜೀವನ ದೃಷ್ಟಿಯುಳ್ಳ ಪಾಶ್ಚಿಮಾತ್ಯ ದೇಶಗಳ ಪ್ರಾಬಲ್ಯವಿರುವ ಜಾಗತಿಕ ಸಂಸ್ಥೆಗಳು ಅವೇ ಪ್ರಗತಿಪರ ಎಂದು ರೂಪಿಸಿಕೊಟ್ಟಿರುವ ನಮ್ಮ ದೇಶದ ಪ್ರಗತಿ ಪಥ ಜನರ ಒಳಿತಿನ ದಿಕ್ಕಿನೆಡೆ ಚಲಿಸುತ್ತಿದೆ ಎಂದು ಹೇಳುವುದನ್ನು ನಿರ್ಯೋಚನೆಯಿಂದ ನಂಬಿ ಆ ಚಲನೆಯನ್ನು ಸುಧಾರಣೆಗಳು ಎಂದು ಒಪ್ಪಿಕೊಂಡು ಅವನ್ನು ನಮ್ಮ ಸರಕಾರಗಳು ಹಲವು ಕಾರ್ಯಕ್ಷೇತ್ರಗಳಲ್ಲಿ ಜಾರಿಗೆ ತಂದಿರುವುದನ್ನೂ, ತರುತ್ತಿರುವುದನ್ನೂ ನಾವು ಇತ್ತೀಚಿನ ವರ್ಷಗಳಲ್ಲಿ ನೋಡುತ್ತಿದ್ದೇವೆ. ಇದನ್ನು ಜನಸಮೂಹವು ಎಂದೂ ಗಂಭೀರವಾಗಿ ಚರ್ಚಿಸಿಲ್ಲ ಮತ್ತು ಪ್ರಬಲವಾಗಿ ಪ್ರಶ್ನಿಸಿಯೂ ಇಲ್ಲ. ಕಾರಣವೆಂದರೆ, ಇಂತಹ ಚರ್ಚೆಗಳನ್ನು ನಡೆಸಿ ಪ್ರಶ್ನೆಗಳನ್ನು ಎತ್ತುತ್ತಿದ್ದ ನಮ್ಮ ಮಧ್ಯಮ ವರ್ಗ ಈ ಚಲನೆಗಳಿಂದ ಹೊಸ ಸಮೃದ್ಧಿಯನ್ನು ಸಾಧಿಸಿಕೊಂಡು ಸಂತೃಪ್ತವಾಗಿದ್ದರೆ, ಇದರ ಅಕ್ಕಪಕ್ಕದಲ್ಲೇ ಸೇವಾ ವಲಯವೆಂಬ ವಿವಿಧ ಶ್ರೇಣಿಗಳ ಹೊಸ ಸುಖ ವೈವಿಧ್ಯಗಳ ವಲಯವೊಂದು ಸೃಷ್ಟಿಯಾಗಿ ಸಮಾಜದ ಉಳಿದ ವರ್ಗಗಳು ತಮ್ಮ ಯೋಗ್ಯತಾನುಸಾರವಾದ ಶ್ರೇಣಿ, ದರದ ಹೊಸ ಸುಖಗಳ ರುಚಿಗೆ ಬಿದ್ದು ಮೈಮರೆತಂತಿರುವುದು. ಒಂದು ಬಡದೇಶವಾಗಿ ಎಂದೂ ಕಂಡೂ ಕೇಳದ ಮತ್ತು ನಿರೀಕ್ಷಿಸದ ಈ ಹೊಸ ಶ್ರೇಣಿ ಉಂಟು ಮಾಡಿದ ಈ ಮೈಮರೆವಿನಲ್ಲಿ ನಮ್ಮ ಬದುಕೆಂಬುದು, ಅದಕ್ಕೆ ಆಧಾರವಾದ ಕಸುಬುಗಳೆಂಬುವ ಇತರೆಲ್ಲ ಸಂವೇದನೆ ಹಾಗೂ ಆಯಾಮಗಳನ್ನು ಕಳೆದುಕೊಂಡು ಕೇವಲ ಲಾಭೋದ್ಯಮವಾಗುತ್ತಿರುವ, ಎಲ್ಲ ಮಾನವ ವ್ಯವಹಾರಗಳನ್ನೂ ಹಣದ ಲೆಕ್ಕದ ಮೂಲಕ ಅಳೆಯುವ ದುರಂತ ಸೃಷ್ಟಿಯಾಗಿದೆ ಎಂಬುದು ಗೊತ್ತಾಗುವುದಾದರೂ ಹೇಗೆ?
