varthabharthi


ಕಾಲಮಾನ

ಮೋಹನದಾಸ ಕೆ. ಗಾಂಧಿಯ ನೈತಿಕ ವಿಕಾಸ

ವಾರ್ತಾ ಭಾರತಿ : 6 Feb, 2021
ರಾಮಚಂದ್ರ ಗುಹಾ

ಗಾಂಧಿಯವರ ಮಾತುಗಳಲ್ಲಿ ಹಾಗೂ ಪ್ರಕ್ರಿಯೆಗಳಲ್ಲಿ ಪ್ರಚಾರ ಇರಲಿಲ್ಲ, ಕುತಂತ್ರವಿರಲಿಲ್ಲ, ಜಾರಿಕೆ ಇರಲಿಲ್ಲ. ತನ್ನನ್ನು ತಾನೇ ಹೊಗಳಿಕೊಳ್ಳುವ ಯಾವುದೇ ಪ್ರಯತ್ನವಿರಲಿಲ್ಲ. ಗಾಂಧಿಯವರ ಕೃತಿಗಳನ್ನು ಓದುವುದು, ಅವರ ಬಗ್ಗೆ ಸಂಶೋಧನೆ ನಡೆಸುವುದು ಎಂದರೆ ಓರ್ವ ಮಾನವ ಜೀವಿಯ ಮುಖಾಮುಖಿಯಾಗುವುದು. ಗಾಂಧಿ ಅನುಯಾಯಿಗಳು ಗಾಂಧಿ ಪರಿಶುದ್ಧ ಪರಿಪೂರ್ಣ ಓರ್ವ ಮಹಾತ್ಮ ಎಂದು ಹೇಳುತ್ತಿದ್ದರು. ಆದರೆ ಗಾಂಧಿಗೆ ತಾನು ಕೂಡ ತಪ್ಪುಮಾಡಬಲ್ಲವ, ದೋಷರಹಿತನಲ್ಲದವ ಎಂದು ತಿಳಿದಿತ್ತು.


ಅಮೆರಿಕನ್ ಲೇಖಕ ಲೂಯಿಸ್ ಫಿಶರ್ ‘ದಿ ಲೈಫ್ ಆಫ್ ಮಹಾತ್ಮಾ ಗಾಂಧಿ’ ಪುಸ್ತಕದ ಲೇಖಕರಾಗಿ ಅತ್ಯಂತ ಪ್ರಸಿದ್ಧರಾಗಿದ್ದಾರೆ. 1982ರ ತನ್ನ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಿಸುವಾಗ ರಿಚರ್ಡ್ ಅಟೆನ್ ಬರೋ ಈ ಪುಸ್ತಕವನ್ನು ಬಳಸಿಕೊಂಡರು. ಗಾಂಧಿಯವರ ಹತ್ಯೆಯಾದ ಒಂದು ವರ್ಷದ ಬಳಿಕ 1949ರಲ್ಲಿ ಫಿಶರ್‌ರವರ ಪುಸ್ತಕ ಪ್ರಕಟವಾಗಿತ್ತು. ಅದಕ್ಕೆ ಏಳು ವರ್ಷಗಳ ಮೊದಲು ಅವರು ‘ಎ ವೀಕ್ ವಿದ್ ಗಾಂಧಿ’ ಎಂಬ ಪುಸ್ತಕ ಬರೆದಿದ್ದರು. 1942ರ ಬೇಸಿಗೆಯಲ್ಲಿ ಫಿಶರ್ ಭಾರತಕ್ಕೆ ನೀಡಿದ ಭೇಟಿಯನ್ನಾಧರಿಸಿ ಆ ಪುಸ್ತಕ ಬರೆದಿದ್ದರು. ಆ ಭೇಟಿಯ ಅವಧಿಯಲ್ಲಿ ಅವರು ಮುಂಬೈ ಮಹಾನಗರಿಯಲ್ಲಿ ಅಂಬೇಡ್ಕರ್, ಸಾವರ್ಕರ್ ಮತ್ತು ಜಿನ್ನಾರೊಂದಿಗೆ ಮಾತುಕತೆ ನಡೆಸಿದ್ದರು. ಆ ಬಳಿಕ ಅವರು ಸೇವಾಗ್ರಾಮ ಎಂಬ ಹಳ್ಳಿಯ ಅತ್ಯಂತ ಪ್ರಸಿದ್ಧ ನಿವಾಸಿಯ ಜತೆ ಮಾತಾಡಲು ಸೇವಾಗ್ರಾಮಕ್ಕೆ ಪ್ರಯಾಣ ಬೆಳೆಸಿದರು. ಈ ಪುಸ್ತಕದ ಒಂದು ಮನಮುಟ್ಟುವ ಭಾಗದಲ್ಲಿ ಫಿಷರ್ ಹೀಗೆ ಬರೆದಿದ್ದರು:

