ರಾಜಕೀಯ ಅಸ್ತ್ರವಾದ ಮೀಸಲಾತಿ
ಬಾಬಾಸಾಹೇಬರು ಮಹಾತ್ಮಾ ಗಾಂಧೀಜಿಯವರೊಂದಿಗೆ ಜಗಳಾಡಿ ಮೀಸಲು ಎಂಬ ವ್ಯವಸ್ಥೆಯನ್ನು ತಂದದ್ದು ವಂಚಿತ ಸಮುದಾಯಗಳಿಗಾಗಿ. ಹಾಗೆಂದು ಮುಂದುವರಿದ ಸಮುದಾಯಗಳಲ್ಲಿ ಬಡವರಿಲ್ಲವೆಂದಲ್ಲ. ಅವರಿಗಾಗಿ ಅಂದರೆ ಆರ್ಥಿಕವಾಗಿ ಹಿಂದುಳಿದವರಿಗಾಗಿಯೂ ಮೀಸಲು ವ್ಯವಸ್ಥೆ ಇದೆ. ಆದರೆ ಅಸ್ಪಶ್ಯರ ಹಕ್ಕಿನ ಮೀಸಲಿನ ತಟ್ಟೆಗೆ ಉಳಿದವರು ಕೈ ಹಾಕುವುದು ಸರಿಯಲ್ಲ.
ಸಮಾಜದ ಅವಕಾಶ ವಂಚಿತ ಸಮುದಾಯಗಳ ಉನ್ನತಿಗಾಗಿ ಅಸ್ತಿತ್ವಕ್ಕೆ ಬಂದ ಮೀಸಲು ವ್ಯವಸ್ಥೆ ರಾಜಕೀಯ ಅಸ್ತ್ರವಾಗಿ ತುಂಬ ವರ್ಷಗಳೇ ಆದವು.ಸಾಮಾಜಿಕ ಅಸಮಾನತೆಯ ನಿವಾರಣೆಗಾಗಿ ಜಾರಿಗೆ ಬಂದ ಮೀಸಲಾತಿ ಈಗ ಇನ್ನಷ್ಟು ರಾಜಕೀಯ ಬಣ್ಣ ಪಡೆದುಕೊಂಡಿದೆ. ಮುಂಚೆ ಈ ಅಸ್ತ್ರ ಹಿಡಿದುಕೊಂಡು ರಾಜಕಾರಣಿಗಳು ಬೀದಿಗೆ ಬರುತ್ತಿದ್ದರು. ಈಗ ಮಠಾಧೀಶರು ಮುಂಚೂಣಿಗೆ ಬಂದಿದ್ದಾರೆ.ಮೇಲ್ನೋಟಕ್ಕೆ ಇದು ಮೀಸಲು ಬೇಡಿಕೆಯ ಹೋರಾಟವಾದರೂ ಒಳಸುಳಿಗಳಲ್ಲಿ ರಾಜಕೀಯ ಬೆರೆತಿರುವ ಸಂದೇಹಕ್ಕೆ ಕಾರಣವಾಗಿದೆ.
