varthabharthi


ಓ ಮೆಣಸೇ

ಓ ಮೆಣಸೇ...

ವಾರ್ತಾ ಭಾರತಿ : 1 Mar, 2021
ಪಿ.ಎ.ರೈ

ಜಾತಿ ಜಾತಿಗೂ ಮೀಸಲಾತಿ ಕೇಳುವುದು ಸರಿಯಲ್ಲ - ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ
ಕೇಳದವರಿಗೆ ತಾವಾಗಿಯೇ ಶೇ. 10 ಮೀಸಲಾತಿ ನೀಡಿದ್ದು ಸರಿಯೇ?


ದೃಶ್ಯ ಮಾಧ್ಯಮಕ್ಕಿಂತಲೂ ಮುದ್ರಣ ಮಾಧ್ಯಮ ಹೆಚ್ಚು ವಿಶ್ವಾಸಾರ್ಹ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ವಿಶ್ವಾಸಾರ್ಹವಾದುದೆಲ್ಲ ಹಂತಹಂತವಾಗಿ ಸಾಯುತ್ತಿರುವ ದಿನಗಳು ಇವು.


ಪ್ರತಿಯೊಬ್ಬರೂ ಮಾತೃ ಭಾಷೆಯ ಬಗ್ಗೆ ಅಪಾರ ಅಭಿಮಾನ ಹೊಂದಿರಬೇಕು - ವೆಂಕಯ್ಯನಾಯ್ಡು, ಉಪರಾಷ್ಟ್ರಪತಿ
ಆ ಅಭಿಮಾನ ಇಲ್ಲದ ಕಾರಣದಿಂದಲೇ ನೀವು ಹಲವು ಬಾರಿ ಕರ್ನಾಟಕದಿಂದ ಆಯ್ಕೆಯಾದಿರಿ.


ಕಾಂಗ್ರೆಸ್ ತೊರೆದವರ ಮರು ಸೇರ್ಪಡೆಗೆ ಮುಕ್ತ ಅವಕಾಶವಿದೆ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಮಾರುಕಟ್ಟೆ ದರವನ್ನು ಮೊದಲು ಪ್ರಕಟಿಸಿ.


ಲವ್ ಜಿಹಾದ್‌ಗೆ ಕಡಿವಾಣ ಹಾಕುವ ವಿಚಾರದಲ್ಲಿ ಕೇರಳ ಸರಕಾರ ನಿರಾಸಕ್ತಿ ತೋರಿಸುತ್ತಿದೆ - ಯೋಗಿ ಆದಿತ್ಯನಾಥ್, ಉ.ಪ್ರ. ಮುಖ್ಯಮಂತ್ರಿ
ಕೇರಳ ಬಡತನ, ಅನಕ್ಷರತೆ, ಅನಾರೋಗ್ಯಗಳಿಗೆ ಕಡಿವಾಣ ಹಾಕುವ ವಿಚಾರದಲ್ಲಷ್ಟೇ ಮುಂದಿದೆ.


ಈ ವರ್ಷ ಬಂಗಾಳದಲ್ಲಿ ನಡೆಯುವ ಏಕ ಪಂದ್ಯಕ್ಕೆ ನಾನೇ ಗೋಲ್ ಕೀಪರ್- ಮಮತಾ ಬ್ಯಾನರ್ಜಿ, ಪ.ಬಂ.ಮುಖ್ಯಮಂತ್ರಿ
ಕ್ರಿಕೆಟ್ ಪಂದ್ಯದಲ್ಲಿ ಗೋಲ್‌ಕೀಪರ್ ಅಗತ್ಯವೇನು? ಎನ್ನುವುದು ಜನರ ಪ್ರಶ್ನೆ.


