ಯುಎಇಯ ಮಂಗಳಯಾನ ಮಿಷನ್ ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಾರಾ ಬಿಂತ್ ಯೂಸುಫ್ ಅಲ್ ಅಮೀರಿ
ಇವರ ಸಾಧನೆಯ ಸಂಪೂರ್ಣ ಮಾಹಿತಿ ಇಲ್ಲಿದೆ
ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಇತ್ತೀಚೆಗೆ ಮೊದಲ ಪ್ರಯತ್ನದಲ್ಲಿ ಮಂಗಳ ಗ್ರಹದ ಸುತ್ತ ತನ್ನ ಬಾಹ್ಯಾಕಾಶ ನೌಕೆಯನ್ನು ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಭಾರತ ಮತ್ತು ಯುರೋಪ್ ಸಾಲಿಗೆ ಯುಎಇ ಸೇರ್ಪಡೆಗೊಂಡಿದೆ. ಈ ಕಾರ್ಯಾಚರಣೆಯನ್ನು 2014 ರಲ್ಲಿ ಘೋಷಿಸಲಾಯಿತು ಮತ್ತು ಫೆಬ್ರವರಿ 9 ರಂದು ಗ್ರಹದ ಕಕ್ಷೆಗೆ ಪ್ರವೇಶಿಸುವಲ್ಲಿ ಹೋಪ್ ಮಂಗಳ ಯಾನ ನೌಕೆಯು ಯಶಸ್ವಿಯಾಯಿತು.
ಈ ಯಶಸ್ವಿ ವೈಜ್ಞಾನಿಕ ಕಾರ್ಯಾಚರಣೆಯ ಹಿಂದಿನ ಮುಖ್ಯ ಪಾತ್ರವನ್ನು ವಹಿಸಿದವರು ಡೆಪ್ಯೂಟಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ ಸಾರಾ ಬಿಂತ್ ಯೂಸುಫ್ ಅಲ್ ಅಮೀರಿ ಆಗಿದ್ದಾರೆ. ಕಂಪ್ಯೂಟರ್ ಇಂಜಿನಿಯರ್ ಆಗಿರುವ ಇವರು ದೇಶದ ಪ್ರಥಮ ʼಸುಧಾರಿತ ವಿಜ್ಞಾನʼ ಸಚಿವೆಯೂ ಆಗಿದ್ದಾರೆ.
33ರ ಹರೆಯದ ಸಾರಾ ಯುಎಇಯ ಮೊಹಮ್ಮದ್ ಬಿನ್ ರಾಶಿದ್ ಬಾಹ್ಯಾಕಾಶ ಕೇಂದ್ರದ ಅಧ್ಯಕ್ಷರಾಗಿದ್ದಾರೆ. ಯುಎಇಯ ಮೊದಲ ಮಂಗಳ ಯಾನ ನೌಕೆ ಹೋಪ್ ಆರ್ಬಿಟರ್ (ಅಲ್ ಅಮಲ್) ಅನ್ನು ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾಲಯ, ಕ್ಯಾಲಿಫೋರ್ನಿಯಾ-ಬರ್ಕ್ಲಿ ವಿಶ್ವವಿದ್ಯಾಲಯ ಮತ್ತು ಅರಿಝೋನಾ ರಾಜ್ಯ ವಿಶ್ವವಿದ್ಯಾಲಯದ ಜೊತೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಇರಾನ್ ಮೂಲದ ಸಾರಾ ಅಲ್ ಅಮೀರಿ ವಿಶ್ವಾದ್ಯಂತ ಕಿರಿಯ ಮಂತ್ರಿಗಳಲ್ಲಿ ಒಬ್ಬರು ಮತ್ತು ಬಾಹ್ಯಾಕಾಶ ಏಜೆನ್ಸಿಯನ್ನು ಮುನ್ನಡೆಸುವ ಅತ್ಯಂತ ಕಿರಿಯ ವ್ಯಕ್ತಿ ಎನ್ನುವ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಯುಎಇಯಲ್ಲಿ ಏರೋಸ್ಪೇಸ್ ಎಂಜಿನಿಯರ್ ಆಗಿ ವೃತ್ತಿಜೀವನ
ಶಾರ್ಜಾದ ಅಮೇರಿಕನ್ ವಿಶ್ವವಿದ್ಯಾಲಯದಿಂದ 2008 ರಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ನಲ್ಲಿ ಬಿಎಸ್ಸಿ ಪದವಿ ಪಡೆದ ನಂತರ, ಸಾರಾ ಎರಡು ವರ್ಷಗಳ ಕಾಲ ಎಮಿರೇಟ್ಸ್ ಇನ್ಸ್ಟಿಟ್ಯೂಷನ್ ಫಾರ್ ಅಡ್ವಾನ್ಸ್ಡ್ ಸೈನ್ಸ್ ಅಂಡ್ ಟೆಕ್ನಾಲಜಿ (ಇಐಎಎಸ್ಟಿ) ಯಲ್ಲಿ ಪ್ರೋಗ್ರಾಂ ಎಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ.
EIAST ನಲ್ಲಿ, ಅವರು ದೇಶದ ಮೊದಲ ಎರಡು ಉಪಗ್ರಹಗಳಾದ ದುಬೈಸಾಟ್ -1 ಮತ್ತು ದುಬೈಸಾಟ್ -2 ಎರಡರನ್ನೂ ಅಭಿವೃದ್ಧಿಪಡಿಸುವ ಕಾರ್ಯ ನಿರ್ವಹಿಸಿದರು. ಅವರು ಖಲೀಫಾಸಾಟ್ ಅಥವಾ ದುಬೈಸ್ಯಾಟ್ -3 ಅನ್ನು ಅಭಿವೃದ್ಧಿಪಡಿಸಿದ ತಂಡದ ಭಾಗವಾಗಿದ್ದರು ಮತ್ತು ಸುಧಾರಿತ ಏರೋನಾಟಿಕಲ್ ಸಿಸ್ಟಮ್ಸ್ ವಿಭಾಗದ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಬಳಿಕ ಅವರು ಶಾರ್ಜಾದ ಅಮೇರಿಕನ್ ವಿಶ್ವವಿದ್ಯಾಲಯದಿಂದ 2014 ರಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ನಲ್ಲಿ ಎಂ.ಎಸ್ಸಿ ಪದವಿ ಪಡೆದರು. ಕಲಿಕೆಯ ಮಧ್ಯೆಯೇ ಮೊಹಮ್ಮದ್ ಬಿನ್ ರಶೀದ್ ಬಾಹ್ಯಾಕಾಶ ಕೇಂದ್ರದಲ್ಲಿ ಬಾಹ್ಯಾಕಾಶ ವಿಜ್ಞಾನದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರು ಸಂಶೋಧನೆ ಮತ್ತು ಅಭಿವೃದ್ಧಿ ಘಟಕವನ್ನು ಸ್ಥಾಪಿಸಿ ಅದರ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು.
ಸಾರಾ “ಜ್ಞಾನ ಆಧಾರಿತ ಆರ್ಥಿಕತೆಯನ್ನು” ಅಭಿವೃದ್ಧಿಪಡಿಸುವ ದೇಶದ ಗುರಿಯತ್ತ ಕೆಲಸ ಮಾಡುವ ಮೂಲಕ ತಮ್ಮ ಕೊಡುಗೆ ನೀಡಿದ್ದಾರೆ. 2117 ರ ಹೊತ್ತಿಗೆ ಮಂಗಳ ಗ್ರಹದಲ್ಲಿ ಮಾನವ ವಸಾಹತು ನಿರ್ಮಿಸುವ ಯೋಜನೆಗಳನ್ನು ಈ ಗುರಿ ಒಳಗೊಂಡಿದೆ. ತರಬೇತಿ ಮತ್ತು ಸಂಶೋಧನೆಗೆ ಅನುಕೂಲವಾಗುವಂತೆ, ಮಂಗಳದ ಪರಿಸ್ಥಿತಿಗಳನ್ನು ಅನುಕರಿಸಲು ದೇಶವು ದುಬೈ ಮರುಭೂಮಿಯಲ್ಲಿ ‘ವಿಜ್ಞಾನ ನಗರ’ ನಿರ್ಮಿಸಲು ಯೋಜನೆ ಹಾಕಿಕೊಂಡಿದೆ.
