ಮೊಳೆಯೇ ಸತ್ಯ, ಮೊಳೆಯೇ ನಿತ್ಯ
ಅಕಟಕಟಾ...
ದೇಹದ ಯಾವುದೋ ಭಾಗಕ್ಕೆ ಮುಳ್ಳಿನಂಥದು ಚುಚ್ಚಿದಂತೆ ಅನ್ನಿಸಿ ಸುಷುಪ್ತಿಯಲ್ಲಿದ್ದ ಭರತಮಾತೆಗೆ ಎಚ್ಚರವಾಯಿತು. ನೋಡಿದರೆ ಕಾಲಿಗೆ ಸಮಾ ಮೊಳೆ ಹೊಡೆದಿದ್ದಾರೆ. ನೋವು ತಡೆಯಲಾಗದೇ ಚೀರಬೇಕೆಂದರೆ ಬಾಯಿತೆರೆಯಲಾಗಲಿಲ್ಲ. ಅಕ್ಕಪಕ್ಕದಲ್ಲಿ ನಿಂತ ಬಾಲಿವುಡ್ ತಾರಾಮಣಿಗಳು, ಕ್ರಿಕೆಟ್ ಕಲಿಗಳು, ಇನ್ನಿತರ ಮುಕುಟಮಣಿಗಳು ಭರತಮಾತೆಯ ಬಾಯಿಗೊಂದು ಅಗೋಚರ ಪಟ್ಟಿ ಕಟ್ಟಿ, ತಾವೇ ಅವಳ ಗಂಟಲಿನೊಡೆಯರು ಆಗಿ, ‘ನಮ್ಮ ಮಾತೆಯ ಸುದ್ದಿಗೆ ಬಂದರೆ ಹುಷಾರ್’ ಎಂದು ಹೇಷಾರವ ಎಬ್ಬಿಸಿದ್ದಾರೆ.
‘ಏನಿದೇನಿದು... ಕನಸೇ... ನನಸೇ’ ಎಂದು ಭರತಮಾತೆ ಯೋಚಿಸುವಷ್ಟರಲ್ಲಿ ಇಂಥವೆಲ್ಲ ಕನಸುಗಳ ನನಸು ಮಾಡಿದ ಸರದಾರ ಚೌಕೀದಾರ ಪಕ್ಕದಲ್ಲಿ ಕಾಣಿಸಿಕೊಂಡರು. ಮಾರುದ್ದ ಗಡ್ಡಬಿಟ್ಟು ಥೇಟ್ ಯೋಗಿ ಕಳೆಯಲ್ಲಿ ಮಿನುಗುತಿಹ ಚೌಕೀದಾರ ಪುತ್ರನನ್ನು ಕಂಡಿದ್ದೇ ಭರತಮಾತೆಯ ಕೊರಳುಬ್ಬಿ ಬಂದಿತು. ‘‘ಅಕಟಕಟಾ... ಏನಿದೇನಿದು ಪುತ್ರಾ... ಈ ಪರಿಯ ವಿರಾಗವೇತಕೆ... ಗಡ್ಡಹೆರೆಯಲೂ ಸಮಯವಿಲ್ಲವೇ... ಬಣ್ಣಬಣ್ಣದ ಅಂದಚಂದದ ನಿನ್ನ ರುಮಾಲುಗಳು ಎಲ್ಲಿ ಹೋದವು?’’ ಎಂದು ಅಕ್ಕರೆಯಿಂದ ಕೇಳಿದಳು.