ನಿಜವಾಗಿಯೂ ಮೀಸಲಾತಿಯ ಅಗತ್ಯವಿರುವ ಅನೇಕ ಸಮುದಾಯಗಳು ಬಾಯಿ ಮುಚ್ಚಿ ಕೊಂಡು ಕುಳಿತಿವೆ. ಅತ್ಯಂತ ಹಿಂದುಳಿದ ಮುಸ್ಲಿಂ ಸಮುದಾಯದ ಪಿಂಜಾರ ಮುಂತಾದ ಪಂಗಡಗಳಿಗೆ ಮೀಸಲು ಇನ್ನೂ ಕನಸಿನ ಗಂಟಾಗಿದೆ. ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ವರದಿ ಬಂದು ವರ್ಷಗಳೇ ಗತಿಸಿದವು. ಅದರ ಜಾರಿಯ ಬಗ್ಗೆ ಯಾವ ಸರಕಾರಕ್ಕೂ ಆಸಕ್ತಿಯಿಲ್ಲ. ಅತ್ಯಂತ ಅಭದ್ರ ಸ್ಥಿತಿಯಲ್ಲಿರುವ ಮುಸ್ಲಿಂ ಸಮುದಾಯ ಸಾಚಾರ್ ವರದಿಯನ್ನು ಗಂಟಲು ದೊಡ್ಡದು ಮಾಡಿ ಕೇಳಿಕೊಳ್ಳುವ ಸ್ಥಿತಿಯಲ್ಲೂ ಇಲ್ಲ. ಧ್ವನಿಯಿಲ್ಲದವರನ್ನು ತುಳಿಯುವ ವ್ಯವಸ್ಥೆಯಲ್ಲಿ ಸಾಮಾಜಿಕ ನ್ಯಾಯ ಎಂಬುದು ಅರ್ಥ ಕಳೆದುಕೊಂಡಿದೆ.
ಈ ನಡುವೆ ಕರ್ನಾಟಕದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಸ್ವಾಮಿಗಳು ತಮ್ಮ ಸಮುದಾಯಕ್ಕೆ 2 ಎ ಮೀಸಲಾತಿ ಬೇಕೆಂದು ಪಾದಯಾತ್ರೆ ನಡೆಸಿದ್ದಾರೆ. ಇನ್ನೊಂದೆಡೆ ಹಿಂದುಳಿದ ಕುರುಬ ಸಮುದಾಯದವರು ತಮ್ಮ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಸಮಾವೇಶ ನಡೆಸಿದ್ದಾರೆ. ಅಸಮಾನತೆ ತುಂಬಿರುವ ಈ ಸಮಾಜದಲ್ಲಿ ಯಾವುದೇ ಸಮುದಾಯ ನ್ಯಾಯಕ್ಕಾಗಿ ಧ್ವನಿ ಎತ್ತುವುದು ತಪ್ಪಲ್ಲ.
ಆದರೆ ಇವೆರಡೂ ಮೀಸಲಾತಿ ಬೇಡಿಕೆಯ ಹಿಂದೆ ರಾಜಕೀಯ ಹುನ್ನಾರಗಳಿವೆ ಎಂಬ ಬಗ್ಗೆ ಪರ ವಿರೋಧ ಹೇಳಿಕೆಗಳು ಬರುತ್ತಿವೆ. ಪಂಚಮಸಾಲಿ ಮೀಸಲಾತಿಯ ಬೇಡಿಕೆಯ ಬಿರುಗಾಳಿಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆ ತರಗೆಲೆಯಂತೆ ಹಾರಿ ಹೋಗಿ ಕಣ್ಮರೆಯಾಗಿದೆ. ಪ್ರತ್ಯೇಕ ಧರ್ಮದ ಬೇಡಿಕೆ ಈಗ ಧ್ವನಿ ಕಳೆದುಕೊಂಡಿರುವುದರಿಂದ ಭಾರತೀಯರನ್ನು ಹಿಂದೂ-ಮುಸ್ಲಿಂ ಎಂದು ವಿಭಜಿಸಿ ಧ್ರುವೀಕರಣ ಮಾಡಿ ತಮ್ಮ ಬಹುವರ್ಷಗಳ ಕಾರ್ಯಸೂಚಿಯ ಜಾರಿಗಾಗಿ ಕಾತರಿಸುವವರಿಗೆ ಹಾಲು ಕುಡಿದಷ್ಟು ಸಂತಸವಾಗಿದೆ ಎಂದರೆ ಅತಿಶಯೋಕ್ತಿಯಲ್ಲ.
