ಮೋದಿಯನ್ನು ಮೀರಿಸಲಿರುವ ಆದಿತ್ಯನಾಥ್
ಮೋದಿಗೆ ಹೋಲಿಸಿದರೆ ಆದಿತ್ಯನಾಥ್ ಅವರು ಮುಕ್ತ ಹಾಗೂ ನಿರ್ಭಿಡೆಯ ಬಹುಸಂಖ್ಯಾತವಾದಿಯಾಗಿದ್ದಾರೆ. ಮೋದಿ ಕೆಲವೊಮ್ಮೆ ಧರ್ಮಾತೀತವಾಗಿ (ಸಬ್ ಕೆ ಸಾಥ್) ಪ್ರತಿಯೊಬ್ಬರ ಪರವಾಗಿ ಮಾತನಾಡುತ್ತಾರೆ. ಮೆಟ್ರೋದಲ್ಲಿ ಮುಸ್ಲಿಂ ಯಾತ್ರಿಕರ ಜೊತೆ ಪ್ರಯಾಣಿಸುವಂತಹ ಫೋಟೊಗಳನ್ನು ತೆಗೆಸಿಕೊಳ್ಳುತ್ತಾರೆ. ಆದರೆ ಆದಿತ್ಯನಾಥ್ ಅಂತಹ ಯಾವುದೇ ಇಬ್ಬಂದಿತನವನ್ನು ಪ್ರದರ್ಶಿಸುವುದಿಲ್ಲ. ಹಿಂದೂಗಳು ಇತರ ಧರ್ಮಗಳಿಗೆ ಸೇರಿದ ಭಾರತೀಯರಿಗಿಂತ ಹಾಗೂ ನಿರ್ದಿಷ್ಟವಾಗಿ ಮುಸ್ಲಿಮರಿಗಿಂತ ಶ್ರೇಷ್ಠರು ಎಂಬುದಾಗಿ ತಾನು ನಂಬಿದ್ದೇನೆಂದು ಅವರು ತನ್ನ ಮಾತು ಮತ್ತು ಕೃತಿಗಳಲ್ಲಿ ಸ್ಪಷ್ಟಪಡಿಸಿದ್ದಾರೆ.
2020 ಕ್ಯಾಲೆಂಡರ್ ವರ್ಷದಲ್ಲಿ ಮೂರು ವಿಷಯಗಳು ತಲೆಬರಹಗಳಲ್ಲಿ ಪ್ರಾಧಾನ್ಯತೆ ಪಡೆದಿದ್ದವು. ಅವು ಯಾವುವೆೆಂದರೆ ಕೊರೋನ ಸಾಂಕ್ರಾಮಿಕ ಒಡ್ಡಿರುವ ಬೆದರಿಕೆ, ದೇಶದ ಆರ್ಥಿಕತೆಯ ಅಪಾಯಕಾರಿ ಪರಿಸ್ಥಿತಿ ಹಾಗೂ ಚೀನಾದ ಜೊತೆ ಭಾರತದ ಜೊತೆಗಿನ ಗಡಿ ಸಂಘರ್ಷ. ಆದರೆ 2020ರಲ್ಲಿ ಆರೋಗ್ಯ, ಅರ್ಥಶಾಸ್ತ್ರ ಹಾಗೂ ರಕ್ಷಣಾ ವಿಷಯಗಳ ಮುಂದೆ ರಾಜಕೀಯವು ಬಹುತೇಕವಾಗಿ ಹಿನ್ನೆಲೆಗೆ ಸರಿದಿತ್ತು.
ಆದಾಗ್ಯೂ, ಕಳೆದ ವರ್ಷ ಭಾರತದ ರಾಜಕೀಯದಲ್ಲಿ ಒಂದು ಪ್ರಮುಖ ಬೆಳವಣಿಗೆಯುಂಟಾಗಿತ್ತು. ನಮ್ಮ ಗಣರಾಜ್ಯದ ಭವಿಷ್ಯದ ಮೇಲೆ ಗಾಢವಾದ ಹಾಗೂ ಆತಂಕಕಾರಿ ಪರಿಣಾಮಗಳನ್ನು ಉಂಟು ಮಾಡಬಹುದಾದಂತಹ ಬೆಳವಣಿಗೆ ಆದಾಗಿತ್ತು. ಉತ್ತರಪ್ರದೇಶದ ಮುಖ್ಯಮಂತ್ರಿಯವರು ಭಾರತದ ಅತ್ಯಂತ ಪ್ರಮುಖ ರಾಜಕೀಯ ಪಕ್ಷದ ಭಾವಿ ಮಹಾನಾಯಕನಾಗಿ ಹೊರ ಹೊಮ್ಮಿದ ವಿದ್ಯಮಾನ ನಡೆದಿತ್ತು. 2024ರ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿ ಸತತವಾಗಿ ಮೂರನೇ ಬಾರಿಗೆ ಅಧಿಕಾರಕ್ಕೇರಿದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನರೇಂದ್ರ ಮೋದಿ ಅವರ ಉತ್ತರಾಧಿಕಾರಿಯಾಗುವ ಅತ್ಯಂತ ಸಾಧ್ಯತೆಯಿರುವ ವ್ಯಕ್ತಿ ಎಂಬ ಭಾವನೆ 2019ರ ಕೊನೆಯವರೆಗೂ ಇತ್ತು. ಶಾ ಸರಿಸುಮಾರು ಎರಡು ದಶಕಗಳಿಂದ ನರೇಂದ್ರ ಮೋದಿಯವರ ಬಲಗೈಯಂತಿದ್ದರು. ಸಂವಿಧಾನದ 370ನೇ ವಿಧಿಯ ರದ್ದತಿ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವ ಮೂಲಕ ಶಾ ಅವರು ತನ್ನ ಬಾಸ್‌ನ ಅನುಮೋದನೆಯೊಂದಿಗೆ ಅವರ ಉತ್ತರಾಧಿಕಾರಿಯಾಗುವಂತಹ ಸ್ಥಾನಮಾನವನ್ನು ಸ್ಥಾಪಿಸಿಕೊಂಡಿದ್ದರು.
ಅಮಿತ್ ಶಾ ಅವರು ನರೇಂದ್ರ ಮೋದಿಯವರ ಉತ್ತರಾಧಿಕಾರಿಯಾಗಲಿದ್ದಾರೆಂಬ ಸಾಂಪ್ರದಾಯಿಕ ಚಿಂತನೆಯು 2020ರಲ್ಲಿ ಆರಂಭವಾಗಿತ್ತು. ಆದರೆ ಒಂದು ವರ್ಷದ ಆನಂತರ ಹಾಗಾಗುವ ಸಾಧ್ಯತೆ ತುಂಬಾ ಕಡಿಮೆಯಾಗಿದೆ. ಆದಿತ್ಯನಾಥ್ ಅವರಲ್ಲಿ ಪಕ್ಷದ ಅತ್ಯಂತ ಹಿರಿಯ ನಾಯಕರು ತಮ್ಮನ್ನು ತಾವೇ ಗುರುತಿಸಿಕೊಳ್ಳುವಂತಹ, ಪಕ್ಷಕ್ಕೆ ಅತ್ಯಂತ ಬೇಕಾದ ವ್ಯಕ್ತಿಯಾಗಿ ಮೂಡಿ ಬಂದರು. ಉತ್ತರಪ್ರದೇಶದ ಮುಖ್ಯಮಂತ್ರಿಯವರು ಹಿಂದೂ-ಮುಸ್ಲಿಂ ವಿವಾಹಗಳ ವಿರುದ್ಧ ಕಾನೂನುಗಳನ್ನು ಜಾರಿಗೆ ತರಲು ಬಯಸಿದಾಗ ಅದನ್ನು ಶಿವರಾಜ್‌ಸಿಂಗ್ ಚೌಹಾಣ್ ಹಾಗೂ ಬಿ. ಎಸ್. ಯಡಿಯೂರಪ್ಪ ತಮ್ಮ ರಾಜ್ಯದಲ್ಲಿ ಅನುಕರಿಸಲು ಯತ್ನಿಸಿದರು. ವಾಜಪೇಯಿ ಆಳ್ವಿಕೆಯ ವರ್ಷಗಳಲ್ಲಿ ಚೌಹಾಣ್ ಹಾಗೂ ಯಡಿಯೂರಪ್ಪ ಅವರು ಶಾ ಅಥವಾ ಮೋದಿಯವರಂತಹ ಕಟ್ಟರ್‌ವಾದಿಗಳಿಗೆ ಹೋಲಿಸಿದರೆ ಮೃದು ಹಾಗೂ ಹೊಂದಾಣಿಕೆಯ ಧೋರಣೆಯವರಾಗಿ ಕಾಣಿಸುತ್ತಿದ್ದರು. ಇದೀಗ ಅವರು ಧರ್ಮಾಂಧತೆಯ ವಿಷಯದಲ್ಲಿ ಸೌಮ್ಯ ಧೋರಣೆಯನ್ನು ತೊರೆಯುವುದರಲ್ಲಿ ತಮ್ಮ ರಾಜಕೀಯ ಅಸ್ತಿತ್ವವಿದೆಯೆಂಬ ನಂಬಿಕೆಯಿಂದ ತಮ್ಮ ಭವಿಷ್ಯವನ್ನು ಆದಿತ್ಯನಾಥ್ ಅವರ ದಾರಿಯಲ್ಲಿ ಕಂಡು ಕೊಂಡಿದ್ದಾರೆ.
