ದೂರದೃಷ್ಟಿ, ಸಂವೇದನೆ ಇಲ್ಲದ 2021ರ ಬಜೆಟ್
ಹಳಿತಪ್ಪಿದ ಅರ್ಥವ್ಯವಸ್ಥೆ
ಭಾಗ-1
ಫೆಬ್ರವರಿ 1ನೇ ತಾರೀಕಿಗೆ ಕೇಂದ್ರ ಸರಕಾರವು ಸಂಸತ್ತಿನಲ್ಲಿ ಮಂಡಿಸಿದ 2021-22ರ ಮುಂಗಡಪತ್ರ(ಬಜೆಟ್) ಸ್ವತಂತ್ರ ಭಾರತದಲ್ಲಿ ಒಂದು ಬಹುಮುಖ್ಯವಾದ ಸಾಕ್ಷಿಗಲ್ಲು ಆಗಬಹುದೆಂಬ ನಿರೀಕ್ಷೆ ಬಹುತೇಕ ಜನರಲ್ಲಿತ್ತು. ನಮ್ಮ ಜೀವಮಾನದಲ್ಲಿಯೇ ಕೇಳಿರದ ಅಭೂತಪೂರ್ವ ಸನ್ನಿವೇಶದಲ್ಲಿ ತಯಾರಿಸಲ್ಪಟ್ಟ ಬಜೆಟ್ ಇದಾಗಲಿದೆ ಎಂದು ವಿತ್ತಮಂತ್ರಿ ನಿರ್ಮಲಾ ಸೀತಾರಾಮನ್ ಹೇಳಿದ್ದರು. ವಿಪರ್ಯಾಸವೆಂದರೆ ಬಜೆಟಿನ ವಿವರವಾದ ಮಾಹಿತಿಗಳು ಲಭ್ಯವಾಗುತ್ತಿದ್ದಂತೆ ಆ ಭರವಸೆ ಗಾಳಿಗೋಪುರವೆಂಬ ಭಾವನೆ ತೀವ್ರವಾಗಿ ಹುಟ್ಟುತ್ತದೆ. ಈ ಮಾಹಿತಿಗಳನ್ನು ವಿಶ್ಲೇಷಿಸುವ ಮೊದಲು ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಒಂದು ಸ್ಥೂಲ ನೋಟವನ್ನು ಹಾಯಿಸುವುದು ಅತೀ ಅಗತ್ಯ.
ಕುಸಿದ ಆರ್ಥಿಕತೆ:
ಅಭಿವೃದ್ಧಿಯ ಮಂತ್ರವನ್ನು ಜಪಿಸುತ್ತ 2014ರಲ್ಲಿ ಅಧಿಕಾರಗ್ರಹಣ ಮಾಡಿದ ನರೇಂದ್ರ ಮೋದಿ ಸರಕಾರದ ಕೆಲವು ನಿರ್ಧಾರಗಳು ಅರ್ಥವ್ಯವಸ್ಥೆಯನ್ನು ಶಿಥಿಲಗೊಳಿಸಿ 2019-20ಕ್ಕೆ ಅದನ್ನು ಹಳಿತಪ್ಪಿಸಿದವು: 2016 ನವೆಂಬರ್ನ ನೋಟು ರದ್ದತಿ ಮತ್ತು 2017ರ ಸರಕು ಮತ್ತು ಸೇವಾ ತೆರಿಗೆಯ ಕಾನೂನು (ಜಿಎಸ್ಟಿ)-ಇವೆರಡೂ ಕ್ರಮಗಳು ಎಲ್ಲ ರಂಗಗಳಿಗೂ ಮಾರಕ ಹೊಡೆತವನ್ನು ಉಂಟುಮಾಡಿದವು. ನೋಟು ರದ್ದತಿಯಿಂದ ಕೂಲಿಕಾರ್ಮಿಕರು, ಸಣ್ಣ ರೈತರು ಮತ್ತು ಸ್ವಂತ ಉದ್ದಿಮೆದಾರರು ಸಂಪಾದನೆಯನ್ನು ಕಳಕೊಂಡರು. ಜಿಎಸ್ಟಿಯ ಹೊಸ ಕಾನೂನಿನಿಂದಾಗಿ ಉದ್ಯೋಗ ಸೃಷ್ಟಿಸುವ ಸಾಧನಗಳಾದ ಕಿರು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆ ಮತ್ತು ಉದ್ದಿಮೆಗಳು ನೆಲಕಚ್ಚಿದವು.
