ಹೈನುಗಾರಿಕೆಯಿಂದ ವಿಮುಖರಾಗುತ್ತಿರುವ ರೈತರು
► ಬೀದಿಪಾಲಾಗುವ ಭೀತಿಯಲ್ಲಿ ಗೋವುಗಳು ► ಗೋಹತ್ಯೆ ನಿಷೇಧ ಕಾಯ್ದೆ ಪರಿಣಾಮ
ಮಂಡ್ಯ, ಫೆ.23: ಜಿಲ್ಲೆಯ ರೈತಾಪಿ ಜನರ ಜೀವನಾಧಾರವಾಗಿರುವ ಹೈನುಗಾರಿಕೆಯ ಮೇಲೆ ಇದೀಗ ರಾಜ್ಯ ಸರಕಾರ ಜಾರಿಗೊಳಿಸುವ ಗೋಹತ್ಯೆ ನಿಷೇಧ ಕಾಯ್ದೆಯ ದುಷ್ಪರಿಣಾಮಗಳು ರೈತರಿಗೆ ತೀವ್ರ ಸಂಕಷ್ಟಗಳನ್ನು ತಂದೊಡ್ಡುವ ಸೂಚನೆಗಳು ಈಗಾಗಲೇ ಗೋಚರಿಸತೊಡಗಿವೆ.
ಕೃಷಿಯೇ ಜೀವಾಳವಾಗಿರುವ ಜಿಲ್ಲೆಯಲ್ಲಿ ಹೈನುಗಾರಿಕೆಗೆ ಮಹತ್ವದ ಸ್ಥಾನವಿದೆ. ಬೇಸಾಯದ ಜತೆಗೆ ಹೈನುಗಾರಿಕೆ, ರೇಷ್ಮೆ ಕೃಷಿ, ತೆಂಗು, ಹೂವು, ತರಕಾರಿ ಇತರ ಉಪಕಸುಬುಗಳು ಅಂದಂದಿನ ರೈತರ ಆರ್ಥಿಕ ಸಂಕಷ್ಟಗಳನ್ನು ನಿಭಾಯಿಸಲು ನೆರವಾ ಗಿವೆ. ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದೆ ಸಾಲದ ಸುಳಿಗೆ ಸಿಲುಕಿ ರೈತರು ಹೈರಾಣಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಉಪ ಕಸುಬುಗಳು ರೈತರ ಕೈಹಿಡಿದು ಕಾಪಾಡುತ್ತಿವೆ.
ರೈತರನ್ನು ಕಾಪಾಡುತ್ತಿರುವ ಜತೆಗೆ ಏರುತ್ತಿರುವ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸಿರುವ ಮತ್ತು ಗ್ರಾಮದ ಜನರು ನಗರ ಪಟ್ಟಣಗಳಿಗೆ ವಲಸೆ ಹೋಗುವು ದನ್ನು ತಡೆಹಿಡಿದಿರುವ ಪ್ರಮುಖ ಉಪಕಸುಬಾಗಿ ರುವ ಹೈನುಗಾರಿಕೆಯ ವಿರುದ್ಧ ಈ ಗೋಹತ್ಯೆ ನಿಷೇಧ ಕಾಯ್ದೆ ಗದಾಪ್ರಹಾರ ನಡೆಸುವ ಆತಂಕ ಮೂಡಿದೆ. ರೈತರು ಪ್ರಮುಖವಾಗಿ ಹೆಚ್ಚು ಹಾಲು ನೀಡುವ ವಿಲಾಯಿತಿ (ಸೀಮೆಹಸು) ಹಸುಗಳನ್ನು ಸಾಕುತ್ತಿದ್ದಾರೆ. ಹಸುಗಳು ಇಲ್ಲದ ಕುಟುಂಬಗಳನ್ನು ಕಾಣುವುದು ಅಪರೂಪ. ಹೆಚ್ಚು ಹಾಲು ನೀಡುವ ಈ ಹಸುಗಳ ಸಾಕಣೆ ಹೆಚ್ಚುತ್ತಲೇ ಇದೆ. ವಿಲಾಯಿತಿ ಹಸುಗಳ ಗಂಡು ಕರುಗಳಿಂದ ಯಾವುದೇ ಲಾಭವಿಲ್ಲ ಮತ್ತು ಅದನ್ನು ಸಾಕುವುದು ದುಬಾರಿ. ಹಾಗಾಗಿ ಅವುಗಳನ್ನು ವಿಲೇ ಮಾಡುವ ಒತ್ತಡ ರೈತರಿಗೆ ಇದ್ದೇ ಇದೆ. ಧುತ್ತೆಂದು ಎರಗಿರುವ ಈ ಕಾಯ್ದೆಯಿಂದಾಗಿ ರೈತರು ಗಂಡು ಕರುಗಳನ್ನು ಏನು ಮಾಡಬೇಕೆಂಬ ಚಿಂತೆಗೆ ಸಿಲುಕಿದ್ದಾರೆ.