‘‘ಜಿನ್ನಾ ನನ್ನೊಡನೆ ಮಾತಾಡಿದರು. ಅವರು ನನಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದರು. ನಾನು ಅವರಿಗೆ ಪ್ರಶ್ನೆಯೊಂದನ್ನು ಕೇಳಿದಾಗ ನಾನೊಂದು ಗ್ರಾಮಫೋನ್ ರೆಕಾರ್ಡ್ ಹಚ್ಚಿದಂತೆ ಅನಿಸುತ್ತಿತ್ತು. ಅವರು ಹೇಳುವುದನ್ನೆಲ್ಲ ನಾನು ಆಗ ಅದಾಗಲೇ ಕೇಳಿದ್ದೆ ಅಥವಾ ಅವರು ನನಗೆ ಕೊಟ್ಟ ಮುದ್ರಿತ ಪುಟಗಳಲ್ಲಿ ನಾನು ಅದನ್ನೆಲ್ಲ ಓದಿಕೊಳ್ಳಬಹುದಾಗಿತ್ತು. ಆದರೆ ನಾನು ಗಾಂಧಿಯವರೊಡನೆ ಏನನ್ನೋ ಕೇಳಿದಾಗ ನಾನೊಂದು ಸೃಜನಶೀಲ ಪ್ರಕ್ರಿಯೆಯನ್ನು ಆರಂಭಿಸಿದೆ ಅನಿಸುತ್ತಿತ್ತು. ಅವರ ಮನಸ್ಸು ಕೆಲಸ ಮಾಡುವುದು ನನಗೆ ಕಾಣಿಸುತ್ತಿತ್ತು, ಕೇಳಿಸುತ್ತಿತ್ತು. ಜಿನ್ನಾರವರೊಡನೆ ಮಾತಾಡುವಾಗ ಗ್ರಾಮಫೋನ್‌ನ ಸೂಜಿ ರೆಕಾರ್ಡ್‌ನ ಮೇಲೆ ಗೀರುವ ಸದ್ದಷ್ಟೇ ನನಗೆ ಕೇಳಿಸುತ್ತಿತ್ತು. ಆದರೆ ಗಾಂಧಿಯವರು ತನ್ನ ಮಾತನ್ನು ಮುಕ್ತಾಯಗೊಳಿಸುವವರೆಗೂ ನಾನು ಅವರನ್ನು ಸ್ಪಷ್ಟವಾಗಿ ಆಲಿಸಬಹುದಾಗಿತ್ತು. ಆದ್ದರಿಂದ ಅವರು (ಸಂದರ್ಶಕರೊಬ್ಬರಿಗೆ) ಜಿನ್ನಾರವರಿಗಿಂತ ಹೆಚ್ಚು ಆಸಕ್ತಿದಾಯಕರಾಗಿದ್ದರು. ನೀವು ಅವರಿಗೆ ಸರಿಯಾದ ಪ್ರಶ್ನೆ ಕೇಳಿದರೆ ನೀವು ಚಿಂತನೆಯ ಒಂದು ಹೊಸ ಕಿಸೆಯನ್ನು ತೆರೆದಂತೆ. ಅವರೊಂದಿಗಿನ ಒಂದು ಸಂದರ್ಶನವೆಂದರೆ ಶೋಧನೆಯ ಒಂದು ಸಮುದ್ರಯಾನ ಮತ್ತು ತಾನು ಹೇಳುವ ಮಾತುಗಳ ಬಗ್ಗೆ ಒಮ್ಮೆಮ್ಮೆ ಸ್ವತಃ ಅವರಿಗೇ ಆಶ್ಚರ್ಯವಾಗುತ್ತಿತ್ತು.’’