ಇವುಗಳ ಜೊತೆಗೆ ಕೈಗಾರಿಕಾ ರಂಗದ ಉತ್ಪಾದನೆ ಕುಂಠಿತವಾಯಿತು, ಅವುಗಳಿಗೆ ಸಾಲವನ್ನು ಯಥೇಚ್ಛವಾಗಿ ನೀಡುತ್ತಿದ್ದ ಬ್ಯಾಂಕುಗಳು ಸಾಲಗಳ ಮರುಪಾವತಿ ಇಲ್ಲದೆ ಇನ್ನೂ ಹೆಚ್ಚು ನಷ್ಟವನ್ನು ಅನುಭವಿಸಿದವು, ಬ್ಯಾಂಕುಗಳ ಸಮಗ್ರ ಸುಧಾರಣೆಗೆ ಮಾರ್ಗ ಹುಡುಕುವ ಬದಲು ಸರಕಾರ ಅವುಗಳ ವಿಲೀನೀಕರಣದ ಪ್ರಕ್ರಿಯೆಯಲ್ಲಿ ತೊಡಗಿತು, ಗಾತ್ರ ಹೆಚ್ಚಿಸಿದರೆ ಅವುಗಳ ದಕ್ಷತೆ ಹೆಚ್ಚುತ್ತದೆಂಬ ತರ್ಕರಹಿತ ನಂಬಿಕೆಗೆ ಶರಣಾಯಿತು. ವಿಲೀನಗೊಂಡ ಬ್ಯಾಂಕುಗಳ ಅಧಿಕಾರಿಗಳು ವಿಭಿನ್ನ ವೃತ್ತಿಸಂಸ್ಕೃತಿ ಮತ್ತು ತಾಂತ್ರಿಕತೆ (IT Platform)ಗಳನ್ನು ಹೊಂದಾಣಿಸುವುದರಲ್ಲಿಯೇ ತಮ್ಮ ಕಾಲಹರಣ ಮಾಡಬೇಕಾಗಿ ಬಂತು. ಹೊಸ ಸಾಲ ನೀಡುವಿಕೆಗೆ ಮತ್ತು ಕೆಟ್ಟಸಾಲಗಳ ವಸೂಲಿಯ ಪ್ರಕ್ರಿಯೆಗೆ ಹೊಡೆತ ಬಿತ್ತು.
ಇದೇ ಸಮಯಕ್ಕೆ ಅವಶ್ಯ ಸಾಮಗ್ರಿ ಮತ್ತು ಸೇವೆಗಳ ಬೆಲೆಗಳ ಏರಿಕೆ ಆರಂಭವಾಯಿತು. ಸಾರ್ವಜನಿಕ ಸಾರಿಗೆಗೆ ಅಗತ್ಯವಾದ ಪೆಟ್ರೋಲ್ ಮತ್ತು ಡೀಸೆಲ್, ದಿನಬಳಕೆಗೆ ಬೇಕಾದ ಗ್ಯಾಸ್, ವಿದ್ಯುಚ್ಛಕ್ತಿ ಮತ್ತು ನೀರು, ಸಾರಿಗೆ ಪ್ರಯಾಣದ ದರ, ಆರೋಗ್ಯರಕ್ಷಣೆಗೆ ಅಗತ್ಯವಾದ ಔಷಧಿಗಳು ಮತ್ತು ವೈದ್ಯಕೀಯ ಸೇವೆಗಳು-ದುಬಾರಿಯಾಗುತ್ತಲೇ ಹೋದವು.