2012-13ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಗೇರುವ ತನ್ನ ಆಕಾಂಕ್ಷೆಯನ್ನು ಬಹಿರಂಗಪಡಿಸಿದಾಗ ಅವರು ದೇಶಾದ್ಯಂತ ‘ಗುಜರಾತ್ ಮಾದರಿ’ಯನ್ನು ಜಾರಿಗೊಳಿಸುವ ಬಗ್ಗೆ ಮಾತನಾಡಿದ್ದರು. ಈ ಗುಜರಾತ್ ಮಾದರಿಯು ಪ್ರಗತಿಪರ, ಬಹಿರ್ಗಾಮಿ ಆರ್ಥಿಕ ಹಾಗೂ ಸಾಮಾಜಿಕ ದೃಷ್ಟಿಕೋನವನ್ನು ಪ್ರತಿನಿಧಿಸುತ್ತದೆ ಎಂದು ಮೋದಿ ಘೋಷಿಸಿದ್ದರು. ಮುಸ್ಲಿಮರ ಕಡೆಗಣನೆ ಹಾಗೂ ಭಿನ್ನಾಭಿಪ್ರಾಯಗಳ ಬಗ್ಗೆ ಅಸಹಿಷ್ಣುತೆಯ ವಿಚಾರದಲ್ಲಿ ಮುಖ್ಯಮಂತ್ರಿಯಾಗಿ ಮೋದಿಯವರ ಕರಾಳದಾಖಲೆಗಳ ಬಗ್ಗೆ ಅವರ ಟೀಕಾಕಾರರು ಬೆಟ್ಟುಮಾಡಿ ತೋರಿಸುತ್ತಾರೆ. ಆದಿತ್ಯನಾಥ್ ಅವರು ಈವರೆಗೆ ಉತ್ತರಪ್ರದೇಶ ಮಾದರಿಗೆ ಸಂಬಂಧಿಸಿ ಅಂತಹ ಯಾವುದೇ ಸ್ಪಷ್ಟವಾದ ಘೋಷಣೆಗಳನ್ನು ಮಾಡಿಲ್ಲ. ಆದರೂ, ಅವರು ತನ್ನ ರಾಜ್ಯದಲ್ಲಿ ಈವರೆಗೆ ಮಾಡಿರುವುದನ್ನು ನೋಡಿದರೆ, ಅದು ಏನನ್ನು ಪ್ರತಿನಿಧಿಸುತ್ತದೆ ಎಂಬ ಬಗ್ಗೆ ನಮಗೆ ಸರಿಯಾದ ಗ್ರಹಿಕೆ ಉಂಟಾಗುತ್ತದೆ.