ಆಲಿಸುವ ಮತ್ತು ಕಲಿಯುವ ಈ ಸಾಮರ್ಥ್ಯ, ತಾನು ಹೇಳಿದ್ದಕ್ಕೆ ವಿರುದ್ಧವಾದ ಪುರಾವೆಗಳು ಎದುರಾದಾಗ ತನ್ನ ಅಭಿಪ್ರಾಯಗಳನ್ನು, ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವ ಈ ಸಾಮರ್ಥ್ಯ ಗಾಂಧಿಯವರನ್ನು ಅವರ ಕಾಲದ ಹಾಗೂ ನಮ್ಮ ಕಾಲದ ಇತರ ರಾಜಕಾರಣಿಗಳಿಗಿಂತ ಭಿನ್ನವಾಗಿಸಿತ್ತು. ಅವರು ತನ್ನ ನಿಲುವುಗಳನ್ನೇ ಸದಾ ಪ್ರಶ್ನಿಸಿಕೊಳ್ಳುತ್ತಿದ್ದರು. ಈ ನಿಟ್ಟಿನಲ್ಲಿ ಜನಾಂಗ, ಜಾತಿ ಮತ್ತು ಲಿಂಗದ (ಜಂಡರ್) ಕುರಿತು ಅವರ ಭಿನ್ನಾಭಿಪ್ರಾಯಗಳನ್ನು ಗಮನಿಸಿ. ಈ ಎಲ್ಲಾ ವಿಷಯಗಳಲ್ಲಿಯೂ ತನ್ನ ಜೀವನದ ಉದ್ದಕ್ಕೂ ಒಂದೊಮ್ಮೆ ತನಗಿದ್ದ ಪ್ರತಿಗಾಮಿ ಪೂರ್ವಾಗ್ರಹಗಳನ್ನು ತ್ಯಜಿಸಿ ಸಮತಾವಾದಿ ನಿಲುವುಗಳನ್ನು ಒಪ್ಪಿಕೊಳ್ಳುತ್ತಿದ್ದರು. ಭಾರತದಲ್ಲಿ ಜನಾಂಗೀಯವಾದ ಆಳವಾಗಿ ಬೇರೂರಿದೆ. ಪುರುಷರು ವಧುಗಳನ್ನು ಅರಸುವಾಗ ‘ಬೆಳ್ಳನೆ ಚರ್ಮದ’ ವಧುಗಳನ್ನೇ ಹುಡುಕುವ ಪ್ರವೃತ್ತಿ ವ್ಯಾಪಕವಾಗಿ ಇನ್ನೂ ಇದೆ. ಕಥಿಯಾವಾಡದಲ್ಲಿ ಬೆಳೆಯುತ್ತಿರುವಾಗ ಗಾಂಧಿ ಜನಾಂಗೀಯ/ವರ್ಣಕ್ಕೆ ಸಂಬಂಧಿಸಿದ ಪಡಿಯಚ್ಚು (ಸ್ಟೀರಿಯೋಟೈಪ್)ಗಳನ್ನು ಯಾವುದೇ ರೀತಿಯಲ್ಲಿ ಪ್ರಶ್ನಿಸದೆ ಒಪ್ಪಿಕೊಂಡಿದ್ದರು. ಆದ್ದರಿಂದಲೇ, ದಕ್ಷಿಣ ಆಫ್ರಿಕಾದಲ್ಲಿ ಅವರಿದ್ದ ಮೊದಲ ವರ್ಷಗಳಲ್ಲಿ ಅವರು ಆಫ್ರಿಕನ್ನರ ಬಗ್ಗೆ ಹಲವಾರು ಅವಮಾನಕಾರಿ ನಿಂದನಾತ್ಮಕ ಟೀಕೆಗಳನ್ನು ಮಾಡಿದ್ದರು. ತರುವಾಯ ಅವರು ಆಫ್ರಿಕನ್ನರನ್ನು ಹೆಚ್ಚು ಇತ್ಯಾತ್ಮಕವಾಗಿ ಕಾಣಲಾರಂಭಿಸಿದರು. 1908ರಲ್ಲಿ ಜೋಹಾನ್ಸ್ ಬರ್ಗ್‌ನಲ್ಲಿ ಮಾಡಿದ ಸಾರ್ವಜನಿಕ ಭಾಷಣವೊಂದರಲ್ಲಿ ‘‘ಎಲ್ಲ ವಿಭಿನ್ನ ಜನಾಂಗಗಳು ಒಂದುಗೂಡಿ ಪ್ರಪಂಚದ ಇನ್ನೂ ಕಂಡಿರದ ನಾಗರಿಕತೆಯೊಂದನ್ನು ಸೃಷ್ಟಿಸಲಿವೆ’’ ಎಂದು ಅವರು ಹೇಳಿದರು.

