ವೆರಿಕೋಸ್ ವೇನ್ಸ್‌ನಿಂದ ಪಾರಾಗಲು ಕೆಲವು ಸರಳ ಉಪಾಯಗಳಿಲ್ಲಿವೆ
ನೀವು ವೆರಿಕೋಸ್ ವೇನ್ಸ್ ಅಥವಾ ಕಾಲಿನಲ್ಲಿ ಉಬ್ಬಿದ ಅಭಿಧಮನಿಗಳಿಂದ ಹಿಂಸೆ ಅನುಭವಿಸುತ್ತಿದ್ದೀರಾ? ಕಾಲಕ್ರಮೇಣ ಗಾತ್ರದಲ್ಲಿ ಇನ್ನಷ್ಟು ದೊಡ್ಡದಾಗುವ ಈ ರಕ್ತನಾಳಗಳು ಸುದೀರ್ಘ ಸಮಯ ಕುಳಿತುಕೊಂಡಿದ್ದರೆ ಅಥವಾ ನಿಂತುಕೊಂಡಿದ್ದರೆ ನೋವನ್ನುಂಟು ಮಾಡುತ್ತವೆ. ಕಾಲುಗಳು ಭಾರವಾಗುವುದು,ತುರಿಕೆ ಮತ್ತು ಕಾಲುಗಳ ಕೆಳಭಾಗ ಊದಿಕೊಳ್ಳುವುದು ಇವೆಲ್ಲ ವೆರಿಕೋಸ್ ವೇನ್ಸ್‌ನ ತೊಂದರೆಗಳಾಗಿವೆ. ವೆರಿಕೋನ್ಸ್ ವೇನ್ಸ್‌ನಿಂದ ಶಮನ ನೀಡುವ ಕೆಲವು ಸರಳ ಮನೆಮದ್ದುಗಳ ಬಗ್ಗೆ ಮಾಹಿತಿಗಳು ಇಲ್ಲಿವೆ.....
* ಕಂಪ್ರೆಷನ್ ಸ್ಟಾಕಿಂಗ್ಸ್
ಕಂಪ್ರೆಷನ್ ಸ್ಟಾಕಿಂಗ್ಸ್ ಅಥವಾ ಸಂಕೋಚಕ ಕಾಲುಚೀಲಗಳು ಕಾಲುಗಳ ಮೇಲೆ ಒತ್ತಡವನ್ನುಂಟು ಮಾಡುತ್ತವೆ ಮತ್ತು ಇದು ಸ್ನಾಯುಗಳು ಮತ್ತು ಅಭಿಧಮನಿಗಳು ರಕ್ತವನ್ನು ಹೃದಯದತ್ತ ಸಾಗಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ಈ ಕಾಲುಚೀಲಗಳು ಪಾದಗಳ ಕೀಲುಗಳ ಬಳಿ ಗರಿಷ್ಠ ಒತ್ತಡವನ್ನುಂಟು ಮಾಡುತ್ತವೆ ಮತ್ತು ಅಲ್ಲಿಂದ ಮೇಲಕ್ಕೆ ಕ್ರಮೇಣ ಒತ್ತಡವನ್ನು ಕಡಿಮೆ ಮಾಡುತ್ತವೆ. ವೆರಿಕೋಸ್ ವೇನ್ಸ್ ಸಮಸ್ಯೆ ಇರುವವರು ರಾತ್ರಿ ದಿಂಬುಗಳ ಮೇಲೆ ಕಾಲುಗಳನ್ನಿಟ್ಟುಕೊಂಡು ಮಲಗಬೇಕು ಮತ್ತು ಈ ಸಂದರ್ಭದಲ್ಲಿ ಈ ಕಾಲುಚೀಲಗಳನ್ನು ಧರಿಸಬಾರದು. ಬೆಳಿಗ್ಗೆ ಎದ್ದ ತಕ್ಷಣ ಅವುಗಳನ್ನು ಧರಿಸಬೇಕು. ಇವುಗಳನ್ನು ಧರಿಸಿಕೊಂಡು ಮನೆಕೆಲಸ,ವಾಕಿಂಗ್,ಅಷ್ಟೇ ಏಕೆ,ಜಿಮ್‌ಗೆ ಹೋಗುವುದು ಸೇರಿದಂತೆ ದೈನಂದಿನ ಎಲ್ಲ ಕಾರ್ಯಗಳನ್ನು ಮಾಡಬಹುದು.