ಪಂಚಮಸಾಲಿ ಮೀಸಲಾತಿ ಚಳವಳಿಯ ಮುಂದೆ ಕೂಡಲ ಸಂಗಮದ ಜಯ ಮೃತ್ಯುಂಜಯ ಸ್ವಾಮಿಗಳಿದ್ದರೆ ಅದರ ಹಿಂದೆ ಬಿಜೆಪಿ ನಾಯಕ ಮುರುಗೇಶ ನಿರಾಣಿ ಇದ್ದರು. ನಿರಾಣಿಯವರು ಮಂತ್ರಿಯಾದ ನಂತರ ಬಿಜಾಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಹಿಂದೆ ಮಾತ್ರವಲ್ಲ ಮುಂದೂ ಇದ್ದಾರೆ. ಇನ್ನು ಹಿಂದುಳಿದ ಕುರುಬ ಸಮುದಾಯದ ಮೀಸಲು ಚಳವಳಿಯಲ್ಲಿ ಸಚಿವ ಕೆ.ಎಸ್. ಈಶ್ವರಪ್ಪಮುಖ್ಯ ಪಾತ್ರ ವಹಿಸಿದ್ದಾರೆ. ನಾನು ಯಾವುದೇ ಜಾತಿಗೆ ಸೇರಿಲ್ಲ ಕಟ್ಟಾ ಹಿಂದುತ್ವವಾದಿ, ಸ್ವಯಂ ಸೇವಕ ಎಂದು ಹೇಳಿಕೊಳ್ಳುತ್ತ ಬಂದ ಈಶ್ವರಪ್ಪಈಗ ಕುರುಬ ಸಮುದಾಯದ ನಾಯಕ ಎಂದು ಬಿಂಬಿಸಿಕೊಳ್ಳಲು ಹೊರಟಿದ್ದಾರೆ (ಸಿದ್ದರಾಮಯ್ಯನವರನ್ನು ಮೂಲೆ ಗುಂಪು ಮಾಡಲು ಹಾಗೆ ಬಿಂಬಿಸಿಕೊಳ್ಳುವಂತೆ ಸಂಘದ ಗುರುಗಳೇ ಈಶ್ವರಪ್ಪನವರಿಗೆ ಗುಪ್ತ ಸೂಚನೆ ನೀಡಿದ್ದಾರೆಂದು ಹೇಳಲಾಗುತ್ತಿದೆ). ಕರ್ನಾಟಕದಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರನ್ನು ಬಿಟ್ಟರೆ ಅತ್ಯಂತ ದೊಡ್ಡ ಸಮುದಾಯವಾದ ಕುರುಬ ಸಮುದಾಯಕ್ಕೆ ಈ ವರೆಗೆ ಸಿದ್ದರಾಮಯ್ಯನವರೇ ಏಕೈಕ ನಾಯಕ. ಶುಭ್ರ ಚಾರಿತ್ರ್ಯ, ಸಾಮಾಜಿಕ ನ್ಯಾಯದ ಕಾಳಜಿ, ಸಮಾಜವಾದಿ ಹಿನ್ನೆಲೆ ಮತ್ತು ರಾಜಕೀಯ ಪ್ರಬುದ್ಧತೆ ಇವೆಲ್ಲ ಕಾರಣಗಳಿಂದಾಗಿ ಹಿಂದುಳಿದ ಕುರುಬ ಸಮಾಜದ ಮುಗ್ಧ ಜನ ಸಿದ್ದರಾಮಯ್ಯ ನವರಲ್ಲಿ ತಮ್ಮ ನಾಯಕನನ್ನು ಕಂಡರು. ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸಿದರೆ ದೂರದ ಬಿಜಾಪುರ, ಚಿಕ್ಕೋಡಿ, ನಿಪ್ಪಾಣಿ ಮುಂತಾದ ಕಡೆಯ ಕುರುಬ ಬಂಧುಗಳು ಕಂಬಳಿ ಮಾರಿ ಹಣ ತಂದು ಕೊಡುತ್ತಾರೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ.
