varthabharthi


ಮುಂಬೈ ಸ್ವಗತ

ಮುಂಬೈ ಕನ್ನಡಿಗ ಪತ್ರಕರ್ತರ ಹೆಮ್ಮೆಯ ‘ಕಪಸಮ’

ವಾರ್ತಾ ಭಾರತಿ : 12 Feb, 2021
ದಯಾನಂದ ಸಾಲ್ಯಾನ್

ಮುಂಬೈಯಲ್ಲಿ ಪ್ರಪ್ರಥಮ ಪತ್ರಿಕಾ ದಿನಾಚರಣೆಯ ಸಂದರ್ಭ ‘ಪತ್ರಕರ್ತರ ವೇದಿಕೆ’ಯೊಂದನ್ನು ಸಂಘಟಿಸಲು ರೋನ್ಸ್ ಬಂಟ್ವಾಳ ಮುಂದಾದರು. ಈ ರೀತಿ ‘ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ’ದ ಉದಯವಾಯಿತು. ಪ್ರಥಮ ಪತ್ರಿಕಾ ದಿನಾಚರಣೆಯನ್ನು ಡಾ.ಸುನೀತಾ ಎಂ. ಶೆಟ್ಟಿ ಉದ್ಘಾಟಿಸಿದ್ದರೆ, ಕೆ.ಟಿ. ವೇಣುಗೋಪಾಲ್ ಅವರು ಅಂದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಹಾಗೂ ಹಿರಿಯ ಪತ್ರಕರ್ತರು ಹಾಗೂ ಗೌರವಾನ್ವಿತ ವ್ಯಕ್ತಿಗಳು ಅಂದಿನ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಹೀಗೆ ಹುಟ್ಟಿಕೊಂಡ ಸಂಸ್ಥೆಯು ಪತ್ರಕರ್ತರ ಒಗ್ಗಟ್ಟು ಹಾಗೂ ಅವರ ನೋವು-ನಲಿವುಗಳಿಗೆ ಸ್ಪಂದಿಸಲು ಪ್ರಾರಂಭಿಸಿತು.


ಒಟ್ಟು ಕನ್ನಡ ಪತ್ರಿಕಾ ರಂಗಕ್ಕೆ 177 ವರ್ಷಗಳ ಇತಿಹಾಸವಿದ್ದರೆ, ಮುಂಬೈ ಕನ್ನಡ ಪತ್ರಿಕಾ ರಂಗಕ್ಕೆ 138 ವರ್ಷಗಳ ಇತಿಹಾಸವಿದೆ. ‘ಕನ್ನಡ ಸುವಾರ್ತೆ’ಯಿಂದ ಮೊದಲ್ಗೊಂಡು; ‘ಹಿತೋಪದೇಶ’, ‘ಹವ್ಯಕ ಸುಭೋಧ’, ‘ನುಡಿ’, ‘ಆದರ್ಶ’, ‘ತಾಯಿನುಡಿ’, ಪ್ರಾರಂಭಕಾಲದ ಈ ಪತ್ರಿಕೆಗಳು ಹೆಚ್ಚು ಬದುಕನ್ನು ಕಂಡಿರದಿದ್ದರೂ ಕನ್ನಡ ಪತ್ರಿಕಾ ರಂಗ ಇಲ್ಲಿ ಭದ್ರ ಬುನಾದಿಯನ್ನು ಊರಲು ಸಹಾಯಕವಾದವು. ಆನಂತರದ ದಿನಗಳಲ್ಲಿ ಬೆಳಕು ಕಂಡ ಜಾಗೃತ ಕರ್ನಾಟಕ, ಪ್ರೇಕ್ಷಕ, ಮೊದಲ್ನುಡಿ, ಮುತ್ತಿನ ನೀರು, ದೀಪಾ, ಕನ್ನಡ ವಾಣಿ, ಜಾಗೃತಿ, ಚೇತನ ಸಚೇತನ, ಮನುಕುಲ, ಬೈರಾಗಿ ದರ್ಶನ, ಧರ್ಮ ಸಂದೇಶ ಶರಣ ಬಸವೇಶ್ವರ, ಸನ್ಮತಿ, ಸಮದರ್ಶಿ, ವೀರಕನ್ನಡಿಗ, ಸಂಚಾರಿ ಮಾಧವಿ, ನವಕರ್ನಾಟಕ, ಭಾರತಿ, ವೀರಶೈವ, ನಂದಾದೀಪ, ಕನ್ನಡ ನುಡಿ, ವಿಭೂತಿ, ಭಾರತಿ, ಸಮದರ್ಶಿ ಮೊದಲಾದ ವೈವಿಧ್ಯಮಯ ಹಾಗೂ ಧಾರ್ಮಿಕ ಪತ್ರಿಕೆಗಳು ತಮ್ಮ ಅಸ್ತಿತ್ವದ ಹೆಜ್ಜೆಗುರುತುಗಳನ್ನು ಬಿಟ್ಟುಹೋಗಿವೆ.

