ಬಗೆ ಬಗೆಯ ಬಣ್ಣಗಳ ಭಾವದೇವಿಯ ಹೂವುಗಳು ‘ನನ್ನೊಳಗಿನ ಕವಿತೆ’
ರೈನರ್ ಮಾರಿಯಾ ರಿಲ್ಕ್ ಎನ್ನುವ ಕವಿ ಹೇಳುತ್ತಾನೆ ‘‘ಪ್ರೀತಿ ಎನ್ನುವುದು ವ್ಯಕ್ತಿಯು ಮಾಗುವುದಕ್ಕೆ, ಮತ್ತೊಬ್ಬ ವ್ಯಕ್ತಿಗಾಗಿ ತನ್ನೊಳಗೆ ತಾನೇ ಏನೋ ಆಗುವುದಕ್ಕೆ, ಮತ್ತೊಬ್ಬರಿಗಾಗಿ ತಾನೇ ಇಡೀ ಲೋಕವಾಗುವುದಕ್ಕೆ ಒಂದು ಆಹ್ವಾನ.’’ ರಿಲ್ಕ್ ಪ್ರೀತಿ ಕುರಿತಾಗಿ ಹೇಳಿರುವ ಮಾತನ್ನು ನಾವು ಕಾವ್ಯದ ಕುರಿತಾಗಿಯೂ ಅನ್ವಯಿಸಿಕೊಳ್ಳಬಹುದು. ಕಾವ್ಯ ಬೇಸಾಯ ಸಹ ನಮ್ಮನ್ನು ಒಳಗನ್ನು ವಿಸ್ತರಿಸಿಕೊಳ್ಳುತ್ತ ಇಡೀ ಲೋಕವಾಗುವ ಪ್ರಕ್ರಿಯೆಗೆ ಅಣಿಗೊಳಿಸುತ್ತದೆ. ಶತಶತಮಾನಗಳಿಂದ ಹಿಂದಿನ ಅನುಭವಗಳೆಲ್ಲ ಈ ಕಾಲದವರೆಗೆ ಹರಿದು ಬಂದಿರುವುದು ಅಕ್ಷರದ ಮೂಲಕ ಅದರಲ್ಲೂ ಕಾವ್ಯದ ಮೂಲಕ. ಆದ್ದರಿಂದ ಕಾವ್ಯದ ಹುಟ್ಟು ಹೇಗೋ ಹಾಗೆಯೇ ಕಾವ್ಯದ ಓದೂ ವಿಸ್ಮಯದ ಸಂಗತಿ. ಪಂಪ ಹೇಳಿರುವಂತೆ ‘‘ಇದು ನಿಚ್ಚಂ ಪೊಸತು ರ್ಣವೊಂಬಲ್’’ ಸಾಗರವು ಯಾವಾಗಲೂ ಬತ್ತದೇ ಇರುವುದರಿಂದ ಅದು ಪ್ರಾಚೀನ. ಹಾಗೆಯೇ ಪ್ರತಿಕ್ಷಣವೂ ಹೊಸ ನೀರು ಸಮುದ್ರಕ್ಕೆ ಸೇರುತ್ತಲೇ ಇರುವುದರಿಂದ ಅದು ನೂತನ. ಅದೇ ರೀತಿ ಕಾವ್ಯ ಕೂಡ ಕಾಲದ ಪರಿವೆಯಿಲ್ಲದೇ ಯಾವಾಗಲೂ ಪ್ರಸ್ತುತವಾಗಿರುತ್ತದೆ. ಗೋಕಾಕ ಮೂಲದವರಾಗಿದ್ದು ಈಗ ಧಾರವಾಡದ ಪಶು ಸಂಗೋಪನಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಶ್ಫಾಕ್ ಪೀರಜಾದೆಯವರ ‘ನನ್ನೊಳಗಿನ ಕವಿತೆ’ಗಳನ್ನು ಓದಿದಾಗ ಕಾವ್ಯಸಾಗರದ ಈಸುಬೀಸುಗಳ ಹರಹು ಮತ್ತು ವಿಸ್ತಾರದ ನೆನಪಾಗುತ್ತದೆ. ವರಕವಿ ದತ್ತಾತ್ರೇಯ ಬೇಂದ್ರೆಯವರ ಮಾತಿನಲ್ಲಿ ಹೇಳುವುದಾದರೆ,
ಕವಿಯು ಮಾನಸಪುತ್ರ ಅವನು ಆಗಸದೇಹಿ
ಮಾತಿನಲೆ ಮೂಡುವನು ಭಾವಜೀವಿ
ಮೈಯಾಚೆ ಉಸಿರಾಚೆ
ಬಗೆಯ ಬಣ್ಣಗಳಾಚೆ
ಅವನ ಹೂವರಳುವುದು ಭಾವದೇವಿ
ಅಶ್ಫಾಕ್ ಕವಿತೆಗಳಲ್ಲಿ ಬಗೆ ಬಗೆಯ ಬಣ್ಣಗಳ ಭಾವದೇವಿಯ ಹೂವರಳಿರುವುದನ್ನು ನೋಡಬಹುದು.
ಉದಾಹರಣೆಗೆ,
ಯಾರು ತುಳಿದರೂ ತಕರಾರಿಲ್ಲದೆ ಕೊನರಲು ಕಾತರಿಸುವ ಗರಿಕೆ ಹುಲ್ಲು
ಕವಿಯಾದವನು ಜನಸಾಮಾನ್ಯರು ಉಪಯೋಗಿಸುವ ಭಾಷೆಯನ್ನು ಬಳಸಿಕೊಂಡು ತಾನು ನಿತ್ಯ ಕಾಣುವ ಸಂಗತಿಗಳಲ್ಲಿಯೇ ಹೊಸದೊಂದು ಹೊಳಹನ್ನು ಕಾಣುವುದು ಮತ್ತು ಕಾಣಿಸುವುದು ಖಂಡಿತವಾಗಿಯೂ ಒಂದು ಸವಾಲೇ ಸರಿ. ಈ ಸವಾಲನ್ನು ಕವಿ ಎಷ್ಟರ ಮಟ್ಟಿಗೆ ಸಾಕಾರಗೊಳಿಸಿರುತ್ತಾನೋ ಅಷ್ಟರಮಟ್ಟಿಗೆ ಅವನ ಕಾವ್ಯ ಕಸುಬು ಕುಸುರಿಗೊಳ್ಳುತ್ತದೆ. ರಸಋಷಿ ಕುವೆಂಪು ಅವರು ಹೇಳಿರುವಂತೆ,
ಉದಯದೊಳೇನ್ ಹೃದಯವ ಕಾಣ್
ಅದೆ ಅಮೃತದ ಹಣ್ಣೊ
ಶಿವನಿಲ್ಲದ ಕವಿ ಕುರುಡನೊ
ಕವಿ ಕಾವ್ಯದ ಕಣ್ಣೊ
ಅಶ್ಫಾಕ್‌ರ ಕೆಲವು ಕವಿತೆಗಳನ್ನು ಓದಿದಾಗ ಈ ಮಾತಿಗೆ ಪುರಾವೆ ಸಿಗುತ್ತದೆ.
