varthabharthi


ಪ್ರಚಲಿತ

ಸರಕಾರಕ್ಕೆ ಯಾಕಿಷ್ಟು ಹಟ, ಒಣ ಪ್ರತಿಷ್ಠೆ?

ವಾರ್ತಾ ಭಾರತಿ : 15 Feb, 2021
ಸನತ್ ಕುಮಾರ್ ಬೆಳಗಲಿ

ಪ್ರಧಾನಿ ನರೇಂದ್ರ ಮೋದಿಯವರು ರೈತರಿಗೆ ಬೇಡವಾದ ಕಾಯ್ದೆಗಳನ್ನು ಕೈ ಬಿಡಲು ಯಾಕೆ ನಿರಾಕರಿಸುತ್ತಿದ್ದಾರೆ ಎಂಬುದು ಅರ್ಥವಾಗುವುದಿಲ್ಲವೆಂದಲ್ಲ. ಭಾರತದ ಕೃಷಿ ಮಾರುಕಟ್ಟೆಯನ್ನು ತಮ್ಮ ವರ್ಗ ಮಿತ್ರರಾದ ಅಂಬಾನಿ ಮತ್ತು ಅದಾನಿಗಳ ಮಡಿಲಿಗೆ ಹಾಕಲು ಕೊಟ್ಟಿರುವ ಮಾತನ್ನು ಹೇಗೆ ಮುರಿಯುವುದು ಎಂಬ ಉಭಯ ಸಂಕಟಕ್ಕೆ ಅವರು ಸಿಲುಕಿರಬಹುದು. ಆದರೆ ತಮ್ಮನ್ನು ಪ್ರಧಾನಿ ಸ್ಥಾನದಲ್ಲಿ ಕೂರಿಸಲು ರೈತಾಪಿ ವರ್ಗದ ಮತಗಳೂ ನಿರ್ಣಾಯಕವಾಗಿದ್ದವು ಎಂಬುದನ್ನು ಮೋದಿಯವರು ಮರೆಯಬಾರದು.


ತಮ್ಮ ಬೇಡಿಕೆಗಳಿಗಾಗಿ ರೈತರು ಕಳೆದ ಎಪ್ಪತ್ತೈದು ದಿನಗಳಿಂದ ರಾಜಧಾನಿ ದಿಲ್ಲಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಸರಕಾರ ಒಂದಿಂಚೂ ಹಿಂದೆ ಸರಿಯಲು ತಯಾರಿಲ್ಲ. ಅಷ್ಟೇ ಅಲ್ಲ ರೈತರನ್ನು ‘ಆಂದೋಲನ ಜೀವಿ’ಗಳೆಂದು ಕರೆಯುವ ಕುಹಕ ಮಾತುಗಳು. ಪ್ರಧಾನಿಯಾದವರು ಪ್ರಜೆಗಳ ಮೇಲೆ ಸೇಡಿನ ರಾಜಕಾರಣ ಮಾಡಬಾರದು.ರೈತರಿಗೆ ಬೇಡವಾದ ಕಾಯ್ದೆಗಳ ಜಾರಿಗೆ ಈ ಪರಿ ಜಿದ್ದಾಜಿದ್ದಿಯೇಕೋ ಅರ್ಥವಾಗುತ್ತಿಲ್ಲ.