ಇಂತಹ ಸಿದ್ದರಾಮಯ್ಯನವರನ್ನು ಮೂಲೆಗುಂಪು ಮಾಡದೆ ಕರ್ನಾಟಕವನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ ಎಂದು ಲೆಕ್ಕಾಚಾರ ಹಾಕಿದ ಬಿಜೆಪಿ ನಾಯಕರು ಅದರಲ್ಲೂ ಮುಖ್ಯವಾಗಿ ಸೋಷಿಯಲ್ ಇಂಜಿನಿಯರಿಂಗ್ ಪ್ರವೀಣರಾದ ನಾಗಪುರ ಮೂಲದ ಸಂಘದ ಗುರುಗಳು ಮೀಸಲು ಹೋರಾಟದ ಹಿಂದೆ ಇದ್ದಾರೆಂಬ ಆರೋಪವನ್ನು ಕೆಲವರು ಮಾಡುತ್ತಾರೆ.ಸ್ವತಃ ಸಿದ್ದರಾಮಯ್ಯನವರೇ ಆರೆಸ್ಸೆಸ್ ಕೈವಾಡದ ಆರೋಪ ಮಾಡಿದ್ದಾರೆ. ಆದರೆ ಹಾಗೆಂದು ಕುರುಬ ಸಮುದಾಯದ ಬೇಡಿಕೆಯನ್ನು ತಳ್ಳಿ ಹಾಕಲಾಗುವುದಿಲ್ಲ. ಈ ಕುರುಬ ಸಮುದಾಯದ ಕೆಲವರು ರಾಜಕೀಯ ಸ್ಥಾನಮಾನ ಮತ್ತು ಸರಕಾರಿ ನೌಕರಿಗಳನ್ನು ಹೊಂದಿದ್ದರೂ ಉಳಿದ ಶೇಕಡಾ 80ರಷ್ಟು ಜನ ಈಗಲೂ ಕುರಿ ಕಾಯ್ದು ಜೀವನ ಮಾಡುತ್ತಾರೆ. ವರ್ಷಾನುಗಟ್ಟಲೆ ಕುರಿ ಹಿಂಡನ್ನು ಕಟ್ಟಿಕೊಂಡು ನೂರಾರು ಮೈಲಿ ಚಳಿ, ಮಳೆ, ಬಿಸಿಲೆನ್ನದೆ ಕಾಡು ಮೇಡುಗಳಲ್ಲಿ ಅಲೆಯುತ್ತಾರೆ. ಕಾರಣ ಅವರಿಗೆ ಎಸ್ಟಿ ಮೀಸಲಾತಿ ಕೊಡಲೇಬೇಕು. ಈಗ ಬಿಜೆಪಿ ನಾಯಕ ಈಶ್ವರಪ್ಪನವರೇ ಅದರ ನೇತೃತ್ವ ವಹಿಸಿಕೊಂಡಿರುವುದರಿಂದ ಚಳವಳಿಯ ಅಗತ್ಯವೂ ಇಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರಗಳಿವೆ. ಪ್ರಧಾನಿಮೋದಿ, ಸಿಎಂ ಯಡಿಯೂರಪ್ಪವಿಶೇಷವಾಗಿ ಸಂತೋಷ್‌ಜಿ, ಅಮಿತ್‌ಶಾಜಿ ಮನಸ್ಸು ಮಾಡಿದರೆ ಕ್ಷಣಾರ್ಧದಲ್ಲಿ ಕುರುಬ ಸಮುದಾಯಕ್ಕೆ ಮೀಸಲಾತಿ ಕೊಡಿಸಬಹುದು.ಇದಕ್ಕಾಗಿ ಕಾಗಿನೆಲೆ ಶ್ರೀಗಳು ಪಾದಯಾತ್ರೆಯಲ್ಲಿ ಬರಬೇಕಾಗಿರಲಿಲ್ಲ.
