varthabharthi


ಕಲೆ - ಸಾಹಿತ್ಯ

ನಾಟಕ ವಿಮರ್ಶೆ

‘ಅಲೈದೇವ್ರ’: ಸೌಹಾದರ್ದ ಬೀಜ ಬಿತ್ತುವ ಹಾಡುಹಬ್ಬ

ವಾರ್ತಾ ಭಾರತಿ : 7 Feb, 2021
ಚಾಂದ್ ಪಾಷ ಎನ್. ಎಸ್., ಬೆಂಗಳೂರು

ಒಂದೇ ತೋಟದ ಹಲವು ಹೂಗಳಂತೆ, ಒಂದೇ ದೇಶದ ಹಲವು ಸಂಸ್ಕೃತಿ, ಆಚರಣೆಗಳು ಬದುಕಿನ ಸೌಂದರ್ಯದ ಮೆರುಗು ನೀಡಬಲ್ಲವು. ಅಂತಹ ಮೆರುಗಿನ ಮುಕುಟ ಎನಿಸಿಕೊಂಡ ಭಾರತದಲ್ಲಿ ‘ಅಲೈದೇವ್ರ’ ಹಬ್ಬವೂ ಕೂಡ ಮನುಷ್ಯ ಪ್ರೇಮದ ಸಹಜ ಸೌಂದರ್ಯದ ಸ್ವರೂಪ ಎಂದರೆ ಅತಿಶಯೋಕ್ತಿಯಾಗಲಾರದು. ಧರ್ಮಗಳೆಲ್ಲ ದಂಧೆಯಾಗಿ, ದವಾಖಾನೆಯ ರೋಗಿಯಾಗಿ, ಕಸಾಯಿಖಾನೆಯ ಕಟುಕನಾಗಿರುವ ಇಂಥ ದುರಿತ ಕಾಲದಲ್ಲಿ ಧಾರ್ಮಿಕ ಆಚರಣೆಯ ಮುಖೇನವೇ ಮಾನವೀಯತೆ, ಪ್ರೇಮ, ಸಹಬಾಳ್ವೆಯಂತಹ ಮೌಲಿಕ ಅಂಶಗಳನ್ನು ಬಿತ್ತುವುದಕ್ಕೆ ನಿಜಕ್ಕೂ ಭಂಡ ಧೈರ್ಯವೇನು ಬೇಕಿಲ್ಲ, ಹೃದಯದಲ್ಲಿ ಒಂದಿಷ್ಟು ಪ್ರೀತಿ ಇದ್ದರೆ ಸಾಕು. ಹನಮಂತ ಹಾಲಿಗೇರಿ ಅವರು ಇಲ್ಲಿ ಪ್ರೀತಿ ಬಿತ್ತುವ ಕೆಲಸವನ್ನೇ ಮಾಡಿದ್ದಾರೆ. ಭಿನ್ನ ಧರ್ಮೀಯರ ಪ್ರೇಮಕ್ಕೆ ‘ಜಿಹಾದ್’ ಎಂದು ಹೆಸರಿಡುವವರ ಎದುರು ‘ರಫೀಕ್ ಮತ್ತು ಶಶಿಕಲಾ’ರ ಒಲುಮೆ ಮಸೀದಿಯ ಬಳ್ಳಿಗೆ ಮಂದಿರದ ಹೂ ಬಿಟ್ಟಷ್ಟು ಸೊಗಸಿದೆ. ದೇಶ ಪ್ರೇಮದ ಹೆಸರಲ್ಲಿ ಗಡಿಗಳ ಎಳೆದು ಬದುಕುವವರ ನಡುವೆ ಪಕ್ಕ್ಯಾನ ಮುಗ್ಧ ಪ್ರಶ್ನೆಗೆ ಗಡಿಗಳೇ ಗಡಿಪಾರಾಗುತ್ತವೆ. ಅಲೈದೇವ್ರ ನಮ್ಮ ದೇವರಲ್ಲ ಎನ್ನುವ ಮತ್ತು ಅಲೈದೇವ್ರ ಕೂರಿಸಿ ಕುಣಿಯುವುದು ನಮ್ಮ ಧರ್ಮವಲ್ಲ ಎನ್ನುವ ಧರ್ಮಾಧಿಕಾರಿಗಳಿಗೆ ‘‘ಹೆಂಗಿದ್ರು ಊದಿನಕಡ್ಡಿ ಹಚ್ಚಿರತೀವಿ, ಎಲ್ಲಾ ದೇವರಿಗೂ ಬೆಳಗಿ ಬಿಡೋಣ ಬಿಡು’’ ಎನ್ನುವ ಮೋನಪ್ಪಜ್ಜನ ವಿಶ್ವಮಾನವತ್ವದ ಮನೋ ಸಹಜ ಮಾತು ಈ ನೆಲ ದೆದೆಯ ಪಿಸು ನುಡಿಯಂತೆಯೇ ಇದೆ.