ಪ್ರಧಾನಿ ಮೋದಿಯವರೇ, ಮುಖ ತುಂಬಾ ಗಡ್ಡ ಬಿಟ್ಟರೆ ನೀವು ರವೀಂದ್ರನಾಥ್ ಠಾಗೂರ್ ಆಗುವುದಿಲ್ಲ - ಎಚ್.ಕೆ.ಪಾಟೀಲ್, ಮಾಜಿ ಸಚಿವ
ಆದರೆ ಗೋಳ್ವಾಲ್ಕರ್ ಆಗಬಹುದು.


ಕಾಂಗ್ರೆಸ್ ನಾಯಕರು ಹೋದಲ್ಲಿ ಬಂದಲ್ಲಿ ಯಾರೊಂದಿಗೂ ನಿನಗೇ ಟಿಕೆಟ್ ಎಂದು ಹೇಳಬಾರದು - ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್ ಮುಖಂಡ
ನಿಮ್ಮ ಮಾತು ಕೇಳಿ ಕಾರ್ಯಕರ್ತರು ಬಸ್‌ನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದಾರೆ.


ಭಾರತದ ಕೋವಿಡ್ ಲಸಿಕೆಯನ್ನು ನಮ್ಮ ವೈದ್ಯರೇ ಅನುಮಾನಿಸುವುದು ಸರಿಯಲ್ಲ - ಡಾ.ಕೆ.ಸುಧಾಕರ್, ಸಚಿವ
ಅನುಮಾನಿಸುವಂತಹ ಲಸಿಕೆಯನ್ನು ಬಿಡುಗಡೆ ಮಾಡುವುದು ಸರಿಯೆ?


ದಿಲ್ಲಿಯಲ್ಲಿ ರೈತರ ಹೋರಾಟವನ್ನು ಸರಕಾರದ ಶಕ್ತಿ ಬಳಸಿ ಮಣಿಸಲು ಸಾಧ್ಯವಿಲ್ಲ - ದೇವೇಗೌಡ, ಮಾಜಿ ಪ್ರಧಾನಿ
ಹೌದು, ಅವರು ನಕಲಿ ಮಣ್ಣಿನ ಮಕ್ಕಳಾಗಿದ್ದರೆ ಅಧಿಕಾರ ಕೊಟ್ಟು ಮಣಿಸಬಹುದಿತ್ತು.


ನೋಟಿಸ್ ಕೊಟ್ಟು ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ - ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಹಣದ ಕಟ್ಟನ್ನು ಕೊಟ್ಟು ಬಾಯಿ ಮುಚ್ಚಿಸಬಹುದೆ?


ಸಾಮಾಜಿಕ ಮಾಧ್ಯಮಗಳು ಇಂದು ಎಷ್ಟೊಂದು ಪ್ರಬಲವಾಗಿವೆ ಎಂದರೆ ಅವು ಸರಕಾರಗಳನ್ನು ಉರುಳಿಸಬಲ್ಲವು - ರಾಮ ಮಾಧವ, ಹಿರಿಯ ಬಿಜೆಪಿ ಹಿರಿಯ ನಾಯಕ
ಅದಕ್ಕಾಗಿ ಅದರ ಮೇಲೆ ನಿಯಂತ್ರಣವೆ?         


ಪ್ರಧಾನಿ ಮೋದಿ ದೇಶವನ್ನು ಬಂಡವಾಳಶಾಹಿಗಳ ಕೈಗೆ ಒಪ್ಪಿಸಲು ಹೊರಟಿದ್ದಾರೆ - ರಮೇಶ್ ಕುಮಾರ್, ಮಾಜಿ ಸ್ಪೀಕರ್
ಹೊರಟಿಲ್ಲ, ಒಪ್ಪಿಸಿ ಆಗಿದೆ.