‘‘ಏನು ಹೇಳಲಿ ಮಾತೆ...ಹೊರಬ್ರಹ್ಮಾಂಡದ ಸಕಲ ಚರಾಚರಗಳು ನಮ್ಮನೆಯ ಆಂತರಿಕ ಸುದ್ದಿಗೆ ಕೈಹಾಕಿವೆ... ನಾವು ಸಕಲಚರಾಚರಗಳ ಆಗುಹೋಗುಗಳ ಕುರಿತು ಅಣಿಮುತ್ತು ಉದುರಿಸಬಹುದೇ ವಿನಃ ಅವರು ನಮ್ಮ ಕುರಿತಲ್ಲ. ಗಡಿಯಾಚೆಯ ಚೀನೀಯರ ಚಿಂತೆ ಎನಗಿಲ್ಲ. ಗಡಿಯೀಚೆಯ ಜ್ವಲಂತ ಸಮಸ್ಯೆಗಳ ಚಿಂತೆಯೂ ಎನಗಿಲ್ಲ. ಹೊಲಗದ್ದೆಯೊಳು ಬೆವರು, ರಕ್ತ ಸುರಿಸುವ ಬದಲಿಗೆ ರಾಜಧಾನಿ ಗಡಿಯೊಳು ಸುಖಾಸುಮ್ಮನೆ ಕೂತಿಹ ರೈತಜನರದ್ದೇ ಚಿಂತೆಯಾಗಿದೆ. ರೈತಮಕ್ಕಳ ಕೈಗೆ ಅ-ಅದಾನಿ, ಅಂ-ಅಂಬಾನಿ ಎಂಬೋ ನವವರ್ಣಮಾಲೆಯ ಕೊಟ್ಟು, ಹೊಲಗದ್ದೆಗಳ ಮೇಲೆ ಕಾರ್ಪೊರೇಟಿಂಡಿಯಾದ ನವನಕಾಶೆ ಅಂಟಿಸಲು ಹೊರಟಿರುವೆ... ಆಶೀರ್ವದಿಸು ಮಾತೆಯೇ’’ ಚೌಕೀದಾರರು ಅಗದಿ ಭಕ್ತಿಯಿಂದ ಬೇಡಿಕೊಂಡರು.
‘‘ಆದರೆ ಏನಿದು ಪುತ್ರಾ... ನನ್ನ ಕಾಲುಗಳಿಗೇಕೆ ಮೊಳೆ ಹೊಡೆದಿಹರು?’’ ಮಾತೆ ನೋವಿನಿಂದ ಮುಲುಗುಟ್ಟಿದಳು. ‘‘ಇನ್ನೀಗ ಉತ್ತರೋತ್ತರ ಅಭಿವೃದ್ಧಿ ಶಕೆ, ಇಲ್ಲೀಗ ಎಲ್ಲ ಪ್ರಶ್ನೆಗಳಿಗೂ ಮೊಳೆ ಜಡಿಯಲಾಗುವುದು... ದೇಶದೆಲ್ಲೆಡೆ ಮೊಳೆ ಕಾರ್ಖಾನೆ ಸ್ಥಾಪಿಸಲಾಗುವುದು. ಇನ್ನೀಗ ಮೊಳೆಯೇ ಸತ್ಯ, ಮೊಳೆಯೇ ನಿತ್ಯ...ಬ್ಯಾರಿಕೇಡು, ಬಲೆಗಳೇ ನಮ್ಮ ಅಸ್ತ್ರ...’’ ಚೌಕೀದಾರರ ಘನಗಂಭೀರ ವಿನಮ್ರ ವಿವರಣೆ ಕೇಳುತ್ತ ಮಾತೆ ಮೂರ್ಛೆ ಹೋದಳು.
***
ಆಂದೋಲನ್ ಜೀವಿಗಳಿವೆ... ಕಟ್ಟೆಚ್ಚರ!
