varthabharthi


ಮುಂಬೈ ಸ್ವಗತ

ಕನ್ನಡವನ್ನು ಕಟ್ಟಿದ ಹೊಟೇಲ್ ಉದ್ಯಮ ಸಂಕಷ್ಟದಲ್ಲಿ

ವಾರ್ತಾ ಭಾರತಿ : 5 Feb, 2021
ದಯಾನಂದ ಸಾಲ್ಯಾನ್

ಮುಂಬೈ ಹೊಟೇಲ್ ನಡೆದು ಬಂದ, ತುಳಿದ ಹಾದಿ, ಏರಿದ ಎತ್ತರ, ಅದರ ಭಿನ್ನಾಣ ಎಲ್ಲವೂ ಒಂದು ರೀತಿಯಿಂದ ಇತಿಹಾಸದ ಮಡಿಲು ಸೇರಿದೆ ಅನ್ನೋಣವೇ! ಅಥವಾ ತಾವೇ ಅಗೆದ ಗುಂಡಿಯಿಂದ; ಕೊರೋನ ಎಂಬ ಮಹಾಮಾರಿಯ ಹೊಡೆತದಿಂದ ಬುದ್ಧಿ ಕಲಿತ ಈ ಉದ್ಯಮ ಬೂದಿಯಿಂದ ಎದ್ದು ಬರುವ ಕೆಂಡದಂತೆ ಮತ್ತೆ ಎದ್ದು ನಿಲ್ಲಬಲ್ಲುದೇ ಈ ಆಶಯ ಮತ್ತು ಹಾರೈಕೆ ಮುಂಬೈ ಕನ್ನಡಿಗರದ್ದು.


ಕಳೆದ ಶತಮಾನದ ಸುಮಾರು ಹತ್ತು-ಇಪ್ಪತ್ತರ ದಶಕದಲ್ಲಿ ಮುಂಬೈ ಮಗುಲು ಬದಲಾಯಿಸುತ್ತಿರುವ ಹೊತ್ತಿನಲ್ಲಿ ಇರಾನಿ ಹೊಟೇಲ್‌ಗಳು ತನ್ನ ಸಾಮಾಜ್ಯವನ್ನು ಗಟ್ಟಿಗೊಳಿಸಿದ್ದಂತಹ ಸಂದರ್ಭ. ಸರಿಸುಮಾರು ಅದೇ ಸಂದರ್ಭದಲ್ಲಿ ಕಾಣೆಮಾರ್ ವೆಂಕಪಯ್ಯ ಅವರು ಇಂಪೀರಿಯಲ್ ಟಾಕೀಸಿನ ಬಳಿ ‘ವೆಲ್‌ಕಂ ಹೊಟೇಲ್’ನ್ನು ಪ್ರಾರಂಭಿಸಿದರು. ಇದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಪ್ರಥಮ ಹೊಟೇಲ್. ಇದನ್ನು ಅನುಸರಿಸಿ ಮುಂಬೈಯಾದ್ಯಂತ ಹೊಟೇಲ್ ಉದ್ಯಮ ಬೆಳೆದು ಬಂದ ರೀತಿ ಅದು ಏರಿದ ಎತ್ತರ, ಗಳಿಸಿದ ಕೀರ್ತಿ ಅಪಾರ; ಅನುಪಮ, ವೈವಿಧ್ಯಮಯ.

ಉದ್ದಿನ ವಿಶಿಷ್ಠ ರೀತಿಯ ತಿಂಡಿ ತಿನಸುಗಳು, ಇತರ ಖಾದ್ಯಗಳು, ತೆಂಗಿನ ಕಾಯಿಯ ರುಚಿಕರ ಚಟ್ನಿ, ಸಾಂಬಾರ್; ‘ಸರ್ವ್’ ಮಾಡುವ ರೀತಿ, ಶುಚಿತ್ವ ಎಲ್ಲವೂ ಈ ದಕ್ಷಿಣ ಕನ್ನಡಿಗರ ಹೊಟೇಲ್‌ಗಳು ಮೇಲ್ಮಟ್ಟಕ್ಕೆ ಏರಲು ಸಹಕಾರಿಯಾದವು. ಇರಾನಿ ಹೊಟೇಲ್‌ಗಳ ಸಾಮ್ರಾಜ್ಯ ಕೊನೆಗೊಂಡು ಅದಕ್ಕಿಂತಲು ನೂರುಪಟ್ಟು ಜನಪ್ರಿಯತೆಯನ್ನು ದಕ್ಷಿಣ ಕನ್ನಡಿಗರ ಹೊಟೇಲ್‌ಗಳು ಗಳಿಸಿದ್ದವು.

ಊರಿನ ಬಡ ಮನೆಗಳಿಗೆ ಮುಂಬೈಯ ಹೊಟೇಲ್ ಉದ್ಯಮ ಆಶಾಕಿರಣವಾಗಿ ಕಂಡಿತು. ಅಲ್ಲಿ ಹಗಲಿನಲ್ಲಿ ಹೊಟೇಲ್‌ನಲ್ಲಿ ದುಡಿಮೆ; ರಾತ್ರಿ ಶಾಲೆಯಲ್ಲಿ ಅಧ್ಯಯನ. ಮೊದಲ ತಲೆಮಾರಿನೊಂದಿಗೆ ಈ ಎರಡನೇ ತಲೆಮಾರು ಜತೆ ಜತೆಯಾಗಿ ಅರ್ಥಪೂರ್ಣವಾದ ಬದುಕನ್ನು ಕಟ್ಟಿಕೊಳ್ಳ ತೊಡಗಿತು. ಈ ಹೊಟೇಲ್ ಮಾಣಿಗಳು ಕಂಡ ಕನಸುಗಳು ಊರಿನಲ್ಲಿ ಚಿಗುರೊಡೆಯುತ್ತಿದ್ದವು. ಅಕ್ಕ ತಂಗಿಯರ ಮದುವೆ, ಸೊಸೆಯಂದಿರ ಮದುವೆ, ಮನೆ-ಹಟ್ಟಿಯ ರಿಪೇರಿ, ಎತ್ತು ಕೋಣಗಳ ಖರೀದಿ- ಹೀಗೆ ಊರಿನ ಬೇಡಿಕೆಗಳು ಒಂದೊಂದೇ ಈ ಮಾಣಿಗಳಿಂದ ನೆರವೇರಿಸಲ್ಪಡುತ್ತಿದ್ದವು.

ಹೊಟೇಲ್ ಉದ್ಯಮಗಳು ಅವಿಭಜಿತ ದಕ್ಷಿಣ ಕನ್ನಡದ ದಿಕ್ಕು ದೆಸೆಯನ್ನೇ ಬದಲಾಯಿಸಿತು. ಹುಲ್ಲಿನ ‘ಮಾಡು’ ಹಂಚಿನ ‘ಮಾಡಾಗಿ’, ಹಂಚಿನ ‘ಮಾಡು’ ಮುಂದೆ ಟೆರೇಸ್ ಮನೆಯಾಗಿ ಹೊಸ ವಿನ್ಯಾಸ ಪಡೆಯಿತು. ಅಲ್ಲಿನ ಮಂದಿರಗಳು, ಶಾಲೆಗಳು, ನಾಗಬನ; ಊರ ಹಾಗೂ ಮನೆ-ಕುಟುಂಬದ ದೈವಸ್ಥಾನಗಳು ಜೀರ್ಣೋದ್ಧಾರ ಕಂಡವು; ಪ್ರತಿಷ್ಠೆಯ ಅಂಗವಾಯಿತು.

