ಉಡುಪಿ: ಗ್ರಾಮೀಣ ತಂಡದಿಂದ 'ಸೀಪ್ಲೇನ್' ಸಿದ್ಧ; ವಿಮಾನ ಹಾರಾಟ ಯಶಸ್ವಿ
ಉಡುಪಿ, ಫೆ. 26: ಏರೋನಾಟಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡವೊಂದು ಧೃತಿ ಎಂಬ ಸಂಸ್ಥೆಯಡಿಯಲ್ಲಿ ನದಿಯಲ್ಲಿ ತೇಲುತ್ತಾ ಹೋಗಿ, ಆಗಸದಲ್ಲಿ ಹಾರುವ ಸೀಪ್ಲೇನ್‌ವೊಂದನ್ನು ಸಿದ್ಧಪಡಿಸಿದೆ.
ಬೀಚ್ ಟೂರಿಸಂಗೆ ಪೂರಕವಾಗಿ ಹಿನ್ನೀರಿನಲ್ಲಿ ವಿಶೇಷ ಪ್ರಯಾಣ ಅನುಭವ ನೀಡುವ ಸೀಪ್ಲೇನ್ ಬಗ್ಗೆ ಪ್ರತಿಭಾನ್ವಿತರ ತಂಡ ಕನಸು ಕಂಡಿದ್ದು, ಹೆಜಮಾಡಿ ಗ್ರಾಮೀಣ ಭಾಗದ ಶಾಂಭವಿ ನದಿಯಲ್ಲಿ ಹಲವು ದಿನಗಳ ಕಾಲ ಪರಿಶ್ರಮ ಪಟ್ಟು ಇದೀಗ ಸೀಪ್ಲೇನ್ ಹಾರಾಟವನ್ನು ಯಶಸ್ವಿಗೊಳಿಸಿದ್ದಾರೆ.
ಎನ್‌ಸಿಸಿ ಏರೋ ಮಾಡೆಲಿಂಗ್ ಇನ್‌ಸ್ಟ್ರಕ್ಟರ್ ಆಗಿರುವ ಹೆಜಮಾಡಿ ನಡಿ ಕುದ್ರು ನಿವಾಸಿ ಪುಷ್ಪರಾಜ್ ಅಮೀನ್ ಕಳೆದ 15 ವರ್ಷಗಳ ಪರಿಶ್ರಮದಿಂದ ಈ ಸೀಪ್ಲೇನ್ ಸಿದ್ಧಗೊಂಡಿದೆ. ಒಬ್ಬ ವ್ಯಕ್ತಿ ಕುಳಿತು ನೀರಲ್ಲಿ ತೇಲುವ ಬಾನಲ್ಲಿ ಹಾರುವ ಮೈಕ್ರೋಲೈಟ್ ಸೀಪ್ಲೇನ್ ಯಶಸ್ವಿ ಹಾರಾಟ ನಡೆದಿದ್ದು, ರಾಜ್ಯ, ಕೇಂದ್ರ ಸರಕಾರ ಅಥವಾ ಖಾಸಗಿ ವಲಯದ ಸಹಕಾರ ಸಿಗುವ ನಿರೀಕ್ಷೆಯಲ್ಲಿ ಈ ತಂಡ ಇದೆ.
‘ಸದ್ಯ ಪೈಲೆಟ್ ಮಾತ್ರ ಕುಳಿತು ಹಾರುವ ವಿಮಾನ ತಯಾರಿಸಲಾಗಿದ್ದು, ಏರೋನಾಟಿಕಲ್ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್ ಕ್ಲಾಸ್ ಕೊಡುವ ಜೊತೆಗೆ ಮುಂದಿನ ದಿನಗಳಲ್ಲಿ ಏಳು ಜನ ಕೂರುವ ಸಾಮರ್ಥ್ಯದ ವಿಮಾನ ತಯಾರು ಮಾಡುವ ಕಸನು ಇಟ್ಟುಕೊಳ್ಳಲಾಗಿದೆ’ ಎಂದು ಪುಷ್ಪರಾಜ್ ಅಮೀನ್ ತಿಳಿಸಿದ್ದಾರೆ.