ನದಿಗೆ ಕಾಲಿಲ್ಲ
ಶರವೇಗದ ಶಕ್ತಿ
ಗಾಳಿಗೆ ರೆಕ್ಕೆಗಳಿಲ್ಲ
ಹಾರುವ ಯುಕ್ತಿ
ಮನುಷ್ಯನಿಗೇನೂ ಇಲ್ಲ
ಮೈತುಂಬ ಅಹಂಕಾರ
ಲೋಕ ಜಾಗರದ ಜಾತ್ರೆಯಲ್ಲಿ ನೂರೆಂಟು ಜಂಜಾಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದಂದುಗದ ವ್ಯಸನಕ್ಕಿಳಿದಿರುವ ನಮ್ಮೆಲ್ಲರ ಅಂತಃಕರಣದ ತೋಟ ಬಾಡದಂತೆ ಉಳಿಸಿಕೊಳ್ಳಬೇಕೆಂದರೆ ಕವಿತೆಯ ಮಳೆ ಆಗಾಗ ಸುರಿಯುತ್ತಿರಬೇಕು. ಪ್ರತಿಯೊಬ್ಬ ಆಧುನಿಕ ಮನುಷ್ಯನು ಕಾಂಚಣದ ಹಿಂದೆ, ಕೀರ್ತಿಯ ಹಿಂದೆ, ಸಿದ್ಧಿ-ಪ್ರಸಿದ್ಧಿಯ ಹಿಂದೆ ಬಿದ್ದು ಓಡುವುದರಲ್ಲಿ ತಲ್ಲಿನನಾಗಿದ್ದಾನೆ. ಅವನನ್ನು ಕರೆದು ಜೀವ ಮಂತ್ರವನ್ನು ಕಿವಿಯಲ್ಲಿ ಉಸುರಬೇಕಿದೆ. ಅಶ್ಫಾಕ್ ತಮ್ಮ ನನ್ನೊಳಗಿನ ಕವಿತೆಯ ಸಾಲಿನಲ್ಲಿ ಹೇಳುವ ಮಾತು ತುಂಬಾ ಪ್ರಸ್ತುತವಾಗಿದೆ.
ಉಸಿರು ಉಸಿರಿಗೂ ಶತೃಗಳು ಇಲ್ಲಿ
ನಿನ್ನೊಳಗಿನ ಮಗು ಕಾಪಿಟ್ಟುಕೊಳ್ಳಬೇಕು
ತನ್ನ ಸುತ್ತಲಿನ ಆಗುಹೋಗುಗಳಿಗೆ ತೀವ್ರವಾಗಿ ಪ್ರತಿಕ್ರಿಯೆ ನೀಡುವ ಪ್ರತಿಸ್ಪಂದನ ಗುಣವನ್ನು ಕ್ರಿಯಾಶೀಲವಾಗಿ ಇಟ್ಟುಕೊಂಡಾಗ ಮಾತ್ರ ಒಬ್ಬ ವ್ಯಕ್ತಿ ಕವಿಯಾಗುತ್ತಾನೆ. ಅಶ್ಫಾಕ್‌ರ ಕೆಲವು ಕವಿತೆಗಳನ್ನು ಓದುವಾಗ ಈ ಭಾವತೀವ್ರತೆಯ ಸಂವೇದನೆಯ ಮಿಡಿತಕ್ಕೆ ಸಾಕ್ಷಿಯಾಗಬಲ್ಲ ಸಾಲುಗಳು ಕಾಣಿಸಿಕೊಳ್ಳುತ್ತವೆ.