ಸುಮಾರು ಏಳುವರೆ ದಶಕಗಳಿಗೂ ಮೇಲ್ಪಟ್ಟು ನಿರಂತರವಾಗಿ ಪ್ರಕಟಗೊಳ್ಳುತ್ತಿರುವ ಮಹತ್ವದ ಪತ್ರಿಕೆ ‘ಮೊಗವೀರ’. ಮುಂದೆ ಅದರ ಜತೆಗೂಡಿದ ಬಂಟರವಾಣಿ, ಪತ್ರಪುಷ್ಪ, ಅಕ್ಷಯ, ಗೋಕುಲವಾಣಿ, ನೇಸರು, ಬೆಳಕು, ಹವ್ಯಕ ಸಂದೇಶ, ಗುರು ನರಸಿಂಹವಾಣಿ, ಸ್ನೇಹ ಸಂಬಂಧ, ಸಾಫಲ್ಯ, ಅಮೂಲ್ಯ, ಸ್ನೇಹ ಸೌರಭ, ತೀಯಾ ಬೆಳಕು, ಗುರುತು, ಕಲ್ಯಾಣ ದಪರ್ಣ, ಸಂಕಲನ ಮೊದಲಾದ ಮುಖವಾಣಿಗಳಲ್ಲದೆ ಸಮಗ್ರ ಪತ್ರಿಕೆ, ಚಿಗುರು, ಪ್ರೇಮ ಪ್ರಭ, ಮನಃ ಸ್ಪಂದನ, ನೂತನ, ಶ್ರೀಸತ್ಯ, ಯಶಸ್ವಿ ವ್ಯಕ್ತಿ, ಛಾಯಾಕಿರಣ ಮೊದಲಾದ ನಿಯತಕಾಲಿಕೆಗಳು ತಮ್ಮ ಕೊಡುಗೆಯನ್ನು ನೀಡಿದವು. ಕೆಲವೊಂದು ವಿಶೇಷಾಂಕಗಳಾದ ದೀಪಮಾಲೆ, ಸಂಕೇತ, ಪ್ರಯೋಗ, ಶಿಶಿರ, ಇದು ಮುಂಬೈವಾಣಿ, ವಿಜೇತ, ಚಿಗುರು, ತಾಯಿನುಡಿ, ಮೊಗವೀರ, ಬಂಟರವಾಣಿ, ಕರ್ನಾಟಕ ಮಲ್ಲ ಇತ್ಯಾದಿಗಳು ವೈಚಾರಿಕವಾಗಿ, ಸಾಹಿತ್ಯಕವಾಗಿ ನೀಡಿದ ಕೊಡುಗೆ ಅನುಪಮ. ಸೃಜನವೇದಿ, ಮುಂಬೆಳಕು ಮುಂತಾದ ಸಾಹಿತ್ಯ ಪತ್ರಿಕೆಗಳು ಇಲ್ಲಿ ಮಿಂಚಿ ಮಾಯವಾಗಿವೆ. ತುಳುಕುಮಾರ್, ಪಯ್ಣರಿ, ಕುಟಾಮ್, ದಿವೋ ಇತ್ಯಾದಿ ತುಳು-ಕೊಂಕಣಿ(ಕನ್ನಡ ಲಿಪಿ) ಪತ್ರಿಕೆಗಳು ಇಲ್ಲಿ ಕನ್ನಡದ ಕಂಪನ್ನು ಪಸರಿಸಿವೆ. ಕಳೆದ ಶತಮಾನದ ತೊಂಭತ್ತರ ದಶಕದಲ್ಲಿ ಇಲ್ಲಿಂದ ಬೆಳಕು ಕಾಣಲು ಪ್ರಾರಂಭಿಸಿದ ಉದಯರಾಗ, ಕರ್ನಾಟಕ ಮಲ್ಲ, ಉದಯ ದೀಪ, ಈ ಸಂಜೆ ಸುದ್ದಿ, ನಿತ್ಯವಾಣಿ, ಉದಯವಾಣಿ, ದೆಹಲಿ ವಾರ್ತೆ ಪತ್ರಿಕೆಗಳು ಸೇರಿಕೊಂಡು ಒಂದು ಇತಿಹಾಸ ನಿರ್ಮಾಣಗೊಳ್ಳಲು ಪ್ರಾರಂಭವಾಯಿತು.

