ಲೋಕಸೇವಾ ಆಯೋಗದ ಸುಧಾರಣೆ ಯಾರಿಗೆ ಬೇಕಾಗಿದೆ?!
ಕೆಲವು ಸಂದರ್ಭಗಳಲ್ಲಿ ಇಂತಹ ಪ್ರಕರಣಗಳು ಹೊರಬಂದಾಗ ಸರಕಾರ ತೋರಿಕೆಗೆ ಒಂದು ತನಿಖಾ ಸಮಿತಿಯನ್ನು ರಚಿಸಿ ಕಾಲಕ್ರಮೇಣ ಜನಮಾನಸದಿಂದ ಹಗರಣವನ್ನು ಮರೆಯುವಂತೆ ಮಾಡುತ್ತದೆ. ಅಷ್ಟರಲ್ಲಿ ಇನ್ನೊಂದು ಪರೀಕ್ಷೆ ಬರುತ್ತದೆ. ಏಜೆಂಟರು ಅಕ್ರಮಕ್ಕೆ ಸಿದ್ಧ್ದರಾಗಿ ಗಾಳಕ್ಕೆ ಸಿಲುಕುವ ಅಭ್ಯರ್ಥಿಗಳಿಗೆ ಕಾಯುತ್ತಿರುತ್ತಾರೆ. ಇನ್ನೊಂದು ಕಡೆ ಕೆಪಿಎಸ್ಸಿ ಮೂಲಕ ಬದುಕು ಕಟ್ಟಿಕೊಳ್ಳಲು ಲಕ್ಷಾಂತರ ಬಡ ಅಭ್ಯರ್ಥಿಗಳು ಕನಸು ಕಾಣುತ್ತಾ, ಸಾಲ-ಸೋಲ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುತ್ತಿರುತ್ತಾರೆ. ಸುಧಾರಣೆ ಯಾರಿಗೆ ಬೇಕಾಗಿದೆ?
ಸಂವಿಧಾನದ 316ನೇ ಕಲಂನ ಆಸೆಯಂತೆ ಪ್ರತಿ ರಾಜ್ಯದಲ್ಲಿ ಒಂದೊಂದು ಲೋಕಸೇವಾ ಆಯೋಗ ಇರಬೇಕು. ಅದರ ಮೂಲಕ ಸರಕಾರಿ ಹುದ್ದೆಗಳಿಗೆ ಪಾರದರ್ಶಕವಾಗಿ ಪರೀಕ್ಷೆ ನಡೆದು ಅಭ್ಯರ್ಥಿಗಳು ಆಯ್ಕೆಯಾಗಬೇಕು ಎಂಬುದು. ಆದರೆ ಇಂದು ಕರ್ನಾಟಕ ಸೇರಿದಂತೆ ಎಷ್ಟೋ ರಾಜ್ಯಗಳಲ್ಲಿ ಲೋಕಸೇವಾ ಆಯೋಗಗಳು ಹೆಚ್ಚು ಕಡಿಮೆ ಮಾರಾಟಕ್ಕೆ ಬಂದು ನಿಂತಿವೆ ಎನ್ನಬಹುದು. ಕಳೆದ 20 ವಷರ್ಗಳಲ್ಲಿ ಕರ್ನಾಟಕ ಲೋಕಸೇವಾ ಆಯೋಗ ಅಕ್ರಮ ಜಾಲಗಳಿಗೆ ಪ್ರಸಿದ್ಧಿಯಾಗಿದೆ. ಅಭ್ಯರ್ಥಿಗಳಿಂದ ಲಕ್ಷಾಂತರ ಹಣ ಪಡೆದು ಪ್ರಶ್ನೆ ಪತ್ರಿಕೆ ನೀಡುವ ಅಥವಾ ಮೌಲ್ಯಮಾಪನದಲ್ಲಿ ಅವ್ಯವಹಾರದಂತಹ ನೂರಾರು ಪ್ರಕರಣಗಳು ಆಯೋಗದ ಇತಿಹಾಸದಲ್ಲಿ ಬಂದು ಹೋಗಿವೆ. ಯಾವ ಪರೀಕ್ಷೆಗಳು ನಡೆದರೂ ಉದ್ಯೋಗ ಪಡೆದವರು ಮತ್ತು ಉದ್ಯೋಗ ಪಡೆಯಲು ವಿಫಲರಾದವರು ಇಬ್ಬರು ಸಹ ಸಂಶಯಪಡಬೇಕಾದ ಪರಿಸ್ಥಿತಿ ಬಂದಿದೆ. ಇದರಿಂದ ಸರಕಾರಿ ಹುದ್ದೆ ಪಡೆಯಲು ಒದ್ದಾಡುತ್ತ, ಸ್ಪರ್ಧಾತ್ಮಕ ಪರೀಕ್ಷೆಗೆ ಹಣ ಖರ್ಚು ಮಾಡಿ ಸಿದ್ಧರಾಗುತ್ತಿರುವ ಲಕ್ಷಾಂತರ ಅಭ್ಯರ್ಥಿಗಳು, ತಮ್ಮ ಮಕ್ಕಳು ಮುಂದೆ ಸರಕಾರಿ ಹುದ್ದೆ ಪಡೆಯುತ್ತಾರೆಂದು ಕನಸು ಕಾಣುವ ಪೋಷಕರು..ಎಲ್ಲರಿಗೂ ಒಂದು ರೀತಿಯ ಭ್ರಮನಿರಸನ. ಕೆಲವರ ಪ್ರಕಾರ ಆಯೋಗವನ್ನೇ ಮುಚ್ಚುವುದೇ ಪರಿಹಾರ ಎನ್ನುವ ಮಟ್ಟಿಗೆ ಸಮಸ್ಯೆ ಸಂಕೀರ್ಣವಾಗಿದೆ. ಲೋಕಸೇವಾ ಆಯೋಗ ನಡೆಸುವ ಹೆಚ್ಚು ಕಡಿಮೆ ಎಲ್ಲಾ ಪರೀಕ್ಷೆಗಳಿಗೆ ಮುಂಚಿತವಾಗಿಯೇ ಕೆಲವು ಅಭ್ಯರ್ಥಿಗಳು ಮತ್ತು ಆಯೋಗದ ಕೆಲವು ಅಧಿಕಾರಿಗಳ ನಡುವೆ ಒಂದು ರೀತಿಯಲ್ಲಿ ಡೀಲಿಂಗ್ ನಡೆದಿರುತ್ತದೆ ಎನ್ನುವ ಆರೋಪವಿದೆ. ಪ್ರಶ್ನೆ ಪತ್ರಿಕೆಯಿಂದ ಹಿಡಿದು ಅಭ್ಯರ್ಥಿಗೆ ಹುದ್ದೆ ತೋರಿಸುವವರೆಗೂ ಒಂದು ರೀತಿಯ ಪ್ಯಾಕೇಜ್ ಎನ್ನಬಹುದು. ಕೆಲವು ವರದಿಗಳ ಪ್ರಕಾರ ಕೆಪಿಎಸ್ಸಿಯ ಕೆಲವು ಕ್ಲರ್ಕ್ರಿಂದ ಅಧಿಕಾರಿಗಳವರೆಗೂ ಇಂತಹ ವ್ಯವಹಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆನ್ನುವ ಆರೋಪವಿದೆ. ಪ್ರತಿ ಬಾರಿ ವಿವಿಧ ಹುದ್ದೆಗೆ ಅರ್ಜಿ ಕರೆದಾಗಲೆಲ್ಲಾ ಈ ಗುಂಪು ತೆರೆಮರೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಬಾರಿ ಎಫ್ಡಿಎ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳು 15 ರಿಂದ 20 ಲಕ್ಷ ರೂ.ಗಳಿಗೆ ಮಾರಾಟವಾದ ವಿಚಾರ ಕೇಳಿದರೆ ನಿಜಕ್ಕೂ ಗಾಬರಿಯಾಗುತ್ತದೆ. ಆರೋಪಿಗಳ ಪ್ರಕಾರ ಡೀಲಿಂಗ್ಗೆ ಒಪ್ಪಿರುವ ಅಭ್ಯರ್ಥಿಗಳಿಂದ ಶೇ. 