ಖಶೋಗಿ ಹತ್ಯೆಯಲ್ಲಿ ಸೌದಿ ಯುವರಾಜ ಪ್ರಮುಖ ಆರೋಪಿ?
ಅವೆುರಿಕದ ಗುಪ್ತಚರ ವರದಿ ಶೀಘ್ರ ಬಿಡುಗಡೆ
ವಾಶಿಂಗ್ಟನ್, ಫೆ. 27: ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿಯನ್ನು ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ಆದೇಶದಂತೆ ಸೌದಿ ಅರೇಬಿಯದ ಹಂತಕರ ತಂಡವೊಂದು ಹತ್ಯೆಗೈದಿದೆ ಎಂಬುದಾಗಿ ಅಮೆರಿಕದ ಗುಪ್ತಚರ ಸಂಸ್ಥೆಗಳು ವರದಿ ಮಾಡಿವೆ.
2018 ಅಕ್ಟೋಬರ್ 2ರಂದು ಟರ್ಕಿಯ ಇಸ್ತಾಂಬುಲ್ ನಗರದಲ್ಲಿರುವ ಸೌದಿ ಅರೇಬಿಯದ ಕೌನ್ಸುಲ್ ಕಚೇರಿಯಲ್ಲಿ ನಡೆದ ಅಮಾನುಷ ಹತ್ಯೆಯಲ್ಲಿ ಸೌದಿ ಅರೇಬಿಯದ ವಾಸ್ತವಿಕ ಆಡಳಿತಗಾರ ಮುಹಮ್ಮದ್ ಬಿನ್ ಸಲ್ಮಾನ್‌ರ ಪಾತ್ರವೇನು ಎನ್ನುವುದನ್ನು ಶುಕ್ರವಾರ ಬಿಡುಗಡೆಗೊಳಿಸಲಾದ ಗುಪ್ತಚರ ವರದಿ ಬಹಿರಂಗಪಡಿಸಿದೆ. ಈ ವರದಿಯನ್ನು ಇತ್ತೀಚೆಗೆ ರಹಸ್ಯಮುಕ್ತಗೊಳಿಸಲಾಗಿತ್ತು.
ವರದಿಯನ್ನು ಬಿಡುಗಡೆಗೊಳಿಸುವಂತೆ ಸೂಚಿಸುವ ನಿರ್ಣಯವೊಂದನ್ನು ಅಮೆರಿಕ ಸಂಸತ್ತು 2019ರಲ್ಲಿ ಅಂಗೀಕರಿಸಿದ್ದರೂ, ನಿಕಟಪೂರ್ವ ಡೊನಾಲ್ಡ್ ಟ್ರಂಪ್ ಸರಕಾರ ವರದಿಯನ್ನು ತಡೆಹಿಡಿದಿತ್ತು.
ಸೌದಿ ಅರೇಬಿಯ ತೊರೆದು ಅಮೆರಿಕದಲ್ಲಿ ನೆಲೆಸಿದ್ದ ಖಶೋಗಿ ‘ವಾಶಿಂಗ್ಟನ್ ಪೋಸ್ಟ್’ನಲ್ಲಿ ಅಂಕಣಗಳನ್ನು ಬರೆಯುತ್ತಿದ್ದರು. ಅವರು ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ಕಾರ್ಯವೈಖರಿಯ ಕಟುಟೀಕಾಕಾರರಾಗಿದ್ದರು.
ನಾಲ್ಕು ಪುಟಗಳ ಗುಪ್ತಚರ ವರದಿಯು, ಖಶೋಗಿಯ ಹತ್ಯೆಯಲ್ಲಿ ಪಾಲ್ಗೊಂಡ ಅಥವಾ ಶಾಮೀಲಾದ 21 ವ್ಯಕ್ತಿಗಳನ್ನು ಹೆಸರಿಸಿದೆ. ಈ ವ್ಯಕ್ತಿಗಳಲ್ಲಿ ಮುಹಮ್ಮದ್ ಬಿನ್ ಸಲ್ಮಾನ್‌ರ ಆಪ್ತ ಬಳಗಕ್ಕೆ ಸೇರಿದವರು ಇದ್ದಾರೆ.
ಯುವರಾಜ ಮುಹಮ್ಮದ್‌ರ ಪ್ರಭಾವ ಮತ್ತು ಅಧಿಕಾರವನ್ನು ಗಣನೆಗೆ ತೆಗೆದುಕೊಂಡರೆ, ಅವರ ಸೂಚನೆಯಿಲ್ಲದೆ ಈ ಹತ್ಯೆ ನಡೆಯಲು ಸಾಧ್ಯವೇ ಇಲ್ಲ ಎಂದು ಗುಪ್ತಚರ ವರದಿ ಹೇಳಿದೆ.