ತನ್ನ ಆಫ್ರಿಕಾವಾಸದ ಅಂತ್ಯದ ವೇಳೆಗೆ ಗಾಂಧಿ ಓರ್ವ ಜನಾಂಗೀಯವಾದಿಯಿಂದ ದೂರ ಸರಿದು ಅ-ಜನಾಂಗೀಯವಾದಿ (ನಾನ್ ರೇಸಿಸ್ಟ್ )ಯಾದರು. ಅವರ ಅಭಿಪ್ರಾಯಗಳು ಇನ್ನಷ್ಟು ಪಕ್ವಗೊಂಡವು. ತನ್ನ ಬದುಕಿನ ಕೊನೆಯ ದಶಕಗಳಲ್ಲಿ ಪ್ರಬಲ ಜನಾಂಗವಾದ ವಿರೋಧಿಯಾದ ಅವರು ಆಫ್ರಿಕನ್-ಅಮೆರಿಕನ್ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದು ಅವರನ್ನು ಸೇವಾಗ್ರಾಮದ ತನ್ನ ಆಶ್ರಮಕ್ಕೆ ಬರಮಾಡಿಕೊಳ್ಳುತ್ತಿದ್ದರು. ಅವರು ತಮ್ಮ ದೇಶದಲ್ಲಿ ಜನಾಂಗೀಯ ವಾದವನ್ನು ಎದುರಿಸಲು ಅಹಿಂಸಾತ್ಮಕ ಸತ್ಯಾಗ್ರಹವನ್ನು ಅಳವಡಿಸಿಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದರು. ಬಳಿಕ ಅವರು ಹಾಗೆಯೇ ಮಾಡಿದರು. ಗಾಂಧಿ ದಕ್ಷಿಣ ಆಫ್ರಿಕಾದಲ್ಲಿರುವವರೆಗೆ ಭಾರತೀಯರ ಹೋರಾಟವನ್ನು ಆಫ್ರಿಕನ್ನರ ಹೋರಾಟದಿಂದ ಬೇರೆಯಾಗಿ ಇಟ್ಟಿದ್ದರು. ಆದರೆ ಬಳಿಕ ಹಿಂದಿರುಗಿ ನೋಡಿದಾಗ ಇದು ವಿವೇಕಯುತವಾದದ್ದಲ್ಲ ಎಂದು ಅವರಿಗೆ ಅನ್ನಿಸಿತ್ತು. 1946ರಲ್ಲಿ ಭಾರತೀಯರ ನಿಯೋಗವೊಂದು ದಕ್ಷಿಣ ಆಫ್ರಿಕಾದಿಂದ ಬಂದು ಅವರನ್ನು ಭೇಟಿಯಾದಾಗ ಅವರು ‘ಝುಲುಗಳೊಂದಿಗೆ ಹಾಗೂ ಬಾಂಟಸ್‌ಗಳೊಂದಿಗೆ ಸೇರಿ ಕೊಳ್ಳಲೇಬೇಕೆಂದು’ ಗಾಂಧಿ ಹೇಳಿದರು. ‘‘ಇವತ್ತು ಎಂಬ ಘೋಷಣೆ. ‘ಏಶ್ಯ ಏಶ್ಯನ್ನರಿಗಾಗಿ’ ಎಂಬ ಅರ್ಥದಲ್ಲಿ ಅಲ್ಲ ಅಥವಾ ‘ಆಫ್ರಿಕಾ ಆಫ್ರಿಕನ್ನರಿಗಾಗಿ’ ಎಂಬ ಅರ್ಥದಲ್ಲಿ ಉಳಿದಿಲ್ಲ. ಬದಲಾಗಿ ವಿಶ್ವದ ಎಲ್ಲಾ ಶೋಷಿತ ಜನಾಂಗಗಳಿಗಾಗಿ ಎಂಬರ್ಥದಲ್ಲಿ ಅದನ್ನು ಬಳಸಬೇಕಿದೆ’’ ಎಂದು ಗಾಂಧಿ ಹೇಳಿದರು. ತನ್ನ ಆತ್ಮಕತೆಯಲ್ಲಿ ಗಾಂಧಿ ತಾನು ವಿದೇಶ ಪ್ರಯಾಣ ಮಾಡಲಿಕ್ಕಾಗಿ ತನ್ನ ಮೋಧ್ ಬನಿಯಾ ಸಮುದಾಯವನ್ನು ವಿರೋಧಿಸಿ ನಿಂತ ಬಗ್ಗೆ ಹೇಳುತ್ತಾರೆ. ಅದೇನಿದ್ದರೂ ಅವರು 1915ರಲ್ಲಿ ತನ್ನ ಮಾತೃಭೂಮಿಗೆ ಮರಳಿ ಬರುವವರೆಗೆ ಅವರಿಗೆ ಜಾತಿ ತಾರತಮ್ಯದ ಸಂಪೂರ್ಣ ಅರಿವಾಗಿರಲಿಲ್ಲ. ದಕ್ಷಿಣ ಭಾರತದಲ್ಲಿ ಪ್ರಯಾಣ ಮಾಡುವಾಗ ದಲಿತರನ್ನು ಕೆಟ್ಟದಾಗಿ ನಡೆಸಿಕೊಳ್ಳುವುದನ್ನು ಕಂಡು ಅವರು ದಂಗಾದರು. ಆ ಹಂತದಲ್ಲಿ ಜಾತಿ ಪದ್ಧತಿಗೆ ನೇರವಾಗಿ ಸವಾಲೊಡ್ಡಲು ಅವರು ಸಿದ್ಧರಿರಲಿಲ್ಲವಾದರೂ ಅಸ್ಪೃಶ್ಯತೆಯನ್ನು ವಿರೋಧಿಸಲು ಅವರು ದೃಢನಿಶ್ಚಯ ಮಾಡಿದರು. 