ಇನ್ನು ಲಿಂಗಾಯತ ಮೀಸಲಾತಿ ಬಗ್ಗೆ ಈ ಹಿಂದೆ ಮಿಲ್ಲರ್ ಆಯೋಗ, ನಾಗನಗೌಡ ಆಯೋಗ(1960), ವೆಂಕಟಸ್ವಾಮಿ ಆಯೋಗಗಳು ಸೇರಿದಂತೆ ಆರು ಸಲ ಕುಲದ ಅಧ್ಯಯನ ನಡೆದು ಲಿಂಗಾಯತ ಸಮುದಾಯವನ್ನು ಮೀಸಲು ವ್ಯವಸ್ಥೆಯಿಂದ ಹೊರಗಿಟ್ಟಿವೆ. ಆದರೆ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ರಚಿಸಲಾದ ಹಾವನೂರು ಆಯೋಗ ಮಾತ್ರ ಲಿಂಗಾಯತ ಸಮುದಾಯದಲ್ಲೂ ಸಾಮಾಜಿಕವಾಗಿ ಹಿಂದುಳಿದವರಿದ್ದಾರೆಂದು ಗುರುತಿಸಿ ಆ ಸಮುದಾಯದ ಕೆಲ ಕಾಯಕಜೀವಿ ಜನ ವಿಭಾಗಗಳಿಗೆ ಮೀಸಲು ವ್ಯವಸ್ಥೆ ನೀಡಲಾಯಿತು.ಆಗಲೂ ಲಿಂಗಾಯತ ಸಮುದಾಯದ ಪಂಚಮಸಾಲಿ ಮತ್ತು ಬಣಜಿಗ ಪಂಗಡಗಳು ಮೀಸಲು ವ್ಯವಸ್ಥೆಯಿಂದ ಹೊರಗಿಡಲ್ಪಟ್ಟವು. ಆಗ ಇದು ವೀರಶೈವರನ್ನು ಒಡೆಯುವ ದೇವರಾಜ ಅರಸು ಮಸಲತ್ತು ಎಂದು ಭೀಮಣ್ಣ ಖಂಡ್ರೆ ಮುಂತಾದ ಕಾಂಗ್ರೆಸ್ ರಾಜಕಾರಣಿಗಳೇ ಆಕ್ಷೇಪಿಸಿದ್ದರು.
ಲಿಂಗಾಯತ ಪಂಚಮಸಾಲಿ ಪಂಗಡಕ್ಕೆ ಮೀಸಲು ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ಯಡಿಯೂರಪ್ಪಸೇರಿದಂತೆ ಬಿಜೆಪಿ ನಾಯಕರೇ ಹಿಂದೆ ನೀಡಿದ್ದರು, ಅದನ್ನು ಜಾರಿಗೆ ತನ್ನಿ ಎಂಬುದು ಈಗ ಕೂಡಲ ಸಂಗಮ ಸ್ವಾಮಿಗಳ ಮತ್ತು ಹರಿಹರದ ಪಂಚಮಸಾಲಿ ಪೀಠದ ಗುರುಗಳ ಬೇಡಿಕೆ. ಈಗ ಅದು ಬರೀ ಬೇಡಿಕೆಯಾಗಿ ಉಳಿದಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರ ಪದಚ್ಯುತಿಯ ಬೆದರಿಕೆಯನ್ನು ಸ್ವಾಮಿಗಳು ಹಾಕುತ್ತಿದ್ದಾರೆ. ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮಿಗಳು ನನಗೆ ಗೊತ್ತು.ಅವರು ದಾವಣಗೆರೆಯವರು. ಪೂರ್ವಾಶ್ರಮದಲ್ಲಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆಯಾದ ಎ.ಐ.ಎಸ್.ಎಫ್. ಪದಾಧಿಕಾರಿಯಾಗಿದ್ದರು.