190 ಕೆಜಿ ಭಾರ ಹೊತ್ತೊಯ್ಯುವ ಈ ವಿಮಾನವನ್ನು, ಏರ್‌ಕ್ರಾಫ್ಟ್ ಗ್ರೇಡ್ ಅಲುಮೀನಿಯಂ, ಸ್ಟೀಲ್ ಸ್ಪೆಷಲ್ ನೈಲರ್ ಬ್ರೈಡೆಡ್ ರೋಪ್, ನೈಲಾನ್ ಫ್ಯಾಬ್ರಿಕ್ ಕ್ಲಾತ್, 33 ಎಚ್‌ಪಿ ಪವರ್ 200 ಸಿಸಿ ಸಿಮೊನಿನಿ ಇಟಾಲಿಯನ್ ಇಂಜಿನ್, 53 ಇಂಚಿನ ಮರದ ಪ್ರೊಫೆಲ್ಲರ್ ಪರಿಕರವನ್ನು ಬಳಸಿ ತಯಾರಿಸಲಾಗಿದೆ. ವಿಮಾನಕ್ಕೆ ಪೆಟ್ರೋಲ್‌ನ್ನು ಇಂಧನವಾಗಿ ಬಳಸಲಾಗಿದೆ. ಇತ್ತೀಚೆಗೆ ನಾಲ್ಕೈದು ಬಾರಿ 7 ರಿಂದ 10 ಅಡಿ ಮೇಲಕ್ಕೆ ಏಕವ್ಯಕ್ತಿ ಚಾಲಕ ಸಹಿತ ಸೀಪ್ಲೇನ್ ಹಾರಾಟ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
‘ವಿಮಾನ ತಯಾರಿಗಾಗಿ ಈವರೆಗೆ ಒಟ್ಟು 7 ಲಕ್ಷ ರೂ. ಖರ್ಚು ಆಗಿದೆ. ಇದಕ್ಕಾಗಿ ಗೆಳೆಯರು, ಸಂಬಂಧಿಕರು ಸಹಾಯ ನೀಡಿದ್ದಾರೆ. ಸ್ವಲ್ಪಹಣ ಸಾಲ ಮಾಡಲಾಗಿದೆ. ರಾಜ್ಯ ಮತ್ತು ಕೇಂದ್ರ ಸರಕಾರ ನಡಿಕುದ್ರುವಿನಲ್ಲಿ ಕಾರ್ಯಾ ಗಾರದ ವ್ಯವಸ್ಥೆ ಮಾಡಿಕೊಡಬೇಕು. ಈ ಕಾರ್ಯವನ್ನು ತಜ್ಞರ ಸಹಕಾರದಿಂದ ಪರಿಶೀಲಿಸಿ ತಂಡದ ಸಾಧನೆಗೆ ಬೆನ್ನೆಲುಬಾಗಿ ನಿಲ್ಲಬೇಕು. ಅನ್ವೇಷಣೆಗೆ ಬೇಕಾದ ಕೆಲ ಟೂಲ್ಸ್‌ಗಳಿಗೆ ಸಹಾಯಧನ ನೀಡಬೇಕು ಎಂದು ಅವರು ಮನವಿ ಮಾಡಿ ದ್ದಾರೆ.
ಏರೋನಾಟಿಕ್ ಪ್ರೊಫೆಸರ್ ಶೆನಾಯ್ ರಾವ್, ವಿದ್ಯಾರ್ಥಿ ಉತ್ಸವ್ ಉಮೇಶ್, ಆಸಕ್ತ ವಿದ್ಯಾರ್ಥಿಗಳಾದ ಅಶ್ವಿನಿ ರಾವ್, ಯು.ವಾಸುರಾಜ್ ಅಮೀನ್, ಅಭಿಷೇಕ್ ಎನ್.ಕೋಟ್ಯಾನ್, ರೇಶ್ಮಾ ಜೆ.ಬಂಗೇರ ಈ ತಂಡದಲ್ಲಿ ಇದ್ದಾರೆ.