1920ರ ದಶಕದಲ್ಲಿ ಸಮಾಜ ಸುಧಾರಕ ನಾರಾಯಣಗುರುರವರ ಅನುಯಾಯಿಗಳಿಂದ ಸ್ಫೂರ್ತಿ ಪಡೆದು ದೇವಸ್ಥಾನ ಪ್ರವೇಶಕ್ಕಾಗಿ ನಡೆದ ಒಂದು ಅಭಿಯಾನಕ್ಕೆ ತನ್ನ ಬೆಂಬಲ, ಸ್ಫೂರ್ತಿ ನೀಡಿದರು. ದಲಿತರು ಹಾಗೂ ಸವರ್ಣೀಯರನ್ನು ಒಂದುಗೂಡಿಸಿ, ಅವರು ಒಂದಾಗಿ ಪೂಜೆ ಸಲ್ಲಿಸುವುದು ಆ ಅಭಿಯಾನದ ಉದ್ದೇಶವಾಗಿತ್ತು. 1930ರಲ್ಲಿ ದಲಿತೋದ್ಧಾರಕ ಬಿ. ಆರ್. ಅಂಬೇಡ್ಕರ್‌ರವರ ಸವಾಲಿಗೆ ಉತ್ತರವಾಗಿ ಗಾಂಧಿ ಇನ್ನಷ್ಟು ತೀವ್ರಗಾಮಿಯಾದ ನಿಲುವುಗಳನ್ನು ತೆಗೆದುಕೊಳ್ಳಲು ಆರಂಭಿಸಿದರು. ಅವರೀಗ ಪ್ರತಿಭಟನೆ, ಅಂತರ್ ಭೋಜನ ಮತ್ತು ಅಂತಿಮವಾಗಿ ಸವರ್ಣೀಯರ ಹಾಗೂ ದಲಿತರ ನಡುವೆ ವಿವಾಹಗಳನ್ನು ಏರ್ಪಡಿಸುವ ನಿಟ್ಟಿನಲ್ಲಿ ಸಕ್ರಿಯರಾದರು. ಪ್ರತ್ಯೇಕತೆಯ, ತಾರತಮ್ಯತೆಯ ಒಂದು ವ್ಯವಸ್ಥೆಯಾಗಿ ಅಸ್ತಿತ್ವದಲ್ಲಿರಲು ಜಾತಿಗೆ ಯಾವುದೇ ರೀತಿಯ ಕಾರಣಗಳಿಲ್ಲವೆಂದು ಅವರು ಮನಗಂಡರು.

ತನ್ನ ಜೀವನದ ಹಾದಿಯಲ್ಲಿ ಕ್ರಮಿಸಿದಂತೆ, ಗಾಂಧಿ ತನ್ನ ಯೌವನದ ದಿನಗಳ ಜನಾಂಗೀಯ ಹಾಗೂ ಜಾತಿ ಪೂರ್ವಾಗ್ರಹಗಳಿಂದ ಮುಕ್ತರಾದರು. ಆದರೆ ಲಿಂಗಕ್ಕೆ (ಜಂಡರ್) ಸಂಬಂಧಿಸಿ ಅವರ ನೈತಿಕ ವಿಕಾಸ ಇದರಷ್ಟು ಪೂರ್ಣವಾಗಿರಲಿಲ್ಲ. ತನ್ನ ಜೀವನದಲ್ಲಿ (ಮನೆಯಲ್ಲಿ) ಗಾಂಧಿ ಓರ್ವ ಅಪ್ಪಟ (ಟಿಪಿಕಲ್) ಹಿಂದೂ ಪಿತೃಪ್ರಧಾನ ವ್ಯಕ್ತಿ (ಪ್ಯಾಟ್ರಿಯಾರ್ಕ್) ಆಗಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಇಬ್ಬರು ಸ್ವತಂತ್ರ ಮನೋಭಾವದ ಯುರೋಪಿಯನ್ ಮಹಿಳೆಯರನ್ನು ಭೇಟಿಯಾಗದಿರುತ್ತಿದ್ದಲ್ಲಿ ಅವರು ಮನೆಯ ಹೊರಗೆ ಸಾರ್ವಜನಿಕ ಬದುಕಿನಲ್ಲಿ ಕೂಡ ಹಾಗೆಯೇ ಉಳಿದುಬಿಡುವ ಸಾಧ್ಯತೆ ಇತ್ತು. ಈ ಇಬ್ಬರು ಮಹಿಳೆಯರು ಯಾರೆಂದರೆ, ಮಿಲ್ಲಿ ಗ್ರಹಾಮ್, ಗಾಂಧಿಯವರ ಗೆಳೆಯ ಹಾಗೂ ಗೃಹಪಾಠಿ (ಹೌಸ್‌ಮೇಟ್) ಹೆನ್ರಿ ಪೊಲಾಕ್‌ರವರ ಪತ್ನಿ ಮತ್ತು ಸೋಂಜಾ ಸ್ಲೇಶಿನ್, ಈಕೆ ಗಾಂಧಿಯವರ ಕಾನೂನು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಮಹಿಳೆಯರನ್ನು ಪುರುಷರಿಗೆ ಶರಣಾಗುವವರು ಹಾಗೂ ಅವರ ಅಡಿಯಾಳುಗಳು ಎಂಬಂತೆ ನಡೆಸಿಕೊಳ್ಳುವುದನ್ನು ನೋಡುತ್ತಾ ಬಂದಿದ್ದ ಗಾಂಧಿ, ಮಿಲ್ಲಿಯ ಜೊತೆ ಒಂದೇ ಮನೆಯಲ್ಲಿ ವಾಸಿಸುವಾಗ ಹಾಗೂ ಸೋಂಜಾ ಜೊತೆ ಕಚೇರಿಯಲ್ಲಿ ಕೆಲಸ ಮಾಡುವಾಗ ಮಹಿಳೆಯರು ಸ್ವಾಯತ್ತ, ನೈತಿಕ ಹಾಗೂ ಸಾಮಾಜಿಕ ಏಜೆಂಟರುಗಳೆಂಬುದನ್ನು ಗಾಂಧಿ ಕಂಡುಕೊಂಡರು. ಈ ಅನುಭವಗಳು 1913ರಲ್ಲಿ ಗಾಂಧಿ ಸಂಘಟಿಸಿದ ಒಂದು ಸತ್ಯಾಗ್ರಹದಲ್ಲಿ (ಕಸ್ತೂರ್ಬಾರವರು ಸೇರಿದಂತೆ) ಭಾರತೀಯ ಮಹಿಳೆಯರು ಭಾಗವಹಿಸುವುದಕ್ಕೆ ಕಾರಣವಾದವು. ಭಾರತಕ್ಕೆ ಮರಳಿದ ಬಳಿಕ ಗಾಂಧಿ, ಮಹಿಳೆಯರನ್ನು ರಾಷ್ಟ್ರ ರಾಜಕಾರಣದಿಂದ ದೂರವಿಡುವ ಯೋಚನೆಯಲ್ಲಿದ್ದರು. ಪುರುಷರು ಮತ್ತು ಸ್ತ್ರೀಯರು ಸಾರ್ವಜನಿಕ ಸ್ಥಳದಲ್ಲಿ ಒಟ್ಟುಗೂಡುವುದನ್ನು ತೀರಾ ಸಾಂಪ್ರದಾಯಿಕವಾದ ಒಂದು ಸಮಾಜ ವಿರೋಧಿಸಬಹುದೆಂಬ ಭಯ ಆವರಿಗಿತ್ತು. ಮತ್ತೆ ಪುನಃ ಅವರು ಇನ್ನಷ್ಟು ಪುರೋಗಾಮಿಯಾದ ಒಂದು ನಿಲುವು ತೆಗೆದುಕೊಳ್ಳುವಂತೆ ಅವರನ್ನು ಪ್ರೋತ್ಸಾಹಿಸಿದವರು ಇಬ್ಬರು ವಿಶಿಷ್ಟ ಮಹಿಳೆಯರು. ಇವರೇ ಸರೋಜಿನಿ ನಾಯ್ಡು ಮತ್ತು ಕಮಲಾದೇವಿ ಚಟ್ಟೋಪಾಧ್ಯಾಯ. 1925ರಲ್ಲಿ ನಾಯ್ಡು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷೆಯಾದರು. ಚಟ್ಟೋಪಾಧ್ಯಾಯ ಉಪ್ಪಿನ ಸತ್ಯಾಗ್ರಹದಲ್ಲಿ ಒಂದು ಪ್ರಮುಖ ಪಾತ್ರ ವಹಿಸಿದರು. ಬಳಿಕ, 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ನೂರಾರು ಮಹಿಳಾ ಕಾರ್ಯಕರ್ತೆಯರು ಮುಷ್ಕರ ಹಾಗೂ ಪ್ರತಿಭಟನೆಗಳ ನೇತೃತ್ವ ವಹಿಸಿದರು, ಜೈಲಿಗೂ ಹೋದರು. ಗಾಂಧಿವಾದಿ ಚಳವಳಿಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಏಶ್ಯ ಅಥವಾ ಆಫ್ರಿಕಾದಲ್ಲಿ ನಡೆದ ಬೇರೆ ಯಾವುದೇ ವಸಾಹತುಶಾಹಿ ವಿರೋಧಿ ಹೋರಾಟದಲ್ಲಿ ಭಾಗವಹಿಸುವಿಕೆಗಿಂತ ಹೆಚ್ಚು ವ್ಯಾಪಕವಾಗಿತ್ತು.