ಖಂಡಿತವಾಗಿಯೂ ಮೋದಿ ಹಾಗೂ ಆದಿತ್ಯನಾಥ್ ನಡುವೆ ಗಮನಾರ್ಹವಾದ ಸಾಮ್ಯತೆಗಳಿವೆ. ಇವರಿಬ್ಬರೂ ಸರ್ವಾಧಿಕಾರಿ ವ್ಯಕ್ತಿತ್ವಕ್ಕೆ ಪಠ್ಯಪುಸ್ತಕದಂತಹ ಉದಾಹರಣೆಗಳಾಗಿದ್ದಾರೆ. ಇಬ್ಬರೂ ಕೂಡಾ ತಮ್ಮ ಸುತ್ತಮುತ್ತಲಿನಲ್ಲಿರುವ ಸಂಪುಟ ಸಹದ್ಯೋಗಿಗಳಾಗಿರಲಿ, ಶಾಸನಸಭಾ ಸದಸ್ಯರಾಗಿರಲಿ, ಉನ್ನತ ಅಧಿಕಾರಿಗಳಾಗಿರಲಿ, ವೈಜ್ಞಾನಿಕ ತಜ್ಞರಾಗಿರಲಿ, ಮಾಧ್ಯಮಮಂದಿ ಅಥವಾ ಸಾರ್ವಜನಿಕರಿರಲಿ ಅವರ ಮೇಲೆ ತಮ್ಮ ಇಚ್ಛೆಗಳನ್ನು ಹೇರಲು ಬಯಸುವವರಾಗಿದ್ದಾರೆ. ಇಬ್ಬರೂ ಕೂಡಾ ನಿರ್ದಿಷ್ಟವಾದ ಭ್ರಮಾಧೀನತೆಯನ್ನು ಹೊಂದಿದ್ದು, ವಾಸ್ತವವಾದ ಅಥವಾ ಕಾಲ್ಪನಿಕವಾದ ಎಲ್ಲಾ ಸಾಧನೆಗಳ ಶ್ರೇಯಸ್ಸು ತಮಗೆ ಮಾತ್ರವೇ ಸಲ್ಲಬೇಕೆಂದು ಬಯಸುವವರಾಗಿದ್ದಾರೆ.
ಆದಾಗ್ಯೂ, ಅಲ್ಲಿ ಪ್ರಮುಖ ವ್ಯತ್ಯಾಸಗಳೂ ಇವೆ. ಮೋದಿಗೆ ಹೋಲಿಸಿದರೆ ಆದಿತ್ಯನಾಥ್ ಅವರು ಮುಕ್ತ ಹಾಗೂ ನಿರ್ಭಿಡೆಯ ಬಹುಸಂಖ್ಯಾತವಾದಿಯಾಗಿದ್ದಾರೆ. ಮೋದಿ ಕೆಲವೊಮ್ಮೆ ಧರ್ಮಾತೀತವಾಗಿ (ಸಬ್ ಕೆ ಸಾಥ್) ಪ್ರತಿಯೊಬ್ಬರ ಪರವಾಗಿ ಮಾತನಾಡುತ್ತಾರೆ. ಮೆಟ್ರೋದಲ್ಲಿ ಮುಸ್ಲಿಂ ಯಾತ್ರಿಕರ ಜೊತೆ ಪ್ರಯಾಣಿಸುವಂತಹ ಫೋಟೊಗಳನ್ನು ತೆಗೆಸಿಕೊಳ್ಳುತ್ತಾರೆ. ಆದರೆ ಆದಿತ್ಯನಾಥ್ ಅಂತಹ ಯಾವುದೇ ಇಬ್ಬಂದಿತನವನ್ನು ಪ್ರದರ್ಶಿಸುವುದಿಲ್ಲ. ಹಿಂದೂಗಳು ಇತರ ಧರ್ಮಗಳಿಗೆ ಸೇರಿದ ಭಾರತೀಯರಿಗಿಂತ ಹಾಗೂ ನಿರ್ದಿಷ್ಟವಾಗಿ ಮುಸ್ಲಿಮರಿಗಿಂತ ಶ್ರೇಷ್ಠರು ಎಂಬುದಾಗಿ ತಾನು ನಂಬಿದ್ದೇನೆಂದು ಅವರು ತನ್ನ ಮಾತು ಮತ್ತು ಕೃತಿಗಳಲ್ಲಿ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿಯಾಗಿದ್ದಾಗ ಮೋದಿ ಅವರು ಗುಜರಾತ್‌ನೊಳಗೆ ತನ್ನ ಟೀಕಾಕಾರರನ್ನು ಹತ್ತಿಕ್ಕಲು ಹಾಗೂ ವೌನವಾಗಿಸಲು ಪೊಲೀಸರು ಹಾಗೂ ಕಾನೂನಿನ ಅಸ್ತ್ರಗಳನ್ನು ಬಳಸಿಕೊಂಡರು. ಆದಿತ್ಯನಾಥ್ ಕೂಡಾ ತನ್ನ ತವರು ರಾಜ್ಯದಲ್ಲಿಯೂ ಹೀಗೆಯೇ ಮಾಡಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಶಾಂತಿಯುತ ಪ್ರತಿಭಟನೆಗಳನ್ನು ಬರ್ಬರವಾಗಿ ಅವರು ಹತ್ತಿಕ್ಕಿರುವುದಕ್ಕೆ ಉತ್ತರಪ್ರದೇಶ ಸಾಕ್ಷಿಯಾಯಿತು. ಭಾರತದ ಯಾವುದೇ ಭಾಗದಲ್ಲಿರುವ ಟೀಕಾಕಾರರ ಮೇಲೆ ದಾಳಿ ನಡೆಸಲು ತನ್ನ ಪೊಲೀಸರು ಹಾಗೂ ಕೆಳ ನ್ಯಾಯಾಲಯಗಳನ್ನು ಬಳಸಿಕೊಳ್ಳುವ ಮೂಲಕ ಅವರು ಮುಖ್ಯಮಂತ್ರಿಯಾಗಿ ಮೋದಿ ಮಾಡಿದ್ದಕ್ಕಿಂತಲೂ ಇನ್ನೂ ಹೆಚ್ಚು ಮುಂದಕ್ಕೆ ಹೋಗಬಲ್ಲರು.