ಎಚ್ಚರ... ದೇಶವಾಸಿಗಳೇ ಮತ್ತು ದೇಶಪ್ರೇಮಿಗಳೇ ಕಟ್ಟೆಚ್ಚರ...! ಭರತಮಾತೆಯ ಮಡಿಲಲ್ಲಿ ಹೊಸಬಗೆಯ ಜೀವಿಗಳನ್ನು ಕಂಡುಹಿಡಿಯಲಾಗಿದೆ! ಇವು ಪರಾವಲಂಬಿ ಜೀವಿಗಳಾಗಿದ್ದು, ‘ಫಾರಿನ್ ಡಿಸ್ಟ್ರಕ್ಟಿವ್ ಐಡಿಯಾಲಜಿ’ ಅಂದರೆ ‘ವಿದೇಶೀ ವಿಧ್ವಂಸಕ ಸಿದ್ಧಾಂತ’ದಿಂದ ತಮ್ಮ ಪೋಷಕ ಶಕ್ತಿಯನ್ನು ಪಡೆದುಕೊಳ್ಳುತ್ತಿವೆ... ಕಲಿಯುಗದೊಳು ಎಮ್ಮೆಲ್ಲರನ್ನು ಕಾಪಾಡಿ, ಸಲಹಲೆಂದೇ ಕೃಷ್ಣ, ವಿಷ್ಣುಗಳ ರೂಪದೊಳು ಅವತಾರಗೈದಿಹ ಚೌಕೀದಾರರು ತಮ್ಮ ಬಹಳೇ ವರ್ಷಗಳ ಸಂಶೋಧನಾ ಫಲಿತಾಂಶವನ್ನು ಇತ್ತೀಚೆಗೆ ಸಂಸತ್ತಿನೊಳು ಪ್ರಕಟಿಸಿರುವರು. ರಾಜಧಾನಿ ಗಡಿಯೊಳು ಎರಡು ಮೂರು ತಿಂಗಳುಗಳಿಂದ ಪ್ರತಿಭಟಿಸುತ್ತಿಹ ಕೂಗುಮಾರಿಗಳೇ ಈ ಹೊಸಬಗೆಯ ಜೀವಿಗಳು... ಅವು ‘ಆಂದೋಲನ್ ಜೀವಿಗಳು’.
ಈ ಪರಾವಲಂಬಿಜೀವಿಗಳಿಂದ ದೇಶಪ್ರೇಮಿಗಳೇ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ ಮತ್ತು ನಮ್ಮ ಮಹಾನ್ ದೇಶವನ್ನು ರಕ್ಷಿಸಿ ಎಂದು ಚೌಕೀದಾರರು ಕರೆನೀಡಿದ್ದಾರೆ. ಆದಾಗ್ಯೂ ಚೌಕೀದಾರರ ಈ ಹೊಸ ಸಂಶೋಧನೆಗೆ ನೊಬೆಲ್ ಅಲ್ಲದಿದ್ದರೆ, ಇಗ್ನೊಬೆಲ್ ಪ್ರಶಸ್ತಿಯನ್ನಾದರೂ ಈಗಿಂದೀಗಲೇ ಪ್ರಕಟಿಸಬೇಕೆಂದು ಸಮಸ್ತ ಭಕ್ತಗಣವು ಈಗಾಗಲೇ ನೊಬೆಲ್ ಮತ್ತು ಇಗ್ನೊಬೆಲ್ ಪ್ರಶಸ್ತಿ ಸಮಿತಿಗೆ ಹಕ್ಕೊತ್ತಾಯ ಮಂಡಿಸಿದೆ ಎಂಬ ಅಗದಿ ಭಯಂಕರ ಖುಷಿಯ ಸಂಗತಿಯನ್ನೂ ವಿಶ್ವಾಸಾರ್ಹ ಮೂಲಗಳು ದೃಢಪಡಿಸಿವೆ. ಮುಂಬರುವ ದಿನಗಳಲ್ಲಿ ಎಲ್ಲೆಡೆ ‘ಆಂದೋಲನ್ ಜೀವಿಗಳು’ ಕಾಣಿಸಿಕೊಳ್ಳುವ ಅಪಾಯವಿದೆ... ಎಚ್ಚರ... ದೇಶವಾಸಿಗಳೇ ಮತ್ತು ದೇಶಪ್ರೇಮಿಗಳೇ ಕಟ್ಟೆಚ್ಚರ...!