ಜನಾಂಗ, ಜಾತಿ ಮತ್ತು ಲಿಂಗ ಸಾಮಾಜಿಕ ತಾರತಮ್ಯದ ಮೂರು ಮೂಲಭೂತ ಕೇಂದ್ರಗಳು. ಆದ್ದರಿಂದಲೇ ನಾನು ಈ ನಿಟ್ಟಿನಲ್ಲಿ ಗಾಂಧಿಯವರ ಅಭಿಪ್ರಾಯಗಳ ವಿಕಾಸವನ್ನು ಅನುಸರಿಸುತ್ತಾ ಈ ಮೂರರ ಮೇಲೆ ಗಮನವನ್ನು ಕೇಂದ್ರೀಕರಿಸಿದ್ದೇನೆ. ಆದರೂ ಇತರ ರಂಗಗಳಲ್ಲಿ ಕೂಡ ಅವರು ಸತತವಾಗಿ ಕಲಿಯುತ್ತಿದ್ದರು ಮತ್ತು ಬೆಳೆಯುತ್ತಿದ್ದರು. ಉದಾಹರಣೆಗೆ, ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಅವರ ಮನೋಧರ್ಮವನ್ನು ಗಮನಿಸೋಣ. ಉದಾಹರಣೆಗೆ 1909ರ ಅವರ ಪುಸ್ತಕ ‘ಹಿಂದ್ ಸ್ವರಾಜ್’ನಲ್ಲಿ ಗಾಂಧಿ ಓರ್ವ ಕಾರ್ಖಾನೆ ವಿರೋಧಿ (ಲುಡೈಟ್)ಆಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಮುಂದಿನ ವರ್ಷಗಳಲ್ಲಿ ಅವರು ತನ್ನ ಅಭಿಪ್ರಾಯಗಳನ್ನು ಬಹಳಷ್ಟು ಬದಲಾಯಿಸಿಕೊಳ್ಳುತ್ತಾರೆ. ಇಬ್ಬರು ಸರ್ಜನರು (ಓರ್ವ ಭಾರತೀಯ, ಇನ್ನೋರ್ವ ಯುರೋಪಿಯನ್) ಅವರಿಗೆ ಎರಡು ಯಶಸ್ವಿ ಶಸ್ತ್ರಕ್ರಿಯೆಯನ್ನು ನಡೆಸಿದ ಬಳಿಕ ಆಧುನಿಕ ವೈದ್ಯಕೀಯ ವಿಜ್ಞಾನದ ಕುರಿತು ಒಂದೊಮ್ಮೆ ಅವರಿಗಿದ್ದ ವಿರೋಧ ಕೊನೆಗೊಂಡಿತು. ಸಿ.ವಿ.ರಾಮನ್‌ರಂತಹ ವಿಜ್ಞಾನಿಗಳ ಮುಖಾಮುಖಿ ಆಧುನಿಕ ವಿಜ್ಞಾನದ ವಿಧಾನಗಳ ಹಾಗೂ ಪ್ರಕ್ರಿಯೆಗಳ ಕುರಿತು ಅವರಲ್ಲಿ ಆರೋಗ್ಯಕರವಾದ ಒಂದು ನಿಲುವನ್ನು ಪ್ರೋತ್ಸಾಹಿಸಿತು. ಗಾಂಧಿ ತಮ್ಮ ಆತ್ಮಕಥೆಗೆ ‘‘ಸತ್ಯದೊಂದಿಗೆ ನನ್ನ ಪ್ರಯೋಗಗಳ ಕಥೆ’’ ಎಂಬ ಶೀರ್ಷಿಕೆ ನೀಡಿದ್ದು ಖಂಡಿತವಾಗಿಯೂ ಒಂದು ಆಕಸ್ಮಿಕವಲ್ಲ.