ಇತರ ರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರು ಹಾಗೂ ವಿಡಂಬನಕಾರರ ವಿರುದ್ಧ ಉತ್ತರಪ್ರದೇಶದಲ್ಲಿ ಸತತವಾಗಿ ಎಫ್‌ಐಆರ್‌ಗಳು ಸಲ್ಲಿಕೆಯಾಗುತ್ತಿರುವುದು ಆದಿತ್ಯನಾಥ್ ಅವರು ಮೋದಿಗಿಂತಲೂ ಕಟ್ಟಾ ಸರ್ವಾಧಿಕಾರಿಯೆಂಬುದನ್ನು ತೋರಿಸಿಕೊಡುತ್ತದೆ.
ಆದಿತ್ಯನಾಥ್ ಅವರ ದಮನಕಾರಿ ಹಾಗೂ ಬೆದರಿಕೆಯ ನೀತಿಗಳ ನೋವನ್ನು ಅವರ ರಾಜ್ಯದ ಜನರು ಅನುಭವಿಸುತ್ತಿದ್ದಾರೆ. ಹೀಗೆ ಆರ್ಟಿಕಲ್ 14 ವೆಬ್‌ಸೈಟ್‌ನಲ್ಲಿ ಪ್ರಕಟವಾದ ಪ್ರಬಂಧವೊಂದು, ‘‘ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಆದಿತ್ಯನಾಥ್ ಅವರ ಆಯ್ಕೆಯು ಭಾರತದ ಗಣರಾಜ್ಯದಲ್ಲಿ ಬಿಜೆಪಿಯ ಮುನ್ನಡೆಯಲ್ಲಿ ಮಹತ್ವದ ನಿರ್ಣಾಯಕ ಕ್ಷಣವಾಗಿದೆ. ಮುಸ್ಲಿಂ ಪೌರರು ಹಾಗೂ ರಾಜಕೀಯ ಭಿನ್ನಮತೀಯರನ್ನು ಗುರಿಯಿರಿಸಿ ಸಾರ್ವಜನಿಕ ಶತ್ರುಗಳೆಂಬಂತೆ ಬಹಿರಂಗವಾಗಿ ಹಾಗೂ ಮುಜುಗರವಿಲ್ಲದೆ ಗುರಿಯಿರಿಸಿರುವಂತಹ ಆಡಳಿತದ ಮಾದರಿಯನ್ನು ಅನುಮೋದಿಸುವ ಸಂಕೇತವನ್ನು ಬಿಜೆಪಿ ನೀಡಿದೆ’’ ಎಂದು ಹೇಳಿದೆ. ಈ ಲೇಖನವು ಮುಂದುವರಿದು ಹೀಗೆ ಹೇಳುತ್ತದೆ. ‘‘ತನ್ನ ಅಧಿಕಾರದ ಮೊದಲ ದಿನಗಳಿಂದಲೇ ಉತ್ತರಪ್ರದೇಶದ ಮುಖ್ಯಮಂತ್ರಿಯವರು ಹಲ್ಲೆಕೋರ ಗುಂಪುಗಳ ಕಾಳಜಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುವ ಹಾಗೂ ಹಿಂದೂಗಳು ಅದರಲ್ಲೂ ವಿಶೇಷವಾಗಿ ಸ್ಥಿತಿವಂತ ಮೇಲ್ಜಾತಿಗಳನ್ನು ಅಗ್ರಪಂಕ್ತಿಯಲ್ಲಿ ಇರಿಸುವುದು ಹಾಗೂ ಮುಸ್ಲಿಮರನ್ನು ಮತ್ತು ಭಿನ್ನಮತೀಯರನ್ನು ಗುರಿಯಿರಿಸಲು, ಶಿಕ್ಷಿಸಲು, ಕಳಂಕಹಚ್ಚಲು, ಬಂಧಿಸಲು ಹಾಗೂ ಕೆಲವು ಪ್ರಕರಣಗಳಲ್ಲಿ ಹತ್ಯೆಗೈಯಲು ಕೂಡಾ ಪೊಲೀಸರು ಹಾಗೂ ಕಾನೂನನ್ನು ಬಳಸಿಕೊಳ್ಳುತ್ತಿದ್ದಾರೆ’’ ಎಂದು ಅದು ತಿಳಿಸಿದೆ. ಕಾನೂನುಬಾಹಿರ ಹತ್ಯೆಗಳನ್ನು ನಡೆಸಲು ಹಾಗೂ ರಾಜ್ಯದ ಮುಸ್ಲಿಮರು ಮತ್ತು ಹೋರಾಟಗಾರರನ್ನು ಉ.