-2-
ಸುದೀರ್ಘ ಕಾಲದ ಮುಂಬೈ ಕನ್ನಡಿಗರ ಇತಿಹಾಸದಲ್ಲಿ ಮೇಲ್ಕಾಣಿಸಿದ ಪತ್ರಿಕೆಗಳು ಹಾಗೂ ಇಲ್ಲಿನ ಕನ್ನಡಿಗ ಪತ್ರಕರ್ತರ ಪಾತ್ರವು ಬಹಳ ಮುಖ್ಯವಾದುದು. ಆದರೆ ಈ ದೀರ್ಘಕಾಲದ ಕನ್ನಡಿಗ ಪತ್ರಕರ್ತರ ಬದುಕು ವರ್ಣರಂಜಿತವಲ್ಲ; ಕರುಣಾಜನಕ.

ನ್ಯಾಯಾಂಗ, ಕಾರ್ಯಾಂಗ, ರಾಜ್ಯಾಂಗಗಳಂತೆ ‘ಪತ್ರಿಕಾರಂಗ’ವು ಒಂದು ರಾಷ್ಟ್ರದ ಸ್ತಂಭ ಇದ್ದಂತೆ. ಜಾಗತೀಕರಣದ ಸುಳಿಗಾಳಿಯಲ್ಲಿ ಎಲ್ಲವೂ ತತ್ತರಿಸುತ್ತಿದೆ. ಅದಕ್ಕೆ ಪತ್ರಿಕಾರಂಗ ಹೊರತಾಗಿಲ್ಲ. ಅದೂ ಕೂಡ ಇಂದು ಉದ್ಯಮವಾಗಿದೆ. ದೀನದಲಿತರ, ಅಸಹಾಯಕರ, ಜನಸಾಮಾನ್ಯರ ಧ್ವನಿಯಾಗಬೇಕಾದ ಪತ್ರಿಕೆಗಳು ಏಕಪಕ್ಷೀಯವಾಗಿ ನಿಲುವು ತಾಳುತ್ತಿರುವುದನ್ನು ಗಮನಿಸಿದ್ದೇವೆ. ಆಡಳಿತ ವರ್ಗಕ್ಕೆ ‘ಸುದ್ದಿ’ಗಿಂತ ‘ಜಾಹೀರಾತು’ ಮುಖ್ಯ ಅನಿಸಿದೆ. ಇಂತಹ ಸಂದಿಗ್ಧತೆಯಲ್ಲಿ ಅಲ್ಲಿ ದುಡಿಯುತ್ತಿರುವ ಪತ್ರಕರ್ತರು ಅತಂತ್ರರಾಗಿರುವುದು ಒಂದು ವಿಪರ್ಯಾಸ.

ಪತ್ರಿಕಾರಂಗದಲ್ಲಿ ಹಗಲು-ರಾತ್ರಿ ದುಡಿಯುತ್ತಿರುವ ಪತ್ರಕರ್ತರಲ್ಲಿ ಅಭದ್ರತೆ, ಅಸಹಾಯಕತೆ ಕಾಡುತ್ತಿರುವುದನ್ನು ಮನಗಂಡ ಓರ್ವ ಕ್ರಿಯಾಶೀಲ ಪತ್ರಕರ್ತ ರೋನ್ಸ್ ಬಂಟ್ವಾಳ ಇಲ್ಲಿನ ಎಲ್ಲಾ ಕನ್ನಡಿಗ ಪತ್ರಕರ್ತರನ್ನು (ಕನ್ನಡ ಲಿಪಿಯ ತುಳು-ಕೊಂಕಣಿ ಪತ್ರಿಕೆಗಳನ್ನು ಸೇರಿಸಿ) ಒಗ್ಗೂಡಿಸುವ, ಒಂದೇ ವೇದಿಕೆಯಲ್ಲಿ ತರುವ; ಆ ಮೂಲಕ ಕನ್ನಡಿಗ ಪತ್ರಕರ್ತರ ಧ್ವನಿಯಾಗುವ ಕನಸು ಕಂಡರು.

