ಜ್ಯೋತಿ ಗುಲಿಯಾ ಕ್ವಾರ್ಟರ್ ಫೆನಲ್ಗೆ
ಸ್ಟ್ರಾಂಡ್ಜಾ ಮೆಮೋರಿಯಲ್ ಬಾಕ್ಸಿಂಗ್
ಸೋಫಿಯಾ: ಎರಡು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಕಝಕಿಸ್ತಾನದ ನಾಜಿಮ್ ಕಿರ್ಸುಬೀ ಅವರನ್ನು ಮಣಿಸಿದ ಭಾರತದ ಜ್ಯೋತಿ ಗುಲಿಯಾ (51 ಕೆ.ಜಿ.) ಬಲ್ಗೇರಿಯಾದ ಸೋಫಿಯಾದಲ್ಲಿ ನಡೆಯುತ್ತಿರುವ 72ನೇ ಸ್ಟ್ರಾಂಡ್ಜಾ ಸ್ಮಾರಕ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಎರಡನೇ ಸುತ್ತಿನ ಸೋಲಿನ ನಂತರ ಭಾರತದ ಮೂವರು ಬಾಕ್ಸರ್ಗಳು ನಿರ್ಗಮಿಸಿದ್ದಾರೆ.
2017ರ ವಿಶ್ವ ಯುವ ಚಾಂಪಿಯನ್ ಗುಲಿಯಾ ಅವರು 2014 ಮತ್ತು 2016ರ ವಿಶ್ವ ಚಾಂಪಿಯನ್ ಕಿರ್ಸುಬೀ ವಿರುದ್ಧ 3-2ರಿಂದ ಮೇಲುಗೈ ಸಾಧಿಸಿದರು. 2019ರ ಮಹಿಳಾ ರಾಷ್ಟ್ರೀಯ ಚಾಂಪಿಯನ್ ಹರಿಯಾಣದ ಬಾಕ್ಸರ್ ಗುಲಿಯಾ ಅವರು ಗುರುವಾರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರೊಮೇನಿಯಾದ ಪೆರಿಜೋಕ್ ಲ್ಯಾಕ್ರಾಮಿಯೊರಾರನ್ನು ಎದುರಿಸಲಿದ್ದಾರೆ.
ಎರಡನೇ ದಿನ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ ಭಾರತದ ಮತ್ತೊಬ್ಬ ಬಾಕ್ಸರ್ ಭಾಗ್ಯಬತಿ ಕಚಾರಿ ಅವರು 75ಕೆ.ಜಿ.ವಿಭಾಗದಲ್ಲಿ ರಶ್ಯದ ಎದುರಾಳಿ ಅನ್ನಾ ಗಲಿಮೋವಾ ಅವರನ್ನು 5- 0ರಿಂದ ಹಿಂದಿಕ್ಕಿದ್ದಾರೆ.
ಪುರುಷರ ವಿಭಾಗದಲ್ಲಿ ನವೀನ್ ಬೂರಾ 69 ಕೆ.ಜಿ. ವಿಭಾಗದಲ್ಲಿ ಅರ್ಮೇನಿಯಾದ ಅರ್ಮೆನ್ ಮಾಶಕಾರ್ಯನ್ ವಿರುದ್ಧ 3-2 ಅಂತರದಿಂದ ಜಯ ಸಾಧಿಸಿ ಅಂತಿಮ ಎಂಟರ ಹಂತಕ್ಕೆ ಮುನ್ನಡೆದರು.
ಮಂಗಳವಾರ ನಡೆದ ಸ್ಪರ್ಧೆಗಳಲ್ಲಿ ಭಾರತದ ಮೂವರು ನಿರಾಶೆ ಅನುಭವಿಸಿದರು. ನವೀನ್ ಕುಮಾರ್ (91 ಕೆ.ಜಿ.) 0-5 ಗೋಲುಗಳಿಂದ ಫ್ರಾನ್ಸ್ನ ವಿಲ್ಫ್ರೇಡ್ ಫ್ಲೋರೆಂಟಿನ್ ಎದುರು ಸೋಲುಂಡರು. ಅಂಕಿತ್ ಖತಾನಾ (75 ಕೆ.ಜಿ.) ಬೆಲಾರಸ್ನ ವಿಕ್ಟರ್ ಡಿಜಿಯಾಶ್ಕೆವಿಚ್ ವಿರುದ್ಧ 2-3. 2-3 ಅಂತರದಲ್ಲಿ ಸೋಲು ಅನುಭವಿಸಿದರು.
ಲೈಟ್ ಹೆವಿವೇಯ್ಟ (81 ಕೆ.ಜಿ) ವಿಭಾಗದಲ್ಲಿ ಸಚಿನ್ ಕುಮಾರ್ ಅವರು ಅರ್ಮೇನಿಯಾದ ಗೋರ್ ನೆರ್ಸಿಯನ್ಗೆ5-0 ಅಂತರದಲ್ಲಿ ಶರಣಾದರು. ಪಂದ್ಯಾವಳಿಯಲ್ಲಿ ಫ್ರಾನ್ಸ್, ಐರ್ಲ್ಯಾಂಡ್, ಕಝಕಿಸ್ತಾನ್, ರಶ್ಯ, ಸ್ವೀಡನ್, ಉಕ್ರೇನ್, ಅಮೆರಿಕ ಮತ್ತು ಉಜ್ಬೇಕಿಸ್ತಾನ್ ಸೇರಿದಂತೆ 30 ರಾಷ್ಟ್ರಗಳ ಬಾಕ್ಸರ್ಗಳು ಭಾಗವಹಿಸಿದ್ದಾರೆ.