ಈ ದೇಶಕ್ಕೊಂದು ಸಂವಿಧಾನ ನೀಡಿದ ಬಾಬಾಸಾಹೇಬ ಅಂಬೇಡ್ಕರ್ ಅವರು ಮಹಾತ್ಮಾ ಗಾಂಧೀಜಿ ಉಪವಾಸ ಮಾಡಿ ಸಾವಿಗೀಡಾಗುತ್ತಾರೆಂದು ಪುಣೆ ಒಪ್ಪಂದಕ್ಕೆ ಸಹಿ ಹಾಕಿದರು. ಪ್ರತ್ಯೇಕ ಮತಕ್ಷೇತ್ರದ ತಮ್ಮ ಬೇಡಿಕೆಯನ್ನು ಕೈ ಬಿಟ್ಟರು.ಅಂಬೇಡ್ಕರ್ ಆಗ ಹಿಂದೆ ಸರಿದಿದ್ದು ಮಾನವೀಯ ಕಾರಣಕ್ಕಾಗಿ. ಅದಕ್ಕೊಂದು ಹಿನ್ನೆಲೆಯೂ ಇದೆ. ಯರವಾಡ ಜೈಲಿನಲ್ಲಿ ಗಾಂಧೀಜಿ ಉಪವಾಸ ಸತ್ಯಾಗ್ರಹ ನಡೆಸಿ ಸಾವಿನ ಅಂಚಿಗೆ ತಲುಪಿದ್ದರು. ಆಗ ಒಂದು ರಾತ್ರಿ ಕಸ್ತೂರ್ಬಾ ಗಾಂಧಿಯವರು ಮುಂಬೈಯ ದಾದರ್‌ನಲ್ಲಿರುವ ಅಂಬೇಡ್ಕರ್ ಮನೆಗೆ ಬಂದು ಕಣ್ಣೀರು ಹಾಕುತ್ತಾ, ಅವರನ್ನು ಅಣ್ಣಾ ಎಂದು ಕರೆದು ತನ್ನ ಪತಿ ಸಾಯುತ್ತಾರೆ. ತಾಳಿಯನ್ನು ಕಾಪಾಡಿ ಎಂದು ಕೇಳಿಕೊಂಡರು. ಆಗ ಬಾಬಾಸಾಹೇಬರು ತಮ್ಮ ನೋವನ್ನು ನುಂಗಿ ಆಗಲಿ ಎಂದು ಸಮ್ಮತಿ ನೀಡಿದರು.ಇದನ್ನು ನನಗೆ ಮುಂಬೈ ಪ್ರಾಂತದಲ್ಲಿ ಬಿಜಾಪುರ ಜಿಲ್ಲೆಯಿಂದ ಮೀಸಲು ಕ್ಷೇತ್ರದ ಶಾಸಕರಾಗಿದ್ದ ಬಾಬುರಾವ್ ಹುಜರೆ ಅವರು ಹೇಳಿದ್ದರು.ಈಗ ಅವರಿಲ್ಲ. ಆಗ ಕರ್ನಾಟಕ ರಾಜ್ಯ ಇನ್ನೂ ನಿರ್ಮಾಣವಾಗಿರಲಿಲ್ಲ. ಬಿಜಾಪುರ ಜಿಲ್ಲೆ ಮುಂಬೈ ಪ್ರಾಂತದಲ್ಲಿತ್ತು.

ಅಂಬೇಡ್ಕರ್ ಅವರಂತಹವರೇ ದಲಿತ ಸಮುದಾಯದ ಜೀವನ್ಮರಣ ಪ್ರಶ್ನೆಯಲ್ಲಿ ಗಾಂಧೀಜಿ ಜೀವ ಉಳಿಸಲು ತಮಗೆ ಇಷ್ಟವಿಲ್ಲದಿದ್ದರೂ ಪುಣೆ ಒಪ್ಪಂದಕ್ಕೆ ಸಹಿ ಹಾಕಿರುವಾಗ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ರೈತರಿಗೆ ಬೇಡವಾದ ಕಾಯ್ದೆಗಳನ್ನು ಕೈ ಬಿಡಲು ಯಾಕೆ ನಿರಾಕರಿಸುತ್ತಿದ್ದಾರೆ ಎಂಬುದು ಅರ್ಥವಾಗುವುದಿಲ್ಲವೆಂದಲ್ಲ. ಭಾರತದ ಕೃಷಿ ಮಾರುಕಟ್ಟೆಯನ್ನು ತಮ್ಮ ವರ್ಗ ಮಿತ್ರರಾದ ಅಂಬಾನಿ ಮತ್ತು ಅದಾನಿಗಳ ಮಡಿಲಿಗೆ ಹಾಕಲು ಕೊಟ್ಟಿರುವ ಮಾತನ್ನು ಹೇಗೆ ಮುರಿಯುವುದು ಎಂಬ ಉಭಯ ಸಂಕಟಕ್ಕೆ ಅವರು ಸಿಲುಕಿರಬಹುದು. ಆದರೆ ತಮ್ಮನ್ನು ಪ್ರಧಾನಿ ಸ್ಥಾನದಲ್ಲಿ ಕೂರಿಸಲು ರೈತಾಪಿ ವರ್ಗದ ಮತಗಳೂ ನಿರ್ಣಾಯಕವಾಗಿದ್ದವು ಎಂಬುದನ್ನು ಮೋದಿಯವರು ಮರೆಯಬಾರದು.