ನಾಟಕಕಾರ ಹಾಲಿಗೇರಿ ಅವರು ದೈವದ ಮುಖೇನವೇ ಧರ್ಮದ ನಿರಾಕರಣೆ ಮಾಡುತ್ತಿರುವುದು ‘ಅಲೈದೇವ್ರ’ ನಾಟಕದ ವಿಶೇಷಗಳಲ್ಲಿ ಒಂದು! ಅವರು ಜನಸಾಮಾನ್ಯರ ನೋವಿಗೆ ಸ್ಪಂದಿಸುವ, ಬಡವರು ಬವಣೆಯಲ್ಲೂ ಖುಷಿಯಲ್ಲಿ ಕುಣಿಸಬಲ್ಲ ಸಾಮಾನ್ಯ ದೇವರು ಬೇಕೆಂದಿದ್ದಾರೆ ಹೊರತು, ಚಂದಾಪಟ್ಟಿ ಎತ್ತಿ ಗುಡಿಗುಂಡಾರ ಕಟ್ಟಿಸಿ, ಬಂಗಾರದ ಕಿರೀಟ ಇಡಿ ಎನ್ನುವ ದಲ್ಲಾಳಿ ದೇವರನ್ನಲ್ಲ ಎಂಬುದನ್ನು ಗಮನಿಸಿಬೇಕು. ಈ ನಾಟಕದ ಅಲೈದೇವ್ರ ಯಾವುದೇ ಧರ್ಮಕ್ಕೂ ದಕ್ಕದ ಮನೋಧಾರ್ಮಿಕ ದೈವತ್ವ. ಕುವೆಂಪು ಹೇಳಿದ ಜಗದ ಜಲಗಾರ ನಂತೆ ಅಲೈದೇವ್ರ ಕೂಡ ಧರ್ಮಾಧರ್ಮಗಳ ಕಸ ಗುಡಿಸುವ ಜಲಗಾರನಂತೆ ಇದ್ದಾನೆ!