* ಕಾಲುಗಳನ್ನು ಎತ್ತರದಲ್ಲಿರಿಸುವುದು
ದೀಘ ಕಾಲ ಕುಳಿತುಕೊಂಡು ಕೆಲಸ ಮಾಡುತ್ತಿದ್ದರೆ ರಕ್ತಸಂಚಾರವನ್ನು ಹೆಚ್ಚಿಸಲು ಕಾಲುಗಳನ್ನು ಎತ್ತರದಲ್ಲಿರಿಸಬೇಕು. ಇದರಿಂದ ಅಭಿಧಮನಿಗಳು ಹಿಗ್ಗುತ್ತವೆ. ದೀರ್ಘ ಕಾಲ ನಿಂತುಕೊಂಡಿದ್ದರೆ ಕಾಲುಗಳನ್ನು ಆಗಾಗ್ಗೆ ಚಲಿಸುತ್ತಿರಬೇಕು. ಕುರ್ಚಿಯಲ್ಲಿ ಕುಳಿತುಕೊಂಡು ಟಿವಿ ವೀಕ್ಷಿಸುವುದೋ ಓದುವುದೋ ಮಾಡುತ್ತಿದ್ದರೆ ಕಾಲುಗಳನ್ನು ಸ್ಟೂಲ್ ಮೇಲಿರಿಸಿ.
* ಆ್ಯಪಲ್ ಸಿಡರ್ ವಿನೆಗರ್ ಮತ್ತು ಬೆಳ್ಳುಳ್ಳಿ
ಆ್ಯಪಲ್ ಸಿಡರ್ ವಿನೆಗರ್‌ನ್ನು ದಿನಕ್ಕೆರಡು ಬಾರಿ ಕಾಲುಗಳಿಗೆ ಲೇಪಿಸಿಕೊಂಡು ಲಘುವಾಗಿ ಮಸಾಜ್ ಮಾಡಿದರೆ ವೆರಿಕೋಸ್ ವೇನ್ಸ್ ಸಮಸ್ಯೆ ಶಮನಗೊಳ್ಳುತ್ತದೆ ಎಂದು ಕೆಲವು ಅಧ್ಯಯನಗಳು ಸೂಚಿಸಿವೆ. ವಿನೆಗರ್‌ನ್ನು ಹಚ್ಚಿಕೊಂಡ ಬಳಿಕ ಕಾಲುಗಳು ಕೆಂಪಾದರೆ ಅಥವಾ ತುರಿಕೆಯುಂಟಾದರೆ ಅದನ್ನು ಮುಂದುವರಿಸಬೇಡಿ. ಬೆಳ್ಳುಳ್ಳಿಯಲ್ಲಿರುವ ಗಂಧಕವು ರಕ್ತಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ಅಭಿಧಮನಿಗಳನ್ನು ಬಲಗೊಳಿಸುತ್ತದೆ. ಆದರೆ ಅದರ ಅಡ್ಡಪರಿಣಾಮಗಳನ್ನು ಸರಿಯಾಗಿ ದಾಖಲಿಸಲಾಗಿಲ್ಲ,ಹೀಗಾಗಿ ಸಣ್ಣ ಪ್ರಮಾಣದಲ್ಲಿ ಅದನ್ನು ಬಳಸಬೇಕು.
* ದೈನಂದಿನ ವ್ಯಾಯಾಮ
ಪ್ರತಿದಿನ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಕಾಲುಗಳಲ್ಲಿ ರಕ್ತಸಂಚಾರವು ಹೆಚ್ಚುತ್ತದೆ. ಇದು ಅಭಿಧಮನಿಗಳಲ್ಲಿ ನಿಂತಿರುವ ರಕ್ತವನ್ನು ಖಾಲಿ ಮಾಡುವ ಮೀನಖಂಡದ ಸ್ನಾಯುಗಳ ಪಂಪಿಂಗ್ ಕಾರ್ಯಕ್ಕೆ ಅವಕಾಶ ಮಾಡಿಕೊಡುತ್ತದೆ. ವಾಕಿಂಗ್,ಈಜುವಿಕೆ,ಯೋಗ ಮತ್ತು ಸೈಕ್ಲಿಂಗ್‌ನಂತಹ ಚಟುವಟಿಕೆಗಳು ಕಾಲುಗಳಲ್ಲಿ ರಕ್ತಸಂಚಾರವನ್ನು ಹೆಚ್ಚಿಸುತ್ತವೆ.