ಅದರ ಪ್ರಾಥಮಿಕ ಹಂತವಾಗಿ 8 ಜುಲೈ 2007ನೇ ರವಿವಾರದಂದು ಮುಂಬೈಯಲ್ಲಿ ಪ್ರಪ್ರಥಮ ಪತ್ರಿಕಾ ದಿನಾಚರಣೆಯನ್ನ್ನು ಆಯೋಜಿಸಲು ನಿಶ್ಚಯಿಸಿದರು. ಈ ಕಾರ್ಯಕ್ರಮ ಆಯೋಜಿಸುವ ಪೂರ್ವ ತಯಾರಿ ನಡೆಸುತ್ತಿದ್ದಂತೆ, ಇದೇ ಸೂಕ್ತ ಸಮಯ ಎಂದರಿತು ಅದೇ ದಿನ ‘ಪತ್ರಕರ್ತರ ವೇದಿಕೆ’ಯೊಂದನ್ನು ಸಂಘಟಿಸಲು ರೋನ್ಸ್ ಬಂಟ್ವಾಳ ಮುಂದಾದರು. ಈ ರೀತಿ ‘ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ’ದ ಉದಯವಾಯಿತು. ಪ್ರಥಮ ಪತ್ರಿಕಾ ದಿನಾಚರಣೆಯನ್ನು ಡಾ.ಸುನೀತಾ ಎಂ. ಶೆಟ್ಟಿ ಉದ್ಘಾಟಿಸಿದ್ದರೆ, ಕೆ.ಟಿ. ವೇಣುಗೋಪಾಲ್ ಅವರು ಅಂದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಹಾಗೂ ಹಿರಿಯ ಪತ್ರಕರ್ತರು ಹಾಗೂ ಗೌರವಾನ್ವಿತ ವ್ಯಕ್ತಿಗಳು ಅಂದಿನ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಹೀಗೆ ಹುಟ್ಟಿಕೊಂಡ ಸಂಸ್ಥೆಯು ಪತ್ರಕರ್ತರ ಒಗ್ಗಟ್ಟು ಹಾಗೂ ಅವರ ನೋವು-ನಲಿವುಗಳಿಗೆ ಸ್ಪಂದಿಸಲು ಪ್ರಾರಂಭಿಸಿತು. ಅಗತ್ಯವಿರುವ ಅಸಹಾಯಕ ಸದಸ್ಯರು ಹಾಗೂ ಅವರ ಕುಟುಂಬಕ್ಕೆ ಧನ ಸಹಾಯ, ಚಿಕಿತ್ಸಾ ಸೌಲಭ್ಯ, ಸದಸ್ಯ ಬಾಂಧವರಿಗೆ ವಸತಿ ನಿರ್ಮಾಣ, ಸದಸ್ಯರು ಹಾಗೂ ಕುಟುಂಬದವರಿಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಪತ್ರಿಕಾ ಕಮ್ಮಟಗಳ ಆಯೋಜನೆ, ಹಿರಿಯ ಹಾಗೂ ನುರಿತ ಪತ್ರಕರ್ತರಿಂದ ಅಥವಾ ತಜ್ಞರಿಂದ ಪತ್ರಿಕಾರಂಗಕ್ಕೆ ಸಂಬಂಧಿಸಿದಂತೆ ವಿಶೇಷ ಉಪನ್ಯಾಸಗಳ ಆಯೋಜನೆ, ವಿವಿಧ ಸಂಘ-ಸಂಸ್ಥೆಗಳ ಜತೆ ಸೇರಿ ವಿವಿಧ ಗೋಷ್ಠಿಗಳ ಕಾರ್ಯಕ್ರಮಗಳ ಆಯೋಜನೆ, ಸದಸ್ಯರು ಹಾಗೂ ಅವರ ಕುಟುಂಬಕ್ಕೆ ಇನ್ಶೂರೆನ್ಸ್, ಅಸಹಾಯಕ ಸದಸ್ಯರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವು ಇತ್ಯಾದಿ ಹತ್ತು ಹಲವು ಧ್ಯೇಯೋದ್ದೇಶಗಳೊಂದಿಗೆ ಪ್ರಾರಂಭಗೊಂಡ ‘ಕಪಸಮ’ವು ತನ್ನ ಸದಸ್ಯರಿಗಾಗಿ ವೈದ್ಯಕೀಯ ಶಿಬಿರ, ಕ್ರೀಡಾ ಕೂಟ, ಮುಂಬೈ ವಿಶ್ವವಿದ್ಯಾನಿಲಯ ಹಾಗೂ ವಿವಿದ ಸಂಘ ಸಂಸ್ಥೆಗಳ ಜತೆ ಸೇರಿ ಗೋಷ್ಠಿಗಳ, ಕಮ್ಮಟಗಳ ಆಯೋಜನೆಗಳನ್ನು ಅರ್ಥಪೂರ್ಣವಾಗಿ ಮಾಡಿದೆ.

