ಸೌದಿ ಅರೇಬಿಯಾಕ್ಕೆ ತೆರಳಲಾಗದೆ ಸಂಕಷ್ಟಕ್ಕೊಳಗಾದ ಅನಿವಾಸಿ ಕನ್ನಡಿಗರಿಗೆ ನೆರವಾಗಲು ಕೆಸಿಎಫ್ ಮನವಿ
ಯುಎಇ, ಫೆ.10: ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡಿ ನಿಂತಿರುವ ಕೋವಿಡ್-19 ನಿಯಂತ್ರಣಕ್ಕಾಗಿ ಸೌದಿ ಅರೇಬಿಯಾ ಎಲ್ಲ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರಿಂದ ಸೌದಿ ಅರೇಬಿಯಾಕ್ಕೆ ತೆರಳೆಲೆಂದು ದುಬೈಗೆ ಆಗಮಿಸಿರುವ ಸಾವಿರಾರು ಕನ್ನಡಿಗರು ಅತಂತ್ರರಾಗಿದ್ದಾರೆ. ಇವರಿಗೆ ನೆರವಾಗಲು ಕರ್ನಾಟಕ ಸರಕಾರ ಕೂಡಲೇ ಮುಂದಾಗಬೇಕು ಎಂದು ಕೆಸಿಎಫ್ ಯುಎಇ ಸಮಿತಿ ಒತ್ತಾಯಿಸಿದೆ.
ಕೋವಿಡ್ ನಿರ್ಬಂಧದ ಬಳಿಕ ಉದ್ಯೋಗ ನಷ್ಟ ಹೊಂದುವ ಭೀತಿ ಸೇರಿದಂತೆ ಅನಿವಾರ್ಯವಾಗಿ ಸೌದಿ ಅರೇಬಿಯಾ ತಲುಪಬೇಕಾದ ಉದ್ಯಮಿಗಳು, ನೌಕರರು ದುಬೈಗೆ ತೆರಳಿ ಅಲ್ಲಿ 14 ದಿನಗಳ ಕ್ವಾರಂಟೈನ್ ಮುಗಿಸಿ ಸೌದಿಗೆ ತಲುಪುತ್ತಿದ್ದರು. ಆದರೆ, ಎರಡನೇ ಬಾರಿ ಸೌದಿ ಅರೇಬಿಯಾ ಘೋಷಿಸಿದ ಅನಿರೀಕ್ಷಿತ ವಿದೇಶಿ ವಿಮಾನಯಾನ ನಿರ್ಬಂಧದಿಂದ ಸೌದಿ ಅರೇಬಿಯಾಕ್ಕೆ ಹೋಗಲೆಂದು ಈ ರೀತಿ ದುಬೈ ತಲುಪಿದ್ದ ಸಾವಿರಾರು ಅನಿವಾಸಿ ಕನ್ನಡಿಗರು ಸಂಕಷ್ಟಕ್ಕೀಡಾಗಿದ್ದಾರೆ. ಕೇವಲ 14 ದಿನಗಳ ಕ್ವಾರಂಟೈನ್ ಸಿದ್ಧತೆಯೊಂದಿಗೆ ದುಬೈ ತಲುಪಿರುವ ಇವರು ಇದೀಗ ಸರಿಯಾದ ಊಟ, ಆಹಾರ, ವಸತಿ ವ್ಯವಸ್ಥೆಯಿಲ್ಲದೆ ಕಂಗಾಲಾಗಿದ್ದಾರೆ. ಈ ನಡುವೆ ವಿಸಿಟ್ ವೀಸಾ ಅವಧಿ ಮುಗಿದರೆ ದಂಡ ಕಟ್ಟಲು ಹಣವಿಲ್ಲದೆ ಪರದಾಡಬೇಕಾದ ಪರಿಸ್ಥಿತಿ ಎದುರಾಗಬಹುದೆಂಬ ಭೀತಿಯೂ ಅವರನ್ನು ಕಾಡುತ್ತಿದೆ. ಆದ್ದರಿಂದ ಕರ್ನಾಟಕ ರಾಜ್ಯ ಸರಕಾರವು ಈ ಬಗ್ಗೆ ಕೇಂದ್ರ ವಿದೇಶಾಂಗ ಸಚಿವರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಕೆಸಿಎಫ್ ಯುಎಇ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ಪ್ರಕಟನೆ ಮೂಲಕ ಮನವಿ ಮಾಡಿದ್ದಾರೆ.
ಅದೇರೀತಿ ಯುಎಇಯಲ್ಲಿ ಕಾರ್ಯಾಚರಿಸುತ್ತಿರುವ ಕನ್ನಡ ಸಂಘಸಂಸ್ಥೆಗಳು ಕೂಡಾ ಇವರತ್ತ ಗಮನಹರಿಸಿ ಅಗತ್ಯ ನೆರವು ನೀಡಲು ಮುಂದಾಗಬೇಕು ಅವರು ಮನವಿ ಮಾಡಿದ್ದಾರೆ.