ರಾಜ್ಯದಲ್ಲಿ ಈಗ ಮೀಸಲಾತಿ ಹೋರಾಟ ಜೋರಾಗಿ ನಡೆಯುತ್ತಿದ್ದು, ಈ ಹೋರಾಟ ಯಾರಿಗಾಗಿ, ಯಾಕಾಗಿ ನಡೆಯುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ - ಡಾ.ಜಿ.ಪರಮೇಶ್ವರ್, ಶಾಸಕ
ಎಲ್ಲವೂ ಶೇ. 10 ಮೀಸಲಾತಿ ಪಡೆದ 60,000 ಮಾಸಿಕ ದುಡಿಯುವ ಬಡವರ ಕರಾಮತ್ತು.


ಬಿಜೆಪಿ ಕಾರ್ಯಕರ್ತರು, ಪದಾಧಿಕಾರಿಗಳು ದೇಶವೇ ಮೊದಲು ಎಂಬ ಸಿದ್ಧಾಂತದ ಆಧಾರದಲ್ಲಿ ಕಾರ್ಯ ನಿರ್ವಹಿಸಬೇಕು - ನರೇಂದ್ರ ಮೋದಿ, ಪ್ರಧಾನಿ
ಬಲಿ ಹಾಕುವ ವಿಷಯದಲ್ಲಿ ಇರಬೇಕು.


ನನ್ನನ್ನು ಹಾಡು- ಕುಣಿತದವಳು ಎಂದ ಮ.ಪ್ರದೇಶದ ಶಾಸಕ ಓರ್ವ ಮೂರ್ಖ - ಕಂಗನಾ ರಣಾವತ್, ನಟಿ
ಹಾಡು, ಕುಣಿತ ಬರದವಳು ಅನ್ನಬೇಕಾಗಿತ್ತೆ?


ಆದಿವಾಸಿಗಳು ಯಾವತ್ತೂ ಹಿಂದೂ ಆಗಿರಲಿಲ್ಲ, ಮುಂದೆ ಆಗುವುದೂ ಇಲ್ಲ - ಹೇಮಂತ್ ಸೊರೇನ್, ಜಾರ್ಖಂಡ್ ಮುಖ್ಯಮಂತ್ರಿ
ಆರೆಸ್ಸೆಸ್ ಪ್ರಕಾರ ಆದಿವಾಸಿಗಳಿಗೆ ಎರಡೇ ಆಯ್ಕೆ, ಒಂದೋ ಹಿಂದೂ ಆಗಿ ಅಥವಾ ನಕ್ಸಲ್ ಆಗಿ.


ಡಿಎಂಕೆ ಹಿಂದೂ ವಿರೋಧಿ ಆದುದರಿಂದ ಅದನ್ನು ಚುನಾವಣೆಯಲ್ಲಿ ಸೋಲಿಸಬೇಕು - ತೇಜಸ್ವಿ ಸೂರ್ಯ, ಬಿಜೆಪಿ ಯುವ ಮೋರ್ಚಾ ವರಿಷ್ಠ
ಬಿಜೆಪಿ ದ್ರಾವಿಡ ವಿರೋಧಿಯಾಗಿರುವುದರಿಂದ ನಿಮ್ಮ ಮಾತು ನಡೆಯುವುದು ಕಷ್ಟ.


ಎದೆ 56 ಇಂಚಿನದಾದರೆ ಪ್ರಯೋಜನ ಇಲ್ಲ, ಅದರೊಳಗೆ ಹೃದಯ ಇರಬೇಕು - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಅವರ ಹೃದಯ, ಅಂಬಾನಿಯ ಎದೆಯೊಳಗೆ ಬಡಿಯುತ್ತಿದೆಯಂತೆ.


ಮೆದುಳು ಅದಾನಿಯ ತಲೆಯೊಳಗೆ ಭದ್ರವಾಗಿದೆಯಂತೆ. ಇಲ್ಲಿ ಹುಲಿಯಂತೆ ಮಾತನಾಡುವ ಬಿಜೆಪಿ ಸಂಸದರು ದಿಲ್ಲಿಯಲ್ಲಿ ಬೆಕ್ಕಿನಂತಾಗುತ್ತಾರೆ - ಸಲೀಂ ಅಹ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ
ಬಹುಶಃ ಕಾಂಗ್ರೆಸ್ ಅಲ್ಲಿ ಇಲಿಯಂತೆ ವರ್ತಿಸುತ್ತಿರಬೇಕು.