* ಕಾಲುಗಳಿಗೆ ಮಸಾಜ್ ಅಭಿಧಮನಿಗಳಲ್ಲಿ ರಕ್ತ ಸಂಚರಿಸುವಂತಾಗಲು ಎಣ್ಣೆ ಅಥವಾ ಮಾಯಿಶ್ಚರೈಸರ್ ಬಳಸಿ ಕಾಲುಗಳಿಗೆ ಲಘುವಾಗಿ ಮಸಾಜ್ ಮಾಡಿ. ಆದರೆ ರಭಸದಿಂದ ಉಜ್ಜಬೇಡಿ. ಅಂದ ಹಾಗೆ ವೆರಿಕೋಸ್ ವೇನ್ಸ್‌ನಿಂದ ಬಳಲುತ್ತಿರುವವರು ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳಬಾರದು ಎನ್ನುವುದು ನೆನಪಿರಲಿ.
* ಅಧಿಕ ನಾರಿನ ಸೇವನೆ
ಓಟ್ಸ್,ರಾಗಿ,ಬಾಜ್ರಾ,ಮಿಶ್ರ ಹಿಟ್ಟು,ಬೇಳೆಗಳು,ಮೊಳಕೆ ಬರಿಸಿದ ಕಾಳುಗಳಂತಹ ಆಹಾರಗಳು ನಾರಿನ ಉತ್ತಮ ಮೂಲಗಳಾಗಿದ್ದು,ನಾರು ಕೊಬ್ಬು ಸಂಗ್ರಹಗೊಳ್ಳುವುದನ್ನು ತಡೆಯುತ್ತದೆ.
* ಕಡಿಮೆ ಕೊಬ್ಬಿನ ಡೇರಿ ಉತ್ಪನ್ನಗಳು
ಹೆಚ್ಚು ಕೊಬ್ಬು ಹೊಂದಿರುವ ಬೆಣ್ಣೆ,ತುಪ್ಪ,ಚೀಸ್‌ನಂತಹ ಉತ್ಪನ್ನಗಳನ್ನು ಸೇವಿಸುವ ಬದಲು ಕಡಿಮೆ ಕೊಬ್ಬನ್ನು ಒಳಗೊಂಡಿರುವ ಮೊಸರು,ಸ್ಕಿಮ್ಡ್ ಮಿಲ್ಕ್ ಇತ್ಯಾದಿಗಳನ್ನು ಸೇವಿಸಬಹುದು ಕಡಿಮೆ ಕೊಬ್ಬಿರುವ ಡೇರಿ ಉತ್ಪನ್ನಗಳು ಹಲವಾರು ಖನಿಜಗಳು,ಪ್ರೋಟಿನ್ ಮತ್ತು ಬಿ12,ಬಿ6 ಹಾಗೂ ರಿಬೊಫ್ಲಾವಿನ್‌ನಂತಹ ವಿಟಾಮಿನ್‌ಗಳ ಅತ್ಯುತ್ತಮ ಮೂಲಗಳಾಗಿವೆ.
* ಪೈಕ್ನೊಜಿನಾಲ್
ಪೈನ್ ಮರಗಳ ತೊಗಟೆಯ ಸಾರದಲ್ಲಿ ಪೈಕ್ನೊಜಿನಾಲ್ ಇರುತ್ತದೆ. ಇದು ಔಷಧೀಯ ಗುಣಗಳನ್ನು ಹೊಂದಿದ್ದು,ಅಭಿಧಮನಿಗಳ ಸ್ಥಿತಿಸ್ಥಾಪಕತ್ವ ಮತ್ತು ಪ್ರತಿರೋಧತ್ವದ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಅದು ಊತವನ್ನು ಕಡಿಮೆಗೊಳಿಸುತ್ತದೆ ಮತ್ತು ರಕ್ತಸಂಚಾರವನ್ನು ಹೆಚ್ಚಿಸುತ್ತದೆ. ಸೇಬು ಮತ್ತು ದ್ರಾಕ್ಷಿಗಳಲ್ಲಿಯೂ ಪೈಕ್ನೊಜಿನಾಲ್ ಇರುತ್ತದೆ.