ಹಸಿವಿನಿಂದ ಕಂಗೆಟ್ಟ ಹಸುಗೂಸು
ಉಸಿರು ಚೆಲ್ಲುತಿದೆ ಈಗಷ್ಟೇ ಹುಟ್ಟಿದ ತಾಜಾ ಮಗು ಮಾರಾಟಕ್ಕಿದೆ
ಒಳ್ಳೆಯ ಕವಿತೆಯು ಅರ್ಥ ಅನುಭವಗಳನ್ನು ಸುಲಭವಾಗಿ ದಾನವೆಂಬಂತೆ ದಾಟಿಸಿಬಿಡಬಾರದು. ಓದುಗನಾದವನು ಸೃಜನಶೀಲ ಪ್ರಕ್ರಿಯೆಯಲ್ಲಿ ಭಾಗೀದಾರನಾದರೆ ಮಾತ್ರ ಕವಿತೆಯು ಅವನಿಗೆ ಒಲಿಯುತ್ತದೆ ಅಥವಾ ತೆರೆದುಕೊಳ್ಳುತ್ತದೆ. ಕವಿತೆ ವಾಚಾಳಿಯಾದಷ್ಟೂ ತನ್ನ ಗಟ್ಟಿತನವನ್ನು ಕಳೆದುಕೊಂಡು ಜೊಳ್ಳಾಗುತ್ತದೆ. ಈ ಮಾತನ್ನು ಅನುಲಕ್ಷಿಸಿ ನೋಡುವುದಾದರೆ ಕೆಲವು ಕವಿತೆಗಳಲ್ಲಿ ಕವಿಯು ಇನ್ನೂ ಕೊಂಚ ಕಡಿಮೆ ಮಾತಾಡಿದ್ದರೆ ಒಳ್ಳೆಯದಿತ್ತೆನೋ ಎಂಬ ಭಾವನೆ ಬರುತ್ತದೆ. ಯಾವ ಸಾಲುಗಳಲ್ಲಿ ಕವಿಯು ಕಡಿಮೆ ಕಾಣಿಸಿಕೊಂಡಿದ್ದಾರೆಯೋ ಅಲ್ಲೆಲ್ಲ ಕವಿತೆ ಸಾಂದ್ರವಾಗಿ ಅರಳಿದೆ.
ಬೊಗಸೆಯಿಂದ ಸೋರಿ ಹೋಗುವ ಮರಳಿನಂತೆ ಬದುಕು
ಮರಳುಗಾಡಿನಲ್ಲಿ ನಿಟ್ಟುಸಿರುಗಳು
ಬೇಯುವ ಸದ್ದು ಆಲಿಸೊಮ್ಮೆ ಸಾಕು
ನಮ್ಮ ಸುತ್ತ ಮುತ್ತಲಿನ ಜಡ-ಚರ ಪ್ರಪಂಚವೆಂಬುದು ಸಾಕಷ್ಟು ಅಸಮಾನತೆಗಳಿಂದ ತುಂಬಿ ತುಳುಕುತ್ತಿದೆ. ಜಾತಿ-ಕುಲ ಭೇದಗಳು ಪ್ರತಿಕ್ಷಣವೂ ನಮ್ಮನ್ನು ಒಡೆಯುತ್ತ ಸಾಗಿರುವಾಗ ಮನದಾಳದಲ್ಲಿ ಸಮಾನತೆಯ ಭಾವದ ಒರತೆಯನ್ನು ಚಿಮ್ಮಿಸಿಕೊಂಡು ಅದರಿಂದಾಗಿ ಮಮತೆಯ ಹಸಿರುಕ್ಕಿಸಿಕೊಂಡು ಬದುಕುವ ದಿವ್ಯ ಮಂತ್ರವನ್ನು ಕಂಡುಕೊಳ್ಳಬೇಕಾದದ್ದು ಇವತ್ತಿನ ತುರ್ತು. ಅಶ್ಫಾಕ್ ಕವಿತೆಗಳು ಇಂತಹ ಮುಲಾಮಿನ ಸಾಲುಗಳನ್ನು ಕೊಡುವ ಮೂಲಕ ಮನುಕುಲದ ಕನಸಿನ ನಡಿಗೆಗೆ ಆದರ್ಶದ ಪಂಜಿನ ಕವಾಯತಿನೊಂದಿಗೆ ಜೊತೆಗೂಡುತ್ತವೆ.