‘ಕಪಸಮ’ವು ಈಗಾಗಲೇ ತನ್ನ ಸದಸ್ಯ ಬಾಂಧವರು ಉನ್ನತ ಶಿಕ್ಷಣ ಪಡೆಯಲು ಧನ ಸಹಾಯವನ್ನು, ಹಲವಾರು ಸದಸ್ಯರಿಗೆ ಹಾಗೂ ಕೆಲವರಿಗೆ ಚಿಕಿತ್ಸೆಗಾಗಿ ಸಹಾಯವನ್ನು ಮಾಡಿದೆ. ಇಲ್ಲಿ ಗಮನಿಸಲೇಬೇಕಾದ ಒಂದು ಅಂಶವೆಂದರೆ ಸಂಘದ ಗಟ್ಟಿ ಬೆನ್ನೆಲುಬಾಗಿ ನಿಂತಿರುವ ರೋನ್ಸ್ ಬಂಟ್ವಾಳ ತನ್ನಿಂದ ಹಾಗೂ ತನ್ನ ಆಪ್ತ ವಲಯದಿಂದ ದೊಡ್ಡ ಮೊತ್ತವನ್ನು ಸಂಗ್ರಹಿಸಿ ಅಸಹಾಯಕರ ಬೆಂಗಾವಲಿಗೆ ನಿಲ್ಲುವುದು ಗಮನಾರ್ಹ. ರಾಯನ್ ಟಿವಿ ಸ್ಟುಡಿಯೋದಲ್ಲಿ ಮಹತ್ವದ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದ ಕಪಸಮ 2012ರ ಜನವರಿ 26ರಂದು ಅಖಿಲ ಭಾರತ ಕನ್ನಡ ಪತ್ರಿಕಾ ಸಂಘಟನೆಗಳ ಪ್ರತಿನಿಧಿಗಳ ‘ಮಹಾಮಿಲನ’ ಕಾರ್ಯಕ್ರಮ, ದ್ವಿತೀಯ ಹಂತದಲ್ಲಿ ಪತ್ರಕರ್ತರ ಸಂಘಟನೆಗಳ ಕಾರ್ಯಾಗಾರ ಹಾಗೂ ವಿದ್ಯಾರ್ಥಿ ಪ್ರತಿಭಾ ವಿನಿಮಯ ಮೊದಲಾದ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಈ ನಡುವೆ ಮುಖ್ಯಮಂತ್ರಿ, ರಾಜ್ಯಪಾಲರು ಹಾಗೂ ವಿವಿಧ ಶಾಸಕರನ್ನು ಭೇಟಿಯಾಗಿದ್ದ ಕಪಸಮ ಕನ್ನಡ-ಮರಾಠಿ ಸೌಹಾರ್ದ ಸೇತುವೆಗೆ ಸಹಕಾರಿಯಾಗಿದೆ. ಅಲ್ಲದೆ ದಿನಚರಿ-ಮಾಹಿತಿ ಕೋಶವನ್ನೊಳಗೊಂಡ ಕಪಸಮ ಡೈರೆಕ್ಟರಿ ರೋನ್ಸ್ ಬಂಟ್ವಾಳರ ಕನಸಿನ ಕೂಸು. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾದುದನ್ನು ಗಮನಿಸಬಹುದು.

ಅಸೋಸಿಯೇಶನ್ ಆಫ್ ಮೆಡಿಕಲ್ ಕನ್ಸಲ್‌ಟೆಂಟ್ಸ್ (ಮುಂಬೈ) ಹಾಗೂ ಸಂಜೀವಿನಿ ಆಸ್ಪತ್ರೆಯ ಸಹಯೋಗದೊಂದಿಗೆ ನಡೆಸಿದ ಆರೋಗ್ಯ ತಪಾಸಣಾ ಶಿಬಿರ ಬಹಳ ಮಹತ್ವದ ಮೈಲುಗಲ್ಲುಗಳಲ್ಲಿ ಒಂದು. ಇದಕ್ಕೆ ಸಹಕಾರ ನೀಡಿದ ಡಾ.ಸುರೇಶ್ ಎಸ್.ರಾವ್, ಕಟೀಲು ಅವರನ್ನು ಅಧ್ಯಕ್ಷರು ಸದಾ ಸ್ಮರಿಸುತ್ತಾರೆ. ಅದೇ ಪ್ರೇರಣೆಯಾಗಿ ಮಹಾನಗರದ ವಿವಿಧ ಕನ್ನಡಿಗ ವೈದ್ಯರನ್ನು ಸಂಪರ್ಕಿಸಿ ಉಪನಗರಾದ್ಯಂತ ಇರುವ ಆಸ್ಪತ್ರೆಗಳಲ್ಲಿ ಉಚಿತ ಅಥವಾ ಕನಿಷ್ಠ ಮೊತ್ತದಲ್ಲಿ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಈಗಿನ ಸಮಿತಿ ಅಧ್ಯಕ್ಷರ ಮುಂದಾಳತ್ವದಲ್ಲಿ ಕಾರ್ಯತತ್ಪರವಾಗಿದೆ. ಆದರೆ ಕೊರೋನದಿಂದಾಗಿ ಇದರ ಅಂತಿಮ ಘಟ್ಟದ ತೀರ್ಮಾನಗಳು ಸ್ಥಗಿತಗೊಂಡಿವೆ.

ಪ್ರಾರಂಭದಿಂದಲೂ ಪತ್ರಕರ್ತರ ಭವನದ ಕನಸು ಕಂಡಿರುವ ಈಗಿನ ಅಧ್ಯಕ್ಷರಿಗೆ, ವಿಮಾನ ನಿಲ್ದಾಣದ ಹತ್ತಿರ ಸುಸಜ್ಜಿತ ಭವನವೊಂದು ನಿರ್ಮಾಣವಾಗಬೇಕೆಂಬ ಹಿರಿಯಾಸೆಯಿದೆ. ಅಲ್ಲಿ ಬೇರೆಡೆಗಳಿಂದ ಬರುವ ರಾಜಕೀಯ ಧುರೀಣರೊಂದಿಗೆ ಇಲ್ಲಿನ ಮಾಧ್ಯಮದವರನ್ನು ಸೇರಿಸಿ ವಿಶೇಷ ಪತ್ರಿಕಾಗೋಷ್ಠಿ, ಬೇರೆಡೆಯಿಂದ ಬರುವ ಕನ್ನಡ ಪತ್ರಕರ್ತರಿಗೆ ಉಳಿದುಕೊಳ್ಳುವ ವ್ಯವಸ್ಥೆ ಇತ್ಯಾದಿ ವೈಶಿಷ್ಟಗಳನ್ನು ಒಳಗೊಳ್ಳಬೇಕೆಂಬ ಕನಸು ಕಪಸಮದ್ದು. ಇದಕ್ಕಾಗಿ ಕೊರೋನ ಮುಕ್ತ ದಿನಗಳನ್ನು ಎದುರು ನೋಡುತ್ತಿರುವ ಅಧ್ಯಕ್ಷರು ಆನಂತರ ಕಟ್ಟಡ ಸಮಿತಿಯ ಕಾರ್ಯಧ್ಯಕ್ಷರಾದ ಡಾ. ಶಿವ ಮೂಡಿಗೆರೆ ಅವರೊಂದಿಗೆ ಚರ್ಚಿಸಿ ಕಾರ್ಯಪ್ರವೃತ್ತರಾಗುವ ಉದ್ದೇಶವನ್ನು ಹೊಂದಿದ್ದಾರೆ.

‘ಕಪಸಮ’ ಕೇವಲ ಮಹಾರಾಷ್ಟ್ರದ ಜನತೆಗೆ ಮಾತ್ರವಲ್ಲ, ಊರಿನ ಪತ್ರಕರ್ತರ ಆಪತ್ಕಾಲದಲ್ಲೂ, ಅಸೌಖ್ಯದ ಸಂದರ್ಭದಲ್ಲೂ ಸ್ಪಂದಿಸಿದೆ. ಪ್ರವಾಹ ಪೀಡಿತ ಸಂದರ್ಭದಲ್ಲಿ ಅಧ್ಯಕ್ಷರಾದ ರೋನ್ಸ್ ಬಂಟ್ವಾಳರ ಸಾರಥ್ಯದಲ್ಲಿ ಇಲ್ಲಿನ ಹಾಗೂ ಗುಜರಾತ್‌ನ ಮಹಾದಾನಿಗಳ, ಇಲ್ಲಿನ ಹಲವಾರು ಸಂಘ -ಸಂಸ್ಥೆಗಳ ನೆರವಿನಿಂದ ಸುಮಾರು ಇಪ್ಪತೈದು ಲಕ್ಷದಷ್ಟು ಮೊತ್ತದ ಅತ್ಯವಶ್ಯಕ ಸಾಮಗ್ರಿಗಳನ್ನು ಊರಿಗೆ ಕಳುಹಿಸಿದ್ದು ಮಾತ್ರವಲ್ಲದೆ, ಚಾರ್ಮಾಡಿ ಪ್ರಾಂತದಲ್ಲಿ ಪ್ರವಾಹ ಪೀಡಿತರಿಗೆ ದೈನಂದಿನ ಸಾಮಗ್ರಿಗಳನ್ನು ರವಾನಿಸಿದೆ. ಅದು ಪೀಡಿತರನ್ನು ತಲುಪಬೇಕು ಎನ್ನುವ ಕಾಳಜಿಯಿಂದ ಅದರ ವಿತರಣೆಯ ಉಸ್ತುವಾರಿಯನ್ನು ಸ್ಥಳೀಯ ಪತ್ರಕರ್ತರ ಸಹಕಾರದೊಂದಿಗೆ ನಿಭಾಯಿಸಿದ್ದು ಅರ್ಥಪೂರ್ಣ.

