ನೋವು ನಿವಾರಕ ಮಾತ್ರೆಗಳನ್ನು ಅತಿಯಾಗಿ ಸೇವಿಸುತ್ತೀರಾ? ಎಚ್ಚರಿಕೆ,ಅದು ತುಂಬಾ ಅಪಾಯಕಾರಿ
ನಿಮ್ಮ ಶರೀರದಲ್ಲಿ ನೋವು ಉಂಟಾಗುತ್ತಿದ್ದರೆ ಯಾವಾಗಲೂ ನೋವು ನಿವಾರಕ ಮಾತ್ರೆಯನ್ನು ಸೇವಿಸುವ ಅಭ್ಯಾಸವನ್ನು ಹೊಂದಿದ್ದೀರಾ? ನೋವನ್ನು ತಡೆಯಲು ಸಾಧ್ಯವಿಲ್ಲದಾಗ ಔಷಧಿಯನ್ನು ತೆಗೆದುಕೊಳ್ಳುವುದು ಕೆಟ್ಟದ್ದಲ್ಲ,ಆದರೆ ಅದೇ ಒಂದು ಅಭ್ಯಾಸವಾಗಬಾರದು. ತುರ್ತು ಔಷಧಿಯಾಗಿ ನೋವು ನಿವಾರಕವು ಒಳ್ಳೆಯದೇ,ಆದರೆ ಇತರ ವಿಧಾನಗಳು ವಿಫಲಗೊಂಡಾಗ ಮಾತ್ರ ಅದನ್ನು ತೆಗೆದುಕೊಳ್ಳಬೇಕು. ನೋವನ್ನು ಸಹಿಸಿಕೊಳ್ಳಬಹುದಾದ ಸಂದರ್ಭಗಳಲ್ಲಿ ಔಷಧಿ ಅಂಗಡಿಗಳಲ್ಲಿ ಸುಲಭವಾಗಿ ದೊರೆಯುವ ಈ ಮಾತ್ರೆಗಳನ್ನು ಸೇವಿಸುವುದನ್ನು ನಿವಾರಿಸಬೇಕು. ಏಕೆಂದರೆ ಅತಿಯಾಗಿ ನೋವು ನಿವಾರಕಗಳ ಸೇವನೆಯು ಹಲವಾರು ಅಡ್ಡಪರಿಣಾಮಗಳನ್ನುಂಟು ಮಾಡುತ್ತದೆ ಮತ್ತು ಇವುಗಳ ಪೈಕಿ ಕೆಲವು ಅತ್ಯಂತ ಗಂಭೀರವಾಗಿವೆ. ಅಲ್ಲದೆ ವಿಭಿನ್ನ ನೋವು ನಿವಾರಕಗಳು ವಿಭಿನ್ನ ಅಪಾಯಗಳನ್ನೊಡ್ಡುತ್ತವೆ.
ಔಷಧಿ ಅಂಗಡಿಗಳಲ್ಲಿ ಸುಲಭವಾಗಿ ಲಭ್ಯವಾಗುವ ಕೆಲವು ಓವರ್-ದಿ-ಕೌಂಟರ್ (ಒಟಿಸಿ) ನೋವು ನಿವಾರಕ ಔಷಧಿಗಳ ಅಡ್ಡಪರಿಣಾಮಗಳ ಬಗ್ಗೆ ಮೊದಲು ತಿಳಿದುಕೊಳ್ಳೋಣ.