ಸರಕಾರದ ಹೆಚ್ಚುತ್ತಿರುವ ವೆಚ್ಚಗಳನ್ನು ತುಂಬಿಸಲು ಸರಕಾರೀ ನಿಯಂತ್ರಿತ ಸಂಸ್ಥೆಗಳಿಂದ (ರಿಸರ್ವ್ ಬ್ಯಾಂಕು, ಸರಕಾರಿ ಬ್ಯಾಂಕುಗಳು ಮತ್ತು ಜೀವ ವಿಮಾ ಸಂಸ್ಥೆಗಳಿಂದ) ಹೆಚ್ಚುವರಿ ಲಾಭಾಂಶವನ್ನು ಕೊಡುವಂತೆ ಒತ್ತಾಯಿಸಲಾಯಿತು. ಒಂದು ರಾಷ್ಟ್ರ, ಒಂದು ತೆರಿಗೆ ಎಂಬ ಉದ್ದೇಶದಿಂದ ಜಾರಿಗೊಳಿಸಿದ ಜಿಎಸ್ಟಿಯ ಅವಾಂತರಗಳಿಂದ ತೆರಿಗೆ ಭಾರ ಕಡಿಮೆಯಾಗಲಿಲ್ಲ, ಸರಕಾರದ ಆದಾಯವೂ ಹೆಚ್ಚಲಿಲ್ಲ. ರಾಜ್ಯ ಸರಕಾರಗಳೂ ಜಿಎಸ್ಟಿಯಿಂದ ತಮ್ಮ ಪಾಲನ್ನು ಪಡೆಯಲು ಹರಸಾಹಸ ಪಡಬೇಕಾಯಿತು.
ಬೆಲೆ ಏರಿಕೆ, ಠೇವಣಿಗಳ ಬಡ್ಡಿಕಡಿತ, ತೆರಿಗೆಗಳ ಹೊರೆ, ಹಣಕಾಸು ರಂಗದ ಅದಕ್ಷತೆ ಮುಂತಾದ ಕಾರಣಗಳಿಂದ ಆಂತರಿಕ ಉಳಿತಾಯ ಇಳಿಮುಖವಾಗಿ ಸರಕಾರಕ್ಕೆ ಸಂಪನ್ಮೂಲದ ಜೋಡಣೆಯ ಸಮಸ್ಯೆಗಳು ಉದ್ಭವಿಸಿದವು. ವಿಶ್ವಮಟ್ಟದಲ್ಲಿ ಕಚ್ಚಾತೈಲದ ಬೆಲೆ ಕನಿಷ್ಠಮಟ್ಟಕ್ಕೆ ಇಳಿದರೂ ದೇಶದಲ್ಲಿ ತೈಲಾಧಾರಿತ ಇಂಧನಗಳ ಮೇಲೆ ಸರಕಾರ ತೆರಿಗೆಗಳನ್ನು ಹೆಚ್ಚುಮಾಡುತ್ತಾ ಹೋಯಿತು. ಇವೆಲ್ಲ ಬೆಳವಣಿಗೆಗಳ ಜೊತೆಗೆ 2020ರ ಕೋವಿಡ್ ಸಾಂಕ್ರಾಮಿಕದ ನಿಯಂತ್ರಣಕ್ಕೆಂದು ಪೂರ್ವತಯಾರಿ ಮತ್ತು ಮುನ್ಸೂಚನೆ ಇಲ್ಲದೆ ಮಾಡಿಸಿದ ರಾಷ್ಟ್ರವ್ಯಾಪಿ ಬಂದ್ ಮತ್ತು ಆ ಬಳಿಕದ ಸಮಸ್ಯೆಗಳು ದೇಶದ ಅರ್ಥವ್ಯವಸ್ಥೆಯನ್ನು ಸಂಪೂರ್ಣ ಹಳಿತಪ್ಪಿಸಿದವು. ಅರ್ಥವ್ಯವಸ್ಥೆ ಹದಗೆಟ್ಟ ಬಗ್ಗೆ ಸರಕಾರಕ್ಕೆ ಮಾಹಿತಿಯನ್ನು ಅಧಿಕೃತ ಮೂಲಗಳೇ ನೀಡುತ್ತಾ ಬಂದಿದ್ದವು. ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ಬಿಐ) 2019ರ ವಾರ್ಷಿಕ ವರದಿಯಂತೆ ವಿವಿಧ ಕ್ಷೇತ್ರಗಳಲ್ಲಿ ಆಗುತ್ತಿರುವ ವೇತನ ಕಡಿತ, ಉದ್ಯೋಗ ನಷ್ಟ ಹಾಗೂ ಹೆಚ್ಚುತ್ತಿರುವ ನಿರುದ್ಯೋಗದಿಂದಾಗಿ ದುಡಿಯುವ ವರ್ಗಗಳ ಆದಾಯ ಕಡಿಮೆಯಾಗಿ ಸರಕು ಮತ್ತು ಸೇವೆಗಳ ಬೇಡಿಕೆ ಕೆಳಮುಖವಾಗತೊಡಗಿತು. ಇದೂ ಅಲ್ಲದೆ ಗ್ರಾಮೀಣ ಪ್ರದೇಶದ ಬೇಡಿಕೆಯಲ್ಲಿಯೂ ಹಿಂಜರಿತವಾಗತೊಡಗಿತು. ಇವುಗಳ ಒಟ್ಟು ಪರಿಣಾಮ ಆರ್ಥಿಕತೆಯ ಮೇಲಾಗಲಿದೆ ಎಂದು ಮುನ್ಸೂಚನೆಯನ್ನು ಆರ್ಬಿಐ ನೀಡಿತ್ತು.
2020ರ ಡಿಸೆಂಬರ್ನಲ್ಲಿ ಕೇಂದ್ರದ ಸಂಖ್ಯಾಶಾಸ್ತ್ರ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (Ministry of Statistics & Programme Implementation-MoSPI) ದೇಶದ ಜಿಡಿಪಿ -7.7ರಷ್ಟು ಕುಸಿತ ಕಾಣಲಿದೆ ಎಂದಿತ್ತು. ಬಜೆಟ್ ಮಂಡನೆಯ ಪೂರ್ವಭಾವಿಯಾಗಿ ಅರ್ಥಸಚಿವಾಲಯ ಹೊರತಂದ ವಾರ್ಷಿಕ ಆರ್ಥಿಕ ಸಮೀಕ್ಷೆಯೂ ಈ ವಿಷಯವನ್ನು ಬೆಳಕಿಗೆ ತಂದಿತ್ತು. ಪರಿಸ್ಥಿತಿಯ ತೀವ್ರತೆಯನ್ನು ಕೋಷ್ಠಕ 1ರಲ್ಲಿ ನೀಡಿದ ಅಂಕೆಸಂಖ್ಯೆಗಳು ಬಿಂಬಿಸುತ್ತವೆ. 2016-17ರಲ್ಲಿ ಜಿಡಿಪಿ ಶೇ. 8.3 ಹೆಚ್ಚಾಗಿದ್ದರೆ, 2019-20ಕ್ಕೆ ಹೆಚ್ಚಳ ಶೇ. 4.2ಕ್ಕೆ ಕುಸಿದು ಈ ವರ್ಷ ಹಿಂದೆಂದೂ ಕೇಳಿರದ ಮಟ್ಟಕ್ಕೆ ಕುಸಿದಿದೆ. ದೇಶೀಯ ಉತ್ಪತ್ತಿಯ ಒಟ್ಟು ಮೌಲ್ಯ(Gross Value Added) ಒಂದೇ ವರ್ಷದಲ್ಲಿ ರೂ. 10 ಲಕ್ಷ ಕೋಟಿಯಷ್ಟು ಕುಸಿದಿದ್ದು, 2017-18ರ ಮಟ್ಟಕ್ಕಿಂತ ತುಸು ಮೇಲಿದೆ. ಒಬ್ಬ ನಾಗರಿಕನ ವಾರ್ಷಿಕ ತಲಾ ವೆಚ್ಚ ಸುಮಾರು ರೂ. 6,000ಕ್ಕಿಂತಲೂ ಹೆಚ್ಚು ಕುಸಿದು 2017-18ರ ಮಟ್ಟಕ್ಕಿಂತ ಕೆಳಗಿಳಿದಿದೆ. (ಕೋಷ್ಠಕ ಗಮನಿಸಿ)
45 ವರ್ಷಗಳಲ್ಲಿ ಅತ್ಯಂತ ಗಂಭೀರವಾದ ನಿರುದ್ಯೋಗ ಸಮಸ್ಯೆ:
ವರ್ಷಕ್ಕೆ 2.5 ಕೋಟಿ ಉದ್ಯೋಗಗಳ ಸೃಷ್ಟಿಯ ಆಶ್ವಾಸನೆ ನೀಡಿ 2014ರಲ್ಲಿ ಅಧಿಕಾರಕ್ಕೆ ಬಂದ ಮೋದಿಯವರ ಮೊದಲನೆಯ ಕಾಲಾವಧಿಯಲ್ಲಿ ಉದ್ಯೋಗ ಹೆಚ್ಚಾಗುವ ಬದಲು ಕಡಿತವಾಗುತ್ತಾ ಬಂತು. ಸಿಎಂಐಇ (Centre for Monitoring Indian Economy)ಯ ದಾಖಲೆಗಳ ಪ್ರಕಾರ 2016ರಲ್ಲಿ ಒಟ್ಟು ಉದ್ಯೋಗ ಆಕಾಂಕ್ಷಿಗಳ ಶೇ. 42ರಷ್ಟು ಮಂದಿಗೆ ಮಾತ್ರ ಉದ್ಯೋಗ ಸಿಕ್ಕಿತ್ತು. ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಇಳಿಯುತ್ತಾ 2021ಕ್ಕೆ ಶೇ.38ಕ್ಕೆ ತಲಪಿದೆ.
ಇದು ಎರಡು ಕಾರಣಗಳಿಂದಾಗಿ: ವರ್ಷವೂ ಯುವ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಏರುವುದು ಮತ್ತು ಹೊಸ ಉದ್ಯೋಗಗಳ ಸೃಷ್ಟಿಯಾಗದಿರುವುದು. 2019ರ ಆರಂಭದಲ್ಲಿಯೇ ಭಾರತದ ನಿರುದ್ಯೋಗಿಗಳ ಪ್ರಮಾಣವು ಶೇ. 6.1 ತಲುಪಿತ್ತು, ಅದು ಹಿಂದಿನ 45 ವರ್ಷಗಳಲ್ಲಿ ಗರಿಷ್ಠವಾಗಿತ್ತು. ಫೆಬ್ರವರಿ 2020ಕ್ಕೆ ಅದು 7.78ಕ್ಕೆ ಏರಿತು. ಕೋವಿಡ್ ತಡೆಯಲು ದೇಶವಿಡೀ ಮಾಡಿದ ‘ಲಾಕ್ ಡೌನ್’ ನಿಂದಾಗಿ ಮುಂದಿನ ಎರಡು ತಿಂಗಳುಗಳಲ್ಲಿ ನಿರುದ್ಯೋಗಿಗಳ ಪ್ರಮಾಣ ಶೇ. 27.1ಕ್ಕೆ ಏರಿತು. ನಂಬಲರ್ಹ ಅಂದಾಜು ಪ್ರಕಾರ ಈ ಎರಡು ತಿಂಗಳಿನಲ್ಲಿ 9.13 ಕೋಟಿ ಕೂಲಿ ಕಾರ್ಮಿಕರು ಮತ್ತು ಸಣ್ಣ ಉದ್ದಿಮೆಯಲ್ಲಿ ಕೆಲಸ ಮಾಡುವವರು, 1.82 ಕೋಟಿ ಸ್ವಂತ ಉದ್ಯೋಗದಲ್ಲಿದ್ದವರು ಮತ್ತು 1.78 ಕೋಟಿ ನಿರ್ದಿಷ್ಟ ವೇತನ ಪಡೆಯುವ ಉದ್ಯೋಗಿಗಳು-ಒಟ್ಟಾರೆ 12 ಕೋಟಿಗಿಂತ ಹೆಚ್ಚು ಮಂದಿ ತಮ್ಮ ಉದ್ಯೋಗಗಳನ್ನು ಕಳೆದುಕೊಂಡರು. ಮುಂದಿನ ಆಗಸ್ಟ್ ತಿಂಗಳ ತನಕದ ಅವಧಿಯಲ್ಲಿ ಸುಮಾರು 66 ಲಕ್ಷ ವೃತ್ತಿಪರ ಉದ್ಯೋಗಿಗಳು-ಡಾಕ್ಟರರು, ಇಂಜಿನಿಯರುಗಳು, ಲೆಕ್ಕಪತ್ರ ಬರೆಯುವವರು, ಅಧ್ಯಾಪಕರು ಸೇರಿದಂತೆ-ತಮ್ಮ ಕೆಲಸಗಳನ್ನು ಕಳಕೊಳ್ಳಬೇಕಾಗಿ ಬಂತು.