ಸುಮಾರು ಎಂಭತ್ತು-ತೊಂಭತ್ತರ ದಶಕದಲ್ಲಿ ಹೊಟೇಲ್ ಉದ್ಯಮ ಹೊಸ ಮುಖವನ್ನು ಕಂಡಿತು. ಹೊಸ ಆವಿಷ್ಕಾರ ಕಂಡುಕೊಂಡಿತು. ಹೊಸ ಪೀಳಿಗೆ ಹೊಟೇಲ್ ಉದ್ಯಮಕ್ಕೆ ಇಳಿಯಿತು. ಹಿರಿಯರು ಕಟ್ಟಿದ ಹೊಟೇಲ್ ಉದ್ಯಮ ಕಿರಿಯರ ಪಾಲಾಯಿತು. ಇಲ್ಲಿ ಕೋಡು ಬೋಜ ಶೆಟ್ಟಿಯವರ ಕವಿತೆಯೊಂದರ ಸಾಲು ನೆನಪಾಗುತ್ತದೆ: ‘‘ಬಾಕಿಲ್ ಬಂದ್ ಆಂಡ್/ಲೈಟ್ ಡಿಮ್ ಆಂಡ್/ಉಲಾಯಿ ಜುಮ್ ಆಂಡ್’’ (ಬಾಗಿಲು ಬಂದ್ ಆಯಿತು/ಲೈಟ್ ಡಿಮ್ ಆಯಿತು/ಒಳಗೆ ಜುಮ್ ಆಯಿತು) ಹೊಟೇಲ್ ಉದ್ಯಮಿ ಸಾಹಿತಿ ಕೋಡು ಅವರ ‘ಸುಧಾರಣೆ’ ಕವಿತೆಯ ಮುಂದೆ ಬರುವ ಸಾಲುಗಳು ಆದರ್ಶವನ್ನು ಮೈಗೂಡಿಸಿಕೊಂಡಿರುವ ತಂದೆಗೆ ಮಗ ಹೇಳುತ್ತಾನೆ. ‘‘ಹೇಸಿಗೆದ ಜಾಗೆಡೇ ಕಾಸ್ ಬುಲೆವುನು!’’ (ಹೇಸಿಗೆಯ ಜಾಗದಲ್ಲೇ ಕಾಸು ಬೆಳೆಯುವುದು!) ಎನ್ನುವ ಸಾಲುಗಳು ಆ ಹೊಸ ರೂಪವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ. ಸೇವೆ/ಅನ್ನದಾನದ ರೂಪವನ್ನು ಹೊಂದಿದ್ದ ಹೊಟೇಲ್ ಜಗತ್ತು ಉದ್ಯಮವಾಗಿ ಮುಂದೆ ‘ದಂಧೆ’ಯಾಗಿ ರೂಪಾಂತರ ಗೊಂಡಿತು. ಮಹಾರಾಷ್ಟ್ರ ರಾಜಕೀಯ ಧುರೀಣರು, ಕಾನೂನು ಪಾಲಕರು ಚಿತ್ರನಟರು ಹೊಟೇಲ್ ಉದ್ಯಮಿಗಳ ಹೊಟೇಲ್‌ಗಳಿಗೆ ಮಾತ್ರವಲ್ಲ ಮನೆಗಳಿಗೆ, ಫಾರ್ಮ್‌ಹೌಸ್, ಊರಿನ ವಿಸ್ತಾರವಾದ ಅರಮನೆಯಂತಹ ಮನೆಗಳಿಗೆ ಅತಿಥಿಗಳಾಗಿ ಆಹ್ವಾನಿಸಲ್ಪಟ್ಟರು. ಕೆಲವು ಹೊಟೇಲ್ ಮಾಲಕರಿಗಂತೂ ಭೂಗತ ಜಗತ್ತಿನ ಒಂದಲ್ಲ ಒಂದು ರೀತಿಯ ಸಂಬಂಧ ಏರ್ಪಟ್ಟಿತ್ತು.