ಹಾಗೆ ನೋಡಿದರೆ ಈ ಜಾಗತೀಕರಣಕ್ಕೆ ಅನುವು ಮಾಡಿಕೊಟ್ಟ ಹೊಸ ಆರ್ಥಿಕ ನೀತಿ ಸಂಹಿತೆ (ಗ್ಯಾಟ್ ಒಪ್ಪಂದ ಮತ್ತು ಡಂಕೆಲ್ ಪ್ರಸ್ತಾವ ಮುಂತಾದವು) ನಮ್ಮ ಸಂಸತ್ತಿನಲ್ಲಿ ಚರ್ಚೆಗೇ ಒಳಗಾಗದೆ ಜಾರಿಗೆ ಬಂದಿದೆ ಎಂಬುದು ಎಷ್ಟು ಜನರಿಗೆ ಗೊತ್ತು? ಈ ಬಗ್ಗೆ ಮತ್ತು ದೇಶ ಪಾಪರ್ ಆಗುವ ಸ್ಥಿತಿ ಮುಟ್ಟಿ ತನ್ನ ಕಾಪು ಚಿನ್ನವನ್ನೆಲ್ಲ ಅಡವಿಟ್ಟು ಅಂತರ್ರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್ಗಳಿಂದ ಸಾಲ ಪಡೆದು ಬದುಕಿದೆಯಾ ಬಡಜೀವವೇ! ಎಂದು ನಿರಾಳಗೊಂಡ ದೇಶಕ್ಕೆ, ಇದಕ್ಕಾಗಿ ತೆರಬೇಕಾದ ಬೆಲೆ ಎಂದರೆ, ತನ್ನ ಪ್ರಗತಿಯ ದಾರಿ ಯಾವುದು ಎಂಬುದನ್ನು ಇತರರು ನಿರ್ಧರಿಸುವ ಸ್ಥಿತಿ ಉಂಟಾದದ್ದು ಮತ್ತು ಇದು ಪ್ರಗತಿಯೋ ಮನೆಹಾಳ್ತನವೋ ಎಂದು ಯೋಚಿಸುವ ವ್ಯವಧಾನವೇ ಇಲ್ಲವಾದದ್ದು ಆಶ್ಚರ್ಯವೇನಲ್ಲ. ಹಾಗೇ ಇಷ್ಟು ವರ್ಷಗಳ ನಂತರ ಸ್ತ್ರೀಯರ ಮೇಲಿನ ಅತ್ಯಾಚಾರಗಳೂ ಸೇರಿದಂತೆ ಹಿಂಸೆಯ ಹೊಸ ಅವತಾರಗಳು, ದುರಾಸೆಯ ಮತ್ತು ಅನಿವಾರ್ಯವೆನಿಸಿದ ವಲಸೆಗಳು ಹಾಗೂ ಅದು ಉಂಟು ಮಾಡಿದ ಸ್ಥಳೀಯತೆ ಕೋಶಗಳ ನಾಶ, ಕೌಟುಂಬಿಕ ಅಸ್ತವ್ಯಸ್ತತೆಗಳು, ಮಾದಕ ದ್ರವ್ಯ ಸೇವನೆಯ ವ್ಯಾಪಕತೆ, ಮತೀಯ ಮೂಲಭೂತವಾದ, ಕೋಮುವಾದ, ಜಾತಿವಾದ ಇತ್ಯಾದಿ ಮಧ್ಯಕಾಲೀನ ಪ್ರತ್ಯೇಕತಾವಾದಿ ಪ್ರವೃತ್ತಿಗಳ ಹೊಸ ಆವೃತ್ತಿಗಳ ಸೃಷ್ಟಿ ಇತ್ಯಾದಿ ಈ ಸುಧಾರಣೆಗಳ ದೀರ್ಘಕಾಲಿಕ ಪರಿಣಾಮಗಳ ವೈವಿಧ್ಯಮಯ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಮತ್ತು ಒಟ್ಟಾರೆಯಾಗಿ ನೈತಿಕವಾದ ಹಾಳುಪಾಳುಗಳನ್ನು ಕಂಡು ಗಾಬರಿಗೊಳ್ಳುತ್ತಿರುವುದರಲ್ಲೂ ಆಶ್ಚರ್ಯವಿಲ್ಲ.