ಕೊರೋನ ಸಂಕಟದಿಂದ ಜನಕೋಟಿ ತತ್ತರಿಸಿದ ಸಂದರ್ಭ ಸ್ಪಂದಿಸಿದ ‘ಕಪಸಮ’ ತನ್ನ ಸದಸ್ಯ ಬಾಂಧವರಲ್ಲಿ ಅಗತ್ಯ ಬಿದ್ದವರಿಗೆ ಸುಮಾರು ಮೂರು ಲಕ್ಷದಷ್ಟು ಧನ ಸಹಾಯ ನೀಡಿ ಅವರಲ್ಲಿ ಹೊಸ ಉತ್ಸಾಹವನ್ನು ಮೂಡಿಸಿದೆ. ಕೆಲ ಸದಸ್ಯರು ನಿಧನ ಹೊಂದಿದಾಗ ಅವರ ಕುಟುಂಬಕ್ಕೆ ಇಪ್ಪತೈದು ಸಾವಿರ ಮೊತ್ತವನ್ನು ನೀಡಿ ಮಾನವೀಯತೆ ಮೆರೆದಿದೆ. ಈ ಮೊತ್ತ ಕಡಿಮೆ ಅಂದೆನಿಸಿದರೂ ಆ ಕುಟುಂಬಕ್ಕೆ ತಮ್ಮ ಹಿಂದೆ ಸಂತೈಸುವ ಕೈಯೊಂದಿದೆ ಎನ್ನುವ ಅಪ್ಯಾಯಮಾನವನ್ನು ಉಂಟುಮಾಡುವುದಂತೂ ನಿಜ.

ಕೇವಲ ಹದಿಮೂರು ವರ್ಷಗಳ ಪುಟ್ಟ ಹೆಜ್ಜೆಗಳನ್ನು ತುಳಿದಿರುವ ‘ಕಪಸಮ’ದ ಪ್ರಾರಂಭದ ಹತ್ತು ವರ್ಷ, ಪ್ರಥಮ ಪತ್ರಿಕೆ ದಿನಾಚರಣೆಯ ಸಂದರ್ಭ ಗೌರವ ಅತಿಥಿಗಳಲ್ಲಿ ಓರ್ವರಾಗಿದ್ದ ಚಂದ್ರಶೇಖರ್ ಪಾಲೆತ್ತಾಡಿಯವರು ಅಧ್ಯಕ್ಷರಾಗಿದ್ದರು. ಸಂಘದ ದಶಮಾನೋತ್ಸವದ ನಂತರ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಿದ ರೋನ್ಸ್ ಬಂಟ್ವಾಳರಿಗೆ ಬೆನ್ನೆಲುಬಾಗಿ, ರಂಗ ಪೂಜಾರಿ (ಉಪಾಧ್ಯಕ್ಷ) ಅಶೋಕ ಸುವರ್ಣ(ಗೌ. ಪ್ರಧಾನ ಕಾರ್ಯದರ್ಶಿ) ರವೀಂದ್ರ ಶೆಟ್ಟಿ (ಗೌ.ಕಾರ್ಯದರ್ಶಿ) ನಾಗೇಶ್ ಪೂಜಾರಿ (ಗೌ. ಕೋಶಾಧಿಕಾರಿ), ಜಯರಾಮ ಎನ್. ಶೆಟ್ಟಿ (ಜತೆ ಕಾರ್ಯದರ್ಶಿ) ಡಾ.ಜಿ.ಪಿ. ಕುಸುಮಾ (ಜತೆ ಕೋಶಾಧಿಕಾರಿ) ಡಾ.ಶಿವ ಮೂಡಿಗೆರೆ (ಭವನ ಸಮಿತಿಯ ಕಾರ್ಯಾಧ್ಯಕ್ಷ) ಇವರೆಲ್ಲ ಇದ್ದರೆ, ಬೆಂಗಾವಲಾಗಿ ಸರ್ವ ಸಮಿತಿ ಸದಸ್ಯರ ಸಲಹೆ, ಸಹಕಾರ ಇದೆ ಎಂದು ಅಧ್ಯಕ್ಷರು ಹೆಮ್ಮೆಯಿಂದ ಅವರಿಗೆ ಗೌರವ ಸೂಚಿಸುತ್ತಾರೆ ಮತ್ತು ಮುಖ್ಯವಾಗಿ ಲೆಕ್ಕಪರಿಶೋಧಕರು, ಗೌರವಾನ್ವಿತ ವಕೀಲರು, ಹೆಸರಾಂತ ವೈದ್ಯರು, ಸಮಾಜ ಸೇವಕರು, ಡಾ. ಸುನೀತಾ ಎಂ. ಶೆಟ್ಟಿ ಅವರಂತಹ ಹಿರಿ ಜೀವಗಳು ಕಪಸಮದ ಸಲಹಾ ಸಮಿತಿಯಲ್ಲಿದ್ದು ಸಂಘದ ಏಳಿಗೆಗೆ ಆಗಾಗ ಸಲಹೆ ಸೂಚನೆಗಳನ್ನು ನೀಡುತ್ತಾ ಬಂದಿದ್ದಾರೆ.