ಈ ಎಲ್ಲಾ ವೈಪರೀತ್ಯಗಳ ನಡುವೆ ಸರಕಾರದ ರಾಜಕೀಯ ಮುತ್ಸದ್ದಿಗಳಿಗೆ ಈ ಹೊಟೇಲ್‌ಗಳು ಚಿನ್ನದ ಮೊಟ್ಟೆಗಳನ್ನಿಡುವ ಹೇಂಟೆಗಳಾಗಿ ಕಾಣಿಸಿಕೊಂಡಿದ್ದರಲ್ಲಿ ತಪ್ಪಿಲ್ಲ. ಹೊಟೇಲ್‌ಗಳು, ಬಿಯರ್ ಬಾರ್/ ರೆಸ್ಟೋರೆಂಟ್‌ಗಳ ಲೈಸೆನ್ಸ್ ಕರಗಳು ಹಲವು ಪಟ್ಟು ಹೆಚ್ಚಾದವು. ಹೊಟೇಲ್‌ಗಳ ‘ಆಹಾರ್’ನಂತಹ ಸಂಘಟನೆಗಳು ಎಷ್ಟೇ ಪ್ರಯತ್ನ ಪಟ್ಟರೂ ಸರಕಾರ ಮಾತ್ರ ವಿಭಿನ್ನ ರೀತಿಗಳಲ್ಲಿ ಹೊಟೇಲ್‌ಗಳ ಸುಲಿಗೆಗೆ ಒಂದಲ್ಲ ಒಂದು ಮಾರ್ಗವನ್ನು ಕಂಡುಕೊಂಡಿತು. ಒಂದರ್ಥದಲ್ಲಿ ಕೆಲವು ಹೊಟೇಲಿಗರು ತಾವು ಅಗೆದ ಗುಂಡಿಗೆ ತಾವೇ ಬೀಳುವಂತಾಯಿತು. ಸರಕಾರದ ವಿಭಿನ್ನ ರೀತಿಯ ಸುಲಿಗೆಯ ‘ಕರ’ ಹೊಟೇಲ್ ಉದ್ಯಮಕ್ಕೆ ತಲೆ ಭಾರವಾಗುತ್ತಿದ್ದಂತೆ; ವಿಶ್ವದಾದ್ಯಂತ ಬಿರುಗಾಳಿಯಂತೆ ಬಂದ ಕೋವಿಡ್-19 ಅಥವಾ ಕೊರೋನ ಎಂಬ ಬಿರುಗಾಳಿ ಇಲ್ಲಿನ ಹೊಟೇಲ್ ಸಾಮ್ರಾಜ್ಯದ ತಳಹದಿಯನ್ನೇ ಅಲುಗಾಡಿಸಿತು. ಸುಮಾರು ಎಂಟು ತಿಂಗಳು ಮುಂಬೈಯ ಹೊಟೇಲ್‌ಗಳು ತನ್ನ ಬಾಗಿಲುಗಳನ್ನು ತೆರೆಯುವುದಕ್ಕೆ ಅವಕಾಶವೇ ಇಲ್ಲ. ಹೊಟೇಲ್‌ಗಳಲ್ಲಿ ಕೆಲಸಕ್ಕಿದ್ದವರ ಬವಣೆ ಹೇಳತೀರದು. ಹೊಟೇಲ್ ಉದ್ಯಮಿಗಳು!