ಪ್ರ. ಆಡಳಿತವು ಗುರಿಯಾಗಿರಿಸಿದ ಹಲವಾರು ಉದಾಹರಣೆಗಳನ್ನು ನೀಡಿರುವ ಈ ಲೇಖನವು ‘‘ಈ ಹಿಂದಿನ ಬಿಜೆಪಿ ಆಡಳಿತಗಳು ಉಲ್ಲಂಘಿಸಲು ಹಿಂಜರಿದಂತಹ ಮಾದರಿಯ ಪ್ರತೀಕಾರಾತ್ಮಕ, ಬಹುಸಂಖ್ಯಾತಪರ ಹಾಗೂ ದಮನಕಾರಿ ಆಡಳಿತವನ್ನು ಆದಿತ್ಯನಾಥ್ ಸರಕಾರವು ಸ್ವಚ್ಛಂದವಾಗಿ ನಡೆಸುತ್ತಿದೆ’’ ಎಂದು ಹೇಳಿದೆ.
ಉತ್ತರಪ್ರದೇಶದ ಮುಖ್ಯಮಂತ್ರಿಯಾಗುವುದಕ್ಕೆ ಬಹಳಷ್ಟು ಸಮಯದ ಮೊದಲೇ ಆದಿತ್ಯನಾಥ್ ಅವರು ‘ಹಿಂದೂ ಯುವವಾಹಿನಿ’ ಎಂಬ ಸಂಘಟನೆಯನ್ನು ಸ್ಥಾಪಿಸಿದ್ದರು. ಹಿಂದುತ್ವ ಹಾಗೂ ರಾಷ್ಟ್ರೀಯತೆಗೆ ಸಮರ್ಪಿತವಾದ ತೀವ್ರವಾದಿ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಘಟನೆಯೆಂದು ಅದು ತನ್ನನ್ನು ಬಣ್ಣಿಸಿಕೊಂಡಿತ್ತು. ಉಗ್ರಗಾಮಿ, ಸಂಘಟಿತ ಹಿಂಸೆಯನ್ನು ಬಳಸಲು ಆಸಕ್ತವಾಗಿರುವ ಈ ಗುಂಪು ಗಲಭೆ, ಕೊಲೆ ಹಾಗೂ ದೊಂಬಿಗಳಿಗೆ ಪ್ರಚೋದನೆ ನೀಡಿದ ಆರೋಪಗಳನ್ನು ಎದುರಿಸುತ್ತಿದೆ ಹಾಗೂ ಮಸೀದಿಗಳು,ಚಮನೆಗಳು, ಬಸ್‌ಗಳು ಹಾಗೂ ರೈಲುಗಳನ್ನು ಸುಟ್ಟುಹಾಕಿದ ಆರೋಪವನ್ನು ಹೊಂದಿದೆ. ಯುವವಾಹಿನಿ ಸದಸ್ಯರು ತಮ್ಮ ನಾಯಕನಿಗೆ ಸಂಪೂರ್ಣ ನಿಷ್ಠೆಯನ್ನು ಹೊಂದಿದ್ದು, ಆತನ ಆದೇಶವನ್ನು ಸದಾ ಪಾಲಿಸುತ್ತಾರೆ. ತನ್ನ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಹಲವು ವರ್ಷಗಳ ಮೊದಲೇ ಹಲ್ಲೆಕೋರ ಗುಂಪನ್ನು ಸ್ಥಾಪಿಸಿದ ಹಾಗೂ ನಡೆಸಿಕೊಂಡು ಬಂದಂತಹ ಸ್ವತಂತ್ರ ಭಾರತದ ಇತಿಹಾಸದ ಏಕೈಕ ರಾಜಕಾರಣಿಯಾಗಿರುವುದರಿಂದಲೇ ಆದಿತ್ಯನಾಥ್ ಅವರು ಹೀಗೆ ವಿಶಿಷ್ಟವಾಗಿದ್ದಾರೆ.