ಕೋಮುವಾದ ವಿರೋಧಿ ಚಳವಳಿಯಲ್ಲೂ ನಮ್ಮ ಜೊತೆಗೆ ಅನೇಕ ಸಲ ಪಾಲ್ಗೊಂಡಿದ್ದಾರೆ. ಇಂತಹ ಸ್ವಾಮೀಜಿ ಈಗ ಪಂಚಮಸಾಲಿ ಮೀಸಲಾತಿಗಾಗಿ ಧ್ವನಿ ಎತ್ತಿದ್ದಾರೆ ಅನ್ನುವುಕ್ಕ್ಕಿಂತ ಬಿಜೆಪಿಯ ರಾಜಕಾರಣಿಗಳು ಹಾಗೆ ಧ್ವನಿ ಎತ್ತುವಂತೆ ಮಾಡಿ ನಡುದಾರಿಯಲ್ಲಿ ಕೈ ಬಿಟ್ಟಿದ್ದಾರೆ. ಈಗ ಕಾಂಗ್ರೆಸ್ ನಾಯಕರಾದ ಕಾಶಪ್ಪನವರ, ಎಂ. ಬಿ. ಪಾಟೀಲರು ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಇವರ ಬೆದರಿಕೆಗೆ ಹೆದರಿದ ಮುಖ್ಯಮಂತ್ರಿಗಳು ಪಂಚಮಸಾಲಿ ಸಮಾಜದ 2 ಮೀಸಲು ಬೇಡಿಕೆ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ವರದಿ ನೀಡುವಂತೆ ರಾಜ್ಯ ಹಿಂದುಳಿದ ಆಯೋಗಕ್ಕೆ ಸೂಚನೆ ನೀಡಿದ್ದಾರೆ.
ವಾಸ್ತವವಾಗಿ ನವ ಉದಾರೀಕರಣದ ಆರ್ಥಿಕ ನೀತಿಯನ್ನು ನಮ್ಮ ಸರಕಾರ ಒಪ್ಪಿಕೊಂಡ ನಂತರ ಮೀಸಲಾತಿ ಎಂಬುದೇ ಪ್ರಸ್ತುತತೆ ಕಳೆದುಕೊಳ್ಳುತ್ತಿದೆ. ಲಂಗುಲಗಾಮಿಲ್ಲದ ಖಾಸಗೀಕರಣ ಸಾಮಾಜಿಕ ನ್ಯಾಯದ ಮೀಸಲು ವ್ಯವಸ್ಥೆಗೆ ಮೊದಲ ಕಂಟಕವಾಗಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರ ಸಾರ್ವಜನಿಕ ರಂಗದ ಉದ್ಯಮಗಳನ್ನು ಒಂದೊಂದಾಗಿ ಖಾಸಗೀಕರಣ ಮಾಡುತ್ತಿದೆ. ಖಾಸಗಿ ರಂಗದ ಉದ್ಯಮಗಳಲ್ಲಿ ಮೀಸಲು ವ್ಯವಸ್ಥೆ ಇಲ್ಲ. ಇನ್ನು ಸರಕಾರಿ ನೇಮಕಾತಿಗಳೂ ಸ್ಥಗಿತ ಗೊಂಡಿವೆ. ಹೊರ ಗುತ್ತಿಗೆ ನೇಮಕಗಳ ಮೇಲೆ ಸರಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಇಂಥ ಸನ್ನಿವೇಶದಲ್ಲಿ ಯಾವುದೇ ಸಮುದಾಯಕ್ಕೆ ಮೀಸಲು ನೀಡಿದರೂ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಈ ಬಗ್ಗೆ ಮೀಸಲಾತಿಗಾಗಿ ಧ್ವನಿ ಎತ್ತಿದ ಪಂಚಮಸಾಲಿ ಮತ್ತು ಕಾಗಿನೆಲೆ ಸ್ವಾಮಿಗಳು ಯೋಚಿಸಬೇಕಾಗಿದೆ.ರಾಜಕಾರಣಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಅಮಾಯಕ ಸ್ವಾಮಿಗಳನ್ನು ಬಳಸಿಕೊಳ್ಳುತ್ತಿದ್ದಾರೆಂಬ ಮಾತುಗಳೂ ಕೇಳಿ ಬರುತ್ತಿವೆ.