ಈ ಬೆಳವಣಿಗೆಯ ನಡುವೆ ಕೃಷಿಯಲ್ಲಿ ತೊಡಗಿಸಿಕೊಂಡವರ ಸಂಖ್ಯೆ ಅಬಾಧಿತವಾಗಿ ಉಳಿದಿದ್ದು ಮಾತ್ರವಲ್ಲ 2020 ಸೆಪ್ಟಂಬರ್ನ ಸುಮಾರಾಗಿ ಏರು ಮುಖವಾಗತೊಡಗಿತು! ಇದಕ್ಕೆ ಮೂಲ ಕಾರಣ: ಲಾಕ್ಡೌನ್ ಸಮಯದಲ್ಲಿ ತಮ್ಮ ಜೀವ ಉಳಿಸಲೆಂದು ಆ ತನಕ ಹೊಲಗಳಿಂದ ನಗರಗಳಿಗೆ ವಲಸೆ ಹೋಗಿದ್ದ ಕೃಷಿಕಾರ್ಮಿಕರ ಮರುವಲಸೆ.
ಸಂಪೂರ್ಣ ಕುಸಿದ ಆರೋಗ್ಯ ವ್ಯವಸ್ಥೆ:
ದೇಶದ ಆರ್ಥಿಕತೆಯ ಕುಸಿತದ ಜೊತೆಗೇ ಕೊರೋನ ಸಾಂಕ್ರಾಮಿಕ ಎಗ್ಗಿಲ್ಲದೆ ದೇಶದಾದ್ಯಂತ ಹಬ್ಬಿತು. ಅಧಿಕೃತ ವರದಿಗಳ ಪ್ರಕಾರ 2021 ಜನವರಿಯ ಅಂತ್ಯಕ್ಕೆ ಸೋಂಕು ತಗಲಿದವರ ಸಂಖ್ಯೆ 1.08 ಕೋಟಿ ದಾಟಿತ್ತು, ಜೀವ ಕಳಕೊಂಡವರ ಸಂಖ್ಯೆ 1.54 ಲಕ್ಷ ಮೀರಿತ್ತು. ಈಗ ಸೋಂಕು ಹರಡುವಿಕೆ ಕಡಿಮೆಯಾಗುತ್ತಿರುವ ವರದಿಗಳು ಬರುತ್ತಿವೆ. ರೋಗ ನಿವಾರಕ ವ್ಯಾಕ್ಸಿನ್ ವಿತರಣೆಯೂ ಆರಂಭವಾಗಿದೆ. ಆದರೆ ಐಸಿಎಂಆರ್ (ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ-Indian Council of Medical Research) ಸಂಸ್ಥೆಯ ಇತ್ತೀಚೆಗಿನ ಒಂದು ವರದಿಯ ಪ್ರಕಾರ ದೇಶದ ಮೂರನೇ ಒಂದಂಶ ಜನ ರೋಗದಿಂದ ಪೀಡಿತರಾಗಿರಬಹುದು.