2014 ರಲ್ಲಿ, ಸಾರಾ ಬಿಂತ್ ಯೂಸುಫ್ ಅಲ್ ಅಮೀರಿ ದೇಶದ ಬಾಹ್ಯಾಕಾಶ ಕೇಂದ್ರದಲ್ಲಿ ಸುಧಾರಿತ ವೈಮಾನಿಕ ವ್ಯವಸ್ಥೆಗಳ ಕಾರ್ಯಕ್ರಮ ವ್ಯವಸ್ಥಾಪಕರಾದರು. ಬಾಹ್ಯಾಕಾಶ ಏಜೆನ್ಸಿಗಾಗಿ ಎಂಜಿನಿಯರಿಂಗ್ ತಂಡವನ್ನು ಒಟ್ಟುಗೂಡಿಸುವ ಜವಾಬ್ದಾರಿಯನ್ನು ಅವರು ಹೊಂದಿದ್ದರು.
ನಂತರ ಅವರನ್ನು 2016 ರಲ್ಲಿ ಎಮಿರೇಟ್ಸ್ ವಿಜ್ಞಾನ ಮಂಡಳಿಯ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು.
19 ಅಕ್ಟೋಬರ್ 2017 ರಂದು, ಅಲ್ ಅಮಿರಿ ಅವರು ದೇಶದ ಮೊದಲ ಸುಧಾರಿತ ವಿಜ್ಞಾನ ರಾಜ್ಯ ಸಚಿವರಾದರು, ಈ ಸ್ಥಾನವನ್ನು ಈಗಲೂ ಅವರು ಮುಂದುವರಿಸಿದ್ದಾರೆ. ಆಗಸ್ಟ್ 2020 ರಲ್ಲಿ, ಅವರು ಯುಎಇ ಬಾಹ್ಯಾಕಾಶ ಏಜೆನ್ಸಿಯ ಅಧ್ಯಕ್ಷರಾಗಿ ಅಧಿಕಾರಕ್ಕೇರಿದರು.
ವಿಶ್ವ ಆರ್ಥಿಕ ವೇದಿಕೆಯಿಂದ(World Economic Forum) ʼದಾವೋಸ್ 2019ʼ ರಲ್ಲಿ ಮಾತನಾಡಲು ಅವರನ್ನು ಆಹ್ವಾನಿಸಲಾಯಿತು, ಮತ್ತು ಅಂತಾರಾಷ್ಟ್ರೀಯ ʼಟೆಡ್ʼ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯುಎಇಯ ಮೊದಲ ಪ್ರಜೆ ಎಂಬ ಹೆಗ್ಗಳಿಕೆಗೂ ಸಾರಾ ಪಾತ್ರರಾಗಿದ್ದಾರೆ.
21 ನೇ ಶತಮಾನದಲ್ಲಿ ಜಾಗತಿಕವಾಗಿ ಮಹಿಳೆಯರ ಪಾತ್ರ ಮತ್ತು ಜೀವನವನ್ನು ಪರಿಶೀಲಿಸುವ ಸಾಕ್ಷ್ಯಚಿತ್ರ ಸರಣಿಯಾದ ಬಿಬಿಸಿಯ ʼ100 ವುಮೆನ್ʼ ನಲ್ಲಿ ಸಾರಾ ಬಿಂತ್ ಯೂಸುಫ್ ಅಲ್ ಅಮೀರಿ ಕೂಡಾ ಸ್ಥಾನ ಪಡೆದಿದ್ದಾರೆ. ಯುಎಇಯಲ್ಲಿ ಸಾರಾ ಬಿಂತ್ ಯೂಸುಫ್ ಅಲ್ ಅಮೀರಿ ಸಚಿವೆಯಾಗಿರುವ ಕಾರಣ ಅವರನ್ನು ʼಹರ್ ಎಕ್ಸೆಲೆನ್ಸಿʼ ಎಂಬ ಹೆಸರಿನೊಂದಿಗೆ ಸಂಬೋಧಿಸಲಾಗುತ್ತದೆ.