ಮೀಸಲು ವ್ಯವಸ್ಥೆ ಎಂಬುದು ಶತಮಾನಗಳಿಂದ ತುಳಿತಕ್ಕೊಳಗಾದ ಸಮಾಜದ ಅಸ್ಪಶ್ಯ ಸಮುದಾಯಗಳ ಬದುಕಿಗೆ ಬೆಳಕನ್ನು ತರಲು ಮಾಡಿದ ಸಾಂವಿಧಾನಿಕ ಏರ್ಪಾಟು. ಆ ಸಮುದಾಯಗಳ ಕೆಲವರು ಮಂತ್ರಿಗಳಾಗಿರಬಹುದು. ಆದರೆ ಇನ್ನೂ ಲಕ್ಷಾಂತರ ಜನ ಊರಾಚೆ ಅತ್ಯಂತ ಅಮಾನವೀಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ನಿತ್ಯವೂ ಅವಮಾನವನ್ನು ನುಂಗಿಕೊಂಡು ಓಡಾಡುತ್ತಿದ್ದಾರೆ. ದಲಿತರ ಗುಡಿಸಲು ಸುಡುವುದು, ಅವರ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡುವಂತಹ ಹೇಯ ಘಟನೆಗಳು ನಡೆಯುತ್ತಲೇ ಇವೆ. ಖೈರ್ಲಾಂಜಿಯಂತಹ ಹೃದಯ ವಿದ್ರಾವಕ ಘಟನೆಗಳು ನಡೆಯುತ್ತಲೇ ಇವೆ. ಬಾಬಾಸಾಹೇಬರು ಮಹಾತ್ಮಾ ಗಾಂಧೀಜಿಯವರೊಂದಿಗೆ ಜಗಳಾಡಿ ಮೀಸಲು ಎಂಬ ವ್ಯವಸ್ಥೆಯನ್ನು ತಂದದ್ದು ಈ ವಂಚಿತ ಸಮುದಾಯಗಳಿಗಾಗಿ. ಹಾಗೆಂದು ಮುಂದುವರಿದ ಸಮುದಾಯಗಳಲ್ಲಿ ಬಡವರಿಲ್ಲವೆಂದಲ್ಲ. ಅವರಿಗಾಗಿ ಅಂದರೆ ಆರ್ಥಿಕವಾಗಿ ಹಿಂದುಳಿದವರಿಗಾಗಿಯೂ ಮೀಸಲು ವ್ಯವಸ್ಥೆ ಇದೆ. ಆದರೆ ಅಸ್ಪಶ್ಯರ ಹಕ್ಕಿನ ಮೀಸಲಿನ ತಟ್ಟೆಗೆ ಉಳಿದವರು ಕೈ ಹಾಕುವುದು ಸರಿಯಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ ಖಾಸಗೀಕರಣದ ಹೊಡೆತಕ್ಕೆ ಸಿಕ್ಕು ಗಾಳಿ ಪಾಲಾಗುತ್ತಿರುವ ಮೀಸಲು ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಚಿಂತನೆ ನಡೆಯಬೇಕಾಗಿದೆ. ಅದಕ್ಕಾಗಿ ನಮ್ಮ ಎಲ್ಲ ಜನ ಸಮುದಾಯಗಳು ಸಾರ್ವಜನಿಕ ಉದ್ಯಮಗಳ ಖಾಸಗೀಕರಣದ ವಿರುದ್ಧ ಮೊದಲು ಧ್ವನಿಯೆತ್ತಬೇಕಾಗಿದೆ.