ಇಂತಹ ಪ್ರಗತಿಪರ ಸುಧಾರಣೆಗಳು ಈಗ ನೇರವಾಗಿ ಕೃಷಿ ವಲಯವನ್ನು ಪ್ರವೇಶಿಸಲು ಯತ್ನಿಸುತ್ತಿರುವಾಗ ಈವರೆಗಿನ ಇತರ ಕ್ಷೇತ್ರಗಳ ಸುಧಾರಣೆಗಳ (ಮತ್ತು ತಮ್ಮದೇ ಕ್ಷೇತ್ರದಲ್ಲಿನ ಹಸಿರು ಕಾಂ್ರತಿ ಎಂಬ ಹಳೆಯ ಸುಧಾರಣೆಯೊಂದರ) ಹಾಳು-ಪಾಳುಗಳ ದುಷ್ಪರಿಣಾಮಗಳನ್ನು ಕಂಡು ಅನುಭವಿಸಿದ ನಮ್ಮ ಭಾರತೀಯ ಬದುಕಿನ ಅತ್ಯಂತ ಬುಡದ ಮತ್ತು ಸಹನಾಶೀಲವಾದ ಗ್ರಾಮೀಣ ಭಾಗದ ಜೀವಾಳವಾದ ರೈತ ಸಮುದಾಯ ಈ ಸುಧಾರಣೆಗಳ ವಿರುದ್ಧ ಧ್ವನಿ ಎತ್ತಿರುವುದು ಸಹಜವೂ ಹೌದು ಮತ್ತು ನಮ್ಮೆಲ್ಲರ ಅದೃಷ್ಟವೂ ಹೌದು. ಭಾರತೀಯ ಸಮಾಜದ ಮೂಲ ಪ್ರಾಣ ಬುಡದಲ್ಲಾದರೂ ಇನ್ನೂ ಉಳಿದಿದೆ ಎಂಬುದರ ಶುಭ ಸೂಚನೆ ಇದು. ಏಕೆಂದರೆ ಭಾರತೀಯ ಬದುಕಿನ ಮೂಲ ಅಸ್ಮಿತೆ ರೂಪುಗೊಂಡಿರುವುದೇ ನಮ್ಮ ಕೃಷಿ ಸಂಸ್ಕೃತಿಯ ಮೂಲಧಾತುಗಳಿಂದಲೇ; ಅದರ ಜೀವನ ದೃಷ್ಟಿಯ ಲಯ ಗತಿ, ಸೌಂದರ್ಯ ಪ್ರಜ್ಞೆ ಮತ್ತು ಇತರ ಮೌಲ್ಯ ಸಂಹಿತೆಗಳಿಂದಲೇ. ಇದು ನಮ್ಮ ಬದುಕಿನ ಹದ, ಆದ್ಯತೆ ಮತ್ತು ಆರೋಗ್ಯವನ್ನು ನಿರ್ಧರಿಸುವುದು. ಇದೇ ಕಾರಣದಿಂದ ಜಪಾನ್ನ ಕೃಷಿ ಋಷಿ ಎಂದು ಹೆಸರಾದ ಫೂಕೊವುಕಾ ಕೃಷಿ (ಯಾವುದೇ ಬೆಳೆ ತೆಗೆಯುವುದು) ಎಂದರೆ ಮಾನವತೆಯ ಬೆಳೆ ತೆಗೆಯುವುದು ಎಂದದ್ದು.