2001ರಲ್ಲಿ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗುವುದಕ್ಕೆ ಮೊದಲೇ ರಾಜ್ಯವು ವ್ಯಾಪಕವಾದ ಕೈಗಾರಿಕಾ ನೆಲೆಗಟ್ಟನ್ನು ಹೊಂದಿದ್ದು, ಅಭಿವೃದ್ಧಿಯುತವಾದ ಕೈಗಾರಿಕಾ ಸಂಸ್ಕೃತಿಯನ್ನು ಹೊಂದಿದೆ. 2001ರಲ್ಲಿ ನರೇಂದ್ರ ಮೋದಿ ಅವರು ಗುಜರಾತ್‌ನ ಮುಖ್ಯಮಂತ್ರಿಯಾಗುವ ಮೊದಲೇ ಆ ರಾಜ್ಯವು ಬೃಹತ್ ಕೈಗಾರಿಕಾ ನೆಲೆಯನ್ನು ಹೊಂದಿತ್ತು ಹಾಗೂ ಅಭಿವೃದ್ಧಿ ಹೊಂದುತ್ತಿರುವ ಔದ್ಯಮಿಕ ಸಂಸ್ಕೃತಿಯನ್ನು ಹೊಂದಿತ್ತು. ಆದಿತ್ಯನಾಥ್ ಅವರು 2017ರಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗುವ ಮುನ್ನ ಆ ರಾಜ್ಯದಲ್ಲಿ ಅದ್ಯಾವುದೂ ಇರಲಿಲ್ಲ. ಭಾರತ ಅತ್ಯಧಿಕ ಜನಸಂಖ್ಯೆಯ ರಾಜ್ಯವಾದ ಉತ್ತರಪ್ರದೇಶವು ಆರ್ಥಿಕ ಹಾಗೂ ಸಾಮಾಜಿಕ ವಿಷಯಗಳಲ್ಲಿ ಹಿಂದುಳಿದಿರುವಿಕೆಗೆ ಪರ್ಯಾಯಪದವಾಗಿತ್ತು. ಆ ಚಿತ್ರಣವನ್ನು ಬದಲಿಸಲು ಆದಿತ್ಯನಾಥ್ ಅವರ ನೀತಿಗಳು ಏನನ್ನೂ ಮಾಡಿಲ್ಲ.
ಬಿಜೆಪಿಯ ಉನ್ನತ ನಾಯಕನಾಗಿ ನರೇಂದ್ರ ಮೋದಿಯ ಸಂಭಾವ್ಯ ಉತ್ತರಾಧಿಕಾರಿಯೆಂದು ಹೇಳಲ್ಪಡುವ ವ್ಯಕ್ತಿಯ ಸಂಕ್ಷಿಪ್ತವಾದ ವೈಯಕ್ತಿಕ ಹಾಗೂ ರಾಜಕೀಯ ದಾಖಲೆ ಇದಾಗಿದೆ. ಒಂದು ವೇಳೆ ಆದಿತ್ಯನಾಥ್ ನಿಜಕ್ಕೂ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ತನ್ನ ಪಕ್ಷದ ಪ್ರಚಾರದ ನೇತೃತ್ವವನ್ನು ವಹಿಸಲಿದ್ದಾರೆಂದಾದರೆ ಅವರು ಮತದಾರರಿಗೆ ಯಾವ ರೀತಿಯ ‘ಅಚ್ಛೇ ದಿನ್’ ಖಾತರಿಪಡಿಸಲಿದ್ದಾರೆ. 2013-14ರಲ್ಲಿ ಮೋದಿಯವರು ಯುವ ಭಾರತೀಯರಿಗೆ ಉದ್ಯೋಗಗಳು, ಸಮೃದ್ಧಿ ಹಾಗೂ ಭದ್ರತೆಯನ್ನು ತಂದುಕೊಡುವುದಾಗಿ ಘೋಷಿಸಿದ್ದರು. ಹಿಂದೂ ಯುವವಾಹಿನಿಯ ಸಂಸ್ಥಾಪಕನು ಯುವಭಾರತೀಯರಿಗೆ ಇತರ ಧರ್ಮಗಳ ಜನರಿಗೆ ಕಿರುಕುಳ ನೀಡುವುದನ್ನು ಮತ್ತು ದೌರ್ಜನ್ಯವೆಸಗುವ ‘ಸಂತೃಪ್ತಿ’ಯನ್ನು ನೀಡುವ ಹೊರತಾಗಿ ಬೇರೆನನ್ನು ನೀಡಲು ಸಾಧ್ಯ?