ಸೋಂಕಿನ ತೀವ್ರತೆಯನ್ನು ಅಂಕೆಸಂಖ್ಯೆಗಳು ಪೂರ್ಣವಾಗಿ ಚಿತ್ರಿಸುತ್ತಿಲ್ಲ. ಭಾರತದ ಸಾರ್ವಜನಿಕ ಆರೋಗ್ಯ ಸೇವೆಗಳು ಎಷ್ಟು ಅದಕ್ಷವಾಗಿವೆ ಎಂಬುದರ ಬಗ್ಗೆ ಸ್ವತಂತ್ರ ಮಾಧ್ಯಮಗಳಲ್ಲಿ ಬರುತ್ತಿದ್ದ ವರದಿಗಳು ಕನ್ನಡಿ ಹಿಡಿದಿದ್ದವು. ಹಳ್ಳಿಗಳ ಆರೋಗ್ಯ ಕೇಂದ್ರಗಳು, ನಗರ ಪ್ರದೇಶದ ಶುಶ್ರೂಷಾಲಯಗಳು, ಜಿಲ್ಲಾ ಆಸ್ಪತ್ರೆಗಳು ಮತ್ತು ಅಲ್ಲಿನ ಸೀಮಿತ ಸಂಖ್ಯೆಯ ವೈದ್ಯರು, ಆರೋಗ್ಯ ಸೇವಕರು ಹಾಗೂ ಇತರ ಸಿಬ್ಬಂದಿ ಅಗತ್ಯದ ಮೂಲಸೌಕರ್ಯಗಳ ತೀವ್ರ ಅಭಾವದ ಹೊರತಾಗಿಯೂ ಹಗಲೂ ರಾತ್ರಿ ದುಡಿದರು. ಅವರಲ್ಲಿ ಅನೇಕರ ಜೀವ ವಿನಾಕಾರಣ ನಷ್ಟವೂ ಆಯಿತು. ಈ ದುರವಸ್ಥೆಯ ಇನ್ನೊಂದು ಪರಿಣಾಮ ಉಳಿದ ಕಾಯಿಲೆಗಳಿಂದ ಬಳಲುತ್ತಿದ್ದ ನಾಗರಿಕರ ಮೇಲೆಯೂ ಆಗಿತ್ತು-ಅವುಗಳು ನಮ್ಮ ವ್ಯವಸ್ಥೆಯ ಲೋಪಗಳಿಗೆ ಸಾಕ್ಷಿಯಾದವು. ಈ ಪರಿಸ್ಥಿತಿಗೆ ಸರಕಾರ ಕಾರಣವಲ್ಲ ಎಂದು ಸಮಜಾಯಿಷಿ ನೀಡಬಹುದು. ಆದರೆ ಅನುಭವದಿಂದ ಪಾಠ ಕಲಿಯುವ ಕರ್ತವ್ಯ ಪ್ರಜೆಗಳು ಆರಿಸಿದ ಸರಕಾರದ ಮೇಲಿದೆ.
ಈ ಅಭೂತಪೂರ್ವವಾದ ಹಿನ್ನೆಲೆಯಲ್ಲಿ ಆರ್ಥಿಕ ಪ್ರಗತಿ ಮತ್ತು ಕೋಟ್ಯಂತರ ಪ್ರಜೆಗಳ ಆರೋಗ್ಯ ಭದ್ರತೆಗೆ ದೂರದೃಷ್ಟಿಯ ಕ್ರಮಗಳನ್ನು ಕೈಗೊಳ್ಳುವ ಸುವರ್ಣಾವಕಾಶ ಸರಕಾರಕ್ಕೆ 2021ರ ಬಜೆಟ್ ನೀಡಿತ್ತು. ಅದು ಒಂದು ಪೀಳಿಗೆಯ ಮುಂದಿರುವ ಅತಿ ದೊಡ್ಡ ಸವಾಲು ಕೂಡ ಆಗಿತ್ತು ಎಂಬುದು ನಿಃಸಂಶಯ.