ವಿಶೇಷ ಶುಶ್ರೂಷೆಯ ಅಧಿಕೃತ ಐ-ಕಾರ್ಡನ್ನು ಸಂಘದ ಸದಸ್ಯರಿಗೆ ನೀಡಿಲಾಗಿದೆ. ಪತ್ರಕರ್ತರಿಗಾಗಿ ರೈಲಿನಲ್ಲಿ ಉಚಿತ ಅಥವಾ ರಿಯಾಯಿತಿ ದರದಲ್ಲಿ ವರ್ಷಕ್ಕೊಮ್ಮೆ ಅಥವಾ ಅತ್ಯವಶ್ಯಕ ಸಂದರ್ಭದಲ್ಲಿ ಪ್ರಯಾಣಿಸುವುದಕ್ಕೆ ಅವಕಾಶ ಒದಗಿಸಬೇಕೆಂದು ರೈಲು ಸಚಿವಾಲಯದ ಜೊತೆ ಮಾತುಕತೆ ನಡೆದಿದೆ. ಖಾಸಗಿ ಬಸ್ ಹಾಗೂ ಕೆಎಸ್‌ಆರ್‌ಟಿಸಿಗಳೂ ಪತ್ರಕರ್ತರಿಗೆ ಪ್ರಾಶಸ್ತ್ಯ ನೀಡುವುದಕ್ಕಾಗಿ ಮಾತುಕತೆಗಳು ನಡೆದಿವೆ. ಬಹಳ ಮುಖ್ಯ ಯೋಜನೆಯಾಗಿರುವ ಅನಾರೋಗ್ಯ ಪೀಡಿತ ಪತ್ರಕರ್ತರ ಹಾಗೂ ಅವರ ಕುಟುಂಬದವರ ಶುಶ್ರೂಷೆಗಾಗಿ ಈಗಾಗಲೇ ಕೆಲವೊಂದು ಆಸ್ಪತ್ರೆಗಳ ಜೊತೆ ಮಾತುಕತೆ ಆಗಿದ್ದು, ಇನ್ನು ಕೆಲವೊಂದು ಆಸ್ಪತ್ರೆಗಳಲ್ಲಿ ಮಾತುಕತೆಗಳಾಗಬೇಕಾಗಿತ್ತು. ಕೊರೋನದಿಂದಾಗಿ ಈ ಎಲ್ಲಾ ಕೆಲಸಗಳು ನಡು ಹಾದಿಯಲ್ಲಿ ನಿಂತಿವೆ. ಅಪೂರ್ಣವಾದ ಈ ಎಲ್ಲ ಕೆಲಸಗಳೂ ಆದಷ್ಟು ಶೀಘ್ರ ಪೂರ್ಣಗೊಂಡು ಪತ್ರಕರ್ತರ ನೋವಿಗೆ ಮತ್ತಷ್ಟು ಸ್ಪಂದಿಸುವ ಶಕ್ತಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರಕ್ಕೆ ಬರಲಿ ಎಂಬ ಆಶಯ ನಮ್ಮೆಲ್ಲರದ್ದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)