ಪ್ರಧಾನಿಯಾಗಿ ಮೋದಿಯವರು ಜಗತ್ತಿನಾದ್ಯಂತ ಪ್ರಯಾಣಿಸಿದರು, ಇತರ ದೇಶಗಳ ನಾಯಕರನ್ನು ಓಲೈಸಿಕೊಂಡರು. ಒಂದು ವೇಳೆ ಆದಿತ್ಯನಾಥ್ ಎಂದಾದರೂ ಪ್ರಧಾನಿಯಾದಲ್ಲಿ ಅವರು ತನ್ನ ಬಗ್ಗೆ ಅಥವಾ ತನ್ನ ದೇಶದ ಬಗ್ಗೆ ಜಗತ್ತು ಏನು ಯೋಚಿಸಬಹುದೆಂಬ ಬಗ್ಗೆ ಹೆಚ್ಚು ಕಾಳಜಿ ವಹಿಸಲಾರರು. ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ತನ್ನ ರಾಜಕೀಯ, ಸೈದ್ಧಾಂತಿಕ ಅಥವಾ ಆಧ್ಯಾತ್ಮಿಕ ನಂಬಿಕೆಗಳನ್ನು ಒಪ್ಪದ ವ್ಯಕ್ತಿಗಳ ವಿರುದ್ಧ ತನ್ನ ಶಕ್ತಿಯನ್ನು ಬಲಪಡಿಸಿಕೊಳ್ಳುವುದರ ಬಗ್ಗೆಯೇ ಅವರು ಮುಖ್ಯ ಗಮನಹರಿಸಲಿದ್ದಾರೆ.
ಕೆಲವು ತಿಂಗಳುಗಳ ಹಿಂದೆ, ನಾನು ಹಿಂದಿನ ಹಾಗೂ ಹಾಲಿ ಪ್ರಧಾನಿಗಳ ರಾಜಕೀಯ ಶೈಲಿಗಳ ಕುರಿತಾಗಿ ಬರೆದ ಅಂಕಣವೊಂದರಲ್ಲಿ ತನ್ನ ಕೇಂದ್ರೀಕರಣ ಹಾಗೂ ನಿಯಂತ್ರಣ ಪ್ರವೃತ್ತಿಗಳಲ್ಲಿ ನರೇಂದ್ರ ಮೋದಿಯವರು ‘ಇಂದಿರಾಗಾಂಧಿಯನ್ನು ಮೀರಿಸಲಿದ್ದಾರೆ’ ಎಂದು ವಾದಿಸಿದ್ದೆ. ಒಂದು ವೇಳೆ ಆದಿತ್ಯನಾಥ್ ಪ್ರಧಾನಿಯಾದಲ್ಲಿ ಅವರು ನರೇಂದ್ರ ಮೋದಿಯವರನ್ನು ಈ ವಿಷಯಗಳಲ್ಲಿ ಮೀರಿಸುವ ಹೆಚ್ಚಿನ ಸಾಧ್ಯತೆಗಳಿವೆ. ದೇಶಾದ್ಯಂತ ಏಳು ವರ್ಷಗಳಿಂದ ಜಾರಿಗೊಳಿಸಲಾದ ಗುಜರಾತ್ ಮಾದರಿಯು ಗಣತಂತ್ರದ ಸಾಮಾಜಿಕ ಹಾಗೂ ಸಾಂಸ್ಥಿಕ ಸಂರಚನೆಗೆ ಆಳವಾದ ಹಾನಿಯನ್ನುಂಟು ಮಾಡಿದೆ. ಉತ್ತರಪ್ರದೇಶ ಮಾದರಿಯೆಂಬ ಒಂದೇ ಒಂದು ಪದವು ಅವೆಲ್ಲವನ್ನೂ ಒಟ್ಟಾಗಿ ನಾಶಪಡಿಸಲಿದೆ.