ಆ ತೀರ ಅವನು ಈ ತೀರ ಇವನು
ನಡುವೆ ಜುಳುಜುಳು ಜೋಗುಳದ ನದಿ ನಾನು
ಇಬ್ಬರೂ ಬೇರೆ ಬೇರೆಯಾದರು
ಜಲ ತಲದಲಿ ಒಂದೇ ಭೂಮಿಯ ಮಣ್ಣು
ಮೇಲೆ ಸೈತಾನ ನಿರ್ಮಿಸಿದ ಸರಹದ್ದು
ಕಾವ್ಯದಲ್ಲಿ ಅರ್ಥಕ್ಕಿಂತ ಭಾವವೂ ಹಾಗೂ ತರ್ಕಕ್ಕಿಂತ ನಾದವೂ ಮುಖ್ಯ ಎನ್ನುತ್ತಾರೆ. ಅಶ್ಪಾಕ್ ಭಾವಪ್ರಧಾನವಾಗಿ ಬರೆಯುವ ಯತ್ನ ಮಾಡಿದಾಗಲೆಲ್ಲ ಗೆದ್ದಿದ್ದಾರೆ. ಆಗ ಅವರ ಕವಿತೆಯು ಯಾವುದೇ ತರ್ಕದ ಆರ್ಭಟವಿಲ್ಲದೇ ಲೀಲಾಜಾಲವಾಗಿ ಹಾರುವ ಹಕ್ಕಿಯಂತೆ ವಿಹರಿಸುತ್ತದೆ.
ಜಗದ ಓಘದಲಿ ಒಂದಾಗಿ ಓಡುವ ಹೆಜ್ಜೆ ಸದ್ದು
ಎದೆಯುಸಿರು ಕಾಲನ ಕಿವಿಗಿಂಪು
ಆರ್ಭಟಿಸುವ ಅಲೆಗಳಲಿ ಮೀನಾಗಿ ಈಜುವಾಗ ಘರ್ಜಿಸುವ ಸಮುದ್ರದಲೆಯ ಅಭಯ ಹಸ್ತ
ಬಿರುಗಾಳಿಯಲ್ಲಿ
ಹಕ್ಕಿಯಾಗಿ ರೆಕ್ಕೆ ಬಿಚ್ಚಬೇಕು
ಕಾಲೂರಲು ಜಾಗವಿರದಿದ್ದರೂ
ಆಕಾಶವೇ ಆಸರೆದಾಣ
ಫ್ರೆಂಚ್ ಕವಿ ಪಾಲ್ ವಲೆರಿ ಹೇಳುತ್ತಾನೆ ‘‘ಕಾವ್ಯವೆನ್ನುವುದು ಸೂತ್ರಸಿದ್ಧ ಭಾಷಾ ಪ್ರಯೋಗದ ಉಲ್ಲಂಘನೆಯಲ್ಲಿದೆ’’. ಈ ಮಾತಿಗೆ ಪುರಾವೆ ಕೊಡುವಂತೆ ಅಶ್ಪಾಕ್ ಕವಿತೆಯನ್ನು ಕವಿಯ ಮಡದಿಯ ರೀತಿಯಲ್ಲಿ ನೋಡುವ ಹೊಸ ವೈಖರಿಯನ್ನು ತೋರಿಸುತ್ತಾರೆ.
ಕವಿ ಸತ್ತಾಗ ವಿಧವೆ ಕಾವ್ಯ
ಶವದ ಬಳಿ ಕುಳಿತು ರೋಧಿಸುತ್ತಿತ್ತು
ಚೂರು ಚೂರಾಗಿ ಚೆಲ್ಲಾಪಿಲ್ಲಿಯಾಗಿ
ಬಿದ್ದ ಅಕ್ಷರದ ಬಳೆ ಚೂರುಗಳು
ಅವಳೆದೆಯ ನೋವಿಗೆ ಮೂಕ
ಸಾಕ್ಷಿಯಾಗಿದ್ದವು.