75 ಹಣವನ್ನು ಮುಂಗಡವಾಗಿ ಪಡೆದ ಗುಂಪು ರಾತ್ರೋರಾತ್ರಿ ಪ್ರಶ್ನೆಪತ್ರಿಕೆಗಳನ್ನು ಮತ್ತು ಕೀ ಉತ್ತರಗಳನ್ನು ಅಭ್ಯರ್ಥಿಗಳ ಮನೆಗೆ ತಲುಪಿಸಿ ನಂತರ ಸಂಪೂರ್ಣ ಹಣವನ್ನು ಪಡೆದಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ ಪ್ರಶ್ನೆಗಳಿಗೆ ಉತ್ತರ ನೆನಪಿಟ್ಟುಕೊಳ್ಳಲು ಆಗದವರಿಗೆ ಉತ್ತರಗಳನ್ನು ಸಹ ಅಭ್ಯರ್ಥಿಗಳಿಗೆ ಮನದಟ್ಟು ಮಾಡಿಸಿದ್ದಾರೆ. ಏಕೆಂದರೆ ನಿಜವಾದ ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ಶ್ರೇಣಿಗಳು(ಎಬಿಸಿಡಿ) ಬದಲಾಗುತ್ತದೆ. ಹಾಗಾಗಿ ಪರೀಕ್ಷೆಗೆ ಮುಂಚಿತವಾಗಿ ಅಭ್ಯರ್ಥಿಗಳಿಗೆ ಯಾವ ಯಾವ ಪ್ರಶ್ನೆಗಳಿಗೆ ಯಾವ ಉತ್ತರ ಎಂದು ಕೀ ಉತ್ತರಗಳನ್ನು ನೆನಪಿಟ್ಟುಕೊಳ್ಳುವಂತೆ ಇಲ್ಲಿ ಮಾಡಿದ್ದಾರೆ. ಆದರೂ ಕೆಲವೊಮ್ಮೆ ಹೆಚ್ಚಿನ ಅಭ್ಯರ್ಥಿಗಳಿಗೆ ಉತ್ತರಗಳನ್ನು ನೆನಪಿಟ್ಟುಕೊಳ್ಳುವುದು ಸವಾಲಿನ ಕೆಲಸ. ಅಂತಹವರಿಂದ ಹೆಚ್ಚಿನ ಹಣವನ್ನು ಪಡೆದು ಯಾವ ಪ್ರಶ್ನೆಗಳಿಗೆ ಉತ್ತರ ಗೊತ್ತಿರುವುದಿಲ್ಲವೋ ಅಂತಹ ಪ್ರಶ್ನೆಗಳನ್ನು ಖಾಲಿ ಬಿಡುವಂತೆ ಸೂಚಿಸಿದ್ದಾರೆ. ಇದು ಮತ್ತೊಂದು ರೀತಿಯ ಡೀಲಿಂಗ್. ಇಲ್ಲಿ ಏಜೆಂಟ್ಗೆ ಹಣ ನೀಡಿದ ಅಭ್ಯರ್ಥಿಯು ಯಾವ ಇಂಕಿನ ಮತ್ತು ಯಾವ ಕಂಪೆನಿಯ ಪೆನ್ನನ್ನು ಬಳಸಬೇಕೆಂದು ಮೊದಲೇ ಸೂಚಿಸುತ್ತಾರೆ. ಅದೇ ಇಂಕಿನ ಪೆನ್ನುಗಳಿಂದ ಏಜೆಂಟರು ಅಭ್ಯರ್ಥಿಯ ಪತ್ರಿಕೆಯಲ್ಲಿ ತಾವೇ ಸರಿ ಉತ್ತರವನ್ನು ತುಂಬುತ್ತಾರೆ. ಇಲ್ಲಿ ಅಭ್ಯರ್ಥಿ ತನಗೆ ಖಂಡಿತವಾಗಿ ಉತ್ತರವನ್ನು ಗೊತ್ತಿದ್ದರೆ ಮಾತ್ರ ಗುರುತಿಸಬೇಕಾಗುತ್ತದೆ. ಕೆಲವು ವರದಿಗಳ ಪ್ರಕಾರ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಹೋಗುವ ಮುಂಚಿತವಾಗಿಯೇ ಈ ಎಲ್ಲಾ ಕೆಲಸ ರಹಸ್ಯವಾಗಿ ಮುಗಿದು ಹೋಗುತ್ತದೆ. ಇದು ಬಹು ಆಯ್ಕೆ ಮಾದರಿಯ ಪತ್ರಿಕೆಯಲ್ಲಿ ನಡೆಯುವ ವ್ಯವಹಾರವಾದರೆ, ಇನ್ನು ಕೆಲವರು ಕೆಎಎಸ್ನಂತಹ ಮುಖ್ಯ ಪರೀಕ್ಷೆಯಲ್ಲಿ ಹಣ ನೀಡುವ ಅಭ್ಯರ್ಥಿಗಳ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡಿಸುವುದರಲ್ಲಿ ಏಜೆಂಟರು ಇನ್ನೊಂದು ರೀತಿಯ ಮಾರ್ಗವನ್ನು ಅನುಸರಿಸುತ್ತಾರೆ ಎಂಬ ಆರೋಪವಿದೆ. ಅದರ ಮೂಲಕ ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಬರುವಂತೆ ನೋಡಿಕೊಳ್ಳುತ್ತಾರೆ. ಅಲ್ಲದೆ ಯಾರ ಉತ್ತರ ಪತ್ರಿಕೆಯನ್ನು ಯಾರು ಮೌಲ್ಯಮಾಪನ ಮಾಡುತ್ತಾರೆ ಎಂಬುದನ್ನು ಸಹ ಅಭ್ಯರ್ಥಿಗಳಿಗೆ ಮೊದಲೇ ಮಾಹಿತಿ ನೀಡಿರುತ್ತಾರೆ ಎನ್ನುತ್ತಾರೆ ಒಳಗಿನ ಮಾಹಿತಿ ಬಲ್ಲವರು. ಸುಮಾರು 18 ವಷರ್ಗಳ ಹಿಂದೆ ಒಮ್ಮೆ ಕೆಲವು ಅಭ್ಯರ್ಥಿಗಳು ಓರ್ವ ಮೌಲ್ಯಮಾಪಕರ ಮನೆಗೆ ಭೇಟಿ ನೀಡಿ ಅವರನ್ನೇ ವ್ಯವಹಾರಕ್ಕೆ ಕುದುರಿಸಲು ಬುಕ್ ಮಾಡಲು ಯತ್ನಿಸಿದ ಘಟನೆ ನಡೆದಿತ್ತು. ಇದರಿಂದ ಹೆದರಿದ ಆ ಮೌಲ್ಯಮಾಪಕರು ಮೌಲ್ಯಮಾಪನ ಕೆಲಸವನ್ನೇ ಅಂದು ಕೈಬಿಟ್ಟಿದ್ದರು. ಕಳೆದ 20 ವರ್ಷಗಳಲ್ಲಿ ಇಂತಹ ಹಲವಾರು ಹಗರಣಗಳಿಗೆ ಸಿಲುಕಿರುವ ಕರ್ನಾಟಕ ಲೋಕಸೇವಾ ಆಯೋಗ ಇತ್ತೀಚೆಗೆ ಒಂದು ಪ್ರಮುಖ ಸುಧಾರಣೆಯನ್ನು ಪರಿಚಯಿಸಿದ್ದು, ವ್ಯಕ್ತಿತ್ವ ಪರೀಕ್ಷೆಗಳಿಗೆ, ಮೊದಲು ಇದ್ದ 200 ಅಂಕಗಳಿಂದ 50 ಅಂಕಕ್ಕೆ ಕಡಿತಗೊಳಿಸಿದೆ. ಆದರೆ ಇದು ಸಹ ಯಾವುದೇ ಪರಿಣಾಮ ಬೀರಿಲ್ಲ. ಸಂದರ್ಶನದಲ್ಲಿ ಸಹ ಹೆಚ್ಚಿನ ಪ್ರಮಾಣದ ಅಕ್ರಮ ನಡೆಯುತ್ತವೆ ಎಂಬ ಆರೋಪವಿದೆ. ಕೆಲವೊಮ್ಮೆ ಮುಖ್ಯ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದವರು ಸಂದರ್ಶನದಲ್ಲಿ ಹೆಚ್ಚು ಅಂಕ ಪಡೆದು ಉನ್ನತ ಹುದ್ದೆಯನ್ನು ಪಡೆದಿರುವ ಹಲವಾರು ಉದಾಹರಣೆಗಳು ನಮ್ಮ ಮುಂದೆ ಇದೆ. ಒಂದು ರೀತಿಯಲ್ಲಿ ತಮಗೆ ಬೇಕಾದ ಹುದ್ದೆಯನ್ನು ಪಡೆಯಲು ಅಭ್ಯರ್ಥಿಗಳು ಟೆಂಡರ್ ಪದ್ಧತಿ ಮೊರೆಹೋಗುತ್ತಾರೆ ಎಂದರೂ ತಪ್ಪಲ್ಲ. ಆಯೋಗದ ಒಳಗಿನ ಎಲ್ಲರಿಗೂ ಈ ಎಲ್ಲಾ ವಿಚಾರಗಳು ತಿಳಿದಿದ್ದರೂ ಅವರು ಯಾರು ಸಹ ಬಾಯಿ ಬಿಡುವುದಿಲ್ಲ. ಯಾಕೆಂದರೆ ಇದರಲ್ಲಿ ಅವರು ನೇರಾನೇರವಾಗಿ ಭಾಗವಹಿಸದಿದ್ದರೂ ಅವರಿಗೆ ಬರಬೇಕಾದ ಪಾಲು ಬಂದೇ ಬರುತ್ತದೆ
2011, 2014, 2015, 2017ರಲ್ಲಿ ನಡೆದ ಹಲವಾರು ನೇಮಕಾತಿ ಪ್ರಕರಣಗಳು ಅಕ್ರಮ ನಡೆದಿದೆ ಎಂದು ಆರೋಪಿಸಿ ಸದ್ಯ ನ್ಯಾಯಾಲಯಗಳಲ್ಲಿವೆ. ಕೆಲವು ಹುದ್ದೆಗಳ ಆಯ್ಕೆಯನ್ನು ನ್ಯಾಯಾಲಯ ಸಂಪೂರ್ಣ ರದ್ದುಗೊಳಿಸಿದೆ. ಇದಕ್ಕೆ ತಾಜಾ ಉದಾಹರಣೆ 1998ರಲ್ಲಿ ನಡೆದ ಕೆಎಎಸ್ ಅಧಿಕಾರಿಗಳ ಪರೀಕ್ಷೆಯಲ್ಲಿ ಅಕ್ರಮ ಸಾಬೀತಾಗಿದ್ದು ಇತ್ತೀಚೆಗೆ ಕೆಲವು ಮಂದಿ ಅಧಿಕಾರಿಗಳನ್ನು ಹುದ್ದೆಯಿಂದ ಮುಕ್ತಗೊಳಿಸಲಾಗಿತ್ತು. ಇಂತಹ ಪರೀಕ್ಷೆ ಪಾರದರ್ಶಕವಾಗಿತ್ತು ಎಂದು ಹೇಳಲು ಒಂದು ಉದಾಹರಣೆ ಸಹ ಆಯೋಗದ ಬಳಿ ಇಲ್ಲ. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅತಿಯಾದ ರಾಜಕೀಯ, ಹಣ ಎಲ್ಲವೂ ಸಹ ಕೆಪಿಎಸ್ಸಿಗೆ ಹೊಸದಲ್ಲ. ಕೆಪಿಎಸ್ಸಿ ಅಧ್ಯಕ್ಷರ ಮತ್ತು ಸದಸ್ಯರ ನೇಮಕಾತಿಯಿಂದ ಇಲ್ಲಿ ಅಕ್ರಮಗಳು ಆರಂಭವಾಗುತ್ತವೆ. ರಾಜಕೀಯವಾಗಿ ಪ್ರಬಲವಾಗಿದ್ದ ಮತ್ತು ಪ್ರಬಲ ಕೋಮಿನವರಿಗೆ ಇಲ್ಲಿ ಅಧ್ಯಕ್ಷ ಮತ್ತು ಸದಸ್ಯ ಸ್ಥಾನಗಳನ್ನು ನೀಡಲಾಗುತ್ತದೆ.
ಕೆಲವೊಮ್ಮೆ ಕೋರ್ಟ್ ಮತ್ತು ಕೆಎಟಿ ರಜೆ ಇರುವ ದಿನಗಳಲ್ಲಿ ಕೆಪಿಎಸ್ಸಿ ಉದ್ದೇಶಪೂರ್ವಕವಾಗಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಕೆಲವೊಮ್ಮೆ ತಾತ್ಕಾಲಿಕ ಆಯ್ಕೆಪಟ್ಟಿಗೆ ಆಕ್ಷೇಪ ಸಲ್ಲಿಸಲು ಕಡಿಮೆ ಅವಧಿಯನ್ನು ಆಯೋಗ ಬೇಕಂತಲೇ ನಿಗದಿಪಡಿಸುತ್ತದೆ. ಕೆಲ ಸಂದರ್ಭಗಳಲ್ಲಿ ಅಭ್ಯರ್ಥಿಗಳು ಸಲ್ಲಿಸುವ ಆಕ್ಷೇಪಣೆಯನ್ನು ಕೆಪಿಎಸ್ಸಿ ಪರಿಗಣಿಸುವುದೇ ಇಲ್ಲ. ಇನ್ನು ಕೆಲ ಸಂದರ್ಭಗಳಲ್ಲಿ ಕೆಪಿಎಸ್ಸಿ ಸದಸ್ಯರೇ ಮೌಲ್ಯಮಾಪನ ಕೇಂದ್ರಕ್ಕೆ ಭೇಟಿ ನೀಡಿ ಸಿಕ್ಕಿಬಿದ್ದಿರುವುದು ವರದಿಯಾಗಿದೆ. ಕೆಲವೊಮ್ಮೆ ಹುದ್ದೆಗಳ ರೋಸ್ಟರ್ ಪದ್ಧತಿಯನ್ನು ಸಹ ತಮಗೆ ಬೇಕಾದಂತೆ ಬದಲಾವಣೆ ಮಾಡಿಕೊಳ್ಳುತ್ತದೆ. ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಕೆಲವು ಪ್ರವರ್ಗಕ್ಕೆ ಸೇರಬೇಕಾದ ಹುದ್ದೆಗಳನ್ನು ಖಾಲಿ ತೋರಿಸುತ್ತದೆ. ಅಲ್ಲದೇ ವಿಶೇಷ ತಂತ್ರಜ್ಞಾನವನ್ನು ಬಳಸಿ ಮುಖ್ಯಪರೀಕ್ಷೆಯ ಅಂಕಗಳನ್ನು ಮೌಲ್ಯಮಾಪನ ಮುಗಿದನಂತರ ಆಯೋಗದ ಒಳಗಿನವರೇ ತಿದ್ದುತ್ತಾರೆ ಎನ್ನುವ ಆರೋಪ ಕೆಲವಷರ್ಗಳ ಹಿಂದೆ ಕೇಳಿಬಂದಿತ್ತು. 