ಮೋದಿಯವರಿಗೇ ಇಷ್ಟು ಹಟವಿರಬೇಕಾದರೆ ಈ ನಾಡಿಗೆ ಅನ್ನ ಹಾಕುವ ರೈತರೇನೂ ಕಡಿಮೆಯಲ್ಲ.ಎಪ್ಪತ್ತೈದು ದಿನಗಳ ನಿರಂತರವಾದ ಪ್ರತಿಭಟನೆಯ ನಂತರವೂ ಅವರು ದಣಿದಿಲ್ಲ. ಯಾಕೆಂದರೆ ಇದು ಅವರ ಸಾವು ಬದುಕಿನ ಪ್ರಶ್ನೆ. ಈಗ ಹಿಂದೆ ಸರಿದರೆ ಜೀವನಪರ್ಯಂತ ಕಾರ್ಪೊರೇಟ್ ಗುಲಾಮಗಿರಿಯಲ್ಲಿ ನರಳಬೇಕಾಗುತ್ತದೆಂಬ ಆತಂಕ ಅವರಲ್ಲಿದೆ.

 ಅಂತಲೇ ಇನ್ನೂ ಎಂಟು ತಿಂಗಳ ಕಾಲ ಸುದೀರ್ಘ ಹೋರಾಟ ನಡೆಸುವ ಸಂಪೂರ್ಣ ಸಿದ್ಧತೆಯನ್ನು ಅವರು ಮಾಡಿಕೊಳ್ಳುತ್ತಿದ್ದಾರೆ. ದಿಲ್ಲಿಯ ನಾಲ್ಕೂ ದಿಕ್ಕಿನಲ್ಲಿ ವಿಶೇಷವಾಗಿ ಸಿಂಘು ಗಡಿಯಲ್ಲಿ ಬೀಡು ಬಿಟ್ಟಿರುವ ಸಾವಿರಾರು ರೈತರು ಪ್ರತಿಭಟನೆಯ ಸ್ಥಳದಲ್ಲಿ ಇಂಟರ್‌ನೆಟ್ ಕಡಿತ ಮಾಡಿ ಮೂಲಸೌಕರ್ಯ ತೆಗೆದು ಹಾಕಿದ ಸರಕಾರಕ್ಕೆ ಸವಾಲಾಗಿ ತಮ್ಮದೇ ಪ್ರತ್ಯೇಕ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಇನ್ನೇನು ಬೇಸಿಗೆ ಆರಂಭವಾಗಲಿರುವುದರಿಂದ ದಿಲ್ಲಿಯ ಸೆಖೆ ತಡೆಯಲು ಫ್ಯಾನ್‌ಗಳನ್ನು ಮತ್ತು ಪ್ರತ್ಯೇಕ ವೈಫೈ ಸೌಕರ್ಯಗಳಿಗಾಗಿ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸಿಕೊಂಡಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಕಿಡಿಗೇಡಿಗಳು ಬಂದು ಕುಚೇಷ್ಟೆ ಮಾಡಿದರೆ ಅಂತಹವರನ್ನು ಪತ್ತೆ ಹಚ್ಚಲು ಮುಖ್ಯ ವೇದಿಕೆಯ ಸುತ್ತಲೂ ಹಾಗೂ ಇತರ ಕಡೆಗಳಲ್ಲಿ ಸುಮಾರು 100 ಸಿಸಿಟಿವಿಗಳನ್ನು ಅಳವಡಿಸಿಕೊಳ್ಳಲು ತೀರ್ಮಾನಿಸಿದ್ದಾರೆ. ರಾತ್ರಿ ಗಸ್ತು ಕಾರ್ಯ ನಡೆಸಲು 600 ಯುವಕರ ಸ್ವಯಂ ಸೇವಕ ದಳವನ್ನು ರಚಿಸಿಕೊಂಡಿದ್ದಾರೆ. ಸ್ವಯಂ ಸೇವಕರನ್ನು ಗುರುತಿಸಲು ಸಾಧ್ಯವಾಗುವಂತೆ ಅವರಿಗೆ ಹಸಿರು ಜಾಕೇಟ್‌ಗಳು ಹಾಗೂ ಗುರುತಿನ ಚೀಟಿಗಳನ್ನು ನೀಡಲಾಗಿದೆ. ಪ್ರತಿಭಟನೆಯ ಪ್ರದೇಶದಲ್ಲಿ 10 ಬೃಹತ್ ಎಲ್‌ಸಿಡಿ ಪರದೆಗಳನ್ನು ಅಳವಡಿಸಲಾಗಿದೆ.

ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದೊಂದು ಅಪರೂಪದ ಹೋರಾಟ. ಉಳಿದ ಪ್ರತಿಭಟನೆಗಳಂತೆ ಮನವಿ ಕೊಟ್ಟು ಮನೆಗೆ ವಾಪಸಾಗುವ ಹೋರಾಟ ಇದಲ್ಲ. ಈ ರೈತ ಪ್ರತಿಭಟನೆಯ ಬಗ್ಗೆ ಮಾಧ್ಯಮಗಳಲ್ಲಿ ಸಮರ್ಪಕವಾದ ಚಿತ್ರಣ ಸಿಗುತ್ತಿಲ್ಲ. ದಿಲ್ಲಿಗೆ ಹೋಗಿ ಆ ಪ್ರತಿಭಟನೆಯನ್ನು ಕಣ್ಣಾರೆ ಕಂಡವರಿಂದ ಈ ಬಗ್ಗೆ ಕೇಳಿದರೆ ನಿಜಕ್ಕೂ ಅಚ್ಚರಿ ಮತ್ತು ಅಭಿಮಾನಗಳು ಒಟ್ಟಿಗೆ ಉಂಟಾಗುತ್ತವೆ. ದಿಲ್ಲಿಗೆ ಹೋಗಿ ಹತ್ತು ದಿನಗಳ ಕಾಲ ಸಿಂಘು ಗಡಿಯ ಪ್ರತಿಭಟನೆಯ ತಾಣದಲ್ಲಿ ಭಾಗವಹಿಸಿ ಬಂದ ಮಹಿಳಾ ಸಂಘಟನೆಯ ನಾಯಕಿಯೊಬ್ಬರು ನೀಡಿದ ವಿವರಗಳು ಸ್ಫೂರ್ತಿದಾಯಕವಾಗಿವೆ.