ಆಧುನಿಕ ಜಗತ್ತಿನ ಆರೋಗ್ಯವನ್ನು ಕೆಡಿಸುವಲ್ಲಿ ಬಹಳ ಪ್ರಮುಖ ಸಂಗತಿಯಾಗಿರುವ ಧಾರ್ಮಿಕ ಸಂಘರ್ಷದ ಕುರಿತು ಕಟುವಾಗಿ ಪ್ರತಿಕ್ರಿಯೆ ನೀಡುವ ಕವಿ ಅತ್ಯಂತ ಆರ್ತವಾಗಿ ಬರೆದ ಸಾಲುಗಳು ಓದುಗರ ಮನಸ್ಸನ್ನು ಕಲಕದೇ ಇರಲಾರವು. ಕಾಣದ ದೇವರನ್ನು ಅಡ್ಡಾದಿಡ್ಡಿ ಕತ್ತರಿಸಿ
ವಿವಿಧ ನಾಮಧೇಯಗಳಿಂದ ಭಜಿಸುತ್ತ
ಸ್ವರ್ಗದ ಹಾದಿ ಹಿಡಿದವರೇ ಸ್ವಲ್ಪ ನಿಲ್ಲಿ
ಅಮಾಯಕರನ್ನು ತುಳಿದ ನಿಮ್ಮ ರಕ್ತಸಿಕ್ತ
ಹೆಜ್ಜೆಗಳೆಂದೂ ಗುರಿ ತಲುಪುವುದಿಲ್ಲ
ಕವಿತೆಯ ಸಾಂಗತ್ಯದಲ್ಲಿ ತಮ್ಮ ಸಾಹಿತ್ಯದ ಯಾತ್ರೆಯನ್ನು ಕೈಗೊಳ್ಳಬೇಕೆಂಬ ಸಂಕಲ್ಪವನ್ನು ಮಾಡಿರುವುದರಿಂದ ಅಶ್ಪಾಕ್ ಪೀರಜಾದೆಯವರು ತಮ್ಮ ಪೂರ್ವಸೂರಿಗಳ ಕಾವ್ಯಸಾಗರವನ್ನು ಅಧ್ಯಯನ ಮಾಡಬೇಕಾಗಿದೆ. ಸಮಕಾಲೀನರ ಕವಿತೆಗಳನ್ನೂ ಓದಿಕೊಂಡು ತಮ್ಮ ಲೇಖನಿಯ ಸೊಗಸನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ಮುಂದಿನ ಕೃತಿಗಳಲ್ಲಿ ಇನ್ನೂ ಉತ್ತಮ ಕವಿತೆಗಳೊಂದಿಗೆ ಕನ್ನಡದ ಓದುಗರಿಗೆ ಮುಖಾಮುಖಿಯಾಗುವ ಸಾಧ್ಯತೆಗಳಿವೆ ಎನ್ನುವ ಮಾತಿಗೆ ಸಾಕ್ಷಿಯಾಗುವಂತೆ ಅವರ ಸಾಲುಗಳು ಹೊಸದೇ ಆದ ಹೋಲಿಕೆಗಳೊಂದಿಗೆ ಕಣ್ಣರಳಿಸಿ ನಿಲ್ಲುತ್ತವೆ.
ಸ್ನಾನಕ್ಕಿಳಿದ ಮರಗಿಡಗಳು
ಅಮ್ಮನ ಮಡಿಲು ಬಿಟ್ಟು
ಕಣ್ಣು ಬಿಡುತ್ತಿರುವ ತರುಲತೆಗಳು
ಈಗಾಗಲೇ ತಮ್ಮ ಕವನ, ಕಥಾ ಸಂಕಲನಗಳ ಮೂಲಕ ಕನ್ನಡದ ಓದುಗರಲ್ಲಿ ನಿರೀಕ್ಷೆಗಳನ್ನು ಮೂಡಿಸಿರುವ ಅಶ್ಫಾಕ್ ಪೀರಜಾದೆಯವರು ಒಳ್ಳೆಯ ಓದು ಮತ್ತು ಹೊಸ ಉತ್ಸಾಹದ ಪ್ರಯತ್ನಗಳ ಜೊತೆಗೆ ಲವಲವಿಕೆಯ ಕವಿತೆಗಳನ್ನು ಬರೆಯಲೆಂಬ ಆಶಯ ನನ್ನದು.