 ಗಾಂಧಿ ತಾನು ಆಶ್ರಮದಲ್ಲಿದ್ದಾಗ, ಟ್ರೈನ್‌ನಲ್ಲಿದ್ದಾಗ, ತಾನು ತನ್ನ ಪಾಡಿಗೆ ಏಕಾಂತದಲ್ಲಿದ್ದಾಗ ಹಾಗೂ ಇತರರ ಜತೆ ಸಂಭಾಷಿಸುತ್ತಿದ್ದಾಗ ಸತ್ಯದೊಂದಿಗೆ ಪ್ರಯೋಗ ನಡೆಸುತ್ತಲೇ ಇದ್ದರು. ಗಾಂಧಿಯವರಲ್ಲಿದ್ದ ಆತ್ಮ ನಿರೀಕ್ಷಣೆ, ಆತ್ಮವಿಮರ್ಶೆ ಅವರ ಸಹಗುಜರಾತಿ (ಫೆಲೋ ಗುಜರಾತಿ) ಮುಹಮ್ಮದ್ ಅಲಿ ಜಿನ್ನಾರಲ್ಲಿರಲಿಲ್ಲವೆಂದು 1942ರಲ್ಲಿ ಬರೆಯುತ್ತಾ ಲೂಯಿಸ್ ಫಿಶರ್‌ಗೆ ಅನ್ನಿಸಿತ್ತು. ಈಗ 2021ರಲ್ಲಿ ಬರೆಯುತ್ತಾ ಇದು ಇಂದು ಬದುಕಿರುವ ಅತ್ಯಂತ ಬಲಿಷ್ಠ ಭಾರತೀಯನಾಗಿರುವ ಗಾಂಧಿಯವರ ಸಹಗುಜರಾತಿ ನರೇಂದ್ರ ಮೋದಿಯವರಲ್ಲೂ ಇಲ್ಲವೆಂದು ನಾನು ಹೇಳಬಹುದಾಗಿದೆ.

ಗಾಂಧಿಯವರನ್ನು ಸಂದರ್ಶಿಸುವುದರಲ್ಲಿರುವ ‘ಸಂತಸದ ಒಂದು ಅಂಶ’ವೆಂದರೆ ‘‘ಅವರು ನಿಜವಾಗಿ ತನ್ನ ಮನಸ್ಸನ್ನು ತೆರೆದು ಆ ಯಂತ್ರ ನಿಜವಾಗಿಯೂ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನೋಡಲು ಸಂದರ್ಶಕನಿಗೆ ಅವಕಾಶ ಮಾಡಿಕೊಡುತ್ತಾರೆ’’ ಎಂದು 1942ರಲ್ಲಿ ತನ್ನ ಚಿಕ್ಕ ಪುಸ್ತಕದಲ್ಲಿ ಲೂಯಿಸ್ ಫಿಶರ್ ಬರೆಯುತ್ತಾರೆ. ಈ ನಿಟ್ಟಿನಲ್ಲಿ ಗಾಂಧಿ ಇತರ ಭಾರತೀಯ ರಾಜಕಾರಣಿಗಳಿಗಿಂತ ಭಿನ್ನರಾಗಿದ್ದರು. ಫಿಶರ್ ಓರ್ವ ಪತ್ರಕರ್ತನಾಗಿ ಬರೆಯುತ್ತಿದ್ದರು. ಅದೇನಿದ್ದರೂ ದಾಖಲೆಗಳನ್ನು ಅಧ್ಯಯನ ಮಾಡುವ ಇತಿಹಾಸಕಾರನಿಗೆ ಗಾಂಧಿಯನ್ನು ಅಧ್ಯಯನ ಮಾಡುವುದರಿಂದ ದೊರಕುವ ಅತ್ಯಂತ ಸಂತೋಷಗಳಲ್ಲಿ ಇದೂ ಒಂದು. ಗಾಂಧಿಯವರ ಮಾತುಗಳಲ್ಲಿ ಹಾಗೂ ಪ್ರಕ್ರಿಯೆಗಳಲ್ಲಿ ಪ್ರಚಾರ ಇರಲಿಲ್ಲ, ಕುತಂತ್ರವಿರಲಿಲ್ಲ, ಜಾರಿಕೆ ಇರಲಿಲ್ಲ. ತನ್ನನ್ನು ತಾನೇ ಹೊಗಳಿಕೊಳ್ಳುವ ಯಾವುದೇ ಪ್ರಯತ್ನವಿರಲಿಲ್ಲ. ಗಾಂಧಿಯವರ ಕೃತಿಗಳನ್ನು ಓದುವುದು, ಅವರ ಬಗ್ಗೆ ಸಂಶೋಧನೆ ನಡೆಸುವುದು ಎಂದರೆ ಓರ್ವ ಮಾನವ ಜೀವಿಯ ಮುಖಾಮುಖಿಯಾಗುವುದು. ಗಾಂಧಿ ಅನುಯಾಯಿಗಳು ಗಾಂಧಿ ಪರಿಶುದ್ಧ ಪರಿಪೂರ್ಣ ಓರ್ವ ಮಹಾತ್ಮ ಎಂದು ಹೇಳುತ್ತಿದ್ದರು. ಆದರೆ ಗಾಂಧಿಗೆ ತಾನು ಕೂಡ ತಪ್ಪುಮಾಡಬಲ್ಲವ, ದೋಷರಹಿತನಲ್ಲದವ ಎಂದು ತಿಳಿದಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)