ಸಿಂಘು ಗಡಿಯ ಪ್ರತಿಭಟನೆಯ ತಾಣದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಂದಿ ರೈತರು ಸುಮಾರು ಹದಿನೆಂಟು ಕಿ.ಮೀ. ಉದ್ದ ರಸ್ತೆಯ ಎರಡೂ ಬದಿಗೆ ಬೀಡು ಬಿಟ್ಟಿದ್ದಾರೆ.ಲಾರಿಗಳ ಮೇಲೆ ಮತ್ತು ಕೆಳಗೆ ಟೆಂಟುಗಳನ್ನು ಹಾಕಿಕೊಂಡಿದ್ದಾರೆ. ಇಲ್ಲಿ ಬರುವ ಎಲ್ಲರಿಗೂ ಊಟ ಮತ್ತು ಉಪಹಾರ ಉಚಿತ. ನಿತ್ಯವೂ ಅನ್ನ ದಾಸೋಹ. ಇದಕ್ಕಾಗಿ ಯಾವ ಬಂಡವಾಳಶಾಹಿಯಿಂದಲೂ ಹಣ ಸಂಗ್ರಹಿಸಿಲ್ಲ. ಪಂಜಾಬ್, ಹರ್ಯಾಣದ ರೈತರು ಮನೆ ಮನೆಯಿಂದ ಕಾಳು ಕಡಿ, ಹಾಲು, ತುಪ್ಪತಂದು ಊಟದ ವ್ಯವಸ್ಥೆ ಮಾಡಿದ್ದಾರೆ. ಕೆನಡ, ಬ್ರಿಟನ್, ಆಸ್ಟ್ರೇಲಿಯ ಮುಂತಾದ ದೇಶಗಳಲ್ಲಿ ಇರುವ ಪಂಜಾಬಿಗಳು ವಿಶೇಷವಾಗಿ ಸಿಖ್ಖರು ನಿಧಿ ಸಂಗ್ರಹಿಸಿ ಕಳುಹಿಸುತ್ತಿದ್ದಾರೆ.ಹಳ್ಳಿಯ ಜನ ಬುತ್ತಿ ಕಟ್ಟಿಕೊಂಡು ಬರುತ್ತಿದ್ದಾರೆ. ಇದನ್ನು ದಾರಿ ತಪ್ಪಿಸಲು ದುಷ್ಟ ಶಕ್ತಿಗಳು ಹುನ್ನಾರ ನಡೆಸುತ್ತಿದ್ದರೂ ಅತ್ಯಂತ ಸಂಘಟಿತವಾಗಿ, ವ್ಯವಸ್ಥಿತವಾಗಿ ಹೋರಾಟ ನಡೆದಿರುವುದರಿಂದ ಕಿಡಿಗೇಡಿಗಳಿಗೆ ಅವಕಾಶವಿಲ್ಲ. ಗೊತ್ತು ಪರಿಚಯವಿಲ್ಲದ, ಹೋರಾಟವನ್ನು ಬೆಂಬಲಿಸದ ಯಾವುದೇ ಸಂಘಟನೆಗೆ ಸೇರದವರನ್ನು ವೇದಿಕೆ ಹತ್ತಲು ಬಿಡುವುದಿಲ್ಲ.

ದೇಶವನ್ನು ಕೊಳ್ಳೆ ಹೊಡೆಯಲು ಹೊರಟಿರುವ ಕಾರ್ಪೊರೇಟ್ ಖದೀಮರ ಬಗ್ಗೆ ಈ ರೈತರಿಗೆ ಯಾವ ಪರಿ ಕೋಪವಿದೆಯೆಂದರೆ ಪಂಜಾಬ್, ಹರ್ಯಾಣಗಳಲ್ಲಿ ಜಿಯೋ ಕಂಪೆನಿಯ ಟವರ್‌ಗಳನ್ನು ಹೇಳ ಹೆಸರಿಲ್ಲದಂತೆ ಮಾಡಿದ್ದಾರೆ. ಪ್ರತಿಭಟನೆಯ ಸುಮಾರು ಐವತ್ತು ಕಿ.ಮೀ. ವ್ಯಾಪ್ತಿಯಲ್ಲಿ ರಿಲಯನ್ಸ್ ಕಂಪೆನಿಯ ಜಿಯೋ ಸಿಮ್ ತೆಗೆದು ಬಿಸಾಡಿ ಬೇರೆ ಕಂಪೆನಿಗಳ ಸಿಮ್‌ಗಳನ್ನು ಮೊಬೈಲ್‌ಗೆ ಹಾಕುವ ವ್ಯವಸ್ಥೆ ಇದೆ. ಇಲ್ಲಿ ಅವುಗಳನ್ನು ತಕ್ಷಣ ಆ್ಯಕ್ಟಿವೇಟ್ ಮಾಡಲಾಗುತ್ತದೆ. ಇಲ್ಲಿ ಜಿಯೋ ನೆಟ್‌ವರ್ಕ್ ಲಭ್ಯವಿಲ್ಲ.

ಇಂತಹ ಶಾಂತಿಯುತ ಹೋರಾಟದ ಹೆಸರು ಕೆಡಿಸಿ ಹತ್ತಿಕ್ಕಲು ಗಣರಾಜ್ಯೋತ್ಸವ ದಿನ ಕೆಂಪುಕೋಟೆಯ ಮೇಲೆ ಧ್ವಜ ಹಾರಿಸುವ ಹುನ್ನಾರದ ಹಿಂದೆ ಯಾರಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅಂತಹ ಕಿಡಿಗೇಡಿಗಳನ್ನು ಈಗ ಹತ್ತಿರ ಬಿಟ್ಟು ಕೊಳ್ಳುವುದಿಲ್ಲ. ಈ ರೈತರ ನಡುವೆ ಕೋಮು ದ್ವೇಷ ಹಬ್ಬಿಸಲು ಸಾಧ್ಯವೇ ಇಲ್ಲ. ಇಲ್ಲಿ ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ, ಜೈನ ಭೇದವೇ ಇಲ್ಲ. ಎಲ್ಲರೂ ರೈತರೆಂಬ ವರ್ಗ ಅಸ್ಮಿತೆ ಬಲವಾಗಿ ಬೇರೂರಿದೆ. ಹೀಗಾಗಿ ಕಳೆದ ಎರಡು ದಶಕಗಳ ಕಾಲಾವಧಿಯಲ್ಲಿ ಕೋಮು ಆಧಾರದಲ್ಲಿ ಭಾರತೀಯರನ್ನು ಒಡೆದವರ ಆಟ ಇಲ್ಲಿ ನಡೆಯುತ್ತಿಲ್ಲ.ಇದೊಂದು ಆಶಾದಾಯಕ ಬೆಳೆವಣಿಗೆಯಾಗಿದೆ.

ಇಂತಹ ಜನಪರ ಹೋರಾಟಗಳನ್ನು ಹತ್ತಿಕ್ಕಲು ಪ್ರಭುತ್ವ ಹಲವಾರು ತಂತ್ರ ಕುತಂತ್ರಗಳನ್ನು ಮಾಡುತ್ತದೆ.ರೈತರ ಪ್ರತಿಭಟನೆಯನ್ನು ಬೆಂಬಲಿಸುವವರ ಮೇಲೆ ದೇಶ ದ್ರೋಹದ ಪ್ರಕರಣಗಳನ್ನು ದಾಖಲಿಸಿಕೊಳ್ಳುವ ಮಸಲತ್ತು ನಡೆದಿದೆ. ಈಗಾಗಲೇ ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ, ಸಿದ್ದಾರ್ಥ ವರದರಾಜನ್ ಮುಂತಾದ ಚಿಂತಕರ ಮೇಲೆ ರಾಜದ್ರೋಹದ ಆರೋಪ ಹೊರಿಸಿ ಖಟ್ಲೆ ಹಾಕಲಾಗಿದೆ. ಎರಡು ವರ್ಷಗಳ ಹಿಂದೆ ಮಹಾರಾಷ್ಟ್ರದ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಕವಿ ವರವರರಾವ್, ಆನಂದ್ ತೇಲ್ತುಂಬ್ಡೆ ಸೇರಿದಂತೆ ಇಪ್ಪತ್ತು ಜನರ ಮೇಲೆ ದೇಶದ್ರೋಹದ ಆರೋಪ ಹೊರಿಸಿ ಜೈಲಿಗೆ ತಳ್ಳಲಾಗಿದೆ. ಈ ಪೈಕಿ ಮಾನವ ಹಕ್ಕುಗಳ ಪರ ಹೋರಾಟಗಾರ ರೋನಾ ವಿಲ್ಸನ್ ಮೇಲೆ ಹೊರಿಸಲಾದ ಆರೋಪ ಮತ್ತು ಅದಕ್ಕಾಗಿ ಪುಣೆಯ ಪೊಲೀಸರು ಹಾಜರುಪಡಿಸಿದ ಸಾಕ್ಷ್ಯಾಧಾರಗಳು ನಕಲಿ ಎಂದು ಅಮೆರಿಕದಿಂದ ಬಂದ ಫೊರೆನ್ಸಿಕ್ ವರದಿಯಿಂದ ತಿಳಿದು ಬಂದಿದೆ. ರೋನಾ ವಿಲ್ಸನ್ ಬಂಧನಕ್ಕೆ 22 ತಿಂಗಳ ಮೊದಲೇ ಅವರ ಲ್ಯಾಪ್ ಟಾಪ್‌ನಲ್ಲಿ ನಕಲಿ ಪತ್ರಗಳನ್ನು ಒಳ ತೂರಿಸಲಾಗಿತ್ತು ಎಂದು ಈ ವರದಿ ತಿಳಿಸಿದೆ. ಇದು ಪುಣೆಯ ಪೊಲೀಸರ ಕರಾಮತ್ತು. ಈ ಪ್ರಕರಣ ಕೈ ಬಿಡಲು ಮಹಾರಾಷ್ಟ್ರದ ಸಮ್ಮಿಶ್ರ ಸರಕಾರಕ್ಕೆ ರಾಷ್ಟ್ರವಾದಿ ಕಾಂಗ್ರೆಸ್‌ನ ಹಿರಿಯ ನಾಯಕ ಶರದ್ ಪವಾರ್ ಸಲಹೆ ನೀಡಿದ್ದರು. ಅಷ್ಟರಲ್ಲಿ ಕೇಂದ್ರ ಸರಕಾರ ಇದನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ( ಎನ್‌ಐಎ) ವಹಿಸಿತು.