ಈ ದೃಷ್ಟಿಯಿಂದ ಕೇಂದ್ರ ಸರಕಾರ ಜಾರಿಗೆ ತಂದಿರುವ/ತರಲು ಹೊರಟಿರುವ ಕೃಷಿ ಕಾಯ್ದೆ ತಿದ್ದುಪಡಿಗಳು ಘಾತುಕ ಜಾಗತೀಕರಣದ ಭಾಗವೇ ಆಗಿವೆ. ಸಣ್ಣ ಭೂ ಹಿಡುವಳಿಗಳನ್ನು ನಮ್ಮ ಕೃಷಿ ಬದುಕಿನ ಕೆಟ್ಟ ಲಕ್ಷಣಗಳೆಂದು, ಕೃಷಿ ಆರ್ಥಿಕತೆಗೆ ಇರುವ ಅಡ್ಡಿಗಳೆಂದೂ ಪರಿಗಣಿಸಿ ಅವುಗಳನ್ನು ನಿವಾರಿಸಿಕೊಳ್ಳಲು ದೊಡ್ಡ ಬಂಡವಾಳಿಗರ ಸುಪರ್ದಿಯ ಕೂಡು ಕೃಷಿ ಪದ್ಧತಿಯನ್ನು ಜಾರಿಗೆ ತಂದು ಕೃಷಿಯನ್ನು ಸಣ್ಣ ಹಿಡುವಳಿಗಳ ರೈತ ಮಕ್ಕಳನ್ನು ನಗರಗಳಿಗೆ ಒಕ್ಕಲೆಬ್ಬಿಸಿ ಇಲ್ಲವೇ ಕೂಲಿ ಕಾರ್ಮಿಕ/ಗೇಣಿದಾರರನ್ನಾಗಿ ಮಾಡಿಕೊಳ್ಳುವ ಕರಾರು ಒಪ್ಪಂದಗಳ ಪರಿಧಿಗೆ ತರುವ ಪ್ರಯತ್ನ ಕೃಷಿಯನ್ನು ಒಂದು ಸಂಸ್ಕೃತಿಯನ್ನಾಗಿ ಬುಡಸಮೇತ ನಾಶ ಮಾಡಿ ಅದನ್ನೊಂದು ಬೃಹತ್ (ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ) ವ್ಯಾಪಾರವನ್ನಾಗಿ ಮಾಡುವ ಕಾರ್ಪೊರೇಟ್ಶಾಹಿ ಹುನ್ನಾರವೇ ಆಗಿದೆ. ಸರಕಾರ ಕೃಷಿ ಉತ್ಪನ್ನಗಳ ಮಾರಾಟದ ಸ್ಥಳೀಯ ಬೇರು ಬಿಳಲುಗಳನ್ನು ಕತ್ತರಿಸಿ ಸ್ಪರ್ಧಾತ್ಮಕ ಬೆಲೆಗಳ ಆಸೆ ತೋರಿಸಿ ರೈತರ ಪಾಲಿಗೆ ಅದನ್ನೊಂದು ಪರಕೀಯ ನಿರ್ದೇಶನಗಳ ಬಯಲು ಬಂದಿಖಾನೆಯನ್ನಾಗಿ ಮಾಡಹೊರಟಿದೆ. ಕೊಳು ಕೊಡುವ ಸ್ಥಳೀಯ ವಿವೇಕದ ಮೂಲಕ ಹೇಗೋ ನಿಭಾಯಿಸಬಹುದಾದ ಸ್ಥಳೀಯ ಮಧ್ಯವರ್ತಿಗಳ ಕೈಯಿಂದ ಕೈಗೆ ಸಿಗದ ತಿಮಿಂಗಿಲಗಳ ಬಾಯಿಗೆ ಒಡ್ಡಹೊರಟಂತಿದೆ. ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯ ವ್ಯವಸ್ಥೆಯನ್ನು ಶಾಸನಾತ್ಮಕಗೊಳಿಸಲು ಸರಕಾರ ನಿರಾಕರಿಸುತ್ತಿರುವ ಹಿಂದಿನ ಗುಟ್ಟೂ ಇದೇ ಆಗಿದೆ.