ಯಾವುದೇ ಕಾಯ್ದೆಯ ಭಯ ಇಲ್ಲದಿದ್ದರಿಂದ ರೈತರಿಗೆ ಹೊರೆಯಾದ ಗಂಡು ಕರುಗಳನ್ನು ಮಾರುವುದು ಸುಲಭವಾಗಿತ್ತು. ಕಾಯ್ದೆಯ ಪರಿಣಾಮ ಮಾರುವವನು, ಕೊಳ್ಳುವವನು ಇಬ್ಬರಿಗೂ ದಂಡ ಹಾಗೂ ಜೈಲುವಾಸ ಎದುರಾಗಿದೆ. ಹೀಗಾಗಿ ಲಾಭವಿಲ್ಲದ, ಹೊರೆಯಾದ ಗಂಡುಕರುಗಳನ್ನು ಸಾಕುವುದೇ? ಬೀದಿಗೆ ಬಿಡುವುದೇ? ಎಂಬ ಸಂಕಷ್ಟ ರೈತರಿಗೆ ಎದುರಾಗಿದೆ.
ಹಾಲು ಕೊಡುವ ಹಸುವನ್ನು ಸಾಕುವುದೇ ಕಷ್ಟವಾಗಿರುವ ಪರಿಸ್ಥಿತಿಯಲ್ಲಿ ಉಪಯೋಗವಿಲ್ಲದ ಕರುಗಳನ್ನು ಇಟ್ಟುಕೊಂಡು, ಜತೆಗೆ ಅನಾರೋಗ್ಯ ಪೀಡಿತ, ಅವಘಟನೆಯಿಂದ ಕಾಲು ಮುರಿದುಕೊಂಡ ರಾಸುಗಳನ್ನೂ ಸಂರಕ್ಷಿಸಿ ಹೈನುಗಾರಿಕೆ ಮುಂದುವರಿಸುವುದು ಸವಾಲಾಗಿದ್ದು, ರೈತರು ಹೈನುಗಾರಿಕೆಯಿಂದ ವಿಮುಖರಾಗುವ ಮಾತನಾಡುತ್ತಿದ್ದಾರೆ. ಹಾಲಿನ ಉತ್ಪಾದನೆಯ ಬಹುಪಾಲು ಗಂಡು ಕರುಗಳ ಪೋಷಣೆಗೆ ಹೋಗು ತ್ತಿದ್ದು, ಹಸು ಸಾಕಣೆಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಿದೆ. ಗೋವನ್ನು ಪೂಜಿಸುವ ರೈತರು ಕೊಲ್ಲುವ ಮನಸ್ಥಿತಿಗೆ ಹೋಗಲಾರದೆ ಅನಿವಾರ್ಯವಾಗಿ ಬೇಡದ ಕರುಗಳನ್ನು ಬೆಟ್ಟಗುಡ್ಡ, ಕಾಡುಗಳಿಗೆ ಬಿಟ್ಟುಬರುತ್ತಿರುವ ಬಗ್ಗೆ ಅಲ್ಲಲ್ಲಿ ಕೇಳಿಬರುತ್ತಿದೆ.