ಅದೇನೇ ಇರಲಿ ಪ್ರಜಾಪ್ರಭುತ್ವ ಎಂಬುದು ಪ್ರಜೆಗಳು ತಮಗೋಸ್ಕರ ಕಟ್ಟಿಕೊಂಡ ಆಡಳಿತ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಜನರಿಂದ ಚುನಾಯಿತರಾದವರು ಲೋಕಸಭೆ ಮತ್ತು ವಿಧಾನಸಭೆಗಳ ಸದಸ್ಯರಾಗುತ್ತಾರೆ. ಬಹಮತ ಪಡೆದ ಪಕ್ಷ ಅಧಿಕಾರಕ್ಕೆ ಬರುತ್ತದೆ. ಅ ಪಕ್ಷದ ನಾಯಕ ಪ್ರಧಾನಿಯಾಗುತ್ತಾನೆ. ಇದು ಜನತಂತ್ರದ ಸರಳ ವ್ಯಾಖ್ಯಾನ. ಪ್ರಧಾನಿ ಮೋದಿಯವರಿಗೆ ಜನತೆ ಅಧಿಕಾರ ನೀಡಿದ್ದಾರೆ.ಅದಕ್ಕೆ ನಮ್ಮ ಚುನಾವಣಾ ಪದ್ಧತಿಯ ದೋಷ, ಇಲ್ಲವೇ ವಿದ್ಯುತ್ ಮತಯಂತ್ರಗಳ ಕುತಂತ್ರ ಇವೆಲ್ಲ ಅವುಗಳ ಚರ್ಚೆ ಇಲ್ಲಿ ಅಪ್ರಸ್ತುತ. ಮೋದಿಯವರು ಈಗ ನಮ್ಮ ದೇಶದ ಪ್ರಧಾನಿ. ಅವರು ತನ್ನ ಪ್ರಜೆಗಳ ಮೇಲೆ ಹಟ ಸಾಧಿಸಬಾರದು. ಪ್ರಜೆಗಳನ್ನು ಶತ್ರುಗಳಂತೆ ಕಾಣಬಾರದು. ರೈತರ ಅಹವಾಲುಗಳನ್ನು ಸಹಾನುಭೂತಿಯಿಂದ ಆಲಿಸಬೇಕು ಎಂಬುದು ಭಾರತ ದೇಶದ ಸಹಜ ನಿರೀಕ್ಷೆಯಾಗಿದೆ. ಅದನ್ನು ಹುಸಿ ಗೊಳಿಸಿದರೆ ಪ್ರಜಾಪ್ರಭುತ್ವಕ್ಕೆ ಅಪಚಾರ ಮಾಡಿದಂತೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)