ಹತ್ಯಾ ಕಾರ್ಯಾಚರಣೆಯು ಪೂರ್ವಯೋಜಿತವಾಗಿದೆ ಎಂದು ಹೇಳಿರುವ ಗುಪ್ತಚರ ವರದಿ, ಅವರನ್ನು ಕೊಲ್ಲುವ ನಿರ್ಧಾರವನ್ನು ಯಾವಾಗ ತೆಗೆದುಕೊಳ್ಳಲಾಯಿತು ಎನ್ನುವುದು ಗೊತ್ತಾಗಿಲ್ಲ ಎಂದಿದೆ.
ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ: ಸೌದಿ
ಪತ್ರಕರ್ತ ಜಮಾಲ್ ಖಶೋಗಿಯ ಹತ್ಯೆಗೆ ಸೌದಿ ಅರೇಬಿಯ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಆದೇಶ ನೀಡಿದ್ದರು ಎಂದು ಹೇಳುವ ಅಮೆರಿಕದ ಗುಪ್ತಚರ ವರದಿಯನ್ನು ‘ಸಂಪೂರ್ಣವಾಗಿ ತಿರಸ್ಕರಿಸುವುದಾಗಿ’ ಸೌದಿ ಅರೇಬಿಯ ಹೇಳಿದೆ.
‘‘ಸೌದಿ ಅರೇಬಿಯದ ನಾಯಕತ್ವಕ್ಕೆ ಸಂಬಂಧಿಸಿದ ವರದಿಯಲ್ಲಿರುವ ನಕಾರಾತ್ಮಕ, ತಪ್ಪು ಮತ್ತು ಅಸ್ವೀಕಾರಾರ್ಹ ಅಂಶಗಳನ್ನು ಸೌದಿ ಅರೇಬಿಯ ಸರಕಾರ ಸಂಪೂರ್ಣವಾಗಿ ತಿರಸ್ಕರಿಸುತ್ತದೆ’’ ಎಂದು ಸೌದಿ ಅರೇಬಿಯದ ವಿದೇಶ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಸೌದಿ ವಿರುದ್ಧ ಆರ್ಥಿಕ ದಿಗ್ಬಂಧನ, ವೀಸಾ ನಿಷೇಧ
ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿಯ ಹತ್ಯೆಗೆ ಸಂಬಂಧಿಸಿ, ಸೌದಿ ಅರೇಬಿಯದ ಹಲವು ನಾಗರಿಕರ ವಿರುದ್ಧ ಅವೆುರಿಕದ ಜೋ ಬೈಡನ್ ಸರಕಾರವು ಶುಕ್ರವಾರ ಆರ್ಥಿಕ ದಿಗ್ಬಂಧನ ಮತ್ತು ವೀಸಾ ನಿಷೇಧಗಳನ್ನು ಹೇರಿವೆ.
ಆದರೆ, ಹತ್ಯೆಗೆ ಆದೇಶ ನೀಡಿದ್ದಾರೆ ಎಂಬುದಾಗಿ ಅಮೆರಿಕದ ಗುಪ್ತಚರ ಸಂಸ್ಥೆಗಳು ಭಾವಿಸಿರುವ ಸೌದಿ ಅರೇಬಿಯ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ವಿರುದ್ಧ ದಿಗ್ಬಂಧನಗಳನ್ನು ವಿಧಿಸಲಾಗಿಲ್ಲ.
ಮಧ್ಯಪ್ರಾಚ್ಯದೊಂದಿಗಿನ ಮೂಲ ಸಂಬಂಧವನ್ನು ಮುರಿಯದೆ, ಸೌದಿ ಅರೇಬಿಯ ಜೊತೆಗಿನ ಸಂಬಂಧವನ್ನು ಪುನರ್ರಚಿಸುವ ಉದ್ದೇಶವನ್ನು ಅವೆುರಿಕ ಹೊಂದಿದೆ ಎಂದು ಬೈಡನ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಪತ್ರಕರ್ತರು ಮತ್ತು ಭಿನ್ನಮತೀಯರ ವಿರುದ್ಧ ಇತರ ದೇಶಗಳಲ್ಲಿ ದಮನ ಕಾರ್ಯಾಚರಣೆ ನಡೆಸುವ ದೇಶಗಳನ್ನು ನಿಭಾಯಿಸುವ ನೂತನ ನೀತಿಯನ್ವಯ 76 ಸೌದಿ ನಾಗರಿಕರ ವಿರುದ್ಧ ಅವೆುರಿಕ ವೀಸಾ ನಿರ್ಬಂಧಗಳನ್ನು ಘೋಷಿಸಿದೆ.