2018ರಲ್ಲಿ ನಡೆದ ಕೆಎಎಸ್ ಮುಖ್ಯ ಪರೀಕ್ಷೆಯಲ್ಲಿ ಸುಮಾರು 1,083 ಅಭ್ಯರ್ಥಿಗಳು ಒಂದೇ ರೀತಿಯ ಅಂಕವನ್ನು ಪಡೆದಿದ್ದರು. ಇದೆಲ್ಲ ಹೇಗೆ ಸಾಧ್ಯ? ಇದೇ ಅವಧಿಯಲ್ಲಿ ಕೆಪಿಎಸ್ಸಿಯ ಓರ್ವ ಸದಸ್ಯೆ ಅಭ್ಯರ್ಥಿಯೋರ್ವರ ಜೊತೆ ಮಾತನಾಡಿದ ಮೊಬೈಲ್ ಧ್ವನಿ ವೈರಲ್ ಆಗಿತ್ತು. ಇವೆಲ್ಲವನ್ನು ಹೇಳುತ್ತಾ ಹೋದರೆ ಕೆಪಿಎಸ್ಸಿ ಯಲ್ಲಿ ಇದುವರೆಗೆ ನಡೆದಿರುವ ಹಗರಣಗಳ ವಿಚಾರಣೆಗೆ ಒಂದು ಪ್ರತ್ಯೇಕ ನ್ಯಾಯಾಲಯವನ್ನೇ ಸ್ಥಾಪಿಸಬೇಕು. ಕೆಲ ವರ್ಷಗಳ ಹಿಂದೆ ಹೋಟ ಸಮಿತಿ ಕೆಪಿಎಸ್ಸಿಯನ್ನು ಸುಧಾರಿಸುವ ಕುರಿತು ವರದಿ ಸಲ್ಲಿಸಿದ್ದು ಅದು ಇನ್ನೂ ಸಹ ಜಾರಿಗೆ ಬಂದಿಲ್ಲ. ಅಂದು ಈ ಸಮಿತಿಯು ಕೆಪಿಎಸ್ಸಿಯಲ್ಲಿ ಪಾರದರ್ಶಕತೆ ಮತ್ತು ಭ್ರಷ್ಟ್ಟಾಚಾರ ರಹಿತ ಪರೀಕ್ಷೆ ನಡೆಸಲು ಹತ್ತು ಹಲವಾರು ಸುಧಾರಣೆಗಳನ್ನು ಸರಕಾರಕ್ಕೆ ಸೂಚಿಸಿತ್ತು. ಹೋಟ ಸಮಿತಿಯ ವರದಿ ಪ್ರಕಾರ ಕೆಪಿಎಸ್ಸಿಯ ಪರೀಕ್ಷಾ ಕಾರ್ಯದಲ್ಲಿ ಸಂಪೂರ್ಣ ಸುಧಾರಣೆಗಳಾಗಬೇಕಿದೆ. ಹೋಟ ಸಮಿತಿಯ ಸಲಹೆಯಂತೆ ಮುಖ್ಯಪರೀಕ್ಷೆಯ ಅಂಕಗಳನ್ನು ಯಾವ ಕಾರಣಕ್ಕೂ ಮುಂಚಿತವಾಗಿ ಪ್ರಕಟಿಸಬಾರದು ಎಂಬ ಅಂಶವನ್ನು ಮಾತ್ರ ಸರಕಾರ ಅನುಸರಿಸಿದೆ. ಆದರೆ ಉಳಿದ ಯಾವ ಅಂಶಗಳನ್ನು ಯಾವ ಸರಕಾರಗಳು ಸಹ ಇದುವರೆಗೂ ಜಾರಿಗೆ ತರಲಿಲ್ಲ. ಮೊದಲು ಬಹಳ ವರ್ಷಗಳಿಂದ ಆಯೋಗದಲ್ಲಿ ಕೆಲಸ ಮಾಡುವ ಎಲ್ಲಾ ಮಟ್ಟದ ಅಧಿಕಾರಿಗಳನ್ನು ಕಾಲಕಾಲಕ್ಕೆ ಬದಲಾಯಿಸಬೇಕಾಗುತ್ತದೆ. ಕಾಲ ಬದಲಾದ ಹಾಗೆ ಪರೀಕ್ಷೆ ಮತ್ತು ಮೌಲ್ಯಮಾಪನ ವಿಚಾರದಲ್ಲಿ ಆಯೋಗ ಹೊಸ ತಂತ್ರಜ್ಞಾನ ಬಳಸಬೇಕಾಗುತ್ತದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಸಂಪೂರ್ಣ ಕ್ಯಾಮರಾದಲ್ಲಿ ಮಾಡಬೇಕಾಗುತ್ತದೆ. ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ಜೊತೆಗೆ ಇತರ ಖಾಸಗಿ ತಜ್ಞರನ್ನು ಸಹ ಮೌಲ್ಯಮಾಪನಕ್ಕೆ ಬಳಸಿಕೊಳ್ಳಬಹುದು. ಆಯೋಗದ ಒಳಗಡೆ ಪರೀಕ್ಷೆಯ ಬಗ್ಗೆ ಸಂಪೂರ್ಣ ಗೌಪ್ಯತೆ ಕಾಪಾಡುವಲ್ಲಿ ವಿಶೇಷ ತಂತ್ರಜ್ಞಾನವನ್ನು ಬಳಸಬೇಕು. ಇಂತಹ ತಂತ್ರಜ್ಞಾನವನ್ನು ಬಜೆಟ್ ತಯಾರಿಸುವಾಗ ಸರಕಾರದ ಹಣಕಾಸು ಇಲಾಖೆಯಲ್ಲಿ ಅನುಸರಿಸಲಾಗುತ್ತದೆ. ಕೆಲವೊಮ್ಮೆ ಕೆಪಿಎಸ್ಸಿ ತಾನೇ ಮೌಲ್ಯಮಾಪಕರಿಗೆ ಡಿಜಿಟಲ್ ಮೌಲ್ಯಮಾಪನದ ಕೀ ವರ್ಡ್ ಮತ್ತು ಪಾಸ್ವರ್ಡ್ ನೀಡುತ್ತದೆ. ನಿಜ ಹೇಳಬೇಕೆಂದರೆ ಇದನ್ನು ಮೌಲ್ಯಮಾಪಕರೇ ತಮಗೆ ಬೇಕಾದ ಕೀವರ್ಡ್ ಮತ್ತು ಪಾಸ್ವರ್ಡ್ ಸೃಷ್ಟಿಸಿ ಕೊಳ್ಳಬೇಕಾಗುತ್ತದೆ ಇತ್ಯಾದಿ. ಕೆಲವು ಸಂದರ್ಭಗಳಲ್ಲಿ ಇಂತಹ ಪ್ರಕರಣಗಳು ಹೊರಬಂದಾಗ ಸರಕಾರ ತೋರಿಕೆಗೆ ಒಂದು ತನಿಖಾ ಸಮಿತಿಯನ್ನು ರಚಿಸಿ ಕಾಲಕ್ರಮೇಣ ಜನಮಾನಸದಿಂದ ಹಗರಣವನ್ನು ಮರೆಯುವಂತೆ ಮಾಡುತ್ತದೆ. ಅಷ್ಟರಲ್ಲಿ ಇನ್ನೊಂದು ಪರೀಕ್ಷೆ ಬರುತ್ತದೆ. ಏಜೆಂಟರು ಅಕ್ರಮಕ್ಕೆ ಸಿದ್ಧ್ದರಾಗಿ ಗಾಳಕ್ಕೆ ಸಿಲುಕುವ ಅಭ್ಯರ್ಥಿಗಳಿಗೆ ಕಾಯುತ್ತಿರುತ್ತಾರೆ. ಇನ್ನೊಂದು ಕಡೆ ಕೆಪಿಎಸ್ಸಿ ಮೂಲಕ ಬದುಕು ಕಟ್ಟಿಕೊಳ್ಳಲು ಲಕ್ಷಾಂತರ ಬಡ ಅಭ್ಯರ್ಥಿಗಳು ಕನಸು ಕಾಣುತ್ತಾ, ಸಾಲ-ಸೋಲ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುತ್ತಿರುತ್ತಾರೆ. ಸುಧಾರಣೆ ಯಾರಿಗೆ ಬೇಕಾಗಿದೆ?