ಅವರದ್ದು ಪಾತಾಳಕ್ಕೆ ತುಳಿಯಲ್ಪಟ್ಟ ಅನುಭವ. ಮುಕ್ಕಾಲು ಪಾಲು ಹೊಟೇಲ್‌ಗಳು ಬಾಡಿಗೆಗೆ ನಡೆಸುತ್ತಿರುವಂತಹದ್ದು. ತಿಂಗಳಿಗೆ ಕೊಡುವ ಬಾಡಿಗೆ ಕೊಡಲೇಬೇಕು. ಬ್ಯಾಂಕಿನ ಕಂತು ಕಟ್ಟಬೇಕು. ಇವೆಲ್ಲದರ ಮಧ್ಯೆ ಹೊಟೇಲಿನ ಒಳಗಿನ ಪರಿಸ್ಥಿತಿಯನ್ನು ಪರೀಕ್ಷಿಸುವ ಹಾಗಿಲ್ಲ. ಬಾಗಿಲು ತೆರೆದರೆ ಕಾನೂನು ಉಲ್ಲಂಘನೆಯ ಕ್ರಮ. ಏಳೆಂಟು ತಿಂಗಳು ಕಳೆದು ಒಳಹೊಕ್ಕು ನೋಡಿದಾಗ ಇಲಿಗಳು ಕೊರೆದು ಒಳಗೆ ಕೂಡಿಟ್ಟ ಮಣ್ಣು, ತುಕ್ಕು ಹಿಡಿದ ಟೇಬಲ್-ಕುರ್ಚಿ, ಇಲಿಗಳು ಕತ್ತರಿಸಿದ ಇಲೆಕ್ಟ್ರಿಕ್ ವೈರ್, ಮಳೆ ನೀರು ಒಳ ತುಂಬಿ ವಿಕೃತಗೊಂಡ ನೆಲ-ಗೋಡೆ.... ಗಾಯದ ಮೇಲೆ ಬರೆ; ವಿಚಿತ್ರ ಸಂಕಟದಲ್ಲಿ ಹೊಟೇಲ್ ಉದ್ಯಮ ತತ್ತರಗೊಳ್ಳುತ್ತಿತ್ತು. ಹೊಟೇಲ್ ನಡೆಸುತ್ತಿದ್ದ ಕೆಲ ವ್ಯಕ್ತಿಗಳ ಆತ್ಮಹತ್ಯೆ, ಊರಿಗೆ ಹೋದ ಕೆಲಸದವರು ಹಿಂದಿರುಗಿ ಬಾರದೇ ಹೊಟೇಲ್ ಉದ್ಯಮ ಶಾಂತವಾಗಿ ಈಗ ಮಲಗಿಕೊಂಡಿದೆ. ಸಾವಿನ ಹೊಸ್ತಿಲಲ್ಲಿ ನಿಂತಿದೆ. ಕೆಲ ಹೊಟೇಲ್ ಮಾಲಕರಾಗಿದ್ದವರೇ ಇಂದು ಅದೇ ಹೊಟೇಲ್‌ಗಳಲ್ಲಿ ಕಾರ್ಮಿಕರಾಗಿ ದುಡಿಯುವ ಕಟು ಸತ್ಯ ನಮ್ಮ ಮುಂದಿದೆ. ಕೆಲವರು ಹೊಟೇಲ್, ಕ್ಯಾಂಟೀನ್‌ಗಳನ್ನು ತೊರೆದು ಊರಿನತ್ತ ಮುಖಮಾಡಿ ಊರಿನಲ್ಲಿ ಕೃಷಿಯಾದರೂ ಮಾಡಿ ಬದುಕುವೆ ಎಂದು ಮುಂಬೈಗೆ ಬೆನ್ನು ತಿರುಗಿಸಿದ್ದಾರೆ. ಮುಂಬೈ ಹೊಟೇಲ್ ನಡೆದು ಬಂದ, ತುಳಿದ ಹಾದಿ, ಏರಿದ ಎತ್ತರ, ಅದರ ಭಿನ್ನಾಣ ಎಲ್ಲವೂ ಒಂದು ರೀತಿಯಿಂದ ಇತಿಹಾಸದ ಮಡಿಲು ಸೇರಿದೆ ಅನ್ನೋಣವೇ! ಅಥವಾ ತಾವೇ ಅಗೆದ ಗುಂಡಿಯಿಂದ; ಕೊರೋನ ಎಂಬ ಮಹಾಮಾರಿಯ ಹೊಡೆತದಿಂದ ಬುದ್ಧಿ ಕಲಿತ ಈ ಉದ್ಯಮ ಬೂದಿಯಿಂದ ಎದ್ದು ಬರುವ ಕೆಂಡದಂತೆ ಮತ್ತೆ ಎದ್ದು ನಿಲ್ಲಬಲ್ಲುದೇ ಈ ಆಶಯ ಮತ್ತು ಹಾರೈಕೆ ಮುಂಬೈ ಕನ್ನಡಿಗರದ್ದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)