ಇನ್ನು ಅವಶ್ಯಕ ವಸ್ತುಗಳ ನಿಯಂತ್ರಣ ಕಾಯ್ದೆಯ ತಿದ್ದುಪಡಿ ಇವೆಲ್ಲವನ್ನೂ ಸುಗಮಗೊಳಿಸುವ ಸಾಧನ ಮಾತ್ರವಾಗಿದೆ. ಒಟ್ಟಿನಲ್ಲಿ ರೈತ ಚಳವಳಿ ದೇಶದ ಒಟ್ಟಾರೆ ಜನತೆ ಜಾಗತೀಕರಣದ ಆಕ್ರಮಣವನ್ನು ಎಚ್ಚರದಪ್ಪಿನಿಯಂತ್ರಿಸದೇ ಹೋದ ಪ್ರಮಾದವನ್ನು ಸರಿಪಡಿಸುವ ಒಂದು ದೊಡ್ಡ ಪ್ರಕ್ರಿಯೆಗೆ ಚಾಲನೆ ಕೊಡಬಲ್ಲ ಅವಕಾಶವನ್ನು ತೆರೆದಿದೆ. ಸ್ವತಃ ರೈತರಿಗೆ ಗೊತ್ತಿದೆಯೋ ಇಲ್ಲವೋ ತಿಳಿಯದು. ಏಕೆಂದರೆ ಜಾಗತೀಕರಣಪೂರ್ವದ ನಮ್ಮ ರೈತ ಚಳವಳಿಗಳೆಲ್ಲವೂ ತಮ್ಮನ್ನು ಒಟ್ಟಾರೆ ಸಮಾಜದಿಂದ ಪ್ರತ್ಯೇಕಿಸಿಕೊಂಡು ಕಾರ್ಮಿಕ ಸಂಘಗಳಂತೆ ವರ್ತಿಸುತ್ತಾ ತನ್ನ ಬೆಳೆಗಳಿಗೆ ವಂಚನೆಯಾದಂತೆ ತೋರಿದರೆ ನ್ಯಾಯಯುತ ಬೆಲೆಯನ್ನು ಆಗ್ರಹಿಸುವುದಕ್ಕಷ್ಟೇ ಸೀಮಿತವಾಗಿದ್ದವು. ಅವು ಯಾವುವೂ ಬದುಕಿನ, ನಿರ್ದಿಷ್ಟವಾಗಿ ಗ್ರಾಮಬದುಕಿನ ಪುನರುಜ್ಜೀವನದ ಚಳವಳಿಗಳಾಗಿ ಪರಿಕಲ್ಪಿತವೂ ಆಗಿರಲಿಲ್ಲ, ಬೆಳೆಯಲೂ ಇಲ್ಲ. ಆದರೆ ಸದ್ಯದ ರೈತ ಚಳವಳಿ ಸದರಿ ಕಾಯ್ದೆಗಳ ತಿದ್ದುಪಡಿಗಳಿಂದ ಅಂತಃಸ್ಫೂರ್ತವಾಗಿ(instinctively) ತಮ್ಮ ಬದುಕಿನ ಬೇರುಗಳು ಕಳಚುತ್ತಿರುವ ಆತಂಕಕ್ಕೆ ಎಚ್ಚೆತ್ತುಕೊಂಡಂತೆ ರೈತ ತನ್ನ ಪ್ರಾಣವನ್ನೇ ಪಣವೊಡ್ಡಿ ಹೋರಾಟಕ್ಕೆ ನಿಂತಂತಿದೆ. ಆದರೆ ಈ ಮೊದಲೇ ಸೂಚಿಸಿದಂತೆ ಇದು ಕೇವಲ ರೈತರಿಗೆ ಸಂಬಂಧಿಸಿದ ಚಳವಳಿಯಲ್ಲ. ಭಾರತೀಯ ಬದುಕಿನ ಮೂಲ ಮಾದರಿಯ ರಕ್ಷಣೆಗೆ ಸಂಬಂಧಪಟ್ಟ, ನಮ್ಮ ಕಸುಬುಗಳ ಘನತೆಯನ್ನು ಕಾಪಾಡುವ, ಅವುಗಳ ಸಾಮಾಜಿಕ ಆವರಣವನ್ನು ಸೃಷ್ಟಿಸಿರುವ ಮಾನವ ಸಂದರ್ಭಗಳನ್ನು ಕಾಪಾಡುವ ಪ್ರಶ್ನೆ ಇದು. ಈ ಘನತೆ, ಮಾನವ ಸಂದರ್ಭಗಳನ್ನುಳಿಸಿಕೊಂಡೇ ನಮ್ಮ ಕಸುಬುಗಳನ್ನು ಸುಧಾರಿಸಿಕೊಳ್ಳುವ, ಆಧುನೀಕರಿಸಿಕೊಳ್ಳುವ ಸಾಧ್ಯತೆಗಳೇ ಇಲ್ಲವೇ? ಅಂತಹ ಸೃಜನಶೀಲ ಪ್ರಯತ್ನಗಳ ಕಡೆ ನಾವು ನಿಜವಾಗಿಯೂ ಗಮನ ಹರಿಸಿದ್ದೇವೆಯೇ? ಈ ಪ್ರಶ್ನೆಗಳನ್ನೂ ಕೇಳಿಕೊಳ್ಳುವ ಕಾಲವೂ ಇದಾಗಿದೆ.
ಸದಾ ಕಾಲ ಭಾರತೀಯತೆ, ಭಾರತೀಯತೆ ಎಂದು ಉಗ್ಗಡಿಸುವ ಸರಕಾರವೇ, ಭಾರತೀಯ ಬದುಕಿನ ಮೂಲ ಮಾದರಿಯನ್ನೇ ಬುಡಮೇಲುಗೊಳಿಸಹೊರಟಿರುವುದು ಎಂತಹ ವಿಪರ್ಯಾಸ!