ವಿಶ್ವಸಂಸ್ಥೆಯ ಫೆಲೆಸ್ತೀನ್ ನಿರಾಶ್ರಿತರ ಘಟಕಕ್ಕೆ ಯುಎಇ ದೇಣಿಗೆಯಲ್ಲಿ ತೀವ್ರ ಕುಸಿತ
ಅದೇ ವರ್ಷ ಇಸ್ರೇಲ್ ನೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡಿದ್ದ ಯುಎಇ
ಅಬುಧಾಬಿ (ಯುಎಇ), ಫೆ. 6: ವಿಶ್ವಸಂಸ್ಥೆಯ ಫೆಲೆಸ್ತೀನ್ ನಿರಾಶ್ರಿತರಿಗಾಗಿನ ಘಟಕವಾಗಿರುವ ಯುಎನ್‌ಆರ್‌ಡಬ್ಲುಎಗೆ ನೀಡುವ ದೇಣಿಗೆಯಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) 2020ರಲ್ಲಿ ತೀವ್ರ ಕಡಿತ ಮಾಡಿದೆ.
ಇದೇ ವರ್ಷ ಯುಎಇಯು ಇಸ್ರೇಲ್‌ನೊಂದಿಗೆ ಶಾಂತಿ ಒಪ್ಪಂದವನ್ನು ಮಾಡಿಕೊಂಡಿದೆ.
ಯುಎನ್‌ಆರ್‌ಡಬ್ಲುಎ ಮಧ್ಯಪ್ರಾಚ್ಯದಾದ್ಯಂತ ಇರುವ ಸುಮಾರು 57 ಲಕ್ಷ ನೋಂದಾಯಿತ ಫೆಲೆಸ್ತೀನ್ ನಿರಾಶ್ರಿತರಿಗೆ ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಇತರ ಮಹತ್ವದ ಸೇವೆಗಳನ್ನು ನೀಡುತ್ತಿದೆ. ಈ ಪೈಕಿ ಹೆಚ್ಚಿನವರು 1948ರ ಯುದ್ಧದಲ್ಲಿ ಇಸ್ರೇಲ್ ದೇಶದ ರಚನೆಯಾದಾಗ ಆ ದೇಶದಿಂದ ಹೊರದಬ್ಬಲ್ಪಟ್ಟ ಸುಮಾರು ಏಳು ಲಕ್ಷ ಫೆಲೆಸ್ತೀನೀಯರ ವಂಶಸ್ಥರಾಗಿದ್ದಾರೆ.
ಯುಎಇಯು 2018ರಲ್ಲಿ ಯುಎನ್‌ಆರ್‌ಡಬ್ಲುಎಗೆ 51.8 ಮಿಲಿಯ ಡಾಲರ್ (ಸುಮಾರು 377 ಕೋಟಿ ರೂಪಾಯಿ) ದೇಣಿಗೆ ನೀಡಿತ್ತು. 2019ರಲ್ಲಿಯೂ ಅಷ್ಟೇ ಮೊತ್ತವನ್ನು ನೀಡಿತ್ತು. ಆದರೆ 2020ರಲ್ಲಿ ಅದು ಈ ಸಂಸ್ಥೆಗೆ ಕೇವಲ ಒಂದು ಮಿಲಿಯ ಡಾಲರ್ (ಸುಮಾರು 7.28 ಕೋಟಿ ರೂಪಾಯಿ) ನೀಡಿದೆ ಎಂದು ಯುಎನ್‌ಆರ್‌ಡಬ್ಲುಎಯ ವಕ್ತಾರ ಸಮಿ ಮಶಾಶ ಶುಕ್ರವಾರ ತಿಳಿಸಿದರು.