ಇಲ್ಲಿ ನಾಟಕಕಾರರಿಗೆ ಕೇವಲ ಮುಹರ್ರಂ ಹಬ್ಬದ ಆಚರಣೆಯ ಕುರಿತು ಹೇಳುವ ಉದ್ದೇಶವಿದ್ದಂತೆ ಕಾಣುವುದಿಲ್ಲ; ಬದಲಿಗೆ ನಮ್ಮ ಪುಢಾರಿಗಳು ಧರ್ಮ, ಧರ್ಮಗಳ ನಡುವೆ ಕಟ್ಟಿದ ಗೋಡೆ ಕೆಡವಲು, ಜಿಹಾದ್‌ನ ಹೆಸರಿನಲ್ಲಿ ಕೊಲ್ಲಲ್ಪಟ್ಟ ಪ್ರೇಮಿಗಳ ಪಾದಗಳಿಗೆ ರೆಕ್ಕೆ ಬಿಗಿಯುವುದು, ಧರ್ಮದ ದಂಗೆಯ ದಳ್ಳುರಿಯನ್ನೂ ಧಾರ್ಮಿಕ ಆಚರಣೆಯ ಮುಖೇನ ಜನಪದೀಯ ಸಂಸ್ಕೃತಿ ಮತ್ತು ಜನಜೀವನದ ತಲ್ಲಣ ಚಿತ್ರಿಸುವ ರೀತಿ, ಮುಕ್ಕೋಟಿ ದೇವತೆಯ ಹೊತ್ತವಳೆಂಬ ಆರೋಪವಿರುವ ಪ್ರಾಣಿಯ ಹೆಸರಿನ ರಾಜಕಾರಣ ಮತ್ತು ಆಹಾರ ಸಂಸ್ಕೃತಿ. ಓದು ಕಲಿಕೆಯ ನೆಪದಲ್ಲಿ ಯುವ ಜನರ ಮನಸ್ಸಿನಲ್ಲಿ ಬಿತ್ತಿದ ದ್ವೇಷಗಳ ಮೊಳೆತ ಮೊಳಕೆಯ ಮೊನಚು...... ಹೀಗೆ ಪ್ರಸ್ತುತ ಭಾರತದ ವಿರಾಟದರ್ಶನ ಮಾಡಿಸುತ್ತ ಹೋಗುತ್ತದೆ ಈ ನಾಟಕ. ಈ ನಾಟಕದ ಜೀವಾಳವೆನಿಸಿದ ಅಲೈದೇವ್ರ ಕುಣಿತ ಅಥವಾ ಹೆಜ್ಜೆ ಕುಣಿತ ಜಾನಪದ ಕಲೆಗಳಲ್ಲಿ ಒಂದು. ‘‘ಇಂಥ ಹಬ್ಬ ನಿಂತು ಹೋದರೆ ಒಂದು ಸಂಸ್ಕೃತಿ ನಿಂತ ಹಾಗೆ, ಒಂದು ಆಚರಣೆ ನಿಂತ ಹಾಗೆ, ನಮ್ಮ ಬದುಕೇ ನಿಂತ ಹಾಗೆ’’ ಎನ್ನುವ ಮೋನಪ್ಪಜ್ಜನ ಮಾತಿನಲ್ಲಿ ನಮ್ಮ ಜನಪದೀಯ ಆಚರಣೆಯಲ್ಲಿ ಹುದುಗಿರುವ ಬದುಕನ್ನು ತೆರೆದಿಡುವ ಪ್ರಯತ್ನವನ್ನು ಈ ನಾಟಕ ಮಾಡಲಿದೆ. ಇದರ ಜೊತೆ ನಾಟಕದಲ್ಲಿ ಬರುವ ‘ರಿವಾಯತ್ ಪದಗಳು’ ಅಂದರೆ ಮುಹರ್ರಂನ ಹಾಡುಗಳು ಮೌಖಿಕ ಪರಂಪರೆಯ ಮುಂದುವರಿದ ಸಂಸ್ಕೃತಿಯ ಭಾಗವೂ ಹೌದು. ಇವು ಭಾವೈಕ್ಯ ಮತ್ತು ಮನುಷ್ಯ ಪ್ರೇಮವನ್ನು ಕೇಂದ್ರವನ್ನಾಗಿರಿಸಿಕೊಂಡು ರೂಪಗೊಂಡ ಹಾಡುಹಬ್ಬ.

ಉತ್ತರ ಕರ್ನಾಟಕದ ಆಡು ಭಾಷೆ ಮಾತಾಡುವ ಪಾತ್ರ ತನಗರಿವಿಲ್ಲದೆಯೇ ನಗರದ ಶಿಷ್ಟ ಭಾಷೆಯತ್ತ ಹೊರಳಿ ಬಿಡುತ್ತದೆ. ಅಲ್ಲದೆ ಅಲೈದೇವ್ರ ಕುಣಿತವೂ ಸ್ವಲ್ಪಮಟ್ಟಿಗೆ ಮಾತ್ರ ಖುಷಿ ಕೊಟ್ಟಿತು. ಏಕೆಂದರೆ ಕರ್ನಾಟಕದ ಹಲವು ಭಾಗಗಳಲ್ಲಿ ಹಲವು ರೀತಿಯ ಹೆಜ್ಜೆ ಕುಣಿತಗಳಿದ್ದು, ಈ ನಾಟಕದಲ್ಲಿ ಇನ್ನೂ ಒಂದಷ್ಟು ನುರಿತ ತರಬೇತಿಯನ್ನು ಕೊಡಿಸಬೇಕಿತ್ತು. ಇಂತಹ ಸಣ್ಣಪುಟ್ಟ ಲೋಪಗಳ ನಡುವೆಯೂ ಈ ನಾಟಕ ನಮ್ಮ ದೇಶದ ಮೂಲೆ ಮೂಲೆಯಲ್ಲಿ ನಡೆದ, ನಡೆಯುತ್ತಿರುವ ಮತ್ತು ನಡೆಯಬಹುದಾದ ಘಟನೆಗಳ ವರ್ಣ ಚಿತ್ರವನ್ನು ನಮ್ಮೆದುರಿಗೆ ಇರಿಸುತ್ತದೆ. ಒಟ್ಟಿಗೆ ಬಾಳುವವರ ನಡುವೆ ಇಟ್ಟಿಗೆ ಗೋಡೆ ಕಟ್ಟುವ ಧರ್ಮಾಂಧರ ಕುತಂತ್ರಗಳು ನಮಗೆ ಕಾಣಿಸದೆ ಇರದು. ಈ ಧರ್ಮದ ದಲ್ಲಾಳಿಗಳ ಮಾತಿಗೆ ರೊಚ್ಚಿಗೇಳುವ ಪಾತ್ರಗಳಿಗೆ ನಾಟಕಕಾರ ಸಶಕ್ತವಾದ ಸಂವೇದನೆ ಮತ್ತು ಶಕ್ತಿಯನ್ನು ಕೊಡುವಲ್ಲಿಯೂ ಯಶಸ್ವಿಯಾಗಿದ್ದಾರೆ. ತಲೆತಲಾಂತರದಿಂದಲೂ ಈ ನೆಲದಲ್ಲೇ ಬದುಕಿ ಬಾಳಿದ ಸಮುದಾಯಕ್ಕೆ ಪಕ್ಕದ ದೇಶಕ್ಕೆ ಪಾರ್ಸಲ್ ಮಾಡಲು ಟಿಕೆಟ್ ಬುಕ್ಕಿಂಗ್ ಮಾಡುವ ಟ್ರಾವೆಲ್ ಏಜೆಂಟ್‌ನಂತಹ ಸ್ವಯಂ ಘೋಷಿತ ಪುಡಾರಿ ದೇಶಭಕ್ತರಿಗೆ, ‘ಅಲೈದೇವ್ರ’ ಸವಾಲಾಗಿದೆ ಎಂದರೆ ಈ ನಾಟಕ ಗೆದ್ದಿದೆ ಎಂದೇ ಅರ್ಥ.

‘‘ನಾವೆಲ್ಲ ಒಂದಾಗಿ ಕುಣಿಯೋದನ್ನೆ ನೀವೆಲ್ಲ ದಡ್ಡತನ ಅನ್ನೋದಾದ್ರೆ ನಮ್ಮ ದಡ್ಡತನ ನಮಗ ಇರಲಿ, ನಿಮ್ಮ ಶಾಣ್ಯಾತನ ನಿಮಗ ಇರಲಿ’’ ಅಲೈದೇವ್ರ ನಾಟಕದ ಪಾತ್ರದಾರಿ ಮೋನಪ್ಪಜ್ಜ ಹಬ್ಬ ತಡೆಯಲು ಬಂದ ಮೂಲಭೂತವಾದಿಗಳಿಗೆ ಹೇಳುವ ಮಾತಿದು. ಈ ಮಾತು ವರ್ತಮಾನದ ಹುಣ್ಣಿಗೆ ಔಷಧಿಯಂಥದ್ದು. ಈ ನಾಟಕ ಕೂಡಿ ಬಾಳೋ ಬದುಕಿನ ದರ್ಶನವನ್ನು ಎತ್ತಿಹಿಡಿಯುವಂಥದ್ದು. ವಿಪರ್ಯಾಸವೆಂದರೆ ಬೆಂಗಳೂರಿನ ಬಸವೇಶ್ವರನಗರದ ಪ್ರಭಾತ್ ಕೆಇಬಿ ರಂಗಮಂದಿರದಲ್ಲಿ ನಡೆದ ಈ ನಾಟಕ ಪ್ರದರ್ಶನಕ್ಕೆ ಕೆಲವರು ಬೆದರಿಕೆ ಕರೆ ಮಾಡಿ ಅಡ್ಡಿಪಡಿಸಲು ಯತ್ನಿಸಿದ್ದರು. ಆಕಸ್ಮಾತ್ ಅವರೇನಾದರೂ ನಾಟಕ ನೋಡಲು ಬಂದಿದ್ದರೆ ಪ್ರಾಯಶ್ಚಿತದಿಂದ ಅವರ ಕಣ್ಣುಗಳು ಖಂಡಿತವಾಗಿಯೂ ತೇವಗೊಳ್ಳುತ್ತಿದ್ದವು. ಇಂತಹ ಗಂಭೀರವಾದ ವಿಚಾರವನ್ನು ಸರಳವಾಗಿ ಹೇಳುವ ‘ಅಲೈದೇವ್ರ’ ನಾಟಕವನ್ನು ಬರೆದ ಹಾಲಿಗೇರಿಯವರಿಗೂ, ನಿರ್ದೇಶಕ ಸಿದ್ದರಾಮ ಕೊಪ್ಪರರಿಗೂ ಮತ್ತು ವಿಶ್ವರಂಗ ತಂಡದ ಸಂಚಾಲಕ ಮತ್ತು ತಂಡದ ಎಲ್ಲ ಕಲಾವಿದರಿಗೂ ಅಭಿನಂದಿಸಲೇಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)