ವಾರದ ಹಿಂದೆ ಅಧಿಕಾರಿಗಳ ಸಭೆ ನಡೆಸಿದ ಪಶುಸಂಗೋಪನೆ ಸಚಿವರು, ಗೋಹತ್ಯೆ ನಿಷೇಧ ಕಾಯ್ದೆ ಉಲ್ಲಂಘನೆಯಾಗದಂತೆ ಕ್ರಮವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಗೋಶಾಲೆಗಳನ್ನು ತೆರೆಯಬೇಕು, ಅಲ್ಲಿಯವರೆಗೆ ಬೇಡವಾದ ಕರುಗಳನ್ನು ಮೂರು ವರ್ಷ ರೈತರೇ ಕಾಪಾಡುವಂತೆ ಮನವೊಲಿಸಬೇಕೆಂದೂ ಸಲಹೆ ನೀಡಿದ್ದಾರೆ. ಸಚಿವರ ಆದೇಶ ಪಾಲನೆಯೆಂಬಂತೆ ಕಾಯ್ದೆ ಉಲ್ಲಂಘನೆ ತಡೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಶನಿವಾರ ಮಳವಳ್ಳಿಯಲ್ಲಿ ಗೋಮಾಂಸ ಮಾರಾಟ ಮಾಡುತ್ತಿದ್ದರೆನ್ನಲಾದ ಅಂಗಡಿಗಳ ಮೇಲೆ ಪೊಲೀಸರು ದಾಳಿ ನಡೆಸಿ ಆರುಮಂದಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದು, ಜಿಲ್ಲೆಯ ರೈತರ ಬದುಕಿನ ಆಧಾರವಾದ ಪಶುಸಂಗೋಪನೆಯ ಮೇಲೆ ಕರಾಳ ಛಾಯೆ ಮೂಡಿದೆ.
ಈ ಕರಾಳ ಕಾಯ್ದೆ ಜಾರಿಯಿಂದ ರೆತರ ಆರ್ಥಿಕ ಸ್ವಾವಲಂಬ ನೆಯ ಸಂಕೇತವಾಗಿ ಕಾರ್ಯನಿರ್ವಹಿಸುತ್ತಿರುವ ಮಂಡ್ಯ ಹಾಲು ಒಕ್ಕೂಟ(ಮನ್‌ಮುಲ್), ಏಶ್ಯದಲ್ಲೇ ಪ್ರಥಮ ಎನಿಸಿದ್ದ ಅಸಿಟೇಟ್ ಕಾರ್ಖಾನೆ ಬೆಳಗೊಳ ಪೇಪರ್ ಮಿಲ್ ಕಾರ್ಖಾನೆಗಳ ಸಾಲಿನಲ್ಲಿ ಇತಿಹಾಸದ ಪುಟ ಸೇರಲಿವೆ.
ಪ್ರೊ.ಹುಲ್ಕೆರೆ ಮಹದೇವ, ಚಿಂತಕರು
ಗೋಹತ್ಯೆ ನಿಷೇಧ ಕಾಯ್ದೆಯನ್ನು ಸರಕಾರ ಕೂಡಲೇ ರದ್ದುಪಡಿಸಬೇಕು. ಇಲ್ಲದಿದ್ದರೆ ಬಿಜೆಪಿ ಶಾಸಕರು, ಸಂಸದರು, ಸಚಿವರು ಮತ್ತು ಮುಖ್ಯಮಂತ್ರಿಗಳು ಗಂಡುಕರು, ಉಪಯೋಗವಿಲ್ಲದ ಹಸುಗಳನ್ನು ತಮ್ಮ ತಮ್ಮ ಮನೆಗಳಿಗೆ ಕೊಂಡೊಯ್ದು ಸಾಕಬೇಕು. ಇಲ್ಲದಿದ್ದರೆ ಅವರ ಮನೆಗಳಿಗೆ ರೈತರೇ ಕೊಂಡೊಯ್ದು ತುಂಬುವ ಚಳವಳಿ ಹಮ್ಮಿಕೊಳ್ಳಲಾಗುವುದು.
ಲಿಂಗಪ್ಪಾಜಿ., ರೈತಸಂಘದ ಪ್ರಧಾನ ಕಾರ್ಯದರ್ಶಿ, ಮಂಡ್ಯ
ಸರಿಯಾದ ಬೆಲೆ ಇಲ್ಲದೆ ಬೇಸಾಯ ಮಾಡುವುದೇ ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲೂ ಹೈನುಗಾರಿಕೆಯಿಂದ ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆ ನಡೆಯುತ್ತಿತ್ತು. ಈಗ ಅದಕ್ಕೂ ಕುತ್ತು ಬಂದಿದೆ. ಏನು ಮಾಡಬೇಕು ಎನ್ನುವುದೇ ತೋಚದಾಗಿದೆ.
ಮರಿಲಿಂಗಯ್ಯ, ಕೃಷಿಕ ಮತ್ತು ಗ್ರಾಪಂ ಸದಸ್ಯ, ಕುಂಟನಹಳ್ಳಿ