ಗುತ್ತಿಗೆ ಬೇಕಿದ್ದರೆ ಸೌದಿಯಲ್ಲಿ ಪ್ರಧಾನ ಕಚೇರಿ ಸ್ಥಾಪಿಸಿ: ವಿದೇಶಿ ಕಂಪೆನಿಗಳಿಗೆ ಸೌದಿ ಸೂಚನೆ
ರಿಯಾದ್ (ಸೌದಿ ಅರೇಬಿಯ), ಫೆ. 16: ಸೌದಿ ಅರೇಬಿಯ ಸರಕಾರದ ಹೂಡಿಕೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಬಯಸುವ ಅಂತರ್‌ರಾಷ್ಟ್ರೀಯ ಕಂಪೆನಿಗಳು 2024ರ ಹೊತ್ತಿಗೆ ತಮ್ಮ ಪ್ರಾದೇಶಿಕ ಪ್ರಧಾನ ಕಚೇರಿಗಳನ್ನು ಸೌದಿ ಅರೇಬಿಯದಲ್ಲಿ ಸ್ಥಾಪಿಸಬೇಕು, ಇಲ್ಲದಿದ್ದರೆ ಅವುಗಳಿಗ ಸರಕಾರಿ ಗುತ್ತಿಗೆಗಳು ಸಿಗುವುದಿಲ್ಲ ಎಂದು ದೇಶದ ಹಣಕಾಸು ಸಚಿವ ಮುಹಮ್ಮದ್ ಅಲ್ ಜದಾನ್ ಹೇಳಿದ್ದಾರೆ.
ಜಗತ್ತಿನ ಅತಿ ದೊಡ್ಡ ತೈಲ ರಫ್ತುದಾರ ಹಾಗೂ ವಲಯದ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿರುವ ಸೌದಿ ಅರೇಬಿಯವು, ತನ್ನ ನೆಲದಲ್ಲಿ ಪ್ರಧಾನ ಕಚೇರಿ ಹೊಂದಿರದ ಕಂಪೆನಿಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಗುತ್ತಿಗೆ ನೀಡದಿರಲು ನಿರ್ಧರಿಸಿದೆ.
ಸೌದಿ ಅರೇಬಿಯದಲ್ಲೇ ಖಾಯಂ ನೆಲೆಯನ್ನು ಹೊಂದುವಂತೆ ವಿದೇಶಿ ಕಂಪೆನಿಗಳನ್ನು ಪ್ರೇರೇಪಿಸುವುದು ಈ ಕ್ರಮದ ಹಿಂದಿನ ಉದ್ದೇಶವಾಗಿದೆ. ಇದರಿಂದ ಸೌದಿ ಅರೇಬಿಯದಲ್ಲಿ ಸ್ಥಳೀಯರಿಗೆ ಉದ್ಯೋಗಾವಕಶಗಳೂ ಹೆಚ್ಚಾಗಲಿದೆ.
ಪ್ರಸಕ್ತ ಹೆಚ್ಚಿನ ಅಂತರ್ ರಾಷ್ಟ್ರೀಯ ಕಂಪೆನಿಗಳು ದುಬೈಯಲ್ಲಿ ತಮ್ಮ ವಲಯ ಪ್ರಧಾನ ಕಚೇರಿಗಳನ್ನು ಹೊಂದಿವೆ. ಈಗ ಕಂಪೆನಿಗಳನ್ನು ಆಕರ್ಷಿಸಲು ಸೌದಿ ಅರೇಬಿಯವು ಯುಎಇಯೊಂದಿಗೆ ಸ್ಪರ್ಧೆಗೆ ಇಳಿದಂತಾಗಿದೆ.
ಆದರೆ, ವಿದೇಶಿ ಕಂಪೆನಿಗಳು ಸೌದಿ ಅರೇಬಿಯದ ಖಾಸಗಿ ಕ್ಷೇತದಲ್ಲಿ ಕೆಲಸ ಮಾಡಬಹುದಾಗಿದೆ.
‘‘ಯಾವುದೇ ಕಂಪೆನಿ ತನ್ನ ವಲಯ ಪ್ರಧಾನ ಕಚೇರಿಯನ್ನು ಸೌದಿ ಅರೇಬಿಯಕ್ಕೆ ಸ್ಥಳಾಂತರಿಸಲು ನಿರಾಕರಿಸಿದರೆ, ಅದಕ್ಕೆ ಆ ಹಕ್ಕು ಇದೆ. ಅಂಥ ಕಂಪೆನಿಗಳು ಸೌದಿ ಅರೇಬಿಯದ ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವುದನ್ನು ಮುಂದುವರಿಸಬಹುದಾಗಿದೆ’’ ಎಂದು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಮುಹಮ್ಮದ್ ಅಲ್ ಜದಾನ್ ತಿಳಿಸಿರು.