ಯುಎಇಯ ಶೋಧಕ ನೌಕೆ ಇಂದು ಮಂಗಳನ ಕಕ್ಷೆಗೆ
ಫೋಟೊ ಕೃಪೆ: twitter.com
ಅಬುಧಾಬಿ (ಯುಎಇ), ಫೆ. 8: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಮೊದಲ ಮಂಗಳ ಗ್ರಹ ಶೋಧಕ ನೌಕೆ ‘ಹೋಪ್’ ಮಂಗಳವಾರ ಕೆಂಪು ಗ್ರಹದ ಕಕ್ಷೆಯನ್ನು ಪ್ರವೇಶಿಸಲು ಕ್ಷಣಗಣನೆ ನಡೆದಿದೆ.
‘ಹೋಪ್’ ಯುಎಇ ಕಾಲಮಾನ ಫೆಬ್ರವರಿ 6 ಬೆಳಗ್ಗೆ 11 ಗಂಟೆ ವೇಳೆಗೆ 47.5 ಕೋಟಿ ಕಿ.ಮೀ. ದೂರವನ್ನು ಕ್ರಮಿಸಿತ್ತು. ಕೇವಲ 52 ಲಕ್ಷ ಕಿ.ಮೀ. ದೂರವನ್ನು ಕ್ರಮಿಸಲು ಅದು ಬಾಕಿಯಿತ್ತು. 1,350 ಕೆಜಿ ತೂಕದ ಶೋಧಕ ನೌಕೆಯನ್ನು ಜಪಾನ್ನ ಟನೆಗಶಿಮ ಬಾಹ್ಯಾಕಾಶ ಕೇಂದ್ರದಿಂದ ಕಳೆದ ವರ್ಷದ ಜುಲೈ 19ರಂದು ಉಡಾಯಿಸಲಾಗಿತ್ತು.
ಕೋಟ್ಯಂತರ ಎಮಿರಾತಿಗಳು, ಅರಬ್ಬರು ಮತ್ತು ಯುಎಇ ವಲಸಿಗರ ಕನಸುಗಳನ್ನು ಹೊತ್ತ ‘ಹೋಪ್’ ಯುಎಇ ಕಾಲಮಾನ ಮಂಗಳವಾರ ಸಂಜೆ 7:42ಕ್ಕೆ ಮಂಗಳ ಗ್ರಹದ ಕಕ್ಷೆಯನ್ನು ಪ್ರವೇಶಿಸುವ ನಿರೀಕ್ಷೆಯಿದೆ.
ಯೋಜನೆಯ ಅತ್ಯಂತ ಮಹತ್ವದ ಘಟ್ಟವಾಗಿರುವ ಮಾರ್ಸ್ ಆರ್ಬಿಟ್ ಇನ್ಸರ್ಶನ್ (ಎಂಒಐ), ಅಂದರೆ ಮಂಗಳ ಗ್ರಹದ ಕಕ್ಷೆಗೆ ಶೋಧಕ ನೌಕೆಯನ್ನು ಸೇರಿಸುವ ಸೂಕ್ಷ್ಮ ಕಾರ್ಯಾಚರಣೆಯು 27 ನಿಮಿಷಗಳ ಕಾಲ ನಡೆಯಲಿದೆ. ಈ ಅವಧಿಯಲ್ಲಿ ಈ ಶೋಧಕ ನೌಕೆಯ ಭವಿಷ್ಯ ನಿರ್ಧಾರವಾಗಲಿದೆ. ಈ ಕಾರ್ಯಾಚರಣೆಯ ಯಶಸ್ಸಿನ ದರ ಕೇವಲ 50 ಶೇಕಡ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ನಾಜೂಕಿನ ಕಾರ್ಯಾಚರಣೆ
ನೌಕೆಯು ಗಂಟೆಗೆ 1,21,000 ಕಿ.ಮೀ. ವೇಗದಲ್ಲಿ ಮಂಗಳ ಗ್ರಹದ ಕಕ್ಷೆಯತ್ತ ಧಾವಿಸುತ್ತಿದೆ. ಮಂಗಳ ಗ್ರಹದ ಕಕ್ಷೆಗೆ ಸೇರ್ಪಡೆಗೊಳ್ಳಲು ಅದು ತನ್ನ ವೇಗವನ್ನು ಗಂಟೆಗೆ 18,000 ಕಿ.ಮೀ.ಗೆ ತಗ್ಗಿಸಬೇಕಾಗಿದೆ. ಅಂದರೆ, ಈ ವೇಗದಲ್ಲಿ ಮಂಗಳ ಗ್ರಹದ ಗುರುತ್ವಾಕರ್ಷಣೆಯು ಶೋಧಕವನ್ನು ಅದರ ಕಕ್ಷೆಯತ್ತ ಸೆಳೆಯುತ್ತದೆ.
ಒಂದು ವೇಳೆ ಅದರ ವೇಗ ಕಡಿಮೆಯಾಗದಿದ್ದರೆ ಅದು ಆಳ ಬಾಹ್ಯಾಕಾಶದತ್ತ ತನ್ನ ಪ್ರಯಾಣವನ್ನು ಮುಂದುವರಿಸುತ್ತದೆ ಹಾಗೂ ಈ ಯೋಜನೆ ವಿಫಲವಾಗುತ್ತದೆ.
ಕೆಂಪು ಬಣ್ಣದಿಂದ ಸಿಂಗಾರಗೊಂಡಿರುವ ‘ಬುರ್ಜ್ ಖಲೀಫ’
ಯುಎಇಯ ಮಹತ್ವಾಕಾಂಕ್ಷೆಯ ಶೋಧಕ ನೌಕೆ ‘ಹೋಪ್’ ಮಂಗಳ ಗ್ರಹದ ಕಕ್ಷೆಯನ್ನು ಪ್ರವೇಶಿಸಲು ಕ್ಷಣಗಣನೆ ಆರಂಭಿಸಿರುವಂತೆಯೇ, ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ದುಬೈನ ‘ಬುರ್ಜ್ ಖಲೀಫ’ವನ್ನು ಮಂಗಳ ಗ್ರಹದ ಬಣ್ಣವಾಗಿರುವ ಕೆಂಪಿನಿಂದ ಸಿಂಗರಿಸಲಾಗಿದೆ.
ಯುಎಇ ರಾಜಧಾನಿ ಅಬುಧಾಬಿಯ ಪ್ರಮುಖ ಕಟ್ಟಡಗಳೂ ಕೆಂಪು ಬಣ್ಣದಿಂದ ಕಂಗೊಳಿಸುತ್ತಿವೆ.
ಅದೂ ಅಲ್ಲದೆ, ‘ವರ್ಲ್ಡ್ ಎಕ್ಸ್ಪೊ 2020’ರ ‘ಅಲ್ ವಾಸಿ’ ಗುಮ್ಮಟವೂ ಕೆಂಪು ಬಣ್ಣದಿಂದ ಕಂಗೊಳಿಸುತ್ತಿದೆ.