* ಆಸ್ಪಿರಿನ್: ಆಸ್ಪಿರಿನ್ ಅತ್ಯಂತ ಜನಪ್ರಿಯ ಮತ್ತು ಸಾಮಾನ್ಯವಾಗಿರುವ ಸ್ಟಿರಾಯ್ಡೇತರ ಉರಿಯೂತ ನಿರೋಧಕ ಔಷಧಿ (ಎನ್‌ಎಸ್‌ಎಐಡಿ)ಗಳಲ್ಲೊಂದಾಗಿದೆ. ಇವು ಪ್ರಾಥಮಿಕವಾಗಿ ನೋವು ನಿವಾರಕ ಔಷಧಿಗಳಾಗಿದ್ದು ನೋವನ್ನು ಕಡಿಮೆ ಮಾಡುತ್ತವೆ ಮತ್ತು ಅಲ್ಪಾವಧಿಗೆ ನೆಮ್ಮದಿಯನ್ನು ನೀಡುತ್ತವೆ. ಆಸ್ಪಿರಿನ್ ಅನ್ನು ಅಗತ್ಯವಿದ್ದಾಗ ಮಾತ್ರ ಸೇವಿಸಬೇಕು,ಏಕೆಂದರೆ ಅದರ ದೀರ್ಘಾವಧಿ ಬಳಕೆಯು ಸಾಮಾನ್ಯದಿಂದ ಹಿಡಿದು ಗಂಭೀರ ಸ್ವರೂಪದವರೆಗಿನ ತೊಂದರೆಗಳನ್ನುಂಟು ಮಾಡುತ್ತದೆ.
ಪದೇ ಪದೇ ಆಸ್ಪಿರಿನ್ ಸೇವನೆಯು ಜಠರದಲ್ಲಿ ರಕ್ತಸ್ರಾವವನ್ನುಂಟು ಮಾಡಬಲ್ಲದು ಮತ್ತು ಇದು ಜೀರ್ಣ ಸಮಸ್ಯೆಗಳು ಹಾಗೂ ಹೊಟ್ಟೆಹುಣ್ಣುಗಳಿಗೆ ಕಾರಣವಾಗುತ್ತದೆ. ಆಸ್ಪಿರಿನ್ ಬಳಕೆಯು ಮೂತ್ರಪಿಂಡಗಳಿಗೆ ಹಾನಿಯನ್ನುಂಟು ಮಾಡಬಲ್ಲದು. ಮಕ್ಕಳಿಗೆ ಆಸ್ಪಿರಿನ್ ನೀಡಿದರೆ ಅದು ಯಕೃತ್ತು ಮತ್ತು ಮಿದುಳಿನ ಮೇಲೆ ಕೆಟ್ಟ ಪರಿಣಾಮಗಳನ್ನುಂಟು ಮಾಡುವ ರಿಯೆಸ್ ಸಿಂಡ್ರೋಮ್ ಎಂಬ ಗಂಭೀರ ರೋಗದ ಅಪಾಯಕ್ಕೆ ಅವರನ್ನು ತಳ್ಳುತ್ತದೆ.
ಆಸ್ಪಿರಿನ್ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವುದರಿಂದ ವೈದ್ಯರು ಹೃದಯಾಘಾತಗೆ ಗುರಿಯಾದ ಅಥವಾ ಹೃದಯ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಸಾಮಾನ್ಯವಾಗಿ ಇದನ್ನು ಸೂಚಿಸುತ್ತಾರೆ. ಆದರೆ ಆಸ್ಪಿರಿನ್‌ನ ದೀರ್ಘಾವಧಿ ಬಳಕೆಯು ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಅದು ಮಿದುಳಿನಲ್ಲಿ ರಕ್ತಸ್ರಾವಕ್ಕೂ ಕಾರಣವಾಗುತ್ತದೆ. ಇದು ಅಪರೂಪವಾಗಿದೆಯಾದರೂ ಸಾಧ್ಯತೆಯಂತೂ ಇದೆ.
* ಎಸಿಟಾಮಿನೊಫೆನ್: ಇದು ಜನರು ವೈದ್ಯರ ಚೀಟಿಯ ಅಗತ್ಯವಿಲ್ಲದೆ ಔಷಧಿ ಅಂಗಡಿಗಳಿಂದ ಖರೀದಿಸುವ ಇನ್ನೊಂದು ಜೆನೆರಿಕ್ ಔಷಧಿಯಾಗಿದೆ. ಶೀತ ಮತ್ತು ಸೈನಸ್ ಸಮಸ್ಯೆಗಳಿಗೆ ಬಳಕೆಯಾಗುವ ಹಲವಾರು ಔಷಧಿಗಳು ಎಸಿಟಾಮಿನೊಫೆನ್ ಅನ್ನು ಒಳಗೊಂಡಿರುತ್ತವೆ. ಇದು ಆಸ್ಪಿರಿನ್‌ನಷ್ಟು ಅಪಾಯಕಾರಿಯಲ್ಲ,ಆದರೆ ದೀರ್ಘಕಾಲಿಕ ಬಳಕೆಯು ಯಕೃತ್ತಿಗೆ ಹಾನಿಯನ್ನುಂಟು ಮಾಡಬಲ್ಲದು. ಅಲ್ಲದೆ ವ್ಯಕ್ತಿಯು ಈ ಔಷಧಿಯೊಂದಿಗೆ ಮದ್ಯವನ್ನು ಸೇವಿಸಿದರೆ ಖಂಡಿತವಾಗಿಯೂ ಯಕೃತ್ತಿಗೆ ಹಾನಿಯುಂಟಾಗುತ್ತದೆ. ಅತಿಯಾದ ಎಸಿಟಾಮಿನೊಫೆನ್ ಸೇವನೆಯೂ ಅಪಾಯಕಾರಿಯೇ. ಹೀಗಾಗಿ ಸಾಧ್ಯವಾದಷ್ಟು ಮಟ್ಟಿಗೆ ಅದರ ಸೇವನೆಯನ್ನು ನಿವಾರಿಸಬೇಕು.
* ಇಬುಪ್ರೊಫೆನ್
ಇಬುಪ್ರೊಫೆನ್ ಆಸ್ಪಿರಿನ್‌ನ ಬಳಿಕ ಇನ್ನೊಂದು ಜನಪ್ರಿಯ ಎನ್‌ಎಸ್‌ಎಐಡಿಯಾಗಿದೆ. ಇದೂ ಕೂಡ ಆಸ್ಪಿರಿನ್ ಮತ್ತು ಎಸಿಟಾಮಿನೊಫೆನ್‌ಗಳಂತೆ ಆರೋಗ್ಯಕ್ಕೆ ಖಂಡಿತವಾಗಿಯೂ ಒಳ್ಳೆಯದಲ್ಲ,ಆದರೆ ಅವುಗಳಿಗೆ ಹೋಲಿಸಿದರೆ ಸ್ವಲ್ಪ ಕಡಿಮೆ ಅಡ್ಡಪರಿಣಾಮಗಳನ್ನುಂಟು ಮಾಡುತ್ತದೆ. ಇತರ ಎನ್‌ಎಸ್‌ಎಐಡಿಗಳಂತೆ ಇಬುಪ್ರೊಫೆನ್ ಕೂಡ ಮೂತ್ರಪಿಂಡ ಮತ್ತು ಜಠರದ ಸಮಸ್ಯೆಗಳಿಗೆ ಕಾರಣವಾಗುತ್ತದೆಯಾದರೂ ದೀರ್ಘಕಾಲ ಶರೀರದಲ್ಲಿ ಉಳಿದುಕೊಳ್ಳುವುದಿಲ್ಲ,ಹೀಗಾಗಿ ಅಡ್ಡಪರಿಣಾಮಗಳ ಅವಕಾಶಗನ್ನು ಕಡಿಮೆ ಮಾಡುತ್ತದೆ. ಅಂದರೆ ಬಹಳಷ್ಟು ಇಬುಪ್ರೊಫೆನ್ ಸೇವಿಸುವವರು ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಈ ಔಷಧಿಯ ಸೇವನೆಯನ್ನು ನಿವಾರಿಸಬೇಕು.
ವೈದ್ಯರು ಸೂಚಿಸುವ ನೋವು ನಿವಾರಕಗಳು
ಎನ್‌ಎಸ್‌ಎಐಡಿಗಳ ಬಗ್ಗೆ ತಿಳಿದುಕೊಂಡಿದ್ದೇವೆ, ಈಗ ವೈದ್ಯರು ಬರೆದು ಕೊಡುವ ಔಷಧಿಗಳ ಬಗ್ಗೆ ಮತ್ತು ಅವುಗಳ ಪೈಕಿ ಕೆಲವು ಏಕೆ ಅಪಾಯಕಾರಿ ಎನ್ನುವುದನ್ನು ತಿಳಿದುಕೊಳ್ಳೋಣ. ಇಂತಹ ಹೆಚ್ಚಿನ ಔಷಧಿಗಳು ಓಪಿಯೊಡ್‌ಗಳು ಅಥವಾ ವ್ಯಸನಕಾರಿ ಗುಣಲಕ್ಷಣಗಳುಳ್ಳ ಮತ್ತು ಶಾರೀರಿಕ ಪರಿಣಾಮಗಳಲ್ಲಿ ಅಫೀಮಿನಂತೆ ಕಾರ್ಯ ನಿರ್ವಹಿಸುವ ಸಂಯುಕ್ತಗಳನ್ನು ಒಳಗೊಂಡಿರುತ್ತವೆ, ಓಪಿಯೊಡ್ ಮಿದುಳಿಗೆ ನರ ಸಂಕೇತಗಳನ್ನು ತಡೆಯುವ ಮೂಲಕ ನೋವಿನ ಅನುಭವವನ್ನು ಕಡಿಮೆ ಮಾಡಿ ಶಮನವನ್ನು ನೀಡುತ್ತದೆ. ವೈದ್ಯರು ಅತ್ಯಗತ್ಯವಾಗಿದ್ದರೆ ಮಾತ್ರ ಓಪಿಯೊಡ್ ಔಷಧಿಗಳನ್ನು ಸೂಚಿಸುತ್ತಾರೆ. ನಿರ್ದಿಷ್ಟವಾಗಿ,ಗಂಭೀರ ಆರೋಗ್ಯ ಸಮಸ್ಯೆಗಳಿರುವವರಿಗೆ, ಇತ್ತೀಚಿಗೆ ಶಸ್ತ್ರಚಿಕಿತ್ಸೆಗೆ ಒಳಗಾದವರಿಗೆ ಅಥವಾ ದೀರ್ಘಕಾಲಿಕ ರೋಗಗಳಿಂದ ನರಳುತ್ತಿರುವವರಿಗೆ ವೈದ್ಯರು ಈ ಔಷಧಿಗಳನ್ನು ಶಿಫಾರಸು ಮಾಡುವುದೇ ಇಲ್ಲ.
ಮಾರ್ಫಿನ್,ಹೈಡ್ರೊಮಾರ್ಫಿನ್,ಕೋಡೀನ್,ಆಕ್ಸಿಕೋಡೀನ್,ವಿಕೋಡಿನ್,ಮೆಪರಿಡಿನ್ ಮತ್ತು ಪ್ರೊಪ್ರೊಕ್ಸಿಫೀನ್ ಇವು ಸಾಮಾನ್ಯ ಓಪಿಯೊಡ್ ನೋವು ನಿವಾರಕಗಳಾಗಿವೆ.
ಇನ್ನೊಂದು ಓಪಿಯೊಡ್ ನೋವು ನಿವಾರಕ ಫೆಂಟಾನಿಲ್ ಇತರ ಔಷಧಿಗಳಿಗಿಂತ ನೂರು ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದ್ದು,ಇದೇ ಕಾರಣದಿಂದ ಅತ್ಯಂತ ಅಪಾಯಕಾರಿಯೂ ಆಗಿದೆ. ಸಾವಿಗೆ ಸಮೀಪವಾಗಿರುವ ಸ್ಥಿತಿಯಲ್ಲಿದ್ದು ತೀವ್ರ ನೋವನ್ನು ಅನುಭವಿಸುತ್ತಿರುವ ರೋಗಿಗಳಿಗೆ ಇದನ್ನು ನೀಡಲಾಗುತ್ತದೆ. ಸಾಮಾನ್ಯ ನೋವಿರುವ ವ್ಯಕ್ತಿಗೆ ಈ ಔಷಧಿಯನ್ನು ನೀಡಿದರೆ ಆತ/ಆಕೆ ಸಾಯಲೂಬಹುದು.
ಈ ಔಷಧಿಗಳನ್ನು ಸೇವಿಸುವ ಹೆಚ್ಚುಕಡಿಮೆ ಎಲ್ಲರೂ ಮಲಬದ್ಧತೆಯ ತೊಂದರೆಯನ್ನು ಅನುಭವಿಸುತ್ತಾರೆ. ಇದು ಓಪಿಯೊಡ್‌ನ ಕೇವಲ ಒಂದು ಅಡ್ಡಪರಿಣಾಮವಾಗಿದೆ. ಈ ಔಷಧಿಗಳು ಉಂಟು ಮಾಡುವ ಅಡ್ಡಪರಿಣಾಮಗಳ ಪಟ್ಟಿಯೇ ಇಲ್ಲಿದೆ:
ತಲೆ ಸುತ್ತುವಿಕೆ,ನಿದ್ರೆಯ ಮಂಪರು,ವಾಕರಿಕೆ,ಅತಿಯಾಗಿ ಬೆವರುವಿಕೆ,ದುಃಖದ ಮತ್ತು ಹತಾಶೆಯ ಭಾವನೆಗಳು,ಕಡಿಮೆ ಏಕಾಗ್ರತೆ
ಓಪಿಯೊಡ್ ನೋವು ನಿವಾರಕಗಳನ್ನು ಅತಿಯಾಗಿ ಸೇವಿಸುವುದರಿಂದ ಶರೀರವು ಅದರ ಮೇಲೆಯೇ ಅವಲಂಬಿತಗೊಂಡು ಕ್ರಮೇಣ ನೈಸರ್ಗಿಕ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಮತ್ತು ರೋಗ ನಿರೋಧಕ ವ್ಯವಸ್ಥೆಯು ದುರ್ಬಲಗೊಳ್ಳುತ್ತದೆ.
ಬಹಳಷ್ಟು ಜನರಿಗೆ ತಮ್ಮ ನೋವಿನಿಂದ ಮುಕ್ತಿ ಪಡೆಯಲು ಓಪಿಯೊಡ್‌ಗಳನ್ನು ಸೇವಿಸುವುದು ಅಭ್ಯಾಸವಾಗಿಬಿಡುತ್ತದೆ. ಇದು ಓಪಿಯೊಡ್ ದುರುಪಯೋಗಕ್ಕೆ ಮತ್ತು ಅವುಗಳನ್ನು ಸೇವಿಸುವ ವ್ಯಕ್ತಿಯ ಸಾವಿಗೆ ಕಾರಣವಾಗಬಲ್ಲದು.
ಓಪಿಯೊಡ್ ಔಷಧಿಗಳ ಅತಿಯಾದ ಸೇವನೆ ಅಥವಾ ಪದೇ ಪದೇ ತೆಗೆದುಕೊಳ್ಳುವುದು ಉಸಿರಾಟವನ್ನೇ ನಿಲ್ಲಿಸಬಹುದು.
ಹೃದಯದ ಮೇಲೆ ನೋವು ನಿವಾರಕಗಳ ಪರಿಣಾಮ
ನೋವು ನಿವಾರಕಗಳ ಸೇವನೆಯು ನೋವಿನಿಂದ ಅಲ್ಪಕಾಲಕ್ಕೆ ಮುಕ್ತಿಯನ್ನು ನೀಡುತ್ತವೆಯಾದರೂ ಅವು ಹೃದಯರಕ್ತನಾಳಗಳ ಆರೋಗ್ಯಕ್ಕೆ ತೀವ್ರ ಹಾನಿಯನ್ನುಂಟು ಮಾಡುತ್ತವೆ. ನೋವು ನಿವಾರಕಗಳನ್ನು ನಿಯಮಿತವಾಗಿ ಸೇವಿಸಲು ಆರಂಭಿಸಿದ ಕೆಲವೇ ವಾರಗಳಲ್ಲಿ ಹೃದಯಕ್ಕೆ ಅಪಾಯದ ಸಾಧ್ಯತೆಯೂ ಕಾಣಿಸಿಕೊಳ್ಳುತ್ತದೆ.
ಎನ್‌ಎಸ್‌ಎಐಡಿಗಳ ದೀರ್ಘಕಾಲಿಕ ಸೇವನೆಯು ಹೃದಯಾಘಾತವುಂಟಾಗುವ ಅಪಾಯವನ್ನು ಇಮ್ಮಡಿಗೊಳಿಸುತ್ತದೆ ಎಂದು ಸಂಶೋಧನೆಗಳು ಬಹಿರಂಗಗೊಳಿಸಿವೆ.