ಯಾವುದೇ ಜಾತಿಯ ಜನರು ಮೀಸಲಾತಿ ಕೇಳಿದರೂ ಅಂಬೇಡ್ಕರ್ ಆಶಯದಂತೆ ಅರ್ಹತೆಯೇ ಮಾನದಂಡವಾಗಲಿದೆ - ಕೆ.ಎಸ್. ಈಶ್ವರಪ್ಪ, ಸಚಿವ 
ಬಹುಶಃ ಮೇಲ್ಜಾತಿಯ ಅರ್ಹತೆಯ ಬಗ್ಗೆ ಹೇಳುತ್ತಿರಬೇಕು.


ಇಂದಿನ ದೃಶ್ಯ ಮಾಧ್ಯಮಗಳ ಬ್ರೇಕಿಂಗ್ ನ್ಯೂಸ್ ಧಾವಂತ ಬಹಳ ಅಪಾಯಕಾರಿ - ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ
ಚೌಕೀದಾರ್ ಆ ಬ್ರೇಕಿಂಗ್ ನ್ಯೂಸ್ ಮೂಲಕ ಬೆಳೆದವರು.


ಪೆಟ್ರೋಲ್, ಡೀಸೆಲ್ ಅಡುಗೆ ಅನಿಲಗಳ ಬೆಲೆ ಏರಿಕೆಯಾಗಿರುವುದು ದುಃಖಕರ ಸಂಗತಿ- ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
ದುಃಖಿಸುವುದು ಆರ್ಥಿಕ ಸಚಿವೆಯ ಕೆಲಸವೇ?


ಅಯೋಧ್ಯೆಯಲ್ಲಿ ನಿರ್ಮಾಣವಾಗುವ ಶ್ರೀರಾಮ ಮಂದಿರ ಈ ದೇಶದ ಪ್ರತಿಯೊಬ್ಬ ಪ್ರಜೆಯ ಆಸ್ತಿ - ಕೋಟ ಶ್ರೀನಿವಾಸ್ ಪೂಜಾರಿ, ಸಚಿವ
ಬದಲಿಗೆ ರೈತರ ಕೃಷಿಭೂಮಿ ಅದಾನಿ, ಅಂಬಾನಿಗಳಿಗೆ ಬರೆದುಕೊಡಬೇಕು, ಅಷ್ಟೇ.


ಕಾಲೇಜು ಜೀವನದಲ್ಲಿ ವಿದ್ಯಾರ್ಥಿಗಳು ಪರಸ್ಪರ ಸ್ನೇಹಿತರಂತೆ ವರ್ತಿಸಬೇಕು - ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
ಆದರೆ ಜಾತಿ ಹೆಸರಲ್ಲಿ ನೀವು ಅದಕ್ಕೆ ಅವಕಾಶ ಕೊಡುತ್ತಿಲ್ಲವಲ್ಲ.


ಮಹಾಭಾರತದಲ್ಲಿನ ಲೋಪಗಳನ್ನು ಗಮನದಲ್ಲಿಟ್ಟುಕೊಂಡು ಪರ್ವ ಕಾದಂಬರಿ ರಚಿಸಿದೆ- ಎಸ್.ಎಲ್.ಭೈರಪ್ಪ, ಸಾಹಿತಿ
ನಿಮ್ಮ ಲೋಪಗಳನ್ನು ಗಮನದಲ್ಲಿಟ್ಟು ಮಹಾ ಕಾದಂಬರಿಯನ